ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pennatula| ಇದು ನಾಗಪುಷ್ಪವಲ್ಲ ಹವಳ

Last Updated 17 ಜನವರಿ 2023, 19:30 IST
ಅಕ್ಷರ ಗಾತ್ರ

‘ನಾಗಪುಷ್ಪ’ ಎಂಬ ಹೆಸರಿನಲ್ಲಿ ಫೋಟೊ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ಹರಿದಾಡುತ್ತಿದೆ (ನೋಡಿ:ಚಿತ್ರ 1). ‘ಇದು ನಾಗಪುಷ್ಪ, 36 ವರ್ಷಗಳಿಗೊಮ್ಮೆ ಅರಳುತ್ತದೆ. ಎಲ್ಲರಿಗೂ ಶೇರ್ ಮಾಡಿ, ನೋಡಿ ಸಂತುಷ್ಟರಾಗಲಿ’ ಎಂದೋ, ‘ಹಿಮಾಲಯದಲ್ಲಿ ಮಾತ್ರ ಕಾಣಬರುವ ಅಪರೂಪದ ಈ ಹೂವನ್ನು ನೋಡಿದವರಿಗೆ ಪುಣ್ಯ ಬರುತ್ತದೆ, ಶೇರ್ ಮಾಡಿ’ ಎಂದೋ ಈ ಪೋಸ್ಟ್‌ಗಳು ಹರಿದಾಡುತ್ತಿವೆ. ‘ಶೇರ್ ಮಾಡದಿದ್ದರೆ ನೀವು ಅಪಾರ ಕಷ್ಟನಷ್ಟ ಅನುಭವಿಸಬೇಕಾಗುತ್ತದೆ’ ಎಂಬ ಬೆದರಿಕೆಯೂ ಇರುವುದುಂಟು! ಆದರೆ ಇದು ನಾಗಪುಷ್ಪ ಎಂಬುದು ಅಪ್ಪಟ ಸುಳ್ಳು. ಯಾರೋ ಕಿಡಿಗೇಡಿಗಳು ಅಮಾಯಕರನ್ನು ಯಾಮಾರಿಸುವುದಕ್ಕೆ ಮಾಡಿದ ತಂತ್ರ ಇದು ಅಷ್ಟೆ. ಮೂಲತಃ ಇದು ಸಸ್ಯವೇ ಅಲ್ಲ. ಇದು ‘ಪೆನ್ನಾಟುಲ’ ಎಂಬ ಹವಳಪ್ರಾಣಿ.

ಪೆನ್ನಾಟುಲದ ಸಾಮಾನ್ಯ ಹೆಸರು ‘ಸೀ ಪೆನ್’ ಅಥವಾ ‘ಕಡಲ ಲೇಖನಿ’. ಈ ಪೆನ್ನು ಬರೆಯಲಿಕ್ಕೆ ಬಾರದು! ಪೆನ್ನು ಅಥವಾ ಲೇಖನಿಯ ಹಾಗೂ ಕಾಗದದ ಆವಿಷ್ಕಾರವಾಗುವ ಮುಂಚೆ ಹಕ್ಕಿಯ ಗರಿಯನ್ನು ಬಳಸಿ ತಾಳೆಯ ಎಲೆಯ ಮೇಲೆ ಬರೆಯುತ್ತಿದ್ದರಷ್ಟೇ? ವರ್ಣರಂಚಿತವಾದ ಹಕ್ಕಿಯ ಗರಿಯನ್ನು ಹೋಲುವುದರಿಂದ ಕಡಲಲ್ಲಿ ವಾಸಿಸುವ ಈ ಜೀವಿಗೆ ‘ಕಡಲ ಲೇಖನಿ’ ಎಂಬ ಹೆಸರು ಬಂದಿದೆ. ಇದು ಉಷ್ಣ ಹಾಗೂ ಸಮಶೀತೋಷ್ಣವಲಯದ ಸಮುದ್ರ ಮಹಾಸಾಗರಗಳ ನೀರಿನ ತಳದಲ್ಲಿ ಕಂಡುಬರುತ್ತದೆ. ತೀರದಿಂದ ಕಡಲಿನ 6100 ಮೀಟರ್ ಆಳದವರೆಗೂ ಇವು ಕಂಡುಬರುತ್ತವೆ. ಭಾರತದ ಮೂರು ದಿಕ್ಕಿನಲ್ಲಿ ಆವರಿಸಿರುವ ಪರಿಸರ ಹಾಗೂ ದ್ವೀಪಗಳಲ್ಲಿಯೂ ಕಡಲ ಲೇಖನಿಗಳಿವೆ. ಪ್ರಾಣಿಪ್ರಪಂಚದ ಅಕಶೇರುಕಗಳ ಪೈಕಿ ‘ಸೀಲಂಟಿರೇಟಾ’ ಅಥವಾ ‘ಕುಟುಕುಕಣವಂತ’ಗಳೆಂಬ ಗುಂಪಿಗೆ ಸೇರುವ ಈ ಪ್ರಾಣಿಗಳು ಮೃದು ಹವಳಗಳು, ಆಂತೊಜೋವ ವರ್ಗದ ಪೆನ್ನಾಟುಲೇಸಿಯ ಕುಟುಂಬಕ್ಕೆ ಸೇರುತ್ತವೆ.

ಕಡಲ ಲೇಖನಿಗಳು ಸಮೂಹ ಜೀವಿಗಳು. ಚಿತ್ರದಲ್ಲಿ ಕಾಣುವುದು ಹಲವಾರು ಜೀವಿಗಳ ಇಂಥದೊಂದು ಸಮೂಹ. ಪ್ರತಿಯೊಂದು ಸಮೂಹದಲ್ಲಿ ನೂರಾರು ಬಿಡಿ ಜೀವಿಗಳಿದ್ದು, ಪ್ರತಿಯೊಂದು ಬಿಡಿ ಜೀವಿಯನ್ನು ‘ಪಾಲಿಪ್’ ಎನ್ನುತ್ತಾರೆ
(ಚಿತ್ರ 2). ಒಂದು ಸಮೂಹದಲ್ಲಿ ವಿವಿಧ ಬಗೆಯ ಪಾಲಿಪ್‍ಗಳಿರುತ್ತವೆ. ಆಹಾರವನ್ನು ಸೇವಿಸುವುದಕ್ಕೆ, ರಕ್ಷಣೆಗೆ, ಪುನರುತ್ಪಾದನೆಗೆ ಪ್ರತ್ಯೇಕವಾದ ಪಾಲಿಪ್‍ಗಳಿರುತ್ತವೆ. ಒಂದೊಂದು ಗುಂಪಿನ ಪಾಲಿಪ್‍ಗಳನ್ನು ‘ಜೂವಾಯಿಡ್’ ಎನ್ನುತ್ತಾರೆ.

ಕಡಲ ಲೇಖನಿಗಳು ನಿಶ್ಚಲಜೀವಿಗಳು; ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸಲಾರವು. ಇವು ಬೆಳೆವಣಿಗೆಯಾಗುವಾಗ ಒಂದು ಪಾಲಿಪ್ ನೆಲದಲ್ಲಿ ಆಶ್ರಯ ಪಡೆದು ಅದರಿಂದ ಅನೇಕ ಪಾಲಿಪ್‍ಗಳು ಬೆಳೆಯುತ್ತವೆ. ಮೊದಲ ಪಾಲಿಪ್ ತನ್ನ ಗ್ರಹಣಾಂಗಗಳನ್ನು ಕಳೆದುಕೊಂಡು ಕಾಂಡವಾಗಿ ಮಾರ್ಪಾಡಾಗುತ್ತದೆ. ಈ ಕಾಂಡವು ಸಮುದ್ರದ ತಳದಲ್ಲಿ ಮರಳಲ್ಲಿ ಹೂತು ಮಾಲ್ಭಾಗದಲ್ಲಿ ಹೊಸ (ಮರಿ) ಪಾಲಿಪ್‍ಗಳನ್ನು ಉತ್ಪಾದಿಸುತ್ತದೆ. ನೂರಾರು ಪಾಲಿಪ್‍ಗಳು ಬೆಳೆದು ನಿಶ್ಚಿತ ರೂಪ ಪಡೆಯುತ್ತವೆ. ಪ್ರತಿಯೊಂದು ಪಾಲಿಪ್ ತನ್ನ ಸುತ್ತ ಮೃದುವಾದ ಕವಚವೊಂದನ್ನು ನಿರ್ಮಿಸುತ್ತದೆ. ಈ ಕವಚದ ಮೂಲಕ ಹಲವು ಪಾಲಿಪ್‍ಗಳು ಕೂಡಿಕೊಂಡಿರುತ್ತವೆ.

ನೀರಿನೊಂದಿಗೆ ತೇಲಿಬರುವ ಬ್ಯಾಕ್ಟೀರಿಯಗಳು, ಏಕಕೋಶಜೀವಿಗಳು, ಸೂಕ್ಷ್ಮ ತೇಲುಜೀವಿಗಳು ಇವುಗಳ ಆಹಾರ. ಪಾಲಿಪ್‍ಗಳ ಮೇಲ್ಭಾಗದಲ್ಲಿ ಬಾಯಿ ಇದ್ದು, ಅದರ ಸುತ್ತ ಬೆರಳಿನಾಕಾರದ ಏಳೆಂಟು ಸ್ಪರ್ಶಾಂಗಗಳಿರುತ್ತವೆ. ಈ ಸ್ಪರ್ಶಾಂಗಗಳ ಮೇಲೆ ವಿಷವನ್ನು ಸ್ರವಿಸುವ ಕೋಶಗಳಿದ್ದು ನೀರಿನಲ್ಲಿ ತೇಲಿಬರುವ ಸೂಕ್ಷಜೀವಿಗಳನ್ನು ಹಿಡಿದು ವಿಷವನ್ನು ಚುಚ್ಚಿ ಅವುಗಳನ್ನು ಜೀರ್ಣಿಸಿಕೊಳ್ಳುತ್ತವೆ. ಕಡಲ ಲೇಖನಿಗಳನ್ನು ತಿಂದು ಬದುಕುವ ಕೆಲವು ಜೀವಿಗಳು ಕೂಡ ಇವೆ. ಪಾಲಿಪ್‍ಗಳು ಬಗೆಬಗೆಯ ಬಣ್ಣದ ವಸ್ತುಗಳನ್ನು ಸಂಶ್ಲೇಷಿಸುತ್ತವೆ. ಅದರಿಂದ ಕಡಲ ಲೇಖನಿಗಳು ವರ್ಣರಂಜಿತವಾಗಿರುತ್ತವೆ. ಕೆಲವು ವರ್ಣರಂಜಿತ ಸೂಕ್ಷಜೀವಿಗಳು ಇವುಗಳೊಂದಿಗೆ ಸಹಜೀವನ ನಡೆಸುತ್ತಿದ್ದು ಲೇಖನಿಗಳು ಇನ್ನಷ್ಟು ಆಕರ್ಷಕವಾಗಿ ಕಾಣುತ್ತವೆ. ಇದುವರೆಗೆ ಸುಮಾರು ಇನ್ನೂರು ಪ್ರಭೇದಗಳನ್ನು ಗುರುತಿಸಲಾಗಿದೆ.

ಅವು ನಿರ್ಲಿಂಗ ಹಾಗೂ ಲೈಂಗಿಕವಾಗಿ ಪ್ರಜನನ ಮಾಡಬಲ್ಲವು. ನಿರ್ಲಿಂಗ ಪ್ರಜನನದಲ್ಲಿ ಪಾಲಿಪ್‍ಗಳು ಕವಲೊಡೆದು ಹೊಸ ಪಾಲಿಪ್ ಹುಟ್ಟುತ್ತದೆ. ಲೈಂಗಿಕ ಪ್ರಜನನದಲ್ಲಿ ಅಂಡಾಣು ವೀರ್ಯಾಣುಗಳು ಬೆಳೆದು ಅವುಗಳ ಸಂಯೋಗದಿಂದ ಉದ್ಭವಿಸುವ ಯುಗ್ಮಕೋಶದಿಂದ ಹೊಸ ಜೀವಿ ಬೆಳೆಯುತ್ತದೆ. ಲೈಂಗಿಕ ಪ್ರಜನನದ ಕಾರಣದಿಂದ ಹೊಸಸಮೂಹಗಳು ಬೆಳೆದು ಅವು ಸಮುದ್ರದ ವಿವಿಧ ಭಾಗಗಳಿಗೆ ಪ್ರಸಾರವಾಗುತ್ತವೆ. ಕಡಲ ಲೇಖನಿಗಳ ಪ್ರಭೇದಗಳು ಕೇವಲ ಹತ್ತು ಸೆಂ.ಮೀ.ನಿಂದ ಒಂದು ಮೀಟರ್‌ ಎತ್ತರದವರೆಗೆ ಬೆಳೆಯುತ್ತವೆ. ಎರಡು ಮೀಟರ್ ಬೆಳೆಯುವ ಪ್ರಭೇದವೂ ಇದೆ. ಕೆಲವು ಕಡಲ ಲೇಖನಿಗಳು ಕೆಲವು ಮೀನುಗಳಿಗೆ ಹಾಗೂ ಜೀವಿಗಳಿಗೆ ಆಶ್ರಯವನ್ನೂ ಒದಗಿಸುತ್ತವೆ! ಕಡಲ ಪರಿಸರದಲ್ಲಿ ಸಮತೋಲನವನ್ನು ಕಾಪಾಡುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಈ ಜೀವಿಗಳು ಅತ್ಯಂತ ಪ್ರಾಚೀನ ಜೀವಿಗಳೆಂದೂ, ಸುಮಾರು 45 ಕೋಟಿ ವರ್ಷಗಳಿಗಿಂತ ಹಿಂದೆ ಭೂಮಿಯ ಮೇಲೆ ಕಾಣಿಸಿಕೊಂಡವು ಎಂದು ಹೇಳಲಾಗುತ್ತಿದೆ. ಆದರೆ ಕಡಲ ಪರಿಸರದ ಮಾಲಿನ್ಯದಿಂದ ಕೆಲವು ಪ್ರಭೇದಗಳು ವಿನಾಶದ ಅಂಚಿನಲ್ಲಿವೆ ಎಂಬುದು ಅತ್ಯಂತ ವಿಷಾದದ ಸಂಗತಿ. ಕಡಲ ಲೇಖನಿ ಕುತೂಹಲಕರವಾದ ಒಂದು ವಿಶಿಷ್ಟವಾದ ಜೀವಿ. ಕಡಲ ಪರಿಸರದ ಮಾಲಿನ್ಯವನ್ನು ತಡೆದು ಈ ಜೀವಿಗಳನ್ನು ಸಂರಕ್ಷಿಸಬೇಕಾದುದು ಅಗತ್ಯ. ಜೊತೆಗೆ ಇಂಥ ಜೀವಿಗಳನ್ನು ಜಾಲತಾಣಗಳಲ್ಲಿ ಕುಚೋದ್ಯಗಳಿಗೆ ಬಳಸಿಕೊಳ್ಳುವುದೂ ನಾವು ನಿಸರ್ಗಕ್ಕೆ ಬಗೆಯುವ ದ್ರೋಹ ಎಂದೇ ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT