ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮಣ್ಣಿನ ಪರಿಕರ- ಮಾರುಕಟ್ಟೆ ಹೊಸ ಥರ

Last Updated 17 ಮಾರ್ಚ್ 2021, 14:00 IST
ಅಕ್ಷರ ಗಾತ್ರ

ಪ್ರಾಚೀನ ಕಾಲದಲ್ಲಿ ಅಡುಗೆ ಮಾಡುವ ಪ್ರಮುಖ ಸಾಧನಗಳಾಗಿದ್ದ ಮಣ್ಣಿನ ಪಾತ್ರೆಗಳು ಈಚೆಗೆ ಮತ್ತೆ ಹೊಸ ರೂಪ ತಾಳಿ ಬರುತ್ತಿವೆ. ಸ್ಟೀಲ್ ಪಾತ್ರೆಗಳ ಮಾದರಿಯಲ್ಲೇ ಮಣ್ಣಿನ ಪಾತ್ರೆಗಳು ಈಗ ಅಮೆಝಾನ್ ಹಾಗೂ ಇತರ ಆನ್‌ಲೈನ್‌ ಶಾಪಿಂಗ್ ತಾಣಗಳಲ್ಲಿ ಬೇಕಾದಷ್ಟು ಸಿಗುತ್ತಿವೆ. ಮನೆಗಳಲ್ಲೇ ಕುಳಿತು ಬೇಕಾದ ಮಾದರಿಯ ಮಣ್ಣಿನ ವಸ್ತು ತರಿಸಿಕೊಳ್ಳಬಹುದು.

***

ಮಾವಿನಕಾಯಿ ಮಿಡಿಗಳನ್ನು ಉಪ್ಪಿನಲ್ಲಿ ಹಾಕಿ ಬಹಳ ಕಾಲ ಕೆಡದಂತೆ ಇಡಲು ಇಂದಿಗೂ ಹಲವು ಮನೆಗಳಲ್ಲಿ ಮಣ್ಣಿನ ದೊಡ್ಡ ಜಾಡಿಗಳನ್ನು ಬಳಸುತ್ತಾರೆ. ಬಿಳಿ ಹಾಗೂ ಹಳದಿ ಬಣ್ಣಗಳ ಸಂಯೋಜನೆಯ ಈ ಜಾಡಿಗಳ ತುಂಬಾ ಮಾವಿನಕಾಯಿ ಹಾಗೂ ಉಪ್ಪು ಹಾಕಿ ಜಾಡಿಯ ಬಾಯಿ ಕಟ್ಟಿ ಇಟ್ಟರೆ 2–3 ವರ್ಷಗಳ ಕಾಲವೂ ಮಿಡಿಗಳು ಕೆಡದೇ ಇರುತ್ತವೆ. ಆಗಾಗ ತೆಗೆದು ಉಪ್ಪಿನಕಾಯಿ ಮಾಡಿಕೊಳ್ಳಬಹುದು.

ಈಗಲೂ ಮಲೆನಾಡಿನ ಮನೆಗಳಲ್ಲಿ ಇಂಥ ಕನಿಷ್ಠ ಐದಾರು ಜಾಡಿಗಳಾದರೂ ಇದ್ದೇ ಇರುತ್ತವೆ. ಮಣ್ಣಿನ ಇನ್ನೂ ಹಲವು ಮಾದರಿಯ ಪಾತ್ರೆಗಳು ಸಾಂಪ್ರದಾಯಿಕ ರುಚಿ ಇಷ್ಟ ಪಡುವವರ ಮನೆಗಳಲ್ಲಿ ಕಂಡುಬರುತ್ತವೆ. ಪ್ರಾಚೀನ ಕಾಲದಲ್ಲಿ ಅಡುಗೆ ಮಾಡುವ ಪ್ರಮುಖ ಸಾಧನಗಳಾಗಿದ್ದ ಮಣ್ಣಿನ ಪಾತ್ರೆಗಳು ಈಚೆಗೆ ಮತ್ತೆ ಹೊಸ ರೂಪ ತಾಳಿ ಬರುತ್ತಿವೆ. ಸ್ಟೀಲ್ ಪಾತ್ರೆಗಳ ಮಾದರಿಯಲ್ಲೇ ಮಣ್ಣಿನ ಪಾತ್ರೆಗಳು ಈಗ ಅಮೆಝಾನ್ ಹಾಗೂ ಇತರ ಆನ್‌ಲೈನ್‌ ಶಾಪಿಂಗ್ ತಾಣಗಳಲ್ಲಿ ಬೇಕಾದಷ್ಟು ಸಿಗುತ್ತಿವೆ. ಮನೆಗಳಲ್ಲೇ ಕುಳಿತು ಬೇಕಾದ ಮಾದರಿಯ ಮಣ್ಣಿನ ವಸ್ತುಗಳನ್ನು ತರಿಸಿಕೊಳ್ಳಬಹುದು.

ದಾರಿ ಬದಿಗಳಲ್ಲಿ ಮಣ್ಣಿನ ಮಡಕೆಗಳು ಮಾರಾಟಕ್ಕೆ ಬಂದವು ಎಂದರೆ ಬೇಸಿಗೆ ಬಂತೆಂದೇ ಅರ್ಥ. ಅಲ್ಲಿ ಒಂದಿಷ್ಟು ಮಾರಾಟವಾದರೆ ಸ್ಥಳೀಯವಾಗಿ ಕುಂಬಾರಿಕೆ ಮಾಡುವವರು ಒಂದಿಷ್ಟು ಕಾಸು ಮಾಡಿಕೊಳ್ಳಬಹುದು. ಬೇಸಿಗೆಯ ಬೇಗೆಯ ಅನುಭವವಾದಾಗ ಒಮ್ಮೆಯಾದರೂ ಮಣ್ಣಿನ ಮಡಕೆಯಲ್ಲಿನ ತಂಪಾದ ನೀರಿನ ನೆನಪಾಗದೇ ಇರದು. ಈಗ ಮಡಕೆಗಳಷ್ಟೇ ಅಲ್ಲ, ಸುಂದರ ಮಾದರಿಯ ಮಣ್ಣಿನ ಬಾಟಲ್‌ಗಳೂ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಮಣ್ಣಿನ ಪಾತ್ರೆಗಳು, ಟ್ಯಾಪ್ ಇರುವ ಡ್ರಂ, ಕುಕ್ಕರ್, ಫ್ರಿಜ್.... ಹೀಗೆ ಹೊಸ ಹೊಸ ವಿನ್ಯಾಸಗಳು ಮಾರುಕಟ್ಟೆಯಲ್ಲಿ ಕಂಡುಬರುತ್ತಿದ್ದು ಅಚ್ಚರಿ ಮೂಡಿಸುತ್ತಿವೆ.

ಇಂದಿನ ಗಡಿಬಿಡಿಯ ಜೀವನಕ್ಕೆ ಮಣ್ಣಿನ ಪಾತ್ರೆಗಳು ಹೊಂದುವುದು ಕಷ್ಟಕರ. ಆದರೂ ಅವು ಈಗ ನಿತ್ಯದ ಬಳಕೆಗಿಂತ ಆಲಂಕಾರಿಕ ಸಾಮಗ್ರಿಗಳಾಗಿ ಬಳಕೆಯಾಗುವುದೇ ಹೆಚ್ಚು. ಮಣ್ಣಿನ ಕಪ್ಪು–ಬಸಿಗಳಲ್ಲಿ ಚಹ–ಕಾಫಿ ಕುಡಿಯಲು ಇಷ್ಟ ಪಡುವವರಿಗಾಗಿ ನೂರಾರು ಮಾದರಿಯ ಕಪ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವು ಎಂದಿಗೂ ಬೇಡಿಕೆ ಕಳೆದುಕೊಂಡಿಲ್ಲ.

ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಬಹಳ ಕಾಲ ಹಾಳಾಗದಂತೆ ಇಡಲು ಮಣ್ಣಿನ ಪಾತ್ರೆಗಳೇ ಅತ್ಯಂತ ಸೂಕ್ತ ಎನ್ನಲಾಗಿದೆ. ಹೀಗಾಗಿ ಉತ್ತರ ಭಾರತದ ಹಲವು ಭಾಗಗಳಲ್ಲಿ ಮಣ್ಣಿನ ಪುಟ್ಟ ಕುಡಿಕೆಗಳಲ್ಲಿ ಸಿಗುವ ಮೊಸರು ಜನಪ್ರಿಯ. ದಕ್ಷಿಣ ಭಾರತದಲ್ಲಿ ಇನ್ನೂ ಇದಕ್ಕೆ ಅಷ್ಟಾಗಿ ಮಹತ್ವ ಸಿಕ್ಕಿಲ್ಲ. ಗೃಹಾಲಂಕಾರಕ್ಕೆ ಹೆಚ್ಚು ಮಹತ್ವ ನೀಡುವವರು ಸಿರಾಮಿಕ್ಸ್, ಟೆರ್ರಾಕೋಟಾ ಹಾಗೂ ಸುಂದರ ವಿನ್ಯಾಸಗಳಿರುವ ಮಣ್ಣಿನ ಹೂಜಿ, ಪಾತ್ರೆಗಳನ್ನು ಮನೆಯಲ್ಲಿ ಅಲಂಕಾರಕ್ಕೆ ಬಳಸುವುದನ್ನು ಕಾಣುತ್ತೇವೆ.

ಮಣ್ಣಿನ ಪಾತ್ರೆಗಳ ವೈಜ್ಞಾನಿಕ ಮಹತ್ವ ಕೂಡ ಹಲವರು ಈಚೆಗೆ ಇದರ ಬೆನ್ನು ಬೀಳುವಂತೆ ಮಾಡಿದೆ. ಈಗಲೂ ಹಲವು ಸಾಂಪ್ರದಾಯಿಕ ಅಡುಗೆಗಳನ್ನು ಮಣ್ಣಿನ ಪಾತ್ರೆಗಳಲ್ಲಿ ಮಾಡಿದಾಗಲೇ ಅದಕ್ಕೆ ಸೂಕ್ತ ರುಚಿ ಬರುತ್ತದೆ ಎಂಬುದು ಜನರ ನಂಬಿಕೆ. ಉಷ್ಣವಾಹಕವಲ್ಲದ ಕಾರಣ ತಟ್ಟೆಯಲ್ಲಿ ಬಿಸಿ ಪದಾರ್ಥ ಹಾಕಿದರೂ ಕೈಗೆ ಬಿಸಿ ತಟ್ಟುವುದಿಲ್ಲ. ಹೀಗಾಗಿ ಮಣ್ಣಿನ ತಟ್ಟೆಗಳಿಗೂ ಅದರದ್ದೇ ಮಾರುಕಟ್ಟೆ ಇದೆ. ಮೈಕ್ರೋವೇವ್ ಓವನ್‌ಗಳಿಗೂ ಮಣ್ಣಿನ ಪಾತ್ರೆಗಳು ಸೂಕ್ತ. ಈ ಪಾತ್ರೆಗಳು ಬಿಸಿಯಾದಾಗಲೂ ಯಾವುದೇ ವಿಷಕಾರಿ ಅನಿಲ ಉತ್ಪಾದನೆಯಾಗದ ಕರಣ ಹಲವರು ಇದನ್ನು ಬಳಸಲು ಆದ್ಯತೆ ನೀಡುತ್ತಾರೆ.

ಕುಂಬಾರಿಕೆಯನ್ನು ಅವಲಂಬಿಸಿದವರ ಸಂಖ್ಯೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಇರುವುದರಿಂದ ಮಣ್ಣಿನ ಸಾಮಗ್ರಿಗಳನ್ನು ಇಂದಿನ ಕಾಲದ ಅಗತ್ಯಗಳಿಗೆ ತಕ್ಕಂತೆ ರೂಪಿಸುವುದು ಅಗತ್ಯ. ಕೆಲವು ಕಂಪನಿಗಳು ಈ ಬಗ್ಗೆ ಪ್ರಯತ್ನ ನಡೆಸಿವೆಯಾದರೂ ದೊಡ್ಡ ಮಟ್ಟದಲ್ಲಿ ಇದಕ್ಕೆ ಯಶಸ್ಸು ದೊರೆತಿಲ್ಲ. ಗ್ರಾಮೀಣ ಭಾಗದ ಕುಂಬಾರರಿಗೆ ಇಂಥ ಕೌಶಲಗಳನ್ನು ಕಲಿಸಿ, ಅವರಿಗೆ ಸೂಕ್ತ ಉದ್ಯೋಗ ದೊರಕಿಸುವ ಅಗತ್ಯ ಇದೆ.

ಉತ್ತರ ಪ್ರದೇಶದ ಕುಂಬಾರಿಕೆಯ ಉದ್ಯಮದಲ್ಲಿ ನೂತನ ಆವಿಷ್ಕಾರಗಳು ಹೆಚ್ಚಾಗಿ ಕಂಡುಬಂದಿವೆ. ಅಲ್ಲಿ ಇಂಥ 600 ಘಟಕಗಳನ್ನು ಗುರುತಿಸಲಾಗಿದೆ. ಆದರೆ ಈ ಉದ್ಯಮಕ್ಕೆ ಈಗಲೂ ಆಧುನಿಕ ಸಲಕರಣೆಗಳು ಲಭ್ಯವಾಗಿಲ್ಲ. ದೇಶದ ಶೇ 95ರಷ್ಟು ಕುಂಬಾರರು ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಮಾತ್ರ ಮಣ್ಣಿನ ಸಾಮಗ್ರಿಗಳನ್ನು ಮಾಡುತ್ತಾರೆ. ಕಲಾಕೃತಿಗಳು ಹಾಗೂ ಆಧುನಿಕ ಜೀವನದ ಅಗತ್ಯಗಳಿಗೆ ತಕ್ಕಂತೆ ವಸ್ತುಗಳನ್ನು ತಯಾರಿಸುವ ತಂತ್ರಜ್ಞಾನ ಹಾಗೂ ಮಾರುಕಟ್ಟೆಯ ಸೃಷ್ಟಿ ಇನ್ನೂ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT