ಮಂಗಳವಾರ, ಸೆಪ್ಟೆಂಬರ್ 28, 2021
22 °C

PV Web Exclusive: ಆತ್ಮಹತ್ಯಾ ತಡೆ ಸಹಾಯವಾಣಿ ‘ಸಹಾಯ್‌’ಗೆ ಕರೆಗಳ ಹೆಚ್ಚಳ

ಸ್ಮಿತಾ ಶಿರೂರ Updated:

ಅಕ್ಷರ ಗಾತ್ರ : | |

Prajavani

ಘಟನೆ 1: 2020ರ ಏಪ್ರಿಲ್‌–ಮೇ ತಿಂಗಳಲ್ಲಿ ಕೋವಿಡ್‌ ಲಾಕ್‌ಡೌನ್ ಆದ ಸಂದರ್ಭ. ವಿಮಾನ, ರೈಲು ಸೇವೆಗಳೆಲ್ಲ ಬಂದ್‌ ಆಗಿದ್ದವು. ಆಗ ಬೆಂಗಳೂರಿನ ಅಪಾರ್ಟ್‌ಮೆಂಟ್‌ ಒಂದರ ಫ್ಲ್ಯಾಟ್‌ನಲ್ಲಿ ಇದ್ದು ಓದುತ್ತಿದ್ದ ಯುವಕನೊಬ್ಬನಿಗೆ ಎಲ್ಲೂ ಓಡಾಡಲಾಗದ ಸನ್ನಿವೇಶ ಜುಗುಪ್ಸೆ ತರಿಸಿತು. ಮನಸ್ಸಿನಲ್ಲಿ ಆತ್ಮಹತ್ಯೆಯ ಆಲೋಚನೆ ಸುಳಿಯಿತು. ನವದೆಹಲಿಯಲ್ಲಿದ್ದ ತಂದೆ–ತಾಯಿಗೆ ಕರೆ ಮಾಡಿದ ಆತ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿರುವುದಾಗಿ ಹೇಳಿದ. ತಕ್ಷಣ ಆತನ ತಂದೆ–ತಾಯಿ ‘ಸಹಾಯ್‌’ ಹೆಲ್ಪ್‌ಲೈನ್‌ (08025497777)ಗೆ ಕರೆ ಮಾಡಿ ವಿಷಯ ತಿಳಿಸಿದರು. ‘ಸಹಾಯ್‌’ (SAHAI HELPLINE) ಸ್ವಯಂಸೇವಕರೊಬ್ಬರಿಗೆ ಆ ಯುವಕನಿದ್ದ ಫ್ಲ್ಯಾಟ್‌ ಮಾಲೀಕರ ಪರಿಚಯವಿದ್ದ ಕಾರಣ ಅವರ ಮೂಲಕ ಆ ಯುವಕನ ಸಂಪರ್ಕ ಸಾಧಿಸಲಾಯಿತು. ತಕ್ಷಣ ಸಮಾಲೋಚಕರ ಮೂಲಕ ಸಮಾಲೋಚನೆಗೆ ಒಳಗಾಗುವಂತೆ ಸೂಚಿಸಲಾಯಿತು. ಅವರ ಸಲಹೆ ಒಪ್ಪಿದ ಯುವಕ ಮುಂದೆ ಕ್ರಮೇಣ ಆತ್ಮಹತ್ಯೆಯ ಆಲೋಚನೆಯಿಂದ ಹೊರಬಂದ.

ಘಟನೆ 2: ಉತ್ತರ ಭಾರತದ ಕಡೆಯ ಮಹಿಳೆಯೊಬ್ಬರು ರೈಲಿನಲ್ಲಿ ಹೋಗುತ್ತಿರುವಾಗಲೇ ವಿಷ ಸೇವಿಸಿದ್ದರು. ವಿಷ ಸೇವಿಸಿದ ನಂತರ ಅವರಿಗೆ ಮತ್ತೆ ಬದುಕಬೇಕೆಂಬ ಆಸೆ ಹುಟ್ಟಿತು. ತಕ್ಷಣ ಸಹಾಯ್‌ಗೆ ಕರೆ ಮಾಡಿದರು. ತಮ್ಮ ಹೆಸರು, ರೈಲಿನ ಹೆಸರನ್ನೂ ತಿಳಿಸಿದರು. ನೆಟ್‌ವರ್ಕ್‌ ಸಮಸ್ಯೆಯಿಂದಲೋ ಏನೋ ಅವರ ಕಾಲ್‌ ಕಟ್‌ ಆಯಿತು. ‘ಸಹಾಯ್‌’ನ ಸ್ವಯಂಸೇವಕರು ರೈಲ್ವೆ ಪೊಲೀಸರಿಗೆ ಮಾಹಿತಿ ರವಾನಿಸಿದರು. ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಬಚಾವ್‌ ಮಾಡಿದರು.

ಘಟನೆ 3: ಬೆಂಗಳೂರಿನ ವೈದ್ಯರೊಬ್ಬರು ಆರ್ಥಿಕ ಸಮಸ್ಯೆಗೆ ಸಿಲುಕಿದ್ದರು. ಅವರಿಗೆ ಮಾನಸಿಕ ಒತ್ತಡವೂ ಹೆಚ್ಚಾಗಿತ್ತು. ಹೀಗಾಗಿ 'ಸಹಾಯ್‌'ಗೆ ಕರೆ ಮಾಡಿದರು. ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು. ಆಗ ‘ಸಹಾಯ್‌’ ಅವರಿಗೆ ಮಾನಸಿಕ ತಜ್ಞರ ಹಾಗೂ ಮನಃಶಾಸ್ತ್ರಜ್ಞರ ಮೂಲಕ ಸಮಾಲೋಚನೆ ಒದಗಿಸಿತು. ನಿರಂತರವಾಗಿ ಅವರೊಂದಿಗೆ ಸಂಪರ್ಕದಲ್ಲಿತ್ತು. ಅವರು ಆತ್ಮಹತ್ಯೆಯ ಸುಳಿಯಿಂದ ಪಾರಾಗಿ ಬರುವವರೆಗೂ ಅವರ ಜೊತೆ ಒಡನಾಟದಲ್ಲಿತ್ತು.

ಆತ್ಮಹತ್ಯೆಯ ಕೂಪದತ್ತ ಹೋಗುವ ನೂರಾರು ಜನರಿಗೆ ‘ಸಹಾಯ್‌’ ಹೆಲ್ಪ್‌ಲೈನ್‌ ಸಾಂತ್ವನ, ಸಲಹೆ, ಸಮಾಲೋಚನೆಗಳ ಮೂಲಕ ಸಹಾಯ ಒದಗಿಸುತ್ತಿದೆ. ಕೌಟುಂಬಿಕ ಕಲಹ, ಓದಿನಲ್ಲಿ ವೈಫಲ್ಯ, ಪ್ರೇಮ ವೈಫಲ್ಯ, ಉದ್ಯೋಗ ನಷ್ಟ, ಖಿನ್ನತೆ, ಕಾರ್ಯದೊತ್ತಡಗಳು ಹೀಗೆ ಹಲವು ಕಾರಣಗಳಿಗೆ ಆತ್ಮಹತ್ಯೆಗೆ ಬಲಿಯಾಗ ಹೊರಟ ಅಮೂಲ್ಯ ಜೀವಗಳು ಕೊನೆಯ ಕ್ಷಣದಲ್ಲಿ ‘ಸಹಾಯ್‌’ಗೆ ಕರೆ ಮಾಡಿ ತಮ್ಮ ದುಃಖ ತೋಡಿಕೊಂಡಿದ್ದಾರೆ. ಅವರಿಗೆ ಈ ಸಹಾಯವಾಣಿಯ ಸ್ವಯಂಸೇವಕರು ಆತ್ಮೀಯ ಸ್ನೇಹಿತರಂತೆ ದುಃಖದಿಂದ ಹೊರಬರುವ ಮಾರ್ಗದ ಬಗ್ಗೆ ತಿಳಿಸಿದ್ದಾರೆ. ತಮ್ಮ ದುಃಖವನ್ನು ಹಂಚಿಕೊಳ್ಳಲು ಹೆಲ್ಪ್‌ಲೈನ್‌ ಸಹಾಯ ಪಡೆದ ಸಾವಿರಾರು ಜನರು ಆತ್ಮಹತ್ಯೆಯ ಯೋಚನೆ ಕಿತ್ತುಹಾಕಿ ಜೀವನದಲ್ಲಿ ಮುನ್ನಡೆಯುವುದನ್ನು ಕಲಿತಿದ್ದಾರೆ.

2002ರಲ್ಲಿ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಆರಂಭಗೊಂಡ ಆತ್ಮಹತ್ಯಾ ತಡೆ ಹೆಲ್ಪ್‌ಲೈನ್‌ ‘ಸಹಾಯ್‌’ ಇಂದಿಗೂ ಯಶಸ್ವಿಯಾಗಿ ನಡೆಯುತ್ತಿದೆ. ಬೆಂಗಳೂರಿನ ಮೆಡಿಕೋ ಪಾಸ್ಟೋರಲ್‌ ಅಸೋಸಿಯೇಷನ್‌ನ ಅಡಿ ನಡೆಯುತ್ತಿರುವ ಈ ಹೆಲ್ಪ್‌ಲೈನ್‌ಗೆ ಸಾಮಾನ್ಯ ದಿನಗಳಲ್ಲಿ ದೇಶದಾದ್ಯಂತ ದಿನಕ್ಕೆ ಸರಾಸರಿ 9 ಕಾಲ್‌ಗಳು ಬರುತ್ತಿದ್ದವು. ಕೋವಿಡ್‌ ಬಂದ ನಂತರ ಈ ಸಂಖ್ಯೆ 12ಕ್ಕೆ ಹೆಚ್ಚಳವಾಗಿದೆ. ಹೆಲ್ಪ್‌ಲೈನ್‌ನಲ್ಲಿ ಒಟ್ಟು 19 ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದವರು. ವೈದ್ಯರು, ಸಮಾಲೋಚಕರು ಅಷ್ಟೇ ಅಲ್ಲದೇ ಗೃಹಿಣಿಯರೂ ಇದ್ದಾರೆ. ಕಾಲ್‌ ಮಾಡಿದವರ ಸ್ಥಿತಿ ಗಂಭೀರವಾಗಿದ್ದರೆ ಅವರ ಕರೆಯನ್ನು ಮೆಡಿಕೋ ಪಾಸ್ಟೋರಲ್‌ ಅಸೋಸಿಯೇಷನ್‌ನ ಸಮಾಲೋಚಕರಿಗೆ ಕಳುಹಿಸಲಾಗುತ್ತದೆ. ಸಂತ್ರಸ್ತರ ಪರಿಸ್ಥಿತಿಯನ್ನು ಅವಲೋಕಿಸಿ ಸಲಹೆ, ಸಹಾಯವನ್ನು ‘ಸಹಾಯ್‌’ ಒದಗಿಸುತ್ತದೆ.

ದಿನಕ್ಕೆ 3 ಶಿಫ್ಟ್‌ಗಳಲ್ಲಿ ಸ್ವಯಂಸೇವಕರು ಕೆಲಸ ಮಾಡುತ್ತಾರೆ. ಬೆಳಿಗ್ಗೆ 10ರಿಂದ 12:30, ಮಧ್ಯಾಹ್ನ 12:30ರಿಂದ 3ರವರೆಗೆ ಹಾಗೂ 3ರಿಂದ ಸಂಜೆ 5:30ರವರೆಗೆ ಕರೆಯನ್ನು ಸ್ವೀಕರಿಸುತ್ತಾರೆ. ಹಿಂದಿ, ಇಂಗ್ಲಿಷ್‌, ಕನ್ನಡ, ಮಲಯಾಳಂ, ತಮಿಳು, ತೆಲುಗು, ಬಂಗಾಳಿ ಹಾಗೂ ವಿವಿಧ ಭಾಷೆಗಳನ್ನು ಮಾತನಾಡಬಲ್ಲ ಸ್ವಯಂಸೇವಕರು ಈ ಹೆಲ್ಪ್‌ಲೈನ್‌ನಲ್ಲಿದ್ದಾರೆ.

‘ಸಾಮಾನ್ಯವಾಗಿ ಒಂದು ಶಿಫ್ಟ್‌ನಲ್ಲಿ 2ರಿಂದ 3 ಕಾಲ್‌ಗಳು ಬರುತ್ತವೆ. ದಿನವಿಡೀ ಸೇರಿದರೆ 8ರಿಂದ 9 ಕರೆಗಳು ಬರಬಹುದು. ಒಮ್ಮೊಮ್ಮೆ ವಿಷಯಕ್ಕೆ ಸಂಬಂಧ ಪಡದವರು ಅನಗತ್ಯ ಕರೆ ಮಾಡುವುದೂ ಇದೆ. ಇಂಥ ಕರೆಗಳನ್ನು ಬಿಟ್ಟರೆ ಒಂದು ಕರೆಗೆ ಕನಿಷ್ಠ 30 ನಿಮಿಷಗಳಿಂದ 45 ನಿಮಿಷಗಳವರೆಗೆ ಮಾತನಾಡಬೇಕಾಗುತ್ತದೆ. ಕರೆ ಮಾಡಿದವರ ವಿವರ, ಅವರ ಸಮಸ್ಯೆ, ಅವರಿಗೆ ಏನು ಸಲಹೆ ನೀಡಲಾಯಿತು ಹಾಗೂ ಅದರ ಫಾಲೋ ಅಪ್‌ ಏನಾಯಿತು ಎನ್ನುವುದನ್ನು ಸ್ವಯಂಸೇವಕರು ಸಹಾಯ್‌ ಕಚೇರಿಯಲ್ಲಿರುವ ರಿಜಿಸ್ಟರ್‌ನಲ್ಲಿ ಪ್ರತಿದಿನವೂ ನೋಂದಾಯಿಸುತ್ತಾರೆ. ಈ ಮಾಹಿತಿ ಗೋಪ್ಯವಾಗಿರುತ್ತದೆ. ಕೋವಿಡ್‌ ಸಂಕಷ್ಟ ಆರಂಭವಾದಾಗಿನಿಂದ ಎಲ್ಲರೂ ಮನೆಯಿಂದಲೇ ಕರೆಗಳನ್ನು ಸ್ವೀಕರಿಸುತ್ತಿದ್ದಾರೆ. ವಿವರಗಳನ್ನು ಕಚೇರಿಗೆ ಮೇಲ್‌ ಮಾಡುತ್ತಿದ್ದಾರೆ’ ಎಂದು ಸಹಾಯ್‌ ಸಂಯೋಜಕರಾದ ಹಾಗೂ ಮೆಡಿಕೋ ಪಾಸ್ಟೋರಲ್‌ ಅಸೋಸಿಯೇಷನ್‌ ಸಲಹೆಗಾರರಾದ ಅನೀಶ್‌ ಥಾಮಸ್‌ ತಿಳಿಸಿದರು.

‘ಕೋವಿಡ್‌ ಬಂದ ನಂತರ ಉದ್ಯೋಗ ನಷ್ಟವಾದ ಬಗ್ಗೆಯೂ ಹಲವು ಕಾಲ್‌ಗಳು ಬಂದಿವೆ. ನನಗೆ ಏನಾದರೂ ಉದ್ಯೋಗ ಹುಡುಕಿ ಕೊಡುವಿರಾ ಎಂದು ಕೇಳಿದವರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಇವರಿಗೂ ಸಹ ‘ಸಹಾಯ್‌’ ಅವರ ಶೈಕ್ಷಣಿಕ ಮಟ್ಟದ ವಿವರ ಪಡೆದು ಏನು ಮಾಡಬಹುದು ಎಂಬ ಬಗ್ಗೆ ಸಲಹೆಗಳನ್ನು ನೀಡಿದೆ’ ಎಂದು ಅವರು ತಿಳಿಸಿದರು.

ಗೆಳೆಯ–ಗೆಳತಿಯರೋ, ಕುಟುಂಬದ ಸದಸ್ಯರೋ, ಸಹೋದ್ಯೋಗಿಗಳೋ, ಪರಿಚಯಸ್ಥರೋ ಆತ್ಮಹತ್ಯೆಯ ಆಲೋಚನೆಯಲ್ಲಿದ್ದಾರೆ ಎಂಬ ಸುಳಿವು ಸಿಕ್ಕರೆ, ಯಾರಾದರೂ ಕಾಲ್‌ ಮಾಡಿ ಸಂತ್ರಸ್ತರಿಗೆ ‘ಸಹಾಯ್‌’ ಮೂಲಕ ಸಮಾಧಾನ ಕೊಡಿಸಬಹುದು.

‘ಸಹಾಯ್‌’ ಹುಟ್ಟು ಹೇಗೆ?
ಬೆಂಗಳೂರಿನಲ್ಲಿ 1964ರಿಂದ ಅಸ್ತಿತ್ವದಲ್ಲಿರುವ ಮೆಡಿಕೋ ಪಾಸ್ಟೋರಲ್‌ ಅಸೋಸಿಯೇಷನ್‌ (ಎಂಪಿಎ) ಒಂದು ಎನ್‌ಜಿಒ. ಮಾನಸಿಕ ಹಾಗೂ ಸಾಮಾಜಿಕ ಪುನರ್ವಸತಿ ಕೇಂದ್ರ (ಸೈಕೊ ಸೋಷಿಯಲ್‌ ರಿಹೆಬಿಲಿಟೇಷನ್‌ ಸೆಂಟರ್‌)ವಾದ ಇದು ಮಾನಸಿಕ ಸಮಸ್ಯೆಗಳನ್ನು ಎದುರಿಸುವವರಿಗೆ ಸಮಾಲೋಚನೆ, ಚಿಕಿತ್ಸೆ, ಪುನರ್ವಸತಿ ಒದಗಿಸುವ ಕೆಲಸ ಮಾಡುತ್ತಿದೆ. ಇದರ ಅಡಿಯಲ್ಲೇ ‘ಸಹಾಯ್‌’ ಕಾರ್ಯನಿರ್ವಹಿಸುತ್ತಿದೆ.

2002ರಲ್ಲಿ ತ್ರಿಪಕ್ಷೀಯವಾದ ಮೆಡಿಕೋ ಪಾಸ್ಟೋರಲ್‌ ಅಸೋಸಿಯೇಷನ್‌, ನಿಮ್ಹಾನ್ಸ್ ಹಾಗೂ ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ‘ಸಹಾಯ್‌’ ಕಾರ್ಯಾರಂಭ ಮಾಡಿತು. ನಿಮ್ಹಾನ್ಸ್‌ನ ಎಪಿಡಮಾಲಜಿ ವಿಭಾಗದ ಮುಖ್ಯಸ್ಥರಾಗಿದ್ದ, ಡಾ. ಗುರುರಾಜ್‌ ಅವರು ರಾಜ್ಯದಾದ್ಯಂತ ‘ಆತ್ಮಹತ್ಯಾ ತಡೆಗೆ ಜಾಗೃತಿ ಹಾಗೂ ಅರಿವು ಕಾರ್ಯಕ್ರಮ‘ಗಳನ್ನು ನಡೆಸಿಕೊಡುತ್ತಿದ್ದರು. ಹೆಲ್ಪ್‌ಲೈನ್‌ ಆರಂಭಿಸಬೇಕೆಂಬ ಆಲೋಚನೆಯನ್ನು ಅವರು ಮೆಡಿಕೋ ಪಾಸ್ಟೋರಲ್‌ ಅಸೋಸಿಯೇಷನ್‌ನಲ್ಲಿದ್ದ ಡಾ. ಮೋಹನ್‌ ಐಸಾಕ್‌ ಅವರ ಮೂಲಕ ಎಂಪಿಎ ಆಡಳಿತ ಮಂಡಳಿಯ ಬಳಿ ಚರ್ಚಿಸಿದರು. ಆಗ ‘ಸಹಾಯ್‌ ಹೆಲ್ಪ್‌ಲೈನ್‌’ ಕಾರ್ಯರೂಪಕ್ಕೆ ಬಂದಿತು. ಆರಂಭದಲ್ಲಿ ಸಮಾಲೋಚನೆ ನಡೆಸಬಲ್ಲ ಸ್ವಯಂಸೇವಕರಿಗೆ ನಿಮ್ಹಾನ್ಸ್ ಮಾನಸಿಕ ರೋಗ ತಜ್ಞರ ತಂಡ ತರಬೇತಿ ನೀಡಿತು. ಹೆಲ್ಪ್‌ಲೈನ್ ಕಾರ್ಯನಿರ್ವಹಿಸಲು ಅಗತ್ಯವಾದ ಬೇಕಾದ ನಿಧಿಯನ್ನು ‘ರೋಟರಿ ಕ್ಲಬ್‌ ಫಾರ್‌ ಬೆಂಗಳೂರು ಈಸ್ಟ್‌’ನವರು ಒದಗಿಸಿದರು. ಕಚೇರಿಗೆ ಜಾಗ ಹಾಗೂ ಸ್ವಯಂಸೇವಕರನ್ನು ಎಂಪಿಎ ಒದಗಿಸಿತು.

‘ಅಲ್ಲಿಂದ ನಂತರ ಹಲವು ವೈದ್ಯರು, ಸಮಾಲೋಚಕರು ಈ ಹೆಲ್ಪ್‌ಲೈನ್‌ಗಾಗಿ ಕೆಲಸ ಮಾಡಿದ್ದಾರೆ. ಸದ್ಯ ಡಾ. ಮ್ಯಾಥ್ಯು ವರ್ಗಿಸ್‌, ಡಾ. ಅಜಿತ್‌ ವಿ. ಭಿಡೆ, ಡಾ.ಆರತಿ ಜಗನ್ನಾಥನ್‌, ಎಲೆನ್‌ ಮೃಣಾಲಿನಿ ಶಿಂಧೆ ಹಾಗೂ ಮೆಡಿಕೋ ಪಾಸ್ಟೋರಲ್‌ ಅಸೋಸಿಯೇಷನ್‌ನ ಸಮಾಲೋಚಕರು ‘ಸಹಾಯ್‌‘ದ ಉಸ್ತುವಾರಿ ನೋಡಿಕೊಳ್ಳುತ್ತಾರೆ. ತರಬೇತಿಯನ್ನೂ ನೀಡುತ್ತಾರೆ’ ಎಂದು ಸಹಾಯ್‌ನ ಸಂಯೋಜಕರಾದ ಹಾಗೂ ಮೆಡಿಕೋ ಪಾಸ್ಟೋರಲ್‌ ಅಸೋಸಿಯೇಷನ್‌ನ ಸಲಹೆಗಾರರಾದ ಅನೀಶ್‌ ಥಾಮಸ್‌ ತಿಳಿಸಿದರು.

‘ಸಹಾಯ್‌’ ಹೆಲ್ಪ್‌ಲೈನ್‌ನಲ್ಲಿ ಸ್ವಯಂಸೇವಕರಾಗಲು ಇಚ್ಛಿಸುವವರಿಗೆ ಮೆಡಿಕೋ ಪಾಸ್ಟೋರಲ್‌ ಅಸೋಸಿಯೇಷನ್‌ ತರಬೇತಿ ನೀಡಲು ಸಿದ್ಧವಿದೆ. ಆಸಕ್ತರು medicopastoralassociation@gmail.com ಗೆ ಅರ್ಜಿ ಹಾಕಬಹುದು ಎಂದು ಅವರು ತಿಳಿಸಿದರು.

(ಸಹಾಯ್‌ ಹೆಲ್ಪ್‌ಲೈನ್‌ ನಂ: 08025497777; ಸಮಯ: ಬೆಳಿಗ್ಗೆ 10ರಿಂದ ಸಂಜೆ 5:30).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು