ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಹಾಡು ಬದಲಿಸಿದ ಹಕ್ಕಿ!!

Last Updated 2 ಸೆಪ್ಟೆಂಬರ್ 2020, 7:52 IST
ಅಕ್ಷರ ಗಾತ್ರ

ವಸಂತ ಮಾಸದಲ್ಲಿ ಮೈಮರೆತು ಹಾಡುವ ಕೋಗಿಲೆ.. ಮುಂಜಾನೆ ನಿದ್ದೆಯಿಂದ ಎಬ್ಬಿಸುವ ಕೋಳಿ.. ಅಂಗಳದಲ್ಲಿ ಚಿಲಿಪಿಲಿಗುಟ್ಟುವ ಗುಬ್ಬಿ.. ಒಂದೊಂದು ಪಕ್ಷಿಗೂ ಒಂದೊಂದು ಸ್ವರ. ಒಂದಕ್ಕೊಂದು ವಿಭಿನ್ನ, ಅಷ್ಟೇ ಮಧುರ, ವಿಸ್ಮಯ. ಹಕ್ಕಿಗಳ ಕಲರವ ಕೇಳಿದೊಡನೆ, ಇದು ಇಂಥಹದ್ದೇ ಪಕ್ಷಿಯ ಕೂಗು ಎಂದು ಥಟ್ಟನೆ ಹೇಳುವಷ್ಟರ ಮಟ್ಟಿಗೆ ಅವು ನಮ್ಮ ದೈನದಿಂದ ಜೀವನದ ಜೊತೆ ಬೆರೆತುಹೋಗಿವೆ.

ಒಂದು ಜಾತಿಯ ಪಕ್ಷಿಗಳಿಗೆ ಇಂಥದ್ದೇ ಧ್ವನಿ ಇರಬೇಕು ಎಂಬ ನಿಯಮವನ್ನು ಚೂರು ಪಕ್ಕಕ್ಕಿಡಿ. ಏಕೆಂದರೆ ಕೆನಡಾದ ಬಿಳಿಕತ್ತಿನ ಗುಬ್ಬಿಗಳು ನಿಮ್ಮ ಕಲ್ಪನೆಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿವೆ. ಆಗಿರೋದು ಇಷ್ಟೇ. ಅವು ತಮ್ಮ ಎಂದಿನ ಹಾಡನ್ನು ಬದಲಿಸಿಕೊಂಡಿವೆ. ದಿನವೂ ಹಾಡುವ ಹಾಡಿನಲ್ಲಿ ಕೊಂಚ ಮಾರ್ಪಾಡು ಮಾಡಿಕೊಂಡಿವೆ. ಸಂಶೋಧಕರು ಈ ಬದಲಾವಣೆಯನ್ನು ಪತ್ತೆಹಚ್ಚಿದ್ದಾರೆ. ಇದು ಅಚ್ಚರಿ ಎನಿಸಿದರೂ ಸತ್ಯ. ಅಷ್ಟೇ ನಿಗೂಢ.

ಕೆನಡಾದ ಪಶ್ಚಿಮ ಹಾಗೂ ಕೇಂದ್ರ ಭಾಗದಲ್ಲಿರುವ ಬಿಳಿಕತ್ತಿನ ಗುಬ್ಬಬ್ಬಿಗಳು ಮೂರು ಹಂತದ ಹಾಡಿನ ಬದಲಾಗಿ ಎರಡು ಹಂತದ ಹಾಡಿಗೆ (two-note) ಬದಲಾಗಿವೆ. ಬ್ರಿಟಿಷ್ ಕೊಲಂಬಿಯಾದಿಂದ ಶುರುವಾದ ಈ ಟ್ರೆಂಟ್ ಇದೀಗ ಪೂರ್ವಕ್ಕೂ ಹಬ್ಬಿದ್ದು, ಕೆನಡಾದ ಬಹುತೇಕ ಬಿಳಿಕತ್ತಿನ ಗುಬ್ಬಚ್ಚಿಗಳು ಈ ಹಾಡಿಗೆ ಹೊಂದಿಕೊಂಡುಬಿಟ್ಟಿವೆ. ಕ್ವಿಬೆಕ್ ಪ್ರಾಂತ್ಯಕ್ಕೂ ಇದು ಹಬ್ಬುತ್ತಿದೆ. ಅಂದರೆ ಟ್ಯೂನ್ ಹುಟ್ಟಿದ ಸ್ಥಳದಿಂದ 2,000 ಕಿಲೋಮೀಟರ್ ದೂರದವರೆಗೂ ಅದರ ಹರವು ವಿಸ್ತರಿಸಿದಂತಾಯಿತು. ಎರಡು ದಶಕಗಳ ಅವಧಿಯಲ್ಲಿ ಈ ಪರಿವರ್ತನೆ ಘಟಿಸಿದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.

ಹಕ್ಕಿಗಳು ವಿಕಸನಕ್ಕೆ ಒಳಗಾಗುತ್ತವೆಯಾದರೂ ಅದು ತೀರಾ ನಿಧಾನಗತಿಯಲ್ಲಿರುತ್ತದೆ. ಆದರೆ ಕೆನಡಾದ ಗುಬ್ಬಚ್ಚಿಗಳ ವಿಚಾರದಲ್ಲಿ ಆಗಿರುವ ವಿಕಸನ ಶೀಘ್ರಗತಿಯದ್ದು ಎಂದು ಅಧ್ಯಯನಕಾರ ಕೆನ್ ಒಟ್ಟರ್ ಅವರು ಅಚ್ಚರಿ ವ್ಯಕ್ತಪಡಿಸುತ್ತಾರೆ. ಕರೆಂಟ್ ಬಯಾಲಜಿ ಪತ್ರಿಕೆಯಲ್ಲಿ ಈ ಕುರಿತ ಬರಹ ಪ್ರಕಟವಾಗಿದೆ.

ಹಕ್ಕಿಯ ಕೂಗು ಇಂಪಾಗಿರುವುಷ್ಟೇ ಅಲ್ಲದೇ ಅದರಲ್ಲಿ ಆರೋಗ್ಯ, ಫಿಟ್ನೆಸ್‌ನ ಮಾಹಿತಿಯೂ ಅಡಗಿರುತ್ತದೆ. ಎಲ್ಲ ಹಕ್ಕಿಗಳ ರೀತಿ, ಬಿಳಿಕತ್ತಿನ ಗಂಡು ಗುಬ್ಬಿಯು ತನ್ನ ಅಧಿಕಾರಕ್ಕೆ ಒಳಪಟ್ಟ ಪ್ರದೇಶದ ವ್ಯಾಪ್ತಿಯನ್ನು ತಿಳಿಸಲು ಹಾಗೂ ಹೆಣ್ಣುಹಕ್ಕಿಯ ಗಮನ ಸೆಳೆಯಲು ಕೂಗು ಹಾಕುತ್ತದೆ.

ಬಿಳಿ ಕತ್ತಿನಗುಬ್ಬಚ್ಚಿಗಳು ಹಾಡುವ ಕ್ಲಾಸಿಕ್ ಹಾಡಿದ ಧ್ವನಿ ‘ಓಹ್, ಮೈ ಸ್ವೀಟ್ ಕೆನಡಾ, ಕೆನಡಾ, ಕೆನಡಾ’ ಎಂಬ ರೀತಿ ಕೇಳಿಸುತ್ತದೆ. ಬದಲಾದ ಧ್ವನಿ ‘ಓಹ್ ಮೈ ಸ್ವೀಟ್, ಕೆನ–ಕೆನ–ಕೆನಡಾ’ ಎಂದು ಕೇಳಿಸುತ್ತದೆ. ‘ಕೆನಡಾ’ ಇಲ್ಲಿ ‘ಕೆನ’ ಎಂದಾಗಿದೆ ಎಂಬುದು ಸಂಶೋಧಕರ ಅಂಬೋಣ.

1990ರ ಸುಮಾರಿಗೆ ಬ್ರಿಟಿಷ್ ಕೊಲಂಬಿಯಾದ ಉತ್ತರ ಭಾಗದಲ್ಲಿ ಒಟ್ಟರ್ ಮತ್ತು ಮತ್ತವರ ತಂಡಕ್ಕೆ ಮೊದಲ ಬಾರಿಗೆ ಗುಬ್ಬಚ್ಚಿಯ ಹೊಸ ಹಾಡು ಕಿವಿಗೆ ಬಿದ್ದಿತ್ತು. ಅಲ್ಲಿಂದ ಅದು ಪೂರ್ವಕ್ಕೆ ತೆರಳಿ, ಆಲ್ಬರ್ಟಾ, ಸಾಸ್ಕಾಚೆವಾನ್ ಮತ್ತು ಮ್ಯಾನಿಟೋಬಾದಾದ್ಯಂತ ಪಸರಿಸಿರುವುದು ಕಂಡುಬಂದಿತು. 2004ರಲ್ಲಿ ಅಲ್ಬರ್ಟಾದ ಶೇ ಅರ್ಧದಷ್ಟು ಗುಬ್ಬಚ್ಚಿಗಳು ಹೊಸ ಟ್ಯೂನ್‌ಗೆ ಒಗ್ಗಿಕೊಂಡಾಗಿತ್ತು. 2014ರ ಹೊತ್ತಿಗೆ ಪ್ರತಿಯೊಂದು ಗುಬ್ಬಚ್ಚಿಯ ಕಂಠದಲ್ಲೂ ಇದೇ ಸ್ವರ ಕೇಳಿಬರುತ್ತಿತ್ತು.

2,000 ಕಿಲೋಮೀಟರ್ ದೂರದ ಪ್ರದೇಶಕ್ಕೂ ಈ ಹಾಡು ಹಬ್ಬಿದ್ದನ್ನು ಪತ್ತೆಹಚ್ಚಿತ ತಂಡ ಕಂಡುಕೊಂಡ ಅಂಶವೆಂದರೆ, ಹಕ್ಕಿಗಳು ಒಂದರಿಂದ ಮತ್ತೊಂದು ಕಲಿಯುತ್ತವೆ ಹಾಗೂ ಪೂರ್ವ ಮತ್ತು ಪಶ್ಚಿಮ ಮೇರೆಯನ್ನು ಅವು ದಾಟುತ್ತವೆ ಎಂಬುದು.

2013 ಮತ್ತು 2016ರಲ್ಲಿ ಹಕ್ಕಿಗಳ ವಲಸೆ ಮತ್ತು ಚಳಿಗಾಲದ ಪ್ರದೇಶಗಳನ್ನು ಪತ್ತೆ ಮಾಡಲು 50 ಗಂಡು ಗುಬ್ಬಚ್ಚಿಗಳಿಗೆ ಜಿಯೊಲೊಕೇಟರ್‌ಗಳನ್ನು ಅಳವಡಿಸಲಾಗಿತ್ತು. ಪಕ್ಷಿಗಳು ರಾಕಿ ಪರ್ವತಗಳನ್ನು ದಾಟಿ, ಅಮೆರಿಕದ ಗ್ರೇಟ್ ಪ್ಲೇನ್ಸ್‌ ಭಾಗಗಳಾದ ಟೆಕ್ಸಾಸ್, ಒಕ್ಲಹಾಮ, ಕನ್ಸಾಸ್‌ನ ಹಕ್ಕಿಗಳನ್ನು ಸಂಪರ್ಕಿಸಿದವು.ಪಶ್ಚಿಮ ಮತ್ತು ಪೂರ್ವ ಭಾಗದ ಗುಬ್ಬಚ್ಚಿಗಳ ಈ ಸಮ್ಮಿಲನವು ಯುವ ಗಂಡು ಗುಬ್ಬಚ್ಚಿಗಳ ಬೋಧನಾಶಾಲೆಯ ರೂಪ ತಾಳುತ್ತದೆ. ಬಳಿಕ ಅವು ಸಂತಾನೋತ್ಪತ್ತಿಗೆ ಹೊಸ ಹಾಡಿನೊಂದಿಗೆ ತೆರಳುತ್ತವೆ.

20 ವರ್ಷಗಳ ಅವಧಿಯಲ್ಲಿ 1,785 ಧ್ವನಿಮುದ್ರಿಕೆಗಳನ್ನು ಆಲಿಸಿ, ಅದು ಪಸರಿಸಿರುವ ನಕ್ಷೆಯನ್ನು ರಚಿಸಲಾಯಿತು.ದೇಶದ ಪೂರ್ವ ತುದಿಗೆ ಅಂಟಿಕೊಂಡಿರುವ ಪ್ರದೇಶದ ಕೆಲ ಭಾಗದಲ್ಲಿ ಮಾತ್ರ ಗುಬ್ಬಚ್ಚಿಗಳು ತಮ್ಮ ಹಳೆಯ ಹಾಡಿನೊಂದಿಗೆ ಚಿಲಿಪಿಲಿಗುಟ್ಟುತ್ತಿವೆ.

ಇ–ಬರ್ಡ್ ಮತ್ತು ಕ್ಸೆನೊ–ಸೆಂಟೊ ಎಂಬ ಡಾಟಾಬೇಸ್‌ಗಳಲ್ಲಿ ಜಗತ್ತಿನಾದ್ಯಂತ ಜನರು ಪಕ್ಷಿಗಳ ಧ್ವನಿಯನ್ನು ಅಪ್‌ಲೋಡ್‌ ಮಾಡಿದ್ದಾರೆ. ಈ ವೈವಿಧ್ಯವು ಅಧ್ಯಯನಕ್ಕೆ ದೊಡ್ಡ ಅನುಕೂಲ ಒದಗಿಸಿತು. ಸುಮಾರು 5 ಲಕ್ಷ ರೆಕಾರ್ಡಿಂಗ್‌ಗಳನ್ನು ಇಲ್ಲಿವೆ.

ಹಾಡುಗಳ ಹೊಸ ಮಾರ್ಪಾಡುಗಳು ನಿರಂತರವಾಗಿ ಆಗುತ್ತಿರುತ್ತವೆ. ಆದರೆ ಪಕ್ಷಿಗಳು ಇವುಗಳಲ್ಲಿ ಬಹುಪಾಲುನ್ನು ಅಳವಡಿಸಿಕೊಳ್ಳುವುದಿಲ್ಲ ಎಂಬುದು ಮತ್ತೊಬ್ಬ ಸಂಶೋಧಕ ಪೊಡೊಸ್ ಅವರ ಮಾತು. ಗುಬ್ಬಚ್ಚಿಗಳು ಹೆಣ್ಣು ಹಕ್ಕಿಗಳನ್ನು ಸೆಳೆಯಲು ಅಥವಾ ಭೂಪ್ರದೇಶದ ಅಧಿಕಾರವನ್ನು ಸೂಚಿಸಲಿಕ್ಕಾಗಿ ಈ ಬದಲಾವಣೆ ಮಾಡಿಕೊಂಡಿವೆ ಎಂಬುದಕ್ಕೆ ಪುರಾವೆ ಸಿಕ್ಕಿಲ್ಲ. ಹೀಗಾಗಿ ಈ ಪರಿವರ್ತನೆ ನಿಜಕ್ಕೂ ನಿಗೂಢ ಹಾಗೂ ರಹಸ್ಯವಾಗಿಯೇ ಉಳಿದುಕೊಂಡಿದೆ. ಈ ಮೊದಲೂ ಕೂಡ ಇಂತಹ ಬದಲಾವಣೆಗಳು ಆಗಿರಬಹುದಾದರೂ, ಅವುಗಳನ್ನು ಯಾಗೂ ಗುರುತಿಸಿಲ್ಲ ಅಷ್ಟೇ.

ಹಕ್ಕಿಯ ಬದಲಾದ ಹಾಡು ಕೇಳಲು ಇಲ್ಲಿಕ್ಲಿಕ್ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT