ಶನಿವಾರ, ಅಕ್ಟೋಬರ್ 31, 2020
19 °C

PV Web Exclusive| ರಷ್ಯಾ: ಜಲಚರಗಳ ಕತ್ತು ಹಿಸುಕಿತೇ ಕೀಟನಾಶಕ?

ಅಮೃತ ಕಿರಣ್ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ಪರಿಸರ ವಿನಾಶದ ಘಟನೆಗಳು ಪದೇ ಪದೇ ವರದಿಯಾಗುತ್ತಿವೆ. ಇತ್ತೀಚೆಗೆ ಮಾರಿಷಸ್‌ನಲ್ಲಿ ಸಂಭವಿಸಿದ ಪರಿಸರ ದುರಂತ ಮರೆಯಾಗುವ ಮುನ್ನ ರಷ್ಯಾದಲ್ಲಿ ಜಲಚರಗಳು ವಿನಾಶದ ಭೀತಿ ಎದುರಿಸುತ್ತಿವೆ. ರಷ್ಯಾದ ಪೂರ್ವ ಭಾಗದ ಕಮ್ಚಟ್ಕ ಪ್ರದೇಶದ ಬಹುಪಾಲು ಕಡಲ ಜೀವಿಗಳಿಗೆ ಸಂಚಕಾರ ಬಂದೊದಗಿದೆ. ಮಾಸ್ಕೊ ಟೈಮ್ಸ್ ವರದಿ ಇದನ್ನು ಪುಷ್ಠೀಕರಿಸಿದೆ.

ಆಕ್ಟೋಪಸ್‌ಗಳು, ದೊಡ್ಡ ಮೀನುಗಳು, ಏಡಿಗಳು ಹಾಗೂ ಕೆಲವು ಜಲಚರಗಳು ಕಲತ್ರಿಸ್ಕಿ ಕಡಲತೀರದಲ್ಲಿ ಸತ್ತುಬಿದ್ದಿರುವ ಚಿತ್ರಗಳು ಪರಿಸರ ಪ್ರಿಯರನ್ನು ಆತಂತಕ್ಕೆ ದೂಡಿವೆ. ದಡ ಸೇರಿರುವ ಮೃತ ಜೀವಿಗಳ ಗಂಟಲು ಹಾಗೂ ಕಣ್ಣುಗಳಲ್ಲಿ ಸುಟ್ಟ ಗಾಯ ಕಂಡುಬಂದಿದೆ. 

ಕಡಲ ಜೀವಿಗಳ ಈ ಸಾಮೂಹಿಕ ಸಾವಿಗೆ ಕಾರಣವನ್ನು ಪತ್ತೆಹಚ್ಚಲು ಅಧ್ಯಯನ ನಡೆಯುತ್ತಿದೆ. ಮಾನವ ನಿರ್ಮಿತ ಜಲಮಾಲಿನ್ಯ, ನೈಸರ್ಗಿಕ ವಿಕೋಪ ಅಥವಾ ಜ್ವಾಲಾಮುಖಿ ಸಂಬಂಧಿ ಭೂಕಂಪಗಳು ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ ಎಂದು ಕಮ್ಚಟ್ಕ ಗವರ್ನರ್ ವ್ಲಾಡಿಮಿರ್ ಸೊಲೊಡೊವ್ ಹೇಳಿದ್ದಾರೆ. 

ಕಮ್ಚಟ್ಕ ಮೀನುಗಾರಿಕೆ ಹಾಗೂ ಸಮುದ್ರಶಾಸ್ತ್ರ ವಿಭಾಗ ಹಾಗೂ ಕ್ರೊನೊಟಸ್ಕಿ ನೇಚರ್ ರಿಸರ್ವ್ ಸಂಸ್ಥೆಗಳು ಕಳೇಬರಗಳ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸುತ್ತಿವೆ. ಸಮುದ್ರಜೀವಿಗಳು ಅಪಘಾತದ ಭೀಕರತೆಯನ್ನು ಅನುಭವಿಸಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

‘ದಂಡೆಯಲ್ಲಿ ಸಣ್ಣಪುಟ್ಟ ಜಲಚರಗಳನ್ನು ಹೊರತುಪಡಿಸಿದರೆ, ದೊಡ್ಡ ಜಲಚರಗಳ ಮೃತದೇಹಗಳು ಕಂಡುಬಂದಿಲ್ಲ. ಆದರೆ ಸಮುದ್ರದ 15 ಮೀಟರ್ ಆಳದಲ್ಲಿ ಅವುಗಳ ಮೃತದೇಹಗಳು ಕಂಡುಬಂದಿವೆ. ಆಳಸಮುದ್ರದ ಶೇ 95ರಷ್ಟು ಜೀವಿಗಳು ಬದುಕುಳಿದಿಲ್ಲ’ ಎಂದು ವಿಜ್ಞಾನಿ ಇವಾನ್ ಉಸಟೊವ್ ಹೇಳಿದ್ದಾರೆ. ಕೆಲವು ದೊಡ್ಡ ಮೀನುಗಳು, ಸೀಗಡಿಗಳು ಮತ್ತು ಏಡಿಗಳು ಉಳಿದುಕೊಂಡಿದ್ದರೂ, ಅವುಗಳ ಸಂಖ್ಯೆ ಕಡಿಮೆ ಎಂದವರು ಹೇಳಿದ್ದಾರೆ. 

ಸಮುದ್ರದಾಳಕ್ಕೆ ಇಳಿದಿದ್ದ ಫೊಟೊಗ್ರಾಫರ್ ಅಲೆಕ್ಸಾಂಡರ್ ಕೊರೊಬೊಕ್ ಅವರ ಪ್ರಕಾರ, ಜೀವಿಗಳು ರಾಸಾಯನಿಕ ಪ್ರಕ್ರಿಯೆಯಿಂದ ಆಘಾತ ಅನುಭವಿಸಿವೆ. ‘ನೀರಿನಾಳಕ್ಕೆ ಇಳಿದಾಗ ನನಗೆ ಅನ್ನಿಸಿದ್ದು, ಇದೊಂದು ಪರಿಸರ ದುರಂತ. ಸಮುದ್ರದಾಳದ ಜೈವಿಕ ವ್ಯವಸ್ಥೆ ಗುರುತರವಾಗಿ ಹಾಳಾಗಿದೆ. ಪ್ರಕೃತಿಯಲ್ಲಿ ಎಲ್ಲವೂ ಪರಸ್ಪರ ಸಂಬಂಧ ಹೊಂದಿರುವುದರಿಂದ ಇದು ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ’ ಎಂದು ಎಲೆಕ್ಸಾಂಡರ್ ಹೇಳಿದ್ದಾರೆ. 

ಈ ಪ್ರದೇಶಕ್ಕೆ ಹತ್ತಿರದಲ್ಲಿರುವ ಕೊಜೆಲ್ಸ್ಕಿ ಮತ್ತು ರಾಡಿಗಿನ್ಸ್ಕಿ ಮಿಲಿಟರಿ ಪರೀಕ್ಷಾ ತಾಣಗಳ ಸಮೀಪವಿರುವ ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲು ರಷ್ಯಾ ಮುಂದಾಗಿದೆ. ಕೀಟನಾಶಕ ಸೋರಿಕೆಯಿಂದ ಈ ಅವಘಡ ಸಂಭವಿಸಿರಬಹುದೇ ಎಂದು ವಿಶೇಷ ತನಿಖಾ ಆಯೋಗ ಪರಿಶೀಲನೆ ನಡೆಸುತ್ತಿದೆ.

ಸರ್ಫರ್‌ಗಳಿಗೆ ಕಹಿ ಅನುಭವ: 

ಕಲತ್ರಿಸ್ಕಿ ಕಡಲತೀರ ಸರ್ಫರ್‌ಗಳ ಜನಪ್ರಿಯ ತಾಣ. ಇಲ್ಲಿ ಮಾಲಿನ್ಯದಿಂದ ಜಲಚರಗಳು ಸಾಯುತ್ತಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಅಕ್ಟೋಬರ್ ಮೊದಲ ವಾರ ಹರಿದಾಡಿತ್ತು. ಕೆಲವು ಸರ್ಫರ್‌ಗಳಿಗೆ ಜ್ವರ, ವಾಂತಿ ಕಾಣಿಸಿಕೊಂಡಿತ್ತು. ನೀರಿನಲ್ಲಿ ಯಾವುದೋ ಒಂದು ರೀತಿಯ ಅವಘಡ ಸಂಭವಿಸಿದೆ ಎಂಬ ಸುಳಿವನ್ನು ನಾಲ್ಕು ವಾರಗಳ ಹಿಂದೆಯೇ ಸ್ಥಳೀಯರು ನೀಡಿದ್ದರು.

‘ನೀರಿನಲ್ಲಿ ಈಜಿದ ಬಳಿಕ ಅನಾರೋಗ್ಯ ಕಾಣಿಸಿಕೊಂಡಿತು. ನೀರು ಕಲುಷಿತಗೊಂಡಿದ್ದರಿಂದ ಕಣ್ಣಿನ ಕಾರ್ನಿಯಾಗೆ ‘ಕೆಮಿಕಲ್ ಬರ್ನ್’ ಉಂಟಾಗಿದೆ ಎಂದು ವೈದ್ಯರು ತಿಳಿಸಿದರು’ ಎಂದು ಸರ್ಫಿಂಗ್ ಮಾಡುವ ನಟಾಲಿಯಾ ಡನಿಲೊವಾ ಅಭಿಪ್ರಾಯಪಟ್ಟಿದ್ದಾರೆ. 

‘ಮೂರು ವಾರಗಳ ಹಿಂದೆ ನೀರಿನಲ್ಲಿ ಈಜುವಾಗ ದೃಷ್ಟಿ ಮಂದವಾಗಿತ್ತು. ಕಣ್ಣುಗಳು ನೋಯುತ್ತಿದ್ದವು. ಕೆಲ ದಿನಗಳ ಬಳಿಕ ಪುನಃ ಅಲ್ಲಿಗೆ ಹೋದಾಗ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು’ ಎಂದು ಮತ್ತೊಬ್ಬ ಸರ್ಫರ್ ಆಂಟನ್ ಮೊರೊಜೊವ್ ಹೇಳಿದ್ದಾರೆ. 

‘ಸಮುದ್ರದ ನೀರಿನಲ್ಲಿ ತೈಲ ಉತ್ಪನ್ನಗಳ ಮಟ್ಟ ಮತ್ತು ಫೀನಾಲ್ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿದೆ’ ಎಂದು ಗ್ರೀನ್‌ಪೀಸ್ ಸಂಸ್ಥೆ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೆ ಕೊಟ್ಟಿದೆ. ಪ್ರಾಥಮಿಕ ವರದಿ ಪ್ರಕಾರ, ನೀರಿನಲ್ಲಿರುವ ಪೆಟ್ರೋಲಿಯಂ ಉತ್ಪನ್ನಗಳ ಪ್ರಮಾಣ 3.6 ಪಟ್ಟು, ಫಿನಾಲ್ ಮಟ್ಟ 2.5 ಪಟ್ಟ ಹೆಚ್ಚಿರುವುದು ಕಂಡುಬಂದಿದೆ. 

ಕೈಗಾರಿಕಾ ದುರಂತ ಅಥವಾ ತೈಲ ಸೋರಿಕೆ ಬಗ್ಗೆ ಸರ್ಕಾರದಿಂದ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಸಮುದ್ರತೀರದಿಂದ ದೂರ ಇರುವಂತೆ ತಜ್ಞರು ಜನರಲ್ಲಿ ಮನವಿ ಮಾಡಿದ್ದಾರೆ. ತಕ್ಷಣ ಈ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಪರಿಸರವಾದಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು