ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ‘ಹಸಿರು ಇಂಧನ ಶ್ರೇಷ್ಠತೆ ಕೇಂದ್ರ’ ಸ್ಥಾಪನೆಗೆ ಯೋಜನೆ

Last Updated 12 ಜನವರಿ 2021, 10:53 IST
ಅಕ್ಷರ ಗಾತ್ರ

ಬೆಳಗಾವಿ:ಸಕ್ಕರೆ ಉದ್ದಿಮೆ ಹಾಗೂ ಕಬ್ಬು ಬೆಳೆಗಾರರ ಅಭಿವೃದ್ಧಿಗಾಗಿ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ‘ಹಸಿರು ಇಂಧನ ಶ್ರೇಷ್ಠತೆ ಕೇಂದ್ರ’ ಸ್ಥಾಪಿಸಲು ಯೋಜನೆ ಸಿದ್ಧಪಡಿಸಲಾಗಿದೆ.

₹ 18.50 ಕೋಟಿ ವೆಚ್ಚದ ಯೋಜನೆ ಕುರಿತು ಪ್ರಸ್ತಾವ ಸಿದ್ಧಪಡಿಸಲಾಗಿದೆ. ಮುಂಬರುವ ಬಜೆಟ್‌ನಲ್ಲಿ ಘೋಷಿಸಿ ಅನುಷ್ಠಾನಗೊಳಿಸುವಂತೆ ಕೋರಿ ಸಕ್ಕರೆ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಸಂಸ್ಥೆಯಿಂದ ಪ್ರಸ್ತಾವ ಸಲ್ಲಿಸಲಾಗಿದೆ.

ಸರ್ಕಾರದಿಂದ ಅನುಮೋದನೆಗೊಂಡು ಸ್ಥಾಪನೆಯಾದಲ್ಲಿ, ದೇಶದ ಮೊಟ್ಟ ಮೊದಲ ಕೇಂದ್ರವಿದು ಎನಿಸಲಿದೆ.

ದೇಶದಲ್ಲಿ ದಿನೇ ದಿನೇ ಇಂಧನದ ಅವಲಂಬನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತರ ಇಂಧನದ ಸಾಧ್ಯತೆಗಳನ್ನು ಶೋಧಿಸುವ ಅನಿವಾರ್ಯತೆ ಇದೆ. ಸಾಂಪ್ರದಾಯಿಕ ಇಂಧನದ ಬದಲಿಗೆ ಜೈವಿಕ ಇಂಧನವನ್ನು ದೀರ್ಘಾವಧಿ ಹಾಗೂ ಸುಸ್ಥಿರ ಪರ್ಯಾಯ ವ್ಯವಸ್ಥೆಯನ್ನಾಗಿ ಮಾಡಿಕೊಳ್ಳಲು ದೇಶದಲ್ಲಿ ಅವಕಾಶವಿದೆ. ಈ ನಿಟ್ಟಿನಲ್ಲಿ ಜೈವಿಕ ಎಥೆನಾಲ್ ಹಾಗೂ ಜೈವಿಕ ಡೀಸೆಲ್‌ಗಳು ದೇಶದ ಇಂಧನ ಅವಶ್ಯಗಳನ್ನು ಪೂರೈಸುವ ಮಾರ್ಗಗಳಾಗಿವೆ. ಇದಕ್ಕಾಗಿ ಇಲ್ಲಿ ಹೆಚ್ಚಿನ ಸಂಶೋಧನೆಗೆ ಯೋಜಿಸಲಾಗಿದೆ.

‘ಕಬ್ಬು, ಸಕ್ಕರೆ ಗಡ್ಡೆ, ಕಸವಾ, ಗೆಣಸು ಹಾಗೂ ಸಿಹಿ ಜೋಳ ಬೆಳೆಗಳು ಜೈವಿಕ ಇಂಧನ ನೀಡುವ ಸಾಮರ್ಥ್ಯವನ್ನು ಹೊಂದಿವೆ. ಸಿಮರುಬ, ಜತ್ರೋಪಾ (ಹೊಂಗೆ ಬೀಜ), ಪೊಂಗಾಮಿಯಾ ಮತ್ತು ಅಡುಗೆಗೆ ಉಪಯೋಗಿಸಿದ ಎಣ್ಣೆಯನ್ನು ಕೂಡ ಜೈವಿಕ ಡೀಡೆಲ್ ಆಗಿ ಬಳಸಬಹುದಾಗಿದೆ. ಕಬ್ಬಿನಿಂದ ಬರುವ ಬಗಾಸ್ ಅಥವಾ ಸಿಪ್ಪೆಯು ಜೈವಿಕ ಎಥೆನಾಲ್‌ಗೆ ಒಂದು ಉತ್ತಮ ಮೂಲ ವಸ್ತುವಾಗಿ ಹೊರಹೊಮ್ಮುತ್ತಿವೆ. ಸಮರ್ಥ ಸೂಕ್ಷ್ಮ ಜೀವಾಣುಗಳನ್ನು ಆಯ್ಕೆ ಮಾಡಿ ಮದ್ಯಸಾರದ ಉತ್ಪಾದನೆಯನ್ನು ಹೆಚ್ಚಿಸಿದರೆ ಆರ್ಥಿಕ ಸಬಲತೆಯನ್ನು ಸುಧಾರಿಸಲು ಸಾಧ್ಯವಿದೆ ಎನ್ನುತ್ತಾರೆ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಡಾ.ಆರ್.ಬಿ. ಖಾಂಡಗಾವೆ.

‘ಇಂತಹ ಜೈವಿಕ ಇಂಧನ ಉತ್ಪಾದಿಸುವ ಘಟಕಗಳಿಗೆ ವಾತಾವರಣದ ಗುಣಧರ್ಮ ಸ್ಥಾಪಿಸುವ ಅವಶ್ಯಕತೆ ಇದೆ. ಇದಕ್ಕಾಗಿ ಸೂಕ್ತ ತಾಂತ್ರಿಕತೆ, ಜೈವಿಕ ಇಂಧನದ ಪರ್ಯಾಯ ಬೆಳೆಗಳು, ಈಗಾಗಲೇ ಸಾಮರ್ಥ್ಯ ಹೊಂದಿರುವ ಮತ್ತು ಇಲ್ಲಿವರೆಗೂ ಉಪಯೋಗಿಸದೆ ಇರುವಂತಹ ಜೈವಿಕ ಇಂಧನದ ಮೂಲಗಳ ಸಂಶೋಧನೆ ಹಾಗೂ ಅಭಿವೃದ್ಧಿ (ಆರ್ ಅಂಡ್ ಡಿ) ಕಾರ್ಯಕ್ರಮದ ಅಗತ್ಯವಿದೆ. ಹೊಸ ಸಾಧ್ಯತೆಗಳ ಬಗ್ಗೆ ಸಂಶೋಧನಾ ಚಟುವಟಿಕೆಗಳನ್ನು ನಡೆಸಲು ಅವಕಾಶವಿದೆ. ಇದಕ್ಕಾಗಿ ‘ಹಸಿರು ಇಂಧನ ಶ್ರೇಷ್ಠತೆ ಕೇಂದ್ರ’ ಸ್ಥಾಪಿಸಲು ಯೋಜನೆ ನೀಡಲಾಗಿದೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕೇಂದ್ರದಲ್ಲಿ, ಸೂಕ್ಷ್ಮಾಣು ಜೀವಿಗಳ ಅನುವಂಶಿಕತೆ ಮಾರ್ಪಾಡು ಮಾಡುವುದು, ಜೈವಿಕ ತಂತ್ರಜ್ಞಾನ ಅಥವಾ ಸೂಕ್ಷ್ಮ ಜೀವ ವಿಜ್ಞಾನದ ಕಾರ್ಯಕ್ಷಮತೆ ಹೆಚ್ಚಿಸುವುದು, ಜೈವಿಕ ವಿಶ್ಲೇಷಣಾತ್ಮಕ ಮಾನದಂಡಗಳನ್ನು ರೂಪಿಸುವುದು, ಪ್ರಯೋಗಾಲಯ ಸ್ಥಾಪನೆ, ಸಂವರ್ಧಕಗಳನ್ನು ಉತ್ಪಾದಿಸುವುದು, ಕ್ಷೇತ್ರ ಪ್ರಯೋಗಗಳಿಗಾಗಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವುದು, ಜೈವಿಕ ಎಥೆನಾಲ್ ಹಾಗೂ ಜೈವಿಕ ಡೀಸೆಲ್ ಉತ್ಪಾದನೆಗಾಗಿ ಹಲವು ಅವಕಾಶಗಳ ಕುರಿತು ಸಂಶೋಧನೆ ನಡೆಸಲು ಮತ್ತು ಮೌಲ್ಯವರ್ಧನೆಗೆ ಯೋಜಿಸಲಾಗಿದೆ. ಅತ್ಯಾಧುನಿಕ ಉಪಕರಣಗಳು, ಅಗತ್ಯ ಮಾನವ ಸಂಪನ್ಮೂಲ ಮೊದಲಾದ ಮೂಲಸೌಲಭ್ಯಗಳನ್ನು ಒದಗಿಸುವಂತೆಯೂ ಪ್ರಸ್ತಾವದಲ್ಲಿ ಕೋರಲಾಗಿದೆ.

‘ಬೆಳಗಾವಿ ತಾಲ್ಲೂಕಿನ ಬೆಳಗುಂದಿ ಹಾಗೂ ಬೆನಕನಹಳ್ಳಿಯಲ್ಲಿ ಸಂಸ್ಥೆಗೆ ದೊರೆತಿರುವ ಜಾಗವಿದೆ. ಅಲ್ಲಿ ಆರ್‌ ಅಂಡ್ ಡಿ ಕೇಂದ್ರಗಳನ್ನು ಸ್ಥಾಪಿಸಬಹುದಾಗಿದೆ. ಬಜೆಟ್‌ನಲ್ಲಿ ಯೋಜನೆಯನ್ನು ಸೇರಿಸುವಂತೆ ಸಚಿವರನ್ನು ಕೋರಲಾಗಿದೆ. ಅವಕಾಶ ದೊರೆತರೆ ದೇಶದಲ್ಲಿಯೇ ಉತ್ಕೃಷ್ಟ ಹಾಗೂ ಮಾದರಿ ಕೇಂದ್ರವನ್ನಾಗಿ ರೂಪಿಸಲು ಅವಕಾಶವಿದೆ’ ಎನ್ನುತ್ತಾರೆ ಖಾಂಡಗಾವೆ.

‘ಜೈವಿಕ ಇಂಧನ ಬಳಕೆ ಇಂದಿನ ತುರ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯವರು ‘ಹಸಿರು ಇಂಧನ ಶ್ರೇಷ್ಠತೆ ಕೇಂದ್ರ’ ಸ್ಥಾಪಿಸುವ ಬಗ್ಗೆ ಯೋಜನೆ ಸಿದ್ಧಪಡಿಸಿದ್ದಾರೆ. ಅನುದಾನ ಒದಗಿಸುವಂತೆ ಕೋರಿದ್ದಾರೆ. ಅದನ್ನು ಪರಿಶೀಲಿಸಿ, ಅನುದಾನಕ್ಕಾಗಿ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು’ ಎಂದು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT