ಸೋಮವಾರ, ಅಕ್ಟೋಬರ್ 18, 2021
22 °C
ಉದಾರೀಕರಣಕ್ಕೆ 30 ವರ್ಷ

ಅನುಭವ ಮಂಟಪ | ಖರೀದಿ ಶಕ್ತಿಗೆ‌ ಆರ್ಥಿಕ ಸಾಮರ್ಥ್ಯವೇ ಮಾನದಂಡವಲ್ಲ

ಎಂ.ಚಂದ್ರ ಪೂಜಾರಿ Updated:

ಅಕ್ಷರ ಗಾತ್ರ : | |

ಬಂಡವಾಳದ ಜಾಗತಿಕ ಚಲನೆಗೆ ಮುಕ್ತ ಅವಕಾಶ ನೀಡುವ ಮತ್ತು ಖಾಸಗಿ ಬಂಡವಾಳದ ನಿಯಂತ್ರಣಗಳನ್ನು ಸಡಿಲಗೊಳಿಸುವ ಆರ್ಥಿಕ ನೀತಿಗಳನ್ನು ಉದಾರೀಕರಣ ನೀತಿಗಳೆಂದು ವ್ಯಾಖ್ಯಾನಿಸಲಾಗಿದೆ. ಭಾರತದಲ್ಲಿ ಉದಾರೀಕರಣ ಪ್ರಕ್ರಿಯೆ ಆರಂಭವಾಗಿ 30 ವರ್ಷಗಳಾದವು. ಇವು ನಮ್ಮ ಸಮಾಜದ ಮೇಲೆ ಸಕರಾತ್ಮಕಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಕರಾತ್ಮಕ ಪರಿಣಾಮಗಳನ್ನು ಬೀರಿರಬಹುದು. ಉದಾರೀಕರಣದ ಪರಿಣಾಮಗಳನ್ನು ವಿಮರ್ಶಿಸಲು ಇದು ಸಕಾಲ. ಹಾಗೆಂದು ಈ ಲೇಖನದ ಉದ್ದೇಶ ಉದಾರೀಕರಣದ ಪರಿಣಾಮಗಳನ್ನು ವಿಮರ್ಶಿಸುವುದಲ್ಲ. ಅದರ ಬದಲು ಉದಾರೀಕಣ ಪ್ರಕ್ರಿಯೆಯ ಪರಿಣಾಮಗಳನ್ನು ವಿಶ್ಲೇಷಿಸುವಾಗ ಪರಿಗಣಿಸಬಹುದಾದ ಕೆಲವೊಂದು ಅಂಶಗಳನ್ನು ಗುರುತಿಸುವುದು ಮಾತ್ರ.  

1. ಉದಾರವಾದಿ ಚಿಂತನೆಗಳು: ಮುಕ್ತ ಮಾರುಕಟ್ಟೆ ಕಲ್ಪನೆ ಪಶ್ಚಿಮದ ಕೊಡುಗೆ. ಪಶ್ಚಿಮದಲ್ಲಿ ಮಾರುಕಟ್ಟೆ ಅರ್ಥ ವ್ಯವಸ್ಥೆ ಕೇವಲ ಆರ್ಥಿಕ ಪರಿವರ್ತನೆಯಾಗಿರಲಿಲ್ಲ. ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ  ಪರಿವರ್ತನೆಗಳು ಮುಕ್ತ ಮಾರುಕಟ್ಟೆ ಕಲ್ಪನೆಯನ್ನು ಬಲಗೊಳಿಸಿವೆ. ಜ್ಞಾನ ಉತ್ಪಾದನೆಯಲ್ಲಿ ಚರ್ಚ್‌ಗಿದ್ದ ಏಕಸ್ವಾಮ್ಯವನ್ನು ಜ್ಞಾನೋದಯ ಚಳವಳಿ ಅಲ್ಲಗಳೆದು ವಿಜ್ಞಾನವನ್ನು ಮಾನ್ಯ ಮಾಡಿತು. ಚರ್ಚ್‌ನ ಕಪಿಮುಷ್ಟಿಯಿಂದ ವ್ಯಕ್ತಿಯನ್ನು ಬಿಡುಗಡೆಗೊಳಿಸಿತು. ಫ್ರೆಂಚ್ ಕ್ರಾಂತಿಗೆ ಬೌದ್ಧಿಕ ಹಿನ್ನೆಲೆ ಒದಗಿಸಿತು. ಫ್ರೆಂಚ್ ಕ್ರಾಂತಿ ಜನಸಾಮಾನ್ಯರ ಹಕ್ಕಿನ ಕಲ್ಪನೆಯನ್ನು ಮುಂಚೂಣಿಗೆ ತಂದಿತು. ವಿಜ್ಞಾನ ಮತ್ತು ಧರ್ಮಗಳ ಸಂಘರ್ಷಗಳ ಜೊತೆಗೆ ವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ವ ನೀಡುವ ಉದಾರವಾದಿ ರಾಜಕೀಯ ಚಿಂತನೆಗಳು ಮುಂಚೂಣಿಗೆ ಬಂದವು. ವ್ಯಕ್ತಿಯು ಸಮಾಜದ ಕೇಂದ್ರ ಮತ್ತು ವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವಾಯತ್ತೆಯ ಬುನಾದಿ ಮೇಲೆ ಕಟ್ಟಿಕೊಳ್ಳುವ ಸಮಾಜ ಉತ್ತಮ ಸಮಾಜವೆಂದು ಉದಾರವಾದ ಹೇಳುತ್ತದೆ. ಈ ಎಲ್ಲ ಸಾಮಾಜಿಕ, ಸಾಂಸ್ಕೃತಿಕ ಬದಲಾವಣೆಗಳು ಮಾರುಕಟ್ಟೆ ನಿರ್ದೇಶಿತ ಅಭಿವೃದ್ದಿಗೆ ಹಿನ್ನೆಲೆಯಾಗಿ ಕೆಲಸ ಮಾಡಿವೆ.

2. ಪಾಳೇಗಾರಿಕೆ ಪರಿಸರ: ಪಶ್ಚಿಮದ ಇಂತಹ ಪರಿಸರಕ್ಕೂ ಭಾರತದಲ್ಲಿ ಮುಕ್ತ ಮಾರುಕಟ್ಟೆ ಅರ್ಥಿಕ ನೀತಿಗಳು ಜಾರಿಗೆ ಬಂದ ಸಂದರ್ಭದ ಸಾಮಾಜಿಕ, ಸಾಂಸ್ಕೃತಿಕ ಪರಿಸರಕ್ಕೂ ಏನಾದರೂ ಸಂಬಂಧ ಇದೆಯೇ? ಭಾರತದಲ್ಲಿ ಎಲ್ಲ ಒತ್ತು ಆರ್ಥಿಕ ನೀತಿಗಳನ್ನು ಸಡಿಲಿಸುವುದರ ಮೇಲಿದೆ. ಆರ್ಥಿಕ ಉದಾರೀಕರಣವು ಬಯಸುವ ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಪೂರ್ಣ ವಿರುದ್ಧವಾದ ಸಾಮಾಜಿಕ, ಸಾಂಸ್ಕೃತಿಕ ಪರಿಸರ ನಮ್ಮಲ್ಲಿದೆ. ಹದಿನೆಂಟನೇ ಶತಮಾನದ ಪಶ್ಚಿಮ ಯುರೋಪಿನಲ್ಲಿದ್ದಂತೆ ನಮ್ಮಲ್ಲೂ ಬಹುತೇಕ ಮಠಮಂದಿರಗಳು (ಮಸೀದಿ, ಚರ್ಚ್‍ಗಳನ್ನು ಸೇರಿಸಿಕೊಂಡು) ಬಲಾಢ್ಯರ ಪರವೇ ಇವೆ. ನಮ್ಮಲ್ಲಿ ಒಂದೊಂದು ಜಾತಿ, ಧರ್ಮಕ್ಕೂ ಪ್ರತ್ಯೇಕ ಮಠಮಂದಿರಗಳಿವೆ ಮತ್ತು ಪ್ರತಿ ಜಾತಿ, ಧರ್ಮದ ಮಠಮಂದಿರಗಳು ಆಯಾಯ ಜಾತಿ, ಧರ್ಮದ ಬಲಾಢ್ಯರಪರ ಇವೆ. ಇವುಗಳ ಬಲಾಢ್ಯಪರತೆ ಬಿಡಿಬಿಡಿಯಾಗಿರುವುದರಿಂದ ಇಡಿಯಾದ ಬಲಾಢ್ಯಪರತೆ ಗೋಚರಿಸುತ್ತಿಲ್ಲ. ಈ ಮಠಮಂದಿರಗಳು ಸಾಂಸ್ಕೃತಿಕ ಸ್ವಾಯತ್ತೆಯ ಹೆಸರಲ್ಲಿ ವ್ಯಕ್ತಿ ಸ್ವಾತಂತ್ರ್ಯವನ್ನು ಸದಾ ನಿರಾಕರಿಸುತ್ತಿವೆ.

ಪಶ್ಚಿಮದಲ್ಲಿ ವಿಜ್ಞಾನ ಮುಂಚೂಣಿಗೆ ಬರುವುದರೊಂದಿಗೆ ಧರ್ಮದ ಪ್ರಾಬಲ್ಯವನ್ನು ಪ್ರಶ್ನಿಸುವ ಪ್ರವೃತ್ತಿ ಬೆಳೆಯಿತು. ನಮ್ಮಲ್ಲೂ ದೊಡ್ಡ ಸಂಖ್ಯೆಯಲ್ಲಿ ವಿಜ್ಞಾನಿಗಳಿದ್ದಾರೆ ಮತ್ತು ವಿಜ್ಞಾನವೂ ಇದೆ. ಆದರೆ, ಮಠಮಂದಿರಗಳ ಬಲಾಢ್ಯಪರ ಧೋರಣೆಯನ್ನು ಪ್ರಶ್ನಿಸುವ ಮನೋಧರ್ಮ ಬೆಳೆಯಲೇ ಇಲ್ಲ. ಅದರ ಬದಲು ಆಧುನಿಕ ಸರಕುಸೇವೆಗಳ ಅನುಭೋಗ ಮತ್ತು ಪಾಳೇಗಾರಿಕೆ ಮನೋಧರ್ಮ ಕಾರುಬಾರು ಮಾಡುತ್ತಿವೆ. ಇಂತಹ ಸಾಂಸ್ಕೃತಿಕ ಪರಿಸರವನ್ನು ಬದಲಾಯಿಸುವ ಸಾಧ್ಯತೆ ರಾಜಕೀಯಕ್ಕಿದೆ. ಆದರೆ, ಇಂತಹ ಸಂಕುಚಿತ ಸಾಂಸ್ಕೃತಿಕ ಪರಿಸರವನ್ನು ಬದಲಾಯಿಸುವ ಬದಲು ಇವನ್ನು ತಮ್ಮ ತಕ್ಷಣದ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ರಾಜಕೀಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ. ಹೀಗೆ ನಮ್ಮ ವಿಶಿಷ್ಟ ಸಾಮಾಜಿಕ ಪರಿಸರ ಚರಿತ್ರೆಯಿಂದ ಬಂದ ಅಸ್ಮಿತೆಗಳನ್ನು, ಮೇಲುಕೀಳುಗಳನ್ನು, ನ್ಯಾಯ ಅನ್ಯಾಯದ ಕಲ್ಪನೆಗಳನ್ನು ಮತ್ತು ಅಭಿವೃದ್ಧಿ–ಅನಭಿವೃದ್ಧಿ ಕಲ್ಪನೆಗಳನ್ನು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಮುಂದುವರಿಸುತ್ತಿವೆ. ಇಂತಹ ಅರೆ ಪರಿವರ್ತಿತ ಮುಂದುವರಿಕೆ ಆರ್ಥಿಕ ಪ್ರಗತಿಗೆ ಅತಿ ಅವಶ್ಯವಿರುವ ಸಾಮಾಜಿಕ ನ್ಯಾಯದ ಕಲ್ಪನೆಗಳನ್ನು, ಹೊಸ ಅವಕಾಶಗಳನ್ನು ಜೀರ್ಣಿಸಿಕೊಳ್ಳುವ ಜನರ ಸಾಮರ್ಥ್ಯಗಳನ್ನು, ಪರಸ್ಪರ ನಂಬಿಕೆ ಮತ್ತು ಸಹಕಾರಗಳನ್ನು ಮತ್ತು ಸರಕಾರದ ಪಾತ್ರವನ್ನು ಗಾಢವಾಗಿ ಪ್ರಭಾವಿಸುತ್ತಿವೆ.

3. ಸಾಮಾಜಿಕ ನ್ಯಾಯ: ಉದಾರೀಕರಣ ನೀತಿಗಳ ಆರಂಭದ ದಿನಗಳಲ್ಲಿ ಮತ್ತು ನಂತರ ಸಾಮಾಜಿಕ ನ್ಯಾಯದ ಕಲ್ಪನೆ ಮಹತ್ತರ ಬದಲಾವಣೆ ಕಂಡಿದೆ. ಆರಂಭದ  ದಿನಗಳಲ್ಲಿ ಖರೀದಿಸುವ ಶಕ್ತಿ ಇಲ್ಲದ ತಳಸ್ತರದ ಜನರ ಆಸಕ್ತಿಯನ್ನು ರಕ್ಷಿಸುವ ಗಂಭೀರ ಕ್ರಮಗಳಿದ್ದವು. ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವುದಕ್ಕಾಗಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿ, ಉದ್ಯೋಗ ಖಾತರಿ ಯೋಜನೆ, ಮಾಹಿತಿ ಹಕ್ಕು ಕಾಯ್ದೆ, ಶಿಕ್ಷಣದ ಹಕ್ಕು ಕಾಯ್ದೆ, ಆಹಾರ ಭದ್ರತಾ ಕಾಯ್ದೆ, ಬುಡಕಟ್ಟುಗಳ ಹಕ್ಕುಗಳನ್ನು ರಕ್ಷಿಸಲು ಅರಣ್ಯ ಹಕ್ಕು ಕಾಯ್ದೆ, ಕೃಷಿಕರ ಭೂಹಕ್ಕುಗಳನ್ನು ರಕ್ಷಿಸಲು ಭೂಸ್ವಾಧೀನ ಕಾಯ್ದೆ ಇತ್ಯಾದಿಗಳ ಮೂಲಕ ತಳಸ್ತರದ ಆಸಕ್ತಿಯನ್ನು ರಕ್ಷಿಸುವ ಪ್ರಯತ್ನಗಳಿದ್ದವು. ಆದರೆ ಕಾಲಕ್ರಮೇಣ ಬಲಾಢ್ಯರ ಆಸಕ್ತಿಗಳು ಆದ್ಯತೆ ಪಡೆದು ತಳಸ್ತರದ ಜನರ ಮತ್ತು ಸಮುದಾಯಗಳ ಆಸಕ್ತಿಗಳು ಹಿನ್ನೆಲೆಗೆ ಸರಿದವು. ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ, ಬಲಾಢ್ಯ ಸಮುದಾಯಗಳ ಮೀಸಲಾತಿ ಹೋರಾಟಗಳು ಮತ್ತು ಅವರನ್ನು ತೃಪ್ತಿಪಡಿಸಲು ಜಾರಿಗೆ ತಂದ ಆರ್ಥಿಕ ನೆಲೆಯ ಮೀಸಲಾತಿ, ಅವಶ್ಯಕ ಸರಕುಸೇವೆಗಳ ಕಾಯ್ದೆ ತಿದ್ದಪಡಿ, ಪರೋಕ್ಷ ತೆರಿಗೆಯನ್ನು ಹೆಚ್ಚಿಸುವ ಸರಕುಸೇವೆಗಳ ತೆರಿಗೆ ಇವೆಲ್ಲವೂ ಈ ಸಾಲಿನಲ್ಲಿ ನೋಡಬಹುದಾದ ಕ್ರಮಗಳು.

ಅಂದರೆ, ಎಲ್ಲರನ್ನೂ ಸಮನಾಗಿ ನೋಡುವುದು ಮತ್ತು ಎಲ್ಲವನ್ನು ಎಲ್ಲರಿಗೂ ಸಮಾನವಾಗಿ ಹಂಚುವುದೆನ್ನುವ ಅರ್ಥದಲ್ಲಿ ಸಾಮಾಜಿಕ ನ್ಯಾಯವನ್ನು ನಿರ್ವಚಿಸಲಾಯಿತು. ಆದರೆ ನಮ್ಮಂತಹ ಅಸಮಾನ ಸಮಾಜದಲ್ಲಿ ಎಲ್ಲವನ್ನು ಎಲ್ಲರಿಗೆ ಸಮನಾಗಿ ಹಂಚಿದರೆ ಸಮಾನತೆ ಹೆಚ್ಚುವುದಿಲ್ಲ; ಅಸಮಾನತೆ ಹೆಚ್ಚುತ್ತದೆ. ಅಸಮಾನತೆ ಹೆಚ್ಚಿದಂತೆ ಅಭಿವೃದ್ಧಿ ಅವಕಾಶಗಳನ್ನು ಬಳಸಿಕೊಳ್ಳುವ ತಳಸ್ತರದ ಜನರ ಸಾಮರ್ಥ್ಯ ಕುಗ್ಗುತ್ತಾ ಹೋಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಕೋವಿಡ್ -19 ಸಾಂಕ್ರಾಮಿಕದ ಪರಿಣಾಮ. ಕೋವಿಡ್-19 ಎಲ್ಲರನ್ನೂ ಕಾಡಿದೆ. 

ಆದರೆ ತಳಸ್ತರದ ಜನರನ್ನು ಅತಿ ಹೆಚ್ಚು ಕಾಡಿದೆ. ಕೋವಿಡ್ ಹೊಡೆತದಿಂದ ಬಸವಳಿದ ಅರ್ಥ ವ್ಯವಸ್ಥೆಯನ್ನು  ಪುನಶ್ಚೇತನಗೊಳಿಸಲು  ₹26 ಲಕ್ಷ ಕೋಟಿ ಮೊತ್ತದ ಉತ್ತೇಜನ ಪ್ಯಾಕೇಜ್‍ ಅನ್ನು ಸರ್ಕಾರ ಘೋಷಣೆ ಮಾಡಿದೆ. ಈ ₹26 ಲಕ್ಷ ಕೋಟಿಯಲ್ಲಿ ಕೆಲವು ಸಾವಿರ ಕೋಟಿ ಕೂಡ ತಳಸ್ತರದ ಜನರ ಖರೀದಿಸುವ ಸಾಮರ್ಥ್ಯ ವೃದ್ಧಿಸಲು ನೇರ ಬಳಕೆಯಾಗಲಿಲ್ಲ.

4. ಮಾರುಕಟ್ಟೆಯಲ್ಲಿ ಪಾಲುಗೊಳ್ಳುವ ಸಾಮರ್ಥ್ಯ: ಮಾರುಕಟ್ಟೆಯಲ್ಲಿ ಪಾಲುಗೊಳ್ಳುವ ಸಾಮರ್ಥ್ಯ ಕೇವಲ ಆರ್ಥಿಕ ಸಾಮರ್ಥ್ಯದ ಮೇಲೆ ನಿಂತಿಲ್ಲ. ಸಾಮಾಜಿಕ, ಸಾಂಸ್ಕೃತಿಕ ಸಾಮರ್ಥ್ಯಗಳು ಕೂಡ ಮುಖ್ಯ. ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರು ಮಾರುಕಟ್ಟೆಯಲ್ಲಿ ಪಾಲುಗೊಳ್ಳುವ ಸಾಮಾಜಿಕ ಸಾಮರ್ಥ್ಯವನ್ನು ಇಂದಿಗೂ ಜೀವಂತ ಇರುವ ಅಸ್ಪ್ರಶ್ಯತೆ, ಮಹಿಳೆಯರ ಎರಡನೇ ದರ್ಜೆ ಸ್ಥಾನಮಾನ, ಕೋಮುವಾದಿ ರಾಜಕೀಯಗಳು ಗಣನೀಯವಾಗಿ ಕುಗ್ಗಿಸುತ್ತಿವೆ. ಇದೇ ರೀತಿಯಲ್ಲಿ ಉಣ್ಣುವ, ತಿನ್ನುವ, ಪೂಜಿಸುವ, ಪ್ರೀತಿಸುವ ವಿಷಯಗಳನ್ನು ಮುಂದಿಟ್ಟುಕೊಂಡು ನಡೆಸುವ ಸಾಂಸ್ಕೃತಿಕ ರಾಜಕೀಯ ದಲಿತರ, ಬುಡಕಟ್ಟುಗಳ, ಹಿಂದುಳಿದ ಜಾತಿಗಳ ಸಾಂಸ್ಕೃತಿಕ ಸಾಮರ್ಥ್ಯವನ್ನು ಕುಗ್ಗಿಸುತ್ತಿವೆ. ಇವೆಲ್ಲವೂ ಮಾರುಕಟ್ಟೆ ನಿರ್ದೇಶಿತ ಅಭಿವೃದ್ಧಿಯು ಸೃಷ್ಟಿಸುವ ಹೊಸ ಅವಕಾಶಗಳನ್ನು ಬಳಸಿಕೊಳ್ಳಲು ಇವರಿಗೆ ಅಡ್ಡಿಯಾಗಿವೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಜಾತಿ, ಲಿಂಗ, ಧರ್ಮಗಳು ಮುಖ್ಯವಲ್ಲ. ಖರೀದಿಸುವ ಶಕ್ತಿ ಮಾತ್ರ ಮುಖ್ಯ. ಆದುದರಿಂದ ಆರ್ಥಿಕ ನೀತಿಗಳನ್ನು ಸಡಿಲಿಸುತ್ತಾ ಹೋದರೆ ಎಲ್ಲರೂ ಮಾರುಕಟ್ಟೆಯಲ್ಲಿ ಪಾಲುಗೊಳ್ಳಬಹುದೆನ್ನುವ ಗ್ರಹಿಕೆ ನಮ್ಮಲ್ಲಿ ಕೆಲಸ ಮಾಡುತ್ತಿಲ್ಲ. ಏಕೆಂದರೆ ನಮ್ಮಲ್ಲಿ ಖರೀದಿಸುವ ಶಕ್ತಿಗೂ ಜಾತಿ, ಲಿಂಗ, ಧರ್ಮಗಳಿಗೂ ನೇರ ಸಂಬಂಧ ಇದೆ. 

5. ಸಮುದಾಯಗಳ ಸಹಬಾಳ್ವೆ: ಸಮುದಾಯಗಳ ನಡುವೆ ಸಹಬಾಳ್ವೆ  ಹೆಚ್ಚಿದಂತೆ ದೇಶ, ಸಮುದಾಯಗಳು ಉನ್ನತಿಯತ್ತ ಮತ್ತು ದ್ವೇಷ, ಕಚ್ಚಾಟ ಹೆಚ್ಚಿದಂತೆ ಸಮಾಜ, ಸಂಸ್ಕೃತಿಗಳು ಅವನತಿಯತ್ತ ಸಾಗುತ್ತವೆ ಎನ್ನುವುದು ಚರಿತ್ರೆಯಿಂದ ಕಲಿತ ಪಾಠ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇವತ್ತು ಅಮೆರಿಕವು ಪ್ರಪಂಚದಲ್ಲೇ ಬಲಿಷ್ಠ ರಾಷ್ಟ್ರ. ಆದರೆ 18ನೇ ಶತಮಾನದಲ್ಲಿ ಅಮೆರಿಕವು ಒಂದು ಬಡ ರಾಷ್ಟ್ರ. ಬಡತನಕ್ಕೆ ಹಲವು ಕಾರಣಗಳಿದ್ದವು. ಅವುಗಳಲ್ಲಿ ಒಂದು ಬಲವಾದ ಕಾರಣ ಜನಾಂಗೀಯ ದ್ವೇಷ. ಕಪ್ಪು– ಬಿಳಿಯರ ನಡುವೆ ಜನಾಂಗೀಯ ದ್ವೇಷ ಹೊತ್ತಿ ಉರಿಯುತ್ತಿತ್ತು. ಅಮೆರಿಕದ ಹಲವು ರಾಜ್ಯಗಳಲ್ಲಿ ಜನಾಂಗೀಯ ತಾರತಮ್ಯವನ್ನು, ದ್ವೇಷವನ್ನು ಬೆಳೆಸುವ ಹಲವು ಕಾನೂನುಗಳಿದ್ದವು. ಇವೆಲ್ಲ ಬದಲಾಗಿ ಎಲ್ಲರ ಸಮಾನತೆ ಕಾಪಾಡುವ ಕಾನೂನು ಜಾರಿಗೆ ಬಂದ ನಂತರ ಅಮೆರಿಕ ಬೆಳೆಯಲು ಆರಂಭಿಸಿತು. ದೂರದ ಉದಾಹರಣೆ ಏಕೆ, ನೆರೆಯ ರಾಷ್ಟ್ರ ಶ್ರೀಲಂಕಾವನ್ನು ನೋಡಿ. ತಮಿಳರು ಮತ್ತು ಭೌದ್ದರ ನಡುವಿನ ಜನಾಂಗೀಯ ಹೋರಾಟದಿಂದ ಶ್ರೀಲಂಕಾದ ಅರ್ಥ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಇದೇ ಸ್ಥಿತಿ ಪಾಕಿಸ್ತಾನದಲ್ಲೂ ಇದೆ. ವಾಸ್ತವ ಹೀಗಿದ್ದರೂ ಜಾತಿ, ಧರ್ಮಗಳ ಹೆಸರಲ್ಲಿ ಜನರನ್ನು ಧ್ರುವೀಕರಿಸುವ ಸಾಂಸ್ಕೃತಿಕ ರಾಜಕೀಯ ಕಡಿಮೆಯಾಗಿಲ್ಲ. 

ಕೊನೆಯದಾಗಿ, ಸರ್ಕಾರದ ಪಾತ್ರದ ಕುರಿತು ಹೇಳುವುದಾದರೆ ಮಾರುಕಟ್ಟೆ ದೇವರ ಸೃಷ್ಟಿಯಲ್ಲ; ನಾವು ಚುನಾಯಿಸುವ ಪ್ರತಿನಿಧಿಗಳು ಸೃಷ್ಟಿಸಿದ ಒಂದು ಸಂಸ್ಥೆ. ಜನಪ್ರತಿನಿಧಿಗಳು ಯಾರು ಎನ್ನುವುದರ ಮೇಲೆ ಮಾರುಕಟ್ಟೆ ಯಾರ ಪರ ಕೆಲಸ ಮಾಡುತ್ತದೆ  ಎನ್ನುವುದನ್ನು ತೀರ್ಮಾನಿಸಬಹುದು. ನಮ್ಮ ಜನಪ್ರತಿನಿಧಿಗಳು ಕೂಲಿ ಕಾರ್ಮಿಕರಲ್ಲ, ಭೂರಹಿತರಲ್ಲ, ಅಸಂಘಟಿತ ಕಾರ್ಮಿಕರಲ್ಲ,  ವಲಸೆ ಕಾರ್ಮಿಕರಲ್ಲ, ಸಣ್ಣ ಕೃಷಿಕರಲ್ಲ, ಸಣ್ಣಪುಟ್ಟ ವ್ಯಾಪಾರಿ, ಉದ್ಯಮಿಗಳಲ್ಲ, ಮೂರು ಹೊತ್ತಿನ ಊಟಕ್ಕೆ ಪರದಾಡುವವರಲ್ಲ. ಇವರಲ್ಲಿ ಶೇ 95ಕ್ಕಿಂತಲೂ ಹೆಚ್ಚಿನವರು ಕೋಟ್ಯಧೀಶ ಪುರುಷರು, ದೊಡ್ಡ ಉದ್ಯಮಿಗಳು, ದೊಡ್ಡ ಕೃಷಿಕರು. ಇವರ ಆದ್ಯತೆಗೂ ಇವರನ್ನು ಚುನಾಯಿಸುವ ಜನಸಾಮಾನ್ಯರ ಆದ್ಯತೆಗೂ ಏನೇನೂ ಸಂಬಂಧ ಇಲ್ಲ.

ಇವೇ ಕಾರಣಗಳಿಂದ ಪ್ರತಿನಿಧಿಗಳು ತಮ್ಮನ್ನು ಚುನಾಯಿಸಿದ ಮತದಾರರ ಆದ್ಯತೆಗಿಂತ ಹೆಚ್ಚು ತಮ್ಮ ಆದ್ಯತೆಯನ್ನು ಪ್ರತಿನಿಧಿಸುವ ಮಾರುಕಟ್ಟೆಯನ್ನು ರೂಪಿಸಿದ್ದಾರೆ. ಬಲಾಢ್ಯರು ರೂಪಿಸಿದ ಮಾರುಕಟ್ಟೆಯಲ್ಲಿ ಭೂಮಿ, ಬಂಡವಾಳ, ಪ್ರಾಕೃತಿಕ ಸಂಪನ್ಮೂಲಗಳು ಮಾರುಕಟ್ಟೆ ನಿಯಮಾನುಸಾರ ಮಾರಾಟ ಆಗುವುದಿಲ್ಲ. ಆದರೆ, ಕಾರ್ಮಿಕರ ಶ್ರಮ ಮಾತ್ರ ಮಾರುಕಟ್ಟೆ ನಿಯಮಕ್ಕೆ ಅನುಸಾರ ಮಾರಾಟ ಆಗುತ್ತಿದೆ. ಈ ಎಲ್ಲ ಅಂಶಗಳು ಉದಾರೀಕರಣ ನೀತಿಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿ ಆಗಬಹುದೆನ್ನುವ ನಂಬಿಕೆ ನನ್ನದು.


–ಎಂ.ಚಂದ್ರ ಪೂಜಾರಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು