ಶುಕ್ರವಾರ, ಮೇ 20, 2022
24 °C

ಆಳ-ಅಗಲ: ಆಹಾರ ಪೋಲು ಹಸಿವು ನಿರ್ಮೂಲನೆಗೆ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಗತ್ತಿನ ಬಲಿಷ್ಠ ಆರ್ಥಿಕತೆಯ ರಾಷ್ಟ್ರಗಳಲ್ಲಿ ಒಂದೆನಿಸಬೇಕು ಎಂಬ ಓಟದಲ್ಲಿರುವ ಭಾರತದಲ್ಲಿ, ಹಸಿವಿನಿಂದ ಜನರು ಸಾಯುತ್ತಿರುವ ಬಗ್ಗೆ ಅಲ್ಲೊಂದು ಇಲ್ಲೊಂದು ವರದಿ ಬರುತ್ತಲೇ ಇದೆ. ಅಪೌಷ್ಟಿಕತೆಯ ಸಮಸ್ಯೆ ನಮ್ಮ ಹಲವು ರಾಜ್ಯಗಳನ್ನು ಕಾಡುತ್ತಿದೆ. ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಹಸಿವಿನಿಂದ ದಿನಿತ್ಯವೆಂಬಂತೆ ಜನರು ಸಾಯುತ್ತಿದ್ದಾರೆ ಎಂಬುದು ಒಂದು ವಾಸ್ತವವಾದರೆ, ಜಗತ್ತಿನಾದ್ಯಂತ ಪ್ರತಿದಿನವೂ ಲಕ್ಷಾಂತರ ಟನ್‌ಗಳಷ್ಟು ಆಹಾರ ಪೋಲಾಗುತ್ತಿದೆ ಎಂಬುದು ಇನ್ನೊಂದು ಕಟು ವಾಸ್ತವವಾಗಿದೆ.

2019ರಲ್ಲಿ ಜಗತ್ತಿನಾದ್ಯಂತ 93.1 ಕೋಟಿ ಟನ್‌ನಷ್ಟು ಆಹಾರ ಪೋಲಾಗಿದೆ ಎಂದು ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮದಡಿ ತಯಾರಿಸಲಾದ ‘ಆಹಾರ ಪೋಲು ಸೂಚ್ಯಂಕ– 2021’ ಹೇಳಿದೆ. ಇದರಲ್ಲಿ ಶೇ 61ರಷ್ಟು ಆಹಾರ ಪೋಲು ಮನೆಗಳಲ್ಲೇ ಆಗಿದೆ. ಶೇ 26ರಷ್ಟು ಆಹಾರ ತಯಾರಿಕಾ ಉದ್ದಿಮೆಗಳಿಂದ ಹಾಗೂ ಶೇ 13ರಷ್ಟು ಇತರ ಕಡೆಗಳಿಂದ ಪೋಲಾಗಿದೆ. ಜಾಗತಿಕ ಮಟ್ಟದಲ್ಲಿ ಉತ್ಪಾದಿಸಲಾಗುವ ಒಟ್ಟು ಆಹಾರ ಪದಾರ್ಥಗಳಲ್ಲಿ ಶೇ 17ರಷ್ಟು ಪೋಲಾಗಿದೆ ಎಂದು ವರದಿ ಹೇಳಿದೆ.

ಪೋಲಾಗಿರುವ ಆಹಾರವನ್ನು ತಲಾ 40 ಟನ್‌ಗಳಂತೆ ಲಾರಿಗಳಲ್ಲಿ ತುಂಬಿ, ಒಂದರ ಹಿಂದೊಂದು ನಿಲ್ಲಿಸುತ್ತಾ ಹೋದರೆ, ಅವುಗಳ ಸಾಲು ಭೂಮಿಯನ್ನು 7 ಬಾರಿ ಸುತ್ತುವರಿಯುವಷ್ಟು ಉದ್ದವಾಗುತ್ತದೆ ಎಂದು ವರದಿ ಅಂದಾಜಿಸಿದೆ. ಜಾಗತಿಕ ಮಟ್ಟದಲ್ಲಿ ಪೋಲಾಗುತ್ತಿರುವ ಆಹಾರದ ಅಗಾಧತೆಯನ್ನು ತಿಳಿಸಲು ಈ ಉದಾಹರಣೆ ಸಾಕು.

ಬಡವ– ಶ್ರೀಮಂತ ಭೇದವಿಲ್ಲ: ಶ್ರೀಮಂತ ರಾಷ್ಟ್ರಗಳಲ್ಲೇ ಆಹಾರ ಪದಾರ್ಥ ಹೆಚ್ಚಿನ ಪ್ರಮಾಣದಲ್ಲಿ ಪೋಲಾಗುತ್ತದೆ ಎಂಬ ನಂಬಿಕೆ ಇತ್ತೀಚಿನವರೆಗೂ ಇತ್ತು. ಆದರೆ, ಅದು ಸುಳ್ಳು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಇಲ್ಲಿ ಶ್ರೀಮಂತ– ಬಡ ರಾಷ್ಟ್ರವೆಂಬ ಭೇದಭಾವವಿಲ್ಲ. ತಲಾ ಆದಾಯದಲ್ಲಿ ಎಷ್ಟೇ ವ್ಯತ್ಯಾಸವಿರಲಿ ಆಹಾರ ಪೋಲಿನ ಪ್ರಮಾಣ ಎಲ್ಲಾ ರಾಷ್ಟ್ರಗಳಲ್ಲೂ ಬಹುತೇಕ ಒಂದೇ ಪ್ರಮಾಣದಲ್ಲಿದೆ.

ಜಾಗತಿಕ ಮಟ್ಟದಲ್ಲಿ ತಲಾವಾರು ಆಹಾರ ಪೋಲು ಪ್ರಮಾಣ ವಾರ್ಷಿಕ 121ಕೆ.ಜಿ.ಯಷ್ಟಿದೆ. ಇದರಲ್ಲಿ 74 ಕೆ.ಜಿ.ಯಷ್ಟು ಮನೆಗಳಲ್ಲೇ ಪೋಲಾಗುತ್ತದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ.

2019ರಲ್ಲಿ 69 ಕೋಟಿ ಜನರು ಆಹಾರದ ಕೊರತೆ ಎದುರಿಸಿದ್ದಾರೆ. ಕೋವಿಡ್‌–19 ಕಾರಣದಿಂದಾಗಿ ಮುಂದಿನ ವರ್ಷಗಳಲ್ಲಿ ಆ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಅಂದಾಜು ಇದೆ. 300 ಕೋಟಿ ಜನರಿಗೆ ಆರೋಗ್ಯಕರ ಆಹಾರ ಕೈಗೆಟುಕದಂತಾಗುವ ಸಾಧ್ಯತೆ ಇದೆ. ಆದ್ದರಿಂದ ಆಹಾರ ಪೋಲನ್ನು ನಿಯಂತ್ರಿಸುವ ಕಡೆಗೆ ಜಗತ್ತು ಗಮನ ಹರಿಸಬೇಕು ಎಂದು ವರದಿ ಉಲ್ಲೇಖಿಸಿದೆ.

2030ರ ವೇಳೆಗೆ ಜಾಗತಿಕ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ಕೆಲವು ಗುರಿಗಳನ್ನು ನಿರ್ಧರಿಸಲಾಗಿದೆ. ಆ ಗುರಿಯನ್ನು ಸಾಧಿಸಬೇಕಾದರೆ ಆಹಾರ ಪೋಲು ಪ್ರಮಾಣದ ಮೇಲೆ ನಿಯಂತ್ರಣ ಸಾಧಿಸುವುದು ಅಗತ್ಯ. ಸರ್ಕಾರಗಳು ಇತ್ತ ಗಮನ ಹರಿಸಲೇ ಬೇಕಾಗಿದೆ ಎಂದು ತಜ್ಞರು ಹೇಳಿದ್ದಾರೆ.

‘ಈ ಉದ್ದೇಶ ಸಾಧನೆಗೆ ಪ್ರತಿಯೊಬ್ಬರೂ ಕಾಣಿಕೆ ನೀಡಬಹುದು. ಖರೀದಿಯ ವೇಳೆ ಎಚ್ಚರಿಕೆಯಿಂದ ಇರಬೇಕು. ಅಡುಗೆಯನ್ನು ಇನ್ನಷ್ಟು ಸೃಜನಾತ್ಮಕಗೊಳಿಸಬೇಕು. ಎಲ್ಲೇ ಆಗಲಿ, ಆಹಾರ ಪೋಲು ಮಾಡುವುದು ಸ್ವೀಕಾರಾರ್ಹವಲ್ಲ ಎಂಬ ಎಚ್ಚರವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಹಾಗಾದರೆ ಮಾತ್ರ ಎಲ್ಲರಿಗೂ ಆಹಾರ ಲಭ್ಯವಾಗುವಂತೆ ಮಾಡುವ ಉದ್ದೇಶ ಈಡೇರಲು ಸಾಧ್ಯ’ ಎಂದು ಸಮೀಕ್ಷೆ ನಡೆಸಿದ ತಂಡದಲ್ಲಿದ್ದ ಆ್ಯಂಡರ್ಸನ್‌ ಹೇಳಿದ್ದಾರೆ.

ಪರಿಣಾಮಗಳು ಗಂಭೀರ
‘ಆಹಾರ ಪೋಲು’ ಎಂಬುದು ಹಸಿವಿಗಷ್ಟೇ ಸಂಬಂಧಿಸಿದ ವಿಚಾರವಲ್ಲ. ಪರಿಸರ, ಸಾಮಾಜಿಕ ಮತ್ತು ಆರ್ಥಿಕವಾಗಿಯೂ ಅದು ಬಹಳ ದೊಡ್ಡ ಪರಿಣಾಮ ಉಂಟುಮಾಡುತ್ತದೆ. ಹವಾಮಾನ ಬದಲಾವಣೆ, ಪ್ರಕೃತಿ ಮತ್ತು ಜೀವವೈವಿಧ್ಯ ನಷ್ಟ, ತ್ಯಾಜ್ಯ ನಿರ್ವಹಣೆಗೂ ಇದು ಸವಾಲೆಸೆಯುತ್ತದೆ.

ಹವಾಮಾನ ವೈಪರೀತ್ಯವು ಜಗತ್ತು ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಅದರ ವಿರುದ್ಧ ಕ್ರಮ ಜರುಗಿಸುವುದು ಇನ್ನೂ ಪೂರ್ಣಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಹವಾಮಾನ ವೈಪರೀತ್ಯಕ್ಕೆ ಆಹಾರ ತ್ಯಾಜ್ಯದ ಕೊಡುಗೆಯೂ ಇದೆ. ಶೇ 8ರಿಂದ ಶೇ 10ರಷ್ಟು ಹಸಿರುಮನೆ ಅನಿಲ ಹೊರಸೂಸುವಿಕೆಗೆ, ಬಳಕೆಯಾಗದ ಆಹಾರ ಪದಾರ್ಥಗಳು ಕಾರಣವಾಗಿವೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ದೇಶದ ಜನರು ಹಸಿವಿನಿಂದ ಬಳಲಬಾರದು ಎಂಬ ಕಾರಣಕ್ಕೆ ಆಹಾರ ಧಾನ್ಯ ನೀಡುವ, ಸಿದ್ಧ ಆಹಾರ ಪೂರೈಸುವ ಯೋಜನೆಗಳು ಹಲವು ದೇಶಗಳಲ್ಲಿವೆ. ಹಸಿವು ತಣಿಸಲು ಸರ್ಕಾರಗಳು ನೂರಾರು ಕೋಟಿ ಹಣ ವ್ಯಯಿಸುತ್ತಿವೆ. ಅಧಿಕ ಲಭ್ಯತೆ ಅಥವಾ ಉಚಿತ ಎಂಬ ಕಾರಣಕ್ಕೋ ಏನೋ, ನೂರಾರು ಟನ್‌ನಷ್ಟು ಆಹಾರ ಬಳಕೆಯಾಗದೇ ತಿಪ್ಪೆ ಸೇರುತ್ತಿದೆ. ಹೀಗೆ ಆಹಾರ ಪೂರೈಕೆಗೆ ಮಾಡುವ ಖರ್ಚಿನಿಂದ ಸರ್ಕಾರಗಳಿಗೆ ಆರ್ಥಿಕ ಹೊರೆ ಬೀಳುತ್ತದೆ.

ಆಹಾರ ಪೋಲು ಎಂಬುದು ಈಗ್ಗೆ ಎಂಟು ಹತ್ತು ವರ್ಷಗಳ ಹಿಂದೆ ಮುಂದುವರಿದ ದೇಶಗಳಲ್ಲಿ ಮಾತ್ರ ಕಾಣಸಿಗುತ್ತಿತ್ತು. ಇದೀಗ ಅದು ಜಾಗತಿಕ ಸಮಸ್ಯೆ ಎನಿಸಿಕೊಂಡಿದೆ. ಆಹಾರ ಪೋಲು ತಡೆಗಟ್ಟುವಿಕೆ ಕಾರ್ಯತಂತ್ರಗಳನ್ನು ರೂಪಿಸದಿದ್ದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ಸಾಧಿಸುವುದು ಕಷ್ಟ ಎಂಬುದು ವರದಿಯ ಅಭಿಪ್ರಾಯವಾಗಿದೆ. 

ಪೋಲು ತಡೆದರೆ...

* ಆಹಾರ ತ್ಯಾಜ್ಯದ ಪ್ರಮಾಣ ತಗ್ಗಿಸುವುದರಿಂದ ಹಸಿರುಮನೆ ಅನಿಲ ಬಿಡುಗಡೆ ಪ್ರಮಾಣ ತಗ್ಗಿಸಬಹುದು

* ಮಾಲಿನ್ಯದ ಮೂಲಕ ಆಗಬಹುದಾದ ಪರಿಸರ ಹಾನಿಯನ್ನು ನಿಧಾನಗೊಳಿಸಬಹುದು

* ಜಾಗತಿಕ ಮಟ್ಟದಲ್ಲಿ ಆಹಾರದ ಲಭ್ಯತೆ ಹೆಚ್ಚಿ, ಹಸಿವಿನ ಪ್ರಮಾಣ ಕಡಿಮೆಯಾಗುತ್ತದೆ

* ಜಾಗತಿಕ ಆರ್ಥಿಕ ಹಿಂಜರಿತದ ಸಮಯದಲ್ಲಿ ಈ ನಿರ್ಧಾರವು ಹಣವನ್ನು ಉಳಿಸುತ್ತದೆ

* ಆಹಾರ ಪೋಲು ತಡೆಯುವುದರಿಂದ ಕುಟುಂಬಗಳ ವೆಚ್ಚದಲ್ಲೂ ಇಳಿಕೆಯಾಗುತ್ತದೆ

ಏನು ಮಾಡಬೇಕು

* ಗ್ರಾಹಕರು/ಜನರ ನಡವಳಿಕೆಯನ್ನು ಬದಲಿಸಬೇಕು

* ಎಚ್ಚರಿಕೆಯಿಂದ ದಿನಸಿ ವಸ್ತುಗಳನ್ನು ಖರೀದಿಸಬೇಕು

* ಕೌಶಲದಿಂದ ಆಹಾರ ಬೇಯಿಸುವ ಪದ್ಧತಿ ರೂಢಿಯಾಗಬೇಕು

* ಆಹಾರವು ವ್ಯರ್ಥವಾಗದ ರೀತಿಯಲ್ಲಿ ಬಳಸುವ ಅರಿವು ಮೂಡಿಸಬೇಕು

* ಪರಿಸರಕ್ಕೆ ಹಾನಿಯಾಗದಂತೆ ತ್ಯಾಜ್ಯ ವಿಲೇವಾರಿ ಮಾಡಬೇಕು

ವರದಿ: ಉದಯ ಯು., ಜಯಸಿಂಹ ಆರ್., ಅಮೃತಕಿರಣ್ ಬಿ.ಎಂ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು