ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಕಾಂಗ್ರೆಸ್‌ನಲ್ಲಿ ತಲ್ಲಣ, ಪಕ್ಷ ತೊರೆಯಲು ಪೈಪೋಟಿ

Last Updated 30 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಇದೇ ಸೆಪ್ಟೆಂಬರ್ 7ರಂದು ಕಾಂಗ್ರೆಸ್‌ ತನ್ನ ‘ಭಾರತ ಜೋಡಿಸಿ ಯಾತ್ರೆ’ಗೆ ಚಾಲನೆ ನೀಡಲಿದೆ. ದೇಶದಾದ್ಯಂತ 125 ದಿನಗಳ ಯಾತ್ರೆ ನಡೆಸಿ, ಜನರನ್ನು ಒಗ್ಗೂಡಿಸುವುದು ಈ ಯಾತ್ರೆಯ ಮುಖ್ಯ ಉದ್ದೇಶ. ಆದರೆ ಕಾಂಗ್ರೆಸ್‌ ಗಮನ ನೀಡಬೇಕಾದ ಅಂಶ ಬೇರೆಯದ್ದು ಎಂದು ಪಕ್ಷದ ನಾಯಕರಾಗಿದ್ದವರೇ ಹೇಳಿದ್ದಾರೆ. ಈಚೆಗಷ್ಟೇ ಪಕ್ಷವನ್ನು ತೊರೆದ ಮುಖಂಡ ಗುಲಾಂ ನಬಿ ಆಜಾದ್ ಅವರು, ‘ಭಾರತ ಜೋಡಿಸಿ ಯಾತ್ರೆಗಿಂತ, ಭಾರತದಾದ್ಯಂತ ಕಾಂಗ್ರೆಸ್‌ ಜೋಡಿಸಿ ಯಾತ್ರೆ ನಡೆಸಬೇಕಾದ ಅನಿವಾರ್ಯ ಇದೆ’ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದರು. 2022ರಲ್ಲಿ ಈವರೆಗೆ ಹಲವು ಪ್ರಮುಖ ನಾಯಕರನ್ನು ಕಾಂಗ್ರೆಸ್‌ ಕಳೆದುಕೊಂಡಿದೆ. ಕಾಂಗ್ರೆಸ್‌ನಲ್ಲಿನ ಈ ರಾಜೀನಾಮೆ ಪರ್ವ ಮುಂದುವರಿದಿದೆ.

1970 ರ ದಶಕದ ಆರಂಭದಲ್ಲಿ ಕಾಂಗ್ರೆಸ್ ಯುವ ಮೋರ್ಚಾದಿಂದ ರಾಜಕಾರಣ ಆರಂಭಿಸಿದ್ದ ಗುಲಾಂ ನಬಿ ಆಜಾದ್‌ ಅವರು, ಸುಮಾರು ಐವತ್ತು ವರ್ಷ ಪಕ್ಷದೊಟ್ಟಿಗೆ ಇದ್ದವರು. ಇಂದಿರಾ ಗಾಂಧಿ ಅವರ ಅಧಿಕಾರದ ಅವಧಿಯಿಂದ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯವರೆಗೂ ಕಾಂಗ್ರೆಸ್‌ನ ಹಲವು ಏಳುಬೀಳುಗಳಿಗೆ ಅವರು ಸಾಕ್ಷಿಯಾಗಿದ್ದರು. ‘ಪಕ್ಷವು ಅವರಿಗೆ ಎಲ್ಲವನ್ನೂ ನೀಡಿದೆ. ಅಧಿಕಾರದ ವಿಚಾರದಲ್ಲಿ ಅವರು ಒಮ್ಮೆಯೂ ಕೆಳಗಿಳಿದಿದ್ದೇ ಇಲ್ಲ’ ಎಂದು ಅವರ ಓರಗೆಯ ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ.

ಸೋನಿಯಾ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇದೇ ಆಜಾದ್ ಅವರು, ಈಗ ಸೋನಿಯಾ ಅವರನ್ನು ‘ನಾಮಕಾವಸ್ಥೆ ಅಧ್ಯಕ್ಷೆ’ ಎಂದು ಕರೆದಿದ್ದಾರೆ.ಹಿರಿಯರನ್ನು ಕಡೆಗಣಿಸಲಾಗಿದೆ, ಪಕ್ಷದ ಸುಧಾರಣೆಗೆ ಸಲಹೆ ನೀಡಿದವರನ್ನು ತುಚ್ಛವಾಗಿ ನಡೆಸಿಕೊಳ್ಳಲಾಗಿದೆ. ಕಾಂಗ್ರೆಸ್‌ನಲ್ಲಿನ ಮನೋರೋಗಿಗಳ ಕೂಟವು ಪಕ್ಷಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ತನ್ನ ಸ್ಥಾನವನ್ನು ಬಿಜೆಪಿಗೂ, ರಾಜ್ಯಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳಿಗೂ ಬಿಟ್ಟುಕೊಟ್ಟಿದೆ ಎಂದು ಅವರು ಆರೋಪಿಸಿದ್ದಾರೆ. ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಬೇಕಿದೆ. ಆದರೆ, ‘ಪಕ್ಷದಲ್ಲಿನ ಆಂತರಿಕ ಚುನಾವಣೆ ಎಂಬುದು ಒಂದು ವಂಚನೆ’ ಎಂದು ಆಜಾದ್ ಹೇಳಿದ್ದರು.

ಕಾಂಗ್ರೆಸ್‌ ತೊರೆದ ಕೆಲವೇ ದಿನಗಳಲ್ಲಿ ಆರ್‌ಪಿಎನ್‌ ಸಿಂಗ್ ಅವರು ಬಿಜೆಪಿ ಸೇರಿದರು
ಕಾಂಗ್ರೆಸ್‌ ತೊರೆದ ಕೆಲವೇ ದಿನಗಳಲ್ಲಿ ಆರ್‌ಪಿಎನ್‌ ಸಿಂಗ್ ಅವರು ಬಿಜೆಪಿ ಸೇರಿದರು

ಆಜಾದ್ ಅವರ ರಾಜೀನಾಮೆ ಪತ್ರದ ಬಹುಪಾಲು ವೈಯಕ್ತಿಕ ಟೀಕೆಯೇ ತುಂಬಿತ್ತು. ಆದರೆ, ಆಜಾದ್‌ ಅವರು ಎತ್ತಿದ್ದ ಪ್ರಶ್ನೆಗಳು ಮತ್ತು ಮಾಡಿದ ಟೀಕೆಗಳು ಈಚೆಗೆ ಕಾಂಗ್ರೆಸ್‌ ತೊರೆದ ಬಹುತೇಕ ಮಂದಿಯದ್ದೂ ಆಗಿದ್ದವು ಎಂಬುದು ಗಮನಾರ್ಹ.

ಯುಪಿಎ ಅವಧಿಯಲ್ಲಿ ಸಚಿವರಾಗಿದ್ದು, ಈ ವರ್ಷ ಕಾಂಗ್ರೆಸ್‌ ತೊರೆದವರಲ್ಲಿ ಆರ್‌ಪಿಎನ್‌ ಸಿಂಗ್, ಅಶ್ವಿನಿ ಕುಮಾರ್ ಮೊದಲಿಗರು. 1976ರಿಂದಲೂ ಕಾಂಗ್ರೆಸ್‌ನಲ್ಲೇ ಇದ್ದ ಅಶ್ವಿನಿ ಇದೇ ಫೆಬ್ರುವರಿಯಲ್ಲಿ ರಾಜೀನಾಮೆ ನೀಡಿದಾಗ, ‘ನನ್ನ ಘನತೆಯನ್ನು ಉಳಿಸಿಕೊಳ್ಳುವುದೂ ಈ ರಾಜೀನಾಮೆಗೆ ಒಂದು ಪ್ರಮುಖ ಕಾರಣ’ ಎಂದು ಹೇಳಿದ್ದರು. ನಾಲ್ಕು ದಶಕಗಳಲ್ಲಿ ಕಾಂಗ್ರೆಸ್‌ನ ಪ್ರಮುಖ ಏಳು ಬೀಳುಗಳಲ್ಲಿ ಜತೆಯಾಗಿದ್ದವರು ಈಗ ಪಕ್ಷವು ತೀರಾ ಕುಸಿದಿರುವಾಗ ಪಕ್ಷವನ್ನು ತೊರೆದಿದ್ದಾರೆ. ‘ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಸ್ಥಾನವೂ ಕುಸಿಯುತ್ತಿದೆ ಮತ್ತು ಮತ ಪ್ರಮಾಣವೂ ಕುಸಿಯುತ್ತಿದೆ. ದೇಶದ ವಾಸ್ತವ ಸ್ಥಿತಿಯೊಂದಿಗೆ ಕಾಂಗ್ರೆಸ್‌ ಇಲ್ಲ ಮತ್ತು ಕಾಂಗ್ರೆಸ್‌ ಅಪ್ರಸ್ತುತವಾಗುತ್ತಿದೆ. ದೇಶದ ಇಂದಿನ ಎಲ್ಲಾ ಸಮಸ್ಯೆಗಳಿಗೆ ಒಬ್ಬನೇ ವ್ಯಕ್ತಿ ಕಾರಣ ಎಂದು ಹೇಳುವುದರಲ್ಲಿ ಅರ್ಥವಿಲ್ಲ’ ಎಂದೂ ಅಶ್ವಿನಿ ಹೇಳಿದ್ದರು.

ಅಶ್ವಿನಿ ಹಾದಿ ಹಿಡಿದ ಸಿಬಲ್
ಅಶ್ವಿನಿ ಕಾಂಗ್ರೆಸ್‌ ತೊರೆದ ಕೆಲವೇ ದಿನಗಳಲ್ಲಿ ಮುಖಂಡ ಕಪಿಲ್ ಸಿಬಲ್ ಸಹ ಅದೇ ಮಾರ್ಗವನ್ನು ಅನುಸರಿಸಿದರು. ಹಲವು ದಶಕಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದ ಮತ್ತು ಯುಪಿಎ ಅವಧಿಯಲ್ಲಿ ಸಚಿವರಾಗಿದ್ದ ಕಪಿಲ್ ಸಿಬಲ್ ಅವರು, ರಾಜೀನಾಮೆ ಸಂದರ್ಭದಲ್ಲಿ ವೈಯಕ್ತಿಕ ಟೀಕೆಗಳನ್ನು ಮಾಡಿರಲಿಲ್ಲ. ‘ದೇಶದ ಪ್ರಮುಖ ಸಮಸ್ಯೆಗಳ ವಿರುದ್ಧ ಹೋರಾಡಬೇಕಿದೆ. ಈ ಹೋರಾಟದಲ್ಲಿ ನಾನು ಒಂದು ಸ್ವತಂತ್ರ ದನಿಯಾಗಬೇಕಿದೆ. ಹೀಗಾಗಿಯೇ ಪಕ್ಷ ರಾಜಕಾರಣವನ್ನು ತೊರೆಯುತ್ತಿದ್ದೇನೆ’ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಅವರು ಬರೆದಿದ್ದರು. ಆದರೆ ಕಪಿಲ್‌ ಸಿಬಲ್ ಅವರ ದೆಹಲಿ ನಿವಾಸದ ಮೇಲೆ ವರ್ಷಗಳ ಹಿಂದೆ ಕಾಂಗ್ರೆಸ್‌ ಕಾರ್ಯಕರ್ತರೇ ದಾಳಿ ಮಾಡಿ, ದಾಂದಲೆ ನಡೆಸಿದ್ದರು. ಕಾಂಗ್ರೆಸ್‌ನಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ನಾಯಕರಲ್ಲಿ ಸಿಬಲ್‌ ಸಹ ಒಬ್ಬರು. ಆ ಪತ್ರಕ್ಕೆ ಸಹಿ ಮಾಡಿದ ಕಾರಣಕ್ಕೇ ಸಿಬಲ್‌ ಅವರ ಮನೆಯ ಮೇಲೆ ದಾಳಿ ನಡೆದಿತ್ತು.

ಕಾಂಗ್ರೆಸ್‌ ತೊರೆದ ಹಿರಿಯ ನಾಯಕರಲ್ಲಿ ಕಪಿಲ್‌ ಸಿಬಲ್‌ ಈಗ ಯಾವುದೇ ಪಕ್ಷವನ್ನು ಸೇರದೆ, ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಆಜಾದ್‌ ಹೊಸ ಪಕ್ಷವನ್ನು ಆರಂಭಿಸುವ ಸಾಧ್ಯತೆ ದಟ್ಟವಾಗಿದೆ. ಆದರೆ ಪಕ್ಷವನ್ನು ತೊರೆದವರು ಬಿಜೆಪಿ ಸೇರಿದ್ದೂ ಇದೆ. ಪಕ್ಷದ ಮುಖಂಡ ಮತ್ತು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ತಾರಾ ಪ್ರಚಾರಕರಾಗಿದ್ದ ಆರ್‌ಪಿಎನ್‌ ಸಿಂಗ್ ಅವರು, ಈ ವರ್ಷದ ಆರಂಭದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಚುನಾವಣೆಯ ಹೊಸ್ತಿಲಲ್ಲೇ ಅವರು ಪಕ್ಷವನ್ನು ತೊರೆದದ್ದು ಪಕ್ಷಕ್ಕೆ ಭಾರಿ ಹೊಡೆತ ನೀಡಿತ್ತು. ತಮ್ಮನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್‌ ತೊರೆದಿದ್ದ ಅವರು, ಅದೇ ಕಾಂಗ್ರೆಸ್‌ ಮುಂದಾಳತ್ವದ ಯುಪಿಎ ಅವಧಿಯಲ್ಲಿ ಸಚಿವರೂ ಆಗಿದ್ದರು.

ಪಕ್ಷ ತೊರೆದ ಜಾಖಡ್‌
ಪಂಜಾಬ್‌ ಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರೂ ಆಗಿದ್ದ ಸುನಿಲ್ ಜಾಖಡ್‌ ಅವರು, ‘ನನ್ನನ್ನು ಕಡೆಗಣಿಸಲಾಗುತ್ತಿದೆ’ ಎಂದು ಹೇಳಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಪಂಜಾಬ್‌ ಮುಖ್ಯಮಂತ್ರಿಯಾಗಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಆ ಹುದ್ದೆಯಿಂದ ಕೆಳಗೆ ಇಳಿಸಿದಾಗ, ಸುನಿಲ್ ಜಾಖಡ್ ಅವರು ಆ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಕಾಂಗ್ರೆಸ್‌ ಆ ಹುದ್ದೆಗೆ ಆಯ್ಕೆ ಮಾಡಿತು. ಅಲ್ಲಿಂದಲೇ ಜಾಖಡ್‌ ಅವರು ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಲಾರಂಭಿಸಿದ್ದರು. ಪಕ್ಷವನ್ನು ತೊರೆದ ನಂತರ, ಬಿಜೆಪಿ ಸೇರಿದರು. ಈಗ ಅವರಿಗೆ ಪಂಜಾಬ್‌ ಬಿಜೆಪಿಯಲ್ಲಿ ಪ್ರಮುಖ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಯುವನಾಯಕರ ವಿದಾಯ
ಆಜಾದ್, ಸಿಬಲ್ ಅವರಂತಹ ಮುಖಂಡರು ಮಾತ್ರವೇ ಪಕ್ಷದ ವಿರುದ್ಧ ಮುನಿಸಿಕೊಂಡಿಲ್ಲ. ಪಕ್ಷಕ್ಕೆ ಬಂದ ಒಂದೆರಡು ವರ್ಷಗಳಲ್ಲೇ ಯುವನಾಯಕರೂ ವಿದಾಯದ ಹಾದಿ ಹಿಡಿದಿದ್ದಾರೆ. ಹಾರ್ದಿಕ್ ಪಟೇಲ್, ಜೈವೀರ್ ಶೇರ್ಗಿಲ್ ಈ ಸಾಲಿನಲ್ಲಿರುವ ಪ್ರಮುಖರು.ಯುವನಾಯಕರ ಮಾತು ಕೇಳಿಸಿಕೊಳ್ಳಲು ಅಥವಾ ಭೇಟಿಗೆ ಅವಕಾಶ ನೀಡಲೂ ಪಕ್ಷದ ನಾಯಕರ ಬಳಿ ಸಮಯ ಹಾಗೂ ಮನಸ್ಸಿಲ್ಲ ಎಂಬುದು ಇವರ ವಾದ.

-ಹಾರ್ದಿಕ್ ಪಟೇಲ್
-ಹಾರ್ದಿಕ್ ಪಟೇಲ್

ಗುಜರಾತ್‌ನಲ್ಲಿ ಪಾಟೀದಾರ್ ಸಮುದಾಯದ ಹೋರಾಟದ ನೇತೃತ್ವ ವಹಿಸಿ ಹಾರ್ದಿಕ್‌ ಪ್ರವರ್ಧಮಾನಕ್ಕೆ ಬಂದರು. ಆದರೆ, ಅದಾದ ಬಳಿಕ ಸರಿಯಾದ ರಾಜಕೀಯ ನೆಲೆಯನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ನಾಯಕತ್ವ ಗುಣ ಹಾಗೂ ಸಮುದಾಯದ ಬಲವನ್ನು ಪರಿಗಣಿಸಿದ ಕಾಂಗ್ರೆಸ್, 2019ರಲ್ಲಿ ಇವರನ್ನು ಪಕ್ಷಕ್ಕೆ ಆಹ್ವಾನಿಸಿತು. ಒಂದೇ ವರ್ಷದಲ್ಲಿ ಪಕ್ಷದ ಕಾರ್ಯಾಧ್ಯಕ್ಷರೂ ಆದರು. ಆದರೆ, ಪಕ್ಷ ತಮ್ಮನ್ನು ನಿರ್ಲಕ್ಷಿಸುತ್ತಿದೆ ಎಂದು ಹಾರ್ದಿಕ್ ಪಟೇಲ್‌ಗೆ ಕೆಲವೇ ವರ್ಷಗಳಲ್ಲಿ ಭಾಸವಾಗಲು ಶುರುವಾಯಿತು. ‘ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ಗುಜರಾತ್‌ನ ಸಮಸ್ಯೆಗಳನ್ನು ವಿವರಿಸಿದೆ. ಆದರೆ ನನ್ನ ಮಾತುಗಳನ್ನು ಅವರು ಕಡೆಗಣಿಸಿದರು. ರಾಹುಲ್ ಗುಜರಾತ್‌ಗೆ ಭೇಟಿ ನೀಡಿದಾಗ, ರಾಜ್ಯದ ಮುಖಂಡರು ಅವರಿಗೆ ಚಿಕನ್ ಹಾಗೂ ಕೋಕ್ ಸರಬರಾಜು ಮಾಡುವ ಸಂಭ್ರಮದಲ್ಲಿದ್ದರೇ ವಿನಾ, ಸಮಸ್ಯೆಗಳನ್ನು ಹೇಳಿಕೊಳ್ಳಲು ತಯಾರಿರಲಿಲ್ಲ’ ಎಂದು ಪಕ್ಷ ತೊರೆಯುವಾಗಹಾರ್ದಿಕ್ ಹೇಳಿದ್ದರು. ಬೇಸರದ ಬದಲಾಗಿ, ಧೈರ್ಯವಾಗಿ ಪಕ್ಷದಿಂದ ಹೊರನಡೆಯುತ್ತೇನೆ ಎಂದ ಅವರು ಕೆಲವು ವಾರಗಳಲ್ಲಿ ಬಿಜೆಪಿ ಸೇರ್ಪಡೆಯಾದರು.

ವೃತ್ತಿಯಿಂದ ಸುಪ್ರೀಂ ಕೋರ್ಟ್ ವಕೀಲರಾಗಿ ಹಾಗೂ ಪ್ರಮುಖ ಯುವ ಕಾಂಗ್ರೆಸ್ ನಾಯಕರಾಗಿ ಗುರುತಿಸಿಕೊಂಡಿದ್ದ ಜೈವೀರ್ ಶೇರ್ಗಿಲ್ಅವರು ಆಗಸ್ಟ್ 24ರಂದು ಪಕ್ಷಕ್ಕೆ ರಾಜೀನಾಮೆ ನೀಡಿದರು. ‘ಪಕ್ಷದ ಕೇಂದ್ರೀಯ ನಾಯಕತ್ವ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಯುವಜನರ ಆಶೋತ್ತರಗಳಿಗೆ ಸ್ಪಂದಿಸುವ ರೀತಿಯಲ್ಲಿ ಇಲ್ಲ. ಬಹುತೇಕ ನಿರ್ಧಾರಗಳ ಹಿಂದೆ ಹೊಗಳುಭಟರ ಗುಂಪಿನ ಪ್ರಭಾವ ಇರುತ್ತದೆ’ ಎಂದು ಅವರು ತಮ್ಮ ನಿರ್ಧಾರಕ್ಕೆ ಕಾರಣ ನೀಡಿದ್ದರು. ರಾಷ್ಟ್ರೀಯ ಹಾಗೂ ಸಾರ್ವಜನಿಕ ಹಿತಾಸಕ್ತಿಗಳ ಮೇಲೆ ಸ್ವಹಿತಾಸಕ್ತಿಗಳು ಸವಾರಿ ಮಾಡುತ್ತಿವೆ ಎಂದೂ ಅವರು ದೂರಿದ್ದರು.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಲು ಒಂದು ವರ್ಷದಿಂದ ಕಾದಿದ್ದರೂ, ಅವಕಾಶ ಸಿಗಲಿಲ್ಲ ಎಂದು ಅವರು ದೂರಿದ್ದಾರೆ. ‘ಭಟ್ಟಂಗಿತನವು ಕಾಂಗ್ರೆಸ್ ಅನ್ನು ಗೆದ್ದಲಿನ ರೀತಿ ತಿಂದುಹಾಕಲಿದೆ’ ಎಂದು ಅವರು ಕಾಂಗ್ರೆಸ್‌ನ ವಾಸ್ತವವನ್ನು ವಿಶ್ಲೇಷಿಸಿದ್ದಾರೆ. ಪಂಜಾಬ್‌ನ ಜಲಂಧರ್‌ನವರಾದ ಶೇರ್ಗಿಲ್, ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸುವ ಪಕ್ಷದ ಮುಖಂಡರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಪಂಜಾಬ್ ಕಾಂಗ್ರೆಸ್ ಘಟಕದ ವಕ್ತಾರ ಹಾಗೂ ಕಾನೂನು ಘಟಕದ ಸಹ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ಆಧಾರ: ಪಿಟಿಐ, ವಿವಿಧ ಮೂಲಗಳಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT