ಗುರುವಾರ , ಏಪ್ರಿಲ್ 2, 2020
19 °C

Explainer | ಮೇಲ್ಮನೆ ಸುಮ್ಮನೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾರತದ ಸಂಸತ್ತು ದ್ವಿ–ಸದನ ಪದ್ಧತಿಯನ್ನು ಹೊಂದಿದೆ. ಅಂದರೆ, ನೇರ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರನ್ನು ಹೊಂದಿರುವ ಕೆಳಮನೆ ಅಥವಾ ಲೋಕಸಭೆ ಮತ್ತು ಪರೋಕ್ಷ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರನ್ನು ಹೊಂದಿರುವ ಮೇಲ್ಮನೆ ಅಥವಾ ರಾಜ್ಯಸಭೆ. ಅಮೆರಿಕ, ಬ್ರಿಟನ್‌ ಸೇರಿ ಜಗತ್ತಿನ ಹಲವು ದೇಶಗಳು ಇಂತಹ ವ್ಯವಸ್ಥೆಯನ್ನು ಹೊಂದಿವೆ. ಭಾರತದ ಕೆಲವು ರಾಜ್ಯಗಳು ಎರಡು ಸದನಗಳ (ವಿಧಾನಸಭೆ ಮತ್ತು ವಿಧಾನಪರಿಷತ್‌) ವ್ಯವಸ್ಥೆಯನ್ನು ಅನುಸರಿಸುತ್ತಿವೆ. ಸದ್ಯಕ್ಕೆ ಆರು ರಾಜ್ಯಗಳಲ್ಲಿ ಮಾತ್ರ ಈ ವ್ಯವಸ್ಥೆ ಇದೆ. ರಾಜಸ್ಥಾನ, ಅಸ್ಸಾಂ ಮುಂತಾದ ರಾಜ್ಯಗಳು ದ್ವಿ–ಸದನ ವ್ಯವಸ್ಥೆ ಅಳವಡಿಸಿಕೊಳ್ಳುವ ಉತ್ಸಾಹವನ್ನು ಇತ್ತೀಚೆಗೆ ತೋರಿವೆ. ಆದರೆ, ವಿಧಾನಪರಿಷತ್‌ ಅನ್ನು ರದ್ದು ಮಾಡುವ ನಿರ್ಣಯವನ್ನು ಆಂಧ್ರ ಪ್ರದೇಶ ಸಚಿವ ಸಂಪುಟವು ಸೋಮವಾರ ಅಂಗೀಕರಿಸಿದೆ. ರಾಜ್ಯಗಳ ಮೇಲ್ಮನೆ ವ್ಯವಸ್ಥೆಯತ್ತ ಒಂದು ನೋಟ ಇಲ್ಲಿದೆ

ಮೇಲ್ಮನೆಯು ಕಾಯಂ ಸದನ. ಹಾಗಾಗಿಯೇ, ಸಂಸದೀಯ ವ್ಯವಸ್ಥೆಯಲ್ಲಿ ಈ ಸದನಕ್ಕೆ ಮಹತ್ವ ಇದೆ. ವಿಧಾನಸಭೆಯು ಐದು ವರ್ಷದ ಅವಧಿಗೆ ಆಯ್ಕೆಯಾಗುತ್ತದೆ. ಆದರೆ, ಪರಿಷತ್‌ನ ಮೂರನೇ ಒಂದರಷ್ಟು ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ ಆಯ್ಕೆಯಾಗುತ್ತಾರೆ. ವಿಧಾನಸಭೆಯು ಬದಲಾದ ರೀತಿಯಲ್ಲಿ ಪರಿಷತ್‌ನ ಚಿತ್ರಣ ಬದಲಾಗುವುದಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಯಾವುದಾದರೂ ಒಂದು ಪಕ್ಷವು ಭಾರಿ ಬಹುಮತ ಪಡೆಯಬಹುದು. ದೆಹಲಿ, ಉತ್ತರ ಪ್ರದೇಶ, ತೆಲಂಗಾಣ, ಆಂಧ್ರ ಪ್ರದೇಶ ವಿಧಾನಸಭೆಗಳ ಇತ್ತೀಚಿನ ಚುನಾವಣೆಯು ಇಂತಹ ನಿದರ್ಶನವನ್ನು ನಮ್ಮ ಮುಂದೆ ಇರಿಸಿದೆ. ಆದರೆ, ವಿಧಾನಪರಿಷತ್‌ನ ಸದಸ್ಯರು ಎರಡು ವರ್ಷಕ್ಕೊಮ್ಮೆ ಆಯ್ಕೆಯಾಗುತ್ತಾರೆ. ಆಡಳಿತ ಪಕ್ಷಕ್ಕೆ ಅಲ್ಲಿ ಬಹುಮತ ಇಲ್ಲದಿರುವ ಸಾಧ್ಯತೆಯೂ ಇದೆ. ಹಾಗಾಗಿ, ವಿಧಾನಸಭೆಯು ಅಂಗೀಕರಿಸುವ ಮಸೂದೆಯನ್ನು ವಿಶ್ಲೇಷಣೆಗೆ ಒಳಪಡಿಸುವ ಅವಕಾಶ ಪರಿಷತ್‌ಗೆ ಇದೆ. 

ವಿಧಾನಸಭೆಗೆ ಹೋಲಿಸಿದರೆ ವಿಧಾನಪರಿಷತ್‌ನ ಅಧಿಕಾರ ಸೀಮಿತ. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಪರಿಷತ್‌ನಲ್ಲಿ ಮಂಡಿಸಲು ಅವಕಾಶ ಇಲ್ಲ. ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಗೆಲುವಾದರೆ ಸರ್ಕಾರ ರಾಜೀನಾಮೆ ನೀಡಬೇಕಾಗುತ್ತದೆ. ಹಣಕಾಸು ಮಸೂದೆಯನ್ನು ವಿಧಾನಪರಿಷತ್‌ನಲ್ಲಿ ಮಂಡಿಸಲಾಗುವುದಿಲ್ಲ. ಇದು ವಿಧಾನಸಭೆಯಲ್ಲಿ ಅಂಗೀಕಾರವಾದರೆ ಸಾಕು. ಯಾವುದೇ ಮಸೂದೆಯನ್ನು ಅಂಗೀಕರಿಸದೆ ಇರುವ ಅಧಿಕಾರವೂ ವಿಧಾನಪರಿಷತ್‌ಗೆ ಇಲ್ಲ. 14 ದಿನಗಳಲ್ಲಿ ಮೇಲ್ಮನೆಯು ಒಪ್ಪಿಗೆ ನೀಡಲೇಬೇಕು.

ರಾಜ್ಯಸಭೆ ಮತ್ತು ಪರಿಷತ್‌ನ ಅಧಿಕಾರಗಳಲ್ಲಿ ಹಲವು ವ್ಯತ್ಯಾಸಗಳಿವೆ. ಹಣಕಾಸೇತರ ಮಸೂದೆಗಳಿಗೆ ತಿದ್ದುಪಡಿ ಮಾಡುವ, ಪರಿಶೀಲನೆಗೆ ಒಳಪಡಿಸುವ ಅಧಿಕಾರವನ್ನು ರಾಜ್ಯಸಭೆಯು ಹೊಂದಿದೆ. ಪರಿಷತ್‌ಗೆ ಇಂತಹ ಸಾಂವಿಧಾನಿಕ ಅಧಿಕಾರ ಇಲ್ಲ. ಪರಿಷತ್‌ ಸೂಚಿಸಿದ ಬದಲಾವಣೆಗಳನ್ನು ವಿಧಾನಸಭೆಯು ತಳ್ಳಿ ಹಾಕಬಹುದು. 

ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಹಾಕುವ ಹಕ್ಕು ರಾಜ್ಯಸಭೆಯ ಸದಸ್ಯರಿಗೆ ಇದೆ. ಆದರೆ, ಪರಿಷತ್‌ ಸದಸ್ಯರಿಗೆ ಈ ಹಕ್ಕು ಇಲ್ಲ. 

ವಿರೋಧಕ್ಕೆ ಕಾರಣಗಳೇನು?

1. ಚುನಾವಣೆ ಗೆಲ್ಲುವ ಸಾಮರ್ಥ್ಯವಿಲ್ಲದ ಮುಖಂಡರಿಗೆ ನೆಲೆ ಒದಗಿಸುವುದೇ ವಿಧಾನ ಪರಿಷತ್‌ನ ಉದ್ದೇಶ

2. ವಿಧಾನ ಸಭೆಯು ಅಂಗೀಕರಿಸಿದ ಮಸೂದೆಗಳನ್ನು ಅನಗತ್ಯವಾಗಿ ವಿಳಂಬ ಮಾಡಬಹುದು

3. ರಾಜ್ಯದ ಬೊಕ್ಕಸಕ್ಕೆ ಅನಗತ್ಯ ಹೊರೆ

 ಪರವಾದ ವಾದ

1. ಕೆಳಮನೆಯು ಕೈಗೊಳ್ಳಬಹುದಾದ ಆತುರದ ನಿರ್ಧಾರಗಳನ್ನು ತಡೆಯುತ್ತದೆ

2. ನೇರ ಚುನಾವಣೆಯ ಹಣಾಹಣಿಯಲ್ಲಿ ಗೆಲ್ಲಲು ಸಾಧ್ಯವಾಗದ, ಶಾಸನ ರಚನೆಯಲ್ಲಿ ದೊಡ್ಡ ಕೊಡುಗೆ ನೀಡಬಲ್ಲವರಿಗೆ ಅವಕಾಶ ಒದಗಿಸಬಹುದು

ಸ್ಥಾಪನೆ ಅಥವಾ ರದ್ದು ಪ್ರಕ್ರಿಯೆ

-ಏಕ ಸದನ ಅಥವಾ ದ್ವಿಸದನ ವ್ಯವಸ್ಥೆಯಲ್ಲಿ ಯಾವುದನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಹಕ್ಕನ್ನು ಸಂವಿಧಾನವು ರಾಜ್ಯಗಳಿಗೆ ನೀಡಿದೆ

-ವಿಧಾನಪರಿಷತ್‌ ಸ್ಥಾಪನೆ ಮಾಡಬೇಕೇ ಅಥವಾ ಇರುವುದನ್ನು ರದ್ದು ಮಾಡಬೇಕೇ ಎಂಬ ನಿರ್ಣಯವನ್ನು ವಿಧಾನಸಭೆಯು ಅಂಗೀಕರಿಸಬೇಕು

-ಈ ನಿರ್ಣಯವು ವಿಧಾನಸಭೆಯಲ್ಲಿ ಬಹುಮತದಿಂದ ಅಂಗೀಕಾರವಾಗಬೇಕು, ನಿರ್ಣಯವನ್ನು ಮತಕ್ಕೆ ಹಾಕುವ ಸಂದರ್ಭದಲ್ಲಿ ಒಟ್ಟು ಸದಸ್ಯ ಬಲದ ಮೂರನೇ ಎರಡಷ್ಟು ಸದಸ್ಯರು ಹಾಜರಿದ್ದು, ಮತ ಹಾಕಬೇಕು

-ಹೀಗೆ ಅಂಗೀಕಾರವಾದ ನಿರ್ಣಯವನ್ನು ಸಂಸತ್ತು ಕಾಯ್ದೆಯಾಗಿ ಅಂಗೀಕರಿಸಬೇಕು

-ಯಾವುದೇ ರಾಜ್ಯದ ವಿಧಾನಪರಿಷತ್‌ ರದ್ದು ಮಾಡಲು ಸಂವಿಧಾನ ತಿದ್ದುಪಡಿಯ ಅಗತ್ಯ ಇಲ್ಲ

ಎನ್‌ಟಿಆರ್‌ ಹಾದಿಯಲ್ಲಿ ಜಗನ್‌

ತೆಲುಗುದೇಶಂ ಪಕ್ಷವನ್ನು (ಟಿಡಿಪಿ) ಕಟುವಾಗಿ ವಿರೋಧಿಸುವ ವೈಎಸ್‌ಆರ್‌ ಕಾಂಗ್ರೆಸ್‌ನ ಮುಖ್ಯಸ್ಥ ಜಗನ್‌ ಮೋಹನ್‌ ರೆಡ್ಡಿ ಅವರು ಈಗ ಟಿಡಿಪಿಯ ಸಂಸ್ಥಾಪಕ ಎನ್‌.ಟಿ. ರಾಮರಾವ್‌ ಅವರ ಹಾದಿಯನ್ನೇ ಹಿಡಿದಿದ್ದಾರೆ. ಎನ್‌ಟಿಆರ್‌ ಮಾಡಿರುವಂತೆಯೇ ಜಗನ್‌ ಮೋಹನ್‌ ಸಹ ಆಂಧ್ರದ ವಿಧಾನಪರಿಷತ್ತನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡಿದ್ದಾರೆ.

1985ರಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಿ ಅಧಿಕಾರ ಹಿಡಿದಿದ್ದ ಎನ್‌ಟಿಆರ್‌, ‘ವಿಧಾನಪರಿಷತ್ತು ಎಂಬುದು ಅನುತ್ಪಾದಕ ವೆಚ್ಚದ ಬಾಬತ್ತು. ನಿರುದ್ಯೋಗಿ ರಾಜಕಾರಣಿಗಳಿಗೆ ನೆಲೆ ಕಲ್ಪಿಸುವ ತಾಣವಾಗಿ ಮಾತ್ರ ಇದು ಕೆಲಸ ಮಾಡುತ್ತಿದೆ. ಕೆಲವು ಪ್ರಮುಖ ಕಾನೂನುಗಳ ಅಂಗೀಕಾರಕ್ಕೆ ಪರಿಷತ್ತು ತೊಡಕಾಗಿ ಪರಿಣಮಿಸುತ್ತಿದೆ’ ಎಂದು ಆರೋಪಿಸಿ, ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುವ ಮೂಲಕ ವಿಧಾನಪರಿಷತ್ತನ್ನು ರದ್ದು ಮಾಡಿದ್ದರು.

ವಿಶೇಷವೆಂದರೆ ಇದಾಗಿ ಎರಡು ದಶಕಗಳ ಬಳಿಕ, 2007ರಲ್ಲಿ ಜಗನ್‌ಮೋಹನ್‌ ರೆಡ್ಡಿ ಅವರ ಅಪ್ಪ ವೈ. ಎಸ್‌. ರಾಜಶೇಖರ ರೆಡ್ಡಿ ಅವರು ಆಂಧ್ರದಲ್ಲಿ ವಿಧಾನಪರಿಷತ್ತಿಗೆ ಮರುಜೀವ ತುಂಬಿದ್ದರು. ಅಪ್ಪ ಆರಂಭಿಸಿದ್ದ ಪರಿಷತ್ತನ್ನು ಮುಚ್ಚಲು ಈಗ ಪುತ್ರ ಮುಂದಾಗಿದ್ದಾರೆ.

ವಾಸ್ತವದಲ್ಲಿ ಎನ್‌ಟಿಆರ್‌ಗೆ ಇದ್ದ ಮತ್ತು ಈಗ ಜಗನ್‌ ಮೋಹನ್‌ ಮುಂದೆ ಇರುವ ಸಮಸ್ಯೆ ಒಂದೇ ಆಗಿದೆ. ವಿಧಾನಸಭೆಯಲ್ಲಿ ಪಕ್ಷಕ್ಕೆ ಬಹುಮತ ಇದ್ದರೂ ಪರಿಷತ್ತಿನಲ್ಲಿ ಸಂಖ್ಯಾಬಲದ ಕೊರತೆಯು ಇವರಿಗೆ ದೊಡ್ಡ ತೊಡಕಾಗಿದೆ. ಅಧಿಕಾರದಲ್ಲಿರುವವರ ವಿಪರೀತ ವೇಗದ ಓಟಕ್ಕೆ ಪರಿಷತ್ತು ತಡೆ ಒಡ್ಡುತ್ತಿದೆ. 58 ಸದಸ್ಯಬಲದ ಆಂಧ್ರ ಪ್ರದೇಶ ವಿಧಾನಪರಿಷತ್ತಿನಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ನ 9 ಸದಸ್ಯರು ಮಾತ್ರ ಇದ್ದಾರೆ. ಟಿಡಿಪಿಯ 28 ಮಂದಿ ಇದ್ದಾರೆ. ಈ ಪಕ್ಷವು ಇತರ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರೂಪಿಸುವ ಯಾವುದೇ ಕಾನೂನಿಗೆ ತಡೆಯೊಡ್ಡಬಲ್ಲದು. ಅಡೆತಡೆ ರಹಿತವಾಗಿ ಓಡಬೇಕಾದರೆ ಪರಿಷತ್ತನ್ನು ರದ್ದುಪಡಿಸುವುದು ಅನಿವಾರ್ಯ ಎಂಬ ಸ್ಥಿತಿ ಈಗ ಜಗನ್‌ ಮೋಹನ್‌ಗೆ ಎದುರಾಗಿದೆ.

ತ್ರಿವಳಿ ರಾಜಧಾನಿಗೆ ತಡೆ:

ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ರಚಿಸಲು ಜಗನ್‌ ಮೋಹನ್‌ ಮುಂದಾಗಿದ್ದರು. ಅವರ ಈ ನಿರ್ಧಾರಕ್ಕೆ ವಿಧಾನ ಪರಿಷತ್ತು ತಡೆ ಒಡ್ಡಿತು. ಪರಿಷತ್ತನ್ನು ರದ್ದುಪಡಿಸುವ ಅವರ ನಿರ್ಧಾರಕ್ಕೆ ಇದೇ ಕಾರಣ ಎನ್ನಲಾಗಿದೆ.

ಅಮರಾವತಿಯನ್ನು ಶಾಂಸಕಾಂಗದ ರಾಜಧಾನಿಯಾಗಿ, ವಿಶಾಖಪಟ್ಟಣವನ್ನು ಕಾರ್ಯಾಂಗದ ರಾಜಧಾನಿಯಾಗಿ ಮತ್ತು ಕರ್ನೂಲನ್ನು ನ್ಯಾಯಾಂಗದ ರಾಜಧಾನಿಯಾಗಿ ಮಾಡುವ ಪ್ರಸ್ತಾವಕ್ಕೆ ಒಂದು ವಾರದ ಹಿಂದೆಯಷ್ಟೇ ಜಗನ್‌ ಅವರ ಸಚಿವ ಸಂಪುಟವು ಅಂಗೀಕಾರ ನೀಡಿತ್ತು.

ಸದಸ್ಯರ ಆಯ್ಕೆ ಹೇಗೆ?

ವಿಧಾನಸಭೆಯ ಒಟ್ಟು ಸದಸ್ಯರ ಮೂರನೇ ಒಂದಕ್ಕಿಂತ ಹೆಚ್ಚು ಸದಸ್ಯರು ವಿಧಾನಪರಿಷತ್ತಿನಲ್ಲಿ ಇರುವಂತಿಲ್ಲ. ಮಾತ್ರವಲ್ಲ, ಪರಿಷತ್ತಿನ ಒಟ್ಟು ಸದಸ್ಯರ ಸಂಖ್ಯೆ 40ಕ್ಕಿಂತ ಕಡಿಮೆಯೂ ಇರಬಾರದು.

ಪರಿಷತ್ತಿನ ಒಟ್ಟು ಸದಸ್ಯರಲ್ಲಿ ಮೂರನೇ ಒಂದರಷ್ಟು ಸದಸ್ಯರನ್ನು ವಿಧಾನ ಪರಿಷತ್‌ ಸದಸ್ಯರು (ಶಾಸಕರು) ಆಯ್ಕೆ ಮಾಡುತ್ತಾರೆ. ಇನ್ನೂ ಮೂರನೇ ಒಂದರಷ್ಟು ಸದಸ್ಯರನ್ನು ಸ್ಥಳೀಯ ಸಂಸ್ಥೆಗಳ ಸದಸ್ಯರು ಆಯ್ಕೆ ಮಾಡುತ್ತಾರೆ. ತಲಾ 12ನೇ ಒಂದರಷ್ಟು ಸದಸ್ಯರು ಶಿಕ್ಷಕರ ಕ್ಷೇತ್ರದಿಂದ ಮತ್ತು ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿ ಬರುತ್ತಾರೆ. ಉಳಿದ ಸ್ಥಾನಗಳಿಗೆ ಕಲೆ, ಸಾಹಿತ್ಯ, ಸಹಕಾರ ಕ್ಷೇತ್ರ, ಸಮಾಜ ಸೇವೆ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸಿದವರನ್ನು ಸರ್ಕಾರವೇ ಆಯ್ಕೆ ಮಾಡಿ ನಾಮ ನಿರ್ದೇಶನ ಮಾಡುತ್ತದೆ.

ಎಲ್ಲೆಲ್ಲಿ ಮೇಲ್ಮನೆ?

ಪ್ರಸಕ್ತ ಆಂಧ್ರಪ್ರದೇಶ (58 ಸದಸ್ಯರು), ಬಿಹಾರ (75 ಸದಸ್ಯರು), ಕರ್ನಾಟಕ (75 ಸದಸ್ಯರು), ಮಹಾರಾಷ್ಟ್ರ (78 ಸದಸ್ಯರು), ತೆಲಂಗಾಣ (40 ಸದಸ್ಯರು) ಮತ್ತು ಉತ್ತರ ಪ್ರದೇಶದಲ್ಲಿ (100 ಸದಸ್ಯರು) ಮಾತ್ರ ವಿಧಾನಪರಿಷತ್ತು ಇದೆ.

ಇನ್ನೂ ಕೆಲವು ರಾಜ್ಯಗಳಲ್ಲಿ ಮೇಲ್ಮನೆ ರಚನೆಯ ಪ್ರಯತ್ನಗಳು ನಡೆದಿವೆ. ರಾಜಸ್ಥಾನ ಹಾಗೂ ಅಸ್ಸಾಂ ರಾಜ್ಯಗಳು ಈ ಬಗ್ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಅದು ಸಂಸತ್ತಿನ ಪರಿಶೀಲನೆಯಲ್ಲಿದೆ. ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಸರ್ಕಾರ ಇದ್ದಾಗ ವಿಧಾನ ಪರಿಷತ್‌ ರಚಿಸುವ ನಿರ್ಣಯ ಅಂಗೀಕರಿಸಿತ್ತು. ಆದರೆ, 2010ರಲ್ಲಿ ಅಧಿಕಾರಕ್ಕೆ ಬಂದ ಎಐಎಡಿಎಂಕೆ ಸರ್ಕಾರ ಇದನ್ನು ರದ್ದುಪಡಿಸಿತು. ಒಡಿಶಾ ಸರ್ಕಾರವೂ ಮೇಲ್ಮನೆ ರಚನೆಯ ನಿರ್ಣಯ ಅಂಗೀಕರಿಸಿದೆ.

ವಿಶೇಷಾಧಿಕಾರ ರದ್ದತಿ ಹಾಗೂ ರಾಜ್ಯದ ಮರು ವಿಂಗಡಣೆ ಆಗುವವರೆಗೆ ಜಮ್ಮು ಕಾಶ್ಮೀರದಲ್ಲೂ ವಿಧಾನಪರಿಷತ್‌ ಇತ್ತು.

ಪರಿಷತ್ ನಿರ್ವಹಣೆ

ಕರ್ನಾಟಕ ವಿಧಾನ ಪರಿಷತ್ 75 ಸದಸ್ಯರನ್ನು ಒಳಗೊಂಡಿದ್ದು, ಮೇಲ್ಮನೆಯ ಕಾರ್ಯನಿರ್ವಹಣೆ ನೋಡಿಕೊಳ್ಳಲು ಅಧಿಕಾರಿಗಳು, ಸಿಬ್ಬಂದಿ ಸೇರಿ 250 ಮಂದಿ ಇದ್ದಾರೆ. ಸದಸ್ಯರ ವೇತನ, ಭತ್ಯೆ, ನೌಕರರ ವೇತನ ಸೇರಿದಂತೆ ವರ್ಷಕ್ಕೆ ಸುಮಾರು ₹12 ಕೋಟಿ ಖರ್ಚು ಬರುತ್ತದೆ.

ಸದಸ್ಯರ ವೇತನ, ವಿವಿಧ ಭತ್ಯೆಗಳು ಸೇರಿ ತಿಂಗಳಿಗೆ ₹1 ಲಕ್ಷ ಪಾವತಿಸಲಾಗುತ್ತಿದೆ. ಇದರ ಜತೆಗೆ ವಿವಿಧ ಸಮಿತಿಗಳ ಸಭೆಗಳಿಗೆ ಹಾಗೂ ಪರಿಷತ್ ಕಲಾಪಕ್ಕೆ ಹಾಜರಾದರೆ ಪ್ರತ್ಯೇಕ ಭತ್ಯೆ ನೀಡಲಾಗುತ್ತದೆ. ಸಭೆಗೆ ಬಂದು ಹೋಗಲು ಪ್ರಯಾಣ ಭತ್ಯೆ ಕಿಲೋ ಮೀಟರ್‌ಗೆ ₹25 ಹಾಗೂ ದಿನಕ್ಕೆ ₹2 ಸಾವಿರ ದಿನಭತ್ಯೆ ನೀಡಲಾಗುತ್ತದೆ.

ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ವಿವಿಧ 14 ಸಮಿತಿಗಳಿದ್ದು, ಒಂದಲ್ಲ ಒಂದು ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ. ತಿಂಗಳಲ್ಲಿ ಕನಿಷ್ಠ ಐದಾರು ಸಮಿತಿಗಳ ಸಭೆಗಳಲ್ಲಿ ಭಾಗವಹಿಸಿ, ಪ್ರಯಾಣ ಹಾಗೂ ಇತರ ಭತ್ಯೆಗಳನ್ನು ಪಡೆದುಕೊಳ್ಳುತ್ತಾರೆ. ಭತ್ಯೆಗಳ ರೂಪದಲ್ಲಿ ಪ್ರತಿ ಸದಸ್ಯರಿಗೆ ಸುಮಾರು ₹50 ಸಾವಿರದವರೆಗೂ ಪಾವತಿಯಾಗುತ್ತದೆ. ವೇತನ ಹಾಗೂ ಸಭೆ ಭತ್ಯೆಗಳು ಸೇರಿದರೆ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು ₹1.50 ಲಕ್ಷದವರೆಗೂ ಸಿಗುತ್ತದೆ.

ಸಭಾಪತಿ, ಉಪಸಭಾಪತಿ, ವಿರೋಧ ಪಕ್ಷದ ನಾಯಕರಿಗೆ ವೇತನ, ವಸತಿ ಸೇರಿದಂತೆ ಸಚಿವರಿಗೆ ಸಿಗುವ ಸವಲತ್ತುಗಳನ್ನು ಕಲ್ಪಿಸಲಾಗುತ್ತದೆ.

***

ಪರಿಷತ್ ರದ್ದು ಮಾಡುವ ಬದಲು ಮತ್ತಷ್ಟು ರಾಜ್ಯಗಳಿಗೆ ವಿಸ್ತರಿಸಬೇಕು. ಮೇಲ್ಮನೆಗಳಲ್ಲಿ ಈವರೆಗೆ ಯಾರೆಲ್ಲ ಚರ್ಚೆ ನಡೆಸಿದ್ದಾರೆ, ಏನೆಲ್ಲ ಚರ್ಚೆಗಳು ಆಗಿವೆ ಎಂಬ ಬಗ್ಗೆ ಚಿಂತಿಸಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ರಾಜ್ಯದಲ್ಲೂ ರದ್ದುಪಡಿಸುವ ವಿಚಾರ ಮುನ್ನೆಲೆಗೆ ಬಂದಿತ್ತು. ಪರಿಷತ್‌ನಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲ ಎಂಬ ಕಾರಣಕ್ಕೆ ಇಕ್ಕಟ್ಟಿಗೆ ಸಿಲುಕಿಸಬಾರದು. ಮೇಲ್ಮನೆ ರದ್ದು ಮಾಡುವ ಅಧಿಕಾರ ವಿಧಾನಸಭೆಗೆ ಇರಬಾರದು.

ಡಿ.ಎಚ್.ಶಂಕರಮೂರ್ತಿ, ಕರ್ನಾಟಕ ವಿಧಾನ ಪರಿಷತ್ ಮಾಜಿ ಸಭಾಪತಿ

***

ವಿಧಾನ ಪರಿಷತ್ ಅನ್ನು ಎಲ್ಲ ರಾಜ್ಯಗಳಿಗೆ ವಿಸ್ತರಿಸಲು ರಾಷ್ಟ್ರೀಯ ನೀತಿ ರೂಪುಗೊಳ್ಳಬೇಕು. ಮೇಲ್ಮನೆ ಬೇಕೆ, ಬೇಡವೆ ಎಂಬ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಗಳು ನಡೆದು, ಬಲಪಡಿಸುವ ಕೆಲಸ ಆಗಬೇಕು. ಆಡಳಿತಾರೂಢ ಪಕ್ಷಕ್ಕೆ ಮೇಲ್ಮನೆಯಲ್ಲಿ ಬಹುಮತ ಇಲ್ಲ ಎಂಬ ಕಾರಣಕ್ಕೆ ಮುಜುಗರವಾಗುವಂತೆ ನಡೆದುಕೊಳ್ಳಬಾರದು. 

ವಿ.ಆರ್.ಸುದರ್ಶನ್, ಕರ್ನಾಟಕ ವಿಧಾನ ಪರಿಷತ್ ಮಾಜಿ ಸಭಾಪತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು