ಮಂಗಳವಾರ, ನವೆಂಬರ್ 29, 2022
20 °C

Explainer | ಅಸ್ಸಾಂನೊಳಗೆ ಪ್ರತ್ಯೇಕ ‘ರಾಜ್ಯ’ ಬೋಡೊಲ್ಯಾಂಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತ್ಯೇಕ ರಾಜ್ಯ ಅಥವಾ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಕ್ಕಾಗಿ ಹಲವು ದಶಕಗಳಿಂದ ಬೋಡೊ ಜನರು ನಡೆಸುತ್ತಿದ್ದ ಸಶಸ್ತ್ರ ಮತ್ತು ಶಸ್ತ್ರರಹಿತ ಹೋರಾಟಕ್ಕೆ ‘ಬೋಡೊ ಅಕಾರ್ಡ್‌’ ಮೂಲಕ ತಾರ್ಕಿಕ ಅಂತ್ಯ ಹಾಡಲಾಗಿದೆ. ಈಗಾಗಲೇ ಅಸ್ತಿತ್ವದಲ್ಲಿದ್ದ ಅರೆಸ್ವಾಯತ್ತ ಬೋಡೊ ಜಿಲ್ಲೆಗಳಿಗೆ, ಮತ್ತಷ್ಟು ಅಧಿಕಾರವನ್ನು ‘ಬೋಡೊ ಅಕಾರ್ಡ್‌’ ನೀಡುತ್ತದೆ. ಪ್ರತ್ಯೇಕ ಬೋಡೊಲ್ಯಾಂಡ್‌ ಹೋರಾಟಕ್ಕೆ ಈ ಒಪ್ಪಂದವು ಪೂರ್ಣವಿರಾಮ ಹಾಕಿದಂತೆ ಕಾಣುತ್ತಿದೆ. ಪ್ರತ್ಯೇಕ ರಾಜ್ಯವೊಂದಕ್ಕೆ ನೀಡಲಾಗುವ ಬಹುಪಾಲು ಅಧಿಕಾರವನ್ನು ಸ್ವಾಯತ್ತ ಬೋಡೊಲ್ಯಾಂಡ್‌ಗೆ ಈ ಒಪ್ಪಂದವು ನೀಡುತ್ತದೆ. ಈ ಒಪ್ಪಂದವು ಪ್ರತ್ಯೇಕ ಬೋಡೊಲ್ಯಾಂಡ್‌ನತ್ತ ಮೊದಲ ಮತ್ತು ಅತ್ಯಂತ ದೊಡ್ಡ ಹೆಜ್ಜೆ ಎಂದು ವಿಶ್ಲೇಷಿಸಲಾಗುತ್ತಿದೆ

ರಾಜಕೀಯ ಪ್ರಾತಿನಿಧ್ಯ ಹೆಚ್ಚಳ

ಈಗ ಬಿಟಿಎಡಿಯ ಆಡಳಿತವನ್ನು ನೋಡಿಕೊಳ್ಳುತ್ತಿರುವ ಬೋಡೊಲ್ಯಾಂಡ್‌ ಭೌಗೋಳಿಕ ಸಮಿತಿ (ಬಿಟಿಸಿ) 40 ಸದಸ್ಯರ ಬಲ ಹೊಂದಿದೆ. ಬಿಟಿಎಡಿಗಿಂತಲೂ ಬಿಟಿಆರ್‌ನ ವ್ಯಾಪ್ತಿ ಹಿಗ್ಗುವ ಕಾರಣ, ಬಿಟಿಸಿ ಸದಸ್ಯರ ಸಂಖ್ಯೆ 40ರಿಂದ 60ಕ್ಕೆ ಏರಿಕೆ ಆಗಲಿದೆ.

ಬಿಟಿಆರ್‌ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳ ಆಡಳಿತ ಕ್ಷೇತ್ರಗಳು, ವಿಧಾನಸಭಾ ಕ್ಷೇತ್ರಗಳು ಮತ್ತು ಲೋಕಸಭಾ ಕ್ಷೇತ್ರಗಳನ್ನು ಮರುವಿಂಗಡನೆ ಮಾಡಲಾಗುತ್ತದೆ. ಈ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳು ಮತ್ತು ರಾಜ್ಯ ವಿಧಾನಸಭೆಯ ಕ್ಷೇತ್ರಗಳಲ್ಲಿ ಶೇ 65ರಷ್ಟು ಸ್ಥಾನಗಳನ್ನು ಬೋಡೊ ಬುಡಕಟ್ಟು ಜನರಿಗೆ ಮೀಸಲಿಡಲಾಗುತ್ತದೆ. ಬಿಟಿಆರ್‌ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಬೋಡೊ ಬುಡಕಟ್ಟು ಸಮುದಾಯಗಳಿಗೆ ಮೀಸಲಿರಿಸಲಾಗುತ್ತದೆ.

ಶಿಕ್ಷಣ: ಸಂಪೂರ್ಣ ಹಕ್ಕು

ಬಿಟಿಆರ್‌ ವ್ಯಾಪ್ತಿಯ ಜಿಲ್ಲೆಗಳಲ್ಲಿ ಶಿಕ್ಷಣದ ನೀತಿಯನ್ನು ರೂಪಿಸುವ, ಪಠ್ಯಕ್ರಮ ರೂಪಿಸುವ, ಶಿಕ್ಷಣದ ಮಾಧ್ಯಮವನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರ ಬಿಟಿಸಿಗೆ ದೊರೆಯಲಿದೆ. ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣದ ಸಂಪೂರ್ಣ ಅಧಿಕಾರ ಬಿಟಿಸಿಗೆ ದೊರೆಯಲಿದೆ.

ಬೋಡೊ ಭಾಷೆಯನ್ನು ಶಿಕ್ಷಣದ ಭಾಷೆಯನ್ನಾಗಿ ಮಾಡುವ ಮತ್ತು ಅಸ್ಸಾಂನ ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಲು ಒಪ್ಪಂದದಲ್ಲಿ ಅವಕಾಶ ನೀಡಲಾಗಿದೆ.

ಬಿಟಿಆರ್‌ ವ್ಯಾಪ್ತಿಯಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಸಲು ಬೋಡೊಲ್ಯಾಂಡ್ ನಾಗರಿಕ ಸೇವಾ ಆಯೋಗ ರಚನೆಗೆ ಅವಕಾಶ ನೀಡಲಾಗಿದೆ. ಈ ಎಲ್ಲದಕ್ಕೂ ಕೇಂದ್ರ ಸರ್ಕಾರವು ಅನುದಾನ ಒದಗಿಸಲಿದೆ.

ಜಿಲ್ಲೆಗಳ ಮರುವಿಂಗಡನೆ

ಈ ಒಪ್ಪಂದದ ಪ್ರಕಾರ ಅಸ್ಸಾಂನ ಹಲವು ಜಿಲ್ಲೆಗಳನ್ನು ಮರುವಿಂಗಡನೆ ಮಾಡಲಾಗುತ್ತದೆ. ಬೋಡೊಲ್ಯಾಂಡ್‌ ಭೌಗೋಳಿಕ ಪ್ರದೇಶ ಜಿಲ್ಲೆಗಳನ್ನು (ಬಿಟಿಎಡಿ) ವಿಭಜಿಸಲಾಗುತ್ತದೆ

* ಕೋಕ್ರಜಾರ್‌ ಜಿಲ್ಲೆಯನ್ನು ವಿಭಜಿಸಿ ಕೋಕ್ರಜಾರ್‌ ಮತ್ತು ಗೊಸಾಯಿಗಾಂ ಎಂಬ ಎರಡು ಜಿಲ್ಲೆಗಳನ್ನು ರಚಿಸಲಾಗುತ್ತದೆ

* ಬಕ್ಸಾ ಜಿಲ್ಲೆಯನ್ನು ವಿಭಜಿಸಿ ಬಕ್ಸಾ ಮತ್ತು ಮಾನಸ್ ಎಂಬ ಎರಡು ಪ್ರತ್ಯೇಕ ಜಿಲ್ಲೆಗಳನ್ನು ರಚಿಸಲಾಗುತ್ತದೆ

* ಚಿರಾಗ್ ಜಿಲ್ಲೆಯನ್ನು ಹಾಗೇ ಉಳಿಸಿಕೊಳ್ಳಲಾಗುತ್ತದೆ

* ಉದಲ್‌ಗುರಿ ಜಿಲ್ಲೆಯನ್ನು ವಿಭಜಿಸಿ ಉದಲ್‌ಗುರಿ ಮತ್ತು ಭೇರ್‌ಗಾಂ ಎಂಬ ಎರಡು ಪ್ರತ್ಯೇಕ ಜಿಲ್ಲೆಗಳನ್ನು ರಚಿಸಲಾಗುತ್ತದೆ

* ಈಗ ಬಿಟಿಎಡಿ ವ್ಯಾಪ್ತಿಯಲ್ಲಿ ಇಲ್ಲದ ಸೋನಿತ್‌ಪುರ್ ಜಿಲ್ಲೆಯನ್ನು ವಿಭಜಿಸಿ, ಮೈನೋಸ್ರಿ ಎಂಬ ಜಿಲ್ಲೆಯನ್ನು ರಚಿಸಲಾಗುತ್ತದೆ. ಇದನ್ನು ಬಿಟಿಎಡಿಗೆ ಸೇರಿಸಲಾಗುತ್ತದೆ

* ಈಗ ಬಿಟಿಎಡಿ ವ್ಯಾಪ್ತಿಯಲ್ಲಿ ಇರದ ಲಖೀಂಪುರ್ ಜಿಲ್ಲೆಯನ್ನು ವಿಭಜಿಸಿ, ನೂತನವಾಗಿ ಹೋಲೋಂಗಿ ಜಿಲ್ಲೆಯನ್ನು ರಚಿಸಲಾಗುತ್ತದೆ. ಇದನ್ನೂ ಬಿಟಿಎಡಿಗೆ ಸೇರಿಸಲಾಗುತ್ತದೆ

* ಬಿಟಿಎಡಿಯನ್ನು ಬದಲಿಸಿ, ಬೋಡೊಲ್ಯಾಂಡ್ ಭೌಗೋಳಿಕ ಪ್ರದೇಶ (ಬಿಟಿಆರ್‌) ರಚಿಸಲಾಗುತ್ತದೆ. ಈ ಎಲ್ಲಾ ಜಿಲ್ಲೆಗಳು ಬಿಟಿಆರ್ ವ್ಯಾಪ್ತಿಯಲ್ಲಿ ಬರಲಿವೆ. ಬೋಡೊ ಜನರ ಭೂಹಕ್ಕುಗಳ ರಕ್ಷಣೆಗಾಗಿ ‘ಬೋಡೊಲ್ಯಾಂಡ್ ಭೂಹಕ್ಕುಗಳ ರಕ್ಷಣಾ ಆಯೋಗ’ವನ್ನು ರಚಿಸಲಾಗುತ್ತದೆ.

ಆರ್ಥಿಕ ಸ್ವಾಯತ್ತೆ

ಬಿಟಿಆರ್‌ನ ಆರ್ಥಿಕತೆಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಬಿಟಿಸಿಗೆ ನೀಡಲಾಗುತ್ತದೆ.

* ಬಿಟಿಆರ್‌ ವ್ಯಾಪ್ತಿಯ ಕಂದಾಯ ನಿಗದಿ ಮತ್ತು ವಸೂಲಿಯ ಅಧಿಕಾರ

* ರಾಜ್ಯವೊಂದು ವಿಧಿಸಬಹುದಾದ ಎಲ್ಲಾ ಸ್ವರೂಪದ ತೆರಿಗೆ, ಸುಂಕ ಮತ್ತು ರಾಜಧನಗಳನ್ನು ವಿಧಿಸುವ ಅಧಿಕಾರ

* ತೆರಿಗೆ, ಸುಂಕ ಮತ್ತು ರಾಜಧನವನ್ನು ಬಳಸುವ ಅಧಿಕಾರ

* ಈ ವ್ಯಾಪ್ತಿಯಲ್ಲಿ ಉತ್ಪಾದಿಸಲಾಗುವ ವಿದ್ಯುತ್‌ ಪೂರೈಕೆಯಿಂದ ಸಂಗ್ರಹವಾಗುವ ಆದಾಯ ಮತ್ತು ಅಸ್ಸಾಂನ ಇತರ ಪ್ರದೇಶಗಳಿಗೆ ಮತ್ತು ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರಾಟದಿಂದ ಬರುವ ಆದಾಯವು ಬಿಟಿಸಿಯ ಖಜಾನೆಗೆ ಜಮೆ ಆಗಲಿದೆ

* ಕೇಂದ್ರ ಸರ್ಕಾರದ ಎಲ್ಲಾ ಅನುದಾನಗಳು ನೇರವಾಗಿ ಬಿಟಿಸಿಗೆ ಹಂಚಿಕೆ ಆಗಲಿದೆ

* ವಿಶ್ವ ಬ್ಯಾಂಕ್ ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳ ನೆರವಿನ ಹಣ ನೇರವಾಗಿ ಬಿಟಿಸಿಗೆ ಹಂಚಿಕೆ ಆಗಲಿದೆ

ಬೋಡೊ ಹೋರಾಟದ ಹಾದಿ

* 1929: ವಿಧಾನಸಭೆಯಲ್ಲಿ ತಮ್ಮ ಸಮುದಾಯದವರಿಗೆ ಮೀಸಲಾತಿ ಹಾಗೂ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿ ಬೋಡೊ ನಾಯಕ ಗುರುದೇವ್‌ ಕಾಲಿಚರಣ ಬ್ರಹ್ಮ ಅವರಿಂದ ಸೈಮನ್‌ ಆಯೋಗಕ್ಕೆ ಮನವಿ ಸಲ್ಲಿಕೆ

* 1960ರಿಂದ 1970: ಬೋಡೊ ಹಾಗೂ ಇತರ ಬುಡಕಟ್ಟು ಸಮುದಾಯಗಳ ಪ್ರದೇಶಗಳನ್ನು ಇತರರು ಅತಿಕ್ರಮಿಸುತ್ತಿದ್ದಾರೆ. ಆದ್ದರಿಂದ ಬೋಡೊ ಸಮುದಾಯದವರಿಗಾಗಿ ಪ್ರತ್ಯೇಕ ‘ಉದಯಾಚಲ’ ರಾಜ್ಯ ನಿರ್ಮಿಸಬೇಕು ಎಂದು ಒತ್ತಾಯ

*  1980ರ ದಶಕ: ಅಸ್ಸಾಂ ಅನ್ನು ವಿಭಜಿಸಿ, ಪ್ರತ್ಯೇಕ ‘ಬೋಡೊಲ್ಯಾಂಡ್‌’ ರಚಿಸಬೇಕು ಎಂಬ ಹೋರಾಟ ತೀವ್ರಗೊಂಡಿತು. ‘ಆಲ್‌ ಬೋಡೊ ಸ್ಟೂಡೆಂಟ್ಸ್‌ ಯೂನಿಯನ್‌’ (ಎಬಿಎಸ್‌ಯು) ನಾಯಕ ಉಪೇಂದ್ರನಾಥ್‌ ಬ್ರಹ್ಮ ಅವರು ಶಾಂತಿಯುತ ಹೋರಾಟದ ಮಾರ್ಗವನ್ನು ಅನುಸರಿಸಿದ್ದರೂ ‘ಬೋಡೊಲ್ಯಾಂಡ್‌ ಲಿಬರೇಷನ್‌ ಟೈಗರ್ಸ್‌ (ಬಿಎಲ್‌ಟಿ), ನ್ಯಾಷನಲ್‌ ಡೆಮಾಕ್ರಟಿಕ್‌ ಫ್ರಂಟ್‌ ಆಫ್‌ ಬೋಡೊಲ್ಯಾಂಡ್‌ (ಎನ್‌ಡಿಎಫ್‌ಬಿ) ಮುಂತಾದ ಪ್ರತ್ಯೇಕತಾವಾದಿ ಸಂಘಟನೆಗಳು ಹುಟ್ಟಿಕೊಂಡವು

*  1993 ಫೆಬ್ರುವರಿ: ಕೇಂದ್ರ, ಅಸ್ಸಾಂ ಸರ್ಕಾರ ಹಾಗೂ ಎಬಿಎಸ್‌ಯು ಮಧ್ಯೆ ತ್ರಿಪಕ್ಷೀಯ ಒಪ್ಪಂದ. ಬೋಡೊಲ್ಯಾಂಡ್‌ ಸ್ವಾಯತ್ತ ಮಂಡಳಿ (ಬಿಎಸಿ) ರಚನೆ

*  2003 ಫೆಬ್ರುವರಿ: ಕೇಂದ್ರ, ಅಸ್ಸಾಂ ಸರ್ಕಾರ ಹಾಗೂ ಬಿಎಲ್‌ಟಿ ಮಧ್ಯೆ ಎರಡನೇ ಒಪ್ಪಂದ. ಪ್ರತ್ಯೇಕತಾವಾದಿ ಸಂಘಟನೆ ಬಿಎಲ್‌ಟಿ ವಿಸರ್ಜನೆ. ಬೋಡೊಲ್ಯಾಂಡ್‌ ಪ್ರಾದೇಶಿಕ ಮಂಡಳಿ (ಬಿಟಿಸಿ) ರಚನೆ. ನಾಲ್ಕು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಬಿಟಿಸಿಯಿಂದ ‘ರಾಜ್ಯದೊಳಗೆ ಇನ್ನೊಂದು ರಾಜ್ಯ’ದ ರೀತಿಯಲ್ಲಿ ಬೋಡೊಲ್ಯಾಂಡ್‌ ಪ್ರದೇಶದ ಆಡಳಿತ

*  2005: ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತು ‘ನ್ಯಾಷನಲ್‌ ಡೆಮಾಕ್ರಟಿಕ್‌ ಫ್ರಂಟ್‌ ಆಫ್‌ ಬೋಡೊಲ್ಯಾಂಡ್‌’ (ಎನ್‌ಡಿಎಫ್‌ಬಿ) ಮಧ್ಯೆ ಕದನವಿರಾಮ ಒಪ್ಪಂದ. ಒಪ್ಪಂದದ ಬಳಿಕ ಈ ಸಂಘಟನೆಯು ಮೂರು ಪ್ರತ್ಯೇಕ ಗುಂಪುಗಳಾಗಿ ಒಡೆಯಿತು. ಅವುಗಳಲ್ಲಿ ಒಂದಾಗಿದ್ದ ಎನ್‌ಡಿಎಫ್‌ಬಿ (ಎಸ್‌) ರಾಜ್ಯದೊಳಗೆ ಹಿಂಸಾತ್ಮಕ ದಾಳಿಗಳನ್ನು ನಡೆಸಲು ಆರಂಭಿಸಿತು

*  2012: ಬೋಡೊಲ್ಯಾಂಡ್‌ ಪ್ರದೇಶದೊಳಗಿದ್ದ ಬಂಗಾಳಿ ಭಾಷಿಕ ಮುಸ್ಲಿಮರು ಮತ್ತು ಬೋಡೊ ಜನರ ಮಧ್ಯೆ ಜನಾಂಗೀಯ ಗಲಭೆ. ನೂರಕ್ಕೂ ಹೆಚ್ಚು ಮಂದಿ ಸಾವು. ನಾಲ್ಕು ಲಕ್ಷ ಜನರು ನಿರಾಶ್ರಿತರಾದರು. ಬೋಡೊ ಮತ್ತು ಇತರರ (ಹೆಚ್ಚಾಗಿ, ಬಂಗಾಳಿ ಭಾಷಿಕ ಮುಸ್ಲಿಂ ಸಮುದಾಯ) ನಡುವೆ ರಕ್ತಸಿಕ್ತ ಹೋರಾಟಗಳ ಸರಣಿ ಆರಂಭ.

*  2014ರ ಮೇ: ಲೋಕಸಭಾ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗೆ ಮತ ನೀಡಲಿಲ್ಲ ಎಂಬ ಊಹೆಯಿಂದ ಬೋಡೊ ಉಗ್ರರಿಂದ ಕೋಕ್ರಜಾರ್‌ ಹಾಗೂ ಬಕ್ಸಾ ಜಿಲ್ಲೆಯಲ್ಲಿ 30 ಜನರ ಹತ್ಯೆ

*  2014 ಡಿಸೆಂಬರ್‌: ಬೋಡೊ ಉಗ್ರರಿಂದ ಮುಂದುವರಿದ ಹಿಂಸಾಚಾರ. 76 ಮಂದಿ ಆದಿವಾಸಿಗಳೂ ಸೇರಿ 81 ಮಂದಿಯ ಹತ್ಯೆ. 2 ಲಕ್ಷ ಮಂದಿ ನಿರಾಶ್ರಿತರಾದರು. ಮೇ ಮತ್ತು ಡಿಸೆಂಬರ್‌ ತಿಂಗಳಲ್ಲಿ ನಡೆದ ಹಿಂಸಾಚಾರಗಳನ್ನು ಎನ್‌ಡಿಎಫ್‌ಬಿ ಸಂಘಟನೆಯೇ ಮಾಡಿರಬಹುದು ಎಂಬ ಶಂಕೆ. ಈ ಸಂಘಟನೆಯ ನಿರ್ಮೂಲನೆಗಾಗಿ ಸೇನೆ, ವಾಯುಪಡೆ, ಅಸ್ಸಾಂ ರಾಜ್ಯ ಪೊಲೀಸ್‌ ಇಲಾಖೆ ಹಾಗೂ ಅರೆಸೇನಾಪಡೆಗಳನ್ನು ಒಳಗೊಂಡ, ‘ಆಪರೇಷನ್‌ ಆಲ್ ಔಟ್‌’ ಕಾರ್ಯಾಚರಣೆ ಆರಂಭ

*  2016ರ ಆಗಸ್ಟ್‌: ಕೋಕ್ರಜಾರ್‌ ಜಿಲ್ಲೆಯಲ್ಲಿ ಉಗ್ರರಿಂದ 14 ಮಂದಿಯ ಹತ್ಯೆ. ಘಟನೆಯ ಹಿಂದೆ ಎನ್‌ಡಿಎಫ್‌ಬಿ (ಎಸ್‌) ಸಂಘಟನೆಯ ಕೈವಾಡದ ಶಂಕೆ

*  2017ರ ಆಗಸ್ಟ್‌: ಎನ್‌ಡಿಎಫ್‌ಬಿಯ ಮೂರು ಬಣಗಳು ಹಾಗೂ ಎಬಿಎಸ್‌ಯು ಸಂಘಟನೆಗಳು ಒಗ್ಗೂಡಿ, ಪ್ರತ್ಯೇಕ ಬೋಡೊಲ್ಯಾಂಡ್‌ ಬೇಡಿಕೆಯ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಒತ್ತಾಯಿಸಿ ಸರಣಿ ಹೋರಾಟ ನಡೆಸಲು ತೀರ್ಮಾನ. ಈಗ, ಕೇಂದ್ರ ಸರ್ಕಾರದ ಜತೆ ಶಾಂತಿ ಮಾತುಕತೆಯ ಮುಂಚೂಣಿಯಲ್ಲಿದ್ದ ರಂಜನ್‌ ಡೈಮರಿ ಅವರು ಈ ಹೋರಾಟದ ನೇತೃತ್ವ ವಹಿಸಿದ್ದರು. ಆ. 20ರಂದು ಈ ಎಲ್ಲಾ ಸಂಘಟನೆಗಳು ಕೋಕ್ರಜಾರ್‌ನಲ್ಲಿ ವಿಶೇಷ ಸಭೆ ಆಯೋಜಿಸಿ ಹೋರಾಟದ ರೂಪುರೇಷೆ ಸಿದ್ಧಪಡಿಸಿದವು. ಅಸ್ಸಾಂ ಬಂದ್‌, ಉಪವಾಸ ಸತ್ಯಾಗ್ರಹ, ರೈಲು ತಡೆ ಹೋರಾಟ... ಮುಂತಾಗಿ ಹಲವು ರೀತಿಯ ಹೋರಾಟ ನಡೆಸಲು ತೀರ್ಮಾನ

*  2020 ಜನವರಿ: ಎಬಿಎಸ್‌ಯು ಪ್ರತ್ಯೇಕ ಬೋಡೊಲ್ಯಾಂಡ್‌ ಹೋರಾಟ ಮುಂದುವರಿಸಿದರೆ, ಎನ್‌ಡಿಎಫ್‌ಬಿಯಿಂದ ಹಿಂಸಾತ್ಮಕ ಹೋರಾಟ ಮುಂದುವರಿಕೆ. ಕೇಂದ್ರದ ಜೊತೆಗೆ ಹಲವು ಸುತ್ತಿನ ಮಾತುಕತೆ. ಪರಿಣಾಮ, ಜ. 27ರಂದು ಎನ್‌ಡಿಎಫ್‌ಬಿಯ ನಾಲ್ಕು ಬಣಗಳು ಹಾಗೂ ಎಬಿಎಸ್‌ಯು ಸಂಘಟನೆಯು ಸರ್ಕಾರದ ಜತೆ ಒಪ್ಪಂದಕ್ಕೆ ಸಹಿ ಮಾಡಿದವು. ಇದು ಸರ್ಕಾರದ ಜತೆಗಿನ ಮೂರನೇ ಒಪ್ಪಂದ

ಆಧಾರ: ಬೋಡೊ ಅಕಾರ್ಡ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು