ಶನಿವಾರ, ಸೆಪ್ಟೆಂಬರ್ 25, 2021
24 °C

Explainer| ಚೀನಾದಲ್ಲಿ ಇಟಿಐಎಂ ಉಗ್ರರು ಮುನ್ನೆಲೆಗೆ: ತಾಲಿಬಾನ್‌ ಪ್ರೇರಣೆ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಅಫ್ಗಾನಿಸ್ತಾನದಲ್ಲಿನ ಮಧ್ಯಂತರ ತಾಲಿಬಾನ್‌ ಸರ್ಕಾರದ ಪರವಾಗಿ ಚೀನಾ ಬೆಂಬಲದ ಮಾತನಾಡುತ್ತಿದೆಯಾದರೂ, ಇತರ ಭಯೋತ್ಪಾದಕ ಸಂಘಟನೆಗಳು ಅಫ್ಗಾನಿಸ್ತಾನದ ನೆಲವನ್ನು ದುಷ್ಕೃತ್ಯಗಳಿಗೆ ಬಳಸಿಕೊಳ್ಳುವ ಆತಂಕ ಇದ್ದೇ ಇದೆ.

ಸದ್ಯ ಚೀನಾಕ್ಕೆ ತಲೆನೋವಾಗಿರುವ ವಿಚಾರವೆಂದರೆ, ಪೂರ್ವ ತುರ್ಕ್‌ಸ್ತಾನ್ ಇಸ್ಲಾಮಿಕ್ ಚಳವಳಿ (ಇಟಿಐಎಂ)ಯ ಉಯ್ಗರ್ ಉಗ್ರಗಾಮಿ ಗುಂಪು. ಈ ಸಂಘಟನೆಯು ಈಗ ಅಫ್ಗಾನಿಸ್ತಾನ ಮತ್ತು ಸುತ್ತಮುತ್ತ ತನ್ನ ಜಾಲವನ್ನು ವಿಸ್ತರಿಸುತ್ತಿದೆ. ಅಫ್ಗಾನಿಸ್ತಾನದಿಂದ ಅಮೆರಿಕ ತನ್ನ ಭದ್ರತಾ ಪಡೆಗಳನ್ನು ಹಿಂತೆಗೆದುಕೊಳ್ಳುವವರೆಗೂ ಇಟಿಐಎಂ ಬಗ್ಗೆ ಜನರಿಗೆ ಅಷ್ಟಾಗಿ ಏನೂ ಗೊತ್ತಿರಲಿಲ್ಲ. ಅದರ ನಡೆಯ ಮೇಲೆ ಸ್ವಲ್ಪ ಮಟ್ಟಿನ ಕುತೂಹಲವಷ್ಟೇ ಇತ್ತು. ಆದರೆ ತಾಲಿಬಾನ್ ಅಫ್ಗಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ, ಸಂಘಟನೆಯು ಮುಂಚೂಣಿಗೆ ಬಂದಿದೆ.

‘ಅಮೆರಿಕ ಒಂದು ಪ್ರಬಲ ದೇಶ. ಅದು ತನ್ನದೇ ಆದ ಕಾರ್ಯತಂತ್ರವನ್ನು ಹೊಂದಿದೆ. ಅಫ್ಗಾನಿಸ್ತಾನದಲ್ಲಿನ ಈ ಯುದ್ಧದಿಂದ ಅಮೆರಿಕ ಹಿಂದೆ ಸರಿಯುತ್ತಿದೆ. ಯುದ್ಧವು ದೊಡ್ಡ ಆರ್ಥಿಕ ನಷ್ಟ ಉಂಟು ಮಾಡಿತ್ತು. ಜಗತ್ತಿನ ಎಲ್ಲ ಧರ್ಮ ಮತ್ತು ಮಾನವೀಯತೆಯ ಶತ್ರುವಾಗಿರುವ ಚೀನಾವನ್ನು ಎದುರಿಸಲು ಅಮೆರಿಕದ ಈ ನಡೆ ಅನುಕೂಲವಾಗಲಿದೆ’ ಎಂದು ಇಟಿಐಎಂನ ವಕ್ತಾರರ ಹೇಳಿಕೆ ಉಲ್ಲೇಖಿಸಿ ಸುದ್ದಿ ಸಂಸ್ಥೆ ‘ನ್ಯೂಸ್ ವೀಕ್’ ವರದಿ ಮಾಡಿತ್ತು.

‘ಚೀನಾ ವಿರುದ್ಧದ ಅಮೆರಿಕದ ನಿಲುವು ಕೇವಲ ತುರ್ಕ್‌ಸ್ತಾನ್ ಇಸ್ಲಾಮಿಕ್ ಗುಂಪು, ತುರ್ಕ್‌ಸ್ತಾನದ ಜನರಿಗೆ ಮಾತ್ರ ಪ್ರಯೋಜನ ನೀಡದು. ಇಡೀ ಮಾನವ ಕುಲಕ್ಕೆ ಅನುಕೂಲ ಮಾಡಿಕೊಡಲಿದೆ’ ಎಂದು ಅದರ ವಕ್ತಾರರು ಹೇಳಿದ್ದರು.

ಭಯೋತ್ಪಾದಕ ಸಂಘಟನೆಗಳು ತಮ್ಮ ಚಟುವಟಿಕೆಗಳಿಗೆ ಅಫ್ಗಾನಿಸ್ತಾನದ ನೆಲವನ್ನು ಬಳಸಿಕೊಳ್ಳಲು ಅನುಮತಿ ನೀಡುವುದಿಲ್ಲ ಎಂದು ಚೀನಾಕ್ಕೆ ತಾಲಿಬಾನ್‌ ಭರವಸೆ ನೀಡಿದ ಹೊರತಾಗಿಯೂ ಇಟಿಐಎಂನಿಂದ ಈ ಎಚ್ಚರಿಕೆ ಬಂದಿದ್ದು ಗಮನಾರ್ಹ. ‌‌

ತಾಲಿಬಾನ್‌ಗಳು ಅಫ್ಗನ್‌ನ ಕೆಲ ಉಗ್ರ ಸಂಘಟನೆಗಳ ಮೇಲೆ ನಿಯಂತ್ರಣ ಹೊಂದಬಹುದು. ಆದರೆ, ಇಟಿಐಎಂ ಮಾತ್ರ ಆತಂಕಕ್ಕೆ ಕಾರಣವಾಗಿದೆ ಎಂದು ವಿದೇಶಿ ವ್ಯವಹಾರಗಳ ಮೇಲೆ ಗಮನವಿಟ್ಟಿರುವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಚೀನಾಕ್ಕೆ ತಲೆನೋವಾಗಿರುವುದೇಕೆ ಇಟಿಐಎಂ?

‘ಇಟಿಐಎಂ ಹಿಂಸಾತ್ಮಕ ಭಯೋತ್ಪಾದನೆಯಲ್ಲಿ ತೊಡಗಿದೆ. 1990ರ ದಶಕದಲ್ಲಿ ಹಲವಾರು ಸಾವುನೋವುಗಳಿಗೆ ಇಟಿಐಎಂ ಕಾರಣವಾಗಿದೆ’ ಎಂದು ಚೀನಾ ಹೇಳುತ್ತಿದೆ. ಈ ಆರೋಪಕ್ಕೆ ಪ್ರತಿಯಾಗಿ, ಉಯ್ಗರ್‌ ಮುಸ್ಲಿಮರ ಮೇಲಿನ ಚೀನಾ ದೌರ್ಜನ್ಯವನ್ನು ಇಟಿಐಎಂ ಎತ್ತಿ ತೋರಿಸಲಾರಂಭಿಸಿದೆ

ವಿಶ್ವ ಸಂಸ್ಥೆ ವರದಿಗಳ ಪ್ರಕಾರ ಚೀನಾದ ಷಿಂಜಿಯಾಂಗ್, ಚೀನಾ - ಪಾಕಿಸ್ತಾನ ಆರ್ಥಿಕ ಕಾರಿಡಾರ್ ಹಾಗೂ ಚಿತ್ರಾಲ್ ಅನ್ನು ಗುರಿಯಾಗಿಸಲು ಇಟಿಐಎಂ ಅಂತಾರಾಷ್ಟ್ರೀಯ ಕಾರ್ಯಸೂಚಿಯೊಂದನ್ನು ಹೊಂದಿದೆ. ಇದು ಚೀನಾ, ಪಾಕಿಸ್ತಾನ ಸೇರಿದಂತೆ ಕೆಲ ದೇಶಗಳಿಗೆ ಮುಖ್ಯ ಬೆದರಿಕೆಯಾಗಿದೆ.

ವರದಿಯ ಪ್ರಕಾರ, ಪ್ರಸ್ತುತ ಹಲವಾರು ಸದಸ್ಯರನ್ನು ಹೊಂದಿರುವ ಇಟಿಐಎಂ, ಬಡಕ್ಷಾನ್ ಮತ್ತು ನೆರೆಯ ಅಫ್ಗನ್‌ ಪ್ರಾಂತ್ಯಗಳಲ್ಲಿ ಬೇರೂರಿದೆ.

ಇಟಿಐಎಂ ಎಂದರೇನು?

‘ಅಲ್ ಖೈದಾ’ದಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಇಟಿಐಎಂ ಸಂಬಂಧ ಹೊಂದಿದೆ. ಸಂಘಟನೆಯನ್ನು 2002 ರಲ್ಲಿ ವಿಶ್ವಸಂಸ್ಥೆಯು ಭಯೋತ್ಪಾದಕ ಪಟ್ಟಿಯಲ್ಲಿ ಸೇರಿಸಿದೆ. ಆದರೆ ಅಮೆರಿಕವು ಈ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಗಳ ಪಟ್ಟಿಯಿಂದ ಕೈಬಿಟ್ಟಿದೆ. ಡೊನಾಲ್ಡ್ ಟ್ರಂಪ್ ಆಡಳಿತದ ಅವಧಿಯಲ್ಲಿ 2020ರ ನವೆಂಬರ್‌ನಲ್ಲಿ ಇಟಿಐಎಂ ಅನ್ನು ಭಯೋತ್ಪಾದನಾ ಪಟ್ಟಿಯಿಂದ ಅಮೆರಿಕವು ತೆಗೆದು ಹಾಕಿತು. ಅಮೆರಿಕದ ಈ ನಿರ್ಧಾರವನ್ನು ಉಯ್ಗರ್‌ ಸಮುದಾಯವು ಶ್ಲಾಘಿಸಿತ್ತು ಎಂದು ‘ಅಬ್ಸರ್ವರ್ ರಿಸರ್ಚ್ ಫೌಂಡೇಶನ್’ ಹೇಳಿದೆ.

ಉಯ್ಗರ್‌ ವಿರುದ್ಧದ ಹೋರಾಟವನ್ನು ತನ್ನ ಮುಖ್ಯ ಭಯೋತ್ಪಾದನಾ ಹೋರಾಟ ಎಂದು ಚೀನಾ ಘೋಷಿಸಿದೆ. ಅದನ್ನು ಎದುರಿಸಲು ಯುದ್ಧೋಪಕರಣಗಳನ್ನು ನಿಯೋಜಿಸಿದೆ ಎಂದು ‘ಅಬ್ಸರ್ವರ್ ರಿಸರ್ಚ್ ಫೌಂಡೇಶನ್’ ಹೇಳಿದೆ. ಇತ್ತೀಚೆಗೆ ಇಟಿಐಎಂ ಹೋರಾಟಗಾರರು ಇಸ್ಲಾಮಿಕ್ ಸ್ಟೇಟ್–ಐಎಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇಟಿಐಎಂ ಕಾಲಕಾಲಕ್ಕೆ ಚೀನಿಯರ ಮೇಲೆ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿದೆ.

ಇಟಿಐಎಂ ಅಫ್ಗಾನಿಸ್ತಾನ ತೊರೆದಿದೆ: ಚೀನಾಕ್ಕೆ ತಾಲಿಬಾನ್‌ ಭರವಸೆ

ಪೂರ್ವ ತುರ್ಕಸ್ತಾನ್ ಇಸ್ಲಾಮಿಕ್ ಚಳವಳಿ (ಇಟಿಐಎಂ)ಯ ಉಯ್ಗರ್ ಉಗ್ರಗಾಮಿ ಗುಂಪು ಅಫ್ಗಾನಿಸ್ತಾನ ತೊರೆದಿದೆ ಎಂದು ತಾಲಿಬಾನ್‌ಗಳು ಚೀನಾಕ್ಕೆ ಭರವಸೆ ನೀಡಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು