ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ: ಮೀಸಲು ಹೋರಾಟಗಳ ಸಾಲು ಸಾಲು

‘ನ್ಯಾಯ’ಕ್ಕಾಗಿ ಅಲಕ್ಷಿತ ಸಮುದಾಯಗಳ ಕೂಗು
Last Updated 19 ಫೆಬ್ರುವರಿ 2021, 22:53 IST
ಅಕ್ಷರ ಗಾತ್ರ

ರಾಜ್ಯದಲ್ಲಿ ರಾಜಕೀಯ ಮತ್ತು ಸಾಮಾಜಿಕವಾಗಿ ಬಲಾಢ್ಯವಾಗಿರುವ ಜಾತಿಗಳಲ್ಲಿ ಹಲವು ಮೀಸಲಾತಿಯ ವಿಚಾರದಲ್ಲಿ ಹೋರಾಟಕ್ಕೆ ಇಳಿದಿವೆ. ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಕಾರ್ಯತಂತ್ರ ಅನುಸರಿಸುತ್ತಿವೆ. ಮೀಸಲು ಹೋರಾಟದ ಒಳಹೊರಗನ್ನು ಬಿಚ್ಚಿಡುವ ‘ಅನುಭವ ಮಂಟಪ’ ಸರಣಿ ಇಂದು ಆರಂಭ

***

ರಾಜ್ಯದಲ್ಲಿ ಜನಸಂಖ್ಯೆ, ರಾಜಕೀಯ ಮತ್ತು ಸಾಮಾಜಿಕವಾಗಿ ಪ್ರಬಲವಾಗಿರುವ ಕುರುಬ, ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಗಳು ಹೆಚ್ಚಿನ ಮೀಸಲಾತಿಗೆ ಆಗ್ರಹಿಸಿ ಹೋರಾಟಕ್ಕೆ ಇಳಿದಿವೆ.

ದಶಕಗಳಿಂದ ನನೆಗುದಿಗೆ ಬಿದ್ದಿರುವ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಹಂಚಿಕೆ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣದ ಹೆಚ್ಚಳದ ಬೇಡಿಕೆಗಳೂ ಹಿಂದಿಗಿಂತ ಹೆಚ್ಚು ಬಲ ಪಡೆದಿವೆ. ಈ ಎಲ್ಲವುಗಳ ಬೆನ್ನಲ್ಲೇ ದಿನಕ್ಕೊಂದರಂತೆ ಹೊಸ ಹೊಸ ಸಮುದಾಯಗಳು ಮೀಸಲಾತಿಯಲ್ಲಿ ಬದಲಾವಣೆಗೆ ಬೇಡಿಕೆ ಮಂಡಿಸುತ್ತಿವೆ. ಇದು ಮೀಸಲಾತಿ ಸೌಲಭ್ಯದ ಅನುಷ್ಠಾನದಲ್ಲಿ ಶತಮಾನದ ಇತಿಹಾಸವಿರುವ ರಾಜ್ಯದಲ್ಲಿ ಗೊಂದಲ ಮತ್ತು ಹೊಸ ಬಿಕ್ಕಟ್ಟು ಸೃಷ್ಟಿಗೆ ನಾಂದಿ ಹಾಡಿದಂತೆ ಕಾಣಿಸುತ್ತಿದೆ.

ರಾಜಕೀಯ, ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಪ್ರಬಲವಾಗಿರುವ ಸಮುದಾಯಗಳು ಈಗ ಇರುವುದಕ್ಕಿಂತಲೂ ಹಿಂದುಳಿದಿರುವ ಜಾತಿಗಳ ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆಯನ್ನು ಸರಣಿಯೋಪಾದಿಯಲ್ಲಿ ಮಂಡಿಸುತ್ತಿರುವುದು ರಾಜ್ಯ ಸರ್ಕಾರದ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಮಠಾಧೀಶರು, ರಾಜಕಾರಣಿಗಳು ನೇರವಾಗಿ ಮೀಸಲಾತಿ ಹೋರಾಟದ ಅಖಾಡಕ್ಕೆ ಇಳಿದಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿದ್ದರೂ ಅಂಚಿನಲ್ಲೇ ಉಳಿದಿರುವ ಹಲವು ಜಾತಿ, ಉಪ ಜಾತಿಗಳ ಜನರು ‘ಬಲಿಷ್ಠ’ ಸಮುದಾಯಗಳ ನಡೆಯಿಂದ ಕಂಗಾಲಾಗಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ರಾಜ್ಯದಲ್ಲಿ ಶೇಕಡ 50ರಷ್ಟು ಮೀಸಲಾತಿ ಜಾರಿಯಲ್ಲಿದೆ. ಸದ್ಯದ ಸ್ಥಿತಿಯಲ್ಲಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಅವಕಾಶಗಳಿಲ್ಲ. ವಿವಿಧ ಸಮುದಾಯಗಳು ಮುಂದಿಟ್ಟಿರುವ ಬೇಡಿಕೆಯನ್ನು ಈಡೇರಿಸಬೇಕಾದರೆ ಇರುವ ಶೇ 50ರ ಮೀಸಲಾತಿಯ ಹಂಚಿಕೆಯಲ್ಲಿ ಬದಲಾವಣೆ ಮಾಡಬೇಕಿದೆ. ಮೀಸಲಾತಿ ಪಟ್ಟಿಯಲ್ಲಿ ವಿವಿಧ ಪ್ರವರ್ಗಗಳಿಗೆ ಪ್ರಬಲ ಸಮುದಾಯಗಳನ್ನು ಸೇರಿಸಿದಲ್ಲಿ ಸಾಮಾಜಿಕ ನ್ಯಾಯದ ಸಮೀಕರಣವೇ ಬದಲಾಗಬಹುದು ಎಂಬ ಆತಂಕವೂ ದಟ್ಟವಾಗುತ್ತಿದೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಉಪ್ಪಾರ, ಗಾಣಿಗ, ಗಂಗಾಮತಸ್ಥ,ಸವಿತಾ ಸಮಾಜ, ಮಡಿವಾಳ ಮತ್ತಿತರ ಸಣ್ಣ ಸಮುದಾಯಗಳು ಕೂಡ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಸಜ್ಜಾಗುತ್ತಿವೆ.

ಪರಿಶಿಷ್ಟ ಜಾತಿಗೆ ನೀಡಿರುವ ಶೇ 15ರ ಮೀಸಲಾತಿಯನ್ನು ಎಲ್ಲ ಉಪ ಜಾತಿಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡುವ ಮೂಲಕ ಒಳ ಮೀಸಲು ನಿಗದಿ ಮಾಡಬೇಕೆಂಬ ಹೋರಾಟವನ್ನು ಮತ್ತಷ್ಟು ಬಲಗೊಳಿಸಲು ಮಾದಿಗ ಸಮುದಾಯ ಹೆಜ್ಜೆ ಇಟ್ಟಿದೆ. ಪರಿಶಿಷ್ಟ ಪಂಗಡಗಳಿಗೆ ನೀಡಿರುವ ಮೀಸಲಾತಿಯ ಪ್ರಮಾಣವನ್ನು ಶೇ 3ರಿಂದ ಶೇ 7.5ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿ ಒಂದು ಸುತ್ತಿನ ಪಾದಯಾತ್ರೆ ನಡೆಸಿರುವ ವಾಲ್ಮೀಕಿ ಸಮುದಾಯ, ಎರಡನೇ ಹಂತದ ಹೋರಾಟಕ್ಕೆ ಅಣಿಯಾಗುತ್ತಿದೆ. ವೀರಶೈವ– ಲಿಂಗಾಯತ ಸಮುದಾಯದ ಎಲ್ಲ ಉಪ ಜಾತಿಗಳನ್ನೂ ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಯನ್ನು ಆ ಸಮುದಾಯಗಳ ನೂರಾರು ಮಠಾಧೀಶರು ಒಗ್ಗೂಡಿ ರಾಜ್ಯ ಸರ್ಕಾರಕ್ಕೆ ರವಾನಿಸಿದ್ದಾರೆ.

ಪ್ರಬಲರ ಸೇರ್ಪಡೆಗೆ ವಿರೋಧ
ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಇತರ ಪ್ರವರ್ಗಗಳಲ್ಲಿರುವ ಪ್ರಬಲ ಸಮುದಾಯಗಳ ಸೇರ್ಪಡೆಗೆ ವಿರೋಧವೂ ಇದೆ. ಪಂಚಮಸಾಲಿ ಸಮುದಾಯವನ್ನು ಪ್ರವರ್ಗ ‘2ಎ’ ಪಟ್ಟಿಗೆ ಸೇರಿಸುವುದಕ್ಕೆ ಈಡಿಗರು ಮತ್ತು ನೇಕಾರ ಸಮುದಾಯಗಳು ಈಗಾಗಲೇ ತಮ್ಮ ವಿರೋಧವನ್ನು ದಾಖಲಿಸಿವೆ.

ಕುರುಬರನ್ನು ಎಸ್‌.ಟಿ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಯ ಕುರಿತೂ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ ಹಲವು ಸಮುದಾಯಗಳಿಗೆ ವಿರೋಧವಿದೆ. ಆದರೆ, ರಾಜ್ಯ ಸರ್ಕಾರದ ನಡೆಯನ್ನು ಆಧರಿಸಿ ಪ್ರತಿಕ್ರಿಯಿಸಲು ಸಜ್ಜಾಗುತ್ತಿವೆ ಎಂಬ ಮಾತು ಕೇಳಿಬರುತ್ತಿದೆ.

ರಾಜಕೀಯ ನಂಟು
ಬಹುಪಾಲು ಸಮುದಾಯಗಳು ಹೆಚ್ಚಿನ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟದ ನೇತೃತ್ವವನ್ನು ಆಯಾ ಸಮುದಾಯದ ಮಠಾಧೀಶರೇ ವಹಿಸಿಕೊಂಡಿದ್ದಾರೆ. ಆದರೆ, ರಾಜಕೀಯ ನಾಯಕರೂ ಈ ಎಲ್ಲ ಹೋರಾಟಗಳ ಜತೆ ನಿಕಟ ನಂಟು ಹೊಂದಿದ್ದಾರೆ. ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಕುರುಬರ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಸಚಿವರಾದ ಎಂ.ಟಿ.ಬಿ. ನಾಗರಾಜ್‌, ಆರ್‌. ಶಂಕರ್‌, ಜೆಡಿಎಸ್‌ ಶಾಸಕ ಬಂಡೆಪ್ಪ ಕಾಶೆಂಪುರ ಸೇರಿದಂತೆ ಹಲವು ನಾಯಕರು ನೇರವಾಗಿ ಸಮುದಾಯದ ಬೇಡಿಕೆಗೆ ಬೆಂಬಲ ಸೂಚಿಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೋರಾಟದಿಂದ ದೂರ ಉಳಿದಿದ್ದರೂ, ವಿರೋಧವನ್ನೇನೂ ವ್ಯಕ್ತಪಡಿಸಿಲ್ಲ.

ಸಚಿವರಾದ ರಮೇಶ ಜಾರಕಿಹೊಳಿ, ಬಿ. ಶ್ರೀರಾಮುಲು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ವಾಲ್ಮೀಕಿ ಸಮುದಾಯದ ಹೋರಾಟದಲ್ಲಿ ನೇರವಾಗಿ ಗುರುತಿಸಿಕೊಂಡಿದ್ದಾರೆ. ಪಂಚಸಾಲಿ ಸಮುದಾಯದ ಬೇಡಿಕೆಯ ಪರವಾಗಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಹಲವರು ಧ್ವನಿ ಎತ್ತಿದ್ದಾರೆ. ಸಚಿವರಾದ ಜಗದೀಶ ಶೆಟ್ಟರ್, ಸಿ.ಸಿ. ಪಾಟೀಲ, ಲಕ್ಷ್ಮಣ ಸವದಿ, ಮುರುಗೇಶ ನಿರಾಣಿ ಸೇರಿದಂತೆ ಸಂಪುಟದ ಸದಸ್ಯರೂ ಬೆಂಬಲ ಸೂಚಿಸಿದ್ದಾರೆ.

ಎಸ್‌.ಟಿ ಸ್ಥಾನಮಾನಕ್ಕೆ ಕುರುಬರ ಪಟ್ಟು
ಹಿಂದುಳಿದ ವರ್ಗಗಳಲ್ಲಿ ಅತಿದೊಡ್ಡ ಸಮುದಾಯವಾಗಿರುವ ಕುರುಬರು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವಂತೆ ಪಟ್ಟು ಹಿಡಿದಿದ್ದಾರೆ. ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೋರಾಟದ ನೇತೃತ್ವ ವಹಿಸಿದ್ದು, ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆಯನ್ನೂ ನಡೆಸಿದ್ದಾರೆ. ಕೊಡಗು ಜಿಲ್ಲೆಯ ಕುರುಬರಿಗೆ ಎಸ್‌.ಟಿ ಸ್ಥಾನಮಾನ ನೀಡಿರುವುದು, ಜೇನು ಕುರುಬ, ಕಾಡು ಕುರುಬ ಮತ್ತು ಗೊಂಡ ಸಮುದಾಯಗಳನ್ನು ಎಸ್‌.ಟಿ ಪಟ್ಟಿಗೆ ಸೇರಿಸಿರುವುದನ್ನು ಆಧಾರವಾಗಿಟ್ಟುಕೊಂಡು ಕುರುಬರು ಹೋರಾಟ ಆರಂಭಿಸಿದ್ದಾರೆ. ‘ಕುರುಮಾನ್‌’ ಜಾತಿಗೆ ಸಮಾನವಾಗಿ ಕರ್ನಾಟಕದಲ್ಲಿ ಕುರುಬ ಮತ್ತು ಅದರ ಎಲ್ಲ ಉಪ ಜಾತಿಗಳನ್ನೂ ಎಸ್‌.ಟಿ ಪಟ್ಟಿಗೆ ಸೇರಿಸಬೇಕು ಎಂಬುದು ಬೇಡಿಕೆ. ಈ ಕುರಿತು ರಾಜ್ಯ ಸರ್ಕಾರದ ಆದೇಶದಂತೆ ಮೈಸೂರಿನ ಬುಡಕಟ್ಟುಗಳ ಅಧ್ಯಯನ ಸಂಸ್ಥೆ ಕುಲ ಶಾಸ್ತ್ರೀಯ ಅಧ್ಯಯನ ನಡೆಸುತ್ತಿದೆ.

‘2ಎ’ ಸೇರುವ ತವಕ
ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರದ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಆರಂಭವಾಗಿರುವ ಪಾದಯಾತ್ರೆ ಬೆಂಗಳೂರು ತಲುಪಿದೆ. ಪಂಚಮ ಸಾಲಿ ಸಮುದಾಯವನ್ನು ಪ್ರವರ್ಗ ‘2ಎ’ ಪಟ್ಟಿಗೆ ಸೇರಿಸುವ ಕುರಿತು ಅಧ್ಯಯನ ನಡೆಸಿ, ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಆದೇಶಿಸಿದ್ದಾರೆ. ಆದರೆ, ಅಧ್ಯಯನದ ಅಗತ್ಯವಿಲ್ಲ ಎಂದು ಪ್ರತಿಪಾದಿಸಿರುವ ಮಠಾಧೀಶರು ಮತ್ತು ಸಮುದಾಯದ ರಾಜಕೀಯ ನಾಯಕರು ತಕ್ಷಣವೇ ಆದೇಶ ಹೊರಡಿಸಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಆರು ವರ್ಷಗಳಿಂದ ಬಾಕಿ
ಗಂಗಾಮತಸ್ಥರು ಮತ್ತು ಕಾಡು ಗೊಲ್ಲ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವಂತೆ ರಾಜ್ಯ ಸರ್ಕಾರ 2014ರಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಪ್ರಸ್ತಾವ ಕೇಂದ್ರ ಸರ್ಕಾರದಲ್ಲೇ ಬಾಕಿ ಉಳಿದಿದೆ. ಗಂಗಾಮತಸ್ಥ ಸಮುದಾಯಕ್ಕೆ ಸಂಬಂಧಿಸಿದಂತೆ ಫೆಬ್ರುವರಿಯಲ್ಲೂ ರಾಜ್ಯ ಸರ್ಕಾರ ಹೆಚ್ಚುವರಿ ದಾಖಲೆಗಳನ್ನು ಕೇಂದ್ರಕ್ಕೆ ಸಲ್ಲಿಸಿದೆ.

ಶೇ 7.5ರ ಮೀಸಲಾತಿಗೆ ಆಗ್ರಹ
ಪರಿಶಿಷ್ಟ ಪಂಗಡಗಳಿಗೆ ನೀಡಿರುವ ಮೀಸಲಾತಿಯ ಪ್ರಮಾಣವನ್ನು ಶೇ 3ರಿಂದ ಶೇ 7.5ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ವಾಲ್ಮೀಕಿ ಸಮುದಾಯ ಹೋರಾಟ ನಡೆಸುತ್ತಿದೆ. ರಾಜನಹಳ್ಳಿಯ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನವರೆಗೂ ಮೊದಲ ಹಂತದ ಪಾದಯಾತ್ರೆ ನಡೆದಿದೆ. ಈ ಬೇಡಿಕೆಗೆ ಪೂರಕವಾಗಿ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ನೇತೃತ್ವದ ಆಯೋಗ ಸಲ್ಲಿಸಿರುವ ವರದಿ, ಸಂಪುಟ ಉಪ ಸಮಿತಿಯ ಪರಿಶೀಲನೆಯಲ್ಲಿದೆ.

ಹೋರಾಟಕ್ಕೆ ಸಜ್ಜು
ಒಕ್ಕಲಿಗ ಸಮುದಾಯದ ಎಲ್ಲ 115 ಉಪ ಜಾತಿಗಳನ್ನೂ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಹೋರಾಟ ಆರಂಭಿಸಲು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಿದ್ಧತೆ ನಡೆಸಿದ್ದಾರೆ. ಹೋರಾಟದ ರೂಪರೇಷೆ ಸಿದ್ಧಪಡಿಸಲು ಮತ್ತು ಬೇಡಿಕೆ ಪಟ್ಟಿ ರೂಪಿಸಲು ಎರಡು ಸಮಿತಿಗಳನ್ನೂ ರಚಿಸಿದ್ದಾರೆ.

ಒಳ ಮೀಸಲು ನನೆಗುದಿಗೆ
ಪರಿಶಿಷ್ಟ ಜಾತಿಗೆ ನಿಗದಿಪಡಿಸಿರುವ ಶೇಕಡ 15ರ ಮೀಸಲಾತಿಯನ್ನು ಸಮುದಾಯದ 101 ಉಪ ಜಾತಿಗಳಿಗೂ ಹಂಚಿಕೆ ಮಾಡುವಂತೆ ದಶಕಗಳಿಂದಲೂ ಹೋರಾಟ ನಡೆಯುತ್ತಿದೆ. ಮಾದಿಗ ಮತ್ತು ಆದಿಜಾಂಬವ ಸಮುದಾಯಗಳು ಈ ಹೋರಾಟದ ಮುಂಚೂಣಿಯಲ್ಲಿವೆ. ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲು ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ನೇತೃತ್ವದ ಆಯೋಗ ನೀಡಿರುವ ವರದಿ ರಾಜ್ಯ ಸರ್ಕಾರದ ಮುಂದಿದೆ.

ಕೈಗೂಡದ ಯತ್ನಗಳು
ಸಾದರ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ ಪಟ್ಟಿಗೆ ಸೇರಿಸುವ ಪ್ರಯತ್ನ 2009 ಮತ್ತು 2010ರಲ್ಲಿ ನಡೆದಿತ್ತು. ಕೆಲವು ಜಿಲ್ಲಾಧಿಕಾರಿಗಳು ಸಾದರ ಲಿಂಗಾಯತರಿಗೆ ‘2ಎ’ ಜಾತಿ ಪ್ರಮಾಣಪತ್ರಗಳನ್ನೂ ವಿತರಿಸಿದ್ದರು. ಆದರೆ, ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರು, ಪ್ರಬಲ ವಿರೋಧ ವ್ಯಕ್ತವಾದ ಕಾರಣ ಈ ನಿರ್ಧಾರವನ್ನು ಹಿಂಪಡೆದಿದ್ದರು.

ಶಿಕ್ಷಣಕ್ಕೆ ಸೀಮಿತವಾಗಿ ಬಲಿಜ ಸಮುದಾಯವನ್ನು ‘2ಎ’ ಪಟ್ಟಿಗೆ ಸೇರಿಸುವ ತೀರ್ಮಾನವನ್ನು 2011ರಲ್ಲಿ ಕೈಗೊಳ್ಳಲಾಗಿತ್ತು. ಅದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ. ಈ ವಿಚಾರದಲ್ಲೂ ಯಾವುದೇ ಬದಲಾವಣೆ ಜಾರಿಗೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT