ಭಾನುವಾರ, ಆಗಸ್ಟ್ 1, 2021
25 °C

Explainer| ನೆಮ್ಮದಿ ಕಸಿದ ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾವಿಗೆ ಕಾರಣವಾಗಬಲ್ಲಷ್ಟು ಅಪಾಯಕಾರಿಯಾದ ಕೊರೊನಾ ವೈರಸ್‌ ದೂರದ ಚೀನಾದಲ್ಲಷ್ಟೇ ಇದೆ ಎಂದು ಜಗತ್ತಿನ ಜನ ನಿರಾಳರಾಗುವ ಸ್ಥಿತಿ ಈಗ ಇಲ್ಲ. 20ಕ್ಕೂ ಹೆಚ್ಚು ದೇಶಗಳಿಗೆ ಸೋಂಕು ವ್ಯಾಪಿಸಿದೆ. ಭಾರತಕ್ಕೂ ಕಾಲಿಟ್ಟಿದೆ. ವುಹಾನ್‌ನಲ್ಲಿ ಕಲಿಯುತ್ತಿದ್ದ ಭಾರತದ ವಿದ್ಯಾರ್ಥಿನಿಗೆ ಸೋಂಕು ತಗುಲಿದೆ. ಕೇರಳದಲ್ಲಿ ಮಾತ್ರವಲ್ಲದೆ, ದೇಶದ ಎಲ್ಲೆಡೆಯೂ ಕಟ್ಟೆಚ್ಚರ ವಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ

ಪಕ್ಕದ ಕೇರಳದಲ್ಲಿ ಕೊರೊನಾ ವೈರಸ್ ಪ್ರಕರಣ ವರದಿಯಾದ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಈ ಸೋಂಕಿನ ಭೀತಿ ಶುರುವಾಗಿದೆ. 

ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿದ್ದ ಈ ಸೋಂಕು ಭಾರತಕ್ಕೆ ಪ್ರವೇಶಿಸಿ‌ದ ಬೆನ್ನಲ್ಲಿಯೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ವೈದ್ಯರ ಜತೆಗೆ ಗುರುವಾರ ಸಭೆ ನಡೆಸಿ, ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಚೀನಾದಿಂದ ಬಂದ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಲಾಗುತ್ತಿದೆ. ಅಲ್ಲಿನ ವುಹಾನ್ ನಗರದ ಪ್ರಜೆಗಳು ಇಲ್ಲಿಂದ ತೆರಳುವವರೆಗೂ ಅವರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ನಿತ್ಯ ಮಾಹಿತಿ ಕಲೆ ಹಾಕುವಂತೆ ಆರೋಗ್ಯ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣ ಈವರೆಗೂ ವರದಿಯಾಗಿಲ್ಲ. 

‘ಚೀನಾದಿಂದ ವಾಪಸಾದ ನಾಲ್ವರು ವಿದ್ಯಾರ್ಥಿಗಳ ಪೈಕಿ ಒಬ್ಬರಿಗೆ ಸೋಂಕು ಇರುವುದು ತಪಾಸಣೆಯಿಂದ ಖಚಿತಪಟ್ಟಿದೆ. ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ 49 ಮಾದರಿಗಳನ್ನು ಕಳುಹಿಸಲಾಗಿತ್ತು. ಈ ಪೈಕಿ 10 ಮಾದರಿಗಳ ಫಲಿತಾಂಶವನ್ನು ನಿರೀಕ್ಷಿಸ ಲಾಗುತ್ತಿದೆ’ ಎಂದು ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಹೇಳಿದ್ದಾರೆ.

ದೆಹಲಿಯಲ್ಲಿ ಆತಂಕ: ಉಸಿರಾಟದ ತೊಂದರೆಯಿಂದ ದೆಹಲಿಯ ರಾಮ್‌ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದ ಮೂವರ ಮೇಲೆ ತೀವ್ರ ನಿಗಾ ಇಡಲಾಗಿತ್ತು. ವೈರಸ್ ಸೋಂಕು ಪತ್ತೆಯಾಗದ ಕಾರಣ ಅವರನ್ನು ಗುರುವಾರ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಈ ಪೈಕಿ ಇಬ್ಬರು ವ್ಯವಹಾರದ ಕೆಲಸದ ನಿಮಿತ್ತ ಚೀನಾಕ್ಕೆ ತೆರಳಿ ವಾಪಸಾಗಿದ್ದರು. ಮತ್ತೊಬ್ಬ ವಿದ್ಯಾರ್ಥಿ. ಸೋಂಕು ವ್ಯಾಪಿಸುತ್ತಿರುವ ಕಾರಣ, ಚೀನಾ ಪ್ರವಾಸ ವನ್ನು ಮುಂದೂಡುವಂತೆ ಅಥವಾ ರದ್ದುಪಡಿಸುವಂತೆ ಭಾರತೀಯರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. 

ಮಲೇಷ್ಯಾದಲ್ಲಿ ತ್ರಿಪುರಾ ಯುವಕ ಸಾವು?: ಕೊರೊನಾ ವೈರನಸ್‌ಗೆ ಈಶಾನ್ಯ ಭಾರತದ ಯುವಕ ಬಲಿಯಾಗಿದ್ದಾನೆ. ತ್ರಿಪುರಾದ 22 ವರ್ಷದ ಮುನೀರ್ ಹುಸೈನ್ ಎಂಬವರು ಮಲೇಷ್ಯಾದ ಆಸ್ಪತ್ರೆಯಲ್ಲಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ಗುರುವಾರ ತಿಳಿಸಿವೆ. ಆದರೆ ತ್ರಿಪುರಾ ಸರ್ಕಾರ ಇದನ್ನು ದೃಢಪಡಿಸಿಲ್ಲ.

2018ರಿಂದ ಮಲೇಷ್ಯಾದ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮುನೀರ್ ಮೃತಪಟ್ಟ ವಿಷಯವನ್ನು ಕುಟುಂಬಕ್ಕೆ ದೂರವಾಣಿ ಮೂಲಕ ತಿಳಿಸಲಾಗಿದೆ.

ವುಹಾನ್‌ನಿಂದ ಕರೆತರುವ ಧಾವಂತ

-ಸೋಂಕು ಪೀಡಿತ ವುಹಾನ್‌ನಿಂದ ತಮ್ಮ ದೇಶದ ನಾಗರಿಕರನ್ನು ಕರೆಸಿಕೊಂಡ ಅಮೆರಿಕ, ಜಪಾನ್

-ಚೀನಾದಿಂದ ಅನುಮತಿ ದೊರೆಯದ ಕಾರಣ ಅಲ್ಲಿನ 200ಕ್ಕೂ ಹೆಚ್ಚು ನಾಗರಿಕರನ್ನು ಕರೆತರುವ ಬ್ರಿಟನ್ ಯತ್ನ ವಿಳಂಬ

-ತಮ್ಮ ನಾಗರಿಕರನ್ನು ಚೀನಾದಿಂದ ಕರೆಸಿಕೊಳ್ಳಲು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸಿಂಗಪುರ, ದಕ್ಷಿಣ ಕೊರಿಯಾ, ಫ್ರಾನ್ಸ್ ಮೊದಲಾದ ದೇಶಗಳ ಸಿದ್ಧತೆ

-ಚೀನಾದಲ್ಲಿರುವ ತನ್ನ ದೇಶದ 400 ನಾಗರಿಕರನ್ನು ಕಳುಹಿಸಿಕೊಡುವಂತೆ ಥಾಯ್ಲೆಂಡ್ ಮನವಿ

-ಸೋಂಕು ಹರಡದಂತೆ ತಡೆಯಲು ಚೀನಾ ಗಡಿಯನ್ನು ಬಂದ್‌ ಮಾಡಿ ರಷ್ಯಾ

ವಿಮಾನ ಹಾರಾಟ ರದ್ದು/ಸ್ಥಗಿತ

-ಇಂಡಿಗೊ: ಬೆಂಗಳೂರು–ಹಾಂಗ್‌ಕಾಂಗ್ ಹಾಗೂ ದೆಹಲಿ–ಚೆಂಗ್ಡು ಮಾರ್ಗ ಫೆ.1ರಿಂದ ರದ್ದು; ಕೋಲ್ಕತ್ತ–ಗುವಾಂಗ್‌ಜೌ ಮಾರ್ಗ ಮುಂದುವರಿಕೆ

-ಏರ್ ಇಂಡಿಯಾ: ಮುಂಬೈ–ದೆಹಲಿ–ಶಾಂಘೈ ಮಾರ್ಗದ ವಿಮಾನ ಫೆಬ್ರುವರಿ 14ರವರೆಗೆ ಸ್ಥಗಿತ. ದೆಹಲಿ–ಹಾಂಗ್‌ಕಾಂಗ್ ಮಾರ್ಗದ ವಿಮಾನಗಳ ಸಂಖ್ಯೆ ಕಡಿತ

-ಏರ್ ಏಷ್ಯಾ: ಮಲೇಷ್ಯಾ, ಬ್ಯಾಂಕಾಕ್, ಥಾಯ್ಲೆಂಡ್‌ನಿಂದ ಚೀನಾದ ವುಹಾನ್‌ಗೆ– ಫೆಬ್ರುವರಿ ಕೊನೆಯವರೆಗೆ ರದ್ದು

-ಏರ್ ಫ್ರಾನ್ಸ್: ಬೀಜಿಂಗ್, ಹಾಂಗ್‌ಕಾಂಗ್‌ಗೆ ತೆರಳುವ ಫ್ರಾನ್ಸ್ ವಿಮಾನಗಳು ಶುಕ್ರವಾರದಿಂದ ಸ್ಥಗಿತ

-ಅಮೆರಿಕನ್ ಏರ್‌ಲೈನ್ಸ್: ಲಾಸ್ ಏಂಜಲೀಸ್‌ನಿಂದ ಬೀಜಿಂಗ್ ಹಾಗೂ ಶಾಂಘೈಗೆ ತೆರಳುವ ವಿಮಾನಗಳು ಫೆ.9ರಿಂದ ಮಾ.27ರವರೆಗೆ ರದ್ದು

-ಬ್ರಿಟಿಷ್ ಏರ್‌ವೇಸ್: ಲಂಡನ್‌ನಿಂದ ಶಾಂಘೈ, ಬೀಜಿಂಗ್‌ಗೆ ನಿತ್ಯ ತೆರಳುವ ಎಲ್ಲ ವಿಮಾನಗಳ ಹಾರಾಟ ರದ್ದು

-ಡೆಲ್ಟಾ ಏರ್‌ಲೈನ್ಸ್: ಅಮೆರಿಕದಿಂದ ಚೀನಾಗೆ ವಾರವೊಂದರಲ್ಲಿ ತೆರಳುತ್ತಿದ್ದ ವಿಮಾನಗಳ ಸಂಖ್ಯೆ 42ರಿಂದ 21ಕ್ಕೆ ಕಡಿತ. ಫೆ.6ರಿಂದ ಏಪ್ರಿಲ್‌ವರೆಗೆ ಅನ್ವಯ

-ಇಸ್ರೇಲಿ ಏರ್‌ಲೈನ್ಸ್: ಬೀಜಿಂಗ್‌ಗೆ ಮಾರ್ಚ್ 25ರವರೆಗೆ ಪ್ರಯಾಣ ಇಲ್ಲ; ಉಳಿದ ನಗರಗಳಿಗೆ ಮುಂದುವರಿಕೆ

-ಲಯನ್ ಏರ್: ಫೆ.1ರಿಂದ ಚೀನಾದ 15 ನಗರಗಳಿಗೆ ಹಾರಾಟ ಸ್ಥಗಿತ

-ಲುಫ್ತಾನ್ಸಾ: ಫೆ.9ರವರೆಗೆ ಚೀನಾಗೆ ಹಾರಾಟ ಸ್ಥಗಿತ

-ಉರಲ್ಸ್ ಏರ್‌ಲೈನ್ಸ್: ರಷ್ಯಾದ ವಿಮಾನಗಳು ಈಗಾಗಲೇ ಸ್ಥಗಿತ; ಯುರೋಪ್ ಮೂಲಕ ಚೀನಾಗೆ ತೆರಳು ಮಾರ್ಗಗಳ ಸಂಚಾರ ಕಡಿತ

-ಹಾಂಗ್‌ಕಾಂಗ್: ಚೀನಾಗೆ ತೆರಳುವ ಶೇ 50ರಷ್ಟು ವಿಮಾನಗಳ ಹಾರಾಟವನ್ನು ಮಾರ್ಚ್ ಕೊನೆಯವರೆಗೆ ಕಡಿತಗೊಳಿಸಲು ನಿರ್ಧಾರ

ಚೀನಾದ ಜೈವಿಕ ಅಸ್ತ್ರವೇ?

ಜೈವಿಕ ಅಸ್ತ್ರವಾಗಿ ಚೀನಾ ಅಭಿವೃದ್ಧಿಪಡಿಸಿದ್ದ ಕೊರೊನಾ ವೈರಸ್‌ ಅಚಾತುರ್ಯದಿಂದ ಸೋರಿಕೆಯಾಯಿತು ಎಂಬ ವರದಿ ಈಗ ಹರಿದಾಡುತ್ತಿದೆ. ಈ ವಾದವನ್ನು ಮುಂದಿಡುತ್ತಿರುವವರು ಕೆಲವು ಸಮರ್ಥನೆಗಳನ್ನೂ ನೀಡುತ್ತಿದ್ದಾರೆ. ಕೊರೊನಾ ವೈರಸ್‌ ವಿಚಾರದಲ್ಲಿ ಚೀನಾ ಸರ್ಕಾರ ಆರಂಭದಿಂದಲೇ ಗುಪ್ತ ಗುಪ್ತವಾಗಿ ವರ್ತಿಸಿತು ಎಂಬುದು ಅದರಲ್ಲಿ ಒಂದು.

ಸೋಂಕು ಮೊದಲಿಗೆ ಪತ್ತೆಯಾದ ವುಹಾನ್‌ ನಗರದಲ್ಲಿಯೇ ವುಹಾನ್‌ ವೈರಾಲಜಿ ಕೇಂದ್ರ ಇದೆ. ಈ ಕೇಂದ್ರವು ವೈರಸ್‌ ಮತ್ತು ಸೋಂಕುಗಳ ಬಗ್ಗೆಯೇ ಅಧ್ಯಯನ ನಡೆಸುತ್ತಿದೆ. ಸಾರ್ಸ್‌ ವೈರಸ್‌ ಅನ್ನು ಇಲ್ಲಿ ಕಾಪಿಡಲಾಗಿದೆ. ಸಾರ್ಸ್‌ ವೈರಸ್‌ ಕೂಡ 2002ರಲ್ಲಿ ಚೀನಾದಿಂದಲೇ ಇತರೆಡೆಗೆ ಹಬ್ಬಿತ್ತು. ವೈರಾಲಜಿ ಕೇಂದ್ರವು ವೈರಸ್‌ ಬಗ್ಗೆ ಅಧ್ಯಯನ ನಡೆಸುತ್ತಿದೆ ಎಂದು ಮೇಲ್ನೋಟಕ್ಕೆ ಕಂಡರೂ, ಅಲ್ಲಿ ಜೈವಿಕ ಅಸ್ತ್ರಗಳನ್ನು ರೂಪಿಸಲಾಗುತ್ತಿದೆ ಎಂಬುದು ಮತ್ತೊಂದು ಸಮರ್ಥನೆ. ಈ ಬಗ್ಗೆ ಚೀನಾ ಸರ್ಕಾರದಿಂದ ಯಾವುದೇ ಸ್ಪಷ್ಟನೆ ಹೊರಬಿದ್ದಿಲ್ಲ.

ಆದರೆ, ಹಲವು ಮಂದಿ ಪರಿಣತರು ಈ ವಾದವನ್ನು ತಳ್ಳಿ ಹಾಕಿದ್ದಾರೆ. ‘ವೈರಸ್‌ನ ಲಕ್ಷಣಗಳನ್ನು ಗಮನಿಸಿದರೆ ಅದು ಮಾನವನಿರ್ಮಿತ ಎಂದು ಅನಿಸುವುದಿಲ್ಲ’ ಎಂದು ರಟ್‌ಗರ್ಸ್‌ ವಿಶ್ವವಿದ್ಯಾಲಯದ ರಾಸಾಯನಿಕ ಜೀವಶಾಸ್ತ್ರಜ್ಞ ರಿಚರ್ಡ್‌ ಎಬ್ರೈಟ್‌ ಹೇಳಿದ್ದಾರೆ ಎಂದು ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆ ವರದಿ ಮಾಡಿದೆ.

ಹಲವು ವರ್ಷಗಳಿಂದ ನಡೆಸಿದ ಜೈವಿಕ ಅಸ್ತ್ರ ಸಂಶೋಧನೆಯು ಫಲಪ್ರದವಲ್ಲ ಎಂದು ಕಂಡ ಕಾರಣ ಹೆಚ್ಚಿನ ದೇಶಗಳು ಈ ಪ್ರಯತ್ನವನ್ನು ಬಹಳ ಹಿಂದೆಯೇ ಕೈಬಿಟ್ಟಿವೆ. ಹಾಗಾಗಿ, ಈಗಿನ ಬಹು‍ಪಾಲು ಸೋಂಕುಗಳು ನೈಸರ್ಗಿಕ ಎಂದು ಜೈವಿಕ ಸುರಕ್ಷಾ ಪರಿಣತ ಟಿಮ್‌ ಟ್ರಿವನ್‌ ಹೇಳಿದ್ದಾಗಿಯೂ ‘ವಾಷಿಂಗ್ಟನ್‌ ಪೋಸ್ಟ್‌’ ವರದಿಯಲ್ಲಿ ಇದೆ.

ವುಹಾನ್‌ ನ್ಯಾಷನಲ್‌ ಬಯೊಸೇಫ್ಟಿ ಲ್ಯಾಬೊರೇಟರಿಯಿಂದಲೇ ಕೊರೊನಾ ವೈರಸ್‌ ಸೋರಿಕೆಯಾಗಿರಬಹುದು ಎಂಬ ವರದಿಯು ಬ್ರಿಟನ್‌ನ ಪತ್ರಿಕೆ ಡೈಲ್‌ ಮೇಲ್‌ನಲ್ಲಿ ಕಳೆದ ವಾರವೇ ಪ್ರಕಟವಾಗಿತ್ತು. ಬಳಿಕ, ಇಂತಹುದೇ ವರದಿ ವಾಷಿಂಗ್ಟನ್‌ ಟೈಮ್ಸ್‌ನಲ್ಲಿಯೂ ಪ್ರಕಟವಾಗಿದೆ.‘

ಜಿಲ್ಲಾ ಆಸ್ಪತ್ರೆಗಳಲ್ಲಿಯೂ ಪ್ರತ್ಯೇಕ ವಾರ್ಡ್

ಕರ್ನಾಟಕದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿಯೂ 5 ಹಾಸಿಗೆಗಳ ಪ್ರತ್ಯೇಕ ವಾರ್ಡ್‌ ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಗೃಹಮಟ್ಟದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಶಿಕ್ಷಣದ ಮೂಲಕ ತಿಳಿಸಲು ಸಿದ್ಧತೆಗಳು ನಡೆದಿವೆ. ಮಂಗಳೂರು ಹಾಗೂ ಕಾರವಾರ ಬಂದರುಗಳಲ್ಲಿಯೂ ಪ್ರಯಾಣಿಕರ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ.

ಸಹಾಯವಾಣಿ

ಕೊರೊನಾ ವೈರಸ್ ಸಹಾಯವಾಣಿ ಆರಂಭಿಸಲಾಗಿದೆ, ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವರು ಕರೆ ಮಾಡಿ ಮಾಹಿತಿ ಪಡೆಯಬಹುದು. ಸಹಾಯವಾಣಿ ಸಂಖ್ಯೆ: + 91-11-23978046.

ಭಾರತೀಯರು ಇಂದು ವಾಪಸ್?

ಸೋಂಕು ಪೀಡಿತ ಹುಬಿ ಪ್ರಾಂತ್ಯದಲ್ಲಿರುವ ಸುಮಾರು 600 ಭಾರತೀಯರು ತಾಯ್ನಾಡಿಗೆ ಮರಳಲು ತುದಿಗಾಲಲ್ಲಿ ನಿಂತಿದ್ದಾರೆ. ಚೀನಾದಲ್ಲಿರುವ ತಮ್ಮವರನ್ನು ಕರೆತರುವಂತೆ ಅವರ ಸಂಬಂಧಿಕರಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇದಕ್ಕಾಗಿ ಏರ್ ಇಂಡಿಯಾ 747 ಬೋಯಿಂಗ್ ವಿಮಾನ ಸನ್ನದ್ಧವಾಗಿದ್ದು, ಶುಕ್ರವಾರ ಇವೆರಲ್ಲಾ ಭಾರತಕ್ಕೆ ವಾಪಸಾಗುವ ಸಾಧ್ಯತೆಯಿದೆ.

***

ಭಾರತೀಯರನ್ನು ಕರೆತರಲು ವಿಮಾನ ಸಿದ್ಧವಾಗಿದ್ದು, ಚೀನಾ ಸರ್ಕಾರದ ಒಪ್ಪಿಗೆಗಾಗಿ ಕಾಯಲಾಗುತ್ತಿದೆ. 

- ರವೀಶ್ ಕುಮಾರ್, ವಿದೇಶಾಂಗ ಇಲಾಖೆ ವಕ್ತಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು