ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer: ಕೋವಿಡ್ ಲಸಿಕೆ ಡೋಸ್ ಅಂತರ, ಬೆಲೆ, ಕೇಂದ್ರ, ಮತ್ತಷ್ಟು ಮಾಹಿತಿ...

Last Updated 9 ಜೂನ್ 2021, 16:34 IST
ಅಕ್ಷರ ಗಾತ್ರ

ದೇಶವು ಕೋವಿಡ್–19 ಸೋಂಕಿನ ಎರಡನೇ ಅಲೆಯಿಂದ ಚೇತರಿಸಿಕೊಳ್ಳುತ್ತಿದೆ. ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಜನರಿಗೆ ಆದಷ್ಟು ಬೇಗ ಲಸಿಕೆ ಹಾಕಿಸಲು ಕೇಂದ್ರ ಸರ್ಕಾರವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ವಿಚಾರದಲ್ಲಿ ಜನರಲ್ಲಿ ಹಲವು ಪ್ರಶ್ನೆಗಳು ಸಾಮಾನ್ಯವಾಗಿದೆ. ಲಸಿಕೆಯ ಎರಡು ಡೋಸ್‌ಗಳ ನಡುವಣ ಅವಧಿ, ಖಾಸಗಿ ಆಸ್ಪತ್ರೆಗಳಲ್ಲಿ ಹಾಕಿಸಿಕೊಳ್ಳುವುದಾದರೆ ದರ ಎಷ್ಟು, ಎಲ್ಲೆಲ್ಲಿ ದೊರೆಯುತ್ತವೆ, ಯಾರು ಹಾಕಿಸಿಕೊಳ್ಳಬಾರದು... ಮತ್ತಿತರ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ;

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ದರ ಎಷ್ಟು?

ದೇಶದಲ್ಲಿ ಲಸಿಕೆ ತಯಾರಿಸುತ್ತಿರುವ ಕಂಪನಿಗಳಿಂದ ಶೇ 75ರಷ್ಟು ಡೋಸ್‌ ಲಸಿಕೆಗಳನ್ನು ಕೇಂದ್ರ ಸರ್ಕಾರವು ಖರೀದಿಸಲಿದೆ. ರಾಜ್ಯ ಸರ್ಕಾರಗಳಿಗೆ ನಿಗದಿ ಮಾಡಲಾಗಿದ್ದ ಶೇ 25ರಷ್ಟು ಡೋಸ್‌ ಲಸಿಕೆಗಳೂ ಇದರಲ್ಲಿ ಸೇರಿವೆ. ಉಳಿದ ಶೇ 25ರಷ್ಟು ಡೋಸ್‌ ಲಸಿಕೆಗಳು ಖಾಸಗಿ ಆಸ್ಪತ್ರೆಗಳಿಗೆ ಈಗಿನಂತೆಯೇ ಲಭ್ಯವಾಗಲಿವೆ. ಲಸಿಕೆಯ ನಿಗದಿತ ದರದ ಜತೆಗೆ, ಗರಿಷ್ಠ ₹150 ಸೇವಾ ಶುಲ್ಕವನ್ನು ಖಾಸಗಿ ಆಸ್ಪತ್ರೆಗಳು ಪಡೆಯಬಹುದು.

ಸೇವಾ ಶುಲ್ಕ ಪರಿಷ್ಕರಣೆ (₹150 + ಶೇ 5 ಜಿಎಸ್‌ಟಿ ಸೇರಿ) ಬಳಿಕ ದೇಶದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಲಸಿಕೆಯ ಒಂದು ಡೋಸ್ ದರ ಹೀಗಿದೆ.

* ಕೋವಿಶೀಲ್ಡ್ – ₹780

* ಕೊವ್ಯಾಕ್ಸಿನ್ – ₹1,410

* ಸ್ಪುಟ್ನಿಕ್ ವಿ – ₹1,145

ಎರಡು ಡೋಸ್‌ ನಡುವಣ ಅಂತರ ಎಷ್ಟು?

ಕೋವಿಶೀಲ್ಡ್ ಲಸಿಕೆಯ ಡೋಸ್‌ಗಳ ನಡುವಣ ಅಂತರವನ್ನು ಇತ್ತೀಚೆಗೆ ಸರ್ಕಾರ ಹೆಚ್ಚಿಸಿದೆ. ಈ ಹಿಂದೆ 4–6 ವಾರ ಇದ್ದುದನ್ನು ಈಗ 12–16 ವಾರಗಳೆಂದು ಘೋಷಿಸಲಾಗಿದೆ.

ಕೊವ್ಯಾಕ್ಸಿನ್ ಲಸಿಕೆಯ ನಡುವಣ ಅಂತರ 4 ವಾರ ಆಗಿದೆ.

ತಜ್ಞರ ಪ್ರಕಾರ, ಲಸಿಕೆಯ ಪರಿಣಾಮಕಾರಿತ್ವವನ್ನು ಗಮನದಲ್ಲಿಟ್ಟುಕೊಂಡು ಎರಡು ಡೋಸ್‌ಗಳ ನಡುವಣ ಅಂತರ ಎಷ್ಟಿರಬೇಕು ಎಂಬುದನ್ನು ನಿರ್ಧರಿಸಲಾಗಿದೆ.

‘ಕೋವಿಶೀಲ್ಡ್‌ನ ಮೊದಲ ಡೋಸ್ ಹೆಚ್ಚಿನ ರಕ್ಷಣೆ ನೀಡುತ್ತದೆ, ಇದು ಸುಮಾರು 12 ವಾರಗಳವರೆಗೆ ಇರುತ್ತದೆ. ಆದರೆ ಕೊವ್ಯಾಕ್ಸಿನ್‌ನ ಮೊದಲ ಡೋಸ್‌ನಲ್ಲೇ ಇಷ್ಟು ರಕ್ಷಣೆ ದೊರೆಯಲಾರದು. ಎರಡೂ ಡೋಸ್ ಪಡೆದ ಬಳಿಕ ಗರಿಷ್ಠ ರಕ್ಷಣೆ ನೀಡುತ್ತದೆ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮುಖ್ಯಸ್ಥ ಡಾ. ಬಲರಾಮ ಭಾರ್ಗವ ಇತ್ತೀಚೆಗೆ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಎರಡು ಡೋಸ್‌ಗಳ ನಡುವೆ 21 ದಿನಗಳ ಅಂತರ ಕಾಯ್ದುಕೊಳ್ಳಲಾಗುತ್ತದೆ.

ಸಮೀಪದ ಲಸಿಕಾ ಕೇಂದ್ರದ ಬಗ್ಗೆ ಮಾಹಿತಿ ಪಡೆಯುವುದು ಹೇಗೆ?

ನಮ್ಮ ಸಮೀಪದ ಲಸಿಕಾ ಕೇಂದ್ರದ ಬಗ್ಗೆ ಮಾಹಿತಿ ಪಡೆಯಲು ಎರಡು ಸರಳ ವಿಧಾನಗಳಿವೆ.

ಗೂಗಲ್ ಮ್ಯಾಪ್ಸ್ ಓಪನ್ ಮಾಡಿ ‘ಕೋವಿಡ್ ವ್ಯಾಕ್ಸಿನೇಷನ್ ಸೆಂಟರ್ ನಿಯರ್ ಮಿ’ ಎಂದು ಟೈಪ್ ಮಾಡಬೇಕು. ಅಷ್ಟರಲ್ಲಿ ಸಮೀಪದ ಲಸಿಕಾ ಕೇಂದ್ರಗಳ ಮಾಹಿತಿ ತೆರೆದುಕೊಳ್ಳುತ್ತದೆ. ಬಳಿಕ ‘ಸೀ ಲೊಕೇಷನ್ ಇನ್ಫೊ’ ಕ್ಲಿಕ್ ಮಾಡಬೇಕು. ಆಗ ಲಸಿಕಾ ಕೇಂದ್ರ ತೆರೆದಿರುವ ಸಮಯ, ಸಂಪರ್ಕ ಸಂಖ್ಯೆ, ಕೇಂದ್ರಕ್ಕೆ ತೆರಳಲು ಮಾರ್ಗವನ್ನು ಮ್ಯಾಪ್ ಸೂಚಿಸುತ್ತದೆ.

ಕೋವಿಡ್‌ನಿಂದ ಚೇತರಿಸಿಕೊಂಡವರು ಯಾವಾಗ ಲಸಿಕೆ ಪಡೆಯಬೇಕು?

ಸರ್ಕಾರದ ಮಾರ್ಗಸೂಚಿ ಪ್ರಕಾರ, ಕೋವಿಡ್‌ನಿಂದ ಚೇತರಿಸಿಕೊಂಡವರು 3 ತಿಂಗಳ ಬಳಿಕ ಲಸಿಕೆ ಹಾಕಿಸಿಕೊಳ್ಳಬಹುದು.

ಆದರೆ, ಗುಣಮುಖರಾದ ನಂತರ ಲಸಿಕೆ ಪಡೆಯುವ ಅವಧಿ ನಾವು ಪಡೆದಿರುವ ಚಿಕಿತ್ಸಾ ವಿಧಾನವನ್ನೂ ಅವಲಂಬಿಸಿದೆ ಎನ್ನುತ್ತಾರೆ ತಜ್ಞರು.

ಮೊನೊಕ್ಲೋನಲ್ ಪ್ರತಿಕಾಯಗಳು ಅಥವಾ ಚೇತರಿಸಿಕೊಂಡವರ ಪ್ಲಾಸ್ಮಾದಿಂದ ಚಿಕಿತ್ಸೆ ಪಡೆದಿದ್ದರೆ ಅಂಥವರು ಗುಣಮುಖರಾದ 90 ದಿನಗಳ ನಂತರ ಲಸಿಕೆ ಪಡೆಯುವುದು ಉತ್ತಮ. ಇಲ್ಲಾವಾದಲ್ಲಿ ಲಸಿಕೆಯಿಂದ ಸೃಷ್ಟಿಯಾಗುವ ಪ್ರತಿಕಾಯಗಳು ಈಗಾಗಲೇ ಪಡೆದಿರುವ ಚಿಕಿತ್ಸೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮುಂಬೈಯ ಭಾಟಿಯಾ ಆಸ್ಪತ್ರೆಯ ಸಿಇಒ ಡಾ. ರಾಜೀವ್ ಬೌಧಾನ್ಕರ್ ಮಾಧ್ಯಮವೊಂದಕ್ಕೆ ಈಚೆಗೆ ತಿಳಿಸಿದ್ದರು.

ಯಾರು ಲಸಿಕೆ ಹಾಕಿಸಿಕೊಳ್ಳಬಾರದು?

ಸರ್ಕಾರದ ಮಾರ್ಗಸೂಚಿ ಪ್ರಕಾರ, ಗರ್ಭಿಣಿ ಮತ್ತು ಹಾಲುಣಿಸುತ್ತಿರುವ ಮಹಿಳೆಯರಿಗೆ ಕೋವಿಡ್ -19 ಲಸಿಕೆ ನೀಡಬಾರದು.

ಲಸಿಕೆಗಳು ಅಥವಾ ಚುಚ್ಚುಮದ್ದಿನ ಚಿಕಿತ್ಸೆಗಳು, ಔಷಧೀಯ ಉತ್ಪನ್ನಗಳು ಅಥವಾ ಆಹಾರ ಪದಾರ್ಥಗಳಿಗೆ ತಕ್ಷಣದ ಅಥವಾ ವಿಳಂಬವಾದ ಅನಾಫಿಲ್ಯಾಕ್ಸಿಸ್ ಅಥವಾ ಅಲರ್ಜಿಯ ಪ್ರತಿಕ್ರಿಯೆ ಇತಿಹಾಸ ಹೊಂದಿರುವವರು ಲಸಿಕೆ ತೆಗೆದುಕೊಳ್ಳಬಾರದು.

ಥ್ರಂಬೋಸೈಟೋಪೆನಿಯಾ (ಅಸಹಜವಾಗಿ ಕಡಿಮೆ ಪ್ಲೇಟ್‌ಲೆಟ್‌ಗಳು) ಇರುವವರಿಗೆ ಕೋವಿಶೀಲ್ಡ್ ಅನ್ನು ಬಹು ಎಚ್ಚರಿಕೆಯಿಂದ ನೀಡಬೇಕು.

ಆದಾಗ್ಯೂ, ಗರ್ಭಿಣಿಯರಿಗೆ ಲಸಿಕೆ ನೀಡಬಹುದೇ ಅಥವಾ ನೀಡಬಾರದೇ ಎಂಬ ಬಗ್ಗೆ ಬಹಳ ಚರ್ಚೆಯಾಗುತ್ತಿದೆ.

ಕೋವಿಡ್ ಪ್ರಸರಣ ಹೆಚ್ಚಿರುವ ದೇಶದಲ್ಲಿ ಮಹಿಳೆಯೊಬ್ಬರು ಸೋಂಕಿಗೆ ಈಡಾಗುವ ಸಾಧ್ಯತೆ ಹೆಚ್ಚಿರುವಾಗ ಅಥವಾ ಆಕೆ ಮುಂಚೂಣಿ ಕಾರ್ಯಕರ್ತೆಯಾಗಿದ್ದು ಸೋಂಕು ತಗಲುವ ಸಾಧ್ಯತೆ ಹೆಚ್ಚಿದ್ದರೆ ಇಂಥ ಸಂದರ್ಭಗಳಲ್ಲಿ ಅಪಾಯ ತಂದೊಡ್ಡಿಕೊಳ್ಳುವುದಕ್ಕಿಂತ ಲಸಿಕೆ ಪಡೆಯುವುದರಲ್ಲೇ ಪ್ರಯೋಜನವಿದೆ ಎಂದಿದ್ದಾರೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT