ಶನಿವಾರ, ಮೇ 30, 2020
27 °C

ಆಳ ಅಗಲ | ಸ್ವಂತ ಊರಿನಲ್ಲೇ ಪರಕೀಯರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉತ್ತರ ಕರ್ನಾಟಕದ ಐದು ಜಿಲ್ಲೆಗಳ ಸಾವಿರಾರು ಹಳ್ಳಿಗಳಿಂದ ಹೊಟ್ಟೆಪಾಡಿಗಾಗಿ ಗುಳೆ ಹೋಗಿದ್ದವರಲ್ಲಿ ಕೊರೊನಾ ವೈರಾಣು ಕಾಟ ಆರಂಭವಾದ ಬಳಿಕ ಸುಮಾರು ಮೂರು ಲಕ್ಷ ಜನ ತಮ್ಮ ತವರಿಗೆ ಮರಳಿದ್ದಾರೆ. ವೃದ್ಧಾಶ್ರಮಗಳಾಗಿದ್ದ ಈ ಹಳ್ಳಿಗಳಲ್ಲೀಗ ಮತ್ತೆ ಜನ ತುಂಬಿ ತುಳುಕುತ್ತಿದ್ದಾರೆ. ಹಾಗೆ ಬಂದವರಲ್ಲಿ ಕೆಲವರಿಗೆ ಆಶ್ರಯ ದೊರೆತರೆ, ಹಲವರಿಗೆ ತಮ್ಮ ಊರುಗಳನ್ನೂ ಪ್ರವೇಶಿಸಲು ಸಾಧ್ಯವಾಗದೆ ಊರ ಹೊರಭಾಗದಲ್ಲೇ ಟೆಂಟ್‌ ಹಾಕಿಕೊಂಡು ದಿನ ಕಳೆಯಬೇಕಾದ ಸ್ಥಿತಿ ಬಂದೊದಗಿದೆ. ಮಧುರವಾದ ಸಂಬಂಧಗಳು ಹಳಸಿದ, ಹಳಸಿದ ಸಂಬಂಧಗಳು ಬೆಸೆದ ಥರಾವರಿ ಕಥೆಗಳು ಅಲ್ಲಿ ಹರಳುಗಟ್ಟಿವೆ. ಕೊರೊನಾದಿಂದ ಹಳ್ಳಿಗಳಲ್ಲಿ ಆಗಿರುವ ಬದಲಾವಣೆಗಳನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ...

ಮುತ್ತ್ಯಾ (ಅಜ್ಜ), ಯಮ್ಮಾ (ಅಜ್ಜಿ), ಯವ್ವಾ, ಯಪ್ಪಾ, ಚಿಕ್ಕಪ್ಪ, ಚಿಕ್ಕವ್ವ... ಹೀಗೆ ಎಲ್ಲ ಸಂಬಂಧಗಳನ್ನು ಉತ್ತರ ಕರ್ನಾಟಕದ ಐದು ಜಿಲ್ಲೆಗಳ ಈ ಊರುಗಳಲ್ಲೀಗ ಸುಂಟರಗಾಳಿಯೊಂದು ಅನಾಮತ್ತು ಹೊತ್ತೊಯ್ಯುತ್ತಿದೆ. ಅದರ ಹೆಸರು ಕೊರೊನಾ!

ಅನ್ನಕ್ಕೆ ಮಾರ್ಗವಿಲ್ಲದೆ ಗುಳೆ ಹೋಗಿದ್ದ ಸಾವಿರಾರು ಕೂಲಿ ಕಾರ್ಮಿಕರು ಲಾಕ್‌ಡೌನ್ ಕಾರಣ ಊರುಗಳಿಗೆ ಮರಳಿ ಬಂದಿದ್ದಾರೆ. ಹೀಗೆ ಬಂದವರು ಊರಿನ ಜನರಷ್ಟೆ ಅಲ್ಲದೆ ಮನೆಯವರ ಪಾಲಿಗೂ ಅಕ್ಷರಶಃ ಕೊರೊನಾ ಮಾರಿಯ ಪ್ರತಿರೂಪವಾಗಿ ಕಾಣುತ್ತಿದ್ದಾರೆ.

‘ಯಾರೊಳಗೆ ಕೊರೊನಾ ವೈರಾಣು ಅವಿತಿದೆಯೋ’ ಎಂದು ಎಲ್ಲರ ಮೇಲೂ ಸಂಶಯದ ದೃಷ್ಟಿ. ‘ಬಂದವರು ನಮ್ಮೂರನ್ನು ಸ್ಮಶಾನ ಮಾಡಿಯಾರು’ ಎಂಬ ಆತಂಕ. ಊರಿಗೆ ಬಂದಿರುವ ಹೊಸಬರು ಕೆಮ್ಮಿದರೆ, ಕ್ಯಾಕರಿಸಿದರೆ, ಸೀನಿದರೆ, ಹವೆಯಲ್ಲಿನ ವ್ಯತ್ಯಾಸದಿಂದ ಒಂದಷ್ಟು ಮೈ ಬಿಸಿಯಾದರೆ ಊರಿಗೆ ಊರೇ ಬೆಚ್ಚಿಬೀಳುತ್ತಿದೆ. ಆರೋಗ್ಯ ಕಾರ್ಯಕರ್ತರು ದಾಂಗುಡಿಯಿಟ್ಟು, ರಕ್ತ ಪರೀಕ್ಷೆಗಳು ನಡೆಯುತ್ತವೆ.

ಹಿಂದೆಲ್ಲಾ ದೀಪಾವಳಿಗೆ, ಯುಗಾ ದಿಗೆ, ಅಮ್ಮನ ಜಾತ್ರೆಗೆ ಊರಿಗೆ ಬಂದವರಲ್ಲಿ ರಾಜಠೀವಿ ಇರುತ್ತಿತ್ತು. ಮಂಗ ಳೂರಿನಿಂದ ಬರುವ ಬಸ್‌ಗಾಗಿ ಕಾದು ಕುಳಿತು, ಬಂದವರನ್ನು ಮನೆಯವರೇ ಗಾಡಿ ಒಯ್ದು ಕರೆತರುತ್ತಿದ್ದರು. ದಿನ ವಿಡೀ ಕುಟುಂಬದ ಸದಸ್ಯರು, ಸಂಜೆ ಸ್ನೇಹಿತರ ಸಾಂಗತ್ಯ ಹಿತವೆನಿಸುತ್ತಿತ್ತು. ಸಿಹಿ ಊಟ, ಗುಂಡು–ತುಂಡಿನ ಸಮಾರಾಧನೆಯೂ ಆಗುತ್ತಿತ್ತು.

ಈಗ ನೂರಾರು ಕಿ.ಮೀ ನಡೆದು, ಸಿಕ್ಕ ವಾಹನಗಳ ಹತ್ತಿ ಬಂದರೂ ಎದುರುಗೊಳ್ಳುವವರಿರಲಿ, ಮನೆಯೊಳಗೆ ಬನ್ನಿ ಎನ್ನುವವರೂ ಇಲ್ಲ. ಯಾರೂ ಹತ್ತಿರ ಸೇರಿಸುತ್ತಿಲ್ಲ, ಕುಡಿಯಲು ನೀರು ಕೊಡುವವರೂ ದಿಕ್ಕಿಲ್ಲ. ಸ್ನೇಹಿತರು ಅಪರಿಚಿತರಂತೆ ಕಾಣುತ್ತಿದ್ದಾರೆ. ಹೀಗಾಗಿ ಗುಳೆ ಹೋಗಿ ಮರಳಿದವರು ಈಗ ಮನೆಯಲ್ಲೇ ಪರಕೀಯರು.

ಮಂಗಳೂರಿನ ಬಂದರಿನಲ್ಲಿ ಕೆಲಸ ಮಾಡುತ್ತಿದ್ದ ಬಾದಾಮಿ ತಾಲ್ಲೂಕಿನ ಆಲದಕಟ್ಟಿಯ ಚಂದಪ್ಪ ವಾರದ ಹಿಂದೆ ಊರಿಗೆ ಮರಳಿದ್ದಾರೆ. ‘ನಾವ್‌ ಏಳು ಮಂದಿ ಅದೀವಿ. ನಮ್ಮನ್ನ ಊರೊಳಗ ಬಿಟ್ಕೊಂಡಿಲ್ಲ. ಹೊರಗss ತಡದಾರ. ರಕ್ತದ ಪರೀಕ್ಷೆ ಮಾಡಿಸ್ಯಾರ. ಏನೂ ತೊಂದ್ರಿ ಇಲ್ಲ. ಆದ್ರೂ ಹೊಲದೊಳಗ ಶೆಡ್ ಹಾಕ್ಕೊಂಡು ಅದೀವಿ’ ಎನ್ನುತ್ತಾರೆ.

‘ಭಾಳ ತ್ರಾಸ್‌ ಐತ್ರಿ, ಜೀವದ ಪ್ರಶ್ನೆಯೂ ಐತಿ. ಹಂಗಾಗಿ ಊರಾಗ ನಮ್ಮನ್ನ ತಡದಾರ. ಕುಂದಾಪುರದಿಂದ ನಡ್ಕೊಂಡು ಊರಿಗೆ ಹೊಂಟೋರಿಗೆ ಇಲ್ಲೇ ಹೊಳಿ ಹತ್ರದ ಊರವರು ಹೊಡದಾರ’ ಎಂದು ಬಾದಾಮಿ ತಾಲ್ಲೂಕಿನ ಸೋಮನಕೊಪ್ಪದ ಲಕ್ಷ್ಮಣ ಕರಮಡಿ ಹೇಳುತ್ತಾರೆ.

ರಾಯಚೂರು ತಾಲ್ಲೂಕಿನ ಗುಂಜಳ್ಳಿ ಗ್ರಾಮದ ನೂರಾರು ಬಡವರು ತೆಲಂಗಾಣದ ಇಟ್ಟಂಗಿ ಭಟ್ಟಿಗಳಲ್ಲಿ ದುಡಿ ಯಲು ಹೋಗಿದ್ದರು. ಆದರೆ, ಲಾಕ್‌ ಡೌನ್‌ ಪರಿಣಾಮ, ಭಟ್ಟಿಗಳು ಬಂದ್‌ ಆಗಿದ್ದರಿಂದ ಅಲ್ಲಿರಲಾಗದೆ, ಇಲ್ಲಿಗೆ ಬರಲಾಗದೆ ಒದ್ದಾಡುತ್ತಿದ್ದರು.

ಕಾಲ್ನಡಿಗೆ ಮೂಲಕ ಒಂದಿಷ್ಟು ದೂರ ಕ್ರಮಿಸಿ, ಅಲ್ಲಿಂದ ದುಬಾರಿ ದರತೆತ್ತು ಟಂಟಂ, ಜೀಪ್‌ ಬಾಡಿಗೆ ಪಡೆದು ಪೊಲೀಸರ ಕಣ್ತೆಪ್ಪಿಸಿಕೊಂಡು ತಮ್ಮೂರು ಸೇರಿದ್ದಾರೆ. ಗುಳೆ ಹೋದಾಗ ಇಡೀ ಊರಿಗೆ ಊರೇ ಬಿಕೋ ಎನ್ನುತ್ತಿತ್ತು. ಜನ ವಾಪಸ್‌ ಆದಮೇಲೆ ಈಗ ಊರು ತುಂಬಿ ತುಳುಕುತ್ತಿದೆಯಾದರೂ ಅವರೆಲ್ಲ ‘ಹೋಂ ಕ್ವಾರಂಟೈನ್‌’ನಲ್ಲಿ ಇರುವುದರಿಂದ ರಸ್ತೆಗಳೆಲ್ಲ ಖಾಲಿ, ಖಾಲಿ.

ಕಾಸರಗೋಡಿನಿಂದ ಬಂದವರು

ಕೇರಳದ ಕಾಸರಗೋಡಿನಲ್ಲಿ ಕೋವಿಡ್–19 ಪ್ರಕರಣ ಹೆಚ್ಚಿರುವ ಕಾರಣ ಅಲ್ಲಿಂದ ಮರಳಿದ ಜಿಲ್ಲೆಯ 87 ಜನರಿಗೆ ಜಿಲ್ಲಾಡಳಿತವೇ ಕ್ವಾರೆಂಟೈನ್‌ಗೆ ವ್ಯವಸ್ಥೆ ಮಾಡಿದೆ. ಬಾದಾಮಿ ತಾಲ್ಲೂಕಿನ ಜಾಲಿಹಾಳದ ಬಾಲಕರ ವಸತಿ ನಿಲಯದಲ್ಲಿ 23 ಜನ, ಗುಳೇದಗುಡ್ಡ ಸಮೀಪದ ಆಸಂಗಿಯ ಆಶಾದೀಪ ಸಂಸ್ಥೆಯ ಕಟ್ಟಡದಲ್ಲಿ 22 ಮಂದಿ ಹಾಗೂ ಹುನಗುಂದದ ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿ ಉಳಿದವರಿಗೆ ಆಶ್ರಯ ನೀಡಲಾಗಿದೆ. ಅಲ್ಲಿಯೇ ಊಟೋಪಚಾರ, ವೈದ್ಯಕೀಯ ನೆರವಿನ ವ್ಯವಸ್ಥೆ ಇದ್ದು, ಅವರು ಹೊರಗೆ ಹೋಗದಂತೆ ದಿನದ 24 ಗಂಟೆಯೂ ನಿಗಾ ವಹಿಸಲಾಗುತ್ತಿದೆ.

ಒಂದಾದ ಕರಳುಬಳ್ಳಿ

ಕೊರೊನಾ ಭೀತಿಯು ಯಾದಗಿರಿಯ ಹಳ್ಳಿಗಳಲ್ಲಿ ಕರಳುಬಳ್ಳಿಯನ್ನು ಒಂದುಗೂಡಿಸಿದೆ. ಗುಳೆ ಹೋಗಿ ವಾಪಸ್‌ ಬಂದವರ ಮಧ್ಯೆ ಸಂಬಂಧಗಳು ಮತ್ತೆ ಬೆಸೆದುಕೊಂಡಿವೆ. ಯಾವುದೋ ಕಾರಣಕ್ಕೆ ಜಗಳ ಆಡಿಕೊಂಡವರು ಈಗ ಒಂದಾಗಿ ಜೀವನ ಸಾಗಿಸುತ್ತಿದ್ದಾರೆ.

ಮೊದಮೊದಲು ವಲಸೆ ಬಂದವರು ಎಲ್ಲಿ ಸೋಂಕು ಹರಡುತ್ತಾರೋ ಎನ್ನುವ ಭೀತಿ ಇಲ್ಲಿನ ಜನರನ್ನೂ ಕಾಡಿತ್ತು. ಆದರೆ, ದಿನಗಳು ಕಳೆದಂತೆ ಎಲ್ಲರೂ ಒಂದುಗೂಡಿದ್ದಾರೆ. ಶಾಲೆ ಕಟ್ಟೆ, ಪಂಚಾಯ್ತಿ ಕಟ್ಟೆ, ನೀರಿನ ಟ್ಯಾಂಕ್‌, ದೇವಸ್ಥಾನದ ಪ್ರಾಂಗಣ, ಮನೆ ಮುಂದಿನ ಜಗುಲಿ ಮೇಲೆ, ಬೇವಿನಮರದ ಕೆಳಗೆ ಕುಳಿತು ಜತೆಯಾಗಿ ಹರಟೆ ಹೊಡೆಯುವ ದೃಶ್ಯಗಳು ಸಾಮಾನ್ಯವಾಗಿವೆ.

ಹತ್ತಾರು ವರ್ಷಗಳಿಂದ ಊರಿನಿಂದ ದೂರವೇ ಉಳಿದಿದವರು ಈಗ ವಾಪಸ್‌ ಬಂದಿದ್ದು, ಉಳಿದುಕೊಳ್ಳಲು ಕೆಲವರಿಗೆ ಮನೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಸಂಬಂಧಿಕರೇ ಆಶ್ರಯ ನೀಡಿದ್ದಾರೆ. ಬೇರೆ, ಬೇರೆಯಾಗಿದ್ದ ಅಣ್ಣ–ತಮ್ಮಂದಿರೂ ಒಂದಾಗಿದ್ದಾರೆ.

ಕುಡಿತ ಬಿಡಿಸಿದ ವೈರಾಣು

ಬೆಳಿಗ್ಗೆಯಿಂದ ಸಂಜೆವರೆಗೆ ಮೈಮುರಿದು ಕೆಲಸ ಮಾಡಿ, ಸಂಜೆ ಆಯಾಸ ನೀಗಿಸಿಕೊಳ್ಳಲು ಈ ಕಾರ್ಮಿಕರೆಲ್ಲ ಕುಡಿಯುತ್ತಿದ್ದರು. ಈಗ ಉಟ್ಟ ಬಟ್ಟೆಯಲ್ಲಿಯೇ ಹಳ್ಳಿಗೆ ಹಿಂತಿರುಗಿದ್ದಾರೆ. ಲಾಕ್‌ಡೌನ್‌ನಿಂದ ಮದ್ಯವೂ ಸಿಗುವುದಿಲ್ಲ. ಸಿಕ್ಕರೆ ಕೊಳ್ಳಲು ಇವರ ಬಳಿಯೀಗ ಹಣವೂ ಇಲ್ಲ. ಹೀಗಾಗಿ ಕುಡಿತದ ಚಟ ನಿಂತಿದೆ ಎಂದು ಅವರ ಸಂಬಂಧಿಗಳು ಹೇಳುತ್ತಾರೆ.

ಜೂಜು ಇಲ್ಲ: ಗುಳೆ ಹೋದವರು ಹಳ್ಳಿಗೆ ಬಂದರೆ ಜೂಜು ಅಡ್ಡೆಗೆ ಹೋಗುತ್ತಿದ್ದರು. ಈಗ ಕೈಯಲ್ಲಿ ಹಣವಿಲ್ಲದಿದ್ದರಿಂದ ಜೂಜಾಟವೂ ನಿಂತಿದೆ. ಹೊಲದಲ್ಲಿ ಕೆಲಸ ಮಾಡಲು ಹೋಗುತ್ತಿದ್ದಾರೆ. ನೀರಾವರಿ ಪ್ರದೇಶಗಳಲ್ಲಿ ಭತ್ತದ ರಾಶಿ ನಡೆಯುತ್ತಿದ್ದು, ಗುಳೆ ಹೋಗಿ ಬಂದವರು ಅಲ್ಲಿಯೂ ಕಾಣಸಿಗುತ್ತಾರೆ.

ಆ ಮನೆ ರೊಟ್ಟಿಗೆ ಈ ಮನೆ ಚಟ್ನಿ

ವಿಜಯಪುರ ಜಿಲ್ಲೆಯ ಐನಾಪುರ ಮಹಾಲ್‌ ತಾಂಡಾದಲ್ಲಿ ವರ್ಷಪೂರ್ತಿ ಕೀಲಿ ಹಾಕಿರುತ್ತಿದ್ದ ಮನೆಗಳ ಬಾಗಿಲು ತೆರೆದಿವೆ. ವೃದ್ಧಾಶ್ರಮದಂತಾಗಿದ್ದ ಹಳ್ಳಿಗಳಿಗೆ ಈಗ ಯೌವನ ಮರುಕಳಿಸಿದೆ. ಮದುವೆ, ಮಂಗಳಕಾರ್ಯಗಳಲ್ಲಿ ಅಪರೂಪಕ್ಕೊಮ್ಮೆ ಸೇರಿಕೊಳ್ಳುತ್ತಿದ್ದವರು ಈಗ ಕೊರೊನಾದಿಂದ ಎದುರಾಗಿರುವ ಸಂಕಷ್ಟದಲ್ಲಿ ದಂಡಿ, ದಂಡಿಯಾಗಿ ಒಂದುಗೂಡಿದ್ದಾರೆ.

ಲಾಕ್‌ಡೌನ್‌ ಇದ್ದರೂ ಅಕ್ಕಪಕ್ಕದ ಮನೆಗಳಿಗೆ ಹೋಗಿ, ಬರುವುದು ನಿಂತಿಲ್ಲ. ಒಬ್ಬರ ಮನೆಯ ರೊಟ್ಟಿ, ಇನ್ನೊಬ್ಬರ ಮನೆಯ ಚಟ್ನಿ ಜೊತೆ ಹದವಾಗಿ ಬೆರೆತು ಬಾಯಿಗೆ ರುಚಿ ನೀಡುತ್ತಿದೆ ಊಟ.

‘ಗುಳೇ ಹೋದವರು ಪ್ರತಿ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಊರಿಗೆ ಮರಳುತ್ತಿದ್ದರು. ಮದುವೆ, ಮುಂಜಿ, ಬಂಧು–ಬಳಗದವರ ಮನೆ ತಿರುಗಾಡಿ, ಮನೆ ಕೆಲಸ ಮಾಡಿಕೊಂಡು, ಸಾಲ ತೀರಿಸಿ ದೀಪಾವಳಿಗೆ ಮತ್ತೆ ಗುಳೆ ಹೋಗುತ್ತಿದ್ದರು. ಆದರೆ, ಲಾಕ್‌ಡೌನ್‌ನಿಂದ ಅವಧಿಗೂ ಮುನ್ನವೇ ಊರಿಗೆ ಬರಿಗೈಯಲ್ಲಿ ಮರಳಿದ್ದಾರೆ’ ಎನ್ನುತ್ತಾರೆ ತಾಂಡಾದ ನಿವಾಸಿ ಮುರುಳೀಧರ ನಾಯ್ಕ.

‘ಊರಲ್ಲಿ ಮೊದಲು ಕುಡಿದು ಜಗಳವಾಡುತ್ತಿದ್ದರು. ಈಗ ಎಲ್ಲೂ ದಾರೂ(ಕಳ್ಳಬಟ್ಟಿ) ಸಿಗುತ್ತಿಲ್ಲ. ಹೀಗಾಗಿ ಜಗಳ, ತಂಟೆ, ತಕರಾರು ಬಂದ್‌ ಆಗಿವೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೋಪಿ ಪ್ರೇಮ್‌ಸಿಂಗ್‌ ಜಾಧವ್‌.

ಬೆಂಗಳೂರಿನಲ್ಲಿ ಆಟೊ ಓಡಿಸುತ್ತಿದ್ದ ಕೃಷ್ಣ ಜಾಧವ ಲಾಕ್‌ಡೌನ್‌ ಬಳಿಕ ರಾತ್ರೋರಾತ್ರಿ ಆಟೊದಲ್ಲೇ ನೂರಾರು ಕಿ.ಮೀ. ದೂರ ಕ್ರಮಿಸಿ, ತಮ್ಮ ಪತ್ನಿ, ಮಗನೊಂದಿಗೆ ತಾಂಡಾಕ್ಕೆ ವಾಪಸಾಗಿದ್ದಾರೆ. ಮಗ, ಸೊಸೆ, ಮೊಮ್ಮಗ ಮನೆಗೆ ಬಂದಿರುವುದರಿಂದ ಅವರ ತಾಯಿ ರುಕ್ಮಾಬಾಯಿ ಅವರ ಖುಷಿಗೆ ಪಾರವೇ ಇಲ್ಲ.

ದುರಸ್ತಿಗೊಂಡ ಮನೆಗಳು

ಕೊಪ್ಪಳ ಜಿಲ್ಲೆಯಲ್ಲಿ ಯಲಬುರ್ಗಾ ಮತ್ತು ಕುಷ್ಟಗಿ ತಾಲ್ಲೂಕುಗಳಿಂದ ವಲಸೆ ಹೋದವರೂ ವಾಪಸ್‌ ಬಂದಿದ್ದಾರೆ. ಮಾನವೀಯತೆಯಿಂದ ಒಬ್ಬರಿಗೆ ಒಬ್ಬರು ನೆರವಾಗುತ್ತಿರುವುದು ಲಾಕ್‌ಡೌನ್‌ ಕಲಿಸಿದ ಪಾಠ.

ಕೆಲವು ಕೂಲಿಕಾರರು ಊರಿನ ಮುಖ ನೋಡದೇ ಹಲವಾರು ವರ್ಷಗಳೇ ಕಳೆದಿದ್ದವು. ಮಕ್ಕಳು, ಮರಿಗಳನ್ನು ತಮ್ಮ ಮನೆಯ ಹಿರಿಯರ ಜೊತೆ ಬಿಟ್ಟು ನಿತ್ಯ ಮರುಗುತ್ತಿದ್ದರು. ಈಗ ಊರಿನಲ್ಲಿಯೇ ಇರುವುದರಿಂದ ಮನೆಯ ಕಡೆ ಹೆಚ್ಚಿನ ಲಕ್ಷ್ಯ ವಹಿಸುತ್ತಿದ್ದು, ಸಣ್ಣ, ಪುಟ್ಟ ದುರಸ್ತಿ ಕೆಲಸ, ಹೊಲ ಸ್ವಚ್ಛಗೊಳಿಸುವಂತಹ ಕೆಲಸಗಳಲ್ಲಿ ತೊಡಗಿದ್ದಾರೆ.

ವರದಿ: ವೆಂಕಟೇಶ್ ಜಿ.ಎಚ್., ಬಸವರಾಜ್ ಸಂಪಳ್ಳಿ., ನಾಗರಾಜ್ ಚಿನಗುಂಡಿ., ಸಿದ್ದನಗೌಡ ಪಾಟೀಲ ಮತ್ತು ಪ್ರವೀಣ್ ಕುಮಾರ್ ಬಿ. ಜಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು