ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಕೋವಿಡ್–19 ಲಾಕ್‌ಡೌನ್‌ ಹಿನ್ನೋಟ

Last Updated 25 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ವೈರಾಣು ಹರಡುವಿಕೆ ತಡೆಯುವುದಕ್ಕಾಗಿ ಇಡೀ ದೇಶದ ಮೇಲೆ ಲಾಕ್‌ಡೌನ್‌ ಹೇರಿ ವರ್ಷ ಕಳೆದಿದೆ. 2020ರ ಮಾರ್ಚ್‌ 25ರಂದು ಲಾಕ್‌ಡೌನ್‌ ಆರಂಭವಾಗದಾಗ 525 ಪ‍್ರಕರಣಗಳಷ್ಟೇ ಇದ್ದವು. ಲಾಕ್‌ಡೌನ್‌, ಅನ್‌ಲಾಕ್‌ ಮತ್ತು ನಂತರದ ದಿನಗಳಲ್ಲಿಯೂ ಪ್ರಕರಣಗಳು ಏರುತ್ತಲೇ ಹೋದವು. ಒಂದೆರಡು ದಿನಗಳಲ್ಲಿ ಲಕ್ಷವನ್ನೂ ದಾಟಿತ್ತು ಈ ಸಂಖ್ಯೆ. ಕಳೆದ ವರ್ಷದ ಕೊನೆಯ ಹೊತ್ತಿಗೆ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಆರಂಭವಾಯಿತು. ಲಾಕ್‌ಡೌನ್‌ಗೆ ವರ್ಷ ಪೂರ್ತಿಯಾಗುವ ಹೊತ್ತಿಗೆ ಪ್ರಕರಣಗಳು ಮತ್ತೆ ಏರುತ್ತಿವೆ. ನಿಯಂತ್ರಣಕ್ಕೆ ಕಠಿಣ ಕ್ರಮಗಳ ಅನಿವಾರ್ಯ ಎದುರಾಗಿದೆ. ಆದರೆ, ಕಳೆದ ವರ್ಷದ ಲಾಕ್‌ಡೌನ್‌ನಿಂದಾದ ಕಷ್ಟ ನಷ್ಟಗಳು ಈಗಲೂ ಮುಂದುವರಿದಿವೆ.

ಗ್ರಾಮೀಣ ಜನರ ಕಳವಳ

ಲಾಕ್‌ಡೌನ್‌ ಮತ್ತು ನಂತರದ ದಿನಗಳಲ್ಲಿ ಆದಾಯ ಮತ್ತು ಜೀವನೋಪಾಯವನ್ನು ಉಳಿಸಿಕೊಳ್ಳುವುದೇ ಗ್ರಾಮೀಣ ಪ್ರದೇಶದ ಜನರ ಬಹುದೊಡ್ಡ ಕಳವಳವಾಗಿತ್ತು ಎಂದು ಇಂಡಿಯನ್‌ ಸ್ಕೂಲ್‌ ಆಫ್‌ ಡೆವಲಪ್‌ಮೆಂಟ್‌ ಮ್ಯಾನೇಜ್‌ಮೆಂಟ್‌ (ಐಎಸ್‌ಡಿಎಂ) ಮತ್ತು ಐಇಂಪ್ಯಾಕ್ಟ್‌ ಎಂಬ ಎನ್‌ಜಿಒ ನಡೆಸಿದ ಸಮೀಕ್ಷೆಯಲ್ಲಿ ಜನರು ಹೇಳಿಕೊಂಡಿದ್ದಾರೆ. 10 ರಾಜ್ಯಗಳ 900 ಗ್ರಾಮಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ.

ಆಹಾರ ಮತ್ತು ಕುಡಿಯುವ ನೀರಿನ ಲಭ್ಯತೆ, ಮಕ್ಕಳ ಶಿಕ್ಷಣದ ಮೇಲೆ ಆದ ಪರಿಣಾಮ ಬಹುದೊಡ್ಡ ಸಮಸ್ಯೆಗಳಾಗಿದ್ದವು. ಸಮೀಕ್ಷೆಗೆ ಒಳಗಾದ ಶೇ 17ರಷ್ಟು ಮಂದಿಗೆ ಮಾತ್ರ ತಮ್ಮ ಪ್ರಾಥಮಿಕ ಆದಾಯ ಮೂಲವನ್ನು ಉಳಿಸಿಕೊಳ್ಳಲು ಸಾಧ್ಯವಾಗಿತ್ತು.

ದೌರ್ಜನ್ಯ ಹೆಚ್ಚಳ

ಲಾಕ್‌ಡೌನ್‌ ಅವಧಿಯಲ್ಲಿ ಮಹಿಳೆಯರ ಮೇಲೆ ಮನೆಯಲ್ಲಿ ನಡೆಯುತ್ತಿದ್ದ ದೌರ್ಜನ್ಯ ಹೆಚ್ಚಾಗಿದೆ. ಇದಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಬಂದ ದೂರುಗಳ ಸಂಖ್ಯೆಯೂ ಏರಿಕೆಯಾಗಿದೆ. 2019ರಲ್ಲಿ 2,960 ದೂರುಗಳು ಬಂದಿದ್ದವು. ಲಾಕ್‌ಡೌನ್‌ ಹೇರಲಾದ 2020ರಲ್ಲಿ ಈ ದೂರುಗಳ ಸಂಖ್ಯೆ 5,297ಕ್ಕೆ ಏರಿದೆ. ಲಾಕ್‌ಡೌನ್‌ ತೆರವಾದ ಬಳಿಕವೂ ಇದೇ ಪ್ರವೃತ್ತಿ ಮುಂದುವರಿದಿದೆ.

ದೌರ್ಜನ್ಯದ 19,730 ಪ್ರಕರಣಗಳು 2019ರಲ್ಲಿ ದಾಖಲಾಗಿದ್ದವು. 2020ರಲ್ಲಿ ಇದು 23,722ಕ್ಕೆ ಏರಿದೆ. ಲಾಕ್‌ಡೌನ್‌ ನಂತರ ಪ್ರತಿ ತಿಂಗಳೂ 2,000ಕ್ಕಿಂತ ಹೆಚ್ಚು ದೂರುಗಳು ಬರುತ್ತಿವೆ. ಇದರಲ್ಲಿ ನಾಲ್ಕನೇ ಒಂದರಷ್ಟು ಮನೆಯಲ್ಲಿನ ಹಿಂಸೆಗೆ ಸಂಬಂಧಿಸಿದ್ದೇ ಆಗಿವೆ. ಈ ವರ್ಷ ಜನವರಿಯಿಂದ ಮಾರ್ಚ್‌ 25ರವರೆಗೆ ಆಯೋಗಕ್ಕೆ ಕೌಟುಂಬಿಕ ಹಿಂಸೆಯ 1,463 ದೂರುಗಳು ಬಂದಿವೆ.

ವಾಕ್ಸಮರವೂ ವರ್ಚುವಲ್‌

ಕಳೆದ ವರ್ಷದ ಮಾರ್ಚ್‌ 25ರ ನಂತರದ ದಿನಗಳಲ್ಲಿ ರಾಜಕೀಯ ಚಟುವಟಿಕೆಗಳು ಮತ್ತು ನಾಯಕರ ನಡುವಣ ವಾಕ್ಸಮರ ಬಹುತೇಕ ವರ್ಚುವಲ್‌ ಆಗಿಬಿಟ್ಟಿತ್ತು. ಭಾಷಣಗಳು, ಮಾಧ್ಯಮಗೋಷ್ಠಿಗಳು ಆನ್‌ಲೈನ್‌ ಆಗಿಬಿಟ್ಟವು. ಟ್ವಿಟರ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕಟವಾದ ಹೇಳಿಕೆಗಳು ಹೆಚ್ಚು ಹರಿತವಾಗಿದ್ದವು.ಲಾಕ್‌ಡೌನ್‌ ಹೇರುವ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್‌ ಮತ್ತು ಎಡಪಕ್ಷಗಳು ತೀವ್ರವಾಗಿ ವಿರೋಧಿಸಿದ್ದವು. ‘ಲಾಕ್‌ಡೌನ್‌ನ ಆರಂಭಿಕ ದಿನಗಳಲ್ಲಿ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಂಡಿದ್ದೇ ರಾಜಕೀಯ ಪಕ್ಷಗಳ ನಡುವಣ ಬಿರುಕು ಇನ್ನಷ್ಟು ಗಾಢವಾಗಲು ಕಾರಣ’ ಎಂದು ರಾಜಕೀಯ ವಿಶ್ಲೇಷಕರಾದ ಸಂಜಯ ಕುಮಾರ್‌ ಮತ್ತು ರಶೀದ್‌ ಕಿದ್ವಾಯಿ ಹೇಳುತ್ತಾರೆ.

ಚೇತರಿಕೆಯತ್ತ ಆರ್ಥಿಕತೆ

ಲಾಕ್‌ಡೌನ್‌ನಿಂದಾಗಿ ದೇಶದ ಅರ್ಥವ್ಯವಸ್ಥೆ ಮತ್ತು ಬಹುಪಾಲು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಇದರಿಂದಾದ ಆರ್ಥಿಕ ಹಿಂಜರಿತದಿಂದ ದೇಶವು ತ್ವರಿತವಾಗಿ ಚೇತರಿಸಿಕೊಂಡಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಕಳೆದ ಜೂನ್‌ಗೆ ಕೊನೆಯಾದ ತ್ರೈಮಾಸಿಕದಲ್ಲಿ ಜಿಡಿಪಿ ಶೇ 24.4ರಷ್ಟು ಕುಗ್ಗಿತ್ತು ಮತ್ತು ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿ ಈ ಕುಸಿತದ ಪ್ರಮಾಣವು ಶೇ 7.3ರಷ್ಟಿತ್ತು. ಆದರೆ, ಡಿಸೆಂಬರ್‌ ತ್ರೈಮಾಸಿಕದ ಹೊತ್ತಿಗೆ ಶೇ 0.4ರ ಪ್ರಗತಿ ದಾಖಲಾಗಿದೆ.

ವಲಸೆ ಕಾರ್ಮಿಕರ ಬವಣೆ

ಬಿಹಾರ, ಅಸ್ಸಾಂ, ಉತ್ತರ ಪ್ರದೇಶದಂತಹ ರಾಜ್ಯಗಳಿಂದ ಮಹಾನಗರಗಳಿಗೆ ವಲಸೆ ಹೋಗಿದ್ದ ಕಾರ್ಮಿಕರು ಲಾಕ್‌ಡೌನ್‌ನಿಂದ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾದರು. ಪರಕೀಯ ಸ್ಥಳದಲ್ಲಿ ಕೆಲಸ, ಆಹಾರ, ವಸತಿ ಎಲ್ಲವನ್ನೂ ಕಳೆದುಕೊಂಡ ಇವರು ಹತಾಶರಾಗಿದ್ದರು. ಬಸ್‌, ರೈಲು ಸೇರಿ ಯಾವುದೇ ಸಂಚಾರ ಸೌಲಭ್ಯ ಇಲ್ಲದ ಕಾರಣ ನೂರಾರು ಕಿ.ಮೀ. ನಡೆದೇ ಊರು ಸೇರಿದರು. ತಮ್ಮ ಸರಂಜಾಮು ಮತ್ತು ಮಕ್ಕಳನ್ನು ಜತೆಗಿರಿಸಿಕೊಂಡು ಜನರು ನಡೆದು ಹೋಗುತ್ತಿದ್ದ ದೃಶ್ಯಗಳು ದೇಶವಿಭಜನೆಯ ದಿನಗಳನ್ನು ನೆನಪಿಗೆ ತಂದದ್ದು ಸುಳ್ಳಲ್ಲ.

ಮನೆಯೇ ಪಾಠಶಾಲೆ

ಕೋವಿಡ್‌ ತಡೆ ಕ್ರಮಗಳ ಭಾಗವಾಗಿ ದೇಶದ ಎಲ್ಲ ಶಿಕ್ಷಣ ಸಂಸ್ಥೆಗಳು ಮುಚ್ಚಿದವು. ಈ ಸಂಕಷ್ಟದಲ್ಲಿ ನೆರವಿಗೆ ಬಂದದ್ದು ಆನ್‌ಲೈನ್‌ ಕಲಿಕೆ. ನಗರ ಪ್ರದೇಶಗಳಲ್ಲಿ ಆನ್‌ಲೈನ್‌ ಮೂಲಕ ಒಂದಷ್ಟು ತರಗತಿಗಳು ನಡೆದವು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಕಲಿಕೆ ಸಾಧ್ಯವಾಗಲಿಲ್ಲ. ಈಗಲೂ ಶಾಲಾ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ತೆರೆದಿಲ್ಲ. ಆದರೆ, ಆನ್‌ಲೈನ್‌ ಮೂಲಕ ಶಿಕ್ಷಣ ಸಾಧ್ಯ ಎಂಬ ಸಾಧ್ಯತೆಯನ್ನು ಲಾಕ್‌ಡೌನ್‌ ತೆರೆದಿಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT