ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ | ಒಬಿಸಿ ಮೀಸಲಾತಿ: ಜಾತಿ ಗಣತಿ ನಿರಾಕರಣೆಗೆ ಸಕಾರಣವಿಲ್ಲ

Last Updated 21 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ರಾಜಕೀಯ ಪ್ರಾತಿನಿಧ್ಯದ ಮೀಸಲಾತಿ ನೀಡುವುದಕ್ಕೆ ಅಗತ್ಯವಾದ ಸಮಗ್ರ ಮತ್ತು ಅಧಿಕೃತ ಮಾಹಿತಿ ಕರ್ನಾಟಕದಲ್ಲಿ ಲಭ್ಯ ಇದೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಮೂರು ಸೂತ್ರಗಳ ಆಧಾರದಲ್ಲಿ ಪರಿಶೀಲನೆ ನಡೆಸಲು ಈ ಅಂಕಿ ಅಂಶಗಳನ್ನು ಬಳಸಿಕೊಳ್ಳಬಹುದು. ಆ ಮೂಲಕ ಒಬಿಸಿ ಸಮುದಾಯಗಳಿಗೆ ಕನಿಷ್ಠ ಅವಧಿಯಲ್ಲಿ ರಾಜಕೀಯ ಮೀಸಲಾತಿ ನೀಡಬಹುದು

**

ಸಂವಿಧಾನಕ್ಕೆ 1993ರಲ್ಲಿ ಮಾಡಲಾದ 73 ಮತ್ತು 74ನೇ ತಿದ್ದುಪ‍ಡಿ ಪ್ರಕಾರ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ243(ಡಿ)(6) ಹಾಗೂ 243(ಟಿ)(6) ವಿಧಿ ಅಡಿಯಲ್ಲಿ ಸ್ಥಾನಗಳನ್ನು ಮೀಸಲಿರಿಸಬೇಕಾಗಿದೆ. ಈ ತಿದ್ದುಪಡಿಗಳ ಉದ್ದೇಶ ಅವಕಾಶವಂಚಿತ ದುರ್ಬಲ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ನೀಡಿ, ರಾಜಕೀಯ ಶಕ್ತಿ ತುಂಬುವುದು.

-ಎಚ್. ಕಾಂತರಾಜ
-ಎಚ್. ಕಾಂತರಾಜ

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಗರಪಾಲಿಕೆ, ಪುರಸಭೆ, ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಒಳಪಡುತ್ತವೆ. ಸಂವಿಧಾನದ 73ನೇ ತಿದ್ದುಪಡಿಯ ಅನ್ವಯ ನಮ್ಮ ರಾಜ್ಯದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ನ್ನು ರಚಿಸಿ ಮೀಸಲಾತಿ ಕಲ್ಪಿಸಲಾಗಿದೆ. ಕರ್ನಾಟಕದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಸದಸ್ಯರ ಅವಧಿ ಮುಗಿದು ಒಂದು ವರ್ಷಕ್ಕಿಂತಲೂ ಮೇಲಾಗಿದೆ. ಚುನಾವಣೆ ನಡೆಸುವುದು ಬಾಕಿ ಇದೆ. 1993ರ ನಂತರ ಇಲ್ಲಿಯವರೆಗೆ 29 ವರ್ಷಗಳ ಕಾಲ ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಸ್ಥಾನಗಳ ಮೀಸಲಾತಿಯನ್ನು ಪಡೆದಿವೆ. ಒಬಿಸಿ ಮೀಸಲಾತಿ ನೀಡಲು ಸಾಧ್ಯವಿಲ್ಲದ ಪರಿಸ್ಥಿತಿಯು ಈಗ ನಿರ್ಮಾಣ ಆಗಿದೆ. ಸುಪ್ರೀಂ ಕೋರ್ಟ್‌ ಮೀಸಲಾತಿಗೆ ಸಂಬಂಧಿಸಿ ನೀಡಿರುವ ಆದೇಶಗಳನ್ನು ರಾಜ್ಯವು ಪಾಲಿಸದೇ ಇರುವುದು ಇದಕ್ಕೆ ಕಾರಣ.

ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ನಿಖರವಾದ ದತ್ತಾಂಶದ ಅವಶ್ಯಕತೆ ಇದೆ ಎಂದು ಕೆ. ಕೃಷ್ಣಮೂರ್ತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 2010ರ ಮೇಯಲ್ಲಿ ಹೇಳಿತ್ತು. ಸಂವಿಧಾನದ 15 (4) ಮತ್ತು 16 (4) ವಿಧಿಗಳ ಪ್ರಕಾರ ಶಿಕ್ಷಣ ಮತ್ತು ಉದ್ಯೋಗದಲ್ಲಿ ನೀಡುವ ಮೀಸಲಾತಿಯ ಮಾನದಂಡಗಳು ರಾಜಕೀಯ ಮೀಸಲಾತಿಗೆ ಅನ್ವಯಿಸುವುದಿಲ್ಲ; ರಾಜಕೀಯ ಮೀಸಲಾತಿಯ ಮಾನದಂಡ ಪ್ರತ್ಯೇಕವಾಗಿರಬೇಕು ಮತ್ತು ಭಿನ್ನವಾಗಿರಬೇಕು. ಒಬಿಸಿಯಲ್ಲಿರುವ ಜಾತಿಗಳಲ್ಲಿ ಯಾವುವು ರಾಜಕೀಯವಾಗಿ ಹಿಂದುಳಿದಿವೆ ಎಂಬುದನ್ನು ಲೆಕ್ಕಹಾಕಬೇಕು. ರಾಜಕೀಯ ಮೀಸಲಾತಿ ನಿಗದಿಗೆ ಪ್ರತ್ಯೇಕ ಆಯೋಗ ಬೇಕು ಎಂದು ಕೋರ್ಟ್‌ ಹೇಳಿತ್ತು.

ಮಹಾರಾಷ್ಟ್ರದ ವಿಕಾಸ್‌ ಕೃಷ್ಣರಾವ್‌ ಗವಳಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠವು, ಕೃಷ್ಣಮೂರ್ತಿ ಪ್ರಕರಣದ ತೀರ್ಪು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯ ಎಂದು 2021ರ ಮಾರ್ಚ್‌ 4ರಂದು ಆದೇಶಿಸಿದೆ. ಕೋರ್ಟ್‌ ತೀರ್ಪಿನಲ್ಲಿ ಇರುವ ಮೂರು ಸೂತ್ರಗಳ ಪ್ರಮುಖ ಅಂಶಗಳು ಹೀಗಿವೆ:

1. ಹಿಂದುಳಿದ ವರ್ಗಗಳ ಪ್ರಮುಖ ಜಾತಿಗಳು ರಾಜಕೀಯವಾಗಿ ಹಿಂದುಳಿದಿವೆಯೇ ಅಥವಾ ಮುಂದುವರಿದಿವೆಯೇ ಎಂಬುದರ ವಿಸ್ತೃತ ಅಧ್ಯಯನ, ಸಂವಿಧಾನದ 243 (ಡಿ) (6) ಮತ್ತು 243 (ಟಿ)(6) ವಿಧಿಗಳ ಅಡಿಯಲ್ಲಿ ಈ ಜಾತಿಗಳನ್ನು ಮೀಸಲಾತಿ ವ್ಯಾಪ್ತಿಗೆ ತರುವುದು ರಾಜ್ಯ ಸರ್ಕಾರಗಳ ಹೊಣೆಗಾರಿಕೆ. ಈ ಉದ್ದೇಶಕ್ಕಾಗಿ ಪ್ರತ್ಯೇಕ ಆಯೋಗವನ್ನು ರಾಜ್ಯವು ರಚಿಸಬೇಕು. ಆಯೋಗವು ಯಾವೆಲ್ಲ ಅಂಶಗಳನ್ನು ಪರಿಶೀಲಿಸಿ ವರದಿ ತಯಾರಿಸಬೇಕು ಎಂಬ ಬಗ್ಗೆ ಮಾನದಂಡವನ್ನೂ ರೂಪಿಸಬೇಕು.

2. ಈ ಉದ್ದೇಶಕ್ಕಾಗಿ ರಚಿಸಿದ ಆಯೋಗದ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಜಾತಿಗಳ ಮೀಸಲಾತಿ ಪ್ರಮಾಣ ನಿಗದಿಗೊಳಿಸಬೇಕು.

3. ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿರುವಂತೆ ಮೀಸಲಾತಿಯ ಒಟ್ಟು ಪ್ರಮಾಣವು ಯಾವುದೇ ಕಾರಣಕ್ಕೂ ಶೇ 50ರಷ್ಟನ್ನು ಮೀರಬಾರದು.‌

ಈ ಸೂತ್ರಗಳ ಆಧಾರದಲ್ಲಿಯೇ ಮೀಸಲಾತಿ ನಿಗದಿ ಮಾಡಬೇಕು ಎಂದು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿಯೂ ಸುಪ್ರೀಂ ಕೋರ್ಟ್‌ 2021ರ ಡಿಸೆಂಬರ್‌ 15 ಮತ್ತು ಡಿಸೆಂಬರ್‌ 17ರಂದು ಮತ್ತೆ ಹೇಳಿದೆ. ಈ ಸೂತ್ರ ಪಾಲನೆ ಆಗದೇ ಇದ್ದರೆ ಒಬಿಸಿ ಮೀಸಲಾತಿಯನ್ನು ಒಪ್ಪಿಕೊಳ್ಳಲಾಗದು ಎಂದೂ ಕೋರ್ಟ್ ಹೇಳಿದೆ.

ಮೇಲೆ ಉಲ್ಲೇಖಿಸಿದ ತ್ರಿಸೂತ್ರಗಳನ್ನು ಪಾಲಿಸಿ ಇತರೆ ಹಿಂದುಳಿದ ವರ್ಗಗಳಿಗೆ ಶೇ 27ರಷ್ಟು ರಾಜಕೀಯ ಮೀಸಲಾತಿ ನೀಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಚುನಾವಣೆಯನ್ನು ರಾಜ್ಯ ಸರ್ಕಾರ ನಡೆಸುವುದೇ ಎಂಬುದು ಬಹುಮುಖ್ಯವಾದ ಪ್ರಶ್ನೆ.

ಮಹಾರಾಷ್ಟ್ರದ ಹಿಂದುಳಿದ ವರ್ಗಗಳ ಆಯೋಗವು ಈ ಸೂತ್ರಗಳನ್ನು ಪಾಲಿಸದೆ ನೀಡಿದ್ದ ವರದಿಯನ್ನು ಸುಪ್ರೀಂ ಕೋರ್ಟ್‌ ಇದೇ 3ರಂದು ತಿರಸ್ಕರಿಸಿದೆ. ಒಬಿಸಿ ಮೀಸಲು ಕ್ಷೇತ್ರಗಳನ್ನು ಸಾಮಾನ್ಯ ಕ್ಷೇತ್ರಗಳು ಎಂದು ಪರಿಗಣಿಸಿ ಚುನಾವಣೆ ನಡೆಸಬೇಕು, ಚುನಾವಣೆಯನ್ನು ಅನಿರ್ದಿಷ್ಟ ಕಾಲ ಮುಂದೂಡಲಾಗದು ಎಂದು ಕೋರ್ಟ್‌ ಹೇಳಿದೆ.

ಕರ್ನಾಟಕದ ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ಒಬಿಸಿ ಮೀಸಲಾತಿ ವಿಷಯಕ್ಕೆ ಬಂದರೆ, ಇತರೆ ರಾಜ್ಯಗಳಿಗಿಂತ ಕರ್ನಾಟಕದ ಸ್ಥಿತಿ ಭಿನ್ನವಾಗಿದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ವೈಜ್ಞಾನಿಕವಾದ ಜಾತಿಗಣತಿ ದತ್ತಾಂಶ ದೃಷ್ಟಿಯಿಂದ ರಾಜ್ಯದಲ್ಲಿ ಸಮಗ್ರವಾದ ಸಮೀಕ್ಷೆಯನ್ನು ನಡೆಸಲು ಆದೇಶಿಸಿ ಸಮೀಕ್ಷೆ ಕಾರ್ಯವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ2014ರಲ್ಲಿ ವಹಿಸಿತ್ತು.ಆಯೋಗವು 2015ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ನಡೆಸಿದೆ. ರಾಜ್ಯದ ಎಲ್ಲಾ ಜಾತಿ-ಸಮುದಾಯಗಳ ಜನರ ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಈ ಸಮೀಕ್ಷೆ ನಡೆಸಲಾಗಿದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ–1995 ವ್ಯಾಪ್ತಿಯಲ್ಲಿಆಯೋಗವು ಕಾರ್ಯ ನಿರ್ವಹಿಸಬೇಕು. ರಾಜಕೀಯ ಮೀಸಲಾತಿ ನಿರ್ಧರಿಸುವ ಅವಕಾಶವು 1995ರ ಕಾಯ್ದೆಯ ವ್ಯಾಪ್ತಿಯಲ್ಲಿ ಇಲ್ಲ. ಹಾಗಿದ್ದರೂ ರಾಜ್ಯದ ಎಲ್ಲ ಜನರನ್ನು ಒಳಗೊಂಡು ಈ ಸಮೀಕ್ಷೆ ನಡೆಸಲಾಗಿದೆ. ಪರಿಣತರ ಅಭಿಪ್ರಾಯ ಪಡೆದು, 55 ಅಂಶಗಳ ಮಾನದಂಡ ರೂಪಿಸಿ ನಿಖರವಾದ ಅಂಕಿ ಅಂಶ ಪಡೆಯುವ ಪ್ರಯತ್ನ ನಡೆಸಲಾಗಿದೆ. ಅದರಲ್ಲಿ ಪ್ರತಿಯೊಬ್ಬ ವ್ಯಕ್ತಿ ಹಾಗೂ ಕುಟುಂಬದ ಎಲ್ಲಾ ಹಂತದ ರಾಜಕೀಯ ಪ್ರಾತಿನಿಧ್ಯದ ಅಂಶವೂ ಸೇರಿದೆ. ಕರ್ನಾಟಕ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ವರದಿಯಲ್ಲಿ ಈ ಎಲ್ಲ ಮಾಹಿತಿಯೂ ಇದೆ. ಇಂಥ ಸಮಗ್ರವಾದ ಸಮೀಕ್ಷೆಯ ಅವಶ್ಯಕತೆ ಇದೆ ಎಂದು ಸುಪ್ರೀಂ ಕೋರ್ಟ್ ಇಂದ್ರಾ ಸಾಹ್ನಿ ಪ್ರಕರಣದಲ್ಲಿ ಹೇಳಿತ್ತು.

ಆದ್ದರಿಂದ, 2015ರ ಸಮೀಕ್ಷೆಯಲ್ಲಿ ಸಂಗ್ರಹಿಸಿದ ಅಂಕಿ-ಅಂಶಗಳನ್ನು ಬಳಸಿಕೊಳ್ಳದೇ ಇರಲು ಕಾರಣಗಳು ಕಾಣಿಸುತ್ತಿಲ್ಲ. ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಕೂಡಾ ಸಮೀಕ್ಷೆಯ ಅಂಕಿಂಶವನ್ನು ಬಳಸಿಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಜಾತಿ ಆಧಾರಿತ ರಾಜಕೀಯ ಮೀಸಲಾತಿಗೆ ಮುಖ್ಯವಾಗಿ ಬೇಕಾದ ಜಾತಿವಾರು ಜನಸಂಖ್ಯೆಯ ಅಂಕಿ-ಅಂಶಗಳು ವರದಿಯಲ್ಲಿ ಇವೆ. ಜತೆಗೆ, 1993ರಿಂದ 2021ರವರೆಗೆ ಎಲ್ಲ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಚುನಾಯಿತರಾದ ಸದಸ್ಯರ ಜಾತಿವಾರು ಅಂಕಿ ಅಂಶಗಳನ್ನು ದ್ವಿತೀಯ ಮೂಲದಿಂದ ಪಡೆದು ವರದಿಯಲ್ಲಿ ಸೇರಿಸಿಕೊಳ್ಳಲಾಗಿದೆ.

ರಾಜಕೀಯ ಪ್ರಾತಿನಿಧ್ಯದ ಮೀಸಲಾತಿ ನೀಡುವುದಕ್ಕೆ ಅಗತ್ಯವಾದ ಸಮಗ್ರ ಮತ್ತು ಅಧಿಕೃತ ಮಾಹಿತಿ ಕರ್ನಾಟಕದಲ್ಲಿ ಲಭ್ಯ ಇದೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಮೂರು ಸೂತ್ರಗಳ ಆಧಾರದಲ್ಲಿ ಪರಿಶೀಲನೆ ನಡೆಸಲು ಈ ಅಂಕಿ ಅಂಶಗಳನ್ನು ಬಳಸಿಕೊಳ್ಳಬಹುದು. ಆ ಮೂಲಕ ಒಬಿಸಿ ಸಮುದಾಯಗಳಿಗೆ ಕನಿಷ್ಠ ಅವಧಿಯಲ್ಲಿ ರಾಜಕೀಯ ಮೀಸಲಾತಿ ನೀಡಬಹುದು.

ಯಾವುದೇ ಆಯೋಗಕ್ಕೆ ಬೇಕಾದ ನಿಖರವಾದ ಅಂಕಿ-ಅಂಶಗಳನ್ನು ಒದಗಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ. ಹತ್ತು ವರ್ಷಗಳಿಗೆ ಒಮ್ಮೆ ನಡೆಸಲಾಗುವ ಜನಗಣತಿಯಲ್ಲಿ 1931ರ ನಂತರ ಇತರೆ ಹಿಂದುಳಿದ ವರ್ಗಗಳ ಕುರಿತ ಅಧಿಕೃತವಾದ ಜಾತಿವಾರು ಮಾಹಿತಿ ಇಲ್ಲ.

ಪ್ರತ್ಯೇಕವಾದ ಆಯೋಗವನ್ನು ರೂಪಿಸಿ, ಮೂರು ಸೂತ್ರಗಳಿಗೆ ಅನುಸಾರವಾದ ವರದಿಯನ್ನು ಪಡೆದು ಒಬಿಸಿ ಮೀಸಲು ನಿಗದಿ ಮಾಡುವುದು ಸರ್ಕಾರದ ಮುಂದಿರುವ ಆಯ್ಕೆ. ನಿಗದಿತ ಅವಧಿಯಲ್ಲಿ ಈ ಪ್ರಯತ್ನ ಆಗದೇ,‌ ಮೀಸಲು ವಾರ್ಡ್‌ಗಳನ್ನು ಸಾಮಾನ್ಯ ವಾರ್ಡ್‌ ಎಂದು ಪರಿಗಣಿಸಿ ಚುನಾವಣೆ ನಡೆಸುವುದು ಸಾಮಾಜಿಕ ನ್ಯಾಯದ ಉಲ್ಲಂಘನೆ ಎನಿಸುತ್ತದೆ.

ಲೇಖಕ: ಮಾಜಿ ಅಧ್ಯಕ್ಷ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ

**

ರಾಜಕೀಯ ಮೀಸಲಾತಿ ನಮ್ಮ ವ್ಯಾಪ್ತಿಯಲ್ಲಿಲ್ಲ: ಜಯಪ್ರಕಾಶ್‌ ಹೆಗ್ಡೆ
ಯಾವುದೇ ಸಮುದಾಯಕ್ಕೆ ರಾಜಕೀಯ ಮೀಸಲಾತಿ ನಿರ್ಣಯಿಸುವ ವಿಷಯ ನಮ್ಮ (ಹಿಂದುಳಿದ ವರ್ಗಗಳ ಆಯೋಗ) ವ್ಯಾಪ್ತಿಗೆ ಬರುವುದಿಲ್ಲ. ರಾಜಕೀಯ ಸ್ಥಿತಿಗತಿಯನ್ನು ಸಮೀಕ್ಷೆ ಮಾಡಿ ಈ ಬಗ್ಗೆ ತೀರ್ಮಾನಿಸಲು ಆಯೋಗದ ಕಾಯ್ದೆಯಲ್ಲಿ ಅವಕಾಶ ಕೊಟ್ಟಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ತಿರ್ಮಾನ ತೆಗೆದುಕೊಳ್ಳಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಪ್ರತ್ಯೇಕ ಆಯೋಗ ರಚಿಸುವಂತೆ ಕೋರ್ಟ್‌ ಹೇಳಿದೆ. ನಾವು ಈ ಕೆಲಸ ಮಾಡಬೇಕೆಂದರೆ ನಮ್ಮ ಕಾಯ್ದೆಯಲ್ಲಿ ತಿದ್ದುಪಡಿ ಮಾಡಬೇಕು.

ಈಗಿರುವ ಕಾಯ್ದೆಯಡಿ ಆಯೋಗಕ್ಕೆ ಆ ಅವಕಾಶ ಇಲ್ಲ. ನಾವು ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಸಮೀಕ್ಷೆಯನ್ನು ಮಾತ್ರ ಮಾಡಬಹುದು.

ಈ ಹಿಂದಿನ ಆಯೋಗದ ಅವಧಿಯಲ್ಲಿ ರಾಜ್ಯದಲ್ಲಿ ನಡೆದಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸ್ವೀಕರಿಸುವುದು
ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು. ಈ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಿದೆ. ಆದರೆ, ಈ ವರದಿ ವಿಚಾರ ಸದ್ಯ ಕೋರ್ಟ್‌ನಲ್ಲಿದೆ. ವರದಿಯನ್ನು ಸರ್ಕಾರ ಯಾಕೆ ಸ್ವೀಕರಿಸಿಲ್ಲ ಎಂಬ ಬಗ್ಗೆ ಹಿಂದೆಯೂ ಚರ್ಚೆ ನಡೆದಿದೆ. ನಾವು ಒಂದು ಮಾಡಬಹುದು, ಅಂದರೆ ವರದಿಯನ್ನು ಸರ್ಕಾರಕ್ಕೆ ಕೊಡಬಹುದು. ಆದರೆ, ಕಾಯ್ದೆಯ ಪ್ರಕಾರ ಈ ಸಮೀಕ್ಷಾ ವರದಿ ಅಧಿಕೃತಗೊಳ್ಳಬೇಕಿದ್ದರೆ ಆಯೋಗದ ಸದಸ್ಯ ಕಾರ್ಯದರ್ಶಿ ಅದಕ್ಕೆ ಸಹಿ ಹಾಕಿರಬೇಕು. ಸದಸ್ಯ ಕಾರ್ಯದರ್ಶಿ ಸಹಿ ಹಾಕಿಲ್ಲ. ನಾವು ಅದರ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಶೀಘ್ರದಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ.

–ಕೆ. ಜಯಪ್ರಕಾಶ್‌ ಹೆಗ್ಡೆ, ಅಧ್ಯಕ್ಷರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ

**

‘ಆಯೋಗಕ್ಕೆ ಸಮೀಕ್ಷೆ ಅಧಿಕಾರ ನೀಡಿ’
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಕಾನೂನಿಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ, ಆಯೋಗಕ್ಕೆ ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯದ ಸಮೀಕ್ಷೆ ನಡೆಸಲು ಅಧಿಕಾರ ನೀಡಬೇಕು. ಆಯೋಗವು ರಾಜಕೀಯ ಹಿಂದುಳಿದಿರು ವಿಕೆಯ ಸಮೀಕ್ಷೆ ನಡೆಸಿ ಮೂರು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ನಿರ್ದೇಶಿಸಬೇಕು. ಸರ್ಕಾರ ಸಾಂವಿಧಾನಿಕ ಮೂಲತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ.

ಈ ಹಿಂದೆ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜಗದೀಶ್‌ ಸಿಂಗ್‌ ಖೇಹರ್ ಅವರು, ‘ಇಲ್ಲಿ ಲಿಂಗಾಯತ–ಒಕ್ಕಲಿಗರ ಪ್ರಾಬಲ್ಯವಿದೆ. ಅವರೂ ಇತರೆ ಹಿಂದುಳಿದ ವರ್ಗಗಳ ಅಡಿಯಲ್ಲಿ ಮೀಸಲಾತಿ ಪಡೆಯುತ್ತಿದ್ದಾರೆ ಅಲ್ಲವೇ’ ಎಂದು ಪ್ರಶ್ನಿಸಿದ್ದರು. ಇದನ್ನು ಈಗ ಯಾಕೆ ನೆನಪಿಸಿಕೊಳ್ಳಬೇಕಾಗಿದೆ ಎಂದರೆ, ಕರ್ನಾಟಕದಲ್ಲಿ ಈತನಕ ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಮೀಕ್ಷೆ ನಡೆದಿಲ್ಲ. ಸುಪ್ರಿಂ ಕೋರ್ಟ್‌ನಲ್ಲಿ ಇಂದಿರಾ ಸಾಹ್ನಿ ಪ್ರಕರಣ ಆದ ನಂತರ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರ ಸಮೀಕ್ಷೆ ನಡೆಯಬೇಕು ಎಂಬ ನೆಲೆಗಟ್ಟಿನಲ್ಲೇ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವನ್ನು ರಚಿಸಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಶೈಕ್ಷಣಿಕ ಸಾಮಾಜಿಕ ಸಮೀಕ್ಷೆ ನಡೆದಿದೆ. ಆದರೆ, ಕಾಂತರಾಜ ಆಯೋಗದ ವರದಿ ಆಧಾರಿತವಾಗಿಯೇ ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯವನ್ನು ನಾವು ಗುರುತಿಸಲು ಸಾಧ್ಯವಿಲ್ಲ.

–ಎ.ಎಸ್.ಪೊನ್ನಣ್ಣ,ಹಿರಿಯ ವಕೀಲ, ಹೈಕೋರ್ಟ್

**

‘ಜಾತಿ ಗಣತಿ ವರದಿ ಬಳಸಿಕೊಳ್ಳಲಾಗದು’
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಈ ಹಿಂದಿನ ಅಧ್ಯಕ್ಷ ಎಚ್‌.ಕಾಂತರಾಜ ಆಯೋಗ ನಡೆಸಿದ ಸಮೀಕ್ಷೆಯಲ್ಲಿರುವ ಮಾಹಿತಿ ಅಥವಾ ಅಂಕಿ ಅಂಶಗಳನ್ನು ಬಳಸಿಕೊಳ್ಳಲು ಈಗ ಸಾಧ್ಯವಿಲ್ಲ. ಯಾಕೆಂದರೆ, ಈ ಆಯೋಗದ ವರದಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಕೆಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ವಿಚಾರಣೆಗೆ ಬಾಕಿ ಇವೆ. ಹೀಗಿರುವಾಗ ಈ ಆಯೋಗದ ವರದಿ ಆಧಾರದ ಮೇಲೆ ಚುನಾವಣೆ ಮಾಡಲು ಬರೋದಿಲ್ಲ.

-ಡಿ.ಎಲ್‌.ಜಗದೀಶ್, ಹಿರಿಯ ವಕೀಲ, ಹೈಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT