ಸಿನಿಮಾ, ವೆಬ್ ಸರಣಿ, ಟಿ.ವಿ.ಷೋ ನಿರ್ಮಾಣದ ವಿವಿಧ ಹಂತಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅನ್ನು ಬಳಸಲಾಗುತ್ತಿದೆ. ಈ ಮೂಲಕ ಕಲಾವಿದರು, ತಂತ್ರಜ್ಞರು, ಚಿತ್ರಸಾಹಿತಿಗಳ ಉದ್ಯೋಗಕ್ಕೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿ ಹಾಲಿವುಡ್ ಕಲಾವಿದರು ಇದೇ ಮೇನಲ್ಲಿ ಮುಷ್ಕರ ಆರಂಭಿಸಿದ್ದರು. ಆ ಮುಷ್ಕರ ಈಗ ನಾಲ್ಕನೇ ತಿಂಗಳಿಗೆ ಕಾಲಿಟ್ಟಿದೆ. ಕೃತಕ ಬುದ್ಧಿಮತ್ತೆಯನ್ನು ಎಲ್ಲದರಲ್ಲೂ ಹೀಗೆ ಬಳಸುತ್ತಾ ಹೋದರೆ, ಮುಂದೊಂದು ದಿನ ನಮಗೆ ಉದ್ಯೋಗವೇ ಇಲ್ಲದಂತಾಗುತ್ತದೆ ಎಂಬುದು ಮುಷ್ಕರನಿರತ ಕಲಾವಿದರು, ತಂತ್ರಜ್ಞರು ಮತ್ತು ಚಿತ್ರ ಸಾಹಿತಿಗಳ ಕಳವಳ.
ಹಾಲಿವುಡ್ ಸಿನಿಮಾಗಳಲ್ಲಿ ಅನಿವಾರ್ಯ ಸಂದರ್ಭಗಳಲ್ಲಷ್ಟೇ ಬಳಕೆಯಾಗುತ್ತಿದ್ದ ಸಿಜಿಐನಂತಹ ಅರೆಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಈಗ ಇಡೀ ಚಿತ್ರನಿರ್ಮಾಣಕ್ಕೆ ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಬೇರೆ ಬೇರೆ ಎಐ ತಂತ್ರಜ್ಞಾನಗಳನ್ನು ಬಳಸಿಕೊಂಡು ಚಿತ್ರನಿರ್ಮಾಣದ ಎಲ್ಲಾ ಹಂತಗಳಲ್ಲೂ ತಂತ್ರಜ್ಞರು ಮತ್ತು ಕಲಾವಿದರನ್ನು ಚಿತ್ರನಿರ್ಮಾಣ ಕಂಪನಿಗಳು ಹೊರದೂಡುತ್ತಿವೆ. ಈ ಬೆಳವಣಿಗೆಯಿಂದ ನಮ್ಮನ್ನು ರಕ್ಷಿಸಬೇಕು ಎಂಬುದು ಮುಷ್ಕರನಿರತರ ಆಗ್ರಹ.
ಮುಷ್ಕರನಿರತರ ಕಳವಳಕ್ಕೆ ಇಂಬು ನೀಡುವಂತಹ ಹಲವು ಬೆಳವಣಿಗೆಗಳೂ ಹಾಲಿವುಡ್ ಅಂಗಳದಲ್ಲಿ ನಡೆದಿವೆ. ಹಾಲಿವುಡ್‌ನ ಅತ್ಯಂತ ಡೊಡ್ಡ ನಿರ್ಮಾಣ ಕಂಪನಿಗಳಲ್ಲಿ ಒಂದಾದ ಡಿಸ್ನಿಯು ಚಿತ್ರಕತೆ, ಸ್ಟುಡಿಯೊ ನಿರ್ವಹಣೆ, ಚಿತ್ರನಿರ್ಮಾಣ, ಪ್ರಚಾರ ಮತ್ತು ಮಾರುಕಟ್ಟೆ ಎಲ್ಲಾ ಹಂತಗಳಲ್ಲೂ ಎಐ ಅನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಹೊಸ ತಂಡವೊಂದನ್ನು ನೇಮಕ ಮಾಡಿಕೊಂಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಎಐ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ನವೋದ್ಯಮಗಳೊಂದಿಗೆ ಈ ತಂಡ ಸಮಾಲೋಚನೆ ನಡೆಸುತ್ತಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರ ಜತೆಯಲ್ಲೇ, ನೆಟ್‌ಫ್ಲಿಕ್ಸ್ ಎಐ ನಿರ್ವಹಣೆಗೆ ಎಂದು ಒಂದು ಹುದ್ದೆಯನ್ನು ಸೃಷ್ಟಿಸಿದೆ. ಆ ಹುದ್ದೆಗೆ ಅರ್ಜಿಗಳನ್ನೂ ಆಹ್ವಾನಿಸಿದೆ.
ಇದು ಕಲಾವಿದರು, ತಂತ್ರಜ್ಞರು ಮತ್ತು ಚಿತ್ರ ಸಾಹಿತಿಗಳ ಕಳವಳವನ್ನು ತೀವ್ರಗೊಳಿಸಿದೆ. ಅವರ ಮುಷ್ಕರ ಮತ್ತು ಪ್ರತಿಭಟನೆಯೂ ತೀವ್ರಗೊಂಡಿದೆ. ಹಾಲಿವುಡ್ ಅಂಗಳಕ್ಕೆ ಎದುರಾದ ಈ ಆತಂಕ, ಭಾರತೀಯ ಚಿತ್ರರಂಗಕ್ಕೂ ಬರುವ ದಿನ ದೂರವಿಲ್ಲ ಎಂದು ಅಂದಾಜಿಸಲಾಗುತ್ತಿದೆ. ಹಾಗೆಯೇ ಆದರೆ, ಭಾರತದ ಕಲಾವಿದರೂ ಒಂದು ದಿನ ಕೃತಕಬುದ್ಧಿಮತ್ತೆ ವಿರುದ್ಧ ಮುಷ್ಕರಕ್ಕೆ ಇಳಿಯಬೇಕಾಗಬಹುದು.
ಕತೆ ಕಟ್ಟುವುದು, ಕತೆಯನ್ನು ದೃಶ್ಯಕಾವ್ಯವಾಗಿಸುವುದು ಕಲಾತ್ಮಕ ಕುಸುರಿ ಕೆಲಸವಾಗಿತ್ತು. ಸ್ಪಷ್ಟವಾಗಿ ಹೇಳುವುದಾದರೆ, ಅದು ಮನುಷ್ಯನ ಕಲಾತ್ಮಕ ಕುಸುರಿ ಕೆಲಸವಾಗಿತ್ತು. ಆದರೆ, ಈಗ ಸಿನಿಮಾ ಮಾಡುವುದು ಬಹಳ ಸುಲಭದ, ಯಾಂತ್ರಿಕವಾದ ಕೆಲಸ ಎಂಬಂತಾಗಿದೆ. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಈಗ ಸಿನಿಮಾವನ್ನು ಸಿದ್ಧಪಡಿಸಬಹುದಿದೆ.
ಬೇರೆ ಬೇರೆ ದೇಶಗಳಲ್ಲಿ ಇಂಥ ಪ್ರಯೋಗಗಳು ದೊಡ್ಡ ಸಂಖ್ಯೆಯಲ್ಲಿ ನಡೆಯುತ್ತಿದೆ. ಇದೇ ವರ್ಷದ ಮೇನಲ್ಲಿ 12 ನಿಮಿಷದ ಸಿನಿಮಾ ‘ಫ್ರಾಸ್ಟ್’ ಬಿಡುಗಡೆಗೊಂಡಿದೆ. ಇದು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ನಿರ್ಮಿಸಿದಂಥ ಸಿನಿಮಾವಾಗಿದೆ. ಆದರೆ, ಭಾರತವನ್ನು ಇಂಥ ತಂತ್ರಜ್ಞಾನವು ನಿಧಾನವಾಗಿ ಆವರಿಸಿಕೊಳ್ಳತೊಡಗಿದೆ.
ಕ್ಷಣಾರ್ಧದಲ್ಲಿ ಕತೆ ಸಿದ್ಧ: ಕಥೆ ಬರೆಯುವವರು, ನಿರ್ದೇಶಕರು, ನಿರ್ಮಾಪಕರು ಎಲ್ಲರೂ ಸೇರಿ ಒಂದೆಡೆ ಕೂತು ಸಿನಿಮಾದ ಕತೆಯ ಎಳೆಯನ್ನು ನಿರ್ಧರಿಸಬೇಕಿತ್ತು. ಇದಕ್ಕಾಗಿ ಹಲವು ತಿಂಗಳು, ಕೆಲವೊಮ್ಮೆ ವರ್ಷಗಳೇ ಆಗುತ್ತಿದ್ದವು. ಒಂದೊಮ್ಮೆ ಅದು ಸರಿ ಬರಲಿಲ್ಲ ಎಂದಾದರೆ, ಮತ್ತೊಮ್ಮೆ ತಿದ್ದುಪಡಿ, ಮಗದೊಮ್ಮೆ ತಿದ್ದುಪಡಿ... ಹೀಗೆ ಸಮಯ ಹಿಡಿಯುತ್ತಿತ್ತು. ಆದರೆ, ಈಗ ಕತೆ ಸಿದ್ಧಪಡಿಸುವುದು ಸುಲಭವಾಗಿದೆ. ಯಾವ ರೀತಿಯ ಕತೆ ಬೇಕು, ಎಷ್ಟು ಪಾತ್ರಗಳಿರಬೇಕು, ಕತೆಯ ಕಾಲ, ಸ್ಥಳ ಹೀಗೆ ಕೆಲವು ಮಾಹಿತಿಗಳನ್ನು ಚಾಟ್‌ಜಿಪಿಟಿಯಲ್ಲಿ ಟೈಪಿಸಿದರೆ ಸಾಕು, ಕ್ಷಣಾರ್ಧದಲ್ಲಿ ನಿಮಗೆ ನಿಮ್ಮ ಸಿನಿಮಾದ ಕತೆ ಸಿದ್ಧವಾಗುತ್ತದೆ! ಇದಕ್ಕಾಗಿ ಹಲವು ಆ್ಯಪ್‌ಗಳೂ ಇವೆ.
ಲಕ್ಷಾಂತರ ಸಿನಿಮಾ ಕತೆಗಳ, ಸ್ಕ್ರಿಪ್ಟ್‌ಗಳ ದೊಡ್ಡ ಸಾಗರದಿಂದ ಮಾಹಿತಿಗಳನ್ನು ಹೆಕ್ಕಿ, ನಿಮಗೆ ಬೇಕಾದಂತೆಯೇ ಕತೆಯನ್ನು ಜಾಟ್‌ಜಿಪಿಟಿ ನೀಡುತ್ತದೆ. ಅಲ್ಲಿಗೆ ಕಥೆ ಸಿದ್ಧವಾಯಿತು. ನಂತರ ಈ ಕತೆಗೆ ಚಿತ್ರಕತೆಯನ್ನೂ ಇದೇ ಜಾಟ್‌ಜಿಪಿಟಿ ನೀಡುತ್ತದೆ. ಇದಾದಬಳಿಕ, ದೃಶ್ಯವೊಂದರಲ್ಲಿ ವಸ್ತುಗಳು ಹೇಗಿರಬೇಕು, ಎಲ್ಲಿರಬೇಕು, ಪಾತ್ರಗಳು ಎಲ್ಲಿರಬೇಕು, ಹೇಗಿರಬೇಕು ಹೀಗೆ ಒಂದೊಂದೂ ಸೂಕ್ಷ್ಮವನ್ನು ಜಾಟ್‌ಜಿಪಿಟಿಯೇ ಬರೆದುಕೊಡುತ್ತದೆ.
ಸಿನಿಮಾದ ಚಿತ್ರೀಕರಣಕ್ಕೆ ಸೂಕ್ತವಾದ ಜಾಗವನ್ನೂ ಇದೇ ಸೂಚಿಸುತ್ತದೆ. ಜೊತೆಗೆ, ಸಿನಿಮಾವೊಂದು ಚಿತ್ರೀಕರಣವನ್ನು ಆರಂಭಿಸಿ ಮುಗಿಸುವವರೆಗೂ ಯಾರು ಏನು ಮಾಡಬೇಕು, ನಟರ ದಿನಾಂಕಗಳನ್ನು ಹೊಂದಿಸಿ ಕೊಡುವುದು ಸೇರಿದಂತೆ ಸಿನಿಮಾದ ಸಂಪೂರ್ಣ ಶೆಡ್ಯೂಲ್ ಅನ್ನು ಚಾಟ್‌ಜಿಪಿಟಿಯೇ ಮಾಡಿಕೊಡುತ್ತದೆ.
ನಿರ್ದೇಶನಕ್ಕೂ ಸೈ: ಕೃತಕ ಬುದ್ಧಿಮತ್ತೆಯು ಸಿನಿಮಾದ ನಿರ್ದೇಶನವನ್ನೂ ಮಾಡಬಲ್ಲದು. ಛಾಯಾಚಿತ್ರಗ್ರಾಹಕರಿಗೆ ಕ್ಯಾಮೆರಾ ಆ್ಯಂಗಲ್‌ಗಳನ್ನೂ ಸೂಚಿಸಬಲ್ಲದು. ಬೆಳಕಿನ ವ್ಯವಸ್ಥೆ, ಒಂದು ದೃಶ್ಯದ ಕಲರ್ ಕೋಡಿಂಗ್‌ನಂಥ ಸೂಕ್ಷ್ಮ ವಿಷಯಗಳ ಕುರಿತೂ ಕೃತಕ ಬುದ್ಧಿಮತ್ತೆ ನಿಖರವಾಗಿ ಕೆಲಸ ಮಾಡಬಲ್ಲದು. ಕೃತಕ ಬುದ್ಧಿಮತ್ತೆಯ ನಿರ್ದೇಶನದಲ್ಲಿ ಕೆಲವು ಕಿರುಚಿತ್ರಗಳನ್ನು ನಿರ್ಮಿಸುವ ಪ್ರಯೋಗಗಳೂ ನಡೆದಿವೆ.
ಸಿನಿಮಾ ಇರಲೀ, ವೆಬ್ ಸರಣಿ ಇರಲೀ ಅಥವಾ ಟಿ.ವಿ ಷೋ ಇರಲಿ, ಪೋಸ್ಟ್ ಪ್ರೊಡಕ್ಷನ್ ಎಂಬುದು ಅತ್ಯಂತ ಮಹತ್ವದ ಘಟ್ಟ. ಡಬ್ಬಿಂಗ್, ಮಿಕ್ಸಿಂಗ್, ಸಂಗೀತ ಸಂಯೋಜನೆ, ಸಬ್‌ಟೈಟಲ್ ಎಲ್ಲಾ ಹಂತಗಳೂ ಒಂದು ಕಲಾಕೃತಿಯ ಅಂದ ಮತ್ತು ಸಾಧ್ಯತೆಗಳನ್ನು ಹೆಚ್ಚಿಸುವ ಅತ್ಯಂತ ಮಹತ್ವದ ಹಂತಗಳಾಗಿವೆ.
ಡಬ್ಬಿಂಗ್ ಮತ್ತು ಮಿಕ್ಸಿಂಗ್ ಒಂದು ಸಿನಿಮಾದ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಅತ್ಯಂತ ಮುಖ್ಯವಾದ ಘಟ್ಟ. ಕಲಾವಿದರ ತುಟಿಚಲನೆಗೆ ಹೊಂದಿಕೆಯಾಗುವಂತೆ ಡಬ್ಬಿಂಗ್ ಅನ್ನು ಹೊಂದಿಸುವುದು ಮತ್ತು ಸಂಗೀತವನ್ನು ಜೋಡಿಸುವುದು ಒಂದು ಕಲೆಯೂ ಹೌದು, ವಿಜ್ಞಾನವೂ ಹೌದು. ಈ ಕಾರ್ಯ ಮಾಡುವ ತಂತ್ರಜ್ಞನಿಗೆ ಏಕಕಾಲದಲ್ಲಿ ತಂತ್ರಜ್ಞಾನದ ಕೌಶಲವೂ ಇರಬೇಕು ಮತ್ತು ಅದನ್ನು ಅಂದಗಾಣಿಸುವ ಸೃಜನಶೀಲತೆಯೂ ಇರಬೇಕು. ಹೀಗೆ ಕೌಶಲ, ಶ್ರಮ ಮತ್ತು ಸೃಜನಶೀಲತೆ ಎಲ್ಲವನ್ನೂ ಬೇಡುವ ಮಿಕ್ಸಿಂಗ್ ಕಾರ್ಯಕ್ಕೆ ಕೃತಕ ಬುದ್ಧಿಮತ್ತೆ ಈಗಾಗಲೇ ಕಾಲಿಟ್ಟಿದೆ. ಎಐ ಅನ್ನು ಬಳಸಿಕೊಂಡು ಈಗಾಗಲೇ ಹಲವು ಕಿರುಚಿತ್ರಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳಲ್ಲಿ ಸುಧಾರಣೆಗೆ ಅವಕಾಶವಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡರೂ, ಅವು ಮಾನವನ ಶ್ರಮ, ಕೌಶಲ ಮತ್ತು ಸೃಜನಶೀಲತೆಯನ್ನು ‘ರಿಪ್ಲೇಸ್’ ಮಾಡಿದ್ದು ಸುಳ್ಳಲ್ಲ ಎಂಬುದನ್ನು ಆ ಕಿರುಚಿತ್ರ ನಿರ್ಮಾಣಗಳು ಸಾಬೀತುಮಾಡಿವೆ. ಹಾಲಿವುಡ್‌ನ ಕೆಲವು ದೊಡ್ಡ ಚಿತ್ರಗಳಿಗೂ ಈ ಹಂತದಲ್ಲಿ ಎಐ ಅನ್ನು ಬಳಸಿಕೊಳ್ಳಲಾಗುತ್ತಿದೆ.
ಜಗತ್ತಿನಾದ್ಯಂತ, ದೇಶದಾದ್ಯಂತ ಬಿಡುಗಡೆಯಾಗುವ ಚಿತ್ರಗಳಿಗೆ ಸಬ್‌ಟೈಟಲ್ ಬರೆಯುವುದು ಲಕ್ಷಾಂತರ ಜನರಿಗೆ ಉದ್ಯೋಗ ಮತ್ತು ಅತ್ಯುತ್ತಮ ಆದಾಯ ನೀಡುವ ಕ್ಷೇತ್ರ. ಒಂದಿಡೀ ಚಿತ್ರವನ್ನು ನೋಡುತ್ತಾ, ಅದಕ್ಕೆ ಸಬ್‌ಟೈಟಲ್ ಬರೆಯುವುದು ಮತ್ತು ಅದರಲ್ಲಿರುವ ತಪ್ಪುಗಳನ್ನು ಸರಿಪಡಿಸುವುದು ಅತ್ಯಂತ ಬೇಡಿಕೆ ಇರುವ ಉದ್ಯೋಗಗಳಲ್ಲಿ ಒಂದು. ಇದು ಏಕಕಾಲಕ್ಕೆ ಭಾಷಾಜ್ಞಾನ, ಸಾಹಿತ್ಯ, ಬರವಣಿಗೆ, ಭಾಷಾಂತರ ಎಲ್ಲವನ್ನೂ ಬೇಡುವ ಕೆಲಸ. ದೊಡ್ಡ–ದೊಡ್ಡ ಚಿತ್ರನಿರ್ಮಾಣ ಕಂಪನಿಗಳೆಲ್ಲವೂ ಒಂದು ಚಿತ್ರಕ್ಕೆ ಸಬ್‌ಟೈಟಲ್ ಬರೆಯಲು ವಾರಗಟ್ಟಲೆ ಕಾಲಾವಕಾಶ ಕೊಡುತ್ತವೆ ಮತ್ತು ಲಕ್ಷಾಂತರ ಸಂಭಾವನೆಯನ್ನೂ ನೀಡುತ್ತವೆ. ಆದರೆ ಕೃತಕ ಬುದ್ಧಿಮತ್ತೆಯೇ ಈಗ ಈ ಕೆಲಸವನ್ನು ಕೆಲವೇ ನಿಮಿಷಗಳಲ್ಲಿ ಮಾಡುತ್ತದೆ. ಸಬ್‌ಟೈಟಲ್ ಬರೆಯುವುದಲ್ಲದೆ, ಅದನ್ನು ಹಲವು ಭಾಷೆಗಳಿಗೆ ಭಾಷಾಂತರಿಸುವ ಕೆಲಸವನ್ನೂ ಕ್ಷಣಾರ್ಧದಲ್ಲಿ ಮಾಡುತ್ತಿದೆ. ಈ ಬೆಳವಣಿಗೆಯು ಈ ಕ್ಷೇತ್ರದಲ್ಲಿನ ಪರಿಣತ–ಉದ್ಯೋಗಿಗಳ ಕೆಲಸಕ್ಕೆ ಕುತ್ತು ತಂದಿದೆ.
ಸಿನಿಮಾದ ಪೋಸ್ಟರ್ ಸಿದ್ಧಪಡಿಸುವುದು ಅತ್ಯಂತ ಮುಖ್ಯವಾದ ಕೆಲಸಗಳಲ್ಲಿ ಒಂದು. ಸಿನಿಮಾ ಬಿಡುಗಡೆಗೂ ಮುನ್ನ, ಪ್ರೇಕ್ಷಕರನ್ನು ಆ ಸಿನಿಮಾದತ್ತ ಸೆಳೆಯುವ ಮುಖ್ಯ ಪರಿಕರಗಳಲ್ಲಿ ಪೋಸ್ಟರ್ ಬಹಳ ಪ್ರಮುಖವಾದುದು. ಟೀಸರ್ ಮತ್ತು ಟ್ರೇಲರ್‌ಗಳ ಈ ಯುಗದಲ್ಲಿಯೂ ಪೋಸ್ಟರ್‌ಗಳು ತಮ್ಮ ಪ್ರಾಮುಖ್ಯವನ್ನು ಉಳಿಸಿಕೊಂಡಿವೆ. ಸೃಜನಶೀಲತೆಯನ್ನು ಬೇಡುವ ಈ ಕೆಲಸಕ್ಕೆ ಪರಿಣತರೇ ಬೇಕು ಮತ್ತು ನಿರ್ಮಾಪಕರು ಅದಕ್ಕಾಗಿ ಲಕ್ಷಾಂತರ ರೂಪಾಯಿ ವ್ಯಯಿಸುತ್ತಾರೆ. ಹೀಗೆ ಸೃಜನಶೀಲತೆ ಬೇಡುವ ಪೋಸ್ಟರ್ ಕೆಲಸವನ್ನೂ ಈಗ ಕೃತಕ ಬುದ್ಧಿಮತ್ತೆಯು ಕ್ಷಣಾರ್ಧದಲ್ಲಿ ಮಾಡುತ್ತದೆ. ಕಲಾವಿದರ ಫೋಟೊಶೂಟ್ ನಡೆಸದೇ, ವಸ್ತ್ರವಿನ್ಯಾಸವಿಲ್ಲದೇ, ಸೆಟ್ಟಿಂಗ್ ಇಲ್ಲದೇ ಕೆಲವೇ ಕ್ಷಣಗಳಲ್ಲಿ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ಪೋಸ್ಟರ್ ಸಿದ್ಧವಾಗುತ್ತದೆ. ಇದು ಸಹ ಹಲವರ ಉದ್ಯೋಗಕ್ಕೆ ಕುತ್ತು ತರುತ್ತದೆ ಎಂದು ಎಣಿಸಲಾಗಿದೆ.
ಹಾಲಿವುಡ್‌ನ ಕೆಲವು ಚಿತ್ರನಿರ್ಮಾಣ ಕಂಪನಿಗಳು ಈಗ ಕಲಾವಿದರ ಕ್ಲೋನ್‌ಗಳನ್ನು ಬಳಸಿಕೊಳ್ಳುತ್ತಿವೆ ಎಂಬ ಆರೋಪವಿದೆ.
ಚಿತ್ರೀಕರಣಕ್ಕೆಂದು ಕಲಾವಿದರನ್ನು ದಿನದಮಟ್ಟಿಗೆ ಕರೆಸಿಕೊಳ್ಳುವ ಕಂಪನಿಗಳು, ಆ ಕಲಾವಿದರ ಇಡೀ ಹಾವಭಾವ, ದೇಹರಚನೆ, ಚಲನೆ, ಮಾತುಗಾರಿಕೆ ಎಲ್ಲವನ್ನೂ ಸಂಗ್ರಹಿಸಿಕೊಳ್ಳುತ್ತವೆ. ಆ ವಿವರಗಳನ್ನು ಬಳಸಿಕೊಂಡು ಆ ಕಲಾವಿದರ ಕ್ಲೋನ್ ಅನ್ನು ತಯಾರಿಸಲಾಗುತ್ತದೆ. ಕ್ಲೋನ್ ಬಳಸಿಕೊಂಡೇ ಇಡೀ ಚಿತ್ರವನ್ನು ನಿರ್ಮಾಣ ಮಾಡುವ ಪ್ರಯೋಗಗಳು ನಡೆಯುತ್ತಿವೆ. ಆದರೆ, ಕಲಾವಿದರಿಗೆ ಒಂದು ದಿನದ ವೇತನವನ್ನಷ್ಟೇ ನೀಡಲಾಗುತ್ತಿದೆ ಎಂದು ಹಾಲಿವುಡ್‌ನ ಮುಷ್ಕರನಿರತ ಕಲಾವಿದರು ಆರೋಪಿಸಿದ್ದಾರೆ.
ಆಧಾರ: ರಾಯಿಟರ್ಸ್, ನ್ಯೂಯಾರ್ಕ್ ಟೈಮ್ಸ್, ವಿಪ್ರೊ, ಓಪನ್‌ಎಐ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.