ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ತೋಪು ಸಿನಿಮಾ; ಬಸವಳಿದ ಬಾಲಿವುಡ್‌

Last Updated 2 ಸೆಪ್ಟೆಂಬರ್ 2022, 4:43 IST
ಅಕ್ಷರ ಗಾತ್ರ

ಬಾಲಿವುಡ್‌ ಮುರಿದು ಬಿದ್ದಿದೆ ಮತ್ತು ಅದಕ್ಕೆ ಬಾಲಿವುಡ್ಡೇ ಹೊಣೆ – ಹಿಂದಿ ಸಿನಿಮಾ ರಂಗದ ಪ್ರಮುಖ ತಾರೆಗಳಲ್ಲಿ ಒಬ್ಬರಾದ ಅಕ್ಷಯ ಕುಮಾರ್‌ ಅವರ ವಿಶ್ಲೇಷಣೆ ಇದು. ಒಂದು ಕಾಲದಲ್ಲಿ ತನ್ನ ವಿಸ್ಮಯಗೊಳಿಸುವ ಹಾಡುಗಳು, ಬೆರಗುಗೊಳಿಸುವ ಡಾನ್ಸ್‌ನಿಂದ ಭಾರತವನ್ನಷ್ಟೇ ಅಲ್ಲದೆ ಜಗತ್ತನ್ನೇ ಮಂತ್ರಮು‌ಗ್ಧಗೊಳಿಸುತ್ತಿದ್ದ ಬಾಲಿವುಡ್‌ ಈಗ ಕಳೆಗುಂದಿದೆ.

‘ಸಿನಿಮಾಗಳನ್ನು ಜನರು ನೋಡುತ್ತಿಲ್ಲ. ಇದು ನಮ್ಮದೇ ತಪ್ಪು. ನನ್ನದೇ ತಪ್ಪು’– ತಮ್ಮ ಇತ್ತೀಚಿನ ಸಿನಿಮಾ ರಕ್ಷಾ ಬಂಧನ್‌ ಬಾಕ್ಸ್‌ ಆಫೀಸ್‌ನಲ್ಲಿ ಮುಗ್ಗರಿಸಿದ ಬಳಿಕ ಅಕ್ಷಯ ಕುಮಾರ್‌ ನೀಡಿದ ಪ್ರತಿಕ್ರಿಯೆ ಇದು. ‘ನಾನು ಬದಲಾಗಬೇಕು. ಪ್ರೇಕ್ಷಕರಿಗೆ ಏನು ಬೇಕಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಯಾವ ರೀತಿಯ ಸಿನಿಮಾಗಳನ್ನು ಮಾಡಬೇಕು ಎಂದು ಯೋಚಿಸುತ್ತಿದ್ದೇನೆಯೋ ಆ ಯೋಚನಾ ಕ್ರಮವನ್ನೇ ಬದಲಾಯಿಸಬೇಕು’ ಎಂದು ಅಕ್ಷಯ್‌ ಹೇಳಿದ್ದಾರೆ.

ಹೌದು, ಕಾಲ ಬದಲಾಗಿದೆ. ಆಧುನಿಕ ಭಾರತದ ಪ‍್ರಮುಖ ಆಕರ್ಷಣೆಯಾಗಿದ್ದ ಬಾಲಿವುಡ್‌ನ ಮೋಹಕತೆ ಮಸುಕಾಗಿದೆ.

ನೆಟ್‌ಫ್ಲಿಕ್ಸ್, ಅಮೆಜಾನ್‌ ಪ್ರೈಮ್‌ ವಿಡಿಯೊದಂತಹ ಒಟಿಟಿ ಸೇವೆಗಳ ಜನಪ್ರಿಯತೆ ದಿನದಿನಕ್ಕೆ ಹೆಚ್ಚುತ್ತಿದೆ. ಕೋವಿಡ್‌ ಸಾಂಕ್ರಾಮಿಕವು ಜನರು ಸಿನಿಮಾಮಂದಿರಕ್ಕೆ ಹೋಗುವುದನ್ನೇ ನಿಲ್ಲಿಸುವಂತೆ ಮಾಡಿತು. ಎರಡೂ ಜತೆಯಾಗಿ ಬಾಲಿವುಡ್‌ನ ವಿರುದ್ಧ ಷಡ್ಯಂತ್ರ ಹೂಡಿತೇನೋ ಎಂಬ ರೀತಿಯಲ್ಲಿ ಈ ಎರಡೂ ಕಾರಣಗಳಿಂದಾಗಿ ಬಾಲಿವುಡ್‌ ಮುರಿದು ಬೀಳುವಂತಾಯಿತು. ಯುವ ತಲೆಮಾರು ಬಾಲಿವುಡ್‌ ಸಿನಿಮಾ ಬಗ್ಗೆ ತಲೆಯೇ ಕೆಡಿಸಿಕೊಳ್ಳದ ಸ್ಥಿತಿ ಇದೆ. ಹಿಂದಿ ಸಿನಿಮಾಗಳು ಈ ಕಾಲಕ್ಕೆ ತಕ್ಕಂತೆ ಇಲ್ಲ, ಆಕರ್ಷಣೆಯನ್ನೂ ಹೊಂದಿಲ್ಲ ಎಂದು ಭಾವಿಸುವವರ ಸಂಖ್ಯೆಯೇ ಬಹಳಷ್ಟಿದೆ. ಅದರ ಜತೆಗೆ, ದಕ್ಷಿಣ ಭಾರತೀಯ ಚಿತ್ರರಂಗದ ಸಿನಿಮಾಗಳು ತಮ್ಮ ಹೊಸತನದಿಂದಾಗಿ ಜಗತ್ತಿನಾದ್ಯಂತ ಗಮನ ಸೆಳೆಯುತ್ತಿವೆ. ಒಟಿಟಿಯಿಂದಾಗಿ ಇವುಗಳ ಲಭ್ಯತೆ ಈಗ ವ್ಯಾಪಕವಾಗಿದೆ. ದಕ್ಷಿಣದ ಗಟ್ಟಿ ಸಿನಿಮಾಗಳ ಮುಂದೆ ಬಾಲಿವುಡ್‌ ತಿಣುಕಾಡುವಂತಾಗಿದೆ.

ಈ ವರ್ಷ ಬಾಲಿವುಡ್‌ನಲ್ಲಿ ಬಿಡುಗಡೆಯಾದ 26 ಸಿನಿಮಾಗಳ ಪೈಕಿ 20 ಸಿನಿಮಾಗಳ ಬಗ್ಗೆ ಜನರು ಕ್ಯಾರೇ ಅಂದಿಲ್ಲ. ಅಂದರೆ ಶೇ 77ರಷ್ಟು ಸಿನಿಮಾಗಳು ತೋಪೆದ್ದು ಹೋಗಿವೆ. ಬಾಲಿವುಡ್‌ನ ದತ್ತಾಂಶಗಳ ಮೇಲೆ ನಿಗಾ ಇರಿಸುವ ಕೊಯಿಮೊಯಿ ವೆಬ್‌ಸೈಟ್‌ ಪ್ರಕಾರ, ಈ ಎಲ್ಲ ಸಿನಿಮಾಗಳು ಹಾಕಿದ ದುಡ್ಡಿನ ಅರ್ಧದಷ್ಟು ಅಥವಾ ಅದಕ್ಕಿಂತಲೂ ಹೆಚ್ಚಿನ ನಷ್ಟ ಮಾಡಿವೆ. ಸಾಂಕ್ರಾಮಿಕ ಬರುವುದಕ್ಕೂ ಹಿಂದೆ ಅಂದರೆ 2019ರಲ್ಲಿ ತೋಪು ಸಿನಿಮಾಗಳ ಪ್ರಮಾಣವು ಶೇ 39ರಷ್ಟು ಇತ್ತು. ಹಾಗಾಗಿ, ಬಾಲಿವುಡ್‌ನ ವೈಫಲ್ಯಕ್ಕೆ ಕೋವಿಡ್‌ ಕೂಡ ಒಂದು ಕಾರಣ ಎಂಬುದು ನಿಚ್ಚಳ.

ಯುವ ಜನರು ಒಟಿಟಿಗಳತ್ತ ವಾಲಿದ್ದಾರೆ. ಅವರಿಂದಾಗಿ ಕುಟುಂಬದ ಎಲ್ಲರೂ ಮನರಂಜನೆಗಾಗಿ ಒಟಿಟಿಯನ್ನು ಆಶ್ರಯಿಸತೊಡಗಿದ್ದಾರೆ. ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್‌ ಪ್ರೈಮ್‌ನಲ್ಲಿ ಅಮೆರಿಕ ಮತ್ತು ಯುರೋಪ್‌ನ ಸಿನಿಮಾಗಳು, ಕಾರ್ಯಕ್ರಮಗಳು ಲಭ್ಯ ಇವೆ. ಭಾರತದ ಮತ್ತು ಏಷ್ಯಾದ ಇತರ ದೇಶಗಳ ವಿಡಿಯೊಗಳನ್ನೂ ಅಲ್ಲಿ ನೋಡಬಹುದು. ಭಾರತದ 140 ಕೋಟಿ ಜನರ ಪೈಕಿ ಕಾಲುಭಾಗದಷ್ಟು (ಸುಮಾರು 35 ಕೋಟಿ) ಜನರು ಒಟಿಟಿಯಲ್ಲಿ ವಿಡಿಯೊಗಳನ್ನು ನೋಡುತ್ತಿದ್ದಾರೆ. 2019ರಲ್ಲಿ ಈ ಪ್ರಮಾಣ ಶೇ 12ರಷ್ಟಿತ್ತು ಎಂಬುದು ಸ್ಟಾಟಿಸ್ಟಾ ದತ್ತಾಂಶ ಸಂಸ್ಥೆ ನೀಡುವ ಮಾಹಿತಿ. 2027ರ ಹೊತ್ತಿಗೆ ಈ ಪ್ರಮಾಣ ಶೇ 31ಕ್ಕೆ ಏರಲಿದೆ ಎಂಬುದು ಅಂದಾಜು. ಒಟಿಟಿಗಳ ಬೆಳವಣಿಗೆಗೆ ಇಲ್ಲಿ ಇರುವ ಅವಕಾಶ ವಿಫುಲ. ಏಕೆಂದರೆ, ಉತ್ತರ ಅಮೆರಿಕದಲ್ಲಿ ಒಟಿಟಿ ವೀಕ್ಷಕರ ಪ್ರಮಾಣ ಶೇ 80ರಷ್ಟಿದೆ.

ಸಮಸ್ಯೆ ಏನು?
ಸಿನಿಮಾಗಳ ಗಳಿಕೆಯು 2019ರ ವರೆಗೆ ಏರುಗತಿಯಲ್ಲಿಯೇ ಇತ್ತು. ಅದು ಸುಮಾರು ₹16 ಸಾವಿರ ಕೋಟಿಯವರೆಗೆ ತಲುಪಿತ್ತು. ಸಾಂಕ್ರಾಮಿಕದ ಬಳಿಕ ಅದು ಇಳಿಕೆಯ ಹಾದಿ ಹಿಡಿದಿದೆ. ಪುಟಿದೇಳುವ ಯಾವ ಲಕ್ಷಣವೂ ಈಗ ಕಾಣಿಸುತ್ತಿಲ್ಲ. ಈ ವರ್ಷ ಮಾರ್ಚ್‌ ಬಳಿಕ ಟಿಕೆಟ್‌ ಮಾರಾಟದಲ್ಲಿ ಇಳಿಕೆಯಾಗಿದೆ. ಕೋವಿಡ್‌ಗಿಂತ ಹಿಂದಿನ ಅವಧಿಗೆ ಹೋಲಿಸಿದರೆ, ಈ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಗಳಿಕೆಯು ಶೇ 45ರಷ್ಟು ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಹೂಡಿಕೆ ಸಂಸ್ಥೆ ಎಲಾರ ಕ್ಯಾಪಿಟಲ್‌ ಹೇಳಿದೆ.

ಏನು ಕೊಟ್ಟರೂ ಜನರು ನೋಡುತ್ತಾರೆ ಎಂಬ ಭಾವನೆಯನ್ನು ಬಾಲಿವುಡ್‌ ಮುಂದುವರಿಸಿಕೊಂಡು ಹೋಗಲು ಆಗದು ಎಂಬುದು ರಾಯಿಟರ್ಸ್‌ ಸುದ್ದಿ ಸಂಸ್ಥೆಯು ಸಂದರ್ಶನ ನಡೆಸಿದ ನಿರ್ಮಾಪಕರು, ವಿತರಕರು ಮತ್ತು ಸಿನಿಮಾಪ್ರಿಯರ ಅಭಿಪ್ರಾಯ.ಸಾಂಕ್ರಾಮಿಕಕ್ಕೆ ಮುಂಚೆ ಬಿಡುಗಡೆ ಆಗಬೇಕಿದ್ದ ಹಲವು ಸಿನಿಮಾಗಳ ಬಿಡುಗಡೆ ಸಾಧ್ಯವಾಗಲಿಲ್ಲ. ಸಾಂಕ್ರಾಮಿಕ, ಲಾಕ್‌ಡೌನ್‌, ಸಿನಿಮಾ ಮಂದಿರ ಬಂದ್‌ ಇದ್ದ ಅವಧಿಯಲ್ಲಿ ಪ್ರೇಕ್ಷಕರು ಒಟಿಟಿಯತ್ತ ಹೋದರು. ಹೀಗಾಗಿ, ಬಾಲಿವುಡ್‌ನಲ್ಲಿ ಚಿಂತೆ ಮತ್ತು ಗೊಂದಲ ಇದೆ ಎಂದು ಬಾಲಿವುಡ್‌ನ ನಾಲ್ವರು ಪ್ರಮುಖರು ಹೇಳಿದ್ದಾರೆ.

ಚಿತ್ರಕತೆಗಳ ಕುರಿತು ಮರುಚಿಂತನೆ ನಡೆಸಲು ನಿರ್ಮಾ‍ಪಕರು ಆರಂಭಿಸಿದ್ದಾರೆ. ಹಾಗೆಯೇ, ನಟರ ಸಂಭಾವನೆಯನ್ನು ಬಾಕ್ಸ್‌ ಆಫೀಸ್‌ ಗಳಿಕೆಯ ಆಧಾರದಲ್ಲಿ ನೀಡುವ ಬಗ್ಗೆಯೂ ಯೋಚನೆ ನಡೆದಿದೆ ಎಂದವರು ಐನಾಕ್ಸ್‌ನ ಮುಖ್ಯ ಕಾರ್ಯಕ್ರಮ ಅಧಿಕಾರಿ ರಾಜೇಂದರ್ ಸಿಂಗ್‌ ಜ್ಯಾಲಾ. ‘ಸಾಂಕ್ರಾಮಿಕದ ಸಂದರ್ಭದಲ್ಲಿ ಯಾವ ಸಿನಿಮಾವೂ ಬಿಡುಗಡೆ ಆಗಲಿಲ್ಲ. ಮನೆಯಲ್ಲಿಯೇ ಸಿಲುಕಿಕೊಂಡ ಪ್ರೇಕ್ಷಕರು ಒಟಿಟಿಯಲ್ಲಿ ಭಿನ್ನ ರೀತಿಯ ವಿಡಿಯೊಗಳನ್ನು ನೋಡಿದರು. ಹಾಗಾಗಿ ಎರಡು ವರ್ಷಗಳ ಹಿಂದೆ ಜನರನ್ನು ಆಕರ್ಷಿಸುತ್ತಿದ್ದ ವಿಷಯ ಈಗ ಜನರಿಗೆ ಬೇಕಾಗಿಲ್ಲ’ ಎಂಬುದು ಜ್ಯಾಲಾ ಅವರ ಅಭಿಪ್ರಾಯ.

ಎಲ್ಲವೂ ಮುಗಿದೇ ಹೋಯಿತು ಎಂದು ಹೇಳುವಂತಿಲ್ಲ. ಬಾಲಿವುಡ್‌ ತನ್ನ ಉಚ್ಛ್ರಾಯ ಕಾಲಕ್ಕೆ ಮರಳವುದು ಸುಲಭವಲ್ಲ. ಆದರೆ, ಒಂದೆರಡು ದೊಡ್ಡ ಯಶಸ್ಸು ಬಾಲಿವುಡ್‌ಗೆ ಹೊಸ ಚೈತನ್ಯ ತುಂಬಬಹುದು. ಒಟಿಟಿ, ಅದರ ಮೂಲಕ ಬರುವ ವರಮಾನ, ಚಿತ್ರರಂಗ ಈ ಎಲ್ಲದರ ನಡುವೆ ಹೊಸತೊಂದು ಸಮತೋಲನ ಬೇಕಿದೆ ಎಂಬುದು ಜ್ಯಾಲಾ ಮತ್ತು ಇತರರ ಅಭಿಪ್ರಾಯ.

ಕತೆಯೇ ಬಾಲಿವುಡ್‌ನ ವ್ಯಥೆ
‘ಬಾಲಿವುಡ್‌ಗೆ ಕತೆಯೇ ಸಮಸ್ಯೆ. ಕಳೆದ ಎರಡು ವರ್ಷಗಳಲ್ಲಿ ಜನರು ಭಿನ್ನ ವಿಷಯಗಳ ವಿಡಿಯೊಗಳನ್ನು ನೋಡಿದ್ದಾರೆ. ಹೊಸ ಹೊಸ ಪರಿಕಲ್ಪನೆಗಳು ಜನರಿಗೆ ಸಿಕ್ಕಿವೆ. ಈ ವಿಚಾರದಲ್ಲಿ ಬಾಲಿವುಡ್‌ ಬಹಳ ಹಿಂದೆ ಇದೆ ಎಂಬುದು ನನ್ನ ಭಾವನೆ’ ಎನ್ನುತ್ತಾರೆ ದೆಹಲಿಯ ವಿದ್ಯಾರ್ಥಿನಿ ವೈಷ್ಣವಿ ಶರ್ಮಾ.

ಭಾರಿ ನಿರೀಕ್ಷೆ ಮೂಡಿಸಿದ್ದ, ಬಾಲಿವುಡ್‌ನ ಪ್ರಮುಖ ತಾರೆಯರಾದ ಅಕ್ಷಯ್‌ ಕುಮಾರ್‌ ಮತ್ತು ಅಮೀರ್‌ ಖಾನ್‌ ಅವರ ಭಾರಿ ಬಜೆಟ್‌ನ ಸಿನಿಮಾಗಳು ತೋಪೆದ್ದು ಹೋದವು. ಅಕ್ಷಯ್ ಅವರ ರಕ್ಷಾ ಬಂಧನ್‌ ಮತ್ತು ಅಮೀರ್ ಅವರ ಲಾಲ್‌ ಸಿಂಗ್ ಛಡ್ಡಾ ಸಿನಿಮಾಗಳು ದೀರ್ಘ ವಾರಾಂತ್ಯದ, ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂಭ್ರಮದ ಆಗಸ್ಟ್‌ 11ರಂದು ಬಿಡುಗಡೆಯಾದವು. ಆದರೆ, ಅಷ್ಟೆಲ್ಲ ಅನುಕೂಲ ಇದ್ದರೂ ಈ ಸಿನಿಮಾಗಳನ್ನು ಜನರು ನೋಡಲಿಲ್ಲ.

‘ಪ್ರೇಕ್ಷಕರಿಗೆ ಬೇಕಾದ ರೀತಿಯಲ್ಲಿ ನಾವು ಬದಲಾಗಬೇಕಿದೆ. ಎಲ್ಲವನ್ನೂ ಬದಲಾಯಿಸಬೇಕಿದೆ. ಚಿತ್ರಕತೆಯ ಬಗ್ಗೆ ಕೆಲಸ ಮಾಡಬೇಕಿದೆ. ಇದು ಬಿಟ್ಟರೆ ನನ್ನಲ್ಲಿ ಬೇರೆ ಉತ್ತರವಿಲ್ಲ’ ಎಂದು ನಿರ್ಮಾಪಕರೊಬ್ಬರು ಹೇಳಿದ್ದಾರೆ.

ಜನರಿಂದ ದೂರ ದೂರ...
ಚಿತ್ರಮಂದಿರಕ್ಕೆ ಹೋಗುವುದು ದುಬಾರಿ ವ್ಯವಹಾರ. ಜಗತ್ತಿನ ಎಲ್ಲೆಡೆಯೂ ಜೀವನ ನಿರ್ವಹಣೆ ವೆಚ್ಚ ಹೆಚ್ಚಳ ಜನರಿಗೆ ತಟ್ಟಿದೆ. ನಾಲ್ವರ ಒಂದು ಕುಟುಂಬಕ್ಕೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಲು ₹2,000ದಿಂದ ₹5,000 ಬೇಕು. ಹಾಗಾಗಿಯೇ ಒಟಿಟಿಗಳು ಹೆಚ್ಚು ಜನಪ್ರಿಯವಾದವು.

‘ತಿದ್ದುವಿಕೆ ಎಲ್ಲೋ ಒಂದು ಕಡೆ ಆರಂಭವಾಗಲೇ ಬೇಕು– ಸಿನಿಮಾದ ಬಜೆಟ್‌ ಬಗ್ಗೆ ಚಿಂತನೆ ನಡೆಸಬೇಕು. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಖರ್ಚನ್ನು ಕಡಿಮೆ ಮಾಡಬೇಕು’ ಎಂದು ಸಿನಿಮಾ ನಿರ್ಮಾಣ ಸಂಸ್ಥೆಯೊಂದನ್ನು ನಡೆಸುತ್ತಿರುವ ಅನಿಲ್‌ ಥಡಾನಿ ಹೇಳಿದ್ದಾರೆ.

‘ಹಿಂದಿಯಲ್ಲಿ ಬರುತ್ತಿರುವ ಸಿನಿಮಾಗಳು ಜನರಿಂದ ಬಹಳ ದೂರ ಇವೆ. ನಮ್ಮ ಜನಸಂಖ್ಯೆಯ ಬಹುದೊಡ್ಡ ವರ್ಗವು ಈ ಸಿನಿಮಾಗಳ ಜತೆಗೆ ತಮ್ಮನ್ನು ಸಮೀಕರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದೂ ಅವರು ಹೇಳಿದ್ದಾರೆ. ಮುಂಬೈನ ಸುಂದರೇಶನ್‌ ಅವರದ್ದೂ ಇದೇ ಅಭಿಪ್ರಾಯ. ‘ಚಿತ್ರಮಂದಿರಕ್ಕೆ ಹೋಗಿ, ಇಷ್ಟವಿಲ್ಲದ ಸಿನಿಮಾವನ್ನು ನಮಗೆ ಅನುಕೂಲಕರವಲ್ಲದ ರೀತಿಯಲ್ಲಿ ನೋಡುವುದು ಸಮಯ ವ್ಯರ್ಥ. ಅದಕ್ಕಿಂತ ಒಟಿಟಿಯಲ್ಲಿ ನೋಡಲು ಇನ್ನೂ ಉತ್ತಮವಾದವು ಏನೇನೋ ಇವೆ’ ಎಂಬುದು ಅವರ ಮಾತು.

ಗಳಿಕೆ: ದಕ್ಷಿಣದ ಮುಂದೆ ಪೇಲವ
ಈ ವರ್ಷದ ಆರಂಭದಿಂದ ದೇಶದಾದ್ಯಂತ ಬಿಡುಗಡೆಯಾದ ಸಿನಿಮಾಗಳಲ್ಲಿ ಕೆಲವಷ್ಟೇ ದೊಡ್ಡ ಪ್ರಮಾಣದಲ್ಲಿ ಹಣ ಗಳಿಸಿವೆ. ಹೀಗೆ ಹೆಚ್ಚು ಹಣ ಗಳಿಸಿದ ಮೊದಲ ಹತ್ತು ಸಿನಿಮಾಗಳಲ್ಲಿ ಬಾಲಿವುಡ್‌ನ ಮೂರು ಸಿನಿಮಾಗಳಷ್ಟೇ ಸ್ಥಾನ ಪಡೆದಿವೆ. ಹೀಗೆ ಚಿತ್ರಮಂದಿರಕ್ಕೆ ಬಂದು ಜನರು ವೀಕ್ಷಿಸಿದ ಬಾಲಿವುಡ್‌ ಸಿನಿಮಾಗಳೆಲ್ಲವೂ ಭಿನ್ನ ಕಥಾ ಹಂದರದವು ಎಂಬುದು ಗಮನಾರ್ಹ. ಹೆಚ್ಚು ಹಣಗಳಿಸಿದ ಬೇರೆಲ್ಲಾ ಸಿನಿಮಾಗಳು ದಕ್ಷಿಣ ಭಾರತದವು.

ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದ ‘ದಿ ಕಾಶ್ಮೀರ್‌ ಫೈಲ್ಸ್‌’ ಸಿನಿಮಾವು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ₹291 ಕೋಟಿ ಗಳಿಸಿದೆ. ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಕುರಿತ ಸಿನಿಮಾವು ಬಾಲಿವುಡ್‌ನ ಎಂದಿನ ಸಿನಿಮಾಗಳಿಗಿಂತ ಭಿನ್ನ ಕಥೆಯನ್ನು ಹೊಂದಿತ್ತು. ಹೀಗಾಗಿ ಈ ಸಿನಿಮಾ ನೋಡಲು ಜನರು ಚಿತ್ರಮಂದಿರಗಳತ್ತ ಬಂದರು. ಹಲವು ರಾಜ್ಯಗಳಲ್ಲಿ ರಾಜ್ಯ ಸರ್ಕಾರಗಳು ಈ ಸಿನಿಮಾಗೆ ತೆರಿಗೆ ವಿನಾಯಿತಿಯನ್ನು ನೀಡಿದವು. ದೇಶದ ಉನ್ನತ ನಾಯಕರು ಈ ಸಿನಿಮಾವನ್ನು ನೋಡುವಂತೆ ಕರೆ ನೀಡಿದರು. ಇವೆಲ್ಲವೂ ಸಿನಿಮಾವನ್ನು ನೋಡಲು ಜನರನ್ನು ಪ್ರೇರೇಪಿಸಿದವು.

ಗಂಗೂಬಾಯಿ ಕಾಠಿಯವಾಡಿ ಸಹ ಬಾಲಿವುಡ್‌ನ ಸಾಮಾನ್ಯ ಸಿನಿಮಾಗಳಿಗಿಂತ ಭಿನ್ನವಾದ ಕಥೆಯನ್ನು ಹೊಂದಿತ್ತು. ವೇಶ್ಯೆಯೊಬ್ಬಳು ನಾಯಕಿಯಾಗಿ ಬೆಳೆಯುವ ನಿಜವಾದ ಕಥೆಯನ್ನು ಕಟ್ಟಿಕೊಟ್ಟ ಈ ಸಿನಿಮಾವು ಹೆಚ್ಚು ಸುದ್ದಿ ಮಾಡುವುದರ ಜತೆಗೆ, ಉಳಿದ ಬಾಲಿವುಡ್‌ ಸಿನಿಮಾಗಳಿಗಿಂತ ಹೆಚ್ಚು ಹಣ ಗಳಿಸಿತು.

ಸಾಮಾನ್ಯ ಕಥಾಹಂದರವಿದ್ದೂ, ಹೆಚ್ಚು ಲಾಭಗಳಿಸಿದ ಏಕೈಕ ಬಾಲಿವುಡ್‌ ಸಿನಿಮಾ ಅಂದರೆ, ಅದು ಭೂಲ್‌ ಭುಲಯ್ಯಾ–2. ಬಾಲಿವುಡ್‌ ಬ್ಲಾಕ್‌ಬಸ್ಟರ್‌ ಆಗಿದ್ದ ಭೂಲ್‌ ಭುಲಯ್ಯಾ ಸಿನಿಮಾದ ಎರಡನೇ ಭಾಗವಾದ ಇದು, ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಹೀಗಾಗಿ ಉತ್ತಮ ಗಳಿಕೆ ಸಾಧ್ಯವಾಗಿತ್ತು. ಉಳಿದಂತೆ ಈಚೆಗಷ್ಟೇ ಬಿಡುಗಡೆಯಾಗಿರುವ ಲಾಲ್‌ ಸಿಂಗ್ ಛಡ್ಡಾ, ರಕ್ಷಾ ಬಂಧನ ಇನ್ನೂ ಚಿತ್ರಮಂದಿರಗಳಲ್ಲಿ ಇವೆ. ಆದರೆ ಇವು ಉತ್ತಮ ಗಳಿಕೆಯ ಚಿತ್ರಗಳಾಗುತ್ತವೆ ಎಂಬ ನಿರೀಕ್ಷೆ ಇಲ್ಲ.

ಕೆಜಿಎಫ್‌–2, ಪುಷ್ಪ, ವಿಕ್ರಂ, ಬೀಸ್ಟ್‌ ಮೊದಲಾದ ಸಿನಿಮಾಗಳನ್ನು ಬಹುಭಾಷಾ ಸಿನಿಮಾಗಳಾಗಿ ನಿರ್ಮಿಸಲಾಗಿತ್ತು. ತೆಲುಗು, ತಮಿಳು, ಕನ್ನಡ, ಮಲಯಾಳ ಮತ್ತು ಹಿಂದಿಯಲ್ಲಿ ಈ ಚಿತ್ರಗಳನ್ನು ನಿರ್ಮಿಸಲಾಗಿತ್ತು. ಇದರಿಂದಾಗಿ ಈ ಸಿನಿಮಾಗಳು ‘ಪ್ಯಾನ್‌ ಇಂಡಿಯಾ ಮೂವಿ’ಯ ಪಟ್ಟ ಗಳಿಸಿದವು. ಈ ಚಿತ್ರಗಳ ಟ್ರೇಲರ್‌ಗಳನ್ನೂ ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಈ ಚಿತ್ರಗಳು ಬಿಡುಗಡೆಗೂ ಮುನ್ನವೇ ಎಲ್ಲಾ ಭಾಷಿಕ ಪ್ರದೇಶದಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದವು. ಬಿಡುಗಡೆಯಾದ ನಂತರ ಜನರು ದೊಡ್ಡಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಬಂದು ಇವುಗಳನ್ನು ನೋಡಿದರು. ಇವು ಮಾಸ್‌ ಸಿನಿಮಾಗಳಾಗಿದ್ದರೂ ಭಿನ್ನ ಕಥಾಹಂದರ, ಆಡುಭಾಷೆಗೆ ತೀರಾ ಹತ್ತಿರವಾದ ಸಂಭಾಷಣೆ, ಉತ್ತಮ ನಿರ್ಮಾಣ, ಬಹುಭಾಷಾ ತಾರಾ ನಟರು ಇತ್ಯಾದಿ ಅಂಶಗಳು ಈ ಸಿನಿಮಾಗಳ ಸಾಧ್ಯತೆಗಳನ್ನು ಹೆಚ್ಚಿಸಿದ್ದವು.ದಕ್ಷಿಣ ಭಾರತದ ಸಿನಿಮಾ ನಿರ್ಮಾಪಕರ ಈ ತಂತ್ರವು ಸದ್ಯದ ಮಟ್ಟಿಗೆ ಯಶಸ್ವಿಯಾಗಿದೆ.

ಆಧಾರ: ರಾಯಿಟರ್ಸ್‌ ವರದಿ, ಐಎಂಡಿಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT