ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ | ದೇಶದ್ರೋಹ: 965 ಪ್ರಕರಣ, ಐದರಲ್ಲಷ್ಟೇ ಶಿಕ್ಷೆ
ಆಳ–ಅಗಲ | ದೇಶದ್ರೋಹ: 965 ಪ್ರಕರಣ, ಐದರಲ್ಲಷ್ಟೇ ಶಿಕ್ಷೆ
Published 7 ಡಿಸೆಂಬರ್ 2023, 0:01 IST
Last Updated 7 ಡಿಸೆಂಬರ್ 2023, 0:01 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ಮತ್ತು ಅದರ ನೀತಿಗಳನ್ನು ಟೀಕಿಸುವವರ ವಿರುದ್ಧ ದೇಶದ್ರೋಹದ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದು ವಿರೋಧ ಪಕ್ಷಗಳ ಆರೋಪ. 2019–2022ರ ಮಧ್ಯೆ ದೇಶದಾದ್ಯಂತ ದಾಖಲಾದ ದೇಶದ್ರೋಹದ ಪ್ರಕರಣಗಳು ಮತ್ತು ಅವುಗಳ ಸ್ಥಿತಿಗತಿಯು ವಿರೋಧ ಪಕ್ಷಗಳ ಈ ಆರೋಪವನ್ನು ‍ಪುಷ್ಟೀಕರಿಸುತ್ತವೆ. ಹೀಗೆ ದಾಖಲಾದ ಪ್ರಕರಣಗಳು ತನಿಖೆ ಮತ್ತು ವಿಚಾರಣೆ ಹಂತದಲ್ಲೇ ಕೊಳೆಯುತ್ತಿವೆ. ತನಿಖೆ ಮತ್ತು ನ್ಯಾಯಾಲಯದ ಹಂತದಲ್ಲಿ ವಿಲೇವಾರಿಯಾದ ಪ್ರಕರಣಗಳ ಪ್ರಮಾಣ ತೀರಾ ಕಡಿಮೆ ಇದೆ. ಆದರೆ ಈ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾದವರಲ್ಲಿ ಬಹುತೇಕ ಮಂದಿ ಇತ್ತ ಬಿಡುಗಡೆಯೂ ಆಗದೆ, ಅತ್ತ ಶಿಕ್ಷೆಯೂ ಆಗದೆ ಜೈಲುಗಳಲ್ಲೇ ಸೆರೆವಾಸ ಅನುಭವಿಸುತ್ತಿದ್ದಾರೆ.

2019ರಿಂದ 2022ರ ಮಧ್ಯೆ ದೇಶದಾದ್ಯಂತ ದೇಶದ್ರೋಹದ (ಐಪಿಸಿ ಸೆಕ್ಷನ್‌ 124ಎ) ಕಾನೂನಿನ ಅಡಿಯಲ್ಲಿ ಪೊಲೀಸರು ಒಟ್ಟು 262 ಪ್ರಕರಣಗಳನ್ನು ದಾಖಲಿಸಿದ್ದಾರೆ. 2019ಕ್ಕೂ ಮುನ್ನ ಈ ಸೆಕ್ಷನ್‌ ಅಡಿಯಲ್ಲಿ ದಾಖಲಾಗಿದ್ದ ಮತ್ತು ಹೊಸದಾಗಿ ದಾಖಲಾದವೂ ಸೇರಿ ಪೊಲೀಸರು 965 ಪ್ರಕರಣಗಳಲ್ಲಿ ತನಿಖೆ ನಡೆಸಿದ್ದಾರೆ. 2019ರ ಜನವರಿಯಿಂದ 2022ರ ಡಿಸೆಂಬರ್ ಅಂತ್ಯದವರೆಗೆ ಪೊಲೀಸರು ತನಿಖೆ ಪೂರ್ಣಗೊಳಿಸಿದ್ದು 196 ಪ್ರಕರಣಗಳಲ್ಲಿ ಮಾತ್ರ. ಉಳಿದ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾದ ಜನರು ಇನ್ನೂ ಜೈಲುಗಳಲ್ಲೇ ಇದ್ದಾರೆ.

196 ಪ್ರಕರಣಗಳನ್ನು ಪೊಲೀಸರು ವಿಲೇವಾರಿ ಮಾಡಿದ್ದರೂ ಅವುಗಳಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿ, ನ್ಯಾಯಾಲಯಕ್ಕೆ ವಿಚಾರಣೆಗೆ ಹೋಗಿದ್ದು 103 ಪ್ರಕರಣಗಳು. 58 ಪ್ರಕರಣಗಳನ್ನು ಸಾಕ್ಷ್ಯದ ಕೊರತೆ ಎಂದು ಮತ್ತು 35 ಪ್ರಕರಣಗಳನ್ನು ಸುಳ್ಳು ಎಂದು ಪೊಲೀಸರೇ ವಜಾ ಮಾಡಿದ್ದಾರೆ. ಆದರೆ 769 ಪ್ರಕರಣಗಳು ಪೊಲೀಸರ ಬಳಿ ತನಿಖೆಯ ಹಂತದಲ್ಲೇ ಉಳಿದಿವೆ. ಇವೆಲ್ಲವೂ ಬಹಳ ಹಳೆಯ ಪ್ರಕರಣಗಳಾದರೂ ತನಿಖೆ ಪೂರ್ಣಗೊಳ್ಳದೆ ಇರುವುದು, ಅವೆಲ್ಲವೂ ಸುಳ್ಳು ಪ್ರಕರಣಗಳು ಇರಬಹುದು ಎಂಬ ಸಂದೇಹಕ್ಕೆ ಕಾರಣವಾಗಿದೆ.

2019ಕ್ಕೂ ಹಿಂದೆಯೇ ಮತ್ತು 2019–2022ರ ಅವಧಿಯಲ್ಲಿ ನ್ಯಾಯಾಲಯಕ್ಕೆ ಹೋದ ಪ್ರಕರಣಗಳಲ್ಲೂ ವಿಚಾರಣೆ ಹಾಗೂ ನ್ಯಾಯದಾನ ತ್ವರಿತಗತಿಯಲ್ಲಿ ನಡೆಯುತ್ತಿಲ್ಲ. ಈ ಅವಧಿಯಲ್ಲಿ ಹೊಸದಾಗಿ ಬಂದ ಮತ್ತು ಮೊದಲೇ ಇದ್ದವೂ ಸೇರಿ ನ್ಯಾಯಾಲಯಗಳ ಬಳಿ 492 ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದವು. ಇವುಗಳಲ್ಲಿ ನ್ಯಾಯಾಲಯಗಳು ವಿಲೇವಾರಿ ಮಾಡಿದ್ದು 48 ಪ್ರಕರಣಗಳನ್ನು ಮಾತ್ರ. ಆದರೆ, ಉಳಿದ 444 ಪ್ರಕರಣಗಳಲ್ಲಿ ಆರೋಪಿಗಳು ಸೆರೆವಾಸದಲ್ಲೇ ಉಳಿದಿದ್ದಾರೆ ಇಲ್ಲವೇ ಜಾಮೀನಿನ ಮೇಲೆ ಹೊರಗಿದ್ದಾರೆ.

ನ್ಯಾಯಾಲಯಗಳು ವಿಲೇವಾರಿ ಮಾಡಿದ 48 ಪ್ರಕರಣಗಳಲ್ಲಿ ಖುಲಾಸೆಯಾದ ಪ್ರಕರಣಗಳದ್ದೇ ದೊಡ್ಡಪಾಲು. 37 ಪ್ರಕರಣಗಳು ಖುಲಾಸೆಯಲ್ಲಿ ಅಂತ್ಯವಾಗಿದ್ದರೆ, 7 ಪ್ರಕರಣಗಳು ನ್ಯಾಯಾಲಯಗಳು ವಜಾ ಮಾಡಿವೆ. ಶಿಕ್ಷೆಯಾಗಿದ್ದು 5 ಪ್ರಕರಣಗಳಲ್ಲಿ ಮಾತ್ರ. ನ್ಯಾಯಾಲಯವು ವಿಲೇವಾರಿ ಮಾಡಿದ ದೇಶದ್ರೋಹದ ಪ್ರಕರಣಗಳಲ್ಲಿ ಬಹುತೇಕವು ಬಿದ್ದುಹೋಗುತ್ತವೆ ಎಂದು ಈ ದತ್ತಾಂಶಗಳು ಹೇಳುತ್ತವೆ. ಈ ಎಲ್ಲಾ ಅಂಶಗಳು ದೇಶದ್ರೋಹದ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನೇ ಸೂಚಿಸುತ್ತವೆ. ಪೊಲೀಸರು ದಾಖಲಿಸಿದ ಒಟ್ಟು ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳನ್ನು (ಶೇ 80ರಷ್ಟು) ನ್ಯಾಯಾಲಯಕ್ಕೆ ಬರುತ್ತಲೇ ಇಲ್ಲ ಎಂಬ ಅಂಶವೂ ದುರ್ಬಳಕೆ ಆರೋಪವನ್ನು ಪುಷ್ಟೀಕರಿಸುತ್ತದೆ.

ದೇಶದ್ರೋಹದ ಕಾನೂನೂ ರದ್ದು: ವಾಸ್ತವಾಂಶ ಮರೆಮಾಚಿಸಿದ್ದ ಶಾ ಹೇಳಿಕೆ

ಬ್ರಿಟಿಷರ ಆಳ್ವಿಕೆಯ ಕಾಲದ ದೇಶದ್ರೋಹದ ಕಾನೂನಿನ (ಐಪಿಸಿ 124ಎ) ದುರ್ಬಳಕೆ ತಡೆಯುವ ಸಲುವಾಗಿ, ಆ ಕಾನೂನನ್ನೇ ರದ್ದು‍ಪಡಿಸಬೇಕು ಎಂದು ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸುತ್ತಲೇ ಇದ್ದರು. ಈ ಸಲುವಾಗಿ ಸುಪ್ರೀಂ ಕೋರ್ಟ್‌ಗೆ ಹಲವು ಅರ್ಜಿಗಳನ್ನೂ ಸಲ್ಲಿಸಲಾಗಿತ್ತು. ‘ಇಂತಹ ಕಾನೂನಿನ ಅಗತ್ಯವಿದೆ’ ಎಂದು ಕೇಂದ್ರ ಸರ್ಕಾರವು ನ್ಯಾಯಾಲಯದಲ್ಲಿ ಪ್ರತಿಪಾದಿಸಿತ್ತು.

ಈಚೆಗೆ ಕಾನೂನು ಕಾಯ್ದೆಗಳಿಗೆ ಮರುನಾಮಕರ ಮಾಡುವ ಮಸೂದೆಗಳನ್ನು ಮಂಡಿಸಿದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ, ದೇಶದ್ರೋಹದ ಕಾನೂನನ್ನು ಸಂಪೂರ್ಣವಾಗಿ ರದ್ದುಪಡಿಸಿದ್ದೇವೆ ಎಂದು ಹೇಳಿದ್ದರು. ಆದರೆ ಅವರು ಹೇಳಿಕೆ ವಾಸ್ತವಿಕ ಸಂಗತಿಗೆ ವ್ಯತಿರಿಕ್ತವಾಗಿತ್ತು.

ಭಾರತೀಯ ದಂಡ ಸಂಹಿತೆಯನ್ನು ಭಾರತೀಯ ಕಾನೂನು ಸಂಹಿತೆ ಎಂದು ಬದಲಿಸುವ ಮಸೂದೆಯಲ್ಲಿ 124ಎ ಸೆಕ್ಷನ್‌ ಅನ್ನು ಮಾತ್ರ ರದ್ದುಪಡಿಸಲಾಗಿತ್ತು. ಈ ಸೆಕ್ಷನ್‌ ಅಡಿಯಲ್ಲಿ ವಿವರಿಸಲಾಗಿದ್ದ ‘ದೇಶದ್ರೋಹ’ದ ವ್ಯಾಖ್ಯಾನವನ್ನು ಹೊಸದಾಗಿ ರೂಪಿಸಲಾಗಿದ್ದ 150ನೇ ಸೆಕ್ಷನ್‌ನ ಅಡಿಯಲ್ಲಿ ಸೇರಿಸಲಾಗಿತ್ತು. ನೂತನ ಸೆಕ್ಷನ್‌ನಲ್ಲಿ  ‘ದೇಶದ್ರೋಹ’ ಎಂಬುದನ್ನು ‘ಭಾರತದ ಒಗ್ಗಟ್ಟು, ಸಾರ್ವಭೌಮತೆ ಮತ್ತು ಏಕತೆಗೆ ಧಕ್ಕೆ ತರುವಂತಹ ಕೃತ್ಯಗಳು’ ಎಂದು ಬದಲಿಸಲಾಗಿತ್ತು. ಜತೆಗೆ ಈ ಸೆಕ್ಷನ್‌ನ ಅಡಿಯಲ್ಲಿ ಬರುವ ಕೃತ್ಯಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿತ್ತು. ಆದಲ್ಲದೆ, ಈ ಕೃತ್ಯಗಳಿಗೆ ವಿಧಿಸಬಹುದಾದ ಶಿಕ್ಷೆ ಮತ್ತು ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿತ್ತು. 

ಈ ಕಾನೂನನ್ನು ಕಠಿಣಗೊಳಿಸಿದ್ದರೂ ಅಮಿತ್ ಶಾ ಅವರು, ದೇಶದ್ರೋಹದ ಕಾನೂನನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಎಂದು ಲೋಕಸಭೆಯಲ್ಲೇ ಹೇಳುವ ಮೂಲಕ ವಾಸ್ತವಾಂಶ ಮುಚ್ಚಿಟ್ಟಿದ್ದರು.

ಆಧಾರ: ಎನ್‌ಸಿಆರ್‌ಬಿಯ ಭಾರತದಲ್ಲಿ ಅಪರಾಧ– 2018, 2019, 2020, 2021, 2022 ವರದಿಗಳು, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT