ಇಂಧನ ಇಲಾಖೆ ಎಂದರೆ ಗ್ರಾಹಕರಿಗೆ ದರ ಏರಿಕೆಯ ಶಾಕ್ ನೀಡುವ ವ್ಯವಸ್ಥೆ ಎಂಬ ತಪ್ಪು ಗ್ರಹಿಕೆಯಲ್ಲಿ ಇರುವವರಲ್ಲಿ ಒಂದು ನಿವೇದನೆ. ಬೆಲೆ ಏರಿಕೆ ಮಾಡುವುದಷ್ಟೇ ನಮ್ಮ ಕೆಲಸವಲ್ಲ. ರಾಜ್ಯದ ಅತಿ ದೊಡ್ಡ ಗ್ರಾಹಕ ಸಮುದಾಯವಾದ ರೈತ ಸಮುದಾಯಕ್ಕೆ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂಬ ಹೆಮ್ಮ ನಮಗಿದೆ. ಅನ್ನದಾತನ ಸೇವೆಗೆ ದೊರೆತ ದೊಡ್ಡ ಅವಕಾಶ ಇದು ಎಂದು ನಾನು ಭಾವಿಸಿದ್ದೇನೆ. ಆದರೆ ಕಳೆದೊಂದು ದಶಕದಲ್ಲಿ ಈ ಸಬ್ಸಿಡಿ ಮೊತ್ತ ₹5,560 ಕೋಟಿಯಿಂದ ₹16,876 ಕೋಟಿಗೆ ಹೆಚ್ಚಳವಾಗಿದೆ
ರಾಜ್ಯದಲ್ಲಿ ವಿದ್ಯುತ್ ದರ ಪರಿಷ್ಕರಣೆಯ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಲಾಗಿದೆಎಂಬ ಟೀಕೆಯನ್ನು ಇಂಧನ ಇಲಾಖೆ ಕಳೆದ ಕೆಲ ದಿನಗಳಿಂದ ಎದುರಿಸುತ್ತಿದೆ. ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸೇರಿದಂತೆ ತೈಲೋತ್ಪನ್ನಗಳ ದರ ಏರಿಕೆ ಮಧ್ಯೆ ಇಂಧನ ದರ ಪರಿಷ್ಕರಣೆಯ ಅಗತ್ಯವಿತ್ತೇ ಎಂಬ ಸಹಜ ಪ್ರಶ್ನೆಯನ್ನು ಮಾಧ್ಯಮಗಳು ಜನರ ಮುಂದಿಟ್ಟಿವೆ. ಮಾಧ್ಯಮಗಳು ಜನ ಸಮುದಾಯದ ಧ್ವನಿ ಎಂಬ ಮಾತಿನಲ್ಲಿ ಅಕ್ಷರಶಃ ನಂಬಿಕೆ ಇಟ್ಟವನಾಗಿರುವುದರಿಂದ ಜನರ ಪ್ರಶ್ನೆಗೆ ನನ್ನ ಆಕ್ಷೇಪವಿಲ್ಲ. ಆದರೆ ಈ ವಿಚಾರದಲ್ಲಿ ವ್ಯಕ್ತವಾದ ಕೆಲ ಗೊಂದಲಗಳಿಗೆ ಸ್ಪಷ್ಟೀಕರಣ ನೀಡಲೇಬೇಕಿರುವುದರಿಂದ, ಜತೆಗೆ ಇಂಧನ ಇಲಾಖೆಯ ವ್ಯಾಪ್ತಿ- ಒತ್ತಡಗಳ ಬಗ್ಗೆ ಬೆಳಕು ಚೆಲ್ಲಬೇಕಾದ ಜವಾಬ್ದಾರಿಯೂ ಇರುವುದರಿಂದ ಕೆಲ ಸಂಗತಿಗಳನ್ನು ತೆರೆದಿಡುತ್ತಿದ್ದೇನೆ.
ವಿದ್ಯುತ್ ದರವನ್ನು ಬೇಕಾಬಿಟ್ಟಿ ಏರಿಕೆ ಮಾಡುವುದಕ್ಕೆ ಅವಕಾಶವೇ ಇಲ್ಲ. ಇಂಧನ ಇಲಾಖೆ ಸ್ವಂತ ವಿವೇಚನೆಯ ಮೂಲಕ ಆ ರೀತಿ ದರಪರಿಷ್ಕರಣೆ ಮಾಡುವುದಕ್ಕೆ ಸಾಧ್ಯವೂ ಇಲ್ಲ. ವಿದ್ಯುತ್ ದರ ಪರಿಷ್ಕರಣೆಗಾಗಿಯೇ ಕೆಇಆರ್‌ಸಿ ಎಂಬ ಸ್ವಾಯತ್ತ ಸಂಸ್ಥೆಯನ್ನು ಆಡಳಿತ ವ್ಯವಸ್ಥೆ ರಚಿಸಿದೆ. ಅದರ ಮೂಲಕವೇ ದರ ಏರಿಳಿತಕ್ಕೆ ಸಂಬಂಧಪಟ್ಟ ಎಲ್ಲ ವ್ಯವಹಾರಗಳು ನಡೆಯುತ್ತವೆ. ಅಂದರೆ ವಿವಿದ ವಿದ್ಯುತ್ ಸರಬರಾಜು ಕಂಪನಿಗಳು ಸಲ್ಲಿಸಿದ ಶಿಫಾರಸು, ಸಾರ್ವಜನಿಕ ಆಕ್ಷೇಪಣೆ, ಇಲಾಖಾ ಖರ್ಚು, ಉತ್ಪಾದನೆ ಹಾಗೂ ಸಾಗಣೆ ವೆಚ್ಚ, ಕಲ್ಲಿದ್ದಲು ಅಥವಾ ವಿದ್ಯುತ್ ಖರೀದಿ ನಡೆಸಿದ್ದರೆ ಆಯಾ ವರ್ಷ ವಿನಿಯೋಗಿಸಿದ ಮೊತ್ತ ಇತ್ಯಾದಿ ಮಾನದಂಡಗಳನ್ನು ಆಧರಿಸಿ ದರ ಪರಿಷ್ಕರಣೆ ನಡೆಯುತ್ತದೆ. ಈ ವರ್ಷದ ಆ ಪ್ರಕ್ರಿಯೆ ಮುಕ್ತಾಯಗೊಂಡಿದೆ.
ಆದರೆ, ಈಗ ಪ್ರಶ್ನೆ ಉದ್ಭವಿಸಿರುವುದು ‘ಹೊಂದಾಣಿಕೆ ವೆಚ್ಚ’ ಪರಿಷ್ಕರಣೆಯ ಬಗ್ಗೆ ಮಾತ್ರ. ಈ ಬಗ್ಗೆ ಜನರ ಆತಂಕಕ್ಕಿಂತಲೂ ಮಿಗಿಲಾಗಿ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಟೀಕೆಗಳ ಸುರಿಮಳೆಗರೆದಿದ್ದಾರೆ. ಇಬ್ಬರು ಕೂಡಾ ಇಂಧನ ಇಲಾಖೆ ನಿಭಾಯಿಸಿದವರು ಮತ್ತು ಹೊಂದಾಣಿಕೆ ವೆಚ್ಚ ಹೆಚ್ಚಿಸಿದ ಅನುಭವ ಹೊಂದಿರುವವರು ಎಂಬುದು ಇನ್ನೊಂದು ವಿಶೇಷ. ನನ್ನ ವಿರುದ್ಧ ಮಾತ್ರವಲ್ಲ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಆರೋಪ ಮಾಡುವಾಗ ಅವರು ವಾಸ್ತವವನ್ನು ಮುಚ್ಚಿಟ್ಟದ್ದು ಮುತ್ಸದ್ಧಿತನದ ಧ್ಯೋತಕವಂತೂ ಅಲ್ಲ. ಹೀಗಾಗಿ ಹೊಂದಾಣಿಕೆ ವೆಚ್ಚ ಎಂದರೆ ಏನು ಎಂಬುದನ್ನು ನಾನು ಇಲ್ಲಿ ಸ್ಪಷ್ಟಪಡಿಸಿಬಿಡುತ್ತೇನೆ.
ಉಷ್ಣ ವಿದ್ಯುತ್ ಸ್ಥಾವರಗಳ ಕ್ಷಮತೆ ಸುಸ್ಥಿತಿಯಲ್ಲಿ ಇಡುವುದಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಅಗತ್ಯವಾಗಿರುತ್ತದೆ. ಕಲ್ಲಿದ್ದಲು ಹಾಗೂ ತೈಲೋತ್ಪನ್ನಗಳ ಮಾರುಕಟ್ಟೆ ಹಾಗೂ ಪೂರೈಕೆ ವೆಚ್ಚ ಆಧರಿಸಿ ಹೊಂದಾಣಿಕೆ ವೆಚ್ಚ ಪರಿಷ್ಕರಣೆಗೆ ಎಲ್ಲ ಎಸ್ಕಾಂಗಳು ಕೆಆರ್‌ಇಸಿಗೆ ಪ್ರತಿ ತ್ರೈಮಾಸಿಕದಲ್ಲಿ ವರದಿ ನೀಡುತ್ತವೆ. ಕಲ್ಲಿದ್ದಲು ಹಾಗೂ ತೈಲ ದರ ಹೆಚ್ಚಾದಾಗ ಹೊಂದಾಣಿಕೆ ವೆಚ್ಚ ಹೆಚ್ಚುತ್ತದೆ, ಕಡಿಮೆಯಾದಾಗ ಇಳಿಯುತ್ತದೆ.
ಆದರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಸತ್ಯವನ್ನು ಒಪ್ಪಿಕೊಳ್ಳುವ ಬದಲು ಇಂಧನ ಇಲಾಖೆಯ ಭ್ರಷ್ಟಾಚಾರ ಹಾಗೂ ಅದಕ್ಷ ನಿರ್ವಹಣೆಯಿಂದ ದರ ಏರಿಕೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಶುದ್ಧ ಸುಳ್ಳನ್ನು ಜನರ ಮುಂದಿಟ್ಟಿದ್ದಾರೆ. ಸತ್ಯ ಹೇಳಬೇಕೆಂದರೆ, ಇಂಧನ ಇಲಾಖೆಯಲ್ಲಿ ಹೊಂದಾಣಿಕೆ ವೆಚ್ಚ ಎಂಬ ವ್ಯವಸ್ಥೆಯನ್ನು ಸೃಷ್ಟಿಸಿದ ಪಿತಾಮಹರೇ ಸಿದ್ದರಾಮಯ್ಯ. ಹೊಂದಾಣಿಕೆ ವೆಚ್ಚವನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಹೊಸತರಲ್ಲಿ (ಆಗ ಅವರೇ ಇಂಧನ ಇಲಾಖೆ ಜವಾಬ್ದಾರಿ ಹೊತ್ತಿದ್ದರು) ಅಂದರೆ 2013ರಲ್ಲಿ ಜಾರಿಗೆ ತಂದರು. ಆ ವರ್ಷದ ಮೊದಲ ತ್ರೈಮಾಸಿಕದಲ್ಲಿ ಯಾವುದೇ ದರ ಪರಿಷ್ಕರಣೆಯಾಗದೇ ಇದ್ದರೂ ಎರಡು ಹಾಗೂ ಮೂರನೇ ತ್ರೈಮಾಸಿಕದಲ್ಲಿ ಕ್ರಮವಾಗಿ 19 ಹಾಗೂ 33 ಪೈಸೆ ಹೆಚ್ಚಳ ಮಾಡಲಾಗಿತ್ತು. ಇದಾದ ಬಳಿಕ ಕಾಂಗ್ರೆಸ್ ಅಧಿಕಾರಾವಧಿ ಮುಕ್ತಾಯಗೊಳ್ಳುವವರೆಗೆ ಅಂದರೆ 2014– 14 ಪೈಸೆ, 2015ರ ನಾಲ್ಕು ತ್ರೈಮಾಸಿಕದಲ್ಲಿ ಕ್ರಮವಾಗಿ 22, 29, 34, 25 ಪೈಸೆ, 2016ರಲ್ಲಿ 36, 26, 72, 17 ಪೈಸೆ, 2017ರಲ್ಲಿ 35, 36, 29, 7 ಪೈಸೆ, 2018ರಲ್ಲಿ 1, 39, 73, 50 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಹಾಗಾದರೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದ ಹೊಂದಾಣಿಕೆ ವೆಚ್ಚ ಪರಿಷ್ಕರಣೆ ಭ್ರಷ್ಟಾಚಾರ ಹಾಗೂ ಅದಕ್ಷ ಆಡಳಿತದ ಫಲ ಎಂದು ಆರೋಪಿಸಬಹುದೇ?
ಅದೇ ರೀತಿ, ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಅವಧಿಯಲ್ಲಿ 2019ರಲ್ಲಿ 63, 57, 13 ಪೈಸೆ, 2020ರಲ್ಲಿ 6, 39, 28, 36 ಪೈಸೆ ಹೆಚ್ಚಳವಾಗಿದೆ.
ಅದೆಲ್ಲಕ್ಕಿಂತ ಹೆಚ್ಚಾಗಿ ವಾರ್ಷಿಕ ದರ ಪರಿಷ್ಕರಣೆ ಸಂದರ್ಭದಲ್ಲಿಯೂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರ ಸರ್ಕಾರ ಜನಹಿತವನ್ನು ಎಷ್ಟರಮಟ್ಟಿಗೆ ಗಣನೆಗೆ ತೆಗೆದುಕೊಂಡಿರಬಹುದು ಎಂಬುದಕ್ಕೆ ಈ ಕೋಷ್ಟಕವೇ ಸಾಕ್ಷಿ. ಸಿದ್ದರಾಮಯ್ಯ ಸರ್ಕಾರದ ಕೊನೆಯ ಎರಡು ವರ್ಷ ಪ್ರತಿ ಯೂನಿಟ್‌ಗೆ ಸರಾಸರಿ 48 ಪೈಸೆಯಷ್ಟು ದರ ಹೆಚ್ಚಳ ಮಾಡಲಾಗಿತ್ತು. ಅದು ಈ ದಶಕದಲ್ಲಿ ನಡೆದ ಅತಿ ದೊಡ್ಡ ವಿದ್ಯುತ್ ದರ ಪರಿಷ್ಕರಣೆ ಪ್ರಮಾಣ ಎಂಬುದಕ್ಕೆ ಪರಿಷ್ಕರಣೆ ಕೋಷ್ಟಕ ಗಮನಿಸಿ.
ರಾಜ್ಯದ ಅತಿ ದೊಡ್ಡ ಗ್ರಾಹಕ ಸಮುದಾಯವಾದ ರೈತ ಸಮುದಾಯಕ್ಕೆ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂಬ ಹೆಮ್ಮ ನಮಗಿದೆ. ಅನ್ನದಾತನ ಸೇವೆಗೆ ದೊರೆತ ದೊಡ್ಡ ಅವಕಾಶ ಇದು ಎಂದು ನಾನು ಭಾವಿಸಿದ್ದೇನೆ. ಆದರೆ ಕಳೆದೊಂದು ದಶಕದಲ್ಲಿ ಈ ಸಬ್ಸಿಡಿ ಮೊತ್ತ ₹5,560 ಕೋಟಿಯಿಂದ ₹16,876 ಕೋಟಿಗೆ ಹೆಚ್ಚಳವಾಗಿದೆ. (ಮಾಹಿತಿಗೆ ಸಬ್ಸಿಡಿ ಕೋಷ್ಟಕ ಪರಿಗಣಿಸಿ)
ಇಂಧನ ಇಲಾಖೆಯಲ್ಲಿ ವೆಚ್ಚ ಕಡಿಮೆ ಮಾಡುವ ಸೂತ್ರಗಳೇನು? ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು ಹೇಗೆ? ಸೋರಿಕೆ ತಡೆ ಅಸಾಧ್ಯವೇ? ಆಧುನೀಕರಣದಿಂದ ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡಲು ಸಾಧ್ಯವಿಲ್ಲವೇ ಎಂಬಿತ್ಯಾದಿ ಪ್ರಶ್ನೆಗಳು ಜನರ ಮುಂದೆ ಇವೆ. ಇದು ಮತ್ತೊಂದು ಚರ್ಚೆಯ ವಿಚಾರ. ಈ ದಿಸೆಯಲ್ಲಿ ಸರ್ಕಾರ ಇಟ್ಟ ಹೆಜ್ಜೆಯ ಬಗ್ಗೆ ನಮಗೆ ಸ್ಪಷ್ಟತೆ ಇದೆ. ವಿಶೇಷವಾಗಿ ‘ಹಸಿರು ಇಂಧನ’ ಉತ್ಪಾದನೆ ಮತ್ತು ಬಳಕೆಗೆ ಉತ್ತೇಜನ ನೀಡಬೇಕೆಂಬುದು ನಮ್ಮ ಧ್ಯೇಯ. ಪ್ರಧಾನಿ ನರೇಂದ್ರ ಮೋದಿಯವರ ಆಶಯಕ್ಕೆ ಅನುಗುಣವಾಗಿ ಬಸವರಾಜ ಬೊಮ್ಮಾಯಿ ಸಾರಥ್ಯದ ನಮ್ಮ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ಈ ದಿಸೆಯಲ್ಲಿ ತೆಗೆದುಕೊಂಡಿದೆ. ಸೌರ ಹಾಗೂ ಪವನ ವಿದ್ಯುತ್ ಉತ್ಪಾದನೆ ಹಾಗೂ ಹೈಬ್ರಿಡ್ ಪಾರ್ಕ್ ಮತ್ತು ಸ್ಟೋರೆಜ್ ಕೇಂದ್ರಗಳ ಸ್ಥಾಪನೆಗೆ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ಇದರಿಂದ ಕಲ್ಲಿದ್ದಲು ಮೇಲಿನ ಅವಲಂಬನೆ ಹಾಗೂ ಉತ್ಪಾದನಾ ವೆಚ್ಚವೂ ಕಡಿಮೆಯಾಗುತ್ತದೆ. ಆದರೆ ‘ತಮಸೋ ಮಾಜ್ಯೋತಿರ್ಗಮಯ’ ಎನ್ನುವುದಕ್ಕೆ ಮುನ್ನ ಅಸತ್ಯದಿಂದ ಸತ್ಯದೆಡೆಗೆ ಸಾಗುವ ಪ್ರಯತ್ನವನ್ನೂ ಮಾಡಬೇಕಲ್ಲವೇ? ಹೀಗಾಗಿ ಹಿಂದಿನ ಸರ್ಕಾರಗಳು ಮುಚ್ಚಿಟ್ಟ ಸತ್ಯಗಳನ್ನು ಇಲ್ಲಿ ತೆರೆದಿಡುವ ಪ್ರಯತ್ನ ನಡೆಸಿದ್ದೇನೆ.
ಲೇಖಕ:ವಿ ಸುನೀಲ್ ಕುಮಾರ
ಕರ್ನಾಟಕ ಸರ್ಕಾರದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.