ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ | ಬಾಂಗ್ಲಾ: ಮಗ್ಗುಲ ಮುಳ್ಳು?

Published : 6 ಆಗಸ್ಟ್ 2024, 23:33 IST
Last Updated : 6 ಆಗಸ್ಟ್ 2024, 23:33 IST
ಫಾಲೋ ಮಾಡಿ
Comments
ಬಾಂಗ್ಲಾದ ತಲಾ ಆದಾಯವನ್ನು ಮೂರು ಪಟ್ಟು ಹೆಚ್ಚುವಂತೆ ಮಾಡಿದ, ದೇಶವನ್ನು ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ್ದ ಹಸೀನಾ, ವಿದ್ಯಾರ್ಥಿ ದಂಗೆಯಿಂದ ಅಧಿಕಾರ ಕಳೆದುಕೊಂಡಿದ್ದಾರೆ. ಅವರು ತಮ್ಮ ‘ಮಿತ್ರ’ ರಾಷ್ಟ್ರ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಭಾರತ ಕೂಡ ನೆರೆ ರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಬಾಂಗ್ಲಾದಲ್ಲಿನ ಪರಿಸ್ಥಿತಿ ಭಾರತದ ಮಟ್ಟಿಗೆ ಆಶಾದಾಯಕವಾಗಿಯೇನೂ ಇಲ್ಲ. ಪಾಕಿಸ್ತಾನದಂತೆಯೇ ಬಾಂಗ್ಲಾ ಕೂಡ ಉಗ್ರರ ಅಡಗು ತಾಣವಾಗಬಹುದು ಎನ್ನುವ ಸಾಧ್ಯತೆಯ ಜತೆಗೆ ಈಶಾನ್ಯ ರಾಜ್ಯಗಳಿಗೆ ಒಳನುಸುಳುವಿಕೆ ಸಮಸ್ಯೆ ಎದುರಾಗಬಹುದು ಎನ್ನುವ ಆತಂಕ ಹುಟ್ಟಿಕೊಂಡಿದೆ

ಬಾಂಗ್ಲಾದೇಶದ ವಿದ್ಯಾರ್ಥಿಗಳ ಚಳವಳಿ ಮತ್ತು ಶೇಖ್ ಹಸೀನಾ ರಾಜೀನಾಮೆ ವಿದ್ಯಮಾನ ಭಾರತದ ಮೇಲೆ ಎಂತಹ ಪರಿಣಾಮ ಬೀರಬಹುದು ಎನ್ನುವ ಬಗ್ಗೆ ಚರ್ಚೆ, ವಿಶ್ಲೇಷಣೆಗಳು ನಡೆಯುತ್ತಿವೆ; ದೇಶದ ಭದ್ರತೆಗೆ ಆತಂಕ ತಂದೊಡ್ಡಲಿದೆಯೇ ಎನ್ನುವ ಪ್ರಶ್ನೆಯೂ ಉದ್ಭವವಾಗಿದೆ.

ಪಾಕಿಸ್ತಾನದಿಂದ ಪ್ರತ್ಯೇಕಗೊಂಡಾಗಿನಿಂದಲೂ ಬಾಂಗ್ಲಾ, ಭಾರತದ ಜತೆ ಉತ್ತಮ ಸಂಬಂಧವನ್ನೇ ಹೊಂದಿದೆ. ಈ ಬಗ್ಗೆ ಶೇಖ್ ಹಸೀನಾ ಹಲವು ಬಾರಿ ಮುಕ್ತವಾಗಿ ಹೇಳಿಕೊಂಡಿದ್ದರು. ‘ಭಾರತೀಯರು ನಮ್ಮ ಅತ್ಯುತ್ತಮ ಮಿತ್ರರು. ಅವರು 1971 ಮತ್ತು 1975ರಲ್ಲಿ ನಮ್ಮನ್ನು ಬೆಂಬಲಿಸಿದ್ದರು. ಅವರು ನನಗೆ, ನನ್ನ ತಂಗಿ ಮತ್ತು ಕುಟುಂಬದ ಇತರ ಸದಸ್ಯರಿಗೆ ಆಶ್ರಯ ನೀಡಿದ್ದರು. ಬಾಂಗ್ಲಾದೇಶವು ಭಾರತದೊಂದಿಗೆ ಅನೇಕ ಸಮಸ್ಯೆಗಳನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಂಡಿದೆ’ ಎಂದು ಜನವರಿಯಲ್ಲಿ ಸತತ ನಾಲ್ಕನೇ ಬಾರಿ ಪ್ರಧಾನಿ ಪಟ್ಟಕ್ಕೇರಿದಾಗ ಅವರು ನುಡಿದಿದ್ದರು.

ಹಸೀನಾ ಅವರು ಅಧಿಕಾರದಿಂದ ಕೆಳಗಿಳಿದಿರುವುದರಿಂದಾಗಿ ಅಲ್ಲಿ ಜಮಾತ್–ಎ–ಇಸ್ಲಾಮಿಯಂಥ ಮೂಲಭೂತವಾದಿ ಸಂಘಟನೆಗಳ ಕೈ ಮೇಲಾಗಲಿದೆ. ಅಲ್ಲಿನ ಜನರಲ್ಲಿ ಭಾರತ ವಿರೋಧಿ ಭಾವನೆ ಈಗಾಗಲೇ ಬೆಳೆಯುತ್ತಿದ್ದು, ಸದ್ಯದ ಬೆಳವಣಿಗೆಗಳಿಂದ ಮತ್ತು ಜಮಾತ್–ಎ–ಇಸ್ಲಾಮಿ
ಯಂಥ ಸಂಘಟನೆಗಳಿಂದ ಅದು ಮತ್ತಷ್ಟು ಹೆಚ್ಚಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜತೆಗೆ ಪಾಕಿಸ್ತಾನದಂತೆ ಬಾಂಗ್ಲಾ ಕೂಡ ಭಾರತ ವಿರೋಧಿ ಉಗ್ರಗಾಮಿ ಗುಂಪುಗಳಿಗೆ
ತಮ್ಮ ನೆಲೆ ಮಾಡಿಕೊಂಡು ಭಾರತವನ್ನು ಗುರಿಯಾಗಿಸಿಕೊಳ್ಳಬಹುದು ಎನ್ನುವ ಆತಂಕ ಹುಟ್ಟಿಕೊಂಡಿದೆ.

ಬಾಂಗ್ಲಾದ ಬೆಳವಣಿಗೆಗಳಿಂದ ಭಾರತಕ್ಕೆ ಎದುರಾಗಿರುವ ಮತ್ತೊಂದು ಆತಂಕ ಒಳನುಸುಳಿವಿಕೆಯದ್ದು. ಬಾಂಗ್ಲಾ ಭಾರತದ ಪಶ್ಚಿಮ ಬಂಗಾಳ, ತ್ರಿಪುರಾ, ಮೇಘಾಲಯ, ಮಿಜೋರಾಂ ಮತ್ತು ಅಸ್ಸಾಂನೊಂದಿಗೆ 4,096 ಕಿ.ಮೀ.ಯಷ್ಟು ಗಡಿ ಹಂಚಿಕೊಂಡಿದೆ. 1971ರಲ್ಲಿ ಬಾಂಗ್ಲಾದೇಶವು ಪಾಕಿಸ್ತಾನದಿಂದ ಪ್ರತ್ಯೇಕಗೊಂಡಾಗ, ಅಲ್ಲಿಂದ ದೊಡ್ಡ ಮಟ್ಟದಲ್ಲಿ ಜನ ಈಶಾನ್ಯ ರಾಜ್ಯಗಳಿಗೆ– ಮುಖ್ಯವಾಗಿ ಅಸ್ಸಾಂ ಮತ್ತು
ತ್ರಿಪುರಾಕ್ಕೆ– ನುಸುಳಿದ್ದರು. ಈಗಲೂ ಅದೇ ರೀತಿ ನುಸುಳುಕೋರರು ತ್ರಿಪುರಾ, ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ಅಸ್ಸಾಂ ರಾಜ್ಯಗಳಿಗೆ ನುಗ್ಗಬಹುದು ಎನ್ನುವ ಆತಂಕ ವ್ಯಕ್ತವಾಗಿದೆ. ಹಿಂದೆ ತ್ರಿಪುರಾಕ್ಕೆ ಬಾಂಗ್ಲಾದವರು ನುಗ್ಗಿದ್ದರಿಂದ ಸ್ಥಳೀಯರು ಅಲ್ಪಸಂಖ್ಯಾತರಾದರು ಎನ್ನುವ ವಾದ ಇದೆ.

ಮ್ಯಾನ್ಮಾರ್‌ನಲ್ಲಿ ಆಂಗ್ ಸಾನ್ ಸೂಕಿ ಅವರ ಸರ್ಕಾರವನ್ನು ಸೇನೆ ಪದಚ್ಯುತಗೊಳಿಸಿದ ನಂತರ, ಅಲ್ಲಿನ ಸುಮಾರು 35,000ಕ್ಕೂ ಹೆಚ್ಚು ನಿರಾಶ್ರಿತರು ಮತ್ತು ಪ್ರಜಾಪ್ರಭುತ್ವವಾದಿ ಹೋರಾಟಗಾರರು ಭಾರತದ ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್‌ಗೆ ನುಸುಳಿ ಬಂದಿದ್ದರು. ಮ್ಯಾನ್ಮಾರ್‌ನ ಅನೇಕ ಸಂಸದರು, ಸಚಿವರು ಈಗಲೂ ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮಣಿಪುರ ಕೂಡ ನುಸುಳುಕೋರರ ಸಮಸ್ಯೆಯನ್ನು ಎದುರಿಸುತ್ತಿದೆ.

ಅಸ್ಸಾಂನದ್ದು ಭಿನ್ನ ರೀತಿಯ ಸಮಸ್ಯೆ. ಬಾಂಗ್ಲಾ ಮತ್ತು ಅಸ್ಸಾಂ ರಾಜ್ಯದ ಗಡಿಯಲ್ಲಿ ಅನೇಕ ಕಡೆ ಬೇಲಿಯೇ ಇಲ್ಲ. ಗಡಿಯಲ್ಲಿ ಬೇಲಿ ಅಳವಡಿಸಬೇಕು ಎನ್ನುವುದು ಜನರ ಬಹುಕಾಲದ ಬೇಡಿಕೆ. ಬಾಂಗ್ಲಾದಿಂದ ಒಳನುಸುಳಿವಿಕೆ ಹೆಚ್ಚಾಗಬಹುದು ಎನ್ನುವ ಆತಂಕವನ್ನು ಅಲ್ಲಿನ ಜನ ವ್ಯಕ್ತಪಡಿಸಿದ್ದಾರೆ.

ಹೆಚ್ಚಾಗಲಿದೆಯೇ ಚೀನಾ ಪ್ರಭಾವ?

ಹಸೀನಾ ಸರ್ಕಾರ ಪತನಕ್ಕೆ ಕಾರಣವಾದ ಪ್ರತಿಭಟನೆ, ಹಿಂಸಾಚಾರದಲ್ಲಿ ಪಾಕಿಸ್ತಾನ, ಚೀನಾ ಪರ ಒಲವು ಉಳ್ಳವರೇ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿದ್ದರು ಎಂದು ಹೇಳಲಾಗುತ್ತಿದೆ. ಹಾಗಾಗಿ, ಪಾಕಿಸ್ತಾನ ಮತ್ತು ಚೀನಾ ಈ ದಂಗೆಯ ಹಿಂದೆ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. 

ಬಾಂಗ್ಲಾದಲ್ಲಿ ಅವಾಮಿ ಲೀಗ್‌ ಬಿಟ್ಟು ಇತರ ಪಕ್ಷಗಳು ಭಾರತದ ಪರ ನಿಲುವು ಹೊಂದಿಲ್ಲ. ಬಾಂಗ್ಲಾದೇಶ್‌ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ), ಜಮಾತ್‌–ಇ–ಇಸ್ಲಾಮಿ ಪಾಕಿಸ್ತಾನದ ಪರ ಒಲವು ಹೊಂದಿವೆ. ಪಾಕಿಸ್ತಾನ ಮತ್ತು ಚೀನಾ ಸಂಬಂಧ ಅತ್ಯುತ್ತಮವಾಗಿರುವುದರಿಂದ ಬಾಂಗ್ಲಾದೇಶದ ಆಡಳಿತದ ಮೇಲೆ ಎರಡೂ ರಾಷ್ಟ್ರಗಳು ಪ್ರಭಾವ ಬೀರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. 

ಬಾಂಗ್ಲಾದಲ್ಲಿ ಮುಂದೆ ಅಸ್ತಿತ್ವಕ್ಕೆ ಬರುವ ಸರ್ಕಾರ ಭಾರತ ವಿರೋಧಿ ನಿಲುವು ಹೊಂದಿದ್ದೇ ಆದಲ್ಲಿ, ಭಾರತ ಮತ್ತೊಂದು ಮಿತ್ರರಾಷ್ಟ್ರವನ್ನು ಕಳೆದುಕೊಳ್ಳುವುದು ಖಚಿತ.  

ದೇಶದ ಭದ್ರತೆಯ ದೃಷ್ಟಿಯಿಂದ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಿರುವುದು ಬಹಳ ಮುಖ್ಯ. ಆದರೆ, ಇತ್ತೀಚಿನ ವರ್ಷಗಳಲ್ಲಿ ಭಾರತವು ಅಕ್ಕಪಕ್ಕದ ರಾಷ್ಟ್ರಗಳ ಗೆಳೆತನವನ್ನು ಕಳೆದುಕೊಳ್ಳುತ್ತಿದೆ.  

ಅರಬ್ಬಿ ಸಮುದ್ರ, ಹಿಂದೂ ಮಹಾಸಾಗರ, ಬಂಗಾಳಕೊಲ್ಲಿ ವ್ಯಾಪ್ತಿಯಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಚೀನಾ, ಭಾರತದ ನೆರೆಯ ರಾಷ್ಟ್ರಗಳಿಗೆ ಸಾಲ, ಮೂಲಸೌಕರ್ಯಕ್ಕೆ ನೆರವು, ಬಂದರು ನಿರ್ಮಾಣಕ್ಕೆ ಸಹಕಾರ ನೀಡುವಂತಹ ಕಾರ್ಯಕ್ರಮಗಳಿಂದ ಆ ರಾಷ್ಟ್ರಗಳಲ್ಲಿ ತನ್ನ ನೆಲೆಯನ್ನು ಗಟ್ಟಿಗೊಳಿಸುತ್ತಿದೆ. ಆ ರಾಷ್ಟ್ರಗಳ ವಿದೇಶಾಂಗ ನೀತಿಯ ಮೇಲೂ ಪ್ರಭಾವ ಬೀರುತ್ತಿದೆ. ‌

ಅರಬ್ಬಿ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳಕೊಲ್ಲಿ ವ್ಯಾಪ್ತಿಯ ರಾಷ್ಟ್ರಗಳಲ್ಲಿ ಬಂದರುಗಳನ್ನು ನಿರ್ಮಿಸಿ, ಅಲ್ಲಿ ತನ್ನ ಸೇನಾ ನೆಲೆ ಸ್ಥಾಪಿಸಿ ‘ಮುತ್ತಿನ ಮಾಲೆ’ (ಸ್ಟ್ರಿಂಗ್‌ ಆಫ್‌ ಪರ್ಲ್ಸ್‌) ಹೆಣೆಯುವ ಕಾರ್ಯತಂತ್ರವನ್ನು ಚೀನಾ ಅನುಷ್ಠಾನಗೊಳಿಸುತ್ತಿದೆ.

ಪಾಕಿಸ್ತಾನದೊಂದಿಗೆ ಭಾರತದ ಸಂಬಂಧ ಆರಂಭದಿಂದಲೂ ಉತ್ತಮವಾಗಿಲ್ಲ. ಕೆಲವು ವರ್ಷಗಳಿಂದ ಶ್ರೀಲಂಕಾದೊಂದಿಗೆ ಭಾರತದ ಬಾಂಧವ್ಯ ಅಷ್ಟಕ್ಕಷ್ಟೇ ಇದೆ. ಮಾಲ್ದೀವ್ಸ್‌ನೊಂದಿಗಿನ ಸಂಬಂಧವೂ ಹಳಸಿದೆ. ನೇಪಾಳದೊಂದಿಗೂ ಮೊದಲಿದ್ದಂತಹ ಉತ್ತಮ ಸಂಬಂಧ ಇಲ್ಲ. ಭೂತಾನ್‌ನೊಂದಿಗೆ ತಕ್ಕಮಟ್ಟಿಗೆ ಚೆನ್ನಾಗಿದೆ. ಮೂರು ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಅಧಿಕಾರಕ್ಕೆ ಬರುವುದರೊಂದಿಗೆ ಅದರೊಂದಿಗಿನ ಬಾಂಧವ್ಯಕ್ಕೂ ಹಿನ್ನಡೆಯಾಗಿದೆ. 

ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ರಾಷ್ಟ್ರಗಳೆಲ್ಲ ಈಗ ಚೀನಾಕ್ಕೆ ಹತ್ತಿರವಾಗಿವೆ. ಭಾರತದಿಂದ ದೂರ ಸರಿಯುತ್ತಿವೆ. ಬಾಂಗ್ಲಾದ ಮೇಲೂ ಚೀನಾ ಪ್ರಭಾವ ಬೀರಲು ಯತ್ನಿಸುತ್ತಿದ್ದರೂ, ಶೇಖ್‌ ಹಸೀನಾ ಆಡಳಿತದಲ್ಲಿ ಭಾರತದೊಂದಿಗೆ ಅದರ ಸಂಬಂಧ ಉತ್ತಮವಾಗಿತ್ತು. ಈಗ ಅಲ್ಲಿ ನಡೆದಿರುವ ಬೆಳವಣಿಗೆ ಎರಡೂ ರಾಷ್ಟ್ರಗಳ ಬಾಂಧವ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

ವ್ಯಾಪಾರಕ್ಕೂ ಕುತ್ತು?
ಹಸೀನಾ ರಾಜೀನಾಮೆಯಿಂದ ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧಕ್ಕೂ ಹೊಡೆತ ಬೀಳಬಹುದು ಎನ್ನುವುದು ಮತ್ತೊಂದು ಆತಂಕ. ಮೊದಲಿನಿಂದಲೂ, ಬಾಂಗ್ಲಾ ಭಾರತದೊಂದಿಗೆ ಉತ್ತಮ ವ್ಯವಹಾರ ಸಂಬಂಧವನ್ನೂ ಹೊಂದಿದೆ. ದಕ್ಷಿಣ ಏಷ್ಯಾದಲ್ಲಿ ಭಾರತಕ್ಕೆ ಬಾಂಗ್ಲಾ ಅತಿ ದೊಡ್ಡ ವ್ಯಾಪಾರ ಪಾಲುದಾರ ಆಗಿದೆ. ಅದೇ ರೀತಿ ಬಾಂಗ್ಲಾಕ್ಕೆ ಭಾರತವು ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಇತ್ತೀಚೆಗೆ ಭಾರತದೊಂದಿಗಿನ ಬಾಂಗ್ಲಾದ ವ್ಯಾಪಾರದಲ್ಲಿ ಅಲ್ಪಕುಸಿತ ಕಂಡಿದ್ದರೂ, ಎರಡು ದೇಶಗಳ ನಡುವಿನ ಸಂಬಂಧಕ್ಕೆ ಧಕ್ಕೆಯೇನೂ ಆಗಿರಲಿಲ್ಲ.
ಭಾರತದಿಂದ ಬಾಂಗ್ಲಾಕ್ಕೆ ರಫ್ತು

ಆಧಾರ: ಪಿಟಿಐ, ಡೆಕ್ಕನ್ ಹೆರಾಲ್ಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT