ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಅಬ್ಬರದ ಸಂಗೀತ ಮತ್ತು ಹೃದಯಾಘಾತ
ಆಳ–ಅಗಲ: ಅಬ್ಬರದ ಸಂಗೀತ ಮತ್ತು ಹೃದಯಾಘಾತ
Published 25 ಅಕ್ಟೋಬರ್ 2023, 0:03 IST
Last Updated 25 ಅಕ್ಟೋಬರ್ 2023, 0:03 IST
ಅಕ್ಷರ ಗಾತ್ರ

ನವರಾತ್ರಿ ಆಚರಣೆಯ ಭಾಗವಾಗಿ ಗುಜರಾತ್‌, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಹಲವೆಡೆ ಗಾರ್ಬಾ ನೃತ್ಯವನ್ನು ಆಯೋಜಿಸಲಾಗುತ್ತದೆ. ಫಲವಂತಿಕೆಯನ್ನು ಆಶಿಸಿ ನೂರಾರು ಮಂದಿ ಒಟ್ಟಿಗೇ ಈ ನೃತ್ಯ ಮಾಡುತ್ತಾರೆ. ಹುಟ್ಟಿನಿಂದ ಸಾವಿನವರೆಗೆ ಮನುಷ್ಯನ ಜೀವನದ ವಿವಿಧ ಹಂತಗಳನ್ನು ತೋರಿಸುವ ಕಥಾಪ್ರಸಂಗದ ಸುತ್ತಲೇ ಗಾರ್ಬಾ ಹಾಡು–ಸಂಗೀತ ರೂಪುಗೊಂಡಿರುತ್ತದೆ. ಹುಟ್ಟು ಮತ್ತು ಸಾವನ್ನು ಹೇಳುವ ಈ ನೃತ್ಯದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲೇ ಗುಜರಾತ್‌ನಲ್ಲಿ 6 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಗಾರ್ಬಾ ನೃತ್ಯದ ವೇಳೆ ಅಬ್ಬರದ ಸಂಗೀತದ ಡಿಜೆಗಳನ್ನು ಬಳಸಿದ್ದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆಯಾದರೂ, ಈ ಆರೂ ಮಂದಿಯ ಸಾವಿನ ಪ್ರಕರಣಗಳಲ್ಲಿ ವೈದ್ಯಕೀಯವಾಗಿ ಅದು ಸಾಬೀತಾಗಿಲ್ಲ. ಆದರೆ, ಅಬ್ಬರದ ಸಂಗೀತವು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ ಎಂಬುದನ್ನು ಹಲವು ಅಧ್ಯಯನಗಳು ಈಗಾಗಲೇ ಸಾಬೀತುಮಾಡಿವೆ

‘ನಿದ್ರಾಹೀನತೆ ಮತ್ತು ಅತೀವ ಒತ್ತಡದಂತಹ ಅನಾರೋಗ್ಯದ ಸ್ಥಿತಿಗಳನ್ನು ಗುಣಪಡಿಸಲು ಸಂಗೀತವನ್ನೂ ಚಿಕಿತ್ಸೆಯಾಗಿ ಬಳಸುವ ವಿಧಾನ ಚಾಲ್ತಿಯಲ್ಲಿದೆ. ಆದರೆ ಅತೀವ ಸದ್ದಿನ ಸಂಗೀತವನ್ನು ಕೆಲವೇ ನಿಮಿಷಗಳಷ್ಟು ನಿರಂತರವಾಗಿ ಕೇಳಿದರೂ ಕಿವುಡುತನ ಉಂಟಾಗುವುದಲ್ಲದೆ, ಹೃದಯಾಘಾತವೂ ಸಂಭವಿಸಬಹುದು. ಅತೀವ ಸದ್ದಿನ ಸಂಗೀತವು ಸಾವನ್ನೂ ತರಬಹುದು’.

–ಯೂರೋಪಿಯನ್‌ ಹಾರ್ಟ್‌ ಜರ್ನಲ್‌ನ 2019ರ ನವೆಂಬರ್‌ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಅಧ್ಯಯನ ವರದಿಯಲ್ಲಿನ ಸಾಲುಗಳಿವು.

ಜರ್ಮನಿಯ ಮೈನ್ಝ್‌ ವಿಶ್ವವಿದ್ಯಾಲಯದ ವೈದ್ಯಕೀಯ ಅಧ್ಯಯನ ಕೇಂದ್ರವು ಆ ಅಧ್ಯಯನವನ್ನು ನಡೆಸಿತ್ತು. ಅಬ್ಬರದ ಸಂಗೀತ ಕೇಳುವ, ಅತೀವ ಸದ್ದಿನ ಪರಿಸರದಲ್ಲಿ ಜೀವಿಸುತ್ತಿರುವ ವ್ಯಕ್ತಿಗಳ ಮೇಲೆ ದೀರ್ಘಾವಧಿಯ ಅಧ್ಯಯನದ ನಂತರ ಈ ವರದಿಯನ್ನು ಸಿದ್ಧಪಡಿಸಲಾಗಿತ್ತು. 50 ಡೆಸಿಬಲ್‌ಗಿಂತ ಹೆಚ್ಚು ಸದ್ದಿನ ಸಂಗೀತವನ್ನು ನಿರಂತರವಾಗಿ ಕೇಳುವವರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಆರಂಭವಾಗಿದ್ದವು. ಹಲವರು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೂ ಒಳಗಾದರು ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿತ್ತು. 

ಅಮೆರಿಕದ ಮೆಸಾಚ್ಯುಸೆಟ್ಸ್‌ ವಿಶ್ವವಿದ್ಯಾಲಯ, ಫೈಝರ್‌ ಔಷಧ ತಯಾರಿಕಾ ಕಂಪನಿಗಳು ಪ್ರತ್ಯೇಕವಾಗಿ ನಡೆಸಿದ ಅಧ್ಯಯನಗಳೂ ಈ ವಿಚಾರವನ್ನು ದೃಢಪಡಿಸಿದ್ದವು. ಗುಜರಾತ್‌ನಲ್ಲಿ ಅಬ್ಬರದ ಸಂಗೀತದೊಂದಿಗೆ ಆಯೋಜಿಸಲಾಗಿದ್ದ ಗಾರ್ಬಾ ನೃತ್ಯದ ವೇಳೆ ಹೃದಯಾಘಾತವಾಗಿ ಆರು ಮಂದಿ ಮೃತಪಟ್ಟ ಪ್ರಕರಣಗಳನ್ನು, ಈ ಅಧ್ಯಯನ ವರದಿಗಳ ಹೊಳಹುಗಳ ಮೂಲಕ ವಿಶ್ಲೇಷಿಸುವ ಯತ್ನ ಪರಿಣತರ ಮಟ್ಟದಲ್ಲಿ ನಡೆಯುತ್ತಿದೆ. ಆದರೆ, ಈ ಆರೂ ಮಂದಿಯ ಪ್ರಕರಣದಲ್ಲಿ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆಯಾದರೂ, ಹೃದಯಾಘಾತ ಸಂಭವಿಸಿದ್ದು ಏಕೆ ಎಂಬುದನ್ನು ಪತ್ತೆ ಮಾಡಲಾಗಿಲ್ಲ. 

ಮೂಲ ಸ್ವರೂಪದಲ್ಲಿ ಗಾರ್ಬಾ ನೃತ್ಯದ ವೇಳೆ ಅಬ್ಬರದ ಸಂಗೀತ ಬಳಕೆಯಲ್ಲಿ ಇರಲಿಲ್ಲ. ನೃತ್ಯದಲ್ಲಿ ಭಾಗಿಯಾಗುವವರೇ ಹಾಡನ್ನೂ ಹಾಡುತ್ತಿದ್ದರು. ಆದರೆ ಈಚಿನ ವರ್ಷಗಳಲ್ಲಿ ನೃತ್ಯದ ಸ್ವರೂಪ ಸಂಪೂರ್ಣ ಬದಲಾಗಿದೆ. ಮೊದಲು ಲೌಡ್‌ ಸ್ಪೀಕರ್‌ಗಳ ಮೂಲಕ ಹಾಡುಗಳನ್ನು ಹಾಕುವುದು ಚಾಲ್ತಿಗೆ ಬಂದಿತು. ನಂತರದ ವರ್ಷಗಳಲ್ಲಿ ಗಾರ್ಬಾ ನೃತ್ಯದ ವೇಳೆ ಅತೀವ ಸದ್ದಿನ ಡಿಜೆಯೂ ಬಳಕೆಗೆ ಬಂದಿತು. ಇದರೊಂದಿಗೆ ದಾಂಡಿಯಾ ನೃತ್ಯವನ್ನು ಒಳಗೊಂಡ ‘ಗರ್ಬಾ ದಾಂಡಿಯಾ’ ನೃತ್ಯ ಪ್ರಕಾರವೂ ರೂಪುಗೊಂಡಿತು. ಗುಜರಾತ್‌ನಲ್ಲಿ ನವರಾತ್ರಿಯ ವೇಳೆ ಆಯೋಜಿಸಲಾಗುವ ಗಾರ್ಬಾ ನೃತ್ಯವು ವಾಸ್ತವವಾಗಿ ಅತೀವ ಸದ್ದಿನ ಡಿಜೆಯನ್ನು ಒಳಗೊಂಡ ಗಾರ್ಬಾ ದಾಂಡಿಯಾ ನೃತ್ಯವೇ ಆಗಿರುತ್ತದೆ.

ನೃತ್ಯದ ವೇಳೆ ಹೃದಯಾಘಾತದಿಂದ ಜನರು ಮೃತಪಟ್ಟ ಬಗ್ಗೆ ಅಧ್ಯಯನದ ಅವಶ್ಯಕತೆ ಇದೆ ಎಂದು ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್‌ ಪಟೇಲ್‌ ಒತ್ತಾಯಿಸಿದ್ದಾರೆ. ಆದರೆ, ಗಾರ್ಬಾ ನೃತ್ಯದ ವೇಳೆ ಆಂಬುಲೆನ್ಸ್‌ನಂತಹ ವೈದ್ಯಕೀಯ ತುರ್ತು ಸೇವೆಯನ್ನು ಆಯೋಜಕರು ಒದಗಿಸಬೇಕು ಎಂದು ಗುಜರಾತ್ ಸರ್ಕಾರ ಹೇಳಿದೆಯೇ ಹೊರತು, ಅಧ್ಯಯನದ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ.

ಅಬ್ಬರದ ಸಂಗೀತದಿಂದ ಏನಾಗುತ್ತದೆ?
ಮಾನವನ ಮಿದುಳಿನಲ್ಲಿ ಅಮಿಗ್ಡಲಾ ಎಂಬ ಭಾಗವಿದೆ. ಅದು ಮಾನವನ ಭಯ–ಗಾಬರಿಗಳ ಸಂದರ್ಭದಲ್ಲಿ ಸಕ್ರಿಯವಾಗುತ್ತದೆ ಮತ್ತು ಅವುಗಳನ್ನು ನಿರ್ವಹಿಸಲು ನೆರವಾಗುತ್ತದೆ. ತೀವ್ರ ಒತ್ತಡದ ಸಂದರ್ಭದಲ್ಲಿ ಇದು ಸಕ್ರಿಯವಾಗುತ್ತದೆ. 60 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ/ಸಂಗೀತವನ್ನು ಹಲವು ನಿಮಿಷಗಳವರೆಗೆ ನಿರಂತರವಾಗಿ ಕೇಳಿದವರಲ್ಲಿ ಅಮಿಗ್ಡಲಾ ಭಾಗವು ಸಕ್ರಿಯವಾದುದು ಅಧ್ಯಯನದಲ್ಲಿ ಪತ್ತೆಯಾಗಿದೆ. ಅಂತಹ ಸಂದರ್ಭದಲ್ಲಿನ ಒತ್ತಡವನ್ನು ನಿರ್ವಹಿಸಲು ದೇಹವು ಹಲವು ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಅದರ ಪರಿಣಾಮವಾಗಿ ರಕ್ತದ ಒತ್ತಡವೂ ಹೆಚ್ಚುತ್ತದೆ ಎಂಬುದು ಈ ಅಧ್ಯಯನಗಳ ವೇಳೆ ಪತ್ತೆಯಾಗಿತ್ತು. ಅಮಿಗ್ಡಲಾ ಸಕ್ರಿಯವಾದ ಮತ್ತು ಅತೀವ ಸದ್ದಿನಿಂದ ತೀವ್ರ ಒತ್ತಡಕ್ಕೆ ಒಳಗಾದವರಲ್ಲಿ ರಕ್ತನಾಳಗಳು ಕುಗ್ಗುವ ಸ್ಥಿತಿ ಎದುರಾಗಿತ್ತು. ರಕ್ತನಾಳಗಳು ಕುಗ್ಗಿದ ಕಾರಣಕ್ಕೆ ರಕ್ತದ ಒತ್ತಡ ತೀವ್ರ ಮಟ್ಟದಲ್ಲಿ ಏರಿಕೆಯಾಗಿತ್ತು. ಜತೆಗೆ ಅಂತಹವರ ಹೃದಯಬಡಿತದಲ್ಲೂ ಗಣನೀಯ ಪ್ರಮಾಣದ ಏರಿಳಿತ ಕಂಡುಬಂದಿತ್ತು. ದೇಹದ ರಕ್ತಪರಿಚಲನೆಯಲ್ಲಿ ಇಂತಹ ಸ್ಥಿತಿ ಉಂಟಾದಾಗ ಹೃದಯದ ಹೃತ್ಕರ್ಣಗಳಿಗೆ ಅಗತ್ಯ ಪ್ರಮಾಣದ ರಕ್ತವು ಪೂರೈಕೆಯಾಗುವುದಿಲ್ಲ. ಇದರಿಂದ ಹೃದಯದ ಹೃತ್ಕುಹರಗಳಿಗೂ ರಕ್ತ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ಈ ಸಮಸ್ಯೆ ತೀವ್ರವಾದಾಗ ಹೃದಯಾಘಾತವಾಗುವ ಅಪಾಯವಿರುತ್ತದೆ. ಜತೆಗೆ ಪಾರ್ಶ್ವವಾಯು ಉಂಟಾಗಬಹುದು. ಹೃದಯಾಘಾತದ ತೀವ್ರತೆ ಹೆಚ್ಚಿದ್ದರೆ ಸಾವೂ ಸಂಭವಿಸುತ್ತದೆ ಎಂದು ಈ ಅಧ್ಯಯನ ವರದಿಗಳಲ್ಲಿ ವಿವರಿಸಲಾಗಿದೆ. ಅಬ್ಬರದ ಸಂಗೀತ ಮಾತ್ರವಲ್ಲ ವಿಮಾನ ನಿಲ್ದಾಣದ ಸಮೀಪ ವಾಸವಿರುವವರು ವಿಮಾನಗಳ ಜೆಟ್‌ ಬ್ಲ್ಯಾಸ್ಟ್‌ನಿಂದಲೂ (ಟೇಕ್‌ಆಫ್‌ ವೇಳೆ ವಿಮಾನಗಳ ಜೆಟ್‌ ಎಂಜಿನ್‌ನಿಂದ ದಿಢೀರ್ ಎಂದು ಉಂಟಾಗುವ ಶಬ್ದಸ್ಫೋಟ) ಹೃದಯಾಘಾತದ ಅಪಾಯ ಎದುರಿಸುತ್ತಿರುತ್ತಾರೆ. ಲಂಡನ್‌ನ ಹೀತ್ರೂ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿದ್ದ 36000 ಜನರನ್ನು ಅಧ್ಯಯನಕ್ಕೆ ಒಳಪಡಿಸಿ ಈ ಅಂಶವನ್ನು ಕಂಡುಕೊಳ್ಳಲಾಗಿತ್ತು ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.
ಕಾರ್ಡಿಯೊ/ಜಿಮ್‌ಗಳಲ್ಲಿ ಅಬ್ಬರದ ಸಂಗೀತ ಬಳಸುತ್ತಿದ್ದರೂ ಅಪಾಯ
ಕಾರ್ಡಿಯೊ ಮತ್ತು ಜಿಮ್‌ಗಳಲ್ಲಿ ಅಬ್ಬರದ ಸಂಗೀತ ಬಳಕೆಯಲ್ಲಿದೆ. ಬ್ರಿಟನ್‌ ಮತ್ತು ಜರ್ಮನಿಯಲ್ಲಿ ಅಧ್ಯಯನಕ್ಕೆ ಒಳಪಡಿಸಿದ ಜಿಮ್‌ ಸೆಂಟರ್‌ಗಳಲ್ಲಿ 100 ಡೆಸಿಬಲ್‌ಗಿಂತಲೂ ಹೆಚ್ಚಿನ ಮಟ್ಟದ ಸಂಗೀತವನ್ನು ಕೇಳಿಸಲಾಗುತ್ತಿತ್ತು. ಕಾರ್ಡಿಯೊ ಮತ್ತು ವ್ಯಾಯಾಮದಲ್ಲಿ ಭಾಗಿಯಾದವರಲ್ಲಿ ಉತ್ಸಾಹ ತುಂಬಲು ಅಬ್ಬರದ ಸಂಗೀತ ಬಳಸಲಾಗುತ್ತದೆ ಎಂದು ಜಿಮ್‌ ತರಬೇತುದಾರರು ಹೇಳಿದ್ದರು. ಅಂತಹ ವಾತಾವರಣದಲ್ಲಿ ಕಾರ್ಡಿಯೊ ಮತ್ತು ವ್ಯಾಯಾಮ ಮಾಡುತ್ತಿದ್ದ 500 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರಲ್ಲಿ ಹಲವರು ಹೃದಯಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅವರ ಮಿದಳಿನ ಅಮಿಗ್ಡಲಾ //ಅಗತ್ಯವಾಗಿ// ಹೆಚ್ಚು ಸಕ್ರಿಯವಾಗಿತ್ತು ಎಂಬುದನ್ನು ‍ಪಿಇಟಿ ಸ್ಕ್ಯಾನ್‌ ಮೂಲಕ ಪತ್ತೆ ಮಾಡಲಾಗಿತ್ತು. ಅಬ್ಬರದ ಸಂಗೀತವು ರಕ್ತದ ಒತ್ತಡವನ್ನು ಹೆಚ್ಚಿಸುತ್ತಿದ್ದುದಲ್ಲದೇ ವ್ಯಾಯಾಮದಿಂದ ಅವರ ರಕ್ತದೊತ್ತಡ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗುತ್ತಿತ್ತು ಎಂಬುದನ್ನು ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ಭಾರತದಲ್ಲೂ ಕಾರ್ಡಿಯೊ ಮತ್ತು ಜಿಮ್‌ಗಳಲ್ಲಿ ಅಬ್ಬರದ ಸಂಗೀತ ಹಾಕುವ ಪರಿಪಾಟವಿದೆ. ಕನ್ನಡದ ಹಲವು ನಟರೂ ಸೇರಿ ಭಾರತದ ಹಲವು ಗಣ್ಯರು ಜಿಮ್‌ನಲ್ಲಿಯೇ ಕುಸಿದುಬಿದ್ದು ಹೃದಯಾಘಾತದಿಂದ ಮೃತಪಟ್ಟ ಹಲವು ನಿದರ್ಶನಗಳಿವೆ. ಇನ್ನು ಅಬ್ಬರದ ಸಂಗೀತ ಕಾರ್ಯಕ್ರಮಗಳ ವೇಳೆ ವೇದಿಕೆಯಲ್ಲೇ ಗಾಯಕರು ಕುಸಿದುಬಿದ್ದು ಹೃದಯಾಘಾತದಿಂದ ಮೃತಪಟ್ಟ ಸಂಖ್ಯೆಯೂ ಕಡಿಮೆಯಿಲ್ಲ. ಗುಜರಾತ್‌ನಲ್ಲಿ ಅಬ್ಬರದ ಸಂಗೀತದ ಗಾರ್ಬಾ ನೃತ್ಯದ ವೇಳೆ 15 ವರ್ಷದ ಬಾಲಕ ಸೇರಿ ಹಲವರು ಮೃತಪಟ್ಟ ಬಳಿಕ ವ್ಯಾಯಾಮ ಮತ್ತು ಸಂಗೀತ ಕಾರ್ಯಕ್ರಮಗಳಲ್ಲಿ ಗಣ್ಯರು ಮೃತಪಟ್ಟ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ಶಬ್ದ ನಿಯಂತ್ರಣ...

ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶಬ್ದ ಮಾಲಿನ್ಯಕ್ಕೆ ನಿಯಂತ್ರಣಗಳಿವೆ. ಆದರೆ ನಿಯಮಗಳಲ್ಲಿ ಸೂಚಿಸಿರುವ ಶಬ್ದ ಮಾಲಿನ್ಯದ ಮಿತಿಯು ಆರೋಗ್ಯಕರ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದ್ದಾಗಿದೆ. ಶಬ್ದ ಮಾಲಿನ್ಯದ ಮಿತಿ ಎಷ್ಟಿರಬೇಕು ಎಂಬುದನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ‘ಶಬ್ದ ಮಾಲಿನ್ಯ (ನಿಯಂತ್ರಣ) ನಿಯಮ’ಗಳಲ್ಲಿ ವಿವರಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಆಯೋಜಿಸುವ ಹಬ್ಬದ ಆಚರಣೆಗಳು ಸಂಗೀತ ಕಾರ್ಯಕ್ರಮಗಳು ಮತ್ತು ನೃತ್ಯ ಕಾರ್ಯಕ್ರಮಗಳಲ್ಲಿ ಸಂಗೀತದ ಶಬ್ದದ ಪ್ರಮಾಣ 100 ಡೆಸಿಬಲ್‌ ಮೀರುವಂತಿಲ್ಲ ಎಂದು ಈ ನಿಯಮಗಳು ಹೇಳುತ್ತವೆ. 60 ಡೆಸಿಬಲ್‌ ಮೀರಿದ ಸಂಗೀತವೇ ಮನುಷ್ಯನ ಹೃದಯಕ್ಕೆ ಮಾರಕ ಎಂದು ಪರಿಗಣಿಸಲಾಗುತ್ತದೆಯಾದರೂ ನಮ್ಮಲ್ಲಿ 100 ಡೆಸಿಬಲ್‌ವರೆಗೆ ಅವಕಾಶ ನೀಡಲಾಗಿದೆ. ಮನೆಗಳಲ್ಲಿ ಬಳಸುವ ಸಾಮಾನ್ಯ ಹೋಮ್‌ ಥಿಯೇಟರ್‌ಗಳೇ 80 ಡೆಸಿಬಲ್‌ವರೆಗಿನ ಶಬ್ದವನ್ನು ಉತ್ಪಾದಿಸಬಲ್ಲವು. ಇನ್ನು ಪ್ರವೇಶಮಟ್ಟದ ಡಿಜೆ ಸಿಸ್ಟಂಗಳು 125–140 ಡೆಸಿಬಲ್‌ವರೆಗಿನ ಶಬ್ದವನ್ನು ಉತ್ಪಾದಿಸಬಲ್ಲವು. 100 ಡೆಸಿಬಲ್‌ವರೆಗಿನ ಶಬ್ದ ಉತ್ಪಾದಿಸುವ ಕಾರ್ಯಕ್ರಮಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಅನುಮತಿ ಪಡೆದಿದ್ದರೂ ಮಿತಿಯ ಮಟ್ಟದಲ್ಲಿ ಮಾತ್ರ ಅಬ್ಬರದ ಸಂಗೀತವನ್ನು ಹಾಕಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ ದೇಶದ ಎಲ್ಲಾ ಭಾಗಗಳಲ್ಲಿ ಇಲ್ಲ.

ಆಧಾರ: ಯೂರೋಪಿಯನ್‌ ಹಾರ್ಟ್‌ ಜರ್ನಲ್‌, ಮೆಸಾಚ್ಯುಸೆಟ್ಸ್‌ ವಿಶ್ವವಿದ್ಯಾಲಯ, ಫೈಝರ್‌, ಎಎಫ್‌ಪಿ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT