ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ಆಳ–ಅಗಲ | ಬಯಲು ಕುಗ್ಗಿ, ಕಟ್ಟಡ ಹಿಗ್ಗಿ ಬಿಸಿ ಏರುತ್ತಿದೆ ಬೆಂಗಳೂರು
ಆಳ–ಅಗಲ | ಬಯಲು ಕುಗ್ಗಿ, ಕಟ್ಟಡ ಹಿಗ್ಗಿ ಬಿಸಿ ಏರುತ್ತಿದೆ ಬೆಂಗಳೂರು
Published 29 ಮೇ 2024, 0:29 IST
Last Updated 29 ಮೇ 2024, 0:29 IST
ಅಕ್ಷರ ಗಾತ್ರ

ಈ ಸಾಲಿನ ಬೇಸಿಗೆಯಲ್ಲಿ ಬೆಂಗಳೂರು ಅಕ್ಷರಶಃ ‘ಓವನ್‌’ನಲ್ಲಿ ಇದ್ದಂತಿತ್ತು. ಈಚಿನ ವರ್ಷಗಳಲ್ಲಿ ನಗರದಲ್ಲಿ ಗರಿಷ್ಠ ಉಷ್ಣಾಂಶ ಏರಿಕೆಯಾಗುತ್ತಿರುವುದು ಮತ್ತು ರಾತ್ರಿಯ ವೇಳೆ ಉಷ್ಣಾಂಶ ಗಣನೀಯ ಪ್ರಮಾಣದಲ್ಲಿ ಕುಸಿಯದೇ ಇರುವುದರಿಂದ ಹೀಗಾಗುತ್ತಿದೆ. ಆದರೆ ಎರಡು ದಶಕಗಳ ಹಿಂದೆ ಹೀಗೆ ಇರಲಿಲ್ಲ. ನಡು ಬೇಸಿಗೆಯ ದಿನವೊಂದರ ಮಧ್ಯಾಹ್ನದಲ್ಲಿ ಇರುತ್ತಿದ್ದ ಉಷ್ಣಾಂಶವು ರಾತ್ರಿಯ ವೇಳೆಗೆ ಕುಸಿಯುತ್ತಿತ್ತು. ಬೆಂಗಳೂರು ನಗರದಲ್ಲಿದ್ದ ಬಯಲು ಪ್ರದೇಶಗಳು, ಗುಂಡುತೋಪುಗಳು, ನಗರದ ಹೊರವಲಯದಲ್ಲಿದ್ದ ಹೊಲ–ಗದ್ದೆ ಬಯಲುಗಳು ದಿನದ ಉಷ್ಣಾಂಶವನ್ನು ತಗ್ಗಿಸುವ ಕೆಲಸ ಮಾಡುತ್ತಿದ್ದವು. ಈಗ ಇಂತಹ ಬಯಲು ಪ್ರದೇಶಗಳು ಇಲ್ಲವೇ ಇಲ್ಲ ಎನ್ನುವಷ್ಟು ಕುಸಿದಿರುವುದು ಮತ್ತು ಕಾಂಕ್ರಿಟೀಕರಣದಿಂದ ನಗರವು ತನ್ನಿಂದ ತಾನೇ ತಂಪಾಗುವ ಶಕ್ತಿಯನ್ನು ಇಲ್ಲವಾಗಿಸಿದೆ. ಪರಿಣಾಮವಾಗಿ ನಗರವು ಕಾದ ಕಾವಲಿಯಂತಾಗಿದೆ ಎನ್ನುತ್ತಾರೆ ವಿಜ್ಞಾನಿಗಳು.

ಬೆಂಗಳೂರು ಸೇರಿ ದೇಶದ ಆರು ನಗರಗಳ ಉಷ್ಣಾಂಶದಲ್ಲಿ, 20 ವರ್ಷಗಳ ಅವಧಿಯಲ್ಲಿ ಆದ ಬದಲಾವಣೆಯನ್ನು ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ‘ಅರ್ಬನ್‌ ಲ್ಯಾಬ್‌– ಸೆಂಟರ್‌ ಫಾರ್ ಸೈನ್ಸ್‌ ಆ್ಯಂಡ್‌ ಎನ್ವಿರಾನ್‌ ಮೆಂಟಲ್‌ ಅನಾಲಿಸಿಸ್‌’ನ ಅಡಿಯಲ್ಲಿ ಈ ಅಧ್ಯಯನ ವನ್ನು ನಡೆಸಲಾಗಿದೆ. ಬೆಂಗಳೂರಿಗೆ ಸಂಬಂಧಿಸಿದ ಅಧ್ಯಯನದಲ್ಲಿ 20 ವರ್ಷಗಳ ಉಪಗ್ರಹ ಚಿತ್ರಗಳನ್ನು ಬಳಸಿಕೊಂಡು, ಬೆಂಗಳೂರಿನ ಭೂಬಳಕೆಯ ಸ್ವರೂಪವನ್ನು ಪರಿಶೀಲಿಸಲಾಗಿದೆ. ಈ ಅವಧಿಯಲ್ಲಿ ಬೆಂಗಳೂರಿನ ನೆಲವನ್ನು ಕಟ್ಟಡೀ ಕರಣವು ತೀವ್ರಮಟ್ಟದಲ್ಲಿ ವ್ಯಾಪಿಸಿರುವುದೇ ಉಷ್ಣಾಂಶದಲ್ಲಿನ ಏರುಪೇರಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

20 ವರ್ಷಗಳ ಹಿಂದೆ ಬೆಂಗಳೂರು ಉತ್ತರ ಭಾಗದಲ್ಲಿ ಶ್ರೀಗಂಧದ ಕಾವಲು, ಸಣ್ಣಕ್ಕಿ ಬಯಲು, ದಕ್ಷಿಣ ಭಾಗದಲ್ಲಿ ತುರುಹಳ್ಳಿ ಬಯಲು ಸೇರಿದಂತೆ ಹತ್ತಾರು ಬಯಲು ಪ್ರದೇಶಗಳು ಮತ್ತು ಗುಂಡುತೋಪುಗಳು ಇದ್ದವು. ಈ ಪ್ರದೇಶಗಳ ಸುತ್ತ–ಮುತ್ತ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದ ಹೊಲ–ಗದ್ದೆಗಳೂ ಇದ್ದವು. ಆದರೆ ವ್ಯಾಪಕ ನಗರೀಕರಣದ ಪರಿಣಾಮವಾಗಿ ಈ ಎಲ್ಲಾ ಪ್ರದೇಶಗಳು ಈಗ ವಸತಿ ಪ್ರದೇಶಗಳಾಗಿವೆ. ನಾಲ್ಕಾರು ಮಹಡಿ ಎತ್ತರದ ಕಟ್ಟಡಗಳು, ಹತ್ತಾರು ಮಹಡಿಗಳ ವಸತಿ ಸಮುಚ್ಚಯಗಳು ತಲೆ ಎತ್ತಿನಿಂತಿವೆ. ವೃಷಭಾವತಿ ನದಿ ಪಾತ್ರದ ಇಕ್ಕೆಲದುದ್ದಕ್ಕೂ ಕೆರೆ, ಬಯಲು ಮತ್ತು ಹೊಲ–ಗದ್ದೆಗಳು ಇದ್ದವು. ಈಗ ಅಲ್ಲೆಲ್ಲಾ ಕಟ್ಟಡಗಳು ಬಂದಿವೆ. ನಗರದೊಳಗೂ ರಸ್ತೆ ವಿಸ್ತರಣೆ, ಮೆಟ್ರೊ ಲೇನ್‌ ಮತ್ತು ಮೇಲ್ಸೇತುವೆ ನಿರ್ಮಾಣಕ್ಕಾಗಿ ಇದ್ದ ಮರಗಳನ್ನು ಕಡಿಯಲಾಗಿದೆ.

2003ರಲ್ಲಿ ಬೆಂಗಳೂರಿನ ಒಟ್ಟು ವಿಸ್ತೀರ್ಣದಲ್ಲಿ ಹೊಲಗದ್ದೆಗಳು, ಖಾಲಿ ನಿವೇಶನಗಳು ಮತ್ತು ಬಯಲು ಪ್ರದೇಶಗಳ ಪ್ರಮಾಣ ಶೇ 43.1ರಷ್ಟು ಇತ್ತು. ಆದರೆ 2023ರ ವೇಳೆಗೆ ಇಂತಹ ಪ್ರದೇಶಗಳ ಪ್ರಮಾಣವು ಶೇ 0.7ರಷ್ಟಕ್ಕೆ ಕುಸಿದಿದೆ. 2003ರಲ್ಲಿ ನಗರದ ಒಟ್ಟು ಭೂಪ್ರದೇಶದಲ್ಲಿ ಶೇ 37.5ರಷ್ಟಿದ್ದ ಕಟ್ಟಡ ಮತ್ತು ರಸ್ತೆಗಳು, 2023ರ ವೇಳೆಗೆ ನಗರದ ಒಟ್ಟು ಭೂಪ್ರದೇಶದ ಶೇ 71.5ರಷ್ಟು ಭಾಗವನ್ನು ವ್ಯಾಪಿಸಿವೆ. ಈ 20 ವರ್ಷಗಳಲ್ಲಿ ನಗರದ ಹಸಿರು ಹೊದಿಕೆ (ರಸ್ತೆ ಬದಿ ಮರಗಳು, ಕೆರೆ–ಕಟ್ಟೆಗಳ ಸುತ್ತಲಿನ ನೆಡುತೋಪುಗಳು) ಹೆಚ್ಚಾಗಿದ್ದರೂ, ನಗರದ ಉಷ್ಣಾಂಶವನ್ನು ಕಡಿಮೆ ಮಾಡುವಷ್ಟು ಸಾಮರ್ಥ್ಯ ಅವುಗಳಿಗೆ ಇಲ್ಲ. ಹಸಿರಿನ ಹೊದಿಕೆ ಇದ್ದೆಡೆಯಷ್ಟೇ ಅಹ್ಲಾದಕರ ವಾತಾವರಣ ಇರುತ್ತದೆ. ಬೇರಡೆ ಕಡುಬಿಸಿ ಇರುತ್ತದೆ. ಈ ಎಲ್ಲವುಗಳ ಪರಿಣಾಮವಾಗಿ ನಗರವು ತನ್ನಿಂದ ತಾನೇ ಉಷ್ಣಾಂಶ ವನ್ನು ತಗ್ಗಿಸಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದೆ. ನಗರದ ಭೂಬಳಕೆ ಸ್ವರೂಪವನ್ನು ಮಾರ್ಪಡಿಸುವ ಮತ್ತು ಉಷ್ಣಾಂಶವನ್ನು ಹೆಚ್ಚಿಸುವ ಮಾನವನ ಚಟುವಟಿಕೆ ಗಳನ್ನು ನಿಯಂತ್ರಿಸುವ ಮೂಲಕ ಈ ಪರಿಸ್ಥಿತಿಯನ್ನು ಬದಲಿಸಲು ಅವಕಾಶವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ರಾತ್ರಿಯಲ್ಲಿ ತಗ್ಗದ ಉಷ್ಣಾಂಶ

ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬೇಸಿಗೆಯ ದಿನದ ವೇಳೆಯಲ್ಲಿ ಇರುತ್ತಿದ್ದ ಗರಿಷ್ಠ ಉಷ್ಣಾಂಶವು ರಾತ್ರಿಯ ವೇಳೆಗೆ ಸರಾಸರಿ 12 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿಯುತ್ತಿತ್ತು. ಇದರಿಂದ ರಾತ್ರಿಯ ವೇಳೆ ಬೆಂಗಳೂರಿನಲ್ಲಿ ತಂಪು ಮತ್ತು ಅಹ್ಲಾದಕರ ವಾತಾವರಣ ಇರುತ್ತಿತ್ತು. ಬಿರು ಬೇಸಿಗೆಯ ಬಿಸಿಲಿನಲ್ಲಿ ಜನರು ಬಸವಳಿದರೂ, ರಾತ್ರಿಯು ತಂಪಾಗಿರುತ್ತಿದ್ದ ಕಾರಣ ದೇಹವು ಸುಧಾರಿಸಿಕೊಳ್ಳುತ್ತಿತ್ತು. ಜನರ ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಇದು ನೆರವಾಗುತ್ತಿತ್ತು. ಆದರೆ ಈಚಿನ ವರ್ಷಗಳಲ್ಲಿ ರಾತ್ರಿಯ ವೇಳೆ ಉಷ್ಣಾಂಶ ತಗ್ಗುವ ಪ್ರಮಾಣವೇ ಕಡಿಮೆಯಾಗಿದೆ. 

2023ರ ಮಾರ್ಚ್‌–ಮೇ ಅವಧಿಯಲ್ಲಿ ನಗರದ ದಿನದ ವೇಳೆ ಇದ್ದ ಗರಿಷ್ಠ ಉಷ್ಣಾಂಶವು ರಾತ್ರಿಯ ವೇಳೆಗೆ ಸರಾಸರಿ 9.2 ಡಿಗ್ರಿ ಸೆಲ್ಸಿಯಸ್‌ನಷ್ಟು ಮಾತ್ರ ಇಳಿಕೆಯಾಗುತ್ತಿದೆ. ಒಂದೆಡೆ ದಿನದ ವೇಳೆಯ ಗರಿಷ್ಠ ಉಷ್ಣಾಂಶ ಭಾರಿ ಏರಿಕೆಯಾಗಿದ್ದರೆ, ರಾತ್ರಿ ವೇಳೆ ಅದು ಇಳಿಕೆಯಾಗುವ ಪ್ರಮಾಣವೂ ಕಡಿಮೆಯಾಗಿದೆ. ಪರಿಣಾಮವಾಗಿ ಬೆಂಗಳೂರು ಬಿಸಿಯ ರಾತ್ರಿಗಳನ್ನು ಎದುರಿಸಿತ್ತು. 2024ರಲ್ಲಿ ಈ ಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು. 

ಪ್ರಮುಖ ಕಾರಣಗಳು

  • ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ, ಗಾಳಿ ಆಡುವಷ್ಟು ಜಾಗ ನೀಡದೆ ನಿರ್ಮಾಣ ಮಾಡುವುದು. ಒಂದು ವಸತಿ ಪ್ರದೇಶ ಎಂದಿಟ್ಟುಕೊಂಡರೆ, ಆ ಪ್ರದೇಶದಲ್ಲಿನ ಮನೆಗಳ ನಡುವೆ ಅಂತರವೇ ಇಲ್ಲದೆ ಹೋಗುವುದು. ಇದರಿಂದ ಒಂದಿಡೀ ಪ್ರದೇಶದಲ್ಲಿ ಗಾಳಿಯೇ ಆಡದಂತೆ ಆಗುತ್ತದೆ

  • ದೊಡ್ಡ ದೊಡ್ಡ ಕಟ್ಟಡಗಳೂ ಗಾಳಿ ಆಡದಂತೆ ಮಾಡುತ್ತವೆ. ದೊಡ್ಡ ದೊಡ್ಡ ಕಟ್ಟಡಗಳು, ನಡುವೆ ಸಣ್ಣ ಸಣ್ಣ ಕಟ್ಟಡಗಳು ಇರುವುದು ನಗರ ಪ್ರದೇಶ ಗಳಲ್ಲಿ ಸಾಮಾನ್ಯ ಸಂಗತಿ. ದೊಡ್ಡ ದೊಡ್ಡ ಕಟ್ಟಡಗಳು ಗಾಳಿಬೀಸುವುದನ್ನು ತಡೆಯುತ್ತವೆ. ಸಣ್ಣ ಕಟ್ಟಡಗಳಿಗೆ ಗಾಳಿ ತಲುಪದಂತೆ ಮಾಡುತ್ತವೆ

  • ಒಂದು ಕಡೆ ದೊಡ್ಡ ದೊಡ್ಡ ಕಟ್ಟಡಗಳಿಂದಾಗಿ ನೆಲಮಟ್ಟದಲ್ಲಿ ಗಾಳಿಯಾಡದ ಸ್ಥಿತಿ. ಇನ್ನೊಂದೆಡೆ, ನಗರಗಳ ಕಾಂಕ್ರೀಟ್ರೀಕರಣವಾಗುತ್ತಿರುವುದು. ಮಾನವನ ಚಟುವಟಿಕೆಗಳಿಂದ ಉಷ್ಣಾಂಶ ಹೆಚ್ಚುತ್ತಿದೆ. ಸಿಮೆಂಟಿನಿಂದ ನಿರ್ಮಿಸಿದ ಕಟ್ಟಡ, ರಸ್ತೆ ಮುಂತಾದವುಗಳು ಉಷ್ಣಾಂಶಗಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಆ ಕಾರಣ, ರಾತ್ರಿಯೂ ಸೇರಿದಂತೆ, ದಿನವಿಡೀ ಕಟ್ಟಡಗಳು ರಸ್ತೆಗಳು ಉಷ್ಣಾಂಶವನ್ನು ಬಿಡುತ್ತವೆ

  • ಉಷ್ಣಾಂಶ ಹೆಚ್ಚಿದೆ ಎನ್ನುವ ಕಾರಣಕ್ಕೆ ಎ.ಸಿ ಮುಂತಾದ ತಂಪು ಸೂಸುವ ಯಂತ್ರಗಳನ್ನು ಜನರು ಖರೀದಿಸುತ್ತಾರೆ. ಇಂಥ ಯಂತ್ರಗಳ ಹೆಚ್ಚು ಹೆಚ್ಚು ಖರೀದಿಯೂ ವಿದ್ಯುತ್‌ ಬಳಕೆಯನ್ನು ಹೆಚ್ಚಿಗೆ ಮಾಡುತ್ತವೆ. ಇದು ಪರಿಸರಕ್ಕೂ ಹಾನಿ. ಜೊತೆಗೆ, ಮಾನವನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ.

  • ರಸ್ತೆಗಳ ಮೇಲೆ ವಾಹನಗಳು ಹೆಚ್ಚು ಹೆಚ್ಚು ಓಡಾಡಿದಷ್ಟು ದಟ್ಟಣೆ ಮಾತ್ರವಲ್ಲ, ಮಾಲಿನ್ಯವೂ ಹೆಚ್ಚುತ್ತದೆ. ವಾಹನಗಳೂ ಉಷ್ಣಾಂಶವನ್ನು ಹೊರಸೂಸುತ್ತವೆ

  • ನಗರದ ಎಲ್ಲ ಭೂಮಿಯನ್ನೂ ಕಟ್ಟಡ ನಿರ್ಮಾಣಕ್ಕೆ ಮೀಸಲಿಡಲಾಗುತ್ತಿದೆ. ಖಾಲಿ ಜಾಗದಲ್ಲಿ ಒಂದೋ ನಿವೇಶನ, ಇಲ್ಲವೆ ಮಾಲ್‌ಗಳು, ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳು ಹೀಗೆ ಕಟ್ಟಡಗಳ ನಿರ್ಮಾಣವೇ ಹೆಚ್ಚುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT