ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ –ಅಗಲ: ರಸಗೊಬ್ಬರ ಸಹಾಯಧನ ಇಳಿಕೆ ಮತ್ತು ಯೂರಿಯಾ ಬೆಲೆಯ ಸುತ್ತ
ಆಳ –ಅಗಲ: ರಸಗೊಬ್ಬರ ಸಹಾಯಧನ ಇಳಿಕೆ ಮತ್ತು ಯೂರಿಯಾ ಬೆಲೆಯ ಸುತ್ತ
Published 12 ಏಪ್ರಿಲ್ 2024, 23:30 IST
Last Updated 12 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ದೇಶದ ಕೃಷಿಯ ಉತ್ಪಾದಕತೆಯನ್ನು ನಿರ್ಧರಿಸುವಲ್ಲಿ ಮುಂಗಾರು ಮಳೆಗೆ ಎಷ್ಟು ಮಹತ್ವವಿದೆಯೋ ರಸಗೊಬ್ಬರಗಳಿಗೂ ಅಷ್ಟೇ ಮಹತ್ವವಿದೆ. ರಸಗೊಬ್ಬರಗಳ ಬಳಕೆಯಿಂದಲೇ ಹಸಿರುಕ್ರಾಂತಿ ಸಾಧ್ಯವಾಯಿತು. ರಸಗೊಬ್ಬರಗಳ ಬಳಕೆ ಕಡಿಮೆ ಮಾಡಬೇಕು ಎಂಬ ಕೂಗು ಕೇಳುತ್ತಿದೆಯಾದರೂ, ಬಳಕೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಬೇಸಾಯದ ವೆಚ್ಚ ಮತ್ತು ರೈತರಿಗೆ ದೊರೆಯುವ ಲಾಭವನ್ನು ರಸಗೊಬ್ಬರಗಳ ಬೆಲೆ ನಿರ್ಧರಿಸುತ್ತದೆ. ಹೀಗಾಗಿಯೇ ರಸಗೊಬ್ಬರಗಳಿಗೆ ಈಗಲೂ ಕೃಷಿಯಲ್ಲಿ ಮಹತ್ವದ ಸ್ಥಾನವಿದೆ. ರಸಗೊಬ್ಬರಗಳ ಬಳಕೆಯಿಂದಾಗುವ ಹೊರೆ ರೈತನ ಮೇಲಾಗಬಾರದು ಎಂದು ಸಹಾಯಧನ ನೀಡುವ ಯೋಜನೆ ಜಾರಿಗೆ ತರಲಾಗಿತ್ತು. ಆದರೆ ಈಗಿನ ಕೇಂದ್ರ ಸರ್ಕಾರವು ರಸಗೊಬ್ಬರಗಳ ಮೇಲಿನ ಸಹಾಯಧನವನ್ನು ವರ್ಷದಿಂದ ವರ್ಷಕ್ಕೆ ಕಡಿತ ಮಾಡುತ್ತಲೇ ಇದೆ...

*****

‘ಭಾರತವು 2025ರ ವೇಳೆಗೆ ಯೂರಿಯಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುತ್ತದೆ’ ಎಂದು ಕೇಂದ್ರ ರಸಗೊಬ್ಬರ ಸಚಿವ ಮನ್ಸುಖ್‌ ಮಾಂಡವೀಯ ಪಿಟಿಐಗೆ ಈಚೆಗಷ್ಟೇ ನೀಡಿದ್ದ ಸಂದರ್ಶನದಲ್ಲಿ ಘೋಷಿಸಿದ್ದರು. ಭಾರತದಲ್ಲಿ ಪ್ರತಿ ವರ್ಷ ಅಂದಾಜು 350–360 ಲಕ್ಷ ಟನ್‌ಗಳಷ್ಟು ಯೂರಿಯಾ ಬೇಕಾಗುತ್ತದೆ. ದೇಶೀಯವಾಗಿ ಉತ್ಪಾದನೆ ಸಾಧ್ಯವಿರುವುದು 310 ಲಕ್ಷ ಟನ್‌ಗಳಷ್ಟು ಮಾತ್ರ. 40–50 ಲಕ್ಷ ಟನ್‌ಗಳಷ್ಟು ಯೂರಿಯಾವನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ ಮುಂದಿನ ಒಂದೇ ವರ್ಷದಲ್ಲಿ ಆ ಅಂತರವನ್ನು ನಿವಾರಿಸುತ್ತೇವೆ ಎಂದು ಮಾಂಡವೀಯ ಹೇಳಿದ್ದರು. ದೇಶದಲ್ಲಿನ ಯೂರಿಯಾ ಬೆಲೆಯನ್ನೂ ಮಾಂಡವೀಯ ಅವರ ಹೇಳಿಕೆಯನ್ನೂ ಪರಸ್ಪರ ಸಂಬಂಧ ಕಲ್ಪಿಸಿ ನೋಡಬೇಕಾಗತ್ತದೆ.

ವರ್ಷದ ಹಿಂದೆ ದೇಶದಾದ್ಯಂತ ಉತ್ತಮ ಮಳೆಯಾಗಿದ್ದಾಗ ರಸಗೊಬ್ಬರ, ಅದರಲ್ಲೂ ಯೂರಿಯಾದ ಕೊರತೆ ಉಂಟಾಗಿತ್ತು. ಕೊರತೆಯ ಜತೆಗೆ ಯೂರಿಯಾ ಬೆಲೆಯು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಈ ಬಗ್ಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದಾಗ ಕೇಂದ್ರ ಸರ್ಕಾರವು, ‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯೂರಿಯಾ ಬೆಲೆ ಏರಿಕೆಯಾಗುತ್ತಿದೆ. ಹೀಗಾಗಿ ಯೂರಿಯಾ ಬೆಲೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಅದಕ್ಕೆ ಸಹಾಯಧನ ನೀಡಲಾಗುತ್ತಿದೆ’ ಎಂದು ವಿವರಣೆ ನೀಡಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯೂರಿಯಾ ಬೆಲೆ ಏರಿಕೆಯಾಗುತ್ತಲೇ ಇದ್ದಿದ್ದರೆ, ಕೇಂದ್ರ ಸರ್ಕಾರವು ಯೂರಿಯಾ ಮೇಲೆ ಮಾಡುತ್ತಿರುವ ಸಹಾಯಧನದ ವೆಚ್ಚವೂ ಏರಿಕೆಯಾಗಬೇಕಿತ್ತು. ಆದರೆ ಹಾಗೆ ಆಗುತ್ತಿಲ್ಲ. ಬದಲಿಗೆ 2022–23ನೇ ಸಾಲಿನಿಂದ ಯೂರಿಯಾ ಸೇರಿದಂತೆ ಎಲ್ಲಾ ರಸಗೊಬ್ಬರಗಳ ಮೇಲೆ ಕೇಂದ್ರ ಸರ್ಕಾರದ ವೆಚ್ಚವು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಲೇ ಇದೆ. 2022–23ನೇ ಸಾಲಿನ ಬಜೆಟ್‌ನಲ್ಲಿ ರಸಗೊಬ್ಬರಕ್ಕೆ ನೀಡಿದ್ದ ಸಹಾಯಧನಕ್ಕಿಂತ //ಶೇ 00.ರಷ್ಟು// ಕಡಿಮೆ ಸಹಾಯಧನವನ್ನು 2024–25ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಮೀಸಲಿರಿಸಿದೆ.

ಹೀಗೆ ಕೇಂದ್ರ ಸರ್ಕಾರವು ಯೂರಿಯಾ ಮತ್ತು ಇತರೆ ರಸಗೊಬ್ಬರಗಳ ಮೇಲಿನ ಸಹಾಯಧನ ಕಡಿತ ಮಾಡುತ್ತಲೇ ಇರುವುದರಿಂದ ಅವುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಆದರೆ ಆ ಬೆಲೆ ಏರಿಕೆ ರೈತರಿಗೆ ಗೊತ್ತಾಗದ ಹಾಗೆ ಬೆಲೆ ನಿಗದಿ ಮಾಡಲಾಗುತ್ತಿದೆ. 2014ರಲ್ಲಿ ಯೂರಿಯಾವನ್ನು 50 ಕೆ.ಜಿ. ಚೀಲದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆಗ ಅದರ ಬೆಲೆ ₹265–₹266ರಷ್ಟಿತ್ತು. ಅಂದರೆ ಆಗ ರೈತ ಪ್ರತಿ ಕೆ.ಜಿ. ಯೂರಿಯಾಗೆ ₹5.3ರೂ ಪಾವತಿ ಮಾಡಬೇಕಿತ್ತು. ಆದರೆ ಈಗ ಯೂರಿಯಾ ಚೀಲದ ತೂಕವನ್ನು 45 ಕೆ.ಜಿ.ಗೆ ಇಳಿಸಲಾಗಿದೆ. 45 ಕೆ.ಜಿ. ಚೀಲಕ್ಕೆ ಕೇಂದ್ರ ಸರ್ಕಾರವು ₹242 ಬೆಲೆ ನಿಗದಿ ಮಾಡಿದೆ. ಆದರೆ ಈ ಬೆಲೆಯಲ್ಲಿ ಬೇವು ಲೇಪನದ ವೆಚ್ಚ, ಸಾಗಣೆ ವೆಚ್ಚ ಮತ್ತು ತೆರಿಗೆ ವೆಚ್ಚಗಳು ಸೇರಿಲ್ಲ. ಈ ಎಲ್ಲವೂ ಸೇರಿ 45 ಕೆ.ಜಿ.ಯಷ್ಟು ಯೂರಿಯಾದ ಬೆಲೆ ₹260–₹280ರವರೆಗೂ ಆಗುತ್ತದೆ. ಅಂದರೆ ಪ್ರತಿ ಕೆ.ಜಿ. ಯೂರಿಯಾಗೆ ₹5.8ರಿಂದ ₹6.3ರವರೆಗೆ ವೆಚ್ಚ ಮಾಡಬೇಕಾಗಿದೆ. 

ಇದಲ್ಲದೇ ಕೇಂದ್ರ ಸರ್ಕಾರವು ಈಗ ಗಂಧಕ ಲೇಪಿತ ಯೂರಿಯಾವನ್ನೂ ಮಾರಾಟ ಮಾಡುತ್ತಿದೆ. ಗಂಧಕ ಲೇಪಿತ ಯೂರಿಯಾದ ಬೆಲೆ ಹೆಚ್ಚು. ಆದರೆ ಅದು ರೈತರಿಗೆ ಹೊರೆಯಾಗಬಾರದು ಎಂದು 40 ಕೆ.ಜಿ. ತೂಕದ ಚೀಲದಲ್ಲಷ್ಟೇ ಮಾರಾಟ ಮಾಡಲಾಗುತ್ತಿದೆ. ಅಂದರೆ ಈ ಮೊದಲು ನಾಲ್ಕು ಚೀಲಗಳನ್ನು ಬಳಸುತ್ತಿದ್ದ ಜಾಗದಲ್ಲಿ, ಐದು ಚೀಲವನ್ನು ಬಳಸಬೇಕಾಗಿದೆ. ಸಹಾಯಧನ ಕಡಿತ ಮಾಡುತ್ತಿರುವುದರಿಂದಲೇ ಹೀಗಾಗುತ್ತಿದೆ ಎಂಬುದು ವಿರೋಧ ಪಕ್ಷಗಳ ಆರೋಪ.

ಆಧಾರ: ಲೋಕಸಭೆ ಮತ್ತು ರಾಜ್ಯಸಭೆಗೆ ರಸಗೊಬ್ಬರ ಸಚಿವಾಲಯವು ನೀಡಿದ ಮಾಹಿತಿಗಳು, ಕೇಂದ್ರ ಸರ್ಕಾರದ ಬಜೆಟ್‌ಗಳು, ಪಿಟಿಐ

ಜಾಗತಿಕ ಮಾರುಕಟ್ಟೆಯ ಪ್ರಭಾವ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯೂರಿಯಾ ಬೆಲೆ ಏರಿಕೆಯಾಗಿದ್ದರಿಂದ ದೇಶದಲ್ಲೂ ಬೆಲೆ ಏರಿಕೆಯಾಗುತ್ತಿದೆ ಎಂದು ಸರ್ಕಾರ ಹಲವು ಬಾರಿ ಹೇಳಿತ್ತು. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತವು ದೇಶೀ ಮಾರುಕಟ್ಟೆಯಲ್ಲಿ ಯೂರಿಯಾದ ಬೆಲೆಯನ್ನು ಪ್ರಭಾವಿಸುತ್ತದೆಯೇ? ದೇಶದ ಒಟ್ಟು ಯೂರಿಯಾ ಬಳಕೆಯಲ್ಲಿ ಆಮದು ಯೂರಿಯಾದ ಪ್ರಮಾಣ ಶೇ 20ಕ್ಕಿಂತಲೂ ಕಡಿಮೆ ಇದೆ. ಹೀಗಾಗಿ ಇದು ದೇಶದಲ್ಲಿನ ಯೂರಿಯಾ ಬೆಲೆಯನ್ನು ಪ್ರಭಾವಿಸುವ ಪ್ರಮಾಣ ತೀರಾ ಕಡಿಮೆ. ಆದರೆ ದೇಶದಲ್ಲಿ ಉತ್ಪಾದನೆಯಾಗುವ ಬಹುತೇಕ ಯೂರಿಯಾವು ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಆಧಾರಿತ ಸ್ಥಾವರಗಳ ಮೂಲಕ ಬರುತ್ತದೆ. ಭಾರತವು ಶೇ 50ರಷ್ಟು  ಎಲ್‌ಎನ್‌ಜಿಯನ್ನು ಆಮದು ಮಾಡಿಕೊಳ್ಳುತ್ತದೆಯಾದರೂ ಅದರಲ್ಲಿ ಬಹುಪಾಲು ಇಂಧನ ಕ್ಷೇತ್ರಕ್ಕೆ ಹೋಗುತ್ತದೆ. ಹೀಗಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಎನ್‌ಜಿ ಬೆಲೆ ಏರಿಳಿತವಾದರೂ ಯೂರಿಯಾ ಬೆಲೆಯನ್ನು ಅದು ಪ್ರಭಾವಿಸುವ ಸಾಧ್ಯತೆ ಕಡಿಮೆ.  ಓಟ್ಟಾರೆ ಈ ಅಂಶಗಳು ಸಹಾಯಧನ ಕಡಿತ ಮಾಡಿದ್ದರಿಂದಲೇ ಯೂರಿಯಾ ಬೆಲೆ ಏರಿಕೆಯಾಗಿದೆ (ಅದೇ ಬೆಲೆಗೆ ಕಡಿಮೆ ಯೂರಿಯಾ ಸಿಗುತ್ತಿದೆ) ಎಂಬುದರತ್ತ ಬೊಟ್ಟು ಮಾಡುತ್ತವೆ.

ಯೂರಿಯಾ

ಯೂರಿಯಾ

–ಪ್ರಜಾವಾಣಿ ಚಿತ್ರ

ಒಂದು ಚೀಲ ಯೂರಿಯಾಕ್ಕೆ ₹242

ಕೇಂದ್ರ ಸರ್ಕಾರವು 45 ಕೆ.ಜಿ. ತೂಕದ ಯೂರಿಯಾ ಚೀಲಕ್ಕೆ ₹242 ಬೆಲೆ ನಿಗದಿ ಮಾಡಿದೆ. ಆದರೆ ಇದರಲ್ಲಿ ವಿವಿಧ ತೆರಿಗೆಗಳು ಮತ್ತು ಬೇವು ಲೇಪನದ ವೆಚ್ಚ ಸೇರಿಲ್ಲ. ಈ ಎಲ್ಲಾ ವೆಚ್ಚಗಳು ಸೇರಿದರೆ 45 ಕೆ.ಜಿ. ಚೀಲದ ಯೂರಿಯಾ ಎಷ್ಟಕ್ಕೆ ಬಿಕರಿಯಾಗುತ್ತದೆ ಎಂಬುದರ ಮಾಹಿತಿಯನ್ನು ಸರ್ಕಾರವು ನೀಡಿಲ್ಲ. ಹೀಗಾಗಿ ರಾಜ್ಯದಿಂದ ರಾಜ್ಯಕ್ಕೆ ಜಿಲ್ಲೆಯಿಂದ ಜಿಲ್ಲೆಗೆ ತಾಲ್ಲೂಕಿನಿಂದ ತಾಲ್ಲೂಕಿಗೂ ಯೂರಿಯಾ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ. ರಾಜ್ಯದ್ದೇ ಕೆಲವು ಭಾಗಗಳಲ್ಲಿ 45 ಕೆ.ಜಿ. ತೂಕದ ಚೀಲಕ್ಕೆ ₹300–₹320ರವರೆಗೂ ಪಾವತಿಸಬೇಕಾದ ಸ್ಥಿತಿ ಇದೆ.

ಮೆಕ್ಕೆಜೋಳಕ್ಕೆ ಗೊಬ್ಬರ ಹಾಕುತ್ತಿರುವ ಕೃಷಿಕಾರ್ಮಿಕರು

ಮೆಕ್ಕೆಜೋಳಕ್ಕೆ ಗೊಬ್ಬರ ಹಾಕುತ್ತಿರುವ ಕೃಷಿಕಾರ್ಮಿಕರು 

–ಪ್ರಜಾವಾಣಿ ಚಿತ್ರ

ರಸಗೊಬ್ಬರ ಸಹಾಯಧನ ಭಾರಿ ಇಳಿಕೆ

ರಸಗೊಬ್ಬರ ಸಹಾಯಧನವನ್ನು ನೇರವಾಗಿ ಫಲಾನುಭವಿಗಳಿಗೇ ವರ್ಗಾವಣೆ (ಡಿಬಿಟಿ) ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಹೇಳುತ್ತದೆ. ಆದರೆ ಉಜ್ವಲಾ ಯೋಜನೆಯಂತೆ ಫಲಾನುಭವಿಗಳು ಮೊದಲು ಪಾವತಿ ಮಾಡಿ ಆನಂತರ ಅವರ ಬ್ಯಾಂಕ್‌ ಖಾತೆಗೆ ಜಮೆಯಾಗುವ ಸ್ವರೂಪದ ವರ್ಗಾವಣೆ ಇದಲ್ಲ. ಬದಲಿಗೆ ರಸಗೊಬ್ಬರ ತಯಾರಿಕಾ ಕಂಪನಿಗಳು ತಾವು ಮಾರಾಟ ಮಾಡಿದ ಪ್ರತಿ ಟನ್‌ ಗೊಬ್ಬರಕ್ಕೆ ಇಂತಿಷ್ಟು ಎಂದು ಕೇಂದ್ರ ಸರ್ಕಾರದಿಂದ ಸಹಾಯಧನ ಪಡೆಯುತ್ತವೆ. ಆದರೆ ಇಂತಹ ಸಹಾಯಧನವು ಇಳಿಕೆಯಾಗಿದೆ ಎಂಬುದನ್ನು ಈ ಚಾರ್ಟ್‌ಗಳು ತೋರಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT