ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಪ್ರಧಾನಿಯ ಪದವಿ ಪ್ರಮಾಣಪತ್ರದ ಸುತ್ತ

Last Updated 17 ಏಪ್ರಿಲ್ 2023, 22:45 IST
ಅಕ್ಷರ ಗಾತ್ರ

ಭಾರತದಲ್ಲಿ ಚುನಾಯಿತ ಜನಪ್ರತಿನಿಧಿಯಾಗಲು ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿ ಮಾಡಿಲ್ಲ. ಯಾವುದೇ ಚುನಾಯಿತ ಪ್ರತಿನಿಧಿ ಮುಖ್ಯಮಂತ್ರಿಯಾಗಲು ಅಥವಾ ಪ್ರಧಾನಿಯಾಗಲು ಕನಿಷ್ಠ ವಿದ್ಯಾರ್ಹತೆ ಬೇಕಿಲ್ಲ. ಆದರೆ, ಭಾರತದಲ್ಲಿ ಈವರೆಗೆ ಪ್ರಧಾನಿಯಾದವರೆಲ್ಲರೂ ಉನ್ನತ ಶಿಕ್ಷಣ ಪಡೆದಿದ್ದವರೇ. ಕಲಾ ವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದೇನೆ ಎಂದು ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಯ ತಮ್ಮ ನಾಮಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮೋದಿ ಅವರು ಪಡೆದಿರುವ ಪದವಿಗಳ ಬಗ್ಗೆ ವಿರೋಧ ಪಕ್ಷಗಳು ಸಂದೇಹ ವ್ಯಕ್ತಪಡಿಸುತ್ತಲೇ ಇವೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಮೋದಿ ಅವರ ಪದವಿ ಪ್ರಮಾಣಪತ್ರಗಳನ್ನು ಕೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಗುಜರಾತ್ ಹೈಕೋರ್ಟ್‌ ₹25,000 ದಂಡ ವಿಧಿಸಿದೆ. ಈ ಬೆಳವಣಿಗೆಯು ಪ್ರಧಾನಿಯ ವಿದ್ಯಾರ್ಹತೆಯ ಬಗ್ಗೆ ಈಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

––––––––

ನರೇಂದ್ರ ಮೋದಿ ಅವರು 2014ರ ಲೋಕಸಭಾ ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರದಲ್ಲಿ ನಾನು, ದೆಹಲಿ ವಿಶ್ವವಿದ್ಯಾಲಯದಲ್ಲಿ ಬ್ಯಾಚುಲರ್ಸ್ ಆಫ್‌ ಆರ್ಟ್ಸ್‌ ಮತ್ತು ಗುಜರಾತ್ ವಿಶ್ವವಿದ್ಯಾಲಯದಿಂದ ಮಾಸ್ಟರ್‌ ಆಫ್ ಆರ್ಟ್ಸ್‌ ಪದವಿ ಪಡೆದಿದ್ದೇನೆ ಎಂದು ಘೋಷಿಸಿಕೊಂಡಿದ್ದರು. ಮೋದಿ ಅವರು ಪಡೆದ ಪದವಿಗಳ ಬಗ್ಗೆ ವಿರೋಧ ಪಕ್ಷಗಳು ಸಂದೇಹ ವ್ಯಕ್ತಪಡಿಸಿದ್ದವು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪದೇ ಪದೇ ಈ ಬಗ್ಗೆ ಸಾರ್ವಜನಿಕವಾಗಿ ಮೋದಿ ಅವರನ್ನು ಪ್ರಶ್ನಿಸಿದ್ದರು. ಅಲ್ಲದೆ, ಮಾಹಿತಿ ಹಕ್ಕು ಕಾಯ್ದೆ ಅಡಿಯೂ ಅವರ ಪದವಿ ಪ್ರಮಾಣ ಪತ್ರಗಳ ಬಗ್ಗೆ ಮಾಹಿತಿ ಕೇಳಿದ್ದರು. ಕೇಜ್ರಿವಾಲ್‌ ಅವರ ಅರ್ಜಿಯ ಹಿಂದಿರುವ ಹಿತಾಸಕ್ತಿ ಸಾರ್ವಜನಿಕವಾದುದಲ್ಲ ಎಂದು ಗುಜರಾತ್ ವಿಶ್ವವಿದ್ಯಾಲಯವು ಗುಜರಾತ್ ಹೈಕೋರ್ಟ್‌ ಮೊರೆ ಹೋಗಿತ್ತು. ಗುಜರಾತ್ ವಿಶ್ವವಿದ್ಯಾಲಯದ ಮನವಿಯನ್ನು ಮಾನ್ಯ ಮಾಡಿದ ಹೈಕೋರ್ಟ್‌, ಕೇಜ್ರಿವಾಲ್‌ ಅವರಿಗೆ ದಂಡ ವಿಧಿಸಿತ್ತು. ಪ್ರಧಾನಿ ಕಾರ್ಯಾಲಯವು ಪ್ರಧಾನಿಯ ವಿದ್ಯಾರ್ಹತೆಯನ್ನು ಬಹಿರಂಗಪಡಿಸಬೇಕಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿತ್ತು.

ಈ ತೀರ್ಪನ್ನು ಗುಜರಾತ್ ವಿಶ್ವವಿದ್ಯಾಲಯವು ಸ್ವಾಗತಿಸಿತ್ತು. ‘ವಿದ್ಯಾರ್ಹತೆಯು ಯಾವುದೇ ವ್ಯಕ್ತಿಯ ಖಾಸಗಿ ವಿಚಾರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿದ್ಯಾರ್ಹತೆ ಮತ್ತು ಶೈಕ್ಷಣಿಕ ಪ್ರಮಾಣಪತ್ರಗಳನ್ನು ಕೇಳುವುದು, ಅವರ ಖಾಸಗಿತನಕ್ಕೆ ಧಕ್ಕೆ ತಂದಂತಾಗುತ್ತದೆ’ ಎಂದು ಗುಜರಾತ್ ವಿಶ್ವವಿದ್ಯಾಲಯ ಪ್ರತಿಪಾದಿಸಿತ್ತು. ವಿಶ್ವವಿದ್ಯಾಲಯದ ಈ ಪ್ರತಿಪಾದನೆಯು ಚರ್ಚೆಗೆ ಕಾರಣವಾಗಿದೆ.

ಪ್ರಧಾನಿ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಬೇಕಿಲ್ಲ ಎಂದು ಕಾನೂನು ಹೇಳಿರಬಹುದು. ಆದರೆ, ನಾಮಪತ್ರದಲ್ಲಿ ಸಲ್ಲಿಸಿರುವ ವಿವರಗಳು ಸಾರ್ವಜನಿಕವಾಗಿ ಲಭ್ಯವಿವೆ. ಅವೇ ವಿವರಗಳನ್ನು ಕೇಳುವುದು ಖಾಸಗಿತನಕ್ಕೆ ಧಕ್ಕೆ ಹೇಗಾಗುತ್ತದೆ ಎಂದು ವಿರೋಧ ಪಕ್ಷಗಳು ಪ್ರಶ್ನಿಸಿವೆ.

ಗುಜರಾತ್‌ ವಿಶ್ವವಿದ್ಯಾಲಯದ ಪ್ರತಿಪಾದನೆಗೆ ಎಎಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರಧಾನಿ ತಮ್ಮ ವೈಯಕ್ತಿಕ ಬದುಕಿನ ಖಾಸಗಿ ವಿಚಾರಗಳನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಹೀಗಿದ್ದಾಗ ಅವರ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಬಹಿರಂಗಪಡಿಸಲು ಕೇಳುವುದು ಅವರ ಖಾಸಗಿತನಕ್ಕೆ ಧಕ್ಕೆ ಹೇಗಾಗುತ್ತದೆ ಎಂದು ಎಎಪಿಯ ಹಲವು ನಾಯಕರು ಟ್ವೀಟ್‌ ಮತ್ತು ಫೇಸ್‌ಬುಕ್‌ ಪೋಸ್ಟ್‌ಗಳಲ್ಲಿ ಪ್ರಶ್ನಿಸಿದ್ದರು. ಈ ಪೋಸ್ಟ್‌ಗಳ ವಿರುದ್ಧ ಗುಜರಾತ್ ವಿಶ್ವವಿದ್ಯಾಲಯವು ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದೆ. ಈ ಮೊಕದ್ದಮೆಯಲ್ಲಿ ಕೇಜ್ರಿವಾಲ್‌ ಮತ್ತು ಎಎಪಿ ಸಂಸದ ಸಂಜಯ್ ಸಿಂಗ್‌ ಅವರಿಗೆ ಅಹಮದಾಬಾದ್‌ನ ಮೆಟ್ರೊಪಾಲಿಟಿನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ.

ಬಿಜೆಪಿ ತನ್ನ ಅಧಿಕೃತ ಟ್ವೀಟರ್‌ ಖಾತೆಯಲ್ಲಿ, 2016ರಲ್ಲಿ ಟ್ವೀಟ್‌ ಮಾಡಿದ್ದ ಮೋದಿ ಅವರ ಎಂ.ಎ ಪ್ರಮಾಣ ಪತ್ರ
ಬಿಜೆಪಿ ತನ್ನ ಅಧಿಕೃತ ಟ್ವೀಟರ್‌ ಖಾತೆಯಲ್ಲಿ, 2016ರಲ್ಲಿ ಟ್ವೀಟ್‌ ಮಾಡಿದ್ದ ಮೋದಿ ಅವರ ಎಂ.ಎ ಪ್ರಮಾಣ ಪತ್ರ

‘ಎಂಟೈರ್‌ ಪಾಲಿಟಿಕಲ್‌ ಸೈನ್ಸ್‌’ನಲ್ಲಿ ಎಂ.ಎ ಪದವಿ

ಬಿಜೆಪಿಯು ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಮತ್ತು ಎಂ.ಎ ಪದವಿ ಪ್ರಮಾಣಪತ್ರಗಳನ್ನು ಟ್ವೀಟ್‌ ಮಾಡಿತ್ತು. ಮೋದಿ ಅವರು 1983ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ‘ಎಂಟೈರ್‌ ಪಾಲಿಟಿಕಲ್‌ ಸೈನ್ಸ್‌’ನಲ್ಲಿ ಎಂ.ಎ ಪದವಿ ಪಡೆದಿದ್ದಾರೆ ಎಂದು ಅವರ ಎಂ.ಎ ಪ್ರಮಾಣ ಪತ್ರವು ಹೇಳುತ್ತದೆ. ಈ ಪ್ರಮಾಣಪತ್ರದ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಆಕ್ಷೇಪಗಳು ವ್ಯಕ್ತವಾಗಿದ್ದವು

ಆಕ್ಷೇಪಗಳು

*ಎಂಟೈರ್‌ ಪಾಲಿಟಿಕಲ್‌ ಸೈನ್ಸ್‌ ಎಂಬ ವಿಷಯವನ್ನು ಗುಜರಾತ್ ವಿಶ್ವವಿದ್ಯಾಲಯ ಯಾವಾಗ ಬೋಧಿಸಿತ್ತು?

*ಮೋದಿ ಅವರ ಎಂ.ಎ ಪ್ರಮಾಣಪತ್ರದಲ್ಲಿ, ಪ್ರಮಾಣಪತ್ರದ ಕ್ರಮ ಸಂಖ್ಯೆ ಏಕಿಲ್ಲ?

*1983ರಲ್ಲಿ ಯಾರೂ ಮುದ್ರಿತ ರೂಪದಲ್ಲಿ ಪ್ರಮಾಣಪತ್ರ ನೀಡುತ್ತಿರಲಿಲ್ಲ. ಆದರೆ, ಮೋದಿ ಅವರಿಗೆ ಮುದ್ರಿತ ಪ್ರಮಾಣ ಪತ್ರ ದೊರೆತದ್ದು ಹೇಗೆ?

*ಎಂ.ಎ ಮುದ್ರಿತ ಪ್ರಮಾಣಪತ್ರದಲ್ಲಿ ‘ಮ್ಯಾರೇಜ್‌’ ಫಾಂಟ್‌ ಬಳಸಲಾಗಿದೆ. ಈ ಫಾಂಟ್‌ ಬಳಕೆಗೆ ಬಂದಿದ್ದೇ 1992ರಲ್ಲಿ. ಬಳಕೆಯಲ್ಲೇ ಇಲ್ಲದಿದ್ದ ಫಾಂಟ್‌ ಅನ್ನು 1983ರಲ್ಲಿ ಹೇಗೆ ಬಳಸಲು ಸಾಧ್ಯ?

ಮೋದಿ ಅವರ ಬಿ.ಎ ಪದವಿ ಪ್ರಮಾಣಪತ್ರದ ಬಗ್ಗೆಯೂ ಇಂಥದ್ದೇ ಆಕ್ಷೇಪಗಳು ವ್ಯಕ್ತವಾಗಿದ್ದವು. ಆ ಪ್ರಮಾಣ ಪತ್ರ ಅಧಿಕೃತ ಎಂದು ದೆಹಲಿ ವಿಶ್ವವಿದ್ಯಾಲಯವು ದೃಢಪಡಿಸಿತ್ತು.

ಫಲಿತಾಂಶ ಪುಟದಲ್ಲಿ ಭಿನ್ನ ಹೆಸರು

ಪ್ರಮಾಣಪತ್ರದ ಪ್ರತಿಯನ್ನು ಕೋರಿ ಕೇಜ್ರಿವಾಲ್‌ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ನಂತರ, ಗುಜರಾತ್ ವಿಶ್ವವಿದ್ಯಾಲಯವು ಮೋದಿ ಅವರ ಎಂ.ಎ ಫಲಿತಾಂಶದ ಪುಟವನ್ನು ತನ್ನ ಜಾಲತಾಣದಲ್ಲಿ ಪ್ರಕಟಿಸಿತು. ಅದು ಇನ್ನೂ ಲಭ್ಯವಿದೆ.

ನರೇಂದ್ರ ದಾಮೋದರದಾಸ್ ಮೋದಿ ಅವರು 1981ರಲ್ಲಿ ಎಂ.ಎ ಪಾರ್ಟ್‌–1 ಮತ್ತು 1982ರಲ್ಲಿ ಎಂ.ಎ ಪಾರ್ಟ್‌–2 ಪರೀಕ್ಷೆ ಬರೆದು, ಪಾಸಾಗಿದ್ದಾರೆ ಎಂದು ಗುಜರಾತ್ ವಿಶ್ವವಿದ್ಯಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ವಿಶ್ವವಿದ್ಯಾಲಯವು ಪ್ರಕಟಿಸಿರುವ ಫಲಿತಾಂಶ ಪುಟದಲ್ಲಿ, ‘ಎಂಟೈರ್‌ ಪಾಲಿಟಿಕ್ಸ್‌’, ‘ಇಂಡಿಯನ್‌ ಪಾಲಿಟಿಕ್ಸ್‌–ಇಂಟರ್‌ನ್ಯಾಷನಲ್ ರಿಲೇಷನ್ಸ್‌’, ‘ರೀಸೆಂಟ್‌ ಪಾಲಿಟಿಕಲ್‌ ಥಾಟ್ಸ್‌/ ಕಂಪೇರಿಟೀವ್ ಪಾಲಿಟಿಕ್ಸ್‌’ ವಿಷಯಗಳಲ್ಲಿ ಪರೀಕ್ಷೆ ಬರೆದು, ಪಾಸಾಗಿದ್ದಾರೆ ಎಂದು ವಿವರಿಸಲಾಗಿದೆ.

ಮೋದಿ ಅವರ ಎಂ.ಎ ಪದವಿಗೆ ಸಂಬಂಧಿಸಿದಂತೆ ಗುಜರಾತ್ ವಿಶ್ವವಿದ್ಯಾಲಯವು ಪ್ರಕಟಿಸಿರುವ ಫಲಿತಾಂಶ ಪುಟದಲ್ಲಿ, ಮೋದಿ ಅವರ ಹೆಸರು ಎರಡು ರೀತಿಯಲ್ಲಿದೆ.

ಎಂ.ಎ ಪಾರ್ಟ್‌–1ರ ಫಲಿತಾಂಶ ಪುಟದಲ್ಲಿ ‘ಮೋದಿ ನರೇಂದ್ರಕುಮಾರ್ ದಾಮೋದರದಾಸ್‌’ (MODI NARENDRAKUMAR DAMODERADAS) ಎಂದು ಬರೆಯಲಾಗಿದೆ.

ಎಂ.ಎ ಪಾರ್ಟ್‌–2ರ ಫಲಿತಾಂಶ ಪುಟದಲ್ಲಿ ‘ಮೋದಿ ನರೇಂದ್ರ ದಾಮೋದರದಾಸ್‌’ (MODI NARENDRA DAMODERADAS) ಎಂದು ಬರೆಯಲಾಗಿದೆ.

ಭಾರತದ ಪ್ರಧಾನಿಗಳ ವಿದ್ಯಾರ್ಹತೆ

ಜವಾಹರಲಾಲ್ ನೆಹರೂ (1947-1964)

* ಲಂಡನ್‌ನ ಕೇಂಬ್ರಿಜ್‌ ವಿಶ್ವವಿದ್ಯಾಲಯ ಟ್ರಿನಿಟಿ ಕಾಲೇಜು–ನ್ಯಾಚುರಲ್ ಸೈನ್ಸ್‌ ವಿಷಯದಲ್ಲಿ ಆನರ್ಸ್ ಪದವಿ

* ಲಂಡನ್‌ನ ಇನ್ನರ್ ಟೆಂಪಲ್‌–ಕಾನೂನು ಪದವಿ

ಲಾಲ್ ಬಹದ್ದೂರ್ ಶಾಸ್ತ್ರಿ (1964–1966)

* ಕಾಶಿ ವಿದ್ಯಾಪೀಠ-ತತ್ವಶಾಸ್ತ್ರ ಮತ್ತು ನೀತಿಶಾಸ್ತ್ರದಲ್ಲಿ ಪದವಿ

ಗುಲ್ಜಾರಿಲಾಲ್‌ ನಂದಾ (1964 ಮತ್ತು 1966)

* ಅಲಹಾಬಾದ್ ವಿಶ್ವವಿದ್ಯಾಲಯ–ಸಂಶೋಧನಾ ವಿದ್ಯಾರ್ಥಿಯಾಗಿ ಕಾರ್ಮಿಕ ಸಮಸ್ಯೆಗಳ ಅಧ್ಯಯನ

* ಲಾಹೋರ್, ಆಗ್ರದಲ್ಲೂ ವಿದ್ಯಾಭ್ಯಾಸ; ಮುಂಬೈನ ನ್ಯಾಷನಲ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಕೆಲಸ

ಇಂದಿರಾ ಗಾಂಧಿ (1966–1977 ಮತ್ತು 1980–1984)

* ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯ ಮತ್ತು ಆಕ್ಸ್‌ಫರ್ಡ್‌ನ ಸಮರ್‌ವಿಲ್ಲೆ ಕಾಲೇಜಿನಲ್ಲಿ ವ್ಯಾಸಂಗ

ಮೊರಾರ್ಜಿ ದೇಸಾಯಿ (1977–78)

* ಮುಂಬೈನ ‘ವಿಲ್ಸನ್ ಸಿವಿಲ್ ಸರ್ವೀಸ್‌’–ಪದವಿ;ಜಿಲ್ಲಾಧಿಕಾರಿಯಾಗಿ 12 ವರ್ಷ ಕೆಲಸ

ಚರಣ್ ಸಿಂಗ್ (1979–1980)

* ಆಗ್ರಾ ವಿಶ್ವವಿದ್ಯಾಲಯ–ಪದವಿ ಮತ್ತು ಸ್ನಾತಕೋತ್ತರ ಪದವಿ

* ಮೀರಠ್ ಕಾಲೇಜು–ಕಾನೂನು ಪದವಿ

ರಾಜೀವ್ ಗಾಂಧಿ (1984–89)

* ಕೇಂಬ್ರಿಜ್‌ ವಿಶ್ವವಿದ್ಯಾಲಯ–ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಪದವಿ

ವಿ.ಪಿ. ಸಿಂಗ್ (1989–90)

* ಅಲಹಾಬಾದ್ ವಿಶ್ವವಿದ್ಯಾಲಯ–ಕಾನೂನು ಪದವಿ

* ಪೂನಾ ವಿಶ್ವವಿದ್ಯಾಲಯ–ಬಿಎಸ್‌ಸಿ ಪದವಿ

ಚಂದ್ರಶೇಖರ್ (1990–91)

* ಅಲಹಾಬಾದ್ ವಿಶ್ವವಿದ್ಯಾಲಯ–ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ

ಪಿ.ವಿ. ನರಸಿಂಹ ರಾವ್ (1991–96)

* ಉಸ್ಮಾನಿಯಾ, ಬಾಂಬೆ ಮತ್ತು ನಾಗ್ಪುರ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ–ಕಾನೂನು ಪದವಿ

ಎಚ್.ಡಿ. ದೇವೇಗೌಡ (1996–1997)

* ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ

ಅಟಲ್ ಬಿಹಾರಿ ವಾಜಪೇಯಿ (1996 ಮತ್ತು 1998–2004)

* ಕಾನ್ಪುರದ ದೇವ್ ಕಾಲೇಜು–ಕಾನೂನು ಪದವಿ; ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ

ಐ.ಕೆ ಗುಜ್ರಾಲ್ (1997–1998)

* ಲಾಹೋರ್‌ನ ಡಿಎವಿ ಕಾಲೇಜ್, ಹೇಯ್ಲಿ ಕಾಲೇಜ್ ಆಫ್ ಕಾಮರ್ಸ್ ಮತ್ತು ಫಾರ್ಮನ್ ಕ್ರಿಶ್ಚಿಯನ್ ಕಾಲೇಜು–ಬಿ.ಕಾಂ ಮತ್ತು ಎಂ.ಎ ಪದವಿ

ಡಾ. ಮನಮೋಹನ್ ಸಿಂಗ್ (2004–2014)

* ಕೇಂಬ್ರಿಜ್‌ ವಿಶ್ವವಿದ್ಯಾಲಯ–ಅರ್ಥಶಾಸ್ತ್ರದಲ್ಲಿ ಆನರ್ಸ್ ಪದವಿ

* ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ನ್ಯೂಫೀಲ್ಡ್ ಕಾಲೇಜು–ಅರ್ಥಶಾಸ್ತ್ರ ವಿಷಯದಲ್ಲಿ ಡಿ.ಫಿಲ್

* ಪಂಜಾಬ್ ವಿಶ್ವವಿದ್ಯಾಲಯ ಹಾಗೂ ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪ್ರಾಧ್ಯಾಪಕರಾಗಿ ಕೆಲಸ

ಆಧಾರ: ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ನಾಮಪತ್ರ ಮತ್ತು ಅಫಿಡವಿಟ್‌, ಗುಜರಾತ್ ವಿಶ್ವವಿದ್ಯಾಲಯದ ಪ್ರಕಟಣೆಗಳು, ಪಿಟಿಐ, ಪ್ರಧಾನಿ ಕಾರ್ಯಾಲಯದ ಆರ್ಕೈವ್‌ಗಳು, ಬ್ರಿಟಾನಿಕಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT