ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ: ಬೇಕು ಬೇಡಗಳ ಸುತ್ತ

Last Updated 20 ಏಪ್ರಿಲ್ 2023, 23:00 IST
ಅಕ್ಷರ ಗಾತ್ರ

ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕೇ ಅಥವಾ ಬೇಡವೇ ಎಂಬುದರ ವಾದ ಮತ್ತು ಪ್ರತಿವಾದವು ಸುಪ್ರೀಂ ಕೋರ್ಟ್‌ನ ಅಂಗಳದಲ್ಲಿದೆ. ಸಲಿಂಗ ವಿವಾಹಕ್ಕೆ ಸಮಾಜದಲ್ಲಿ ಮಾನ್ಯತೆ ಇಲ್ಲ, ಇದು ದೇಶದ ಕುಟುಂಬ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಹೀಗಾಗಿ ಇದನ್ನು ಕಾನೂನುಬದ್ಧಗೊಳಿಸಬಾರದು ಎಂಬುದು ಕೇಂದ್ರ ಸರ್ಕಾರದ ವಾದ. ದೇಶದಲ್ಲಿ ಸಲಿಂಗಕಾಮಕ್ಕೆ ಅವಕಾಶವಿದ್ದರೂ ಸಲಿಂಗ ವಿವಾಹವನ್ನು ಮಾನ್ಯ ಮಾಡದೇ ಇರುವುದು ಪ್ರತಿಗಾಮಿ ನಿಲುವು ಎಂಬುದು ಸಲಿಂಗ ವಿವಾಹವನ್ನು ಮಾನ್ಯ ಮಾಡಬೇಕು ಎನ್ನುವವರ ವಾದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ, ಗುರುವಾರವಷ್ಟೇ ವಾದ ಮತ್ತು ಪ್ರತಿವಾದಗಳು ಪೂರ್ಣಗೊಂಡಿವೆ. ಸಂವಿಧಾನ ಪೀಠದ ತೀರ್ಪಷ್ಟೇ ಬಾಕಿ ಇದೆ.

ಅರ್ಜಿದಾರರ ಪ್ರತಿಪಾದನೆ

‘ಸರ್ಕಾರ ಹೇಳುತ್ತಿರುವ ‘ಭಾರತೀಯ’ ಎಂಬ ಪರಿಕಲ್ಪನೆಯು ಎಲ್ಲರನ್ನೂ ಒಳಗೊಳ್ಳುವುದಿಲ್ಲ ಮತ್ತು ಅದು ಮಡುಗಟ್ಟಿದೆ. ಮಾನವ ಹಕ್ಕುಗಳ ವಿಶಾಲ ವ್ಯಾಪ್ತಿಯ ಮಟ್ಟಕ್ಕೆ ಏರಲೂ ಆ ಪರಿಕಲ್ಪನೆ ಬಯಸುತ್ತಿಲ್ಲ’– ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರವು ಮಂಡಿಸಿದ ವಾದಕ್ಕೆ ಎಲ್‌ಜಿಬಿಟಿ ಹಕ್ಕುಗಳ ಕಾರ್ಯಕರ್ತ ಒನಿರ್‌ ನೀಡಿದ್ದ ಪ್ರತಿಕ್ರಿಯೆ ಇದು.

ಸಲಿಂಗಕಾಮವು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್‌ 2018ರಲ್ಲೇ ಆದೇಶ ನೀಡಿದೆ. ದೇಶದಾದ್ಯಂತ ಸಾವಿರಾರು ಮಂದಿ ಈ ಸ್ವರೂಪದ ಸಂಬಂಧದಲ್ಲಿ ಇದ್ದಾರೆ. ಅಂತಹ ಸಂಬಂಧಕ್ಕೆ ವಿವಾಹದ ಮಾನ್ಯತೆ ಇಲ್ಲ. ಇದರಿಂದ ಆ ಜನರು ತಮ್ಮ ಸಂಬಂಧದ ಬಗ್ಗೆ, ತಮ್ಮ ಸಂಗಾತಿಗಳ ಬಗ್ಗೆ ಸಮಾಜದಲ್ಲಿ ಮುಕ್ತವಾಗಿ ಮಾತನಾಡಲು ಆಗುತ್ತಿಲ್ಲ. ಈ ರೀತಿಯ ಸಂಬಂಧಕ್ಕೂ ಗೌರವ ಸಲ್ಲಬೇಕು ಎಂಬುದು ಅರ್ಜಿದಾರರ ವಾದ.

ಈ ರೀತಿಯ ಸಂಬಂಧಕ್ಕೆ ವಿವಾಹದ ಮಾನ್ಯತೆ ಇಲ್ಲದೇ ಇರುವ ಕಾರಣ ಹಲವಾರು ತೊಡಕುಗಳು ಎದುರಾಗುತ್ತಿವೆ. ಅಂತಹ ಜೋಡಿಗಳು ಯಾವುದೇ ರೀತಿಯ ವಿಮೆ ಮಾಡಿಸಿದಾಗ, ತಮ್ಮ ಸಂಗಾತಿಯನ್ನು ನಾಮಿನಿ ಪಟ್ಟಿಯಲ್ಲಿ ಸೇರಿಸಲು ಅವಕಾಶವಿಲ್ಲ. ಆ ಜೋಡಿಯು ತಾವೇ ಮಕ್ಕಳನ್ನು ಪಡೆಯಲು ಸಾಧ್ಯವಿಲ್ಲ. ಆದರೆ, ಅವರು ಮಕ್ಕಳನ್ನು ದತ್ತು ಪಡೆಯಲೂ ಅವಕಾಶವಿಲ್ಲ. ಸಣ್ಣ–ಪುಟ್ಟ ಕ್ಲಬ್‌ಗಳ ಸದಸ್ಯತ್ವ ಪಡೆಯಲೂ ಸಾಧ್ಯವಿಲ್ಲ. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದರೆ, ಈ ತೊಡಕುಗಳೆಲ್ಲಾ ನಿವಾರಣೆಯಾಗುತ್ತವೆ ಎಂಬುದು ಅರ್ಜಿದಾರರ ವಾದ.

ಸಲಿಂಗಕಾಮವು ಕಳಂಕ ಎಂಬ ಅಭಿಪ್ರಾಯ ಸಮಾಜದಲ್ಲಿದೆ. ಪಾಶ್ಚಾತ್ಯರು ಭಾರತಕ್ಕೆ ಬಂದ ನಂತರ ಸಲಿಂಗ ಕಾಮ, ಇಲ್ಲಿಗೆ ಪರಿಚಯವಾಯಿತು ಎಂಬ ವಾದವೂ ಇದೆ. ಇದರಲ್ಲಿ ಹುರುಳಿಲ್ಲ. ಖಜುರಾಹೊ ದೇವಾಲಯದ ಮಿಥುನ ಶಿಲ್ಪಗಳಲ್ಲಿ ಸಲಿಂಗಕಾಮದ ಶಿಲ್ಪಗಳೂ ಇವೆ. ಭಾರತದಲ್ಲಿ ಬಹಳ ಹಿಂದೆಯೇ ಸಲಿಂಗಕಾಮ ಇತ್ತು ಎಂಬುದನ್ನು ಅದು ಸೂಚಿಸುತ್ತದೆ. ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಿದರೆ, ಸಲಿಂಗಕಾಮದ ಜತೆಗಿರುವ ಕಳಂಕವನ್ನೂ ತೊಳೆಯಬಹುದು ಎಂಬುದು ಅರ್ಜಿದಾರರ ವಾದ.

ಸರ್ಕಾರದ ವಾದ

ಭಾರತೀಯ ಸಮಾಜದಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ಇಲ್ಲ. ಭಾರತೀಯ ಸಮಾಜವು ಇದನ್ನು ಒಪ್ಪುವುದಿಲ್ಲ ಎಂಬುದು ಕೇಂದ್ರ ಸರ್ಕಾರದ ವಾದ. ಇದು ನಗರ ಪ್ರದೇಶಕ್ಕೆ ಮತ್ತು ಸಮಾಜದ ‘ಎಲೀಟ್‌’ ಜನರಿಗೆ ಸೀಮಿತವಾದ ವ್ಯವಸ್ಥೆಯಾಗಿದೆ. ಸಲಿಂಗ ವಿವಾಹಕ್ಕೆ ಕಾನೂನಿನ ಅಡಿಯಲ್ಲಿ ಮಾನ್ಯತೆ ನೀಡುವುದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ದೇಶದ ಕೌಂಟುಬಿಕ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಇಂತಹ ವಿವಾಹದಲ್ಲಿ ನಡೆಯುವ ದೌರ್ಜನ್ಯಗಳನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಅಂತಹ ದೌರ್ಜನ್ಯಗಳ ನಿರ್ವಹಣೆಗೆ ಕಾನೂನಿನಲ್ಲಿ ಅವಕಾಶವಿಲ್ಲ. ಸಲಿಂಗ ವಿವಾಹದಿಂದ ಇಷ್ಟೆಲ್ಲಾ ಸಮಸ್ಯೆಗಳು ತಲೆದೋರುತ್ತವೆ. ಹೀಗಾಗಿ ಅದನ್ನು ಕಾನೂನುಬದ್ಧಗೊಳಿಸಬಾರದು ಎಂಬುದು ಸರ್ಕಾರದ ವಾದ.

ಯಾವುದೇ ವ್ಯಕ್ತಿ ತನ್ನ ಇಚ್ಛೆಯಂತೆ, ಯಾವುದೇ ವ್ಯಕ್ತಿಯ ಜತೆಗೆ ಬದುಕಬಹುದು. ಸಲಿಂಗಕಾಮವು ಅಪರಾಧ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಅದಕ್ಕೆ ಅವಕಾಶವಿದೆಯೇ ಹೊರತು, ಎಲ್ಲಾ ರೀತಿಯ ಸಂಬಂಧಗಳಿಗೆ ಕಾನೂನಿನ ಮಾನ್ಯತೆ ನೀಡಲೇಬೇಕು ಎಂದೇನಿಲ್ಲ. ಈಗ ಇರುವ ಸ್ಥಿತಿಯೇ ಮುಂದುವರಿದರೆ ಅಡ್ಡಿಯಿಲ್ಲ. ಒಂದೊಮ್ಮೆ ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಿದರೆ, ಆ ವೈವಾಹಿಕ ಸಂಬಂಧದಲ್ಲಿ ‘ಪತಿ’ ಎಂದು ಯಾರನ್ನು ಗುರುತಿಸುವುದು ಮತ್ತು ‘ಪತ್ನಿ’ ಎಂದು ಯಾರನ್ನು ಗುರುತಿಸುವುದು ಎಂಬುದು ಸರ್ಕಾರದ ಪ್ರಶ್ನೆ.

ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕೇ ಅಥವಾ ಬೇಡವೇ ಎಂಬುದು ಸಂಸತ್ತು ನಿರ್ಧರಿಸಬೇಕಾದ ವಿಷಯ. ನ್ಯಾಯಾಂಗವು ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದೂ ಸರ್ಕಾರವು ಸಂವಿಧಾನ ಪೀಠದ ಎದುರು ವಾದ ಮಂಡಿಸಿತ್ತು.

ಹಿಂದೂಗಳ ಮದುವೆ ಪದ್ಧತಿ ಮತ್ತು ಕಾನೂನಿನಲ್ಲಿ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ. ಮುಸ್ಲಿಮರ ಮದುವೆ ಪದ್ಧತಿಯಲ್ಲೂ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ. ಹೀಗಿರುವಾಗ ಸಲಿಂಗ ವಿವಾಹಕ್ಕೆ ಅವಕಾಶಮಾಡಿಕೊಟ್ಟರೆ, ಈ ವಿವಾಹ ಪದ್ಧತಿಗಳಿಗೆ ಧಕ್ಕೆಯಾಗುತ್ತದೆ. ಹೀಗಾಗಿ ಸಲಿಂಗ ವಿವಾಹಕ್ಕೆ ಅವಕಾಶ ಮಾಡಿಕೊಡಬಾರದು ಎಂಬುದು ಸರ್ಕಾರದ ವಾದ.

ಸಂವಿಧಾನ ಪೀಠದ ಅಭಿಪ್ರಾಯ

‘ಈ ವಿಚಾರವನ್ನು ಯಾವುದೇ ಧರ್ಮದ ವೈಯಕ್ತಿಕ ಕಾನೂನುಗಳ ಮೂಲಕ ಪರಾಮರ್ಶೆ ನಡೆಸಲು ಸಾಧ್ಯವಿಲ್ಲ. ಇದನ್ನು ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲೇ ಪರಿಶೀಲಿಸಬೇಕು. ಆ ಕಾನೂನಿನ ಅಡಿಯಲ್ಲಿ ಯಾವ ಅವಕಾಶವಿದೆ ಎಂಬುದನ್ನು ನಾವು ಪರಿಶೀಲಿಸುತ್ತೇವೆ’ ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಈಗಾಗಲೇ ಹೇಳಿದೆ.

ಹಲವು ದಿನ ನಿರಂತರವಾಗಿ ನಡೆದ ವಿಚಾರಣೆಯಲ್ಲಿ, ಸರ್ಕಾರದ ವಾದಗಳನ್ನು ಸುಪ್ರೀಂ ಕೋರ್ಟ್‌ ನಿರಾಕರಿಸುತ್ತಲೇ ಬಂದಿದೆ. ಆದರೆ, ತೀರ್ಪನ್ನು ಇನ್ನಷ್ಟೇ ನೀಡಬೇಕಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುವಂತಿಲ್ಲ ಎಂಬ ಸರ್ಕಾರದ ವಾದವನ್ನು ಪೀಠವು ತಳ್ಳಿಹಾಕಿತ್ತು. ತನ್ನ ವಿಶೇಷಾಧಿಕಾರ ಬಳಸಿ, ವಿಚಾರಣೆ ಮುಂದುವರಿಸಿತ್ತು. ವಿವಾಹ ಎಂಬುದು ಕೇವಲ ದೇಹಕ್ಕೆ ಸಂಬಂಧಿಸಿದ್ದಲ್ಲ. ದೇಹ ಮತ್ತು ಲಿಂಗದ ಹೊರತಾಗಿಯೂ ವಿವಾಹಕ್ಕೆ ಹಲವು ಆಯಾಮಗಳಿವೆ. ಅವೆಲ್ಲವನ್ನೂ ಪರಿಗಣಿಸಬೇಕಾಗುತ್ತದೆ. ಸಲಿಂಗ ವಿವಾಹವು ನಗರ ಪ್ರದೇಶ ಮತ್ತು ‘ಎಲೀಟ್‌’ ಜನರಿಗೆ ಸೀಮಿತವಾದ ವಿಚಾರ ಎಂಬ ಸರ್ಕಾರದ ವಾದದಲ್ಲಿ ಹುರುಳಿಲ್ಲ. ತನ್ನ ವಾದವನ್ನು ಬಲಪಡಿಸುವಂತಹ ಯಾವುದೇ ದತ್ತಾಂಶಗಳನ್ನು ಸರ್ಕಾರವು ನ್ಯಾಯಾಲಯದ ಮುಂದೆ ಇಟ್ಟಿಲ್ಲ. ಹೀಗಾಗಿ ಈ ವಾದವನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಸಂವಿಧಾನ ಪೀಠವು ಹೇಳಿತ್ತು.

ವಿಶೇಷ ವಿವಾಹ ಕಾಯ್ದೆ: ವಿಶೇಷ ವಿವಾಹ ಕಾಯ್ದೆಯ 2ಬಿ ಸೆಕ್ಷನ್‌ನಲ್ಲಿ ‘ನಿಷೇಧಿತ ಸಂಬಂಧಗಳು’ ಎಂದು ಹೆಸರಿಸಲಾಗಿದೆ. ನಿಷೇಧಿತ ಸಂಬಂಧಗಳ ಅಡಿಯಲ್ಲಿ ಗುರುತಿಸಲಾದ ವ್ಯಕ್ತಿಗಳು ಮದುವೆಯಾಗುವಂತಿಲ್ಲ ಎಂದು ಈ ಸೆಕ್ಷನ್‌ ಹೇಳುತ್ತದೆ. ಈ ನಿಷೇಧಿತ ಸಂಬಂಧಗಳು ಯಾವುವು ಎಂಬುದನ್ನು ಈ ಕಾಯ್ದೆಯ ಮೊದಲ ಷೆಡ್ಯೂಲ್‌ನ ಭಾಗ–1 ಮತ್ತು ಭಾಗ–2ರಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ‘ಭಾಗ–1ರಲ್ಲಿ ಹೆಸರಿಸಲಾಗಿರುವ ವ್ಯಕ್ತಿಗಳ ಜತೆಗೆ ಯಾವುದೇ ಪುರುಷ ಅಥವಾ ಯಾವುದೇ ವ್ಯಕ್ತಿ ವಿವಾಹವಾಗುವಂತಿಲ್ಲ. ಭಾಗ–2ರಲ್ಲಿ ಹೆಸರಿಸಲಾಗಿರುವ ವ್ಯಕ್ತಿಗಳ ಜತೆಗೆ ಯಾವುದೇ ಮಹಿಳೆ ಅಥವಾ ಯಾವುದೇ ವ್ಯಕ್ತಿ ವಿವಾಹವಾಗುವಂತಿಲ್ಲ’ ಎಂದು ಈ ಕಾಯ್ದೆಯ 2ಬಿ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ.

ಮೊದಲ ಷೆಡ್ಯೂಲ್‌ನ ಭಾಗ–1ರಲ್ಲಿ ಪುರುಷನೊಬ್ಬ ತನ್ನ ತಾಯಿ, ಮಗಳು, ಅಜ್ಜಿ, ಮೊಮ್ಮಗಳು, ಮರಿಮೊಮ್ಮಗಳು ಸೇರಿ ಈ ಸ್ವರೂಪದ 37 ಸಂಬಂಧದ ಮಹಿಳೆಯರನ್ನು ಮದುವೆಯಾಗುವಂತಿಲ್ಲ ಎಂದು ಹೇಳಿದೆ. ಭಾಗ–2ರಲ್ಲಿ ಮಹಿಳೆಯೊಬ್ಬಳು ತನ್ನ ತಂದೆ, ಅಜ್ಜ, ಮಗ, ಮೊಮ್ಮಗ, ಮರಿಮೊಮ್ಮಗ ಸೇರಿ ಈ ಸ್ವರೂಪದ 37 ಸಂಬಂಧದ ಪುರುಷರನ್ನು ಮದುವೆಯಾಗುವಂತಿಲ್ಲ ಎಂದು ಹೇಳಿದೆ.

34 ದೇಶಗಳಲ್ಲಿ ಕಾನೂನಿನ ಮಾನ್ಯತೆ

ಸಲಿಂಗ ವಿವಾಹ ಪದ್ಧತಿ ಬಗ್ಗೆ ಜಗತ್ತಿನ ವಿವಿಧ ದೇಶಗಳಲ್ಲಿ ಭಿನ್ನ ನಿಲುವುಗಳಿವೆ. ಸಲಿಂಗ ವಿವಾಹವನ್ನು ಒಪ್ಪುವ ಸಮಾಜಗಳ ಸಂಖ್ಯೆ ಕಡಿಮೆ. ಜಗತ್ತಿನ 34 ದೇಶಗಳಲ್ಲಿ ಮಾತ್ರ ಇಂತಹ ಪದ್ಧತಿಗೆ ಕಾನೂನಿನ ಮಾನ್ಯತೆಯಿದೆ. ಈ ಪೈಕಿ 23 ದೇಶಗಳು ದೇಶದಾದ್ಯಂತ ನಡೆಸಿದ ಜನಮತಗಣನೆಯ ಆಧಾರದಲ್ಲಿ ಸಂಸತ್ತಿನಲ್ಲಿ ಕಾಯ್ದೆ ಜಾರಿಗೊಳಿಸುವ ಮೂಲಕ ಅನುಮತಿ ನೀಡಿವೆ. 10 ದೇಶಗಳಲ್ಲಿ ಅಲ್ಲಿನ ಉನ್ನತ ನ್ಯಾಯಾಲಯಗಳು ಸಲಿಂಗ ವಿವಾಹದ ಪರವಾಗಿ ತೀರ್ಪು ಪ್ರಕಟಿಸಿವೆ. ದಕ್ಷಿಣ ಆಫ್ರಿಕಾ ಮತ್ತು ತೈವಾನ್ ಸರ್ಕಾರಗಳು ಕೋರ್ಟ್ ತೀರ್ಪಿನ ನಂತರ ಕಾನೂನು ಜಾರಿ ಮಾಡಿವೆ. ಇಂತಹ ವಿವಾಹಗಳನ್ನು ಕೆಲವು ದೇಶಗಳು ನಿಷೇಧಿಸಿಯೂ ಇಲ್ಲ, ಮಾನ್ಯತೆಯನ್ನೂ ನೀಡಿಲ್ಲ.

ಸಲಿಂಗ ವಿವಾಹಕ್ಕೆ ಮೊದಲಿಗೆ ಮಾನ್ಯತೆ ನೀಡಿದ್ದು ದಿ ನೆದರ್ಲೆಂಡ್ಸ್. 2000ನೇ ಇಸ್ವಿಯಲ್ಲಿ ಸಂಸತ್ತಿನಲ್ಲಿ ಕಾನೂನು ತರುವುದರ ಮೂಲಕ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆಯ ಪ್ರಕಾರ, ಒಂದೇ ಲಿಂಗಕ್ಕೆ ಸೇರಿದ ಇಬ್ಬರು ವಿವಾಹವಾಗಲು, ವಿಚ್ಛೇದನ ಪಡೆಯಲು ಹಾಗೂ ಮಗುವನ್ನು ದತ್ತು ಪಡೆಯಲು ಶಾಸನಾತ್ಮಕ ಬಲವನ್ನು ನೀಡಲಾಗಿದೆ. ಇಂತಹ ವಿವಾಹ ವ್ಯವಸ್ಥೆಯನ್ನು ಇತ್ತೀಚೆಗೆ ಒಪ್ಪಿಕೊಂಡಿದ್ದು ಐರೋಪ್ಯ ಖಂಡದ ಪುಟ್ಟ ದೇಶ ಆ್ಯಂಡೊರಾ. ಇಲ್ಲಿನ ಸರ್ಕಾರವು 2023ರ ಫೆಬ್ರುವರಿ 17ರಂದು ಸಲಿಂಗ ವಿವಾಹಕ್ಕೆ ಅನುಮೋದನೆ ನೀಡಿತು. ಏಷ್ಯಾದಲ್ಲಿ ತೈವಾನ್ ದೇಶ ಮಾತ್ರ ಇಂತಹ ವಿವಾಹವನ್ನು ಒಪ್ಪಿಕೊಂಡಿದೆ. ದಕ್ಷಿಣ ಏಷ್ಯಾದಲ್ಲಿ ಯಾವ ದೇಶವೂ ಇದನ್ನೂ ಅಂಗೀಕರಿಸಿಲ್ಲ.

ಹ್ಯೂಮನ್‌ ರೈಟ್ಸ್ ಕ್ಯಾಂಪೇನ್ ಫೌಂಡೇಷನ್‌ನ ‘ಮ್ಯಾರೇಜ್ ಇಕ್ವಾಲಿಟಿ ಅರೌಂಡ್ ದಿ ವರ್ಲ್ಡ್’ ವರದಿಯ ಪ್ರಕಾರ, ಉತ್ತರ ಅಮೆರಿಕ, ಆಸ್ಟ್ರೇಲಿಯಾ, ಐರೋಪ್ಯ ಖಂಡದ ಬಹುತೇಕ ದೇಶಗಳಲ್ಲಿ ಸಲಿಂಗ ಮದುವೆಗೆ ಮಾನ್ಯತೆ ನೀಡಲಾಗಿದೆ. ದಕ್ಷಿಣ ಅಮೆರಿಕದ ಕೆಲವು ದೇಶಗಳಲ್ಲಿ ಮಾನ್ಯತೆ ಸಿಕ್ಕಿಲ್ಲ. ಆದರೆ, ಆಫ್ರಿಕಾ ಹಾಗೂ ಏಷ್ಯಾದ ಹೆಚ್ಚಿನ ದೇಶಗಳು ಇನ್ನು ಒಪ್ಪಿಕೊಂಡಿಲ್ಲ.

ಎಲ್ಲೆಲ್ಲಿ ಮಾನ್ಯತೆ: ಆ್ಯಂಡೊರಾ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಬ್ರೆಜಿಲ್, ಕೆನಡ, ಚಿಲಿ, ಕೊಲಂಬಿಯಾ, ಕೋಸ್ಟರಿಕಾ, ಕ್ಯೂಬಾ, ಡೆನ್ಮಾರ್ಕ್, ಈಕ್ವೆಡಾರ್, ಫಿನ್ಲೆಂಡ್, ಫ್ರಾನ್ಸ್, ಜರ್ಮನಿ, ಐಸ್ಲೆಂಡ್‌, ಐರ್ಲೆಂಡ್, ಲಕ್ಸೆಂಬರ್ಗ್, ಮಾಲ್ಟಾ, ಮೆಕ್ಸಿಕೊ, ದಿ ನೆದರ್ಲೆಂಡ್ಸ್, ನ್ಯೂಜಿಲೆಂಡ್, ನಾರ್ವೆ, ಪೋರ್ಚುಗಲ್, ಸ್ಲೊವೇನಿಯಾ, ದಕ್ಷಿಣ ಆಫ್ರಿಕಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್, ತೈವಾನ್, ಬ್ರಿಟನ್, ಅಮೆರಿಕ ಹಾಗೂ ಉರುಗ್ವೆ ದೇಶಗಳಲ್ಲಿ ಸಲಿಂಗ ಮದುವೆಗೆ ಮಾನ್ಯತೆಯಿದೆ.



ಮೃದು ಧೋರಣೆ

ಸಲಿಂಗಕಾಮ ವಿಚಾರವೂ ಬಹುಚರ್ಚಿತ ವಿಷಯ. ಸಲಿಂಗಕಾಮ ವಿಚಾರದಲ್ಲಿ ಹೆಚ್ಚಿನ ದೇಶಗಳು ಇತ್ತೀಚಿನ ದಿನಗಳಲ್ಲಿ ಮೃದುಧೋರಣೆ ತಳೆದಿವೆ. ಸಲಿಂಗಕಾಮವನ್ನು ಅಪರಾಧ ಎಂದು 64 ದೇಶಗಳು ಪರಿಗಣಿಸಿದ್ದರೆ, 133 ದೇಶಗಳು ಅಪರಾಧವಲ್ಲ ಎಂದು ವ್ಯಾಖ್ಯಾನಿಸಿವೆ. ಭಾರತದಲ್ಲೂ ಇದನ್ನು ಅಪರಾಧದ ಪರಿಧಿಯಿಂದ ಕೈಬಿಡಲಾಗಿದೆ. 2018ರಲ್ಲಿ ಸುಪ್ರೀಂ ಕೋರ್ಟ್ ಈ ಕುರಿತು ತೀರ್ಪು ನೀಡಿತ್ತು. ಸಿಂಗಪುರ ಸರ್ಕಾರವು ಇತ್ತೀಚೆಗೆ ಇದೇ ನಿಲುವು ತೆಗೆದುಕೊಂಡಿದೆ. ಸಲಿಂಗಕಾಮ ಹಾಗೂ ಸಲಿಂಗ ವಿವಾಹವನ್ನು ಅಪರಾಧ ಎಂದು ಪರಿಗಣಿಸಿರುವ ದೇಶಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಗಳು ನಿರಂತರವಾಗಿ ಹೋರಾಟ ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT