‘ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ’ ಎಂಬ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಣಗಳಲ್ಲಿ ಸದ್ದು ಮಾಡುತ್ತಿದೆ. ಆರೋಗ್ಯಕ್ಕೆ ಸಂಬಂಧಿಸಿದ ಇಂಥದ್ದೇ ನೂರಾರು ಸುದ್ದಿ, ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ಹರಿದಾಡುತ್ತಿರುತ್ತವೆ. ಇವು ಸಮಾಜದಲ್ಲಿ ಯಾವ ರೀತಿ ಪರಿಣಾಮ ಬೀರುತ್ತಿವೆ? ಇದಕ್ಕೆ ಪರಿಹಾರವೇನು? ಸುದ್ದಿಗಳ ಖಾತರಿಗೆ ಏನು ಮಾಡಬೇಕು? ಎನ್ನುವ ಹಲವು ಪ್ರಶ್ನೆಗಳು ಕಾಡುತ್ತವೆ. ತಜ್ಞರು ಹೇಳುವಂತೆ, ಇಂಥ ಸಲಹೆಗಳು ಆರೋಗ್ಯಕ್ಕೆ ಅಪಾಯಕಾರಿ.
ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ವೈದ್ಯರು ಹೆಚ್ಚಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ರೋಗಗಳ ಬಗ್ಗೆ ಮಾಹಿತಿ ಕೊಟ್ಟು ಸಲಹೆ ನೀಡುತ್ತಾರೆ. ಆದರೆ, ಈ ಸಲಹೆಗಳ ಆಧಾರದಲ್ಲಿಯೇ ಔಷಧಿಗಳನ್ನು ಸೇವಿಸಬಾರದು. ತಜ್ಞವೈದ್ಯರನ್ನು ಭೇಟಿ ಮಾಡಿ ಔಷಧಿ ಪಡೆಯಬೇಕು. ಇದೇ ರೀತಿ ಕೆಲವೊಂದು ಗಿಡಮೂಲಿಕೆಗಳ ಬಗ್ಗೆಯೂ ಮಾಹಿತಿ ನೀಡಿ ಸೇವಿಸಲು ಸಲಹೆ ನೀಡುತ್ತಾರೆ. ಇವುಗಳ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆದಿರುವುದಿಲ್ಲ. ಇಂತಹ ವಿಷಯಗಳಿಗೆ ಜನರು ಕಿವಿಗೊಡಬಾರದು. ವೈದ್ಯಕೀಯದಲ್ಲಿ ಮೂರು ‘ಟಿ’ ಗಳು (ಟಾಕ್, ಟಚ್, ಟ್ರೀಟ್) ಬಹಳ ಮುಖ್ಯ. ಆಗ ರೋಗಿ ಮತ್ತು ವೈದ್ಯರ ನಡುವೆ ವಿಶ್ವಾಸ ಬೆಳೆಯುತ್ತದೆ. ಚಿಕಿತ್ಸೆಯೇ ರೋಗಕ್ಕಿಂತ ಅಪಾಯಕಾರಿ ಆಗಬಾರದು. ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ರೋಗದ ಹಿನ್ನೆಲೆ ಪರಿಶೀಲಿಸಿಯೇ ನಾವು ಚಿಕಿತ್ಸೆ ನೀಡಬೇಕು
ಡಾ.ಸಿ.ಎನ್.ಮಂಜುನಾಥ್, ಸಂಸದ ಹಾಗೂ ಹೃದ್ರೋಗ ತಜ್ಞ
ಯಾವುದೇ ವೈದ್ಯಕೀಯ ಜ್ಞಾನ, ಅನುಭವವಿಲ್ಲದೇ ಪ್ರಸಾರ ಮಾಡುವಂತಹ ಆರೋಗ್ಯ ಸಲಹೆಗೆ ಕಡಿವಾಣ ಹಾಕಬೇಕು. ಇದಕ್ಕಾಗಿ ಸರ್ಕಾರ ಒಂದು ನೀತಿ ಅಥವಾ ಕಾಯ್ದೆ ರೂಪಿಸಬೇಕು. ತಪ್ಪು ಮಾಹಿತಿ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವಂತಾಗಬೇಕು
ಡಾ. ರಾಜು ಕೃಷ್ಣಮೂರ್ತಿ, ವೈದ್ಯ, ಬೆಂಗಳೂರು.
ಕಾಯ್ದೆ–ಕಾನೂನುಗಳ ಮೂಲಕ ಅವೈಜ್ಞಾನಿಕ ಆರೋಗ್ಯ ಸಲಹೆ, ವೈದ್ಯಕೀಯ ಮಾಹಿತಿ ಹಂಚುವುದನ್ನು ತಡೆಯುವುದು ಕಷ್ಟ. ಆದರೆ, ಜನರಲ್ಲಿ ಈ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವುದೊಂದೇ ಪರಿಹಾರ