ಪಾರಂಪರಿಕ ತಾಣ ಹಂಪಿಯಿಂದ 26 ಕಿ.ಮೀ ದೂರದಲ್ಲಿರುವ ಕೊಪ್ಪಳದ ಸಾಣಾಪುರದಲ್ಲಿ ಇಸ್ರೇಲ್ ಪ್ರವಾಸಿ ಮಹಿಳೆ, ಹೋಂ ಸ್ಟೇ ಒಡತಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಮತ್ತು ಒಡಿಶಾ ವ್ಯಕ್ತಿಯ ಕೊಲೆ ಪ್ರಕರಣ ಪ್ರವಾಸಿಗರನ್ನು ಆತಂಕಕ್ಕೆ ದೂಡಿದೆ. ಹಂಪಿ ಮತ್ತು ಸಾಣಾಪುರ ಪ್ರದೇಶಗಳನ್ನು ತುಂಗಭದ್ರಾ ನದಿ ವಿಭಜಿಸುತ್ತದೆ. ಬಲದಂಡೆಯಲ್ಲಿರುವ ಹಂಪಿಗೆ ಹೋಲಿಸಿದರೆ, ಎಡದಂಡೆಯಲ್ಲಿರುವ ಸಾಣಾಪುರ, ವಿರೂಪಾಪುರ ಗಡ್ಡೆ ಪ್ರದೇಶಗಳು ಪ್ರವಾಸಿಗರಿಗೆ ಮೋಜು ಮಸ್ತಿಯ ತಾಣಗಳಾಗಿವೆ. ಭದ್ರತೆಯ ಕೊರತೆಯೂ ಇರುವ ಇಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ.
ಆನೆಗೊಂದಿ, ಸಾಣಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ದೂರು ಬಂದಾಗ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಚಟುವಟಿಕೆ ಗಮನಕ್ಕೆ ಬಂದರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೂ ತಿಳಿಸಲಾಗಿದೆ. ಪ್ರವಾಸಿ ಸ್ಥಳಗಳಲ್ಲಿ ಪೊಲೀಸರ ಗಸ್ತು ಹೆಚ್ಚಿಸಲಾಗಿದೆ
-ಡಾ.ರಾಮ್ ಎಲ್. ಅರಸಿದ್ದಿ, ಕೊಪ್ಪಳ ಎಸ್‌ಪಿ
ಹಂಪಿ ಪರಿಸರದಲ್ಲಿ ಪ್ರವಾಸಿಗರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಗಮನ ಹರಿಸಲಾಗಿದೆ. ಹೋಂ ಸ್ಟೇ, ರೆಸಾರ್ಟ್ ಮಾಲೀಕರ ಸಭೆ ನಡೆಸಲಾಗಿದೆ. 8 ಚೀತಾ ವಾಹನಗಳು 24 ಗಂಟೆ ಗಸ್ತು ತಿರುಗುತ್ತಿವೆ.
-ಶ್ರೀಹರಿಬಾಬು ಬಿ.ಎಲ್., ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಒಳಪಟ್ಟ ಹಂಪಿ ಸುತ್ತಮುತ್ತಲಿನ ಸ್ಮಾರಕಗಳ ಬಳಿ ಪ್ರವಾಸಿಗರಿಗೆ ಯಾವುದೇ ಭಯ ಇಲ್ಲ. ನಮ್ಮ ಇಲಾಖೆಯಿಂದ 85 ಭದ್ರತಾ ಸಿಬ್ಬಂದಿ ಕಣ್ಣಿನ ಮೇಲೆ ಕಣ್ಣಿಟ್ಟು ಸ್ಮಾರಕಗಳ ಜತೆಗೆ ಪ್ರವಾಸಿಗರ ಮೇಲೆ ನಿಗಾ ಇಟ್ಟು ಕಾಯುತ್ತಿದ್ದಾರೆ. 120ರಷ್ಟು ಕಾರ್ಮಿಕರು ಅಗತ್ಯದ ಕೆಲಸ ಮಾಡುತ್ತಿದ್ದಾರೆ. ಪ್ರವಾಸಿಗರು, ಸ್ಮಾರಕಗಳ ರಕ್ಷಣೆಗೆ ಸುಮಾರು 200 ಮಂದಿ ನಮ್ಮ ಇಲಾಖೆಯ ಪರವಾಗಿ ಕೆಲಸ ಮಾಡುತ್ತಿದ್ದಾರೆ. ನಮಗೆ ಅಭದ್ರತೆಯ ಭಾವನೆ ಇದೆ ಎಂದು ಇದುವರೆಗೆ ಒಬ್ಬನೇ ಒಬ್ಬ ವಿದೇಶಿ ಪ್ರವಾಸಿ ನಮ್ಮ ಬಳಿ ದೂರು ನೀಡಿಲ್ಲ.