ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ: ‘ಸ್ವಚ್ಛ’ವಾಗಲು ಬಿಜೆಪಿಯತ್ತ ನಾಯಕರ ದೌಡು?

Published 25 ಮಾರ್ಚ್ 2024, 21:16 IST
Last Updated 25 ಮಾರ್ಚ್ 2024, 21:16 IST
ಅಕ್ಷರ ಗಾತ್ರ

ಭ್ರಷ್ಟಾಚಾರ ಆರೋಪದಲ್ಲಿ ಶಿಕ್ಷೆ ಅನುಭವಿಸಿದ್ದ ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಿದ್ದಾರೆ ಮತ್ತು ತಾವೂ ಬಿಜೆಪಿ ಸೇರಿದ್ದಾರೆ. ಭ್ರಷ್ಟಾಚಾರವನ್ನು ತೊಲಗಿಸುತ್ತೇವೆ ಎಂದು ಕೇಂದ್ರದ ಬಿಜೆಪಿ ನಾಯಕರು ಹೇಳುತ್ತಲೇ ಇರುತ್ತಾರೆ. ಆದರೆ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವಂತಹ ವಿರೋಧ ಪಕ್ಷಗಳ ಹಲವು ನಾಯಕರನ್ನು ಬಿಜೆಪಿ ತನ್ನಲ್ಲಿಗೆ ಬರಮಾಡಿಕೊಂಡಿದೆ. ಆನಂತರ ಅಂತಹ ನಾಯಕರ ವಿರುದ್ಧದ ಪ್ರಕರಣಗಳು ರದ್ದಾಗುತ್ತವೆ ಅಥವಾ ತನಿಖೆ ನಿಂತೇ ಹೋಗುತ್ತದೆ. ಇದನ್ನೇ ವಿರೋಧ ಪಕ್ಷಗಳು, ‘ಬಿಜೆಪಿ ವಾಷಿಂಗ್‌ ಮೆಷಿನ್‌ ಇದ್ದಂತೆ. ಈ ಕಡೆಯಿಂದ ಅಲ್ಲಿಗೆ ಹೋಗುವ ಭ್ರಷ್ಟರೆಲ್ಲಾ, ಸ್ವಚ್ಛವಾಗಿ ಬಿಡುತ್ತಾರೆ’ ಎಂದು ಲೇವಡಿ ಮಾಡುತ್ತಿವೆ. ಹೀಗೆ ಭ್ರಷ್ಟಾಚಾರದ ಆರೋಪ/ಪ್ರಕರಣ ಹೊತ್ತು ಬಿಜೆಪಿ ಸೇರಿದವರು ಮತ್ತು ಬಿಜೆಪಿಯಲ್ಲಿ ಲಾಭದಾಯಕ ಹುದ್ದೆ ಪಡೆದವರಲ್ಲಿ ಕೆಲವರ ವಿವರ ಇಲ್ಲಿದೆ.

ಅಜಿತ್ ಪವಾರ್

ಮಹಾರಾಷ್ಟ್ರದ ಎನ್‌ಸಿಪಿ ನಾಯಕರಾಗಿದ್ದ ಅಜಿತ್ ಪವಾರ್‌, ಅವಿಭಜಿತ ಶಿವಸೇನಾ–ಅವಿಭಜಿತ ಎನ್‌ಸಿಪಿ–ಕಾಂಗ್ರೆಸ್‌ ‘ಮಹಾ ವಿಕಾಸ ಆಘಾಡಿ’ ಮೈತ್ರಿಕೂಟದಲ್ಲಿ ಸಚಿವರಾಗಿದ್ದರು. ಅಜಿತ್ ಅವರು ಹಲವು ಭ್ರಷ್ಟಾಚಾರ
ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಯಾಗಿದ್ದರು. 2022 ಮತ್ತು 2023ರಲ್ಲಿ ಅಜಿತ್ ಅವರನ್ನು ಜಾರಿ ನಿರ್ದೇಶನಾಲಯವು ಹಲವು ಬಾರಿ ವಿಚಾರಣೆಗೆ ಕರೆದಿತ್ತು. 2023ರ ಆರಂಭದಲ್ಲಿ ಆರೋಪ ಪಟ್ಟಿಯನ್ನೂ ಸಲ್ಲಿಸಿತ್ತು.

ವಿಚಾರಣೆ ತೀವ್ರಗೊಂಡ ಬೆನ್ನಲ್ಲೇ ಅಜಿತ್ ಅವರು ಎನ್‌ಸಿಪಿಯ ಹಲವು ಶಾಸಕರೊಂದಿಗೆ ಪಕ್ಷವನ್ನು
ಇಬ್ಭಾಗ ಮಾಡಿದರು. ಅವರು ಬಿಜೆಪಿ ಸೇರಲಿಲ್ಲವಾದರೂ, 2023ರಲ್ಲಿ ಬಿಜೆಪಿ ಜತೆ ಸೇರಿ ಸರ್ಕಾರದ ಭಾಗವಾದರು. ಅಜಿತ್ ಪವಾರ್ ಅವರಿಗೆ ಬಿಜೆಪಿಯು
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹುದ್ದೆಯನ್ನು ಒದಗಿಸಿ ಕೊಟ್ಟಿತು. ನಂತರ ಅವರ ವಿರುದ್ಧ ಇದ್ದ ಪ್ರಕರಣಗಳ ತನಿಖೆ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಪ್ರಕರಣಗಳು

*  ₹70,000 ಕೋಟಿ ಮೊತ್ತದ ನೀರಾವರಿ ಹಗರಣ

* ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್‌ ಅಕ್ರಮ ಸಾಲ ವಿತರಣೆ ಹಗರಣ

* ಲೋಕೋಪಯೋಗಿ ಇಲಾಖೆಯಲ್ಲಿ
ಅನುದಾನ ದುರ್ಬಳಕೆ ಮತ್ತು ಭ್ರಷ್ಟಾಚಾರ
ಆರೋಪ

ಬಿಜೆಪಿ ಜತೆ ಕೈಜೋಡಿಸಿದ ನಂತರ

ಅಜಿತ್ ಪವಾರ್ ಅವರಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹುದ್ದೆ ದೊರೆತದ್ದು ಅಲ್ಲದೇ, ಹಲವು ಗಂಭೀರ ಪ್ರಕರಣಗಳಲ್ಲಿ ಕ್ಲೀನ್‌ಚಿಟ್‌ ದೊರೆತಿದೆ.

ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಕಾಂಗ್ರೆಸ್‌ನಲ್ಲಿ ಸಚಿವರಾಗಿದ್ದ ಹಿಮಂತ ಬಿಸ್ವ ಶರ್ಮಾ ವಿರುದ್ಧ ಹಲವು ಪ್ರಕರಣಗಳು ಇದ್ದವು. ಶಾರದಾ ಚಿಟ್‌ ಫಂಡ್‌ ಹಗರಣದಲ್ಲಿ ಶರ್ಮಾ ಅವರೂ ಪ್ರಮುಖ ಆರೋಪಿಯಾಗಿದ್ದರು. ಅವರ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಗಳು ಪ್ರಕರಣ ದಾಖಲಿಸಿದ್ದವು. ಸಿಬಿಐ ಎಫ್‌ಐಆರ್ ಸಹ ದಾಖಲಿಸಿತ್ತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ (2014ರಲ್ಲಿ) ಬಂದ ನಂತರ ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲಾಗಿತ್ತು. ಹಿಮಂತ ಅವರನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ಹಲವು ಬಾರಿ ವಿಚಾರಣೆಗೆ ಕರೆದಿದ್ದವು.

ತಮ್ಮ ವಿರುದ್ಧದ ತನಿಖೆ ಮತ್ತು ವಿಚಾರಣೆ ತೀವ್ರವಾಗು ತ್ತಿದ್ದ ಹೊತ್ತಿನಲ್ಲೇ ಹಿಮಂತ ಅವರು 2015ರಲ್ಲಿ ಬಿಜೆಪಿ ಸೇರಿದರು. ಆವರೆಗೆ ಹಿಮಂತ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದ ಬಿಜೆಪಿ ನಾಯಕರು, ಅವರನ್ನೇ ಪಕ್ಷಕ್ಕೆ ಸೇರಿಸಿಕೊಂಡಿದ್ದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಪಕ್ಷದ ನಿರ್ಧಾರವನ್ನು ಅಮಿತ್ ಶಾ ಅವರು ಸಾರ್ವಜನಿಕ ಸಭೆಯಲ್ಲಿ ಸಮರ್ಥಿಸಿಕೊಂಡಿದ್ದರು. ತಕ್ಷಣವೇ ಅವರನ್ನು ಎನ್‌ಡಿಎಯ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಂಚಾಲಕರನ್ನಾಗಿ ಮಾಡಲಾಯಿತು. 2021ರ ಅಸ್ಸಾಂ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ಅವರನ್ನೇ ಮುಖ್ಯಮಂತ್ರಿ ಮಾಡಲಾಯಿತು.

ಪ್ರಕರಣಗಳು

* ಶಾರದಾ ಚಿಟ್‌ ಫಂಡ್‌ ಹಗರಣ

* ಲೂಯಿಸ್‌ ಬರ್ಗರ್ ಲಂಚ ಹಗರಣ

ಬಿಜೆಪಿ ಸೇರಿದ ನಂತರ

* ಅಸ್ಸಾಂ ಮುಖ್ಯಮಂತ್ರಿ ಹುದ್ದೆ

* ಪ್ರಕರಣಗಳ ತನಿಖೆ ಬಗ್ಗೆ ಮಾಹಿತಿ ಇಲ್ಲ.

ನಾರಾಯಣ ರಾಣೆ

ತೊಂಬತ್ತರ ದಶಕದಲ್ಲಿ ಶಿವಸೇನಾ–ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ನಾರಾಯಣ ರಾಣೆ ಅವರು, ಆನಂತರದಲ್ಲಿ ಕಾಂಗ್ರೆಸ್‌ ಸೇರಿದ್ದರು. ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾಗಿದ್ದಾಗ ಭ್ರಷ್ಟಾಚಾರ ಎಸಗಿದ ಹಲವು ಆರೋಪಗಳು ರಾಣೆ ಅವರ ಮೇಲಿದ್ದವು. ಈ ಸಂಬಂಧ ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳ ಮತ್ತು ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯವೂ ರಾಣೆ ವಿರುದ್ಧ ಪ್ರಕರಣ ದಾಖಲಿಸಿದ್ದವು. 2018ರಲ್ಲಿ ಅವರು ಕಾಂಗ್ರೆಸ್‌ ತೊರೆದು, ತಮ್ಮದೇ ಪ್ರತ್ಯೇಕ ಪಕ್ಷವನ್ನು ಸ್ಥಾಪಿಸಿದ್ದರು. 2018–19ರಲ್ಲಿ ಇ.ಡಿ, ರಾಣೆ ಅವರನ್ನು ಹಲವು ಬಾರಿ ವಿಚಾರಣೆಗೆ ಒಳಪಡಿಸಿತ್ತು. ಅದರ ಬೆನ್ನಲ್ಲೇ ರಾಣೆ ಬಿಜೆಪಿ ಸೇರಿದ್ದರು. ತಮ್ಮ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಿದ್ದರು. 2019ರಲ್ಲಿ ರಾಣೆ ಅವರನ್ನು ಬಿಜೆಪಿಯು ರಾಜ್ಯಸಭೆಗೆ ಆಯ್ಕೆ ಮಾಡಿತು.

ಪ್ರಕರಣಗಳು

* ಹಣ ಅಕ್ರಮ ವರ್ಗಾವಣೆ ಪ್ರಕರಣ

* ಭ್ರಷ್ಟಾಚಾರ ಆರೋಪ

ಬಿಜೆಪಿ ಸೇರಿದ ನಂತರ

* ರಾಜ್ಯಸಭೆ ಸದಸ್ಯತ್ವ ಮತ್ತು ಕೇಂದ್ರ ಸಚಿವ ಸ್ಥಾನ 

* ಪ್ರಕರಣ ತನಿಖೆ ಮಾಹಿತಿ ಇಲ್ಲ

ಸುವೇಂಧು ಅಧಿಕಾರಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಉತ್ತರಾಧಿಕಾರಿ ಎಂದೇ ಸುವೇಂಧು ಅಧಿಕಾರಿ ಅವರನ್ನು ಕರೆಯಲಾಗುತ್ತಿತ್ತು. ಟಿಎಂಸಿ ಸ್ಥಾಪನೆಯಾದ ದಿನದಿಂದಲೂ ಮಮತಾ ಅವರ ಜತೆಗೆ ನಿಂತಿದ್ದ ಸುವೇಂಧು ಅಧಿಕಾರಿಯವರ ವಿರುದ್ಧ ಭ್ರಷ್ಟಾಚಾರದ ಹಲವು ಆರೋಪಗಳಿದ್ದವು. ಕೇಂದ್ರದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಹಲವು ಪ್ರಕರಣಗಳನ್ನೂ ದಾಖಲಿಸಿದ್ದವು.

ಸುವೇಂಧು ಅಧಿಕಾರಿಯವರ ವಿಚಾರಣೆ ಮತ್ತು ಬಂಧನಕ್ಕೆ ಎಂದು ಬಂದ ಸಿಬಿಐ ಅಧಿಕಾರಿಗಳ ವಿರುದ್ಧ ಮಮತಾ ಬ್ಯಾನರ್ಜಿ ಸರ್ಕಾರವು ಕ್ರಮವನ್ನೂ ತೆಗೆದುಕೊಂಡಿತ್ತು. ಅವರ ಬಂಧನ ಇನ್ನೇನು ನಡೆದೇ ಹೋಗುತ್ತದೆ ಎಂಬ ಸ್ಥಿತಿ 2020ರ ಅಂತ್ಯದ ವೇಳೆಗೆ ನಿರ್ಮಾಣವಾಗಿತ್ತು. ಎಲ್ಲರನ್ನೂ ಚಕಿತಗೊಳಿಸುವಂತೆ 2020ರ ಡಿಸೆಂಬರ್‌ನಲ್ಲಿ ಸುವೇಂಧು ಬಿಜೆಪಿ ಸೇರಿದರು. 

ಪ್ರಕರಣಗಳು

* ನಾರದಾ ಚಿಟ್‌ಫಂಡ್‌ ಹಗರಣ

* ಶಾರದಾ ಚಿಟ್‌ಫಂಡ್‌ ಹಗರಣ

* ಲಾಟರಿ ಹಗರಣ l ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಹಗರಣ

ಬಿಜೆಪಿ ಸೇರಿದ್ದಕ್ಕೆ ಆದ ಲಾಭ

* ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ

* ಎಲ್ಲಾ ಪ್ರಕರಣಗಳ ತನಿಖೆ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಅಶೋಕ್‌ ಚವ್ಹಾಣ್‌

ಆದರ್ಶ್‌ ಹೌಸಿಂಗ್‌ ಸೊಸೈಟಿ ಹಗರಣದಲ್ಲಿ ಅಶೋಕ್‌ ಚವ್ಹಾಣ್‌ ಅವರನ್ನು ಸಿಬಿಐ ಪ್ರಮುಖ ಆರೋಪಿ ಎಂದು ಹೇಳಿತ್ತು. ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿದ ಸೈನಿಕರಿಗೆ ಹಾಗೂ ಯುದ್ಧದಲ್ಲಿ ಮಡಿದ ಕುಟುಂಬದವರಿಗಾಗಿ 31 ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗಿತ್ತು. ಈ ಕಟ್ಟಡದಲ್ಲಿ ಅಂದಿನ ಮುಖ್ಯಮಂತ್ರಿ ಅಶೋಕ್‌ ಚವ್ಹಾಣ್‌ ಅವರ ಕುಟುಂಬಸ್ಥರಿಗೆ ಮನೆ ನೀಡಲಾಗಿದೆ ಎಂದೂ ಆರೋಪಿಸಲಾಗಿತ್ತು. ಈ ಸಂಬಂಧ ಅಶೋಕ್‌ ಮೇಲೆ ಅವರು ಹಲವು ವರ್ಷಗಳಿಂದ ತನಿಖೆ ನಡೆಯುತ್ತಿತ್ತು.

ಇತ್ತೀಚೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಶ್ವೇತಪತ್ರವನ್ನು ಹೊರಡಿಸಿತ್ತು. ಈ ಪತ್ರದಲ್ಲಿ ಆದರ್ಶ್‌ ಹಗರಣದ ಪ್ರಸ್ತಾಪವೂ ಇತ್ತು. ಇದಾಗಿ ಕೆಲವು ದಿನಗಳ ಬಳಿಕ, ಅಶೋಕ್‌ ಅವರು ಬಿಜೆಪಿ ಪಾಳಯ ಸೇರಿಕೊಂಡರು. ಬಿಜೆಪಿ ಸೇರುತ್ತಿದ್ದಂತೆಯೇ, ಮಹಾರಾಷ್ಟ್ರದಿಂದ ಅಶೋಕ್‌ ಅವರನ್ನು ರಾಜ್ಯಸಭೆಗೆ ನಿಲ್ಲಿಸಲಾಯಿತು. ಚುನಾವಣೆಯಲ್ಲಿ ಅಶೋಕ್‌ ಅವರು ಅವಿರೋಧವಾಗಿ ಆಯ್ಕೆಯಾದರು.

ಪ್ರಕರಣ

* ಆದರ್ಶ ಹೌಸಿಂಗ್‌ ಸೊಸೈಟಿ ಹಗರಣ

ಬಿಜೆಪಿ ಸೇರಿದ ನಂತರ

* ರಾಜ್ಯಸಭಾ ಸದಸ್ಯತ್ವ

ನವೀನ್‌ ಜಿಂದಾಲ್

ಜಿಂದಾಲ್‌ ಸ್ಟೀಲ್ಸ್‌ ಮತ್ತು ಪವರ್ ಲಿಮಿಟೆಡ್‌ನ ಮುಖ್ಯಸ್ಥರಾದ ನವೀನ್‌ ಜಿಂದಾಲ್ ಅವರು ಹರಿಯಾಣದ ಕುರುಕ್ಷೇತ್ರ ಲೋಕಸಭಾ ಕ್ಷೇತ್ರವನ್ನು 10 ವರ್ಷ ಕಾಂಗ್ರೆಸ್‌ ಸಂಸದನಾಗಿ ಪ್ರತಿನಿಧಿಸಿದ್ದರು. ಉಕ್ಕು ಕಾರ್ಖಾನೆಗೆ ಅಗತ್ಯವಿರುವ ಕಬ್ಬಿಣದ ಅದಿರಿನ ಗಣಿಗಳ ಹಂಚಿಕೆಯಲ್ಲಿ ಅಕ್ರಮ ಎಸಗಿದ ಆರೋಪ ನವೀನ್‌ ಜಿಂದಾಲ್‌ ಮತ್ತು ಅವರ ಕಂಪನಿಯ ವಿರುದ್ಧ ಇತ್ತು.

ಮಧ್ಯ ಪ್ರದೇಶದ ಮತ್ತು ಜಾರ್ಖಂಡ್‌ನಲ್ಲಿನ ಕಬ್ಬಿಣದ ಅದಿರಿನ ಗಣಿಗಳ ಹಂಚಿಕೆ ವೇಳೆ ವಂಚನೆ ಎಸಗಿದ ಮತ್ತು ಅದಕ್ಕಾಗಿ ಸಂಚುರೂಪಿಸಿದ ಆರೋಪಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ನವೀನ್‌ ಅವರು ವಿದೇಶ ಪ್ರಯಾಣ ಕೈಗೊಳ್ಳದಂತೆ ನಿರ್ಬಂಧವಿತ್ತು. ಈಚೆಗಷ್ಟೇ ಆ ನಿರ್ಬಂಧವನ್ನು ಸಡಿಲಗೊಳಿಸಲಾಗಿತ್ತು. ಈಗ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ನವೀನ್‌ ಜಿಂದಾಲ್‌ ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರಿದ್ದಾರೆ. ಹರಿಯಾಣದ ಕುರುಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.

ಪ್ರಕರಣಗಳು

* ಕಬ್ಬಿಣ ಮತ್ತು ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ಅಕ್ರಮ ಆರೋಪ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ

ಬಿಜೆಪಿ ಸೇರಿದ ನಂತರ

* ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT