ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ | ರಾಜಸ್ಥಾನ: ಬಿಜೆಪಿ ದಿಗ್ವಿಜಯ ಮತ್ತು ‘ಇಂಡಿಯಾ’ ಮೈತ್ರಿಕೂಟ

Published 1 ಏಪ್ರಿಲ್ 2024, 0:00 IST
Last Updated 1 ಏಪ್ರಿಲ್ 2024, 0:00 IST
ಅಕ್ಷರ ಗಾತ್ರ

ಹಿಂದೊಮ್ಮೆ ಕಾಂಗ್ರೆಸ್‌ನ ಬಿಗಿ ಹಿಡಿತದಲ್ಲಿದ್ದ ರಾಜಸ್ಥಾನವು ನಿಧಾನವಾಗಿ ಬಿಜೆಪಿ ಕಡೆಗೆ ವಾಲಿದೆ. ಮೇಲ್ವರ್ಗದವರ ಹಿಡಿತ ಪ್ರಬಲವಾಗಿರುವ ಇಲ್ಲಿ, ಬಿಜೆಪಿಯ ಧರ್ಮದ ರಾಜಕಾರಣಕ್ಕೆ ಮನ್ನಣೆ ಸಿಗುತ್ತಲೇ ಬಂದಿದೆ. ಹಾಗೆಯೇ ಕಾಂಗ್ರೆಸ್‌ ಕೂಡ ಅಧಿಕಾರ ನಡೆಸಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಆದರೆ, ಐದು ವರ್ಷಗಳಲ್ಲಿ ಸರ್ಕಾರವು ಹಲವು ಸವಾಲುಗಳನ್ನೂ ಎದುರಿಸಿತು. ಸವಾಲುಗಳೊಂದಿಗೇ ಐದು ವರ್ಷ ಪೂರೈಸಿದ ಕಾಂಗ್ರೆಸ್‌ ಸರ್ಕಾರವು 2023ರ ಚುನಾವಣೆಯಲ್ಲಿ ಸೋಲುಂಡು, ಈಗ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಕಾಂಗ್ರೆಸ್‌ನ ಅಶೋಕ್‌ ಗೆಹಲೋತ್‌ ಸರ್ಕಾರವು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿತ್ತು. ವಿಧಾನಸಭೆ ಚುನಾವಣೆಯಲ್ಲಿ ಜನರು ಈ ಯೋಜನೆಗಳ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದರಾದರೂ ಸರ್ಕಾರ ಮತ್ತೊಮ್ಮೆ ಆರಿಸಿ ಬರಲಿಲ್ಲ. ಒಮ್ಮೆ ಐದು ವರ್ಷದ ಅವಧಿ ಪೂರೈಸಿದ ಸರ್ಕಾರವನ್ನು ಜನರು ಮರುಆಯ್ಕೆ ಮಾಡುವುದಿಲ್ಲ ಎಂಬುದು ರಾಜ್ಯದ ಸಂಪ್ರದಾಯದಂತೆ ಮುಂದುವರಿಯುತ್ತಿದೆ. ಆದರೆ, ಲೋಕಸಭೆ ಚುನಾವಣೆ ವಿಷಯದಲ್ಲಿ ಈ ಸಂಪ್ರದಾಯವು ಪಾಲನೆ ಆಗಿಲ್ಲ. ಕಳೆದ ಎರಡು ಲೋಕಸಭಾ ಚುನಾವಣೆಯಿಂದ ಬಿಜೆಪಿಯು ರಾಜಸ್ಥಾನದಲ್ಲಿ ದಿಗ್ವಿಜಯ ಸಾಧಿಸಿದೆ. ತನ್ನ ಮತಪ್ರಮಾಣವನ್ನೂ ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್‌ ಒಂದೂ ಸ್ಥಾನ ಗೆಲ್ಲಲಿಲ್ಲ. 2009ರಲ್ಲಿ ಕಾಂಗ್ರೆಸ್‌ 20 ಸ್ಥಾನಗಳನ್ನು ಗೆದ್ದಿತ್ತಾದರೂ 2014ರ ಚುನಾವಣೆಯಲ್ಲಿ ಅಷ್ಟೂ 25 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು.

ಯಾವ ಪಕ್ಷವು ಅಧಿಕಾರದಲ್ಲಿರುತ್ತದೊ ಅದೇ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂಬುದನ್ನು 2009 ಮತ್ತು 2014ರ ಚುನಾವಣಾ ಫಲಿತಾಂಶಗಳು ತೋರಿಸುತ್ತವೆ. ಆದರೆ, ಈ ಸಂಪ್ರದಾಯವನ್ನು 2019ರ ಲೋಕಸಭೆ ಚುನಾವಣೆ ಮುರಿದು ಹಾಕಿತು. 2019ರಲ್ಲಿ ಕಾಂಗ್ರೆಸ್‌ ಪಕ್ಷವು ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಆದರೆ, ಆ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 24 ಸ್ಥಾನಗಳನ್ನು ಗೆದ್ದುಕೊಂಡಿತಲ್ಲದೆ, ತನ್ನ ಮತಪ್ರಮಾಣವನ್ನೂ ಹೆಚ್ಚಿಸಿಕೊಂಡಿತು. ಶೇ 59.06 ಮತಗಳನ್ನು ಬಿಜೆಪಿ 2019ರಲ್ಲಿ ಪಡೆದುಕೊಂಡಿತ್ತು. 2024ರ ಚುನಾವಣೆಯಲ್ಲಿ ತನ್ನ ಮತಪ್ರಮಾಣವನ್ನು ಶೇ 60ಕ್ಕಿಂತ ಹೆಚ್ಚಿನ ಪ್ರಮಾಣಕ್ಕೆ ಏರಿಸಿಕೊಳ್ಳಬೇಕು ಎಂದು ಬಿಜೆಪಿ ಗುರಿಹಾಕಿಕೊಂಡಿದೆ. ಇದೇ ವೇಳೆಯೇ ಕಾಂಗ್ರೆಸ್‌ ಕೂಡ 2014ರ ಹೋಲಿಕೆಯಲ್ಲಿ 2019ರ ಚುನಾವಣೆಯಲ್ಲಿ ತನ್ನ ಮತಪ್ರಮಾಣವನ್ನು ಹೆಚ್ಚಿಸಿಕೊಂಡಿದೆ.

ವಿರೋಧಿ ಅಲೆ: ಕಳೆದ 10 ವರ್ಷಗಳಿಂದ ಸಂಸದರಾಗಿರುವ ಬಿಜೆಪಿ ನಾಯಕರ ವಿರುದ್ಧ ಈ ಬಾರಿ ವಿರೋಧಿ ಅಲೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ. ಹಾಲಿ ಸಂಸದರನ್ನು ಬಿಟ್ಟು ಹೊಸ ಮುಖಗಳಿಗೆ ಬಿಜೆಪಿ ಈ ಬಾರಿ ಟಿಕೆಟ್‌ ನೀಡಿದೆ. ಆಡಳಿತ ವಿರೋಧಿ ಅಲೆಯ ಪ್ರಭಾವದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್‌ನ 25 ನಾಯಕರನ್ನು ಬಿಜೆಪಿ ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇವರಲ್ಲಿ ಹಲವುರ ಮಾಜಿ ಸಚಿವರು, ಮೂರು ನಾಲ್ಕು ಬಾರಿ ಶಾಸಕರಾದ ನಾಯಕರೂ ಸೇರಿದ್ದಾರೆ. 2023ರ ವಿಧಾನಸಭೆ ಚುನಾವಣೆಗೆ ತನ್ನ ಏಳು ಸಂಸದರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು. ಇವರಲ್ಲಿ ಮೂವರು ಸೋತಿದ್ದರು.

ಇನ್ನು ಕೆಲವು ಬಿಜೆಪಿ ನಾಯಕರು ಕಾಂಗ್ರೆಸ್‌ ಸೇರಿಕೊಂಡಿದ್ದಾರೆ. ಪ್ರಹ್ಲಾದ್‌ ಗುಂಜಲ್‌, ರಾಹುಲ್‌ ಕಾಸ್ವಾನ್‌, ಬ್ರಿಜೇಂದ್ರ ಸಿಂಗ್‌ ಸೇರಿದಂತೆ ಕೆಲವು ನಾಯಕರು ಬಿಜೆಪಿ ತೊರೆದಿದ್ದಾರೆ. ಇವರಲ್ಲಿ ಪ್ರಹ್ಲಾದ್‌ ಅವರು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಆಪ್ತರಾಗಿದ್ದವರು. ಇವರಿಗೆ ಈಗ ಲೋಕಸಭಾ ಸ್ಪೀಕರ್‌ ಆಗಿದ್ದ ಓಂ ಬಿರ್ಲಾ ಅವರ ವಿರುದ್ಧ ಸ್ಪರ್ಧಿಸಲು ಟಿಕೆಟ್‌ ನೀಡಲಾಗಿದೆ. ರಾಹುಲ್‌ ಅವರಿಗೆ ಚುರು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಅನ್ನು ನಿರಾಕರಿಸಿತು. ಇದರಿಂದ ಸಿಟ್ಟಿಗೆದ್ದ ರಾಹುಲ್‌ ಅವರು ಕಾಂಗ್ರೆಸ್‌ ಸೇರಿ, ಇದೇ ಕ್ಷೇತ್ರದಿಂದ ಟಿಕೆಟ್‌ ಅನ್ನೂ ಗಿಟ್ಟಿಸಿಕೊಂಡಿದ್ದಾರೆ.

ಟಿಕೆಟ್‌ ಹಂಚಿಕೆ ತಂತ್ರ: ಒಂದೆಡೆ, ಬಿಜೆಪಿ ಸಂಸದರಿಗೆ ಆಡಳಿತ ವಿರೋಧಿ ಅಲೆ ಇದೆ. ಇದಕ್ಕಾಗಿ ಬಿಜೆಪಿ ಹೊಸ ಮುಖಗಳಿಗೆ ಮಣೆ ಹಾಕಿದ್ದರೆ, ಕಾಂಗ್ರೆಸ್‌ ಬಹಳ ಯೋಚಿಸಿ, ಜಾತಿ ಸಮೀಕರಣವನ್ನು ಲೆಕ್ಕಾಚಾರ ಮಾಡಿ ಈ ಬಾರಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎನ್ನುತ್ತಾರೆ ವಿಶ್ಲೇಷಕರು. ಸಿ.ಪಿ. ಜೋಷಿ ಅವರನ್ನು ಅಭ್ಯರ್ಥಿಯಾಗಿಸಿದ್ದು ಕೂಡ ಕಾಂಗ್ರೆಸ್‌ನ ಉತ್ತಮ ನಡೆ ಎನ್ನಲಾಗುತ್ತಿದೆ. ಹಿಂದೆಲ್ಲಾ ಕಾಂಗ್ರೆಸ್‌ ಸ್ವತಂತ್ರವಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಆದರೆ ಈ ಬಾರಿ ‘ಇಂಡಿಯಾ’ ಮೈತ್ರಿಕೂಟದಿಂದ ಸ್ಪರ್ಧೆ ನಡೆಸುತ್ತಿದೆ. 25 ಕ್ಷೇತ್ರಗಳಲ್ಲಿ 23 ಕ್ಷೇತ್ರಗಳನ್ನು ಕಾಂಗ್ರೆಸ್‌ ತನ್ನೊಂದಿಗೆ ಇರಿಸಿಕೊಂಡಿದೆ. ಒಂದು ಕ್ಷೇತ್ರವನ್ನು ಆರ್‌ಎಲ್‌ಪಿಗೆ ಹಾಗೂ ಮತ್ತೊಂದು ಕ್ಷೇತ್ರವನ್ನು ಸಿಪಿಎಂಗೆ ನೀಡಲಾಗಿದೆ. ರಾಜಸ್ಥಾನದ ಮಟ್ಟಿಗೆ ‘ಇಂಡಿಯಾ’ ಮೈತ್ರಿಕೂಟದಲ್ಲಿ ಕಾಂಗ್ರೆಸ್ಸಿಗೆ ಹೆಚ್ಚಿನ ಮತಗಳು ಬೀಳುತ್ತವೆ. ಆದರೆ, ಈ ಬಾರಿ ಮೈತ್ರಿ ಮಾಡಿಕೊಂಡ ಕಾರಣಕ್ಕಾಗಿ ಮೈತ್ರಿಕೂಟ ಇತರ ಪಕ್ಷಗಳ ಮತಗಳೂ ಕಾಂಗ್ರೆಸ್ಸಿಗೇ ಬೀಳುವ ಕಾರಣಕ್ಕಾಗಿ ರಾಜಕೀಯ ಲೆಕ್ಕಾಚಾರಗಳು ಬದಲಾಗುವ ನಿರೀಕ್ಷೆ ಇದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT