ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ ಶೇ 24ರಷ್ಟು ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಹೆರಿಗೆ ಸಮಯ ಮತ್ತು ನಂತರದಲ್ಲಿ ಮೃತಪಡುತ್ತಿರುವ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದರೂ ದಕ್ಷಿಣದ ರಾಜ್ಯಗಳ ಪೈಕಿ ತಾಯಂದಿರ ಮರಣ ಪ್ರಮಾಣ ಕರ್ನಾಟಕದಲ್ಲೇ ಹೆಚ್ಚಿದೆ. ಈ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಉದ್ದೇಶದಿಂದ ತಾಲ್ಲೂಕು ಮಟ್ಟದ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರನ್ನು ನಿಯೋಜಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ಆದರೆ, ಈ ಗುರಿ ತಲುಪಲು ರಾಜ್ಯವು ಬಹುದೂರ ಸಾಗಬೇಕಾಗಿದೆ.

2024ರಲ್ಲಿ ಅಕ್ಟೋಬರ್ವರೆಗೆ ರಾಜ್ಯದಲ್ಲಿ ಪ್ರಸವದ ವೇಳೆ 483 ತಾಯಂದಿರು ಸಾವಿಗೀಡಾಗಿದ್ದರು. 2025ರಲ್ಲಿ ಅಕ್ಟೋಬರ್ವರೆಗೆ 366 ತಾಯಂದಿರ ಸಾವುಗಳು ವರದಿಯಾಗಿದ್ದು, ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವು (ಎಂಎಂಆರ್) ಕಡಿಮೆ ಆಗಿದೆ ಎಂದು ಸರ್ಕಾರ ಹೇಳಿದೆ. 2030ರ ವೇಳೆಗೆ ತಾಯಿ ಮರಣ ಪ್ರಮಾಣವನ್ನು ಪ್ರತಿ ಲಕ್ಷ ಜನನಕ್ಕೆ 70ರ ಒಳಗೆ ಇರುವಂತೆ ನೋಡಿಕೊಳ್ಳುವುದು ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ (ಎಸ್ಡಿಜಿ) ಒಂದಾಗಿದ್ದು, ಅದನ್ನು ಸಾಧಿಸಿದ ಎಂಟು ರಾಜ್ಯಗಳಲ್ಲಿ ಕರ್ನಾಟಕವೂ ಒಂದು.

ಎಂಎಂಆರ್ ಅನ್ನು ಮತ್ತಷ್ಟು ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ. ತಿಂಗಳಿಗೆ 30ಕ್ಕೂ ಹೆಚ್ಚು ಹೆರಿಗೆಗಳಾಗುವ ರಾಜ್ಯದ 147 ತಾಲ್ಲೂಕು ಆಸ್ಪತ್ರೆಗಳು ಮತ್ತು 42 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ರೇಡಿಯಾಲಜಿಸ್ಟ್, ಅರಿವಳಿಕೆ ತಜ್ಞರನ್ನು ನಿಯೋಜಿಸುವುದು; ಅವುಗಳನ್ನು ಸಮಗ್ರ ತುರ್ತು ಹೆರಿಗೆ ಮತ್ತು ನವಜಾತ ಶಿಶು ಆರೈಕೆ ಕೇಂದ್ರಗಳನ್ನಾಗಿ (ಸಿಇಎಂಒಎನ್ಸಿ) ಪರಿಗಣಿಸುವುದು; ಜಿಲ್ಲಾ ಆಸ್ಪತ್ರೆಗಳಲ್ಲಿ ನಾಲ್ವರು ಪ್ರಸೂತಿ ತಜ್ಞರು, ನಾಲ್ವರು ಅರಿವಳಿಕೆ ತಜ್ಞರು ಮತ್ತು ಇಬ್ಬರು ಮಕ್ಕಳ ತಜ್ಞರನ್ನು ನಿಯೋಜಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇತ್ತೀಚೆಗೆ ಹೇಳಿದ್ದಾರೆ.

ರಾಜ್ಯದಲ್ಲಿ 200 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕಡಿಮೆ ಹೆರಿಗೆಗಳು ನಡೆಯುತ್ತಿದ್ದು, ಈ ಪೈಕಿ 162ರಲ್ಲಿ ಹೆರಿಗೆಗಳೇ ನಡೆದಿಲ್ಲ. ಇಂಥ ಆಸ್ಪತ್ರೆಗಳಿಂದ ಹೆಚ್ಚು ಹೆರಿಗೆಗಳು ನಡೆಯುವ ಆಸ್ಪತ್ರೆಗಳಿಗೆ ವೈದ್ಯರು ಮತ್ತು ನರ್ಸ್ಗಳನ್ನು ವರ್ಗಾಯಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.

ಕಳೆದ ವರ್ಷ ಬಳ್ಳಾರಿ ಮತ್ತು ಹಲವೆಡೆ ಬಾಣಂತಿಯರ ಸಾವುಗಳು ಸಂಭವಿಸಿದ್ದವು. ಈ ಸಂಬಂಧ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರವು ತಜ್ಞರ ಸಮಿತಿ ನೇಮಿಸಿತ್ತು. 2024ರ ಏಪ್ರಿಲ್ 1ರಿಂದ ಡಿಸೆಂಬರ್ 31ರವರೆಗೆ, ರಾಜ್ಯದಲ್ಲಿ ಒಟ್ಟು 464 ತಾಯಂದಿರು ಸಾವಿಗೀಡಾಗಿದ್ದರು. ಈ ಪೈಕಿ ಶೇ 70ರಷ್ಟು ಸಾವುಗಳನ್ನು ತಡೆಯಬಹುದಾಗಿತ್ತು ಎಂದು ತಜ್ಞರ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವಿಶ್ಲೇಷಣಾ ವರದಿ ತಿಳಿಸಿತ್ತು. ಒಟ್ಟು ಸಾವಿನ ಪ್ರಕರಣಗಳಲ್ಲಿ ಶೇ 50ರಷ್ಟು ತಾಯಂದಿರು 19ರಿಂದ 25 ವರ್ಷದ ನಡುವಿನವರು; ಶೇ 68.05ರಷ್ಟು ಸಾವುಗಳಿಗೆ ಅಧಿಕ ರಕ್ತದೊತ್ತಡ, ಹೃದ್ರೋಗ, ಡಯಾಬಿಟಿಸ್, ಸೋಂಕು ಮುಂತಾದವುಗಳು ಕಾರಣ; 10 ಪ್ರಕರಣಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ಸಾಬೀತಾಗಿದೆ ಎಂದೂ ವರದಿ ಹೇಳಿತ್ತು.

ಕೋವಿಡ್ ಅವಧಿಯಲ್ಲಿ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಎಂಎಂಆರ್ ಹೆಚ್ಚಾಗಿತ್ತು. ಜಾಗತಿಕ ಮಟ್ಟದಲ್ಲಿಯೂ ಈ ಅವಧಿಯಲ್ಲಿ ಹೆಚ್ಚು ತಾಯಂದಿರು ಮರಣ ಹೊಂದಿದ್ದಾರೆ. ಕೋವಿಡ್ ಸೋಂಕು ತಗುಲಿ ಕೆಲವು ಬಾಣಂತಿಯರು ಸತ್ತರೆ, ಕೋವಿಡ್ ಸಾಂಕ್ರಾಮಿಕ ವ್ಯಾಪಕವಾಗಿ ಹಬ್ಬಿದ್ದ ಕಾರಣಕ್ಕೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಹಲವರು ಮೃತಪಟ್ಟರು ಎಂದು ಡಬ್ಲ್ಯುಎಚ್ಒ ವಿಶ್ಲೇಷಿಸಿದೆ.

₹139.53 ಕೋಟಿ ವೆಚ್ಚದಲ್ಲಿ ಹಲವು ಕಾರ್ಯಕ್ರಮ

ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಆರೋಗ್ಯ ಇಲಾಖೆ ಅಭಿಯಾನವನ್ನು ಆರಂಭಿಸಿದೆ. ಅದರ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲು ₹139.53 ಕೋಟಿ ಬಜೆಟ್ ಹಂಚಿಕೆ ಮಾಡಲಾಗಿದೆ.

ಇದರ ಅಡಿಯಲ್ಲಿ 148 ತಾಲ್ಲೂಕು ಆಸ್ಪತ್ರೆಗಳು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 41 ಸಮುದಾಯ ಆರೋಗ್ಯ ಕೇಂದ್ರಗಳಿಗೆ ತಜ್ಞ ವೈದ್ಯರನ್ನು ನೇಮಿಸುವುದು, ಗರ್ಭಿಯಣಿಯರಿಗೆ ಪ್ರೋತ್ಸಾಹ ಧನ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವುದು, ತುರ್ತು ಪ್ರಕರಣಗಳ ನಿರ್ವಹಣೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಫಲಾನುಭವಿ ಪ್ಯಾಕೇಜ್ ಅನ್ನು ಹೆಚ್ಚಿಸುವುದೂ ಸೇರಿದಂತೆ 13 ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೆತ್ತಿಕೊಳ್ಳಲಿದೆ.

ಸಾವಿಗೆ ಕಾರಣಗಳು

ಅಧಿಕ ರಕ್ತಸ್ರಾವ

ಗರ್ಭಿಣಿಯಾಗಿದ್ದಾಗ ಅಧಿಕ ರಕ್ತದೊತ್ತಡ ಹಾಗೂ ಅದರಿಂದ ಉಂಟಾಗುವ ಇತರ ಆರೋಗ್ಯ ಸಮಸ್ಯೆಗಳು

ಸೋಂಕುಗಳು

ಗರ್ಭಪಾತಗಳು

ಥ್ರಂಬೋಸಿಸ್ (ನರದಲ್ಲಿ ರಕ್ತಹೆಪ್ಪುಗಟ್ಟುವಿಕೆ) ಮತ್ತು ಎಂಬಾಲಿಸಮ್ (ಗರ್ಭಕೋಶದಲ್ಲಿನ ದ್ರವವು ದೇಹದ ರಕ್ತನಾಳಗಳಿಗೆ ಸೇರಿ ರಕ್ತದ ಹರಿಯುವಿಕೆಗೆ ತಡೆ ಒಡ್ಡುವುದು)

ವಿವಿಧ ಕಾಯಿಲೆಗಳು

ಆಸ್ಪತ್ರೆಗೆ ಕರೆದೊಯ್ಯದೆ ಮನೆಗಳಲ್ಲೇ ಹೆರಿಗೆ ಮಾಡಿಸುವುದು

ಹೆರಿಗೆ ಪೂರ್ವ, ಪ್ರಸವದ ನಂತರದ ಆರೈಕೆ ಮತ್ತು ಮೇಲ್ವಿಚಾರಣೆಯಲ್ಲಿನ ಕೊರತೆ

ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆ ನಂತರದಲ್ಲಿ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಯನ್ನು ಸಕಾಲದಲ್ಲಿ ಗುರುತಿಸುವಲ್ಲಿ ವೈಫಲ್ಯ

ಕೆಳ ಹಂತದ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ, ಮೂಲಸೌಕರ್ಯಗಳ ಕೊರತೆ

ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯ

ತಡೆಯುವುದು ಹೇಗೆ?

ಹೆರಿಗೆ ಸಮಯ ಮತ್ತು ನಂತರದಲ್ಲಿ ತಾಯಂದಿರ ಸಾವನ್ನು ತಡೆಯಲು ಏನೇನು ಮಾಡಬಹುದು ಎಂಬುದನ್ನು ಆರೋಗ್ಯ ಇಲಾಖೆ ನೇಮಿಸಿದ್ದ ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯು ತನ್ನ ಮಧ್ಯಂತರ ವರದಿಯಲ್ಲಿ ಪಟ್ಟಿ ಮಾಡಿದೆ.

ಗರ್ಭಾವಸ್ಥೆಯಲ್ಲಿ ಮತ್ತು ಮಗುವಿನ ಜನನದ ಸಮಯದಲ್ಲಿ ಗುಣಮಟ್ಟದ ಮಾತೃತ್ವ ಆರೈಕೆಯನ್ನು ಖಚಿತಪಡಿಸಿಕೊಳ್ಳಬೇಕು

ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳ ಅಡಿಯಲ್ಲಿ ಗುರುತಿಸಲಾದ ನ್ಯೂನತೆಗಳನ್ನು ಸರಿಪಡಿಸಿ ಆರೋಗ್ಯ ಸಂಸ್ಥೆಗಳನ್ನು ಬಲಪಡಿಸಬೇಕು

ಸೇವಾ ಪೂರೈಕೆದಾರರ ಸಾಮರ್ಥ್ಯ ಹೆಚ್ಚಿಸಬೇಕು

ಮೇಲ್ವಿಚಾರಣೆ ಮತ್ತು ಆಡಳಿತ ವ್ಯವಸ್ಥೆಯನ್ನು ಸುಧಾರಿಸಬೇಕು

ಉತ್ತರದಲ್ಲಿ ಹೆಚ್ಚು, ದಕ್ಷಿಣ ರಾಜ್ಯಗಳಲ್ಲಿ ಕಡಿಮೆ

ದೇಶದಲ್ಲಿ ತಾಯಂದಿರ ಮರಣದ ಸ್ಥಿತಿಯನ್ನು ಅವಲೋಕಿಸಿ ಹೇಳುವುದಾದರೆ, ಉತ್ತರ ಭಾರತದಲ್ಲಿ ಹೆರಿಗೆಯ ಸಮಯದಲ್ಲಿ ಮತ್ತು ನಂತರ ಮೃತಪಡುತ್ತಿರುವ ತಾಯಂದಿರ ಸಂಖ್ಯೆ ಹೆಚ್ಚಿದೆ. ದಕ್ಷಿಣ ಭಾರತದಲ್ಲಿ ಈ ಪ್ರಮಾಣ ಕಡಿಮೆ ಇದೆ. 2021–23ರ ಮಾದರಿ ನೋಂದಣಿ ವ್ಯವಸ್ಥೆ (ಎಸ್ಆರ್ಎಸ್) ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ ಲಕ್ಷ ಜನನಕ್ಕೆ ತಾಯಂದಿರ ಸಾವಿನ ಪ್ರಮಾಣ 88ರಷ್ಟಿದೆ.

ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಕಡಿಮೆಯಾಗುತ್ತಿದ್ದರೂ ಉತ್ತರ ಭಾರತದ ದೊಡ್ಡ ದೊಡ್ಡ ರಾಜ್ಯಗಳಲ್ಲಿ ತಾಯಂದಿರು ದೊಡ್ಡ ಸಂಖ್ಯೆಯಲ್ಲಿ ಮರಣ ಹೊಂದುತ್ತಿರುವುದರಿಂದ ದೇಶದಲ್ಲಿ ಒಟ್ಟಾರೆ ಪ್ರಮಾಣ ಹೆಚ್ಚಿದೆ.

2021–23ರ ಅಂಕಿ ಅಂಶ ಪ್ರಕಾರ ಒಡಿಶಾದಲ್ಲಿ ಈ ಪ್ರಮಾಣ ಗರಿಷ್ಠ 153 ಇದೆ. ಛತ್ತೀಸಗಢ ಎರಡನೇ ಸ್ಥಾನದಲ್ಲಿದೆ. ಅಲ್ಲಿ ಒಂದು ಲಕ್ಷ ಶಿಶುಗಳು ಜನಿಸಿದರೆ 146 ತಾಯಂದಿರು ಮೃತಪಡುತ್ತಿದ್ದಾರೆ. ಮೂರನೇ ಸ್ಥಾನದಲ್ಲಿರುವ ಮಧ್ಯಪ್ರದೇಶದಲ್ಲಿ ತಾಯಂದಿರ ಸಾವಿನ ಪ್ರಮಾಣ 142 ಇದೆ. ಉತ್ತರ ಪ್ರದೇಶ (141) ಮೂರನೇ ಸ್ಥಾನದಲ್ಲಿದೆ. ಪುಟ್ಟ ರಾಜ್ಯ ಅಸ್ಸಾಂನಲ್ಲಿ ಈ ಪ್ರಮಾಣ 110 ಇದೆ.

ದಕ್ಷಿಣದ ಐದು ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ತಾಯಂದಿರ ಸಾವಿನ ಪ್ರಮಾಣ ಹೆಚ್ಚಿದೆ. ಐದು ರಾಜ್ಯಗಳ ಒಟ್ಟಾರೆ ಪ್ರಮಾಣ 42 ಇದೆ. ರಾಜ್ಯದಲ್ಲಿ 2020–22ರಲ್ಲಿ 58 ಇದ್ದರೆ, 2021–23ರಲ್ಲಿ ಇದು 68ಕ್ಕೆ ಏರಿದೆ. ಆರೋಗ್ಯ ಇಲಾಖೆಯ ಆಂತರಿಕ ವಿಶ್ಲೇಷಣೆ ಪ್ರಕಾರ, 2024–25ನೇ ಸಾಲಿನಲ್ಲಿ ಎಂಎಂಆರ್ 57ಕ್ಕೆ ಇಳಿದಿದೆ.

ಪ್ರತಿ ಎರಡು ನಿಮಿಷಕ್ಕೆ ಒಬ್ಬ ಬಾಣಂತಿ ಸಾವು

ಪ್ರಸವ ಪೂರ್ವದಲ್ಲಿ ಮತ್ತು ಪ್ರಸವದ ವೇಳೆ ತಾಯಂದಿರ ಸಾವಿನ ಪ್ರಮಾಣವು ಜಾಗತಿಕ ಮಟ್ಟದಲ್ಲಿಯೂ ಕಳವಳಕಾರಿ ವಿಚಾರವಾಗಿದೆ. 2000 ಮತ್ತು 2023ರ ನಡುವೆ ಎಂಎಂಆರ್ ಶೇ 40ರಷ್ಟು ಕಡಿಮೆ ಆಗಿದೆ. ಆದರೂ, ಜಗತ್ತಿನಲ್ಲಿ ಪ್ರತಿ ಎರಡು ನಿಮಿಷಕ್ಕೆ ಒಬ್ಬ ಬಾಣಂತಿ ಮರಣ ಹೊಂದುತ್ತಿದ್ದಾರೆ. ಹೆರಿಗೆ ವೇಳೆ ಪ್ರತಿ ದಿನ 700ಕ್ಕೂ ಹೆಚ್ಚು ಮಹಿಳೆಯರು (2023ರ ಅಂಕಿಅಂಶ) ಸಾಯುತ್ತಿದ್ದು, ಈ ಸಾವುಗಳನ್ನು ತಡೆಯಬಹುದಿತ್ತು; ಬಾಣಂತಿಯರ ಹೆಚ್ಚು ಸಾವುಗಳು ಕೆಳ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಸಂಭವಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ.

ಸಹರಾ ಮರುಭೂಮಿಯ ದಕ್ಷಿಣದಲ್ಲಿರುವ ದೇಶಗಳಲ್ಲಿ ಶೇ 70ರಷ್ಟು ಸಾವುಗಳು ಸಂಭವಿಸುತ್ತಿದ್ದರೆ, ದಕ್ಷಿಣ ಏಷ್ಯಾದಲ್ಲಿ ಶೇ 17ರಷ್ಟು ಸಾವುಗಳು ವರದಿಯಾಗಿವೆ. ಪರಿಣತ ವೈದ್ಯರು ಮತ್ತು ಸೌಲಭ್ಯಗಳನ್ನು ಕಲ್ಪಿಸು
ವುದರ ಮೂಲಕ ಸಾವುಗಳನ್ನು ತಡೆಯಬಹುದು ಎಂದು ಡಬ್ಲ್ಯುಎಚ್ಒ ಅಭಿಪ್ರಾಯಪಟ್ಟಿದೆ. 2000–2023ರ ನಡುವೆ ಪೂರ್ವ ಯುರೋಪ್ ಮತ್ತು ದಕ್ಷಿಣ ಏಷ್ಯಾದಲ್ಲಿ ಎಂಎಂಆರ್ನಲ್ಲಿ ಭಾರಿ ಕುಸಿತ ಆಗಿದೆ.
ಬಾಣಂತಿಯರ ಸಾವಿಗೆ ಮುಖ್ಯ ಕಾರಣ ವೈದ್ಯಕೀಯ ಸೌಲಭ್ಯದ ಕೊರತೆ ಎಂದು ಡಬ್ಲ್ಯುಎಚ್ಒ ಹೇಳಿದೆ.

ಆಧಾರ: ಆರೋಗ್ಯ ಇಲಾಖೆ, ಎಸ್ಆರ್ಎಸ್ ವರದಿಗಳು, ವಿಶ್ವ ಆರೋಗ್ಯ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.