ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಅರೇಬಿಯಾ ಉಪಖಂಡ– ಮರಳುಗಾಡಿನಲ್ಲಿ ಮಹಾಮಳೆ
ಆಳ–ಅಗಲ: ಅರೇಬಿಯಾ ಉಪಖಂಡ– ಮರಳುಗಾಡಿನಲ್ಲಿ ಮಹಾಮಳೆ
ಯುಎಇ ಸೇರಿದಂತೆ ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಏಷ್ಯಾದ ದೇಶಗಳಲ್ಲಿ ಸದಾ ಒಣಹವೆ ಇರುತ್ತದೆ. ವರ್ಷವೊಂದರಲ್ಲಿ ತೀರಾ ಕಡಿಮೆ ಎನ್ನುವಷ್ಟು ಮಳೆಯಾಗುತ್ತದೆ.
Published 18 ಏಪ್ರಿಲ್ 2024, 0:29 IST
Last Updated 18 ಏಪ್ರಿಲ್ 2024, 0:29 IST
ಅಕ್ಷರ ಗಾತ್ರ

ಯುಎಇ ಸೇರಿದಂತೆ ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಏಷ್ಯಾದ ದೇಶಗಳಲ್ಲಿ ಸದಾ ಒಣಹವೆ ಇರುತ್ತದೆ. ವರ್ಷವೊಂದರಲ್ಲಿ ತೀರಾ ಕಡಿಮೆ ಎನ್ನುವಷ್ಟು ಮಳೆಯಾಗುತ್ತದೆ. ಆದರೆ ಅದಕ್ಕೆ ಅಪವಾದ ಎಂಬಂತೆ ಹಲವು ವರ್ಷಗಳಿಗೆ ಒಮ್ಮೆ ನೆಲವೇ ಕೊಚ್ಚಿ ಹೋಗುವಷ್ಟು ಮಳೆಯಾಗುತ್ತದೆ. ಒಂದೆರಡು ವರ್ಷಗಳಲ್ಲಿ ಆಗುವಷ್ಟು ಮಳೆ ಒಂದೇ ದಿನದಲ್ಲಿ ಸುರಿದುಬಿಡುತ್ತದೆ. ಮಂಗಳವಾರ ಯುಎಇಯಲ್ಲಿ ಆಗಿದ್ದೂ ಇಂಥದ್ದೇ ಮಳೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ. ದುಬೈ ಮಾತ್ರವಲ್ಲ ಪಕ್ಕದ ಸೌದಿ ಅರೇಬಿಯಾ, ಒಮಾನ್‌, ಯೆಮನ್, ಕುವೈತ್, ಜೋರ್ಡನ್‌ನಲ್ಲೂ ಒಂದು ವಾರದಿಂದೀಚಿಗೆ ಇಂಥದ್ದೇ ಮಳೆ ಸುರಿಯುತ್ತಿದೆ. ಈ ಹಿಂದೆಯೂ ಇಂಥ ಮಳೆಯಾಗಿದ್ದರೂ ಈಗ ಸುರಿಯುತ್ತಿರುವ ಮಳೆಯ ಪ್ರಮಾಣ ವಿಪರೀತ ಎನಿಸುವಷ್ಟು ಇದೆ. ಇದಕ್ಕೆ ಕಾರಣಗಳೇನು ಎಂಬುದನ್ನು ವಿವರಿಸಲು ವಿಜ್ಞಾನಿಗಳು ಯತ್ನಿಸಿದ್ದಾರೆ.

1975ರ ಫೆಬ್ರುವರಿ 16–17ರ ಮಧ್ಯರಾತ್ರಿಯಲ್ಲಿ ಸೌದಿ ಅರೇಬಿಯಾದ ಪೂರ್ವ ಭಾಗದಲ್ಲಿ ಮತ್ತು ಜೋರ್ಡನ್‌ನ ಭಾಗದಲ್ಲಿ ಕೆಲವೇ ಗಂಟೆಗಳಲ್ಲಿ 10 ಸೆಂಟಿಮೀಟರ್‌ಗಿಂತಲೂ ಹೆಚ್ಚು ಮಳೆ ಸುರಿದು, ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. 1977ರಲ್ಲಿ ಮತ್ತು 1981ರಲ್ಲಿ ಅಂಥದ್ದೇ ಮಳೆ ಮರುಕಳಿಸಿತ್ತು. ಮಧ್ಯಪ್ರಾಚ್ಯದ ದೇಶಗಳಲ್ಲಿ ಮಳೆಮಾಪನ ಆರಂಭವಾಗಿದ್ದು 1949ರಲ್ಲಿ. 1975, 1977 ಮತ್ತು 1981ರಲ್ಲಿ ಸುರಿದ ವಿಪರೀತ ಮಳೆಯು 1949ರಿಂದ ಆವರೆಗೆ ಸುರಿದ ಅತಿಹೆಚ್ಚಿನ ಮಳೆಯಾಗಿತ್ತು. ಮತ್ತು ಈ ಎಲ್ಲಾ ಮಳೆಗಳು ಫೆಬ್ರುವರಿ–ಮಾರ್ಚ್‌–ಏಪ್ರಿಲ್‌ ಅವಧಿಯಲ್ಲಿ ಸಂಭವಿಸಿದ್ದವು. ಆ ರೀತಿಯ ಮಳೆ ಆಗುವುದು ಏಕೆ ಎಂಬುದನ್ನು ಕಂಡುಕೊಳ್ಳುವ ಯತ್ನ ಆರಂಭವಾಗಿದ್ದು ಆನಂತರವೇ. ಅಂತಹ ಮಳೆ ಆಗುವುದು ಏಕೆ ಎಂಬುದನ್ನು ವಿವರಿಸಿಕೊಳ್ಳಲು ವಿಜ್ಞಾನಿಗಳಿಗೆ ಸಾಧ್ಯವಾಗಿದ್ದು ಹಲವು ವರ್ಷಗಳ ಅಧ್ಯಯನದ ನಂತರವೇ.

ಈ ಅಧ್ಯಯನದ ಫಲವಾಗಿ 1985ರಲ್ಲಿ ವಿಜ್ಞಾನಿಗಳು ಒಂದು ವಿವರಣೆ ನೀಡಿದರು. ಆಫ್ರಿಕಾದ ಈಶಾನ್ಯ ಭಾಗದಿಂದ ಅರೇಬಿಯಾ ಉಪಕಂಡ ಮತ್ತು ಪಶ್ಚಿಮ ಏಷ್ಯಾದತ್ತ ಹವಾ ಮಾರುತಗಳು (ಜೆಟ್‌ ಸ್ಟ್ರೀಂ) ಬೀಸುತ್ತವೆ. ಸಾಮಾನ್ಯವಾಗಿ ಈ ಹವಾ ಮಾರುತಗಳು ಅಕ್ಟೋಬರ್‌ನಿಂದ ಜೂನ್‌ವರೆಗೆ ಹೆಚ್ಚು ಸಕ್ರಿಯವಾಗಿರುತ್ತವೆ. ಮಧ್ಯಪ್ರಾಚ್ಯದ ದೇಶಗಳಿಗೆ ವರ್ಷದಲ್ಲಿ ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಮಳೆ ತರುವುದೂ ಈ ಹವಾ ಮಾರುತಗಳೇ. ಆದರೆ ಭೂಮಿಯ ಮೇಲ್ಮನಲ್ಲಿ ಹವಾಮಾನ ಬದಲಾಗುವ ಕಾರಣದಿಂದ ಈ ಹವಾ ಮಾರುತಗಳು ಆಗೊಮ್ಮೆ–ಈಗೊಮ್ಮೆ ವಿಪರೀತ ಮಳೆ ಸುರಿಸುತ್ತವೆ ಎಂದು ವಿಜ್ಞಾನಿಗಳು ವಿವರಿಸಿದ್ದರು. 

ಸ್ವಲ್ಪ ಪ್ರಮಾಣದ ತೇವಾಂಶದಿಂದ ಕೂಡಿರುವ ಈ ಹವಾ ಮಾರುತಗಳು ಹೊರ್ಮುಜ್‌ ಕೊಲ್ಲಿ ದಾಟುವಾಗ, ಇನ್ನಷ್ಟು ಆವಿಯನ್ನು ಕ್ರೋಡೀಕರಿಸಿಕೊಳ್ಳುತ್ತವೆ. ಅರೇಬಿಯಾ ಉಪಖಂಡವನ್ನು ಮುಟ್ಟುವಾಗ ಅಲ್ಪ ಪ್ರಮಾಣದ ಮಳೆ ತರುತ್ತವೆ. ಆದರೆ ಅರೇಬಿಯಾ ಉ‍ಪಖಂಡದ ಮೇಲೆ ಉಷ್ಣಾಂಶ ಹೆಚ್ಚಾಗಿದ್ದರೆ ಈ ಆವಿಯ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತದೆ. ಅತಿಉಷ್ಣಾಂಶದ ಕಾರಣದಿಂದ ಅದೇ ಸಂದರ್ಭದಲ್ಲಿ ಅರಬ್ಬಿ ಸಮುದ್ರದ ವಾಯವ್ಯ ಭಾಗದಲ್ಲಿ (ಯೆಮನ್‌ ಮತ್ತು ಒಮಾನ್‌ ಕರಾವಳಿ ಬಳಿ) ವಾಯುಭಾರ ಕುಸಿದಿರುತ್ತದೆ. ಇದು ಸಹ ವಾತಾವರಣದಲ್ಲಿ ನೀರಾವಿಯ ಪ್ರಮಾಣವನ್ನು ಉಂಟು ಮಾಡುತ್ತದೆ. ಜತೆಗೆ ದಟ್ಟ ಮೋಡಗಳನ್ನು ಸೃಷ್ಟಿಸುತ್ತದೆ. ಇವಿಷ್ಟೇ ಸಂಭವಿಸಿದರೆ ಅತಿಮಳೆಯಾಗುವುದಿಲ್ಲ. ಜತೆಗೆ ಉತ್ತರ ಧ್ರುವದಿಂದ ದಕ್ಷಿಣ ಭಾಗಕ್ಕೆ ಬೀಸುವ ಶೀತ ಮಾರುತಗಳೂ ಮಧ್ಯಪ್ರಾಚ್ಯವನ್ನು ತಲುಪಬೇಕು. ಹೀಗೆ ಪೂರ್ವದಿಂದ ಬರುವ ಹವಾ ಮಾರುತ, ಅರಬ್ಬಿ ಸಮುದ್ರದಿಂದ ವಾಯವ್ಯ ದಿಕ್ಕಿಗೆ ಚಲಿಸುವ ವಾಯುಭಾರ ಕುಸಿತದ ಸ್ಥಿತಿ ಮತ್ತು ಉತ್ತರದಿಂದ ದಕ್ಷಿಣದತ್ತ ಬೀಸುವ ಶೀತ ಮಾರುತ, ಈ ಮೂರೂ ಮಧ್ಯಪ್ರಾಚ್ಯದಲ್ಲಿ ಒಗ್ಗೂಡಬೇಕು. ಅವು ಪರಸ್ಪರ ಸಂಘರ್ಷಕ್ಕೆ ಈಡಾದಾಗ ಅಲ್ಲಿನ ನೀರಾವಿಯ ಸಾಂದ್ರತೆ ಹೆಚ್ಚಾಗುತ್ತದೆ, ಅಪಾರವಾದ ಮಳೆ ಸುರಿಯುತ್ತದೆ. ಒಂದಿಡೀ ವರ್ಷದಲ್ಲಿ ಸುರಿಯಬೇಕಾದಷ್ಟು ಮಳೆ ಕೆಲವೇ ಗಂಟೆಗಳಲ್ಲಿ ಸುರಿದು ಬಿಡುತ್ತದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡರು.

ಈಗ ಯುಎಇಯಲ್ಲಿ ಮಂಗಳವಾರ ಸುರಿದ ಮತ್ತು ಅಕ್ಕಪಕ್ಕದ ದೇಶಗಳಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೂ ಇಂಥದ್ದೇ ಹವಾಮಾನ ವಿದ್ಯಮಾನವೇ ಕಾರಣ ಎಂದು ಯುಎಇ ಮತ್ತು ಅಮೆರಿಕದ ಹವಾಮಾನ ಇಲಾಖೆಗಳ ವಿಜ್ಞಾನಿಗಳು ಹೇಳಿದ್ದಾರೆ. 2022ರಲ್ಲಿ, 2023ರಲ್ಲಿ ಮತ್ತು ಈಗ 2024ರಲ್ಲೂ ಇಂಥ ಮಳೆ ಸುರಿದಿದೆ. ವರ್ಷದಿಂದ ವರ್ಷಕ್ಕೆ ಇಂತಹ ಮಳೆಯ ತೀವ್ರತೆ ಹೆಚ್ಚಾಗುತ್ತಲೇ ಇದೆ. ಹೀಗೆ ಇಂತಹ ಮಳೆಯ ತೀವ್ರತೆ ಹೆಚ್ಚಾಗಲು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯೇ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅತಿಮಳೆಯ ಅಪರೂಪದ ವಿದ್ಯಮಾನ

ಅತಿಮಳೆಯ ಅಪರೂಪದ ವಿದ್ಯಮಾನ

‘ದುಬೈನಲ್ಲಿ ಪ್ರವಾಹ: ಮೋಡ ಬಿತ್ತನೆಯೇ ಕಾರಣವಲ್ಲ’

ಮೋಡ ಬಿತ್ತನೆ ಕಾರ್ಯವೇ ದುಬೈನಲ್ಲಾದ ಪ್ರವಾಹಕ್ಕೆ ಕಾರಣ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವು ಸುದ್ದಿ ಸಂಸ್ಥೆಗಳೂ ಮೋಡ ಬಿತ್ತನೆಯೇ ಕಾರಣ ಎಂದು ಅಂದಾಜಿಸಿ ವರದಿ ಮಾಡಿವೆ. ಆದರೆ, ಮೋಡ ಬಿತ್ತನೆ ಕುರಿತು ಕೆಲಸ ಮಾಡುತ್ತಿರುವವರು, ವಿಜ್ಞಾನಿಗಳು ಹೇಳುತ್ತಿರುವುದೇ ಬೇರೆ.

ದುಬೈನಂತಹ ನಗರಗಳಲ್ಲಿ ಏರುತ್ತಲೇ ಇರುವ ಜನಸಂಖ್ಯೆಯ ಕಾರಣದಿಂದಾಗಿ ಯುಎಇ ಸರ್ಕಾರವು ಮೋಡ ಬಿತ್ತನೆ ಕಾರ್ಯವನ್ನು ಕಳೆದ ಕೆಲವು ದಶಕಗಳಿಂದ ಮಾಡುತ್ತಿದೆ. ಇದಕ್ಕಾಗಿ ಇಲಾಖೆಯನ್ನೂ ಅದಕ್ಕೆ ಬೇಕಾದ ವ್ಯವಸ್ಥೆಯೊಂದನ್ನು ಸರ್ಕಾರ ರೂಪಿಸಿಕೊಂಡಿದೆ. ಈ ವರ್ಷದ ಆರಂಭದಿಂದಲೂ ಮೋಡ ಬಿತ್ತನೆ ಕಾರ್ಯವನ್ನು ಯುಎಇನ ಹವಾಮಾನ ಇಲಾಖೆ ನಡೆಸಿದೆ. ಆದರೆ, ಮಂಗಳವಾರ ದುಬೈನಾದ್ಯಂತ ಸುರಿದ ಮಳೆಗೂ, ಉಂಟಾದ ಪ್ರವಾಹಕ್ಕೂ ಮೋಡ ಬಿತ್ತನೆಯೇ ಕಾರಣ ಎಂದು ಹೇಳಲಾಗುವುದಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಮೋಡ ಬಿತ್ತನೆ ಕಾರ್ಯದಿಂದ ಮಳೆ ಬರುತ್ತದೆ ನಿಜ. ಆದರೆ, ಕರಾರುವಕ್ಕಾಗಿ ಇಷ್ಟೇ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ ಎಂಬುದಕ್ಕೆ ಈವರೆಗೂ ಉತ್ತರ ದೊರೆತಿಲ್ಲ. ಯುಎಇನ ಹವಾಮಾನ ಇಲಾಖೆಯೇ ಹೇಳುವಂತೆ ಮೋಡ ಬಿತ್ತನೆಯಿಂದ ಮಳೆ ಪ್ರಮಾಣದಲ್ಲಿ ಶೇ 10ರಿಂದ
ಶೇ 30ರಷ್ಟಕ್ಕೆ ಏರಿಕೆಯಾಗಲಿದೆ. ‘ಮೋಡ ಬಿತ್ತನೆಯು ಆ ಪ್ರದೇಶದಲ್ಲಿ ಎಷ್ಟು ಮಳೆಯಾಗುತ್ತದೆಯೊ ಅದಕ್ಕಿಂತ ತುಸು ಹೆಚ್ಚಿನ ಮಳೆಯನ್ನು ಸುರಿಸುತ್ತದೆಯೇ ವಿನಾ ಪ್ರವಾಹ ಉಂಟು ಮಾಡುವುದಿಲ್ಲ’ ಎನ್ನುತ್ತಾರೆ ಆಸ್ಟ್ರೇಲಿಯಾದ ಇಂಧನ, ಹವಾಮಾನ ಮತ್ತು ವಿಪತ್ತು ಪರಿಹಾರದ ರಾಷ್ಟ್ರೀಯ ವಿಶ್ವವಿದ್ಯಾಲಯದ ವಿಪತ್ತು ಪರಿಹಾರ ವಿಭಾಗದ ಮುಖ್ಯಸ್ಥ ರೊಸ್ಲಿನ್‌ ಪ್ರಿನ್ಸ್‌ಲೇ.

ಒಮಾನ್‌ನಲ್ಲಿಯೂ ಭಾರಿ ಮಳೆಯಾಗಿದೆ. 18 ಮಂದಿ ಮೃತಪಟ್ಟಿದ್ದಾರೆ. ಇರಾನ್‌ನ ದಕ್ಷಿಣ ಭಾಗಗಳಲ್ಲಿಯೂ ಮಳೆಯಾಗುತ್ತಿದೆ. ಅಫ್ಗಾನಿಸ್ತಾನದಲ್ಲಿಯೂ ಮಳೆ ಸುರಿಯುತ್ತಿದೆ. ‘ದುಬೈನಲ್ಲಾದ ಪ್ರವಾಹಕ್ಕೆ ಮೋಡ ಬಿತ್ತನೆ ಕಾರಣವಾದರೆ, ಪಕ್ಕದ ಒಮಾನ್‌ನಲ್ಲಿ ಮೋಡ ಬಿತ್ತನೆ ನಡೆಸಿಲ್ಲ. ಹಾಗಾದರೆ, ಅಲ್ಲಿ ಳೆಯಾಗುತ್ತಿರುವುದೇಕೆ’ ಎಂದು ಪ್ರಶ್ನಿಸುತ್ತಾರೆ ಯುಎಇನ ಮೋಡ ಬಿತ್ತನೆ ಕಾರ್ಯದ ಕುರಿತು ವರದಿ ಮಾಡುತ್ತಿರುವ ಅಮಿತ್‌ ಕಟ್ವಾಲಾ.

ಅರೇಬಿಯಾ ಉಪಖಂಡದ ಮೇಲೆ ರೂಪುಗೊಂಡಿರುವ ಮೋಡಗಳು

ಅರೇಬಿಯಾ ಉಪಖಂಡದ ಮೇಲೆ ರೂಪುಗೊಂಡಿರುವ ಮೋಡಗಳು

ಉಪಗ್ರಹ ಚಿತ್ರ

ಎಂದಿನ ಚರ್ಚೆ

ಯುಎಇನಲ್ಲಿ ಇತ್ತೀಚಿಗೆ ಪ್ರತಿ ವರ್ಷವೂ ಹಿಂದಿನ ವರ್ಷಕ್ಕಿಂದ ಹೆಚ್ಚಿನ ಪ್ರಮಾಣದ ಮಳೆ ಸುರಿಯುತ್ತಿದೆ, ಪ್ರವಾಹವೂ ಉಂಟಾಗುತ್ತಿದೆ. ಹೀಗೆ ಹೆಚ್ಚಿನ ಮಳೆ ಸುರಿದಾಗಲೆಲ್ಲಾ, ಮೋಡ ಬಿತ್ತನೆಯಿಂದಲೇ ಹೆಚ್ಚಿಗೆ ಮಳೆಯಾಗಿದೆ ಎನ್ನಲಾಗುತ್ತಿದೆ. ಈ ಕುರಿತು ಯುಎಇನ ಪ್ರಮುಖ ಸುದ್ದಿ ಸಂಸ್ಥೆಗಳು ಸುದ್ದಿಗಳನ್ನೂ ಪ್ರಕಟಿಸಿವೆ. ಹೀಗೆ ಸುದ್ದಿಯಾದಾಗಲೆಲ್ಲ, ‘ಯುಎಇನಲ್ಲಿನ ಮಳೆಗೆ ಹವಾಮಾನ ವೈಪರೀತ್ಯವೇ ಕಾರಣ’ ಎನ್ನುತ್ತಾರೆ ಹವಾಮಾನ ತಜ್ಞರು.


ದುಬೈನಲ್ಲಿ ಮಂಗಳವಾರ ಒಂದೇ ದಿನ ಸುರಿದ ಮಳೆದ ಪ್ರಮಾಣ 14 ಸೆಂ.ಮೀ. ಇದು ದುಬೈಯನ್ನು ಪ್ರವಾಹಕ್ಕೆ ದೂಡಿದೆ. ನಗರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಲು ಪ್ರಮುಖ ಕಾರಣವಾಗಿದ್ದು, ನಗರದಲ್ಲಿ ಮಳೆನೀರು ಕಾಲುವೆ ವ್ಯವಸ್ಥೆ ಇಲ್ಲದಿರುವುದು.

ಮೂಲತಃ ಯುಎಇ ಒಂದು ಮರಳುಗಾಡು ಪ್ರದೇಶ. ಇಲ್ಲೆಲ್ಲಾ ಮಳೆಯಾಗುವುದು ತೀರಾ ಅಪರೂಪ ಮತ್ತು ಅತಿ ಸಣ್ಣ ಪ್ರಮಾಣದ ಮಳೆ ಸುರಿಯುತ್ತದೆ. ಇದೇ ಕಾರಣಕ್ಕೆ ಯುಎಇ ದೇಶದಲ್ಲಿ ಮಳೆನೀರು ಹರಿದು ಹೋಗುವ ವ್ಯವಸ್ಥೆಯನ್ನೂ ರೂಪಿಸಿಕೊಂಡಿಲ್ಲ. ಎಲ್ಲವೂ ಕಾಂಕ್ರೀಟ್‌ಮಯ ಪ್ರದೇಶ. ಇಷ್ಟೊಂದು ದೊಡ್ಡ ಪ್ರಮಾಣದ ಪ್ರವಾಹ ಕಾಣಿಸಿಕೊಂಡದ್ದು ಇದೇ ಕಾರಣಕ್ಕೆ. ದೇಶದಾದ್ಯಂತ ಪಂಪಿಂಗ್‌ ಕೇಂದ್ರಗಳಿವೆ. ರಸ್ತೆಯಲ್ಲಿ, ಮನೆಯಲ್ಲಿ ಮಳೆಯ ಕಾರಣದಿಂದಾಗಿ ನೀರು ತುಂಬಿಕೊಂಡರೆ, ಈ ಕೇಂದ್ರದವರು ದೊಡ್ಡ ದೊಡ್ಡ ಟ್ರಕ್‌ಗಳಲ್ಲಿ ಪ್ರವಾಹದ ನೀರನ್ನು ಎತ್ತಿಕೊಂಡು ಹೋಗುತ್ತಾರೆ. ದೇಶದಾದ್ಯಂತ ಇಂಥ ಸಾವಿರಾರು ಕೇಂದ್ರಗಳಿಗೆ, ಇದಕ್ಕಾಗಿಯೇ ಸಹಾಯವಾಣಿಯೂ ಇದೆ.

ಆದರೆ, ಯುಎಇ ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ದುಬೈ ಸೇರಿದಂತೆ ದೇಶದಲ್ಲೆಡೆ ಈ ಸಮಸ್ಯೆಯನ್ನು ಬಗೆಹರಿಸಿಕೊಂಡು, ಪಂಪಿಂಗ್‌ ಕೇಂದ್ರಗಳನ್ನು ಕಡಿಮೆ ಮಾಡಿಕೊಳ್ಳುವತ್ತ ಯೋಜನೆ ರೂಪಿಸಿಕೊಂಡಿದೆ. ಮಳೆನೀರು ಹರಿದು ಹೋಗಲೆಂದೇ ದೊಡ್ಡ ದೊಡ್ಡ ಸುರಂಗಗಳನ್ನು ಕೊರೆಯುವ, ಆ ಮೂಲಕ ಪ್ರವಾಹವನ್ನು ತಡೆಗಟ್ಟುವ ಯೋಜನೆಯನ್ನು ಈಗಾಗಲೇ ಕಾರ್ಯಗತಗೊಳಿಸುತ್ತಿದೆ.

–––––

ಆಧಾರ: ಅಮೆರಿಕದ ನ್ಯಾಷನಲ್‌ ಓಷ್ಯಾನಿಕ್‌ ಅಟ್ಮೋಸ್ಪಿಯರ್‌ ಅಡ್ಮಿಸ್ಟ್ರೇಷನ್‌ ವರದಿಗಳು, ಇಸ್ರೇಲ್‌ನ ಹೀಬ್ರೂ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್‌ ಆಫ್‌ ಅಟ್ಮಾಸ್ಪಿಯರ್‌ ಸೈನ್ಸ್‌ ವಿಭಾಗದ ಅಧ್ಯಯನ ವರದಿ–1985, ನ್ಯಾಷನಲ್‌ ಅಂಟಾರ್ಕ್ಟಿಕ್‌ ರಿಸರ್ಚ್‌ ಸೆಂಟರ್‌ನ ಅಧ್ಯಯನ ವರದಿ–2011, ರಾಯಿಟರ್ಸ್‌, ಎಪಿ, ಗಲ್ಫ್‌ ನ್ಯೂಸ್‌, ಯುಎಇ ಚರಂಡಿ ಯೋಜನೆಯ ವೆಬ್‌ಸೈಟ್‌, ಟೈಮ್‌ ಮ್ಯಾಗಜಿನ್‌

*****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT