ಅಮೆರಿಕ ಹಾಗೂ ಭಾರತ ಎರಡೂ ಪ್ರಬಲ ರಾಷ್ಟ್ರಗಳು. ಜಗತ್ತಿನ ದೊಡ್ಡಣ್ಣನಂತಿರುವ ಅಮೆರಿಕದೊಂದಿಗಿನ ಸಂಬಂಧ ಭಾರತಕ್ಕೆ ಮುಖ್ಯವಾಗಿದ್ದರೆ, ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಇರುವ ಭಾರತ, ಅಮೆರಿಕಕ್ಕೆ ಮುಖ್ಯ ಮಾರುಕಟ್ಟೆ. ವ್ಯಾಪಾರ ಸಂಘರ್ಷದ ನಡುವೆಯೂ ಎರಡು ದೇಶಗಳ ನಡುವೆ ಉತ್ತಮ ಸಂಬಂಧ ಇದೆ. ಇಷ್ಟಾದರೂ, ಹಟಮಾರಿ ಧೋರಣೆಯ ಟ್ರಂಪ್ ಅವರೊಂದಿಗೆ ಮೋದಿ ಅವರ ಮಾತುಕತೆಯಿಂದ ಸುಂಕ, ವಲಸೆ, ವ್ಯಾಪಾರ ಮುಂತಾದ ವಲಯಗಳಲ್ಲಿ ಭಾರತಕ್ಕೆ ಎಷ್ಟರಮಟ್ಟಿಗೆ ಅನುಕೂಲವಾಗಲಿದೆ ಎನ್ನುವ ಕುತೂಹಲ ಜನರಲ್ಲಿದೆ

ಪ್ರಧಾನಿ ನರೇಂದ್ರ ಮೋದಿ ಅವರು ಶ್ವೇತಭವನದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರುವಾರ (ಸ್ಥಳೀಯ ಕಾಲಮಾನ) ಭೇಟಿಯಾಗಲಿದ್ದಾರೆ. ಟ್ರಂಪ್ ಅವರೊಂದಿಗೆ ವ್ಯಾಪಾರ, ಸುಂಕ ಕಡಿತ, ಇಂಧನ ಮುಂತಾದ ವಿಚಾರಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸುವುದು ಭೇಟಿಯ ಪ್ರಮುಖ ಉದ್ದೇಶ. ಜತೆಗೆ, ಮೋದಿ ಅವರು ಟ್ರಂಪ್ ಸಂಪುಟದ ಕೆಲವು ಸಚಿವರು, ಉದ್ಯಮಿಗಳು ಮತ್ತು ಭಾರತೀಯ ಅಮೆರಿಕನ್ ಸಮುದಾಯದ ಪ್ರತಿನಿಧಿಗಳನ್ನೂ ಭೇಟಿಯಾಗಲಿದ್ದಾರೆ.

ಟ್ರಂಪ್ ಅಧಿಕಾರ ಸ್ವೀಕಾರ ಮಾಡಿದ ಮಾರನೇ ದಿನ (ಜ.21) ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಅದೇ ದಿನ ಕ್ವಾಡ್ ರಾಷ್ಟ್ರಗಳ ಸಭೆಯೂ ನಡೆದಿತ್ತು. ಟ್ರಂಪ್ ಅವರು ಎರಡನೇ ಬಾರಿ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ತಿಂಗಳ ಒಳಗಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಜಪಾನ್ ಪ್ರಧಾನಿ ಶಿಗೆರು ಇಶಿಬಾ ಮತ್ತು ಜೋರ್ಡನ್ ದೊರೆ ಎರಡನೇ ಅಬ್ದುಲ್ಲಾ ಅವರು ಶ್ವೇತಭವನಕ್ಕೆ ಭೇಟಿ ನೀಡಿದ್ದರು. ಅಮೆರಿಕಕ್ಕೆ ಭೇಟಿ ನೀಡುತ್ತಿರುವ ಜಾಗತಿಕ ನಾಯಕರ ಪೈಕಿ ಮೋದಿ ನಾಲ್ಕನೆಯವರು.

‘ಇದು ಟ್ರಂಪ್ ಅವರು ಭಾರತಕ್ಕೆ ನೀಡುತ್ತಿರುವ ಮಹತ್ವವನ್ನು ತೋರಿಸುತ್ತದೆ’ ಎಂದು ಶ್ವೇತಭವನ ಮಾಜಿ ಅಧಿಕಾರಿ ಲೀಸಾ ಕರ್ಟಿಸ್ ಹೇಳಿದ್ದಾರೆ. ಹಿಂದೂ ಮಹಾಸಾಗರ–ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಪಾತ್ರವು ಮಹತ್ವದ್ದಾಗಿದ್ದು, ಚೀನಾದೊಂದಿಗಿನ ಪೈಪೋಟಿಯಲ್ಲಿ ಅಮೆರಿಕದ ಪ್ರಮುಖ ಮಿತ್ರ ರಾಷ್ಟ್ರವಾಗಿದೆ ಎಂದೂ ಅವರು ಹೇಳಿದ್ದಾರೆ.

ಈ ಭೇಟಿ ಹಲವು ಕಾರಣಗಳಿಗೆ ಮಹತ್ವದ್ದಾಗಿದೆ. ಇದು ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ದಿಕ್ಕು ತೋರಲಿದೆ ಎಂದು ಹೇಳಲಾಗುತ್ತಿದೆ. ‘ಅಮೆರಿಕವೇ ಮೊದಲು’ ನೀತಿ ಪ್ರತಿಪಾದಕ ಡೊನಾಲ್ಡ್ ಟ್ರಂಪ್ ಅವರ ಸುಂಕ ಹೇರುವ ಬೆದರಿಕೆ ನಡುವೆ ಈ ಭೇಟಿ ನಡೆಯುತ್ತಿರುವುದು ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

ಭಾರತವು ತನ್ನ ವಸ್ತುಗಳಿಗೆ ಹೆಚ್ಚು ಸುಂಕ ವಿಧಿಸುತ್ತದೆ ಎನ್ನುವುದು ಟ್ರಂಪ್ ಅವರ ಮುಖ್ಯ ತಕರಾರು. ಜೊತೆಗೆ ಭಾರತ ತನ್ನನ್ನು ಬಿಟ್ಟು ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದು ಕೂಡ ಅದರ ಕಣ್ಣು ಕೆಂಪಾಗಿಸಿದೆ. ಈ ವಿಚಾರಗಳೇ ಮಾತುಕತೆ ಸಂದರ್ಭದಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿವೆ ಎಂದು ಹೇಳಲಾಗುತ್ತಿದೆ.

ಚೀನಾ ವಿಚಾರವೂ ಮಾತುಕತೆಯಲ್ಲಿ ಪ್ರಸ್ತಾಪವಾಗಲಿದೆ. ಅಮೆರಿಕದೊಂದಿಗೆ ಹಲವು ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ನಡೆಸುತ್ತಿರುವ ಚೀನಾದೊಂದಿಗೆ ಭಾರತದ ಸಂಬಂಧವೂ ಅಷ್ಟಕ್ಕಷ್ಟೇ. ಚೀನಾವನ್ನು ಸಮರ್ಥವಾಗಿ ಎದುರಿಸಲು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದುವುದು ಅಗತ್ಯ ಎಂಬುದನ್ನು ಅಮೆರಿಕ ಮನಗಂಡಿದೆ. ಹೀಗಾಗಿ, ಚೀನಾವನ್ನು ಎದುರಿಸುವ ಮಾರ್ಗಗಳ ಬಗ್ಗೆ ಚರ್ಚೆ ನಡೆಯಲಿದೆ. ಜಗತ್ತಿನ ಹಲವು ರಾಷ್ಟ್ರಗಳ ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡುವ ನಿಟ್ಟಿನಲ್ಲಿಯೂ ಈ ಭೇಟಿ ಮಹತ್ವದ್ದು ಎನ್ನುವ ವಿಶ್ಲೇಷಣೆ ಇದೆ.

ಉಕ್ರೇನ್ ಹಾಗೂ ಗಾಜಾದಲ್ಲಿ ನಡೆಯುತ್ತಿರುವ ಯುದ್ಧಗಳನ್ನು ನಿಲ್ಲಿಸುವ ವಿಚಾರದಲ್ಲಿ ಭಾರತದ ಪಾತ್ರದ ಬಗ್ಗೆಯೂ ಮಾತುಕತೆಯಲ್ಲಿ ಪ್ರಸ್ತಾಪವಾಗುವ ಸಂಭವ ಇದೆ. ಮಧ್ಯ ಏಷ್ಯಾದೊಂದಿಗೆ ಉತ್ತಮ ಸಂಪರ್ಕ ವ್ಯವಸ್ಥೆ ರೂಪಿಸಿಕೊಳ್ಳುವುದರ ಭಾಗವಾಗಿ ಭಾರತವು ಇರಾನಿನ ಛಾಬಹಾರ್ನಲ್ಲಿ ಬಂದರು ನಿರ್ಮಾಣ ಮಾಡುತ್ತಿದೆ. ಆದರೆ, ಇದನ್ನು ಅಮೆರಿಕ ವಿರೋಧಿಸುತ್ತಿದ್ದು, ಭಾರತದ ವಿರುದ್ಧ ನಿರ್ಬಂಧ ಹೇರುವ ಬೆದರಿಕೆ ಹಾಕಿದೆ. ಈ ವಿಚಾರವೂ ಮೋದಿ–ಟ್ರಂಪ್ ಭೇಟಿಯಲ್ಲಿ ಚರ್ಚೆಯಾಗಬಹುದು.

ವ್ಯಾಪಾರ ಸಂಘರ್ಷದ ಹೊರತಾಗಿಯೂ ಎರಡೂ ದೇಶಗಳ ಸಂಬಂಧ ಉತ್ತಮವಾಗಿದೆ. ಆದರೆ, ಈ ಬಾರಿ ಟ್ರಂಪ್ ಅವರು ಭಾರತದಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಭಾರತವು ಸುಂಕ ಕಡಿತಗೊಳಿಸಬೇಕು ಎನ್ನುವುದು ಟ್ರಂಪ್ ಅವರ ಬಯಕೆ ಆಗಿದೆ. ಅವರ ಇಂಥ ಬೇಡಿಕೆಗಳಿಗೆ ಮೋದಿ ಅವರು ಎಷ್ಟರಮಟ್ಟಿಗೆ ಸಮ್ಮತಿಸುತ್ತಾರೆ ಎನ್ನುವುದನ್ನು ನೋಡಬೇಕಿದೆ.

ಚರ್ಚೆಯ ಸಂಭಾವ್ಯ ವಿಷಯಗಳು

ವ್ಯಾಪಾರ, ಸುಂಕ : ಟ್ರಂಪ್ ಮತ್ತು ಮೋದಿ ಭೇಟಿ ವೇಳೆ ದ್ವಿಪಕ್ಷೀಯ ವ್ಯಾಪಾರ ಮತ್ತು ಸರಕುಗಳ ಮೇಲೆ ವಿಧಿಸಲಾಗುತ್ತಿರುವ ಸುಂಕದ ವಿಚಾರಗಳು ಪ್ರಮುಖವಾಗಿ ಚರ್ಚೆಗೆ ಬರುವ ಸಾಧ್ಯತೆ ಇದೆ.

ಉಭಯ ದೇಶಗಳ ನಡುವಣ ವ್ಯಾಪಾರ ಸಂಬಂಧ ಉತ್ತಮವಾಗಿದ್ದು, 2023–24ರಲ್ಲಿ ₹10 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿದೆ. ಭಾರತವು ಅಮೆರಿಕದಿಂದ ಖರೀದಿಸುವುದಕ್ಕಿಂತಲೂ ಹೆಚ್ಚು ಸರಕುಗಳನ್ನು ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುತ್ತಿದೆ. ಭಾರತದೊಂದಿಗೆ ಅದರ ವ್ಯಾಪಾರ ಕೊರತೆ ₹3 ಲಕ್ಷ ಕೋಟಿಗೂ ಹೆಚ್ಚು ಇದೆ. ಬಹುತೇಕ ಎಲ್ಲ ರಾಷ್ಟ್ರಗಳಿಗೂ, ಆಮದು ಮಾಡುವ ಸರಕುಗಳ ಮೊತ್ತಕ್ಕಿಂತಲೂ ಹೆಚ್ಚು ಮೊತ್ತದ ಸರಕುಗಳನ್ನು ರಫ್ತು ಮಾಡುವ ಅಮೆರಿಕ ಭಾರತದೊಂದಿಗೆ ಮಾತ್ರ ವ್ಯಾಪಾರ ಕೊರತೆಯನ್ನು ಹೊಂದಿದ್ದು, ಟ್ರಂಪ್ ಅವರಿಗೆ ಇದು ಕಿರಿಕಿರಿ ತಂದಿದೆ ಎನ್ನಲಾಗುತ್ತಿದೆ. ಹಾಗಾಗಿ, ಅಮೆರಿಕದಿಂದ ಇನ್ನಷ್ಟು ಹೆಚ್ಚು ಸರಕುಗಳನ್ನು ಆಮದು ಮಾಡಿಕೊಳ್ಳುವಂತೆ ಭಾರತದ ಮೇಲೆ ಅವರು ಒತ್ತಡ ಹಾಕಬಹುದು.

ಭಾರತವು 2021ರವರೆಗೆ ಅಮೆರಿಕದಿಂದ ಹೆಚ್ಚು ಕಚ್ಚಾ ತೈಲವನ್ನು ಖರೀದಿ ಮಾಡುತ್ತಿತ್ತು. ರಷ್ಯಾವು ಉಕ್ರೇನ್ ಮೇಲೆ ಸಮರ ಸಾರಿದ ಕಾರಣಕ್ಕೆ ಅಮೆರಿಕವು ರಷ್ಯಾ ಮೇಲೆ ನಿರ್ಬಂಧ ಹೇರಿದ ನಂತರ ಭಾರತವು ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸುತ್ತಿದೆ. ಇದು ಅಮೆರಿಕಕ್ಕೆ ಸಮಾಧಾನ ತಂದಿಲ್ಲ. ಮಾತುಕತೆ ಸಂದರ್ಭದಲ್ಲಿ ಟ್ರಂಪ್ ಅವರು ತೈಲ ಮತ್ತು ಅನಿಲವನ್ನು ಹೆಚ್ಚು ಖರೀದಿಸುವಂತೆ ಮೋದಿಯವರಿಗೆ ಹೇಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ವಿಧಿಸಲಾಗುತ್ತಿರುವ ಸುಂಕದ ವಿಚಾರ ಇಬ್ಬರ ನಡುವೆ ಚರ್ಚೆಗೆ ಬರುವುದು ನಿಚ್ಚಳವಾಗಿದೆ. ಅಮೆರಿಕದ ಉತ್ಪನ್ನಗಳಿಗೆ ಭಾರತ ಹೆಚ್ಚು ಸುಂಕ ವಿಧಿಸುತ್ತಿದೆ ಎಂದು ಹೇಳುತ್ತಲೇ ಬಂದಿರುವ ಟ್ರಂಪ್, ಭಾರತವು ರಫ್ತು ಮಾಡುವ ಸರಕುಗಳ ಮೇಲೆ ಹೆಚ್ಚು ಸುಂಕ ವಿಧಿಸುವ ತನ್ನ ಉದ್ದೇಶವನ್ನು ಸದ್ಯಕ್ಕೆ ಮುಂದೂಡಿದ್ದಾರೆ. ಅಮೆರಿಕ ವಿಧಿಸಬಹುದಾದ ಹೆಚ್ಚುವರಿ ಸುಂಕದ ಹೊರೆಯನ್ನು ತಪ್ಪಿಸಲು ಭಾರತವೂ ಬಯಸುತ್ತಿದೆ. ಟ್ರಂಪ್ ಅವರು ಈ ಸುಂಕಗಳನ್ನು ಇನ್ನಷ್ಟು ಕಡಿತ ಮಾಡುವಂತೆ ಮೋದಿಯವರನ್ನು ಒತ್ತಾಯಿಸಬಹುದು ಎಂದೂ ಹೇಳಲಾಗುತ್ತಿದೆ.

ಅಕ್ರಮ ವಲಸಿಗರು, ಎಚ್1ಬಿ ವೀಸಾ: ಅಮೆರಿಕದಲ್ಲಿರುವ ಭಾರತದ ಅಕ್ರಮ ವಲಸಿಗರ ವಿಚಾರವೂ ಚರ್ಚೆಗೆ ಬರುವ ಸಾಧ್ಯತೆ ದಟ್ಟವಾಗಿದೆ. ಅಕ್ರಮ ವಲಸಿಗರನ್ನು ಅವರ ದೇಶಕ್ಕೆ ಕಳುಹಿಸುತ್ತಿರುವ ಟ್ರಂಪ್ ಸರ್ಕಾರ, ಭಾರತದಿಂದ ಅಮೆರಿಕಕ್ಕೆ ಹೋಗಿದ್ದ 104 ಅಕ್ರಮ ವಲಸಿಗರನ್ನು ಭಾರತಕ್ಕೆ ವಾರದ ಹಿಂದೆ ತಂದು ಬಿಟ್ಟಿತ್ತು. ಅಮೆರಿಕದಲ್ಲಿ ಭಾರತದ 7.25 ಲಕ್ಷ ಅಕ್ರಮ ವಲಸಿಗರು ಇದ್ದಾರೆ ಎಂದು ಹೇಳಲಾಗಿದ್ದು, ಮಾತುಕತೆಯ ವೇಳೆ ಟ್ರಂಪ್ ಈ ವಿಷಯವನ್ನು ಪ್ರಸ್ತಾಪಿಸಿ, ಅಕ್ರಮ ವಲಸಿಗರನ್ನು ವಾಪಸ್ ಕರೆಸಿಕೊಳ್ಳಿ ಎಂದು ಕೇಳಿಕೊಳ್ಳುವ ಸಾಧ್ಯತೆ ಇದೆ.

ಎಚ್1ಬಿ ವೀಸಾ ನಿಯಮಗಳನ್ನು ಬಿಗಿಗೊಳಿಸಲು ಟ್ರಂಪ್ ಆಡಳಿತ ಮುಂದಾಗಿದ್ದು, ಇದರಿಂದಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ವೀಸಾ ಪಡೆಯುತ್ತಿರುವ ಭಾರತೀಯರಿಗೆ ತೊಂದರೆಯಾಗಲಿದೆ. ಮೋದಿ ಅವರು ಈ ವಿಷಯವನ್ನು ಚರ್ಚೆಯ ಸಂದರ್ಭದಲ್ಲಿ ಪ್ರಸ್ತಾಪಿಸುವ ನಿರೀಕ್ಷೆ ಇದೆ.

ರಕ್ಷಣಾ ಕ್ಷೇತ್ರ: ರಕ್ಷಣಾ ಕ್ಷೇತ್ರದಲ್ಲಿ ಪಾಲುದಾರಿಕೆಗೆ ಸಂಬಂಧಿಸಿದಂತೆಯೂ ಇಬ್ಬರೂ ನಾಯಕರು ಚರ್ಚೆ ನಡೆಸುವ ಸಾಧ್ಯತೆ ಇದೆ. ಇಬ್ಬರೂ ನಾಯಕರು ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯೂ ಇದೆ. ಭಾರತವು ಅಮೆರಿಕದಿಂದ ರಕ್ಷಣಾ ಸಲಕರಣೆಗಳನ್ನು ಖರೀದಿ ಮಾಡುತ್ತಿದೆಯಾದರೂ, ಯುದ್ಧವಿಮಾನಗಳು ಸೇರಿದಂತೆ, ಪ್ರಮುಖ ರಕ್ಷಣಾ ಉತ್ಪನ್ನಗಳನ್ನು ಫ್ರಾನ್ಸ್, ರಷ್ಯಾದಿಂದಲೂ ಖರೀದಿಸುತ್ತಿದೆ.

ಇಂಧನ, ತಂತ್ರಜ್ಞಾನ: ಭಾರತವು ಪರಮಾಣು ಶಕ್ತಿಯಿಂದ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಲು ಬಯಸುತ್ತಿದ್ದು, ಈ ಕ್ಷೇತ್ರದಲ್ಲಿ ಖಾಸಗಿಯವರನ್ನೂ ತೊಡಗಿಸಿಕೊಳ್ಳಲು ಮುಂದಾಗಿದೆ. ಅದಕ್ಕೆ ಪೂರಕವಾಗಿ ಕಾನೂನುಗಳಿಗೆ ತಿದ್ದುಪಡಿ ತರುವ ನಿರ್ಧಾರವನ್ನೂ ಮಾಡಿದೆ. ಈ ಕ್ಷೇತ್ರದಲ್ಲಿ ಬಂಡವಾಳ ಹೂಡುವಂತೆ ಅಮೆರಿಕವನ್ನು ಕೇಳಿಕೊಳ್ಳುವ ಸಾಧ್ಯತೆ ಇದೆ. 2022ರಲ್ಲಿ ಜೋ ಬೈಡನ್ ಆಡಳಿತದಲ್ಲಿ ಎರಡೂ ರಾಷ್ಟ್ರಗಳು ಸಂಕೀರ್ಣ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಯೋಜನೆ
ಯನ್ನು (ಐಸಿಇಟಿ) ಜಾರಿಗೊಳಿಸಿದ್ದವು. ಇದನ್ನು ಮುಂದುವರಿಸುವ ಬಗ್ಗೆ ಭಾರತ ಮನವಿ ಮಾಡುವ ನಿರೀಕ್ಷೆ ಇದೆ.

ಟ್ರಂಪ್–ಮೋದಿ ಸ್ನೇಹ

ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರ ವಿರುದ್ಧ ಗೋಧ್ರಾ ಸಂಬಂಧಿ ಗಲಭೆಗಳ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಅಮೆರಿಕ 2005ರಲ್ಲಿ ಅವರಿಗೆ ವೀಸಾ ನೀಡಲು ನಿರಾಕರಿಸಿತ್ತು. ಆದರೆ, ಮೋದಿ ಪ್ರಧಾನಿ ಆದ ನಂತರ ಪರಿಸ್ಥಿತಿ ಬದಲಾಯಿತು.

ಮೋದಿ ಮತ್ತು ಟ್ರಂಪ್ ಮೊದಲು ಭೇಟಿಯಾಗಿದ್ದು ವಾಷಿಂಗ್ಟನ್ನಲ್ಲಿ, 2017ರಲ್ಲಿ. ನಂತರ ಹಲವು ಬಾರಿ ಇಬ್ಬರು ಭೇಟಿ ಮಾಡಿ ಮಾತುಕತೆ ನಡೆಸಿದ್ದಲ್ಲದೇ, ಅಮೆರಿಕದ ಹ್ಯೂಸ್ಟನ್ ಮತ್ತು ಭಾರತದ ಅಹಮದಾಬಾದ್ನಲ್ಲಿ ಜಂಟಿಯಾಗಿ ರ್ಯಾಲಿಗಳನ್ನೂ ನಡೆಸಿದ್ದರು. ಇಬ್ಬರ ನಡುವೆ ಉತ್ತಮ ಸಂಬಂಧ ಇದೆ. ಟ್ರಂಪ್ ಹಲವು ಬಾರಿ ಭಾರತವನ್ನು ಟೀಕಿಸಿದ್ದಾರೆ. ಆದರೆ, ಅವರು ಮೋದಿಯನ್ನು ಮಾತ್ರ ಎಂದೂ ಟೀಕಿಸಿಲ್ಲ. ಟ್ರಂಪ್ ಅವರ ಮೊದಲ ಅವಧಿಯಲ್ಲೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆದಿತ್ತಾದರೂ ಅದು ಸಾಧ್ಯವಾಗಿರಲಿಲ್ಲ.

ಬೆದರಿಕೆಗೆ ಜಗ್ಗಿತೇ ಭಾರತ?

ಟ್ರಂಪ್–ಮೋದಿ ಭೇಟಿ ಸಂದರ್ಭದಲ್ಲಿ ಯಾವುದೇ ಮುಜುಗರದ ಸನ್ನಿವೇಶ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಭಾರತವು ಅಮೆರಿಕದ ವಿಚಾರದಲ್ಲಿ ಮೃದು ಧೋರಣೆ ತಳೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್ನಲ್ಲಿ ವಿದೇಶದಿಂದ ಆಮದು ಮಾಡುವ ಹೆಚ್ಚು ಎಂಜಿನ್ ಸಾಮರ್ಥ್ಯದ ವಿಲಾಸಿ ಬೈಕ್, ಐಷಾರಾಮಿ ಕಾರುಗಳ ಮೇಲೆ ವಿಧಿಸಲಾಗುತ್ತಿದ್ದ ಸುಂಕವನ್ನು ಕಡಿಮೆಗೊಳಿಸುವ ಘೋಷಣೆ ಮಾಡಿತ್ತು. ಇದು ಅಮೆರಿಕವನ್ನು ಗುರಿಯಾಗಿಸಿಕೊಂಡು ಸರ್ಕಾರ ಕೈಗೊಂಡ ನಿರ್ಧಾರ ಎಂದೇ ಹೇಳಲಾಗುತ್ತಿದೆ.

ಭಾರತದಿಂದ ಬಂದಿರುವ ಅಕ್ರಮ ವಲಸಿಗರನ್ನು ದೇಶಕ್ಕೆ ವಾಪಸ್ ಕಳುಹಿಸುವುದಾಗಿ ಅಮೆರಿಕ ಹೇಳಿದಾಗ, ಅವರನ್ನು ವಾಪಸ್ ಕರೆಸಿಕೊಳ್ಳಲು ಸಿದ್ಧವಿರುವುದಾಗಿ ಎಂದು ಭಾರತ ಹೇಳಿತ್ತು. ಅಮೆರಿಕವು ಕಳೆದ ವಾರ 104 ವಲಸಿಗರನ್ನು ಅವರ ಕಾಲು, ಕೈಗಳಿಗೆ ಕೋಳ ಹಾಕಿ ಪಂಜಾಬ್ನ ಅಮೃತಸರಕ್ಕೆ ತಂದು ಇಳಿಸಿತ್ತು. ವಲಸಿಗರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎಂದು ದೇಶದಲ್ಲಿ ಚರ್ಚೆ ನಡೆದಿತ್ತು. ವಿರೋಧ ಪಕ್ಷಗಳು ಸರ್ಕಾರವನ್ನು ಟೀಕಿಸಿದ್ದವು. ಆ ಸಂದರ್ಭದಲ್ಲೂ ಸರ್ಕಾರ ಅಮೆರಿಕದ ನಡೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಲಿಲ್ಲ. ಈ ಬಗ್ಗೆ ಅಮೆರಿಕದೊಂದಿಗೆ ಮಾತನಾಡುವುದಾಗಿ ಹೇಳಿತು.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಭೇಟಿ ಸಂದರ್ಭದಲ್ಲಿ ಟ್ರಂಪ್, ಗಾಜಾ ಪಟ್ಟಿಯನ್ನು ವಶಕ್ಕೆ ಪಡೆದುಕೊಂಡು ಅಭಿವೃದ್ಧಿ ಪಡಿಸುವುದಾಗಿ ಹೇಳಿದಾಗ, ಭಾರತ ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ಸಂಸತ್ತಿನಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ವಿದೇಶಾಂಗ ಸಚಿವ ಜೈಶಂಕರ್ ಉತ್ತರಿಸಲಿಲ್ಲ. ನಂತರ ಸಚಿವಾಲಯದ ಅಧಿಕಾರಿ, ‘ಪ್ಯಾಲೆಸ್ಟೀನ್ ವಿಷಯದಲ್ಲಿ ಭಾರತದ ನಿಲುವು ಬದಲಾಗಿಲ್ಲ’ ಎಂದಷ್ಟೇ ಹೇಳಿದ್ದರು.

ಸುಂಕ ಹೇರುವ ಬೆದರಿಕೆ ಒಡ್ಡಿರುವ ಟ್ರಂಪ್ ಅವರನ್ನು ಸಮಾಧಾನ ಪಡಿಸುವ ಉದ್ದೇಶದಿಂದ ಭಾರತ ಈ ವಿಚಾರಗಳಲ್ಲಿ ಕಠಿಣ ನಡೆಗಳನ್ನು ತೋರಿಲ್ಲ ಎಂದು ಹೇಳಲಾಗುತ್ತಿದೆ.

ಆಧಾರ: ಪಿಟಿಐ, ಬಿಬಿಸಿ, ದಿ ನ್ಯೂಯಾರ್ಕ್ ಟೈಮ್ಸ್, ದಿ ಡಿಪ್ಲೊಮಾಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.