ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಆಳ–ಅಗಲ: ಭಾರತ ನಕ್ಸಲ್ ಮುಕ್ತ?

Published : 22 ಮೇ 2025, 23:30 IST
Last Updated : 22 ಮೇ 2025, 23:30 IST
ಫಾಲೋ ಮಾಡಿ
Comments
ನಕ್ಸಲ್ ಮುಖಂಡ ನಂಬಾಲ ಕೇಶವರಾವ್ ಅಲಿಯಾಸ್ ಬಸವರಾಜು ಅವರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿರುವುದನ್ನು ಐತಿಹಾಸಿಕ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ. ‘ನಕ್ಸಲ್ ಮುಕ್ತ ಭಾರತ’ದ ತಮ್ಮ ಗುರಿಯಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಹೇಳಿದ್ದಾರೆ. 2026ರ ಮಾರ್ಚ್ ಒಳಗೆ ‘ಎಡಪಂಥೀಯ ತೀವ್ರಗಾಮಿ’ಗಳನ್ನು ನಿರ್ಮೂಲನೆ ಮಾಡಬೇಕು ಎನ್ನುವುದು ಕೇಂದ್ರದ ಸಂಕಲ್ಪ. ಈ ದಿಸೆಯಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ಸಾಕಷ್ಟು ಪ್ರಗತಿ ಸಾಧಿಸಿದೆ ಎನ್ನಲಾಗುತ್ತಿದೆ. ಒಂದೆಡೆ ಭದ್ರತಾ ಪಡೆಗಳ ತೀವ್ರ ಕ್ರಮ, ಅಭಿವೃದ್ಧಿ ಕಾರ್ಯಕ್ರಮಗಳು; ಮತ್ತೊಂದೆಡೆ ಹಿರಿಯ ನಾಯಕರ ಕೊರತೆ, ಕ್ಷೀಣಿಸುತ್ತಿರುವ ಜನಬೆಂಬಲದಿಂದ ನಕ್ಸಲ್ ಚಳವಳಿಯ ಬಲ ತೀವ್ರವಾಗಿ ಕುಗ್ಗಿದ್ದು, ಅದರ ಅಂತ್ಯ ಸಮೀಪಿಸಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕೊಡಗಿನಲ್ಲಿ ನಕ್ಸಲ್ ನಿಗ್ರಹ ಪಡೆಯ (ಎಎನ್‌ಎಫ್‌) ಕಾರ್ಯಾಚರಣೆ

ಕೊಡಗಿನಲ್ಲಿ ನಕ್ಸಲ್ ನಿಗ್ರಹ ಪಡೆಯ (ಎಎನ್‌ಎಫ್‌) ಕಾರ್ಯಾಚರಣೆ

ಕರ್ನಾಟಕ ಮಾದರಿ
ನೆರೆಯ ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಂತೆ ಕರ್ನಾಟಕಕ್ಕೂ ನಕ್ಸಲ್ ಚಳವಳಿ ಹಬ್ಬಿತ್ತು. 1985ರ ಆಸುಪಾಸಿನಲ್ಲಿ ರಾಯಚೂರು, ಪಾವಗಡ, ಬೀದರ್ ಮುಂತಾದೆಡೆ ಸಣ್ಣ ಪ್ರಮಾಣದಲ್ಲಿ ಅವರ ಚಟುವಟಿಕೆಗಳು ಆರಂಭವಾಗಿದ್ದವು. ನಂತರ ದಕ್ಷಿಣ ಕನ್ನಡ, ಉಡು‍ಪಿ, ಚಿಕ್ಕಮಗಳೂರು ಜಿಲ್ಲೆಗಳನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡು ನಕ್ಸಲರು ಕಾರ್ಯಾಚರಣೆ ತೀವ್ರಗೊಳಿಸಿದ್ದರು. ಅವರ ದಮನಕ್ಕೆ ರಾಜ್ಯ ಸರ್ಕಾರವು ನಕ್ಸಲ್ ನಿಗ್ರಹ ಪಡೆಯನ್ನು ರೂಪಿಸಿತ್ತು. 2002ರಲ್ಲಿ ರಾಜ್ಯದಲ್ಲಿ ಮೊದಲ ಎನ್‌ಕೌಂಟರ್ ನಡೆದಿತ್ತು. ನಂತರ ಹಲವು ಎನ್‌ಕೌಂಟರ್‌ಗಳು ನಡೆದು, ಸಾಕೇತ್ ರಾಜನ್ ಸೇರಿದಂತೆ ಹಲವರು ಹತರಾಗಿದ್ದರು. 2024ರ ನವೆಂಬರ್‌ನಲ್ಲಿ ವಿಕ್ರಂ ಗೌಡನ ಎನ್‌ಕೌಂಟರ್ ನಡೆದಿತ್ತು. ನಕ್ಸಲ್‌ ಸಮಸ್ಯೆಗೆ ಎನ್‌ಕೌಂಟರ್‌ಗಳು ಪರಿಹಾರ ಅಲ್ಲ, ಮಾತುಕತೆ ನಡೆಸಬೇಕು ಎಂದು ನಾಗರಿಕ ಸಂಘಟನೆಗಳು ಒತ್ತಾಯಿಸಿದವು. ಸಂಘಟನೆಗಳ ಮಧ್ಯಪ್ರವೇಶದೊಂದಿಗೆ ಮಾತುಕತೆಯೂ ನಡೆದು, ಉಳಿದ ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿದ್ದರು. ಸರ್ಕಾರ ಅವರಿಗೆ ಪ್ಯಾಕೇಜ್ ಘೋಷಿಸಿತು. ಕರ್ನಾಟಕವು ನಕ್ಸಲ್ ಮುಕ್ತ ರಾಜ್ಯ ಎಂದು 2025–26ರ ಬಜೆಟ್ ಭಾಷಣದಲ್ಲಿ ಘೋಷಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಕ್ಸಲ್ ನಿಗ್ರಹ ಪಡೆಯನ್ನು ವಿಸರ್ಜಿಸಿದ್ದರು.
ನಕ್ಸಲರ ಪ್ರಭಾವ ಇಳಿಮುಖ
2014ರಲ್ಲಿ ದೇಶದ 76 ಜಿಲ್ಲೆಗಳ 330 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 1,080 ನಕ್ಸಲ್ ಪ್ರಕರಣಗಳು ವರದಿಯಾಗಿದ್ದವು. ಅದೇ 2024ರಲ್ಲಿ 42 ಜಿಲ್ಲೆಗಳ ವ್ಯಾಪ್ತಿಯಲ್ಲಿ 374 ನಕ್ಸಲ್ ಪ್ರಕರಣಗಳು ವರದಿಯಾಗಿವೆ. 2014ರಲ್ಲಿ 88 ಪೊಲೀಸರು ನಕ್ಸಲ್ ಹಿಂಸಾಚಾರದಲ್ಲಿ ಹುತಾತ್ಮರಾಗಿದ್ದರು; 2024ರಲ್ಲಿ 19 ಪೊಲೀಸರು ಹುತಾತ್ಮರಾಗಿದ್ದಾರೆ. ಇದೇ ವೇಳೆ ಪೊಲೀಸರಿಂದ ಎನ್‌ಕೌಂಟರ್‌ಗೆ ಒಳಗಾದ ನಕ್ಸಲರ ಸಂಖ್ಯೆಯು 63ರಿಂದ 2,089ಕ್ಕೆ ಏರಿದೆ. 2019ರಿಂದ 2025ರವರೆಗೆ ರಾಜ್ಯ ಪೊಲೀಸರ ಸಹಕಾರದೊಂದಿಗೆ ಭದ್ರತಾ ಪಡೆಗಳು ನಕ್ಸಲ್‌ ನಿಗ್ರಹಕ್ಕಾಗಿ ವಿವಿಧೆಡೆ 320 ಶಿಬಿರಗಳನ್ನು ರೂಪಿಸಿದ್ದವು. 2014ರಲ್ಲಿ 66 ಇದ್ದ ವಿಶೇಷ ಪೊಲೀಸ್ ಠಾಣೆಗಳ ಸಂಖ್ಯೆಯು 555ಕ್ಕೆ ಏರಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.
ಆಧಾರ: ‍ಪಿಟಿಐ, ಪ್ರೆಸ್ ಇನ್‌ಫರ್ಮೇಷನ್ ಬ್ಯೂರೊ, ಸಂಸತ್ ಟಿವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT