ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
Explainer | ಮತ್ತೆ ಮತ್ತೆ ಮೈತ್ರಿ ರಾಜಕಾರಣ
Explainer | ಮತ್ತೆ ಮತ್ತೆ ಮೈತ್ರಿ ರಾಜಕಾರಣ
Published 18 ಜುಲೈ 2023, 1:13 IST
Last Updated 18 ಜುಲೈ 2023, 1:13 IST
ಅಕ್ಷರ ಗಾತ್ರ
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್‌ ಮೈತ್ರಿಕೂಟ ವಿಸ್ತರಣೆಗೆ ಮುಂದಾಗಿವೆ. ಭಾರತಕ್ಕೆ ಮೈತ್ರಿ ರಾಜಕಾರಣವು ಹೊಸ ವಿಚಾರ ಅಲ್ಲ. 60–70ರ ದಶಕದಲ್ಲೇ ದೇಶದಲ್ಲಿ ಮೈತ್ರಿಕೂಟ ರಚನೆಯಾಗಿತ್ತು. ಕೇಂದ್ರದಲ್ಲಿ ಪ್ರಬಲ ಪಕ್ಷದ ಬಹುಮತದ ಸರ್ಕಾರ ಇದ್ದಾಗ, ಅದರ ನೀತಿಗಳ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿದ್ದು ಭಾರತದಲ್ಲಿ ಹಲವು ಭಾರಿ ನಡೆದಿದೆ. ಈಗ ಮತ್ತೆ ಅಂಥದ್ದೇ ಪ್ರಯತ್ನ ನಡೆಯುತ್ತಿದೆ. ಈಚಿನ ವರ್ಷಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಏಕಪಕ್ಷದ ಪಾರಮ್ಯವೇ ಇರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತಾದರೂ, ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮೊರೆ ಹೋಗುತ್ತಿವೆ.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್‌ ಮೈತ್ರಿಕೂಟ ವಿಸ್ತರಣೆಗೆ ಮುಂದಾಗಿವೆ. ಭಾರತಕ್ಕೆ ಮೈತ್ರಿ ರಾಜಕಾರಣವು ಹೊಸ ವಿಚಾರ ಅಲ್ಲ. 60–70ರ ದಶಕದಲ್ಲೇ ದೇಶದಲ್ಲಿ ಮೈತ್ರಿಕೂಟ ರಚನೆಯಾಗಿತ್ತು. ಕೇಂದ್ರದಲ್ಲಿ ಪ್ರಬಲ ಪಕ್ಷದ ಬಹುಮತದ ಸರ್ಕಾರ ಇದ್ದಾಗ, ಅದರ ನೀತಿಗಳ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿದ್ದು ಭಾರತದಲ್ಲಿ ಹಲವು ಭಾರಿ ನಡೆದಿದೆ. ಈಗ ಮತ್ತೆ ಅಂಥದ್ದೇ ಪ್ರಯತ್ನ ನಡೆಯುತ್ತಿದೆ. ಈಚಿನ ವರ್ಷಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಏಕಪಕ್ಷದ ಪಾರಮ್ಯವೇ ಇರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತಾದರೂ, ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮೊರೆ ಹೋಗುತ್ತಿವೆ

1971: ಮೊದಲ ಮೈತ್ರಿಕೂಟ
ಜವಾಹರಲಾಲ್‌ ನೆಹರೂ ಅವರ ನಿಧನದ ನಂತರ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದು, ಕಾಂಗ್ರೆಸ್‌ ಒಳಗೇ ಅಸಮಾಧಾನಕ್ಕೆ ಕಾರಣವಾಗಿತ್ತು. ಸಾರ್ವಜನಿಕವಾಗಿ ಈ ಅಸಮಾಧಾನ ಹಲವು ಭಾರಿ ಹಲವು ಸ್ವರೂಪದಲ್ಲಿ ವ್ಯಕ್ತವಾಗಿತ್ತು. ಕಾಂಗ್ರೆಸ್‌ನಲ್ಲಿನ ಈ ಭಿನ್ನಾಭಿಪ್ರಾಯವೇ ನಂತರದ ವರ್ಷಗಳಲ್ಲಿ ದೇಶದಲ್ಲಿ ಚುನಾವಣಾಪೂರ್ವ ಮೈತ್ರಿಕೂಟ ರೂಪುಗೊಳ್ಳಲು ಕಾರಣವಾಯಿತು ಎಂಬುದಕ್ಕೆ ಭಾರತವು ಸಾಕ್ಷಿಯಾಗಿದೆ.

1967ರ ಲೋಕಸಭಾ ಚುನಾವಣೆಯಲ್ಲೇ ಇಂದಿರಾ ಅವರ ವಿರುದ್ಧ ಅಸಮಾಧಾನ ಕೇಳಿಬಂದಿತ್ತಾದರೂ, ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಸಾಧಿಸಿತ್ತು. ಆ ಕ್ಷಣಕ್ಕೆ ಅಸಮಾಧಾನವು ಹಿನ್ನೆಲೆಗೆ ಸರಿದರೂ, ಇಂದಿರಾ ನೇತೃತ್ವದ ಸರ್ಕಾರದ ನೀತಿಗಳ ಕಾರಣದಿಂದ ನಂತರದ ವರ್ಷಗಳಲ್ಲಿ ಆ ಅಸಮಾಧಾನ ದೊಡ್ಡದಾಯಿತು. ಬ್ಯಾಂಕ್‌ಗಳ ರಾಷ್ಟ್ರೀಕರಣದಂತಹ ಕ್ರಮಗಳು ಕಾಂಗ್ರೆಸ್‌ ಎಡಚಿಂತನೆಯತ್ತ ವಾಲುತ್ತಿರುವುದರ ಪ್ರತೀಕ ಎಂಬುದು ಹಿರಿಯ ಕಾಂಗ್ರೆಸ್ಸಿಗರ ಆರೋಪವಾಗಿತ್ತು. ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಆರೋಪದಲ್ಲಿ ಇಂದಿರಾ ಅವರನ್ನು 1969ರಲ್ಲಿ ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿತ್ತು. ಇದು ಹಿರಿಯ ಕಾಂಗ್ರೆಸ್ಸಿಗರಿದ್ದ ಕಾಂಗ್ರೆಸ್‌ (ಸಂಸ್ಥಾ) ಮತ್ತು ಇಂದಿರಾ ನೇತೃತ್ವದ ಕಾಂಗ್ರೆಸ್‌ (ಆರ್‌) ಸ್ಥಾಪನೆಗೆ ಕಾರಣವಾಯಿತು. 

ಇಂದಿರಾ ಗಾಂಧಿ ಅವರ ನಿಲುವುಗಳನ್ನು ವಿರೋಧಿಸಿದ್ದ ಹಿರಿಯ ಕಾಂಗ್ರೆಸ್ಸಿಗರು ಸಂಸ್ಥಾ ಕಾಂಗ್ರೆಸ್‌ನಲ್ಲಿ ಉಳಿದರು ಮತ್ತು ಹೊಸ ತಲೆಮಾರಿನ ಕಾಂಗ್ರೆಸ್ಸಿಗರು ಇಂದಿರಾ ನೇತೃತ್ವದ ಕಾಂಗ್ರೆಸ್‌ (ಆರ್‌) ಸೇರಿದರು. ಸಂಸ್ಥಾ ಕಾಂಗ್ರೆಸ್‌ ಬಲಪಂಥೀಯ ನಿಲುವುಗಳನ್ನು ಹೊಂದಿದ್ದರೆ, ಕಾಂಗ್ರೆಸ್‌ (ಆರ್‌) ನಾಯಕರು ಎಡಪಂಥದತ್ತ ವಾಲಿದ್ದರು ಎಂದು ಬ್ರಿಟಾನಿಕಾ ಎನ್‌ಸೈಕ್ಲೊಪೀಡಿಯಾದಲ್ಲಿ ಉಲ್ಲೇಖಿಸಲಾಗಿದೆ. 1971ರ ಲೋಕಸಭಾ ಚುನಾವಣೆ ಘೋಷಣೆಯಾದಾಗ ಇಂದಿರಾ ಕಾಂಗ್ರೆಸ್ (ಆರ್‌) ಏಕಾಂಗಿಯಾಗಿ ಕಣಕ್ಕೆ ಇಳಿದಿತ್ತು. ಅದರ ವಿರುದ್ಧ ಸಂಸ್ಥಾ ಕಾಂಗ್ರೆಸ್‌ ನೇತೃತ್ವದಲ್ಲಿ ನಾಲ್ಕು ಪಕ್ಷಗಳು ಒಟ್ಟಾಗಿ ಜನತಾ ಮೋರ್ಚಾ ಎಂಬ ಹೆಸರಿನಲ್ಲಿ ಚುನಾವಣಾ ಕಣಕ್ಕೆ ಇಳಿದವು.

ಮೊರಾರ್ಜಿ ದೇಸಾಯಿ ನೇತೃತ್ವದ ಸಂಸ್ಥಾ ಕಾಂಗ್ರೆಸ್‌, ಸ್ವತಂತ್ರ ಪಾರ್ಟಿ, ಜನಸಂಘ ಪಾರ್ಟಿ, ಸಂಯುಕ್ತ ಸೋಷಿಯಲಿಸ್ಟ್‌ ಪಾರ್ಟಿ ಸೇರಿ ಜನತಾ ಮೋರ್ಚಾ ಎಂಬ ಮೈತ್ರಿಕೂಟವನ್ನು ಮಾಡಿಕೊಂಡವು. ಭಾರತದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಚುನಾವಣಾ ಪೂರ್ವ ಮೈತ್ರಿಕೂಟ ಎನಿಸಿದೆ. ಇಂದಿರಾ ನೇತೃತ್ವದ ಕಾಂಗ್ರೆಸ್‌ (ಆರ್‌) ‘ಬಡತನ ತೊಲಗಿಸಿ’ ಎಂದು ಕಣಕ್ಕೆ ಇಳಿದರೆ, ಜನತಾ ಮೋರ್ಚಾ ಮೈತ್ರಿಕೂಟವು ‘ಇಂದಿರಾ ತೊಲಗಿಸಿ’ ಎಂದು ಕಣಕ್ಕೆ ಇಳಿದಿತ್ತು. ಆದರೆ, ಮೈತ್ರಿಕೂಟವು 46 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

1977 ಮೊದಲ ಮೈತ್ರಿಸರ್ಕಾರ
1971–1977ರ ಮಧ್ಯೆ ಇಂದಿರಾ ನೇತೃತ್ವದ ಸರ್ಕಾರದ ನೀತಿಗಳ ವಿರುದ್ಧ ದೇಶದಾದ್ಯಂತ ಭಾರಿ ಅಸಮಾಧಾನ ಸೃಷ್ಟಿಯಾಗಿತ್ತು. ತುರ್ತುಪರಿಸ್ಥಿತಿ ಹೇರಿದ್ದು ಸರ್ಕಾರದ ಟೀಕಾಕಾರರನ್ನು ವಿರೋಧಿಗಳನ್ನು ವಿಪಕ್ಷಗಳ ನಾಯಕರನ್ನು ಸೆರೆಮನೆಗೆ ಹಾಕಿದ್ದು ಇಂದಿರಾ ಸರ್ಕಾರದ ವಿರುದ್ಧ ಅಸಮಾಧಾನವನ್ನು ಮತ್ತಷ್ಟು ತೀವ್ರಗೊಳಿಸಿತ್ತು. ಸೆರೆಮನೆಯಲ್ಲಿದ್ದ ಎಲ್ಲಾ ನಾಯಕರನ್ನು 1967ರಲ್ಲಿ ಸರ್ಕಾರವು ಬಿಡುಗಡೆ ಮಾಡಿತ್ತು. ಸೆರೆಮನೆಯಿಂದ ಹೊರಬಂದ ವಿರೋಧ ಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದರು. ಒಂದೆಡೆ ಸರ್ಕಾರದ ನೀತಿಗಳ ವಿರುದ್ಧ ಜಯಪ್ರಕಾಶ್ ನಾರಾಯಣ್ ಅವರ ಚಳವಳಿ ನಡೆಯುತ್ತಿತ್ತು. ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಸಂಸ್ಥಾ ಕಾಂಗ್ರೆಸ್‌ ಭಾರತೀಯ ಜನಸಂಘ ಭಾರತೀಯ ಲೋಕದಳ ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿ ಸೇರಿ ಚುನಾವಣಾಪೂರ್ವ ಮೈತ್ರಿಕೂಟವನ್ನು ರಚಿಸಿಕೊಂಡವು. ಈ ಮೈತ್ರಿಕೂಟವನ್ನು ‘ಜನತಾ ಪಾರ್ಟಿ’ ಎಂದು ಕರೆಯಲಾಯಿತು. ಇಂದಿರಾ ಸರ್ಕಾರದ ವಿರುದ್ಧ ಸಂಸತ್ತಿನ ಒಳಗೂ ಮತ್ತು ಹೊರಗೂ ಈ ಮೈತ್ರಿಕೂಟವು ಹೋರಾಟಕ್ಕೆ ಇಳಿದಿತ್ತು. ಸಿಪಿಎಂ ಶಿರೋಮಣಿ ಅಕಾಲಿ ದಳ ಫಾರ್ವಾರ್ಡ್‌ ಬ್ಲಾಕ್‌ ರಿಪಬ್ಲಿಕನ್‌ ಪಾರ್ಟಿ ಪಿಡಬ್ಲ್ಯುಪಿ ಆರ್‌ಎಸ್‌ಪಿಗಳು ಈ ಮೈತ್ರಿಕೂಟವನ್ನು ಬೆಂಬಲಿಸಿದವು. ಐದು ಪಕ್ಷಗಳ ‘ಜನತಾ ಪಾರ್ಟಿ’ಯು 1977ರ ಚುನಾವಣೆಯಲ್ಲಿ 298 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಆ ಮೂಲಕ ಬಹುಮತ ಪಡೆದು ಸರ್ಕಾರ ರಚಿಸಿತು. ಹೀಗೆ ಜನತಾ ಪಾರ್ಟಿಯು ರಚಿಸಿದ ಸರ್ಕಾರವು ದೇಶದ ಮೊದಲ ಕಾಂಗ್ರೆಸ್ಸೇತರ ಸರ್ಕಾರವಾಯಿತು. ಜತೆಗೆ ದೇಶದ ಮೊದಲ ಮೈತ್ರಿಕೂಟ ಸರ್ಕಾರ ಎಂಬ ಹೆಗ್ಗಳಿಕೆಯನ್ನೂ ‍ಪಡೆಯಿತು. ಆದರೆ ಆಂತರಿಕ ಅಸಮಾಧಾನ ಭಿನ್ನಾಭಿಪ್ರಾಯಗಳ ಕಾರಣದಿಂದ ಮೈತ್ರಿಕೂಟ ದುರ್ಬಲವಾಯಿತು. 1979ರಲ್ಲಿ ದೇಸಾಯಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು ನಂತರ ಚೌಧರೊ ಚರಣ್‌ ಸಿಂಗ್‌ ಪ್ರಧಾನಿಯಾದರು. ಆದರೆ ಕೆಲವೇ ತಿಂಗಳಲ್ಲಿ ಅವರೂ ರಾಜೀನಾಮೆ ನೀಡಿದರು. ಆನಂತರ ಅದೇ ವರ್ಷದಲ್ಲಿ ಲೋಕಸಭೆಯನ್ನು ವಿಸರ್ಜಿಸಲಾಯಿತು.
ತೃತೀಯ ರಂಗ
1989ರಲ್ಲಿ ಹುಟ್ಟಿಕೊಂಡ ತೃತೀಯ ರಂಗ ಎನ್ನುವ ಪರಿಕಲ್ಪನೆಯೇ ಭಾರತೀಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು. ಕಾಂಗ್ರೆಸ್‌ ಪಕ್ಷದ ಪ್ರಾಬಲ್ಯವನ್ನು ಕುಗ್ಗಿಸಿದ್ದು ಇದೇ ತೃತೀಯ ರಂಗ. 1989ರಲ್ಲಿ ರಾಷ್ಟ್ರೀಯ ರಂಗ ಹಾಗೂ 1996ರಲ್ಲಿ ಸಂಯುಕ್ತ ರಂಗವು ಕೆಲವು ವರ್ಷಗಳ ಕಾಲ ಅಧಿಕಾರದಲ್ಲಿದ್ದವು. ಕಾಂಗ್ರೆಸ್‌ ಮತ್ತು ಬಿಜೆಪಿಯನ್ನು ವಿರೋಧಿಸುವುದು ಈ ರಂಗ ರಚನೆಯ ಹಿಂದಿನ ಉದ್ದೇಶವಾಗಿತ್ತು. ಆದರೆ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಈ ಸರ್ಕಾರಗಳಿಗೆ ಪ್ರತ್ಯೇಕ ಸಂದರ್ಭಗಳಲ್ಲಿ ಬಾಹ್ಯ ಬೆಂಬಲ ನೀಡಿದ್ದವು. ರಾಷ್ಟ್ರೀಯ ರಂಗ ವಿ.ಪಿ. ಸಿಂಗ್‌ ಅವರು ರಾಜೀವ್‌ ಗಾಂಧಿ ಅವರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದರು. ಹಗರಣವೊಂದರ ಕಾರಣದಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಬಳಿಕ ರಾಜೀವ್‌ ಗಾಂಧಿ ನೇತೃತ್ವದ ಸರ್ಕಾರದ ಮೇಲೆ ಬೊಫೋರ್ಸ್‌ ಹಗರಣದ ಆರೋಪ ದಟ್ಟವಾಗಿ ಕೇಳಿಬಂತು. ಸಿಂಗ್‌ ಅವರು 1987ರಲ್ಲಿ ಜನ ಮೋರ್ಚಾವನ್ನು ರಚಿಸಿದರು. ಬಿಜೆಪಿ ಸೇರಿದಂತೆ ಹಲವು ಎಡ ಪಕ್ಷಗಳು ಜನ ಮೋರ್ಚಾದೊಂದಿಗೆ ಕೈ ಜೋಡಿಸಿದವು. 1988ರಲ್ಲಿ ಜನ್‌ ಮೋರ್ಚಾ ಕಾಂಗ್ರೆಸ್‌ (ಸೋಷಿಯಲಿಸ್ಟ್‌) ಲೋಕದಳ ಪಕ್ಷಗಳೊಂದಿಗೆ ಸೇರಿ ಸಿಂಗ್‌ ಅವರು ರಾಷ್ಟ್ರೀಯ ರಂಗವನ್ನು ಹುಟ್ಟುಹಾಕಿದರು. ಚುನಾವಣೆಗೂ ಮುನ್ನ ರಾಷ್ಟ್ರೀಯ ರಂಗ ಹಾಗೂ ಬಿಜೆಪಿ ಮಧ್ಯೆ ಕೆಲವು ಒಪ್ಪಂದಗಳು ಏರ್ಪಟ್ಟವು. ಚುನಾವಣೆ ನಡೆದು ಫಲಿತಾಂಶದಲ್ಲಿ ಯಾವ ಪಕ್ಷಕ್ಕೂ ಬಹುಮತ ‌ದೊರಕಲಿಲ್ಲ. ಆಗ ಬಿಜೆಪಿಯ ಬಾಹ್ಯ ಬೆಂಬಲದೊಂದಿಗೆ ರಾಷ್ಟ್ರೀಯ ರಂಗದ ವಿ.ಪಿ. ಸಿಂಗ್‌ ಅವರು ಪ್ರಧಾನಿಯಾದರು. ಆದರೆ ಮಂಡಲ್‌ ಆಯೋಗದ ಶಿಫಾರಸುಗಳ ಜಾರಿಗೆ ಯತ್ನ ಎಲ್‌.ಕೆ. ಅಡ್ವಾಣಿ ಅವರ ರಥಯಾತ್ರೆ ಅಡ್ವಾಣಿ ಅವರ ಬಂಧನದ ಕಾರಣಗಳಿಂದ 1990ರಲ್ಲಿ ಬಿಜೆಪಿಯು ತನ್ನ ಬಾಹ್ಯ ಬೆಂಬಲವನ್ನು ವಾಪಸು ಪಡೆಯಿತು. ನಂತರ 1990ರಲ್ಲಿ ಚಂದ್ರಶೇಖರ್‌ ಅವರಿಗೆ ಕಾಂಗ್ರೆಸ್ ಪಕ್ಷವು ಬಾಹ್ಯ ಬೆಂಬಲ ನೀಡಿತು. ನಂತರ 1991ರಲ್ಲಿ ಕಾಂಗ್ರೆಸ್‌ ತನ್ನ ಬೆಂಬಲವನ್ನು ವಾಪಸು ಪಡೆದುಕೊಂಡಿತು.
ಸಂಯುಕ್ತ ರಂಗ
1996ರಲ್ಲಿ ಚುನಾವಣೋತ್ತರವಾಗಿ ಹುಟ್ಟಿಕೊಂಡದ್ದು ಸಂಯುಕ್ತ ರಂಗ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎನ್ನುವ ಕಾರಣದಿಂದ ಕಾಂಗ್ರೆಸ್‌ ಪಕ್ಷದ ಬಾಹ್ಯ ಬೆಂಬಲದೊಂದಿಗೆ ಜನತಾದಳದ ಎಚ್‌.ಡಿ. ದೇವೇಗೌಡ ಅವರು ಪ್ರಧಾನಿಯಾದರು. ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಸರ್ಕಾರ ರಚನೆಗೆ ಬಹುಮತ ಇರಲಿಲ್ಲ. ರಾಷ್ಟ್ರಪತಿ ಅವರು ಬಿಜೆಪಿಯನ್ನು ಸರ್ಕಾರ ರಚನೆಗೆ ಕರೆದರು. ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯೂ ಆದರು. ಆದರೆ ಸಂಸತ್ತಿನಲ್ಲಿ ವಿಶ್ವಾಸಮತ ಗಳಿಸುವಲ್ಲಿ ಸೋತರು. ಬಳಿಕ ರಾಷ್ಟ್ರಪತಿ ಅವರು ನಂತರದ ಹೆಚ್ಚಿನ ಸದಸ್ಯ ಬಲದ ಸಂಯುಕ್ತ ರಂಗಕ್ಕೆ ಸರ್ಕಾರ ರಚನೆಗೆ ಕರೆದರು. ಆಗ ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿಗೆ ದೇವೇಗೌಡರು ಸರ್ಕಾರ ರಚಿಸಿದರು. ಆದರೆ ಈ ಸರ್ಕಾರವು ಹೆಚ್ಚು ವರ್ಷ ಬಾಳಲಿಲ್ಲ. ಐ.ಕೆ. ಗುಜ್ರಾಲ್‌ ಅವರನ್ನು ಪ್ರಧಾನಿ ಮಾಡಬೇಕೆಂದು ಕಾಂಗ್ರೆಸ್‌ ಪಟ್ಟುಹಿಡಿಯಿತು. ನಂತರ 1997ರಲ್ಲಿ ಗುಜ್ರಾಲ್ ಅವರು ಪ್ರಧಾನಿಯಾದರು. ಅದೇ ವರ್ಷವೇ ರಾಜೀವ್‌ ಗಾಂಧಿ ಹತ್ಯೆಯ ಸಂಬಂಧ ರಚಿಸಿದ್ದ ಜೈನ್‌ ಸಮಿತಿಯ ವರದಿ ಬಿಡುಗಡೆಯಾಯಿತು. ಈ ರಂಗದ ಭಾಗವಾಗಿದ್ದ ಡಿಎಂಕೆ ಪಕ್ಷವು ಎಲ್‌ಟಿಟಿಇ ಜೊತೆ ಸಂಬಂಧ ಹೊಂದಿದೆ. ಆದ್ದರಿಂದ ಈ ಪಕ್ಷದ ಸಚಿವರೊಬ್ಬರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕಾಂಗ್ರೆಸ್‌ ಪಟ್ಟು ಹಿಡಿಯಿತು. ಇದೇ ಕಾರಣಕ್ಕೆ ಗುಜ್ರಾಲ್‌ ಅವರ ಸರ್ಕಾರವು ಪತನಗೊಂಡಿತು. ಸಂಯಕ್ತ ರಂಗದೊಂದಿಗೆ ಇದ್ದ ಪ್ರಮುಖ ಪಕ್ಷಗಳು ಜನತಾ ದಳ ಸಮಾಜವಾದಿ ಪಕ್ಷ ಡಿಎಂಕೆ ಟಿಡಿಪಿ ಅಸ್ಸಾಂ ಗಣ ಪರಿಷತ್‌ ಆಲ್‌ ಇಂಡಿಯಾ ಇಂದಿರಾ ಕಾಂಗ್ರೆಸ್‌ (ತಿವಾರಿ) ಎಡಪಕ್ಷಗಳು ನ್ಯಾಷನಲ್‌ ಕಾನ್ಫರೆನ್ಸ್‌

ಆಧಾರ: ಗ್ರಾನ್‌ವಿಲ್‌ ಆಸ್ಟಿನ್‌ ಅವರ ‘ಇಂದಿರಾ ಗಾಂಧಿ ಡಿಫೀಟೆಡ್‌–ಜನತಾ ಫಾರ್ಮ್ಸ್‌ ಗವರ್ನಮೆಂಟ್‌’ ಪುಸ್ತಕ, ಬ್ರಿಟಾನಿಕಾ ಎನ್‌ಸೈಕ್ಲೊಪೀಡಿಯಾ, ಎಂ.ಪಿ. ಸಿಂಗ್‌ ಅವರ ‘ಇಂಡಿಯಾಸ್‌ ನ್ಯಾಷನಲ್‌ ಫ್ರಂಟ್‌ ಅಂಡ್ ಯುನೈಟೆಡ್‌ ಫ್ರಂಟ್‌ ಕೊಯಲಿಷನ್‌ ಗವರ್ನಮೆಂಟ್ಸ್‌’ ಲೇಖನ, ಚುನಾವಣಾ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT