ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ಆಳ–ಅಗಲ: ಅಭಿಮಾನಿಗಳ ಬೇರು–ಬಿಳಲು
ಆಳ–ಅಗಲ: ಅಭಿಮಾನಿಗಳ ಬೇರು–ಬಿಳಲು
Published 5 ಜುಲೈ 2024, 21:59 IST
Last Updated 5 ಜುಲೈ 2024, 21:59 IST
ಅಕ್ಷರ ಗಾತ್ರ

ದರ್ಶನ್ ಜೈಲಿನಲ್ಲಿರುವ ಈ ಹೊತ್ತಿನಲ್ಲಿಯೂ ಸಾಮಾಜಿಕ ಮಾಧ್ಯಮದಲ್ಲಿ ಹುಚ್ಚು ಅಭಿಮಾನದ ಹೊಳೆ ಹರಿಸುವವರನ್ನು ಕಾಣುತ್ತಿದ್ದೇವೆ. ಪುನೀತ್ ರಾಜಕುಮಾರ್, ಯಶ್, ದರ್ಶನ್, ಸುದೀಪ್ ಈ ನಟರು ಹೊಂದಿರುವ ದೊಡ್ಡ ಅಭಿಮಾನಿಗಳ ಬಳಗದ ಚಟುವಟಿಕೆ ಡಿಜಿಟಲ್ ಲೋಕದಲ್ಲಿ ವ್ಯಾಪಕವಾಗಿದೆ. ಆದರೆ, ಕನ್ನಡದ ನಟರಿಗೆ ಅಭಿಮಾನಿಗಳ ಸಂಘ ಹುಟ್ಟಿದ ಸಂದರ್ಭ ಬೇರೆಯದೇ ಆಗಿತ್ತು. ರಾಜಕುಮಾರ್ ನೂರನೇ ಚಿತ್ರದ ಕಾಲಘಟ್ಟದಲ್ಲಿ ಸದುದ್ದೇಶದಿಂದ ಕಟ್ಟಲಾದ ಅಭಿಮಾನಿಗಳ ಸಂಘ, ಕಾಲಾಂತರದಲ್ಲಿ ಬದಲಾಗುತ್ತಾ ಬಂತು. ಅವುಗಳ ಜಾಯಮಾನದ ಚಿತ್ರಣ ಕಟ್ಟಿಕೊಡುವ ಪ್ರಯತ್ನವಿದು...

ಗೋಕಾಕ್ ಚಳವಳಿ ನಡೆದ ಸಂದರ್ಭ. ಬೆಂಗಳೂರಿನಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಸಂಶೋಧಕರೂ ಆಗಿದ್ದ ಹೋರಾಟಗಾರ ಎಂ.ಚಿದಾನಂದಮೂರ್ತಿ ಆ ದಿನ ನಡುಗುತ್ತಿದ್ದರು. ಅಂದಿನ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಪೊಲೀಸರಿಗೆ ಮೊದಲೇ ದೂರು ಕೊಟ್ಟಿದ್ದರು. ಆ ದಿನ ಗಲಾಟೆಗಳಾಗುವ ಸಂಭವ ಇದೆ ಎನ್ನುವ ಮಾಹಿತಿ ಪೊಲೀಸರಿಗೂ ಸಿಕ್ಕಿತ್ತು. ಆಗಿನ ಪೊಲೀಸ್ ಕಮಿಷನರ್ ಆಗಿದ್ದ ನಿಜಾಮುದ್ದೀನ್ ಅವರು, ನಟ ರಾಜಕುಮಾರ್ ವಿಜಯೋತ್ಸವಕ್ಕೆ ಬರಕೂಡದು ಎಂದೇ ಕಡ್ಡಿ ತುಂಡುಮಾಡಿದಂತೆ ಹೇಳಿದ್ದರು. ಆದರೆ, ಅಭಿಮಾನಿಗಳ ಆಗ್ರಹಕ್ಕೆ ರಾಜಕುಮಾರ್ ತಲೆಬಾಗಿದ್ದರು. ವಿಜಯೋತ್ಸವಕ್ಕೆ ಬಂದರು. ಅಭಿಮಾನಿಗಳಿಂದ ಸಮಾರಂಭದಲ್ಲಿ ಅಲ್ಲೋಲಕಲ್ಲೋಲ ಆಯಿತು. ಚಿದಾನಂದಮೂರ್ತಿ (ಚಿ.ಮೂ.) ಅವರಿಗೆ ಪೊಲೀಸರ ಲಾಠಿ ಏಟು ಬಿತ್ತು. ಅರಸಪ್ಪ ಎಂಬ ಹೋರಾಟಗಾರರು ಮೃತಪಟ್ಟರು. ‘ವಿಜಯೋತ್ಸವವಲ್ಲ; ಸಂತಾಪ ಸಭೆ’ ಎಂದೇ ಆಗ ಹೋರಾಟಗಾರ ಜಿ.ಕೆ.ಸತ್ಯ ಅದನ್ನು ಬಣ್ಣಿಸಿದ್ದರು.

ಚಲನಚಿತ್ರ ನಟರ ಅಭಿಮಾನಿಗಳೆಂದರೆ, ದಾಂದಲೆ ಮಾಡುವವರು ಎಂಬ ಅಭಿಪ್ರಾಯಕ್ಕೆ ಪುಷ್ಟಿ ಕೊಡುವ ಪ್ರಸಂಗಗಳು ಆ ದಿನ ನಡೆದಿದ್ದವು.

ಕನ್ನಡ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಹಾಗೂ ಚಿ.ಮೂ. ಅವರ ಶಿಷ್ಯ ಆಗಿದ್ದ ರಾ.ನಂ.ಚಂದ್ರಶೇಖರ ಅವರು ಈ ಪ್ರಸಂಗವನ್ನು ಮೆಲುಕು ಹಾಕಿದರು.

ಈಗ ನಟ ದರ್ಶನ್ ಜೈಲಿನಲ್ಲಿದ್ದಾರೆ. ಹೊರಗಿರುವ ಅವರ ಅಭಿಮಾನಿಗಳಲ್ಲಿ ಕೆಲವರು ಈಗಲೂ ಆ ನಟ ಏನೂ ತಪ್ಪು ಮಾಡಿಲ್ಲ ಎಂಬ ನಂಬಿಕೆಗೆ ಜೋತುಬಿದ್ದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರ ಪರವಾಗಿ ಹಾಗೂ ಟೀಕಿಸುವವರ ವಿರುದ್ಧ ಬೆದರಿಕೆ ಶೈಲಿಯ ಪೋಸ್ಟ್‌ಗಳನ್ನು ಹಾಕುತ್ತಿರುವ ಅಭಿಮಾನಿಗಳ ಸಂಖ್ಯೆಯೂ ದೊಡ್ಡದಿದೆ. ಈ ಹೊತ್ತಿನಲ್ಲಿ ಅಭಿಮಾನಿಗಳ ಸಂಘದ ಬೇರು–ಬಿಳಲುಗಳ ಸಮಾಚಾರ ಕೂಡ ಮುಖ್ಯವೇ ಹೌದು.

ಇಷ್ಟಕ್ಕೂ ನಟರಿಗೆಂದೇ ಕರ್ನಾಟಕದಲ್ಲಿ ಅಭಿಮಾನಿಗಳ ಸಂಘ ಹುಟ್ಟಿದ್ದು ಯಾವಾಗ ಎನ್ನುವ ಪ್ರಶ್ನೆ ಯಾರನ್ನೇ ಕಾಡಲಿಕ್ಕೂ ಸಾಕು. ಈ ಪ್ರಶ್ನೆ ಹಾಕಿದಾಗ, ರಾ.ನಂ.ಚಂದ್ರಶೇಖರ ಇನ್ನೊಂದು ನೆನಪಿಗೆ ಜಾರಿದರು.

‘ರಾಜಕುಮಾರ್ ಅಭಿನಯದ ನೂರನೇ ಚಿತ್ರ ‘ಭಾಗ್ಯದ ಬಾಗಿಲು’ ತೆರೆಕಂಡಿದ್ದು 1968ರಲ್ಲಿ. ಆ ಸಿನಿಮಾ ಯಶಸ್ವಿಯಾದ ನಂತರವಷ್ಟೆ ಅಭಿಮಾನಿಗಳ ಸಂಘ ಹುಟ್ಟಿಕೊಂಡಿದ್ದು. ತಮಿಳಿನ ಎಂ.ಜಿ.ರಾಮಚಂದ್ರನ್, ಶಿವಾಜಿ ಗಣೇಶನ್ ತರಹದ ನಟರಿಗೆ ನಮ್ಮ ನಾಡಿನಲ್ಲೂ ಅಭಿಮಾನಿಗಳ ಸಂಘಗಳು ಇದ್ದವು. ಅದೇ ಸ್ಫೂರ್ತಿಯಿಂದ ಇಲ್ಲಿಯೂ ರಾಜಕುಮಾರ್ ಅಭಿಮಾನಿಗಳ ಸಂಘ ಜನ್ಮತಳೆಯಿತು. ರಾಮೇಗೌಡ ಎನ್ನುವವರು ಅದರ ಅಧ್ಯಕ್ಷರಾದರು. ಅವರು ನಂಜನಗೂಡಿನವರು. ರಾಜಕುಮಾರ್ ಅವರ ಸುತ್ತಮುತ್ತಲೇ ಇದ್ದ ಕೆಲವರು ಮೊದಲಿಗೆ ಈ ಅಭಿಮಾನಿಗಳ ಸಂಘಕ್ಕೆ ಓನಾಮ ಹಾಕಿದರು’– ಇದನ್ನು ನೆನಪಿಸಿಕೊಂಡ ನಂತರ, ಸಂಘದವರ ಅನೇಕ ಸತ್ಕಾರ್ಯಗಳನ್ನು ರಾ.ನಂ. ಸ್ಮರಿಸಿಕೊಂಡರು. ಸರ್ಕಾರಿ ಉದ್ಯೋಗಗಳಲ್ಲಿನ ಮೂರು ಹಾಗೂ ನಾಲ್ಕನೇ ದರ್ಜೆ ನೌಕರರ ಆಯ್ಕೆ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸುವುದನ್ನು ಕಡ್ಡಾಯಗೊಳಿಸಲು, ಅಚ್ಚು ಮತ್ತು ಗಾಲಿ ಕಾರ್ಖಾನೆಯಲ್ಲಿ ಕನ್ನಡಿಗರ ನೇಮಕಾತಿಗೆ ಅವಕಾಶ ಕಲ್ಪಿಸಲು ನಡೆಸಿದ ಹೋರಾಟಗಳು ಕೊಟ್ಟಿದ್ದ ಸತ್ಫಲವನ್ನು ಅವರು ಹೊಗಳಿದರು.

ವಿಧಾನಸೌಧ ಮುಂಭಾಗ 1983ರ ನವೆಂಬರ್‌1ರಂದು ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಸೇರಿದ್ದ ರಾಜಕುಮಾರ್‌ ಅವರ ಅಭಿಮಾನಿಗಳು ಮತ್ತು ಸಾರ್ವಜನಿಕರು

ವಿಧಾನಸೌಧ ಮುಂಭಾಗ 1983ರ ನವೆಂಬರ್‌1ರಂದು ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಸೇರಿದ್ದ ರಾಜಕುಮಾರ್‌ ಅವರ ಅಭಿಮಾನಿಗಳು ಮತ್ತು ಸಾರ್ವಜನಿಕರು

ಪ್ರಜಾವಾಣಿ ಸಂಗ್ರಹ ಚಿತ್ರ

ಗೋವಿಂದಹಳ್ಳಿ ದೇವೇಗೌಡ ಅವರಂಥವರು ರಾಜಕುಮಾರ್ ಕುರಿತ ಪುಸ್ತಕಗಳನ್ನು ಹೊರತಂದದ್ದು, ರಾಜಕುಮಾರ್ ಅಭಿಮಾನಿಗಳೇ ರಕ್ತದಾನ ಶಿಬಿರಗಳನ್ನು ನಡೆಸಿದ್ದು, ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್‌ಪುಸ್ತಕ ವಿತರಣೆ ಮಾಡಿದ್ದು, ಸಾಮೂಹಿಕ ವಿವಾಹ ಆಯೋಜಿಸಿದ್ದು... ಹೀಗೆ ಸತ್ಕಾರ್ಯದ ಪಟ್ಟಿ ಸಣ್ಣದೇನೂ ಇಲ್ಲ.

ಅಭಿಮಾನಿಗಳಲ್ಲಿ ಮೊದಲಿನಿಂದಲೂ ಒಂದು ಅತಿರೇಕದ ಗುಣ ಇದೆ ಎಂದು ಚಿದಾನಂದಮೂರ್ತಿ ಅವರಿಗೆ ಅನಿಸಿತ್ತು. ಅದನ್ನೇ ಅವರು ಎಚ್ಚರಿಕೆ ನೀಡುವ ದನಿಯಲ್ಲಿ ರಾ.ನಂ. ಅವರ ಕಿವಿಮೇಲೆ ಹಾಕುತ್ತಿದ್ದರು.

‘ನಾರಾಯಣಗೌಡರು ಕರೆದಿದ್ದ ಸಮಾರಂಭಕ್ಕೆ ಹೋಗಿ ಒಮ್ಮೆ ಭಾಷಣ ಮಾಡಿ ಬಂದದ್ದೆ, ಕನ್ನಡ ಶಕ್ತಿ ಕೇಂದ್ರದ ತಮ್ಮ ಹುದ್ದೆಗೆ ರಾಜೀನಾಮೆ ಕೊಡುವಂತೆ ರಾ.ನಂ. ಅವರನ್ನು ಒತ್ತಾಯಿಸಿದ್ದರು. ಆಗ ನನಗೆ ಕ್ಷಮೆ ಕೇಳದೆ ಬೇರೆ ವಿಧಿ ಇರಲಿಲ್ಲ’ ಎಂದರು.

ಅಭಿಮಾನಿಗಳ ಸಂಘದವರ ಹೋರಾಟದ ಹೆಜ್ಜೆಗಳಲ್ಲಿ ಶಿಸ್ತು ಇರಲಿಲ್ಲ ಎನ್ನುವುದು ಅವರ ಅನುಭವದ ನುಡಿ. ‘ನಾಡಿನಲ್ಲಿ ಕನ್ನಡ ಕಡ್ಡಾಯ’ಕ್ಕೆ ಒತ್ತಾಯಿಸಿ ಸುಮಾರು 1985ರಲ್ಲಿ ನಡೆದಿದ್ದ ಹೋರಾಟದ ಸಂದರ್ಭದಲ್ಲಿ ಗೋಲಿಬಾರ್ ಆಗಿತ್ತು. ಆಗ ಇಬ್ಬರು ಮೃತಪಟ್ಟಿದ್ದರು. ಇಂತಹ ಕೆಲವು ಮಹತ್ವದ ಪ್ರಸಂಗಗಳು ಅಭಿಮಾನಿಗಳ ಚಳವಳಿಗಳಲ್ಲಿ ಇದ್ದ ಬಿರುಕುಗಳಿಗೆ ಕನ್ನಡಿ ಹಿಡಿಯುತ್ತವೆ ಎನ್ನುವುದು ರಾ.ನಂ. ಅವರ ವಾದ.

ಉತ್ತಮ ಉದ್ದೇಶ, ಶಿಸ್ತಿಲ್ಲದ ಚಟುವಟಿಕೆ: ‘ಅಭಿಮಾನಿ’ ಪತ್ರಿಕೆಯ ಸಂಪಾದಕರಾಗಿದ್ದ, ಹೋರಾಟಗಾರರೂ ಆದ ಜಾಣಗೆರೆ ವೆಂಕಟರಾಮಯ್ಯ ಅವರು ರಾ.ನಂ. ನೆನಪುಗಳನ್ನು ಇನ್ನಷ್ಟು ವಿಸ್ತರಿಸಿದರು.

ಗೋಕಾಕ್ ಚಳವಳಿ ನಡೆದ ಸಂದರ್ಭದಲ್ಲಿ ‘ಅಖಿಲ ಕರ್ನಾಟಕ ರಾಜಕುಮಾರ್ ಅಭಿಮಾನಿಗಳ ಸಂಘ’ ಶುರುವಾದುದು. ರಾಜಕುಮಾರ್ ಆಪ್ತ ವಲಯದವರೇ ಇದ್ದ ಈ ಸಂಘದ ಉದ್ದೇಶ ಉತ್ತಮವಾಗಿತ್ತಾದರೂ, ಚಟುವಟಿಕೆಯನ್ನು ಶಿಸ್ತುಬದ್ಧಗೊಳಿಸುವಷ್ಟು ಬಲ ಇರಲಿಲ್ಲ ಎನ್ನುವುದು ಜಾಣಗೆರೆ ಅವರ ಅಭಿಪ್ರಾಯ.

ಈ ಸಂಘ ಹುಟ್ಟುವ ಹತ್ತು ವರ್ಷಗಳ ಮೊದಲೇ ‘ಸಚಿವ’ ಪತ್ರಿಕೆ ನಡೆಸುತ್ತಿದ್ದ ಶ್ರೀಧರ್ ಅವರು ‘ಡಾ ರಾಜಕುಮಾರ್ ಫ್ಯಾನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ ಕಟ್ಟಿದ್ದರು; ಅದೂ 1970ರ ದಶಕದಲ್ಲಿ. ಆ ಸಂಘವನ್ನು ಖುದ್ದು ಪಾರ್ವತಮ್ಮ ರಾಜಕುಮಾರ್ ಉದ್ಘಾಟಿಸಿದ್ದು, ತಾವೂ ಅದಕ್ಕೆ ಹಾಜರಾಗಿದ್ದನ್ನು ಜಾಣಗೆರೆ ನೆನಪಿಸಿಕೊಂಡರು.

ಅಭಿಮಾನಿಗಳ ಸಂಘ, ಗೋಕಾಕ್ ಹೋರಾಟ ಹಾಗೂ ರಾಜಕುಮಾರ್ ಸಿನಿಮಾಗಳ ಯಶಸ್ಸು ಈ ಮೂರಕ್ಕೂ ಸಾವಯವ ಸಂಬಂಧ ಇರುವುದನ್ನು ಅವರು ಗುರುತಿಸುತ್ತಾರೆ.

ಗೋಕಾಕ್ ಚಳವಳಿಗೆ ಮೊದಲು ರಾಜಕುಮಾರ್ ಅವರ ಸಿನಿಮಾಗಳಿಗೆ ಬರುತ್ತಿದ್ದ ಅಭಿಮಾನಿಗಳಿಗೂ ಆನಂತರ ಮುಗಿಬಿದ್ದು ನೋಡತೊಡಗಿದ ಪ್ರೇಕ್ಷಕರಿಗೂ ಮನಃಸ್ಥಿತಿಯಲ್ಲೇ ಒಂದು ವ್ಯತ್ಯಾಸ ಇದೆ ಎನ್ನುವ ಅವರು, ‘ಹೊಸಬೆಳಕು’, ‘ಹಾಲು–ಜೇನು’, ‘ಚಲಿಸುವ ಮೋಡಗಳು’ ರೀತಿಯ ಸಿನಿಮಾಗಳ ಗೆಲುವನ್ನು ಅದಕ್ಕೆ ಉದಾಹರಣೆಯಾಗಿನೀಡುತ್ತಾರೆ.

‘ರಾಘವೇಂದ್ರ ಮಹಾತ್ಮೆ’ ಚಿತ್ರದಲ್ಲಿ ರಾಜಕುಮಾರ್ ನಟಿಸಿದ್ದರು. ಬೆಂಗಳೂರಿನ ‘ಸ್ಟೇಟ್ಸ್’ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಆ ಸಿನಿಮಾಕ್ಕೆ ಉತ್ತಮ ಸ್ಪಂದನ ದೊರೆಯಲಿಲ್ಲ. ಆಗ ಅಭಿಮಾನಿಗಳೇ ಚಿತ್ರಮಂದಿರಲ್ಲಿ ಒಂದು ಹುಂಡಿ ಇಟ್ಟು, ಹಣವನ್ನು ಸಂಗ್ರಹಿಸುವ, ಆ ಮೂಲಕ ಸಿನಿಮಾ ಓಡಿಸುವ ಅಭಿಯಾನ ನಡೆಸಿದ್ದು ಅಪರೂಪದ ಪ್ರಸಂಗ.

ಒಂದು ಕಾಲದಲ್ಲಿ ರಾಜಕುಮಾರ್ ಅಭಿಮಾನಿಗಳ ಸಂಘದ 800 ಶಾಖೆಗಳು ಕರ್ನಾಟಕದಲ್ಲಿ ಇದ್ದುದನ್ನು ಜಾಣಗೆರೆ ಕಂಡಿದ್ದಾರೆ.

‘ರಾಜಕುಮಾರ್ ಸಂಘಗಳ ಹುಟ್ಟಿನ ನಂತರ ವಿಷ್ಣುವರ್ಧನ್, ಅಂಬರೀಶ್, ಶಂಕರ್‌ನಾಗ್‌ ಅವರ ಅಭಿಮಾನಿ ಸಂಘಗಳೂ ತಲೆಎತ್ತಿದವು. ಮೆಜೆಸ್ಟಿಕ್ ಸರ್ಕಲ್‌ನಲ್ಲಿ ಆಗ ಏಕಕಾಲದಲ್ಲಿ ಇಬ್ಬರು ಸ್ಟಾರ್‌ಗಳ ಸಿನಿಮಾ ತೆರೆಕಂಡಾಗ ಅಲ್ಲಿ ಕಟ್ಔಟ್, ಸ್ಟಾರ್ ಕಟ್ಟುವ ಪೋಟಿ ಏರ್ಪಡುತ್ತಿತ್ತು. ಕೆಲವರು ಸಗಣಿ ಹಚ್ಚುವ ಅತಿರೇಕಕ್ಕೂ ಹೋಗುತ್ತಿದ್ದರು. ನೆಚ್ಚಿನ ನಟನ ಸಿನಿಮಾ ತೆರೆಕಂಡಾಗ ಮೊದಲೇ ಟಿಕೆಟ್‌ಗಳನ್ನು ಖರೀದಿಸಿ ಬ್ಲಾಕ್‌ನಲ್ಲಿ ಮಾರಿಕೊಳ್ಳುವ ಪರಿಪಾಟ ಇತ್ತು. ಸಣ್ಣಪುಟ್ಟ ಲೋಭಿತನವಿತ್ತು. ಕ್ರಮೇಣ ನಾಯಕನ ಹೆಸರಲ್ಲಿ ಏನು ಮಾಡಿದರೂ ನಡೆಯುತ್ತದೆ ಎನ್ನುವ ಭಾವನೆ ಹೆಚ್ಚಾಗತೊಡಗಿತು. ಅಭಿಮಾನಿ ಸಂಘಗಳ ಹೆಸರಿನಲ್ಲಿ ವಸೂಲಿಗೆ ಇಳಿದರು’ ಎಂದು ಜಾಣಗೆರೆ ವಿಶ್ಲೇಷಿಸುತ್ತಾರೆ.

ಅಭಿಮಾನಿ ಸಂಘಗಳಲ್ಲಿ ಇರುವ ಬಹುತೇಕರು ಒಳ್ಳೆಯ ಉದ್ಯೋಗಗಳಲ್ಲಿ ಇರುತ್ತಿರಲಿಲ್ಲ. ಬಹಳ ಬೇಗ ದಿಕ್ಕು ತಪ್ಪುತ್ತಿದ್ದರು. ಹುಚ್ಚು ಹೊಳೆಯಲ್ಲಿ ತೇಲಾಡುತ್ತಿದ್ದರು. ಈಗಲೂ ಸಾಮಾಜಿಕ ಮಾಧ್ಯಮದಲ್ಲಿ ಅದೇ ಚಾಳಿ ಮುಂದುವರಿದಿದೆ ಎನ್ನುವುದು ಅವರ ಪ್ರತಿಪಾದನೆ.

ಪುನೀತ್ ರಾಜಕುಮಾರ್ ತೀರಿಹೋದ ನಂತರ ಅವರ ಅಭಿಮಾನಿಗಳು ಆ ರೀತಿ ಇದ್ದಾರೆ ಎನ್ನುವಂತೇನೂ ಕಾಣಲಿಲ್ಲವಲ್ಲ ಎಂದು ಗಮನಸೆಳೆದಾಗ, ಅವರು ಹೇಳಿದ್ದಿಷ್ಟು: ‘ಪುನೀತ್ ಆತ್ಮಶೋಧ ಮಾಡಿಕೊಂಡು ಬೆಳೆದಿದ್ದವರು. ಅಲ್ಪಾವಧಿಯಲ್ಲಿಯೇ ಒಳ್ಳೆಯ ಕಲಾವಿದರಾಗಿ ಬೆಳೆದಿದ್ದರು. ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮ ಅವರ ವರ್ಚಸ್ಸನ್ನು ಹೆಚ್ಚಿಸಿತ್ತು. ಅವರು ಮಾಡಿದ್ದ ಅನೇಕ ಮಾನವೀಯ ಕೆಲಸಗಳು ಚಿಕ್ಕ ವಯಸ್ಸಿನಲ್ಲೇ ಅವರು ತೀರಿಕೊಂಡಾಗ ಅಭಿಮಾನದ ರೂಪದಲ್ಲಿ ವ್ಯಕ್ತವಾಯಿತು. ಅಂತಹ ಅಭಿಮಾನಿಗಳ ಮನಃಸ್ಥಿತಿಯೇ ಬೇರೆ.’

ಹೀಗೆ ಹೇಳಿದ ನಂತರ ಅವರು ವಿಷ್ಣುವರ್ಧನ್ ಜೀವನದಲ್ಲಿ ಅಭಿಮಾನಿಗಳಿಂದ ಆದ ತೊಂದರೆಗೆ ಉದಾಹರಣೆ ಕೊಟ್ಟರು: ವಿಷ್ಣು ತಂದೆ ನಿಧನರಾದಾಗ, ಶವದ ಮೆರವಣಿಗೆ ಸಾಗುತ್ತಿದ್ದಾಗ ಕೆಲವರು ಕಲ್ಲು ಬೀರಿದ್ದರು. ಬೆದರಿಕೆ ಕರೆಗಳು, ಚಿತ್ರಹಿಂಸೆಯನ್ನು ವಿಷ್ಣು ಅನುಭವಿಸಿದ್ದ ಕಾರಣಕ್ಕೇ ಅವರು ಅಂಬರೀಶ್ ಸ್ನೇಹದ ನೆರಳನ್ನು ಹೆಚ್ಚು ಆಶ್ರಯಿಸಿದ್ದು. ವಿಷ್ಣುವಿನ ಪಾಲಿಗೆ ‘ವಿಷ್ಣು ಸೇನೆ’ ಎಂಬ ಅಭಿಮಾನಿ ಬಳಗ ಅನಿವಾರ್ಯ ರಕ್ಷಣಾಕವಚವಾಗಿತ್ತು.

ಈಗಿನ ನಟರಲ್ಲಿ ಯಶ್ ದುಡುಕಿಲ್ಲದೆ ಎಲೆಮರೆಯ ಕಾಯಿಯಂತೆ ಕೆಲಸ ಮಾಡಿಕೊಂಡಿದ್ದಾರೆನ್ನುವ ಜಾಣಗೆರೆ, ದರ್ಶನ್ ಹುಚ್ಚಾಟವನ್ನೇ ಅಭಿಮಾನಿಗಳೂ ಅನುಕರಿಸುತ್ತಿರುವ ಸಾಧ್ಯತೆಯೊಂದನ್ನು ಕೂಡ ಬಿಚ್ಚಿಟ್ಟರು. ಶಂಕರ್‌ನಾಗ್ ಚಿಕ್ಕ ವಯಸ್ಸಿಗೇ ತೀರಿಕೊಂಡಾಗ ಹುಟ್ಟಿದ ಅನುಕಂಪದ ಅಲೆಯು ಈಗಲೂ ಅವರ ಅಭಿಮಾನದ ಸೆಲೆಯಾಗಿ ಉಳಿದಿರುವುದಕ್ಕೆ ಕನ್ನಡಿ ಹಿಡಿದರು.

ಬೆಂಗಳೂರಿನ ಯಲಹಂಕದಲ್ಲಿರುವ ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರಾಜ್‌ಕುಮಾರ್ ಅಭಿಮಾನಿಗಳು  ಮೆರವಣಿಗೆ ನಡೆಸಿದ್ದರು.

ಬೆಂಗಳೂರಿನ ಯಲಹಂಕದಲ್ಲಿರುವ ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರಾಜ್‌ಕುಮಾರ್ ಅಭಿಮಾನಿಗಳು ಮೆರವಣಿಗೆ ನಡೆಸಿದ್ದರು.

ಪ್ರಜಾವಾಣಿ ಸಂಗ್ರಹ ಚಿತ್ರ

ದ್ವೇಷವಾಗದಿರಲಿ ಅಭಿಮಾನ

ಹಾಲಿವುಡ್ ನಟ ಸ್ಕಾಟ್ ವ್ಯಾಲಂಟೈನ್‌ಗೆ ಮೇಕಪ್ ಕೋಣೆಯಿಂದ ಹೊರಗೆ ನಡೆದು ಸಾಗಲೆಂದೇ ಒಂದು ಸುರಂಗ ನಿರ್ಮಿಸಿದ್ದರು. ಅಭಿಮಾನಿಗಳು ಆತನನ್ನು ಮುತ್ತಿಕೊಳ್ಳದಿರಲಿ ಎಂಬ ಕಾರಣಕ್ಕೆ ಆಗಿದ್ದ ವ್ಯವಸ್ಥೆ ಅದು. ಕಿಂಗ್‌ ಕಾಂಗ್‌–ದಾರಾಸಿಂಗ್ ನಡುವೆ ಬಾಕ್ಸಿಂಗ್ ನಡೆದರೆ, ಅವರ ಅಭಿಮಾನಿಗಳೂ ಹೊಡೆದಾಡಿಕೊಳ್ಳುವಷ್ಟು ಭಾವುಕತೆಯಿಂದ ಪ್ರತಿಕ್ರಿಯೆ ನೀಡುತ್ತಿದ್ದರು.

ಅಭಿಮಾನ ಇರುವುದೇ ಹಾಗೆ. ರಾಜಕುಮಾರ್ ಅವರೇ ಒಂದೊಮ್ಮೆ ಅಭಿಮಾನಿಗಳ ಅತಿರೇಕ ತಾಳಲಾರದೆ ತಮಗೆ ಯಾವ ಸಂಘವೂ ಇಲ್ಲ ಎಂದು ಘೋಷಿಸಿಬಿಟ್ಟಿದ್ದರು. ಕೆಲವರು ನಟರ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದರು.

ವಿಷ್ಣು ಅಭಿಮಾನಿಗಳನ್ನು ಕಂಡರೆ ರಾಜಕುಮಾರ್ ಅಭಿಮಾನಿಗಳಲ್ಲಿ ಅನೇಕರು ದಾಳಿ ಇಡುತ್ತಿದ್ದರು. ‘ಬಂಧನ’ ಸಿನಿಮಾ ತೆರೆಕಂಡಾಗ ಚಿತ್ರಮಂದಿರಗಳಲ್ಲಿ ಹೆಣ್ಣುಮಕ್ಕಳಿಗೆ ಬ್ಲೇಡ್‌ನಿಂದ ಕುಯ್ಯುವುದು, ಫ್ಯಾನ್‌ಗೆ ಖಾರದ ಪುಡಿ ಎರಚಿ ಎಲ್ಲೆಡೆ ಚಿಮ್ಮುವಂತೆ ಮಾಡಿ, ಕಣ್ಣುಗಳು ಉರಿಯುವಂತೆ ಮಾಡುವ ಕೃತ್ಯಗಳನ್ನು ಎಸಗಿದ್ದರು. ‘ಮುತ್ತಿನಹಾರ’ ಚಿತ್ರ ತೆರೆಕಂಡಾಗ, ತಲೆಬೋಳಿಸಿಕೊಂಡಿದ್ದ ವಿಷ್ಣು ಅಭಿಮಾನಿಯೊಬ್ಬನ ನೆತ್ತಿಗೆ ಹೊಲಿಗೆ ಹಾಕಿಸುವಂತೆ ಹಲ್ಲೆ ನಡೆಸಿದ್ದರು.

ರಾಜಕುಮಾರ್, ವಿಷ್ಣು ಇಬ್ಬರೂ ಚೆನ್ನಾಗಿಯೇ ಇದ್ದರು. ಅಂಬರೀಶ್ ಕೂಡ ಹಿಂಸೆಯನ್ನು ಒಪ್ಪುತ್ತಿರಲಿಲ್ಲ. ಅಭಿಮಾನಿಗಳಲ್ಲಿ ಕೆಲವರು ತಮ್ಮ ಗುಪ್ತ ಕಾರ್ಯಸೂಚಿಯಿಂದ ದುಷ್ಕೃತ್ಯ ಮಾಡುತ್ತಿದ್ದರು. ಆದರೆ, ಕನ್ನಡ ಸಿನಿಮಾಗಳು ಮೆಜೆಸ್ಟಿಕ್‌ನಲ್ಲಿ ತೆರೆಕಾಣುವಲ್ಲಿ ವಾಟಾಳ್ ನಾಗರಾಜ್ ಅವರಂತಹವರ ಪಾತ್ರ ಮುಖ್ಯವಾಗಿದೆ. ಅಭಿಮಾನವು ದ್ವೇಷ ಆಗದಿದ್ದರೆ ಅನಾಹುತವಾಗುವುದಿಲ್ಲ. ಶಿವರಾಜಕುಮಾರ್, ಸುದೀಪ್, ಯಶ್, ದರ್ಶನ್ ಅಭಿಮಾನಿಗಳು ಹಿಂಸಾತ್ಮಕವಾಗಿಯೇನೂ ಇರಲಿಲ್ಲ.

ಕಮಲ ಹಾಸನ್ ಅಭಿಮಾನಿಗಳು ಸಿನಿಮಾ ಗೆಲ್ಲಿಸಲೆಂದೇ ₹25 ಲಕ್ಷ ರೂಪಾಯಿ ಚೀಟಿ ಹಾಕಿದ್ದರು. ತೆಲುಗಿನ ನಾಗಾರ್ಜುನ ಅಭಿಮಾನಿಗಳು ಸಿನಿಮಾ ಬಿಡುಗಡೆಯಾದ ದಿನ ಟಿಕೆಟ್ ಕೊಂಡು ಮಾರಲು ದುಡ್ಡು ಹಿಡಿದುಕೊಂಡು ನಿಲ್ಲುತ್ತಿದ್ದರು. ಇದು ನಿಜದ ಅಭಿಮಾನ.

–ರಾಜೇಂದ್ರ ಸಿಂಗ್ ಬಾಬು, ಚಿತ್ರ ನಿರ್ದೇಶಕ

ಇದು ‘ಟಾಕ್ಸಿಕ್ ಫ್ಯಾನ್‌ಡಮ್‌’

ಸೆಲೆಬ್ರಿಟಿಗಳ ಆರಾಧನೆಯು ಪ್ರೌಢಾವಸ್ಥೆಯಿಂದಲೇ ಶುರುವಾಗುವ ಸಾಧ್ಯತೆ ಇರುತ್ತದೆ. ಇದನ್ನು ನಾವು ‘ಟಾಕ್ಸಿಕ್ ಫ್ಯಾನ್‌ಡಮ್‌’ ಎನ್ನುತ್ತೇವೆ. ಮನೆಯಲ್ಲಿ ಬಾಲ್ಯದಲ್ಲೇ ನೀತಿಪಾಠ ಹೇಳಿ, ರಾಮಾಯಣ–ಮಹಾಭಾರತದ ಉಪಕತೆಗಳನ್ನು ಕೇಳಿಸಿ, ಮಾದರಿ ನಾಯಕ ಹೇಗಿರಬೇಕು ಎಂದು ತಿಳಿಸುತ್ತಿದ್ದರು. ಇದು ಸಂಸ್ಕಾರ ರೂಢಿಸುತ್ತದೆ ಎನ್ನುವ ನಂಬಿಕೆ ಇತ್ತು.

ಈಗ ದೃಶ್ಯ ಮಾಧ್ಯಮದ ಪ್ರಭಾವ ತೀವ್ರವಾಗಿದೆ. ತೆರೆಮೇಲೆ ನೋಡುವ ತಮ್ಮಿಷ್ಟದ ನಾಯಕನ ಹೊಡೆದಾಟ ಒಳ್ಳೆಯದಕ್ಕೆ ಮಾದರಿ ಎಂದುಕೊಳ್ಳುತ್ತಾರೆ. ಸಾಮಾಜಿಕ ಮಾಧ್ಯಮ ಅದಕ್ಕೆ ಪೂರಕವಾದ ವಿಷಯಗಳನ್ನೇ ಉಣಬಡಿಸುತ್ತಾ ಇರುತ್ತದೆ. ಹೀಗಾದಾಗ, ನಾಯಕನ ವರ್ತನೆ ಅನುಕರಣೀಯ ಎನ್ನುವ ಕಲ್ಪನೆ ಮೂಡುತ್ತದೆ. ತಾವು ಬದುಕಿನಲ್ಲಿ ಅನುಭವಿಸಿರುವ ಹಿನ್ನಡೆ ಅಥವಾ ಶೋಷಣೆಗೆ ಪ್ರತಿರೋಧದ ಮಾರ್ಗವಾಗಿ ಈ ಆರಾಧನೆ ಗಟ್ಟಿಗೊಳ್ಳುತ್ತದೆ. ಇನ್ನು, ಮಾನಸಿಕ ಸಮಸ್ಯೆ ಇರುವವರಲ್ಲಿಯಂತೂ ಈ ಆರಾಧನಾಭಾವ ಆವರಿಸಿಕೊಳ್ಳುತ್ತದೆ.

ಈ ರೀತಿ ವರ್ತಿಸುವವರಿಗೆ ಒಂದೋ ಸರಿಯಾದ ಮಾರ್ಗದರ್ಶನ ದೊರೆತಿರುವುದಿಲ್ಲ ಅಥವಾ ತಮ್ಮ ದೌರ್ಬಲ್ಯ ಮೀರುವ ಮಾರ್ಗವಾಗಿ ನಾಯಕನ ಹೊಡೆದಾಟದ ವೈಖರಿ ಕಾಣಿಸುತ್ತದೆ.

ಈಗ ಸಾಮಾಜಿಕ ಮಾಧ್ಯಮದಲ್ಲಿ ನಟರ ಅಧಿಕೃತ ಖಾತೆಗಳಿರುತ್ತವೆ. ಅಲ್ಲಿ ಕಾಮೆಂಟ್ ಮಾಡುವುದು, ಹೊಗಳುವುದು, ಆ ಹೊಗಳಿಕೆಗೆ ಮೆಚ್ಚುಗೆ–ಟೀಕೆ ಬರುವುದು ಸಾಮಾನ್ಯ. ಇದರಿಂದ ಇಷ್ಟದ ನಾಯಕನ ಖಾಸಗಿ ಬದುಕಿನ ಭಾಗವೇ ಆಗಿ ಅಭಿಮಾನಿ ಪರಿಗಣಿತನಾಗುತ್ತಾನೆ. ಈ ಕಾರಣದಿಂದಲೂ ಅಭಿಮಾನ ಈ ಮಟ್ಟಕ್ಕೆ ಮುಟ್ಟುತ್ತಿದೆ. ಅನಾಮಧೇಯರಾಗಿ ಪ್ರತಿಕ್ರಿಯಿಸುವ ಅವಕಾಶ, ಇಂತಹ ಧೋರಣೆಯ ಬೆಂಕಿಗೆ ಸುರಿಯಲು ಇಂಧನವೂ ಹೌದಾಗಿದೆ.

–ಡಾ.ಪ್ರೀತಿ ಶಾನಭಾಗ್, ಮನೋವೈದ್ಯೆ, ಶಿವಮೊಗ್ಗ

ಸಣ್ಣಪುಟ್ಟದ್ದಕ್ಕೂ ತಕರಾರು

‘ಒಡಹುಟ್ಟಿದವರು’ ಸಿನಿಮಾ ಬಿಡುಗಡೆಯಾದ ಸಂದರ್ಭ. ರಾಜಕುಮಾರ್ ಹಾಗೂ ಅಂಬರೀಶ್ ಇಬ್ಬರೂ ನಟಿಸಿದ್ದ ಚಿತ್ರ ಅದು. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಅದು ತೆರೆಕಂಡಿತು. ಅದೇ ಕಾಲಘಟ್ಟದಲ್ಲಿ ವಿಷ್ಣುವರ್ಧನ್ ಅಭಿನಯದ ‘ನಿಷ್ಕರ್ಷ’ ಸಿನಿಮಾ ನರ್ತಕಿ ಚಿತ್ರಮಂದಿರದಲ್ಲಿ ಇತ್ತು. ಅಭಿಮಾನಿಗಳ ನಡುವೆ ತಿಕ್ಕಾಟ ಆಗಬಹುದು ಎಂದು ಆ ಚಿತ್ರವನ್ನು ‘ತ್ರಿವೇಣಿ’ ಚಿತ್ರಮಂದಿರಕ್ಕೆ ಸ್ಥಳಾಂತರಿಸಿದರು. ಚಿತ್ರಮಂದಿರದ ಎದುರು ಇದ್ದ ಕಟ್‌ಔಟ್‌ಗಳಲ್ಲಿ ಅಂಬರೀಶ್ ಅವರದ್ದು ರಾಜಕುಮಾರ್ ಅವರದ್ದಕ್ಕಿಂತ ಎರಡು ಅಡಿ ಎತ್ತರವಿತ್ತು. ಅಭಿಮಾನಿಗಳು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆಗ ಅಂಬರೀಶ್ ಕಟ್‌ಔಟ್‌ ಅನ್ನು ಕತ್ತರಿಸಿ, ರಾಜಕುಮಾರ್ ಅವರ ಕಟೌಟ್‌ಗೆ ಹೊಂದುವ ಎತ್ತರಕ್ಕೆ ತರಲಾಯಿತು. ವಿಷ್ಣು ಪೋಸ್ಟರ್‌ನಲ್ಲಿ ಶಸ್ತ್ರಾಸ್ತ್ರ ಇತ್ತು. ಅದು ರಾಜಕುಮಾರ್ ಕಟ್‌ಔಟ್‌ ಕಡೆಗೆ ತೋರುತ್ತಿದೆ ಎಂದು ಕೆಲವು ಅಭಿಮಾನಿಗಳು ತಕರಾರು ತೆಗೆದರು. ನಾನು ಆಗ ಅದೇ ಪ್ರದೇಶದ ವ್ಯಾಪ್ತಿಯಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದೆ. ಅದೇ ರಸ್ತೆಯ ಇನ್ನೊಂದು ಚಿತ್ರಮಂದಿರದಲ್ಲಿ ವಿಷ್ಣು ಅಭಿನಯದ ಬೇರೆ ಚಿತ್ರವಿತ್ತು. ಶಸ್ತ್ರಾಸ್ತ್ರ ಆ ಕಡೆಗೆ ಇದೆ ಎಂದು ತೋರಿಸಿದೆ. ನನ್ನ ಅಭಿಪ್ರಾಯವನ್ನು ಅವರೆಲ್ಲ ಒಪ್ಪಿ, ಜೈಕಾರ ಹಾಕುತ್ತಾ ನಡೆದಿದ್ದರು. 

ಗೋಕಾಕ್ ಚಳವಳಿಯ ನಂತರ ರಾಜಕುಮಾರ್ ಅಭಿಮಾನಿಗಳ ಸಂಘದ ಶಾಖೆಗಳು ಹೆಚ್ಚಾಗಿದ್ದವು. ಒಂದೊಮ್ಮೆ ಮಲ್ಲೇಶ್ವರ ಕ್ಷೇತ್ರದಿಂದ ಅಭಿಮಾನಿಗಳ ಸಂಘದ ಅಧ್ಯಕ್ಷರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ, ಸೋತಿದ್ದರು. ನಾರಾಯಣಗೌಡರು ಅವೆನ್ಯೂ ರಸ್ತೆಯ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದರು. ‘ಅಭಿಮಾನಿ’ ವೆಂಕಟೇಶ್, ಸಾ.ರಾ. ಗೋವಿಂದ್ ಇವರೆಲ್ಲರೂ ಅದೇ ಕಾಲಘಟ್ಟದಲ್ಲಿ ಚಟುವಟಿಕೆಯಿಂದ ಇದ್ದರು. ಪಾರ್ವತಮ್ಮ ರಾಜಕುಮಾರ್ ಅವರು ಈ ಸಂಘಗಳ ಮೇಲೆ ಹಿಡಿತ ಹೊಂದಿದ್ದರು. 

ಆಗೆಲ್ಲ ಅಭಿಮಾನಿಗಳು ಸಣ್ಣಪುಟ್ಟ ತಕರಾರುಗಳನ್ನು ತೆಗೆಯುತ್ತಿದ್ದರು. ಯಾರೂ ವಸೂಲಿಗೆ ಇಳಿದಿರಲಿಲ್ಲ. 

–ಬಿ.ಕೆ.ಶಿವರಾಂ, ನಿವೃತ್ತ ಎಸಿಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT