ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ– ಅಗಲ: ಚುಟುಕು ಕ್ರಿಕೆಟ್‌, ‘ದೊಡ್ಡವರೆಲ್ಲಾ ಜಾಣರಲ್ಲ, ಚಿಕ್ಕವರು ಯಾರೂ ಇಲ್ಲ’

Last Updated 6 ನವೆಂಬರ್ 2022, 19:32 IST
ಅಕ್ಷರ ಗಾತ್ರ

ಚುಟುಕು ಕ್ರಿಕೆಟ್ ಮಾದರಿಯಲ್ಲಿ ‘ದೊಡ್ಡವರೆಲ್ಲಾ ಜಾಣರಲ್ಲ, ಚಿಕ್ಕವರು ಯಾರೂ ಇಲ್ಲ’ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಭಾನುವಾರ ಬೆಳ್ಳಂಬೆಳಿಗ್ಗೆ (ಭಾರತೀಯ ಕಾಲಮಾನ) ಅಡಿಲೇಡ್ ಓವಲ್ ಕ್ರೀಡಾಂಗಣ ದಲ್ಲಿ ಬಲಾಢ್ಯ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಡಚ್ಚರ ಪಡೆ ಈ ಮಾತನ್ನು ಮತ್ತೊಮ್ಮೆ ನಿಜಮಾಡಿತು. ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ರ ಹಂತದಿಂದ ನಾಲ್ಕರ ಹಂತಕ್ಕೆ ಪ್ರವೇಶಿಸುವ ಎರಡು ತಂಡಗಳ ನಿರ್ಣಯ ಇದೇ ದಿನ ಆಗಬೇಕಿತ್ತು. ಕ್ರಿಕೆಟ್‌ ಲೋಕದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ನೆದರ್ಲೆಂಡ್ಸ್‌ ವಿರುದ್ಧ ದಕ್ಷಿಣ ಆಫ್ರಿಕಾ ಸುಲಭವಾಗಿ ಜಯಿಸುವ ನಿರೀಕ್ಷೆ ಸಹಜವಾಗಿತ್ತು.

ಅನುಭವಿ ಬೌಲರ್‌ಗಳಾದ ಕಗಿಸೊ ರಬಾಡ, ಲುಂಗಿ ಗಿಡಿ, ಎನ್ರಿಚ್ ನಾಕಿಯಾ, ಸ್ಫೋಟಕ ಶೈಲಿಯ ಬ್ಯಾಟರ್‌ಗಳಾದ ರಿಲೀ ರೊಸೊ, ಡೇವಿಡ್ ಮಿಲ್ಲರ್, ಕ್ವಿಂಟನ್ ಡಿಕಾಕ್ ಹಾಗೂ ಏಡನ್ ಮರ್ಕರಂ ಅವರ ಮುಂದೆ ಇದೇ ಮೊದಲ ಬಾರಿ ಕಣಕ್ಕಿಳಿದಿದ್ದ ನೆದರ್ಲೆಂಡ್ಸ್‌ ಆಚ್ಚರಿಯ ಜಯ ಸಾಧಿಸಿತು. ಅರ್ಹತಾ ಸುತ್ತಿನಲ್ಲಿ ಕಷ್ಟಪಟ್ಟು ಸೂಪರ್ 12ಕ್ಕೆ ಅರ್ಹತೆ ಗಿಟ್ಟಿಸಿದ್ದ ತಂಡಕ್ಕೆ ಈ ಜಯವು ವರದಾನವಾಗಿದೆ. ಗುಂಪಿನಲ್ಲಿ ಎರಡು ಜಯ ಸಾಧಿಸಿದ ನೆದರ್ಲೆಂಡ್ಸ್ ಮುಂದಿನ ಬಾರಿ ಟಿ20 ವಿಶ್ವಕಪ್ ಮುಖ್ಯಸುತ್ತಿಗೆ ನೇರ ಅರ್ಹತೆ ಗಿಟ್ಟಿಸಿದೆ. ಇದೇನು ಸಣ್ಣ ಸಾಧನೆಯಲ್ಲ.

ಇಂತಹ ಅಚ್ಚರಿಯ ಫಲಿತಾಂಶಗಳೇ ವಿಶ್ವಕಪ್ ಟೂರ್ನಿಗಳನ್ನು ರೋಚಕಗೊಳಿಸುತ್ತವೆ. ಅಲ್ಲದೇ ಕ್ರಿಕೆಟ್ ಆಟದ ಮೌಲ್ಯವನ್ನೂ ವರ್ಧಿಸುತ್ತವೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅತಿ ಆತ್ಮವಿಶ್ವಾಸ ಹಾಗೂ ಎದುರಾಳಿಯನ್ನು ಹಗುರವಾಗಿ ಪರಿಗಣಿಸುವುದು ಬಹಳ ದುಬಾರಿಯಾಗುವುದರಲ್ಲಿ ಎರಡು ಮಾತಿಲ್ಲ. ಈಗ ನಡೆದಿರುವ ಟೂರ್ನಿಯ ಇಲ್ಲಿಯವರೆಗಿನ ಫಲಿತಾಂಶಗಳನ್ನು ನೋಡಿದರೆ ಇಂತಹ ಅಚ್ಚರಿಗಳು ಗಮನ ಸೆಳೆಯುತ್ತವೆ.

‘ಡಬಲ್ ಚಾಂಪಿಯನ್’ ವಿಂಡೀಸ್
ಎರಡು ಬಾರಿಯ ಚಾಂಪಿಯನ್‌ ತಂಡ ವಿಂಡೀಸ್‌ ಆಟಗಾರರು ಟಿ20 ಪರಿಣತರೆಂದೇ ಜಗದ್ವಿಖ್ಯಾತರು. ವಿಶ್ವದಲ್ಲಿ ನಡೆಯುವ ಪ್ರತಿಯೊಂದು ಟಿ20 ಫ್ರಾಂಚೈಸಿ ಲೀಗ್‌ಗಳಲ್ಲಿ ಕೆರಿಬಿಯನ್ ಆಟಗಾರರ ಅಬ್ಬರ ಇದ್ದೇ ಇರುತ್ತದೆ. ಆದರೆ ಈ ಬಾರಿ ಕ್ವಾಲಿಫೈಯರ್‌ ಹಂತದಲ್ಲಿಯೇ ವಿಂಡೀಸ್ ಗಂಟುಮೂಟೆ ಕಟ್ಟಬೇಕಾಯಿತು.

ಬಿ ಗುಂಪಿನಲ್ಲಿ ವಿಂಡೀಸ್ ತಂಡವು ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ವಿರುದ್ಧ ಸೋತಿತ್ತು. ಜಿಂಬಾಬ್ವೆ ವಿರುದ್ಧ ಮಾತ್ರ ಜಯಿಸಿತ್ತು. ವರ್ಷಪೂರ್ತಿ ಉಳಿದೆಲ್ಲ ತಂಡಗಳಿಗಿಂತ ವಿಂಡೀಸ್ ಹೆಚ್ಚು ದ್ವಿಪಕ್ಷೀಯ ಸರಣಿಗಳಲ್ಲಿ ಆಡಿದೆ. ಲೀಗ್‌ಗಳಲ್ಲಿ ಆಡಿದ ಅನುಭವಿಗಳಿದ್ದಾರೆ. ಆದರೂ ಇಲ್ಲಿ ತಂಡವಾಗಿ ಆಡುವಲ್ಲಿ ವಿಫಲವಾಯಿತು.

ವೆಸ್ಟ್ ಇಂಡೀಸ್ ತಂಡದ ಆಲ್‌ರೌಂಡರ್ ಜೇಸನ್ ಹೋಲ್ಡರ್ –ಎಎಫ್‌ಪಿ ಚಿತ್ರ
ವೆಸ್ಟ್ ಇಂಡೀಸ್ ತಂಡದ ಆಲ್‌ರೌಂಡರ್ ಜೇಸನ್ ಹೋಲ್ಡರ್ –ಎಎಫ್‌ಪಿ ಚಿತ್ರ

ನಮೀಬಿಯಾ ಬಿಸಿ
ಅರ್ಹತಾ ಸುತ್ತಿನಲ್ಲಿ ಕಷ್ಟಪಟ್ಟು ಆಡಿದ ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ, ಎ ಗುಂಪಿನಲ್ಲಿ ನಮೀಬಿಯಾದಂತಹ ಹೊಸ ತಂಡದೆದುರು 55 ರನ್‌ಗಳ ಭಾರಿ ಅಂತರದಿಂದ ಸೋತಿತ್ತು. ಆದರೆ ನಂತರದ ಎರಡು ಪಂದ್ಯಗಳಲ್ಲಿ ಗೆದ್ದು ಸೂಪರ್ 12ಕ್ಕೆ ಪ್ರವೇಶಿಸಿತ್ತು.

ಪಾಕ್‌ಗೆ ಜಿಂಬಾಬ್ವೆ ಹೊಡೆತ
ಮೊದಲ ಪಂದ್ಯದಲ್ಲಿ ಭಾರತದ ಎದುರು ಸೋತಿದ್ದ ಪಾಕಿಸ್ತಾನಕ್ಕೆ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ಪೆಟ್ಟುಕೊಟ್ಟಿದ್ದು ಅಚ್ಚರಿಗಳಲ್ಲಿ ಒಂದು.

ಪಾಕ್ ತಂಡದಲ್ಲಿರುವ ಉತ್ತಮ ಬೌಲರ್‌ ಹಾಗೂ ಅನುಭವಿ ಬ್ಯಾಟರ್‌ಗಳಿಗೆ ಹೋಲಿಸಿದರೆ ಜಿಂಬಾಬ್ವೆಯ ಆಟಗಾರರ ಸಾಮರ್ಥ್ಯ ಬಹಳ ಕಡಿಮೆಯೇ. ಟೆಸ್ಟ್ ಮಾನ್ಯತೆ ಇರುವ ಹಳೆಯ ತಂಡವಾದರೂ ಕೂಡ ತನ್ನ ದೇಶದಲ್ಲಿರುವ ಹಲವು ಸಮಸ್ಯೆಗಳ ನಡುವೆ ಜಿಂಬಾಬ್ವೆ ಕ್ರಿಕೆಟಿಗರು ಪರದಾಡುತ್ತಲೇ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ಪಾಕ್ ವಿರುದ್ಧ ಕೇವಲ ಒಂದು ರನ್‌ನಿಂದ ಗೆದ್ದಾಗ ಕ್ರಿಕೆಟ್‌ ಪ್ರಿಯರು ಬೆರಗಾಗಿದ್ದರು.

ಆದರೆ ಇವೆಲ್ಲವುಗಳಿಗಿಂತ ದೊಡ್ಡ ಅಚ್ಚರಿ ಮೂಡಿಬಂದಿದ್ದು ಗುಂಪು ಹಂತದ ಕೊನೆಯ ದಿನದಂದು. ಅದು ದಕ್ಷಿಣ ಆಫ್ರಿಕಾದ ಸೋಲು. ‘ಚೋಕರ್ಸ್‌’ ಹಣೆಪಟ್ಟಿ ಕಳಚಿಕೊಳ್ಳುವ ಪ್ರಯ
ತ್ನದಲ್ಲಿ ಈ ಬಾರಿಯೂ ದಕ್ಷಿಣ ಆಫ್ರಿಕಾ ಯಶಸ್ವಿಯಾಗಲಿಲ್ಲ. ಪ್ರತಿಯೊಂದು ವಿಶ್ವಕಪ್‌ ಟೂರ್ನಿಯಲ್ಲಿಯೂ (ಎಲ್ಲ ಮಾದರಿ) ಇಂತಹದೊಂದು ಸೋಲನ್ನು ದಕ್ಷಿಣ ಆಫ್ರಿಕಾ 1996ರಿಂದ ಅನುಭವಿಸುತ್ತಲೇ ಇದೆ. ಆದರೆ, ಈ ಬಾರಿ ನೆದರ್ಲೆಂಡ್ಸ್ ಕೊಟ್ಟ ಪೆಟ್ಟು ಮಾತ್ರ ಆ ತಂಡಕ್ಕೆ ದೊಡ್ಡ ಪಾಠ ಕಲಿಸುವ ಸಾಧ್ಯತೆ ಇದೆ.

ದೊಡ್ಡ ಆಘಾತದ ಸೋಲುಗಳು(ಏಕದಿನ ವಿಶ್ವಕಪ್)

* 1983: ಜಿಂಬಾಬ್ವೆ ತಂಡವು ಆಸ್ಟ್ರೇಲಿಯಾ ವಿರುದ್ಧ 13ರನ್‌ಗಳಿಂದ ಜಯಿಸಿತ್ತು.

* 2007: ಆಗಿನ್ನೂ ಅಂಬೆಗಾಲಿಡುತ್ತಿದ್ದ ಬಾಂಗ್ಲಾದೇಶ ವಿರುದ್ಧ ಸೋತಿದ್ದ ಭಾರತ ತಂಡವು ಟೂರ್ನಿಯ ಲೀಗ್ ಹಂತದಿಂದ ಹೊರಬಿದ್ದಿತ್ತು. ಬಾಂಗ್ಲಾ ತಂಡವು ಇದೇ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾವನ್ನೂ ಮಣಿಸಿತ್ತು.

* 2007: ಅನನುಭವಿ ತಂಡ ಐರ್ಲೆಂಡ್ ವಿರುದ್ಧ ಸೋತ ಪಾಕಿಸ್ತಾನ ನಿರ್ಗಮಿಸಿತ್ತು.

* 2011: ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಐರ್ಲೆಂಡ್ ತಂಡವು ಇಂಗ್ಲೆಂಡ್ ಬಳಗವನ್ನು ಹಣಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT