ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ–2020 (ಎನ್‌ಇಪಿ) ಅನ್ನು ತಮಿಳುನಾಡಿನಲ್ಲಿ ಜಾರಿ ಮಾಡದೇ ಇರುವುದರಿಂದ ರಾಜ್ಯಕ್ಕೆ ಸಮಗ್ರ ಶಿಕ್ಷಣ ಅಭಿಯಾನ ಅಡಿ ಕೇಂದ್ರದ ಪಾಲಿನ ಅನುದಾನ ಬಿಡುಗಡೆಯಾಗಿಲ್ಲ. ಈ ವಿಚಾರವು ಕೇಂದ್ರ ಮತ್ತು ತಮಿಳುನಾಡಿನ ನಡುವೆ ಆರೋಪ–ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಕೇಂದ್ರ ಸರ್ಕಾರವು ಅನುದಾನದ ನೆಪದಲ್ಲಿ ತ್ರಿಭಾಷಾ ಸೂತ್ರ ಸೇರಿದಂತೆ ತನ್ನ ಸಿದ್ಧಾಂತಗಳನ್ನು ರಾಜ್ಯಗಳ ಮೇಲೆ ಹೇರುತ್ತಿದೆ ಎನ್ನುವುದು ತಮಿಳುನಾಡಿನ ವಾದ.
ಹಿಂದೆಯೂ ವಿರೋಧ
ತಮಿಳುನಾಡು ಸರ್ಕಾರವು ಭಾಷೆ, ಶಿಕ್ಷಣಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಮೊದಲಿನಿಂದಲೂ ಅನುಮಾನದಿಂದಲೇ ನೋಡುತ್ತಾ ಬಂದಿದೆ. ಕೇಂದ್ರ ಸರ್ಕಾರವು ಜವಾಹರ್ ನವೋದಯ ವಿದ್ಯಾಲಯಗಳನ್ನು ಆರಂಭಿಸಿದಾಗಲೂ ಅದನ್ನು ವಿರೋಧಿಸಿತ್ತು. ತಮಿಳುನಾಡಿನಲ್ಲಿ ನವೋದಯ ಶಾಲೆಗಳಿಲ್ಲ ಎಂದು ಹೇಳುತ್ತದೆ ಕೇಂದ್ರ ಸರ್ಕಾರದ ಮಾಹಿತಿ. ಕೇಂದ್ರ ಸರ್ಕಾರದ ಆಡಳಿತಕ್ಕೆ ಒಳಪಟ್ಟ ಶಾಲೆಗಳ ಪೈಕಿ ಕೇಂದ್ರೀಯ ವಿದ್ಯಾಲಯಗಳು ಮಾತ್ರ ಅಲ್ಲಿವೆ. ಈ ಸಂಸ್ಥೆಗಳು 34 ಇವೆ.
ಆಧಾರ: ಪಿಟಿಐ, ಪಿಎಂ ಶ್ರೀ ಡ್ಯಾಶ್ ಬೋರ್ಡ್, ಕೇಂದ್ರ ಶಿಕ್ಷಣ ಸಚಿವಾಲಯದ ವೆಬ್‌ಸೈಟ್, ಸಂಸತ್ತಿನಲ್ಲಿ ಶಿಕ್ಷಣ ಸಚಿವರ ಉತ್ತರಗಳು, ತಮಿಳುನಾಡು ಶಿಕ್ಷಣ ಇಲಾಖೆ ವೆಬ್‌ಸೈಟ್