ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ –ಅಗಲ: ಆರ್‌ಬಿಐನಲ್ಲಿದೆ ನಿಷ್ಕ್ರಿಯ ಖಾತೆಗಳ ₹62,224 ಕೋಟಿ
ಆಳ –ಅಗಲ: ಆರ್‌ಬಿಐನಲ್ಲಿದೆ ನಿಷ್ಕ್ರಿಯ ಖಾತೆಗಳ ₹62,224 ಕೋಟಿ
Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ದೇಶದ ಎಲ್ಲಾ ಬ್ಯಾಂಕ್‌ಗಳಲ್ಲಿ ನಿಷ್ಕ್ರಿಯವಾಗಿರುವ ಖಾತೆಗಳ ಒಟ್ಟು ಸಂಖ್ಯೆ ಎಷ್ಟು ಎಂಬ ಮಾಹಿತಿ ಇಲ್ಲವಾದರೂ, 10 ವರ್ಷಕ್ಕಿಂತ ಹೆಚ್ಚು ಅವಧಿಗೆ ನಿಷ್ಕ್ರಿಯವಾಗಿರುವ ಖಾತೆಗಳಲ್ಲಿನ ಠೇವಣಿಯ ವಿವರ ಲಭ್ಯವಿದೆ. ಎಲ್ಲಾ ಬ್ಯಾಂಕ್‌ಗಳಿಂದ ಅಂತಹ ಠೇವಣಿಯನ್ನು ಆರ್‌ಬಿಐ ಜಮೆ ಮಾಡಿಸಿಕೊಳ್ಳುತ್ತದೆ. ಖಾತೆ ನಿಷ್ಕ್ರಿಯವಾಗಿ ಎಷ್ಟೇ ಅವಧಿಯಾಗಿದ್ದರೂ ವಾರಸುದಾರರು ಠೇವಣಿಯನ್ನು ವಾಪಸ್‌ ಪಡೆಯಬಹುದು.

*****

ದೇಶದ ಎಲ್ಲಾ ಬ್ಯಾಂಕ್‌ಗಳಲ್ಲಿ ತೆರೆಯಲಾದ ಖಾತೆಗಳಲ್ಲಿ ಶೇ 20ರಷ್ಟು ಖಾತೆಗಳು ನಿಷ್ಕ್ರಿಯವಾಗಿವೆ ಎಂದು ರಾಜ್ಯಸಭೆಗೆ ಹಣಕಾಸು ಸಚಿವಾಲಯವು ಮಾಹಿತಿ ನೀಡಿದೆ. 10 ವರ್ಷಗಳಿಗೂ ಹೆಚ್ಚು ಅವಧಿ ನಿಷ್ಕ್ರಿಯವಾಗಿರುವ ಖಾತೆಗಳಲ್ಲಿ ಇರುವ ಠೇವಣಿಯನ್ನು ಆಯಾ ಬ್ಯಾಂಕ್‌ಗಳು ರಿಸರ್ವ್‌ ಬ್ಯಾಂಕ್‌ನ ‘ಠೇವಣಿದಾರರಿಗೆ ಬ್ಯಾಂಕಿಗ್‌ ಸಾಕ್ಷರತೆ ಮತ್ತು ಜಾಗೃತಿ ನಿಧಿ–ಡಿಇಎ ನಿಧಿ’ಗೆ ವರ್ಗಾಯಿಸಬೇಕು. 2022–23ನೇ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಬ್ಯಾಂಕ್‌ಗಳು ಹೀಗೆ ಡಿಇಎ ನಿಧಿಗೆ ವರ್ಗಾಯಿಸಿದ ಠೇವಣಿಯ ಮೊತ್ತ ₹42 ಸಾವಿರ ಕೋಟಿಗೂ ಹೆಚ್ಚು. ಈ ಠೇವಣಿಗಳಿಗೆ ಈವರೆಗೆ ಲಭ್ಯವಾಗಿರುವ ಬಡ್ಡಿ ಮತ್ತು ಆದಾಯದ ಮೊತ್ತವೇ ₹ 20 ಸಾವಿರ ಕೋಟಿ ದಾಟುತ್ತದೆ. ಹೀಗೆ 10 ವರ್ಷಗಳ ಅವಧಿಯವರೆಗೆ ವಾರಸುದಾರರಿಲ್ಲ ಮತ್ತು ನಿಷ್ಕ್ರಿಯವಾದ ಖಾತೆಗಳಲ್ಲಿನ ಠೇವಣಿಗಳ ಮೊತ್ತ ₹62 ಸಾವಿರ ಕೋಟಿಗೂ ಅಧಿಕ.

ಯಾವುದೇ ಬ್ಯಾಂಕ್‌ ಖಾತೆಗಳನ್ನು ಎರಡು ವರ್ಷದವರೆಗೆ ಬಳಸದೇ ಇದ್ದರೆ, ಬ್ಯಾಂಕ್‌ಗಳು ಅವನ್ನು ನಿಷ್ಕ್ರಿಯ ಖಾತೆ ಎಂದು ಪರಿಗಣಿಸುತ್ತವೆ. ಅಂತಹ ಖಾತೆಗಳನ್ನು ಬ್ಯಾಂಕ್‌ಗಳು ನಿರ್ವಹಿಸುತ್ತಲೇ ಇರುತ್ತವೆ. ಅವುಗಳಲ್ಲಿ ಇರುವ ಠೇವಣಿಗಳಿಗೆ ಬ್ಯಾಂಕ್‌ಗಳು ಹೊಣೆಗಾರಿಕೆ ಹೊಂದಿರುತ್ತವೆ. ಖಾತೆದಾರರನ್ನು ಅಥವಾ ಖಾತೆದಾರರ ವಾರಸುದಾರರನ್ನು ಹುಡುಕಿ ಠೇವಣಿಯನ್ನು ಹಿಂದಿರುಗಿಸುವ ಹೊಣೆಗಾರಿಕೆಯೂ ಬ್ಯಾಂಕ್‌ಗಳದ್ದೇ ಆಗಿವೆ. ನೋಟಿಸ್‌ ನೀಡುವ ಮೂಲಕ ಖಾತೆ ನಿಷ್ಕ್ರಿಯವಾಗಿರುವ ಬಗ್ಗೆ ಬ್ಯಾಂಕ್‌ಗಳು ಖಾತೆದಾರರಿಗೆ ಮಾಹಿತಿ ನೀಡಬೇಕು. ನಂತರ ಖಾತೆಯನ್ನು ಮುಚ್ಚಲು ಮತ್ತು ಠೇವಣಿಯನ್ನು ವಾರಸುದಾರರಿಗೆ ವಾಪಸು ಮಾಡಲು ನೆರವು ನೀಡಬೇಕು. ಆದರೆ ಈ ಕೆಲಸ ಆಗುತ್ತಿಲ್ಲ ಎಂಬುದನ್ನು ನಿಷ್ಕ್ರಿಯ ಖಾತೆಗಳ ಮೂಲಕ ಡಿಇಎ ನಿಧಿಗೆ ಜಮೆಯಾಗಿರುವ ಮೊತ್ತವೇ ಹೇಳುತ್ತದೆ.

ನಿಷ್ಕ್ರಿಯ ಖಾತೆಗಳಲ್ಲಿನ ಮೊತ್ತಕ್ಕೆ ಖಾತೆದಾರರೇ ವಾರಸುದಾರರಾಗಿರುತ್ತಾರೆ. ಖಾತೆ ನಿಷ್ಕ್ರಿಯವಾಗಿ ಎಷ್ಟು ವರ್ಷವಾದರೂ ಅವರು ತಮ್ಮ ಖಾತೆ ಇರುವ ಬ್ಯಾಂಕ್‌ಗೆ ಹೋಗಿ ತಮ್ಮ ಹಣವನ್ನು ಕೇಳಬಹುದು. ಅವರ ಠೇವಣಿಯಲ್ಲಿದ್ದ ಹಣವನ್ನು ಬ್ಯಾಂಕ್‌ಗಳು ವಾಪಸು ಮಾಡಲೇಬೇಕು. ಬ್ಯಾಂಕ್‌ಗಳು ನಿಷ್ಕ್ರಿಯ ಖಾತೆಗಳ ಹಣವನ್ನು ಡಿಇಎ ನಿಧಿಗೆ ವರ್ಗಾಯಿಸಿದ್ದರೂ, ಖಾತೆದಾರರಿಗೆ ಹಣವನ್ನು ವಾಪಸ್ ಮಾಡಲೇಬೇಕು. ಹಾಗೆ ವಾಪಸ್‌ ಮಾಡಿದಷ್ಟೇ ಮೊತ್ತವನ್ನು ಡಿಇಎ ನಿಧಿಯಿಂದ ವಾಪಸ್‌ ಪಡೆಯಬಹುದು. ಆದರೆ 2018–19ನೇ ಆರ್ಥಿಕ ವರ್ಷದಿಂದ 2022–23ನೇ ಆರ್ಥಿಕ ವರ್ಷದಲ್ಲಿ ಡಿಇಎ ನಿಧಿಯಿಂದ ಹೀಗೆ ವಾಪಸ್‌ ಪಡೆಯಲಾದ ಮೊತ್ತ ₹ 5,729 ಕೋಟಿ ಮಾತ್ರ. ನಿಷ್ಕ್ರಿಯ ಖಾತೆಗಳ ವಾರಸುದಾರರನ್ನು ಹುಡುಕಿ, ಠೇವಣಿಯನ್ನು ಹಿಂತಿರುಗಿಸುವ ಕೆಲಸವನ್ನು ಬ್ಯಾಂಕ್‌ಗಳು ಮಾಡುತ್ತಿದ್ದರೂ ₹62 ಸಾವಿರ ಕೋಟಿಗೂ ಅಧಿಕ ಮೊತ್ತ ಡಿಇಎ ನಿಧಿಯಲ್ಲಿ ಉಳಿದಿದೆ.

ಖಾತೆದಾರರು ಮೃತಪಟ್ಟಿದ್ದರೂ, ಅವರ ಖಾತೆಯಲ್ಲಿನ ಠೇವಣಿಯನ್ನು ಖಾತೆದಾರರ ವಾರಸುದಾರರು ಪಡೆದುಕೊಳ್ಳಬಹುದು. ಖಾತೆದಾರರ ವಾರಸುದಾರರು ತಾವೇ ಎಂಬುದನ್ನು ದೃಢಪಡಿಸುವ ದಾಖಲೆಗಳನ್ನು ಬ್ಯಾಂಕ್‌ಗಳಿಗೆ ಸಲ್ಲಿಸಿ, ಠೇವಣಿ ವಾಪಸಾತಿಗೆ ಮನವಿ ಮಾಡಬಹುದು. ದಾಖಲೆಗಳನ್ನು ದೃಢಪಡಿಸಿಕೊಳ್ಳುವ ಬ್ಯಾಂಕ್‌ ಠೇವಣಿಯ ಮೊತ್ತವನ್ನು ವಾಪಸ್‌ ಮಾಡಲು ಕ್ರಮ ತೆಗೆದುಕೊಳ್ಳುತ್ತದೆ.

ಜನ ಧನ: 10 ಕೋಟಿಗೂ ಹೆಚ್ಚು ಖಾತೆ ನಿಷ್ಕ್ರಿಯ

ದೇಶದಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಗೆ ಒಳಪಡದೇ ಇರುವ ಜನರನ್ನು ಆ ವ್ಯವಸ್ಥೆಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರವು 2014ರಲ್ಲಿ ಜನ ಧನ ಯೋಜನೆಯನ್ನು ಆರಂಭಿಸಿತ್ತು. 2023ರ ಡಿಸೆಂಬರ್ 6ರವರೆಗೆ ಈ ಯೋಜನೆ ಅಡಿ ದೇಶದಾದ್ಯಂತ ತೆರೆಯಲಾದ ಖಾತೆಗಳ ಸಂಖ್ಯೆ 51 ಕೋಟಿಗೂ ಹೆಚ್ಚು. ಆದರೆ ಇವುಗಳಲ್ಲಿ ಶೇ 20ರಷ್ಟು ಖಾತೆಗಳು ನಿಷ್ಕ್ರಿಯವಾಗಿವೆ. ಅಂದರೆ ಈ ಖಾತೆ ತೆರೆದವರಲ್ಲಿ 10 ಕೋಟಿಗೂ ಹೆಚ್ಚು ಜನರು ಈ ಖಾತೆಗಳನ್ನು ಬಳಸುತ್ತಲೇ ಇಲ್ಲ. ಇವೆಲ್ಲವೂ ವಾರಸುದಾರರು ಇಲ್ಲದ ಖಾತೆಗಳಲ್ಲ. ಬದಲಿಗೆ ಬ್ಯಾಂಕಿಂಗ್‌ ವ್ಯವಹಾರ ತಿಳಿಯದೇ ಇರುವ ಮತ್ತು ಕೆವೈಸಿ ವಿವರ ಅಪ್‌ಡೇಟ್‌ ಮಾಡಲಾಗದ ಖಾತೆದಾರರ ಸಂಖ್ಯೆಯೇ ಇದರಲ್ಲಿ ಹೆಚ್ಚು ಎಂದು ಹಣಕಾಸು ಸಚಿವಾಲಯವು ರಾಜ್ಯಸಭೆಗೆ ಮಾಹಿತಿ ನೀಡಿದೆ.

ಜನ ಧನ ಖಾತೆದಾರರಿಗೆ ಜೀವವಿಮೆಯ ಸೌಲಭ್ಯ ಒದಗಿಸಲಾಗಿದೆ. ಖಾತೆದಾರರು ಮೃತಪಟ್ಟಾಗ ಅವರ ಕುಟುಂಬದವರು ವಿಮೆಯ ಹಣವನ್ನು ಕ್ಲೇಮು ಮಾಡಬಹುದು. ನಿಷ್ಕ್ರಿಯ ಎಂದು ಪಟ್ಟಿ ಮಾಡಲಾಗಿರುವ 10.34 ಕೋಟಿ ಖಾತೆಗಳಲ್ಲಿ ಮೃತಪಟ್ಟವರ ಖಾತೆಗಳೂ ಇರಬಹುದು. ಅವರ ಕುಟುಂಬದವರು ವಿಮೆ ಕ್ಲೇಮು ಮಾಡದೇ ಇರುವ ಕಾರಣಕ್ಕೆ ಅಂತಹ ಖಾತೆಗಳನ್ನು ಮುಚ್ಚಲು ಸಾಧ್ಯವಾಗಿಲ್ಲ. 

ಹೀಗೆ ನಿಷ್ಕ್ರಿಯ ಎಂದು ಪಟ್ಟಿ ಮಾಡಲಾದ ಖಾತೆಗಳಲ್ಲಿ ₹12,779 ಕೋಟಿಯಷ್ಟು ಠೇವಣಿ ಇದೆ. ಜನ ಧನ ಖಾತೆಯು ಶೂನ್ಯ ಠೇವಣಿ ಸ್ವರೂಪದ ಖಾತೆಯಾಗಿದ್ದರೂ, ವಿಮೆ ಮೊತ್ತ ಎಂದು ಸ್ವಲ್ಪ ಪ್ರಮಾಣದ ಹಣವನ್ನು ಜಮೆ ಮಾಡಿಸಲಾಗಿತ್ತು. ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಮೊತ್ತವನ್ನು ‘ನೇರ ನಗದು ವರ್ಗಾವಣೆ’ ವಿಧಾನದ ಮೂಲಕ ಈ ಖಾತೆಗಳಿಗೇ ಜಮೆ ಮಾಡಲಾಗುತ್ತಿತ್ತು. ಖಾತೆದಾರರು ಜಮೆ ಮಾಡಿದ ಮೊತ್ತವೂ ಇದರಲ್ಲಿ ಸೇರಿದೆ. ಈ ಖಾತೆಗಳು ನಿಷ್ಕ್ರಿಯವಾಗಿ 10 ವರ್ಷವಾಗದೇ ಇರುವ ಕಾರಣಕ್ಕೆ, ಅವುಗಳಲ್ಲಿನ ಮೊತ್ತವನ್ನು ಆರ್‌ಬಿಐನ ಡಿಇಎ ನಿಧಿಗೂ ಜಮೆ ಮಾಡುವಂತಿಲ್ಲ. ಬ್ಯಾಂಕಿಂಗ್‌ ವ್ಯವಹಾರಗಳ ಬಗ್ಗೆ ಅರಿವು ಇಲ್ಲದೇ ಇರುವ ಕಾರಣಕ್ಕೆ ಖಾತೆದಾರರೂ ಈ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಇಷ್ಟು ದೊಡ್ಡ ಮೊತ್ತದ ಠೇವಣಿಯು ಬ್ಯಾಂಕ್‌ಗಳಲ್ಲೇ ಉಳಿದಿದೆ. ಈ ಯೋಜನೆ ಅಡಿಯಲ್ಲಿ ಬ್ಯಾಂಕ್‌ ಖಾತೆ ತೆರೆಯಲಷ್ಟೇ ಒತ್ತು ನೀಡಲಾಗುತ್ತಿದೆ. ಜನ ಸಾಮಾನ್ಯರಿಗೆ ಬ್ಯಾಂಕಿಂಗ್‌ ವ್ಯವಹಾರಗಳ ಬಗ್ಗೆ ಅರಿವು ಮೂಡಿಸುವುದನ್ನು ಕಡೆಗಣಿಸಲಾಗಿದೆ ಎಂಬುದನ್ನು ಈ ದತ್ತಾಂಶಗಳು ಸೂಚಿಸುತ್ತವೆ.

ಡಿಇಎ ನಿಧಿ

ವಾರಸುದಾರರೇ ಇಲ್ಲದ ಬ್ಯಾಂಕುಗಳ ಖಾತೆಗಳ ಹಣವನ್ನು ಹಣಕಾಸು ಸಾಕ್ಷರತೆಗಾಗಿ ಬಳಸಿಕೊಳ್ಳುವ ಯೋಜನೆಯೊಂದನ್ನು ಆರ್‌ಬಿಐ 2014ರಲ್ಲಿ ರೂಪಿಸಿದೆ. ಇದಕ್ಕೆ ಠೇವಣಿದಾರರ ಹಣಕಾಸು ಸಾಕ್ಷರತೆ ಹಾಗೂ ಜಾಗೃತಿ ನಿಧಿಯನ್ನೂ (ಡಿಇಎಎಫ್‌) ಆರ್‌ಬಿಐ ಸ್ಥಾಪಿಸಿದೆ. ವ್ಯಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಹಾಗೂ ಸ್ಥಳೀಯ ಬ್ಯಾಂಕುಗಳು, ನಗರ ಸಹಕಾರಿ ಬ್ಯಾಂಕುಗಳು, ರಾಜ್ಯ ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕುಗಳು ತಮ್ಮಲ್ಲಿನ 10 ವರ್ಷಗಳಿಂದ ನಿಷ್ಕ್ರಿಯವಾಗಿರುವ ಖಾತೆಗಳಲ್ಲಿನ ಹಣವನ್ನು ಈ ನಿಧಿಗೆ ಪ್ರತಿ ತಿಂಗಳೂ ನೀಡಬೇಕು. ಈ ನಿಧಿಯ ನಿರ್ವಹಣೆಗಾಗಿ ಆರ್‌ಬಿಐ ಮಾರ್ಗಸೂಚಿಗಳನ್ನೂ ನೀಡಿದೆ.

ಠೇವಣಿದಾರರಲ್ಲಿ ಹಣಕಾಸಿನ ಸಾಕ್ಷರತೆಯನ್ನು ಮೂಡಿಸುವುದು ಈ ನಿಧಿ ಸ್ಥಾಪನೆಯ ಮುಖ್ಯ ಉದ್ದೇಶ. ಸಾಕ್ಷರತೆ ಮೂಡಿಸುವ ಸಲುವಾಗಿ ಸಂಘ, ಸಂಸ್ಥೆಗಳು ಈ ನಿಧಿಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಸುರಕ್ಷಿತ ಹಣಕಾಸು ವ್ಯವಹಾರ ಮಾಡುವ ಬಗೆ ಹೇಗೆ, ಹೇಗೆ ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯಬೇಕು ಎಂಬೆಲ್ಲದರ ಕುರಿತು ಶಿಬಿರಗಳನ್ನು, ಕಾರ್ಯಾಗಾರಗಳನ್ನು ಏರ್ಪಡಿಸಬೇಕು. ಜೊತೆಗೆ, ಹಣಕಾಸು ಸಾಕ್ಷರತೆ, ಗ್ರಾಹಕರ ಹಕ್ಕುಗಳ ಕುರಿತು ಅಧ್ಯಯನ ಹಾಗೂ ಸಂಶೋಧನೆ ನಡೆಸಲು ಇಚ್ಛಿಸುವವರೂ ಈ ನಿಧಿ ಅಡಿ ಅರ್ಜಿ ಸಲ್ಲಿಸಬಹುದಿದೆ.

ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಘ, ಸಂಸ್ಥೆಗಳು ಯಾವ ಸ್ವರೂಪದ್ದಾಗಿರಬೇಕು ಎಂಬುದರ ಕುರಿತೂ ಮಾರ್ಗಸೂಚಿಗಳಿವೆ. ಇವುಗಳು ಯಾವುದೇ ಧರ್ಮ, ಜಾತಿ– ಸಮುದಾಯಗಳಿಗೆ ಸೇರಿದ್ದಾಗಿರಬಾರದು. ಹಣಕಾಸು ಸಾಕ್ಷರತೆ ಕುರಿತ ತನ್ನ ಉದ್ದೇಶಗಳಲ್ಲಿ ಅವುಗಳಿಗೆ ಸ್ಪಷ್ಟತೆ ಇರಬೇಕು. ಯಾರಿಗೆ ನಿಧಿಯ ಹಣ ನೀಡಬೇಕು ಎಂಬುದಕ್ಕೆ ಆರ್‌ಬಿಐ ಸಮಿತಿಯನ್ನೂ ರಚಿಸಿದೆ. ಈ ಸಮಿತಿಯು ಯಾರಿಗೆ ಹಣ ನೀಡಬೇಕು, ಎಷ್ಟು ನೀಡಬೇಕು, ಸಂಘ–ಸಂಸ್ಥೆಯ ಹಿನ್ನೆಲೆ, ಕೆಲಸ ಕಾರ್ಯಗಳ ಬಗ್ಗೆ ಪರಿಶೀಲಿಸಿ ಹಣ ನೀಡುತ್ತದೆ. ಇದಕ್ಕಾಗಿ ಆರ್‌ಬಿಐ ಅರ್ಜಿಗಳನ್ನು ಆಹ್ವಾನಿಸುತ್ತದೆ. ಈ ಬಗ್ಗೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸುತ್ತದೆ.

ಖಾತೆ ನಿಷ್ಕ್ರಿಯವಾಗಿದೆಯೇ?

ನಿಮ್ಮ ಮತ್ತು ನಿಮ್ಮ ಕುಟುಂಬದ ಸದಸ್ಯರ ಖಾತೆಗಳು ನಿಷ್ಕ್ರಿಯವಾಗಿವೆಯೇ? ಹಾಗಿದ್ದಲ್ಲಿ ಅಂತಹ ಖಾತೆಗಳನ್ನು ಮತ್ತೆ ಸಕ್ರಿಯ ಮಾಡಬಹುದು. ನಿಮ್ಮ ಬ್ಯಾಂಕ್‌ ಶಾಖೆಯನ್ನು ಸಂಪರ್ಕಿಸಿದರೆ ಆಯಿತು. ಆದರೆ ನಿಮ್ಮ ಕುಟುಂಬದ ಹಿರಿಯರ ಬ್ಯಾಂಕ್‌ ಖಾತೆ ಹೊಂದಿದ್ದು, ಅದನ್ನು ದೀರ್ಘ ಕಾಲದಿಂದ ಬಳಸದೇ ಇದ್ದರೆ ಮತ್ತು ಅವರು ಮೃತಪಟ್ಟು ಖಾತೆಯನ್ನು ಬಳಸದೇ ಇದ್ದರೆ ಅಂತಹ ಖಾತೆಗಳೂ ನಿಷ್ಕ್ರಿಯವಾಗಿರುತ್ತವೆ. ಅಂತಹವರ ಖಾತೆಗಳ ಪಾಸ್‌ಬುಕ್‌ ಇದ್ದರೆ, ಅದರ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಅದಕ್ಕೆಂದೇ ಆರ್‌ಬಿಐ ಉದ್ಗಮ್‌ ಪೋರ್ಟಲ್‌ ಅನ್ನು ಆರಂಭಿಸಿದೆ.

ಈ ಪೋರ್ಟ್‌ಲ್‌ಗೆ ಭೇಟಿ ನೀಡಿ, ಮೊಬೈಲ್‌ ಸಂಖ್ಯೆ ಬಳಸಿಕೊಂಡು ಬಳಕೆದಾರರ ಖಾತೆಯನ್ನು ತೆರೆಯಬೇಕು. ಆನಂತರ ತೆರೆದುಕೊಳ್ಳುವ ಪುಟದಲ್ಲಿ ನಿಷ್ಕ್ರಿಯವಾದ ಬ್ಯಾಂಕ್‌ ಖಾತೆಯ ಸಂಖ್ಯೆ, ಬ್ಯಾಂಕ್‌ ಶಾಖೆ ಮತ್ತಿತರ ವಿವರಗಳನ್ನು ತುಂಬಬೇಕು. ಆಗ ಆ ಖಾತೆಗೆ ಸಂಬಂಧಿಸಿದ ವಿವರಗಳು ದೊರೆಯುತ್ತವೆ. ಅದರ ಆಧಾರದಲ್ಲಿ ಬ್ಯಾಂಕ್‌ಗೆ ಭೇಟಿ ನೀಡಿ, ಠೇವಣಿ ವಾಪಸ್‌ ಪಡೆಯಲು ಯತ್ನಿಸಬಹುದು.

ಉದ್ಗಮ್‌ ಪೋರ್ಟಲ್‌: unclaimed deposits gateway to access information

ಆಧಾರ: ರಾಜ್ಯಸಭೆ ಮತ್ತು ಲೋಕಸಭೆಗೆ ಹಣಕಾಸು ಸಚಿವಾಲಯ ನೀಡಿದ ಮಾಹಿತಿಗಳು, ಆರ್‌ಬಿಐನ ವಾರ್ಷಿಕ ವರದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT