ಬೇಡ್ತಿ–ವರದಾ ನದಿ ಜೋಡಣೆ ಯೋಜನೆಗೆ ಒಂದು ಕಡೆ ರಾಜ್ಯ ಸರ್ಕಾರ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಮುಂದಾಗಿದ್ದರೆ, ಮತ್ತೊಂದು ಕಡೆ ಜನ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಯೋಜನೆಯ ಬಗ್ಗೆ ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ವೇಳೆಯಲ್ಲೇ ಪ್ರಮುಖ ಅಧ್ಯಯನ ವರದಿಯೊಂದು ಪ್ರಕಟವಾಗಿದೆ. ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿನ ಶೇ 60ಕ್ಕೂ ಹೆಚ್ಚು ಭಾಗವು ಸಂಭವನೀಯ ಭೂಕುಸಿತದ ಪ್ರದೇಶವಾಗಿದ್ದು, ರಾಜ್ಯದಲ್ಲಿ ಘಟ್ಟವು ಹರಡಿರುವ ಏಳು ಜಿಲ್ಲೆಗಳಲ್ಲಿ ಭೂಕುಸಿತ ಸಾಧ್ಯತೆಗಳು ಇವೆ; ಈ ಪೈಕಿ ಅತಿ ಹೆಚ್ಚು ಭೂಕುಸಿತದ ಅಪಾಯ ಇರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂದು ವರದಿ ಉಲ್ಲೇಖಿಸಿದೆ
ನಮ್ಮ ಅಧ್ಯಯನದಿಂದ ಕೆಲವು ಮಹತ್ವದ ಸಂಗತಿಗಳು ತಿಳಿದು ಬಂದಿವೆ. ಈ ವಿವರಗಳು ಭವಿಷ್ಯದಲ್ಲಿ ಭೂಕುಸಿತ ತಡೆಗೆ ನೆರವಾಗಲಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಬೀಳುವ, ಜೇಡಿ ಮಿಶ್ರಿತ ಮಣ್ಣು ಹೊಂದಿರುವ ಮತ್ತು ಇಳಿಜಾರಾಗಿರುವ ಪ್ರದೇಶಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳುವಾಗ ಹೆಚ್ಚು ಜಾಗರೂಕವಾಗಿದ್ದರೆ, ಗುಡ್ಡಕುಸಿತದಂತಹ ದುರಂತಗಳನ್ನು ತಡೆಯಬಹುದು.
–ಪ್ರೊ.ಅಮರನಾಥ ಹೆಗಡೆ, ಪ್ರಾಧ್ಯಾಪಕ, ಐಐಟಿ ಧಾರವಾಡ
ಶಿರೂರು ಗುಡ್ಡ ಕುಸಿತ ಮಾನವ ನಿರ್ಮಿತ ದುರಂತ. ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯ ಪರಿಣಾಮ ಅದು. ಆ ಘಟನೆಯನ್ನು ಆಧರಿಸಿಕೊಂಡು ಈ ಅಧ್ಯಯನ ನಡೆಸಲಾಗಿದೆ. ಈಗ ಲಭ್ಯವಿರುವ ದತ್ತಾಂಶಗಳನ್ನೇ ಇಲ್ಲಿ ವಿಶ್ಲೇಷಿಸಲಾಗಿದೆ. ದಿಢೀರ್ ಆಗಿ ಭಾರಿ ಪ್ರಮಾಣದಲ್ಲಿ ಮಳೆಯಾದಾಗ, ಜೇಡಿಮಣ್ಣಿರುವ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚು. ಪಶ್ಚಿಮ ಘಟ್ಟದ ವಿವಿಧ ಜಿಲ್ಲೆಗಳಲ್ಲಿ ಭೂಕುಸಿತದ ಅಪಾಯ ಇರುವ ಸ್ಥಳಗಳ ಬಗ್ಗೆ ಭೂ ವೈಜ್ಞಾನಿಕ ಅಧ್ಯಯನ ನಡೆಸಬೇಕಾದ ಅಗತ್ಯವಿದೆ. ಭೂಕುಸಿತದಂತಹ ದುರಂತಗಳ ಬಗ್ಗೆ ಮುನ್ನೆಚ್ಚರಿಕೆ ನೀಡುವ ನೀಡುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕಾಗಿದೆ.