ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಬಿಸಿಗಾಳಿಗೆ ನಲುಗುತ್ತಿದೆ ಯುರೋಪ್‌

Last Updated 21 ಜುಲೈ 2022, 19:45 IST
ಅಕ್ಷರ ಗಾತ್ರ

ಬಿಸಿಗಾಳಿಯ ತೀವ್ರತೆಗೆ ಐರೋಪ್ಯ ದೇಶಗಳು ತತ್ತರಿಸಿವೆ. ವಾರದ ಹಿಂದೆ ಬ್ರಿಟನ್‌ನಲ್ಲಿ ಕಾಣಿಸಿಕೊಂಡ ಬಿಸಿಗಾಳಿಯು, ಈಗ ಯುರೋಪ್‌ ಖಂಡದ ಬಹುತೇಕ ದೇಶಗಳಿಗೆ ವ್ಯಾಪಿಸಿದೆ. ಬಿಸಿಲಿನ ತಾಪಕ್ಕೆ ಜನರು ರಸ್ತೆಗಳಲ್ಲೇ ಕುಸಿದುಬೀಳುತ್ತಿದ್ದಾರೆ. ಪಕ್ಷಿಗಳು ಸತ್ತು ಬೀಳುತ್ತಿವೆ, ಪ್ರಾಣಿಗಳು ಬಿಸಿಲಿನ ಝಳಕ್ಕೆ ನಲುಗಿ ಪ್ರಾಣ ಬಿಡುತ್ತಿವೆ. ಇದು ಹವಾಮಾನ ವೈಪರೀತ್ಯದ ಪರಿಣಾಮ ಎಂದು ತಜ್ಞರ ವರದಿಗಳು ಮತ್ತು ಐರೋಪ್ಯ ದೇಶಗಳ ಹವಾಮಾನ ಇಲಾಖೆಗಳು ಹೇಳುತ್ತಿವೆ. ಆದರೆ ಸಾಗರದ ಬಿಸಿನೀರಿನ ಪ್ರವಾಹಗಳು, ಇಂಗ್ಲೆಂಡ್‌ ಸಮೀಪ ಉಂಟಾದ ವಾಯುಭಾರ ಕುಸಿತ, ಉತ್ತರ ಆಫ್ರಿಕಾದ ಬಿಸಿಗಾಳಿ ಎಲ್ಲವೂ ಯುರೋಪ್‌ನಲ್ಲಿ ಬಿಸಿಗಾಳಿಯ ತೀವ್ರತೆಯನ್ನು ಹೆಚ್ಚಿಸುತ್ತಿವೆ ಎನ್ನಲಾಗಿದೆ.

ಕಾರಣಗಳು ಹಲವು

ಯುರೋಪ್‌ನಲ್ಲಿ ಬೇಸಿಗೆಯು ಜುಲೈ ಮಧ್ಯದ ನಂತರ ಆರಂಭವಾಗುತ್ತದೆ. ಆಗಸ್ಟ್‌–ಸೆಪ್ಟೆಂಬರ್‌ನಲ್ಲಿ ಕಡುಬೇಸಿಗೆ ಇರುತ್ತದೆ. ಆದರೆ, ಈಗ ಜುಲೈ ಮೂರನೇ ವಾರದ ವೇಳೆಗೇ ಗರಿಷ್ಠ ಉಷ್ಣಾಂಶವು ದೀರ್ಘಾವಧಿ ಸರಾಸರಿಯನ್ನು ಮೀರಿದೆ.

ಸಾಮಾನ್ಯವಾಗಿ ಈ ಅವಧಿಯಲ್ಲಿ ಯುರೋಪ್‌ನಾದ್ಯಂತ ಉಷ್ಣಾಂಶವು 18 ಡಿಗ್ರಿ ಸೆಲ್ಸಿಯಸ್‌ನಿಂದ 26 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುತ್ತದೆ. ಕಡುಬೇಸಿಗೆ ಅವಧಿಯಲ್ಲಿ ಉಷ್ಣಾಂಶವು 20 ಡಿಗ್ರಿ ಸೆಲ್ಸಿಯಸ್‌ನಿಂದ 30 ಡಿಗ್ರಿ ಸೆಲ್ಸಿಯಸ್‌ನ ನಡುವೆ ಇರುತ್ತದೆ. ಆದರೆ, ಜುಲೈ ಮೂರನೇ ವಾರದಲ್ಲೇ 20ಕ್ಕೂ ಹೆಚ್ಚು ದೇಶಗಳಲ್ಲಿ ಉಷ್ಣಾಂಶವು 30 ಡಿಗ್ರಿ ಸೆಲ್ಸಿಯಸ್‌ನಷ್ಟು ತೀವ್ರವಾಗಿದೆ. ಬ್ರಿಟನ್‌ನಲ್ಲಿ 40 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಯುರೋಪ್‌ನ ಕೆಲವು ಭಾಗಗಳಲ್ಲಿ ದಿನದ ಗರಿಷ್ಠ ಉಷ್ಣಾಂಶವು 45 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ. ಇದು 200 ವರ್ಷಗಳಲ್ಲೇ ಅತ್ಯಂತ ಗರಿಷ್ಠ ಉಷ್ಣಾಂಶ ಎನ್ನಲಾಗುತ್ತಿದೆ.

ಬಿಸಿಗಾಳಿಯು ಇಷ್ಟು ತೀವ್ರತೆ ಪಡೆಯಲು ಹಲವು ಕಾರಣಗಳನ್ನು ಗುರುತಿಸಲಾಗಿದೆ. ಅದರಲ್ಲಿ, ಬ್ರಿಟನ್‌ ಸುತ್ತಮುತ್ತಲಿನ ಸಾಗರದಲ್ಲಿ ತಲೆದೋರಿದ ವಾಯುಭಾರ ಕುಸಿತ ಪ್ರಮುಖವಾದುದು ಎಂದು ವಿಶ್ಲೇಷಿಸಲಾಗಿದೆ. ಜಾಗತಿಕ ತಾಪಮಾನದಲ್ಲಿ ಏರಿಕೆಯಾಗಿರುವುದರಿಂದಲೇ ಬ್ರಿಟನ್‌ ಮತ್ತು ಸುತ್ತಲಿನ ಪ್ರದೇಶದಲ್ಲಿ ವಾಯುಭಾರ ಕುಸಿದಿದ್ದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಜುಲೈ ಎರಡನೇ ವಾರದ ವೇಳೆಗೆ, ಬ್ರಿಟನ್‌ ಮತ್ತು ಅದರ ಸುತ್ತಲಿನ ಸಮುದ್ರದ ಪ್ರದೇಶದಲ್ಲಿ ಉಷ್ಣಾಂಶ ಏರಿಕೆಯಾಗಿ ವಾಯುಭಾರ ತೀವ್ರವಾಗಿ ಕುಸಿದಿತ್ತು. ಅದರಿಂದ ಅಲ್ಲಿ ನಿರ್ವಾತದ ಪ್ರದೇಶ ಉಂಟಾಗಿತ್ತು. ಅದೇ ಸಂದರ್ಭದಲ್ಲಿ ಉತ್ತರ ಆಫ್ರಿಕಾದಲ್ಲಿ ತೀವ್ರ ಬಿಸಿಗಾಳಿ ಇತ್ತು. ಈ ಬಿಸಿಗಾಳಿಯು, ಬ್ರಿಟನ್‌ ಪ್ರದೇಶದಲ್ಲಿ ಉಂಟಾಗಿದ್ದ ನಿರ್ವಾತದತ್ತ ನುಗ್ಗಿತ್ತು. ಇದರಿಂದ ಆ ಪ್ರದೇಶದಲ್ಲಿ ಉಷ್ಣಾಂಶ ಏರಿಕೆಯಾಯಿತು ಎಂದು ವಿಶ್ಲೇಷಿಸಲಾಗಿದೆ.

ಬ್ರಿಟನ್‌ನಲ್ಲಿ ಉಂಟಾದ ಬಿಸಿಗಾಳಿಯು ಪೂರ್ವ ಮತ್ತು ಮಧ್ಯ ಯುರೋಪ್‌ಗೆ ವ್ಯಾಪಿಸಿದೆ. ಈ ಎಲ್ಲಾ ದೇಶಗಳಲ್ಲಿ ಗಾಳಿಯ ವೇಗ ಈಗ ತೀರಾ ಕಡಿಮೆ ಇದೆ. ಹೀಗಾಗಿ ಬಿಸಿಗಾಳಿಯು ಇನ್ನಷ್ಟು ವಾರಗಳ ಕಾಲ ಇರಲಿದೆ ಎಂದು ಹವಾಮಾನ ಇಲಾಖೆಗಳು ಹೇಳಿವೆ.

ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಯುರೋಪ್‌ನ ಹಲವು ದೇಶಗಳಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಈ ವೇಳೆ ವಾತಾವರಣದಲ್ಲಿ ಇದ್ದ ಮತ್ತು ಮೇಲ್ಮೈ ಮಣ್ಣಿನಲ್ಲಿದ್ದ ತೇವಾಂಶವು ಆವಿಯಾಗಿತ್ತು. ಹೀಗಾಗಿ ಈಗ ಬಿಸಿಗಾಳಿಯ ಸಂದರ್ಭದಲ್ಲಿ ವಾತಾವರಣದಲ್ಲಿ ತೇವಾಂಶವೇ ಇಲ್ಲದಂತಾಗಿದೆ. ಇದರಿಂದಲೂ ಉಷ್ಣಾಂಶ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

‘ನೆಲ ಕುದಿಯುತ್ತಿದೆ’

ಜುಲೈನಲ್ಲಿ ಬ್ರಿಟನ್‌ನ ಸರಾಸರಿ ಉಷ್ಣಾಂಶವು 21 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ರಾತ್ರಿ ವೇಳೆ ಇದು 12 ಡಿಗ್ರಿ ಸೆಲ್ಸಿಯಸ್‌ಗೆ ಸರಿಯುತ್ತದೆ. ಆದರೆ ಈ ಬಾರಿ ಬ್ರಿಟನ್‌ನ ಹಲವು ಕಡೆ ಉಷ್ಣಾಂಶವು 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಅಂದರೆ ಒಂದು ಪಟ್ಟು ಉಷ್ಣಾಂಶ ಹೆಚ್ಚಾಗಿದ್ದು, ನೆಲವೇ ಕುದಿಯುತ್ತಿರುವ ಅನುಭವವಾಗುತ್ತಿದೆ ಎಂದು ಜನರು ಹೇಳಿದ್ದಾರೆ.

ರೈಲು, ವಿಮಾನ ಸಂಚಾರ ಸ್ಥಗಿತ

ಉಷ್ಣಾಂಶವು ರೈಲ್ವೆ ಸಂಚಾರದ ಮೇಲೆ ಪರಿಣಾಮ ಬೀರಿದೆ. ಬ್ರಿಟನ್‌ನ ಹಲವು ಕಡೆಗಳಲ್ಲಿ ರೈಲ್ವೆ ಹಳಿಗಳಿಗೆ ಹಾನಿಯಾಗಿದೆ. ಜನ ಸಂಚಾರ ಕಡಿಮೆಯಾಗಿದ್ದು, ಪ್ರಮುಖ ರೈಲ್ವೆ ನಿಲ್ದಾಣಗಳು ಬಿಕೊ ಎನ್ನುತ್ತಿವೆ. ರಸ್ತೆಗಳಲ್ಲೂ ಜನರ ಓಡಾಟ ಕಡಿಮೆಯಾಗಿದೆ. ಕೆಲವು ಮಾರ್ಗಗಳಲ್ಲಿ ಕಡಿಮೆ ವೇಗದೊಂದಿಗೆ ರೈಲುಗಳನ್ನು ಓಡಿಸಲಾಗುತ್ತಿದೆ. ಇಟಲಿಯ ಕಾಳ್ಗಿಚ್ಚು ಅಲ್ಲಿನ ರೈಲ್ವೆ ಮೂಲಸೌಕರ್ಯಕ್ಕೆ ಹಾನಿ ಮಾಡಿದೆ. ರೋಮ್ ಹಾಗೂ ಫ್ಲೊರೆನ್ಸ್ ನಡುವಣ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಬೆಂಕಿಯ ಕೆನ್ನಾಲಿಗೆ ವಿಸ್ತರಿಸುತ್ತಿರುವುದರಿಂದ ಸ್ಪೇನ್‌ನ ಮ್ಯಾಡ್ರಿಡ್ ಮತ್ತು ಗಲಿಸಿಯಾ ನಡುವಿನ ರೈಲು ಸಂಚಾರವನ್ನೂ ರದ್ದುಪಡಿಸಲಾಗಿದೆ.

ಜೀವ ತೆಗೆಯುತ್ತಿದೆ ಬಿಸಿಗಾಳಿ

ಬಿಸಿಗಾಳಿಯು ಯುರೋಪಿಯನ್ನರ ಜೀವ ಹಿಂಡುತ್ತಿದೆ. ಬಿಸಿಗಾಳಿ ಸಂಬಂಧಿತ ಅವಘಡಗಳಲ್ಲಿ ಯುರೋಪ್‌ನಲ್ಲಿ ಈವರೆಗೆ 1,500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಪೋರ್ಚುಗಲ್‌ ದೇಶವೊಂದರಲ್ಲೇ ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ಎಬಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ. ಕಳೆದ ಹತ್ತು ದಿನಗಳಲ್ಲಿ ಸ್ಪೇನ್‌ನಲ್ಲಿ 500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಪ್ರಧಾನಿ ಹೇಳಿದ್ದಾರೆ. ಬ್ರಿಟನ್‌ನಲ್ಲಿ 13 ಜನರು ಬಿಸಿಲಿನ ಹೊಡೆತಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಉಷ್ಣಾಂಶ ತಾಳಲಾರದೇ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟವರು, ಕಾಳ್ಗಿಚ್ಚಿಗೆ ಬಲಿಯಾದವರು ಇದರಲ್ಲಿ ಸೇರಿದ್ದಾರೆ.

ಕಾಳ್ಗಿಚ್ಚಿನ ನರ್ತನ

ಉಷ್ಣಾಂಶದ ಭಾರಿ ಹೆಚ್ಚಳದಿಂದ ಯುರೋಪ್‌ನ ಹಲವು ದೇಶಗಳಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಬ್ರಿಟನ್, ಸ್ಪೇನ್, ಗ್ರೀಸ್, ಪೋರ್ಚುಗಲ್, ಫ್ರಾನ್ಸ್‌ನಲ್ಲಿ ಅರಣ್ಯಗಳು ಹೊತ್ತಿ ಉರಿಯುತ್ತಿವೆ. ಫ್ರಾನ್ಸ್‌ನ ನೈರುತ್ಯ ಭಾಗದ ಗಿರೊಂಡೆ ಅರಣ್ಯಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಹರಸಾಹಸವೇ ನಡೆಯುತ್ತಿದೆ. ವಿಮಾನಗಳ ಮೂಲಕ ನೀರು ಸಿಂಪಡಿಸಿ ಬೆಂಕಿಯನ್ನು ಹತೋಟಿಗೆ ತರಲಾಗುತ್ತಿದೆ. ಈ ವಲಯದಿಂದ ಸುಮಾರು 32 ಸಾವಿರ ಜನರನ್ನು ಸ್ಥಳಾಂತರ ಮಾಡಲಾಗಿದೆ. ಗ್ರೀಸ್‌ನ ಮೌಂಟ್ ಪೆಂಟೇಲಿಯಲ್ಲಿ ಕಾಳ್ಗಿಚ್ಚಿನ ಪ್ರತಾಪ ಜೋರಾಗಿದೆ. ಕಾಡಿಗೆ ಸಮೀಪದ ಪಿಲ್ಲನಿ ಪಟ್ಟಣದಲ್ಲಿ ಮನೆಗಳಿಗೂ ಜ್ವಾಲೆ ವ್ಯಾಪಿಸಿದ್ದರಿಂದ ಜನರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಸ್ಪೇನ್‌ನ ಹಲವು ಕಡೆಗಳಲ್ಲಿ ಕಾಡು ಉರಿಯುತ್ತಿದೆ. ಗಲಿಸಿಯಾ ಹಾಗೂ ಗ್ರೆಡೊಸ್ ಅರಣ್ಯ ಪ್ರದೇಶಗಳಿಗೆ ಹೊತ್ತಿರುವ ಬೆಂಕಿ ಇನ್ನೂ ನಿಯಂತ್ರಣಕ್ಕೆ ಸಿಕ್ಕಿಲ್ಲ. ಪೋರ್ಚುಗಲ್‌ನ ಎರಡು ಸಕ್ರಿಯ ಕಾಳ್ಗಿಚ್ಚುಗಳನ್ನು ನಂದಿಸಲು 900ಕ್ಕೂ ಹೆಚ್ಚು ಸಿಬ್ಬಂದಿ ಮಗ್ನರಾಗಿದ್ದಾರೆ. ಪೋರ್ಚುಗಲ್ ಮತ್ತು ಗ್ರೀಸ್‌ನಲ್ಲಿ ಸಾವಿರಾರು ಹೆಕ್ಟೇರ್ ಅರಣ್ಯ ಬೆಂಕಿಗೆ ಆಹುತಿಯಾಗಿದೆ. ಸ್ಪೇನ್‌ನ ಕಾಡಂಚಿನ ಝಮೋರಾ ಎಂಬಲ್ಲಿ ಎಂಟು ಗ್ರಾಮಗಳ ಜನರನ್ನು ಸ್ಥಳಾಂತರ ಮಾಡಲಾಗಿದೆ. ಕುರಿಗಾಹಿಯೊಬ್ಬ ಕಾಳ್ಗಿಚ್ಚಿನಲ್ಲಿ ಮೃತಪಟ್ಟಿದ್ದಾನೆ. ಪೋರ್ಚುಗಲ್‌ ಒಂದರಲ್ಲೇ 15 ಸಾವಿರ ಹೆಕ್ಟೇರ್ ಅರಣ್ಯ ಕಾಳ್ಗಿಚ್ಚಿಗೆ ಬಲಿಯಾಗಿದೆ. ನೂರಾರು ಎಕರೆ ಹುಲ್ಲುಗಾವಲು ಭಸ್ಮವಾಗಿದೆ.

ಬತ್ತುತ್ತಿದೆ ರೈನ್ ನದಿ

ಬಿಸಿಗಾಳಿಯ ಪ್ರತಾಪದಿಂದ ಯುರೋಪ್‌ನ ಪ್ರಮುಖ ರೈನ್ ನದಿಯ ನೀರಿನ ಮಟ್ಟ ತಳಕಂಡಿದೆ. ಜರ್ಮನಿ–ಸ್ವಿಟ್ಜರ್ಲೆಂಡ್–ಆಸ್ಟ್ರಿಯಾ–ದಿ ನೆದರ್ಲೆಂಡ್ಸ್ ಮೂಲಕ ಹರಿಯುವ ಈ ನದಿಯು ಒಳನಾಡು ಸಾರಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ಈಗ ಉಷ್ಣಾಂಶ ಹೆಚ್ಚಳದ ಪರಿಣಾಮ ನದಿಯಲ್ಲಿ ನೀರಿನ ಮಟ್ಟ ತಗ್ಗುತ್ತಿದ್ದು, ಸರಕು ಸಾಗಣೆಗೆ ಹೊಡೆತ ಬಿದ್ದಿದೆ. ರಾಸಾಯನಿಕಗಳು, ಆಹಾರ ಧಾನ್ಯ, ಕಲ್ಲಿದ್ದಲು ಸಾಗಾಟ ಸ್ಥಗಿತಗೊಂಡಿದೆ. ಈ ನದಿಯು ಫ್ರಾನ್ಸ್ ಹಾಗೂ ಜರ್ಮನಿಯ ಗಡಿಯೂ ಆಗಿದೆ.

ಬಿಸಿಲಿನ ಪ್ರತಾಪ

l ಉಷ್ಣಾಂಶ ಹೆಚ್ಚಳದಿಂದ ಮೃಗಾಲಯದ ಪ್ರಾಣಿಗಳು ಪರಿತಪಿಸುತ್ತಿವೆ. ಬ್ರಿಟನ್‌ನ ವಿಲ್ತ್‌ಶೈರ್ ಲಾಂಗ್‌ಲಿಟ್ ಸಫಾರಿ ಪಾರ್ಕ್‌ನ ಜಿರಾಫೆ, ಮಂಗಗಳಿಗೆ ತಿನ್ನಲು ಐಸ್‌ಕ್ರೀಂ ನೀಡಲಾಗುತ್ತಿದೆ. ಕ್ಯಾರೆಟ್, ಬಾಳೆಹಣ್ಣುಗಳ ಜೊತೆಗೆ ಐಸ್‌ಕ್ರೀಂ ಸೇರಿಸಿ ಆಹಾರ ನೀಡಲಾಗುತ್ತಿದೆ

l ಬ್ರಿಟನ್ ಸೇರಿದಂತೆ ಯುರೋಪಿನ ಹಲವು ಕಡೆ ಶಾಲೆಗಳನ್ನು ಮುಚ್ಚಲಾಗಿದೆ. ಬಿಸಿಗಾಳಿಯಿಂದ ಮಕ್ಕಳಿಗೆ ಹಾನಿಯಾಗುವುದನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜನರು ಸೇರುವ ಉದ್ಯಾನಗಳನ್ನು ಬಂದ್ ಮಾಡಲಾಗಿದೆ. ಕಚೇರಿಗಳ ಸಮಯವನ್ನು ಬದಲಿಸಲಾಗಿದೆ

l ಬ್ರಿಟನ್‌ನಲ್ಲಿ ತೀವ್ರ ಶಾಖದಿಂದ ಕೆಲವು ದಿನಗಳಿಂದ ಹವಾನಿಯಂತ್ರಣ ವ್ಯವಸ್ಥೆ (ಎ.ಸಿ.) ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಗೂಗಲ್ ಕ್ಲೌಡ್ ಹಾಗೂ ಒರಾಕಲ್ ಕ್ಲೌಡ್ ಸೇವೆಯನ್ನು ಸ್ವಲ್ಪ ಸಮಯ ಸ್ಥಗಿತಗೊಳಿಸಲಾಗಿತ್ತು

ಅಮೆರಿಕದಲ್ಲೂ ಬಿಸಿ

ಬಿಸಿಗಾಳಿಯು ಕೇವಲ ಯುರೋಪ್‌ಗೆ ಮಾತ್ರ ಸೀಮಿತವಾಗಿಲ್ಲ. ಅಮೆರಿಕದ ಹಲವು ರಾಜ್ಯಗಳಲ್ಲೂ ಬಿಸಿಗಾಳಿ ಇದೆ. ಟೆಕ್ಸಾಸ್, ಒಕ್ಲಹಾಮ, ನ್ಯೂಯಾರ್ಕ್ ಸೇರಿದಂತೆ ಅಮೆರಿಕದ ಸುಮಾರು 10 ಕೋಟಿ ಜನರು ಝಳದಿಂದ ಪರಿತಪಿಸುತ್ತಿದ್ದಾರೆ. ಒಕ್ಲಹಾಮ ನಗರದಲ್ಲಿ 43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ನ್ಯೂಯಾರ್ಕ್ ಜನರು ಬೇಗೆ ಪರಿಹರಿಸಿಕೊಳ್ಳಲು ಕಡಲತೀರಗಳಿಗೆ ಎಡತಾಕುತ್ತಿದ್ದಾರೆ. ಆದರೆ ಯುರೋಪ್‌ನಷ್ಟು ಸಮಸ್ಯೆ ಇಲ್ಲಿಲ್ಲ. ಯುರೋಪ್‌ಗೆ ಹೋಲಿಸಿದರೆ, ಬಹುತೇಕ ಅಮೆರಿಕನ್ನರ ಮನೆಗಳಲ್ಲಿ ಹವಾನಿಯಂತ್ರಣ (ಎ.ಸಿ.) ವ್ಯವಸ್ಥೆಯಿದೆ. ಕಚೇರಿಗಳು, ಸಮುದಾಯ ಅಡುಗೆ ಕೇಂದ್ರಗಳು, ಕಟ್ಟಡಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಹೊರಾಂಗಣ ಚಟುವಟಿಕೆಗಳನ್ನು ಸಾಧ್ಯವಾದಷ್ಟು ಸ್ಥಗಿತಗೊಳಿಸುವಂತೆ ಜನರಿಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT