ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಇಡಬ್ಲ್ಯುಎಸ್‌ ಮೀಸಲು: ಸುಪ್ರೀಂ ಕೋರ್ಟ್ ತೀರ್ಪು ಮರುಪರಿಶೀಲನೆ ಬೇಕು

Last Updated 25 ನವೆಂಬರ್ 2022, 19:30 IST
ಅಕ್ಷರ ಗಾತ್ರ

‘ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್‌) ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವುದು ಸಂವಿಧಾನ ಬದ್ಧ’ ಎಂದು ಸುಪ್ರೀಂ ಕೋರ್ಟ್‌ ತನ್ನ ಇತ್ತೀಚಿನ ತೀರ್ಪಿನಲ್ಲಿ ಹೇಳಿದೆ. ಇದೇ ನವೆಂಬರ್ 7ರಂದು ನೀಡಿದ ಈ ತೀರ್ಪಿನ ಮೂಲಕ, ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಂದಿರುವ 103ನೇ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. ಈ ಮೂಲಕ ಮೀಸಲಾತಿ ವ್ಯವಸ್ಥೆಯ ಮೂಲ ವ್ಯಾಖ್ಯಾನವನ್ನೇ ಸುಪ್ರೀಂ ಕೋರ್ಟ್‌ ಬದಲಿಸಿದೆ. ಈವರೆಗೆ ಜಾತಿ–ಸಮುದಾಯ ಆಧಾರಿತವಾಗಿ ಮೀಸಲಾತಿ ನೀಡಲಾಗುತ್ತಿತ್ತು. ಆದರೆ ಈಗ, ವ್ಯಕ್ತಿ ಕೇಂದ್ರಿತವಾದ ಮೀಸಲಾತಿ ವ್ಯವಸ್ಥೆಗೆ ಮಣೆ ಹಾಕಲಾಗಿದೆ. ಮೀಸಲಾತಿಯ ಪರಿಕಲ್ಪನೆಯನ್ನೇ ಬದಲಿಸುವ ಈ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿರುವುದು, ದೇಶದ ಮೀಸಲಾತಿ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮಕ್ಕೆ ಕಾರಣವಾಗಲಿದೆ.

ಮೀಸಲಾತಿಯ ಪರಿಕಲ್ಪನೆ ಮತ್ತು ಈ ಕುರಿತು ನ್ಯಾಯಾಂಗದ ತೀರ್ಪುಗಳು ವೈವಿಧ್ಯಮಯ ಇತಿಹಾಸವನ್ನು ಹೊಂದಿವೆ. ಸ್ವಾತಂತ್ರ್ಯಪೂರ್ವ ಭಾರತದಲ್ಲೇ ಕೆಲವು ಪ್ರಗತಿಪರ ಸಂಸ್ಥಾನಗಳು ಮೀಸಲಾತಿಯನ್ನು ಜಾರಿಗೆ ತಂದಿದ್ದವು. 1932ರಲ್ಲಿ ಮಹಾತ್ಮ ಗಾಂಧಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಮಧ್ಯೆ ನಡೆದ ಪೂನಾ ಒಪ್ಪಂದವು, ಹಿಂದೂ ಧರ್ಮದ ಮತದಾರರೊಳಗೆ ದಲಿತರಿಗೆ ಪ್ರತ್ಯೇಕ ಪ್ರಾತಿನಿಧ್ಯ ಒದಗಿಸಿತ್ತು. ನಂತರದ ವರ್ಷಗಳಲ್ಲಿ ಈ ಮೀಸಲಾತಿಯು ಹಲವು ಬದಲಾವಣೆಗಳಿಗೆ ತನ್ನನ್ನು ಒಡ್ಡಿಕೊಂಡಿದೆ. ಸುಪ್ರೀಂ ಕೋರ್ಟ್‌ನ ತೀರ್ಪುಗಳೂ ಮೀಸಲಾತಿಯ ವ್ಯಾಪ್ತಿಯನ್ನು ಹೆಚ್ಚಿಸಿವೆ ಮತ್ತು ಅದರ ಪರಿಕಲ್ಪನೆಯನ್ನು ಸ್ಪಷ್ಟಪಡಿಸಿವೆ. ಕೆಲವು ತೀರ್ಪುಗಳು ಮೀಸಲಾತಿಗೆ ಮಿತಿಯನ್ನೂ ಹೇರಿವೆ.

1951ರಲ್ಲಿ ಸಂವಿಧಾನಕ್ಕೆ ಮಾಡಲಾದ ಮೊದಲ ತಿದ್ದುಪಡಿಯು ಮೀಸಲಾತಿಗೆ ಕಾನೂನು ಮತ್ತು ಸಾಂವಿಧಾನಿಕ ಮಂಜೂರಾತಿಯನ್ನು ಕೊಟ್ಟಿತು. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ವಿಶೇಷವಾಗಿ ಪರಿಶಿಷ್ಟ ಜಾತಿ, ಪಂಗಡಗಳಿಗೆ, ನಂತರದಲ್ಲಿ, ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ವಿಶೇಷ ಅವಕಾಶವನ್ನು ಸರ್ಕಾರಕ್ಕೆ ಕೊಟ್ಟಿತು.

ಮೀಸಲಾತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಚಂಪಕನ್ ದೊರೈರಾಜನ್‌ ಪ್ರಕರಣದಲ್ಲಿನ ತೀರ್ಪು, ಮೀಸಲಾತಿಗೆ ಸಂಬಂಧಿಸಿದ ಅತ್ಯಂತ ಮಹತ್ವದ ಮೈಲುಗಲ್ಲು.‘ಮೀಸಲಾತಿಯು ಸಮಾನತೆಗೆ ವಿರುದ್ಧವಾದುದು ಮತ್ತು ಅದು ಸಂವಿಧಾನದ ಮೂರನೇ ಭಾಗದಲ್ಲಿ ಹೇಳಲಾದ ಸಮಾನತೆಯನ್ನು ಉಲ್ಲಂಘಿಸುತ್ತದೆ’ ಎಂದು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.

ಈ ತೀರ್ಪೇ, ಸಂವಿಧಾನಕ್ಕೆ ಮೊದಲ ತಿದ್ದುಪಡಿ ತರಲು ಕಾರಣವಾಯಿತು. ಮೀಸಲಾತಿಯು ಸಂವಿಧಾನಕ್ಕೆ ವಿರುದ್ಧವಾದುದು ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದರಿಂದಲೇ ಸಂವಿಧಾನದ 15ನೇ ವಿಧಿಗೆ ತಿದ್ದುಪಡಿ ತರಲಾಯಿತು.

1964ರ ದೇವದಾಸನ್‌ ಪ್ರಕರಣ ಮತ್ತು 1975ರ ಎನ್‌.ಎಂ.ಥಾಮಸ್‌ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ತೀರ್ಪುಗಳು, ‘ಮೀಸಲಾತಿ ಎಂಬುದು ಸಮಾನತೆಗೆ ವಿರುದ್ಧವಾದುದಲ್ಲ. ಬದಲಿಗೆ ಮೀಸಲಾತಿಯು ಸಮಾನತೆಯ ಒಂದು ಭಾಗ’ ಎಂದು ವ್ಯಾಖ್ಯಾನಿಸಿದವು.

ನವೆಂಬರ್ 7ರ ತೀರ್ಪಿನ ಮೂಲಕ ಸುಪ್ರೀಂ ಕೋರ್ಟ್‌, ಮೀಸಲಾತಿ ಪರಿಕಲ್ಪನೆಯನ್ನೇ ದುರ್ಬಲಗೊಳಿಸಿದೆ. 3:2ರ ಬಹುಮತದ ಈ ತೀರ್ಪು, ‘103ನೇ ತಿದ್ದುಪಡಿಯು ಸಂವಿಧಾನದ ಮೂಲ ರಚನೆಗೆ ಧಕ್ಕೆ ತರುವುದಿಲ್ಲ’ ಎಂದು ಹೇಳಿದೆ. ತೀರ್ಪು ಬಂದಾಗ ಮುಖ್ಯ ನ್ಯಾಯಮೂರ್ತಿಯಾಗಿದ್ದ ಯು.ಯು.ಲಲಿತ್ ಮತ್ತು ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರು, ‘ಈ ತಿದ್ದುಪಡಿಯು ತಾರತಮ್ಯದಿಂದ ಕೂಡಿದ್ದು, ಅದನ್ನು ರದ್ದುಪಡಿಸಬೇಕು’ ಎಂದು ಹೇಳಿದ್ದರು. ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ, ಬೇಲಾ ಎಂ.ತ್ರಿವೇದಿ ಮತ್ತು ಜೆ.ಬಿ.ಪಾರ್ದೀವಾಲಾ ಅವರ ತೀರ್ಪಿಗಿಂತ ಭಿನ್ನವಾದ ತೀರ್ಪನ್ನು ಈ ಇಬ್ಬರು ನ್ಯಾಯಮೂರ್ತಿಗಳು ನೀಡಿದ್ದರು.

ಈ ತಿದ್ದುಪಡಿಯು ತಾರತಮ್ಯವನ್ನು ಮಾಡುತ್ತದೆ. ಏಕೆಂದರೆ ಆರ್ಥಿಕವಾಗಿ ಹಿಂದುಳಿದಿರುವಿಕೆಯ ಆಧಾರದಲ್ಲಿ ಮಾತ್ರ ಇದು ಮೀಸಲಾತಿಯನ್ನು ನೀಡುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳನ್ನು ಈ ಮೀಸಲಾತಿಯಿಂದ ಹೊರಗಿಡುತ್ತದೆ. ಮತ್ತು ಈವರೆಗೆ ಇದ್ದ ಮೀಸಲಾತಿಯ ವ್ಯಾಪ್ತಿಯಲ್ಲಿ ಇಲ್ಲದಿದ್ದ ಸವರ್ಣೀಯರು ಹಾಗೂ ಮುಂದುವರಿದ ಜಾತಿಗಳಿಗೆ ಮಾತ್ರ ಈ ಮೀಸಲಾತಿಯನ್ನು ಕಲ್ಪಿಸುತ್ತದೆ. ಈ ಕಾರಣದಿಂದಲೇ ಈ ತಿದ್ದುಪಡಿಯು ತಾರತಮ್ಯದಿಂದ ಕೂಡಿದೆ.

ಐತಿಹಾಸಿಕವಾಗಿ ತುಳಿತಕ್ಕೆ ಒಳಗಾಗಿ ಸಾಮಾಜಿವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ವಿಶೇಷ ಸ್ಥಾನ ಕಲ್ಪಿಸುವುದು ಮೀಸಲಾತಿಯ ಉದ್ದೇಶವಾಗಿತ್ತು. ಮೀಸಲಾತಿಯು, ಅಸಮಾನ ಸಮಾಜದಲ್ಲಿ ಸಮಾನತೆಯನ್ನು ಸಾಧಿಸುವ ಒಂದು ಪರಿಹಾರ ರೂಪದ ಸಾಧನ. ಈ ಕಾರಣದಿಂದಲೇ 1992ರ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು, ‘ಆರ್ಥಿಕವಾಗಿ ಹಿಂದುಳಿದಿರುವಿಕೆ ಒಂದೇ ಮೀಸಲಾತಿಗೆ ಮಾನದಂಡವಲ್ಲ’ ಎಂದು ಹೇಳಿತ್ತು. ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ನೀಡಿದ ಮೀಸಲಾತಿಯನ್ನು ಎತ್ತಿಹಿಒಡಿದಿತ್ತು. ಆದರೆ ಈಗಿನ ಐವರು ಸದಸ್ಯರ ಸಂವಿಧಾನ ಪೀಠದ ತೀರ್ಪು, ಆರ್ಥಿಕವಾಗಿ ಹಿಂದುಳಿದಿರುವಿಕೆ ಒಂದೇ ಮೀಸಲಾತಿಗೆ ಮಾನದಂಡ ಎಂಬ ತಿದ್ದುಪಡಿಯನ್ನು ಎತ್ತಿ ಹಿಡಿದಿದೆ. ಮೀಸಲಾತಿಯ ಮೂಲ ಪರಿಕಲ್ಪನೆಗೆ ವ್ಯತಿರಿಕ್ತವಾದ ರೀತಿಯಲ್ಲಿ ಇಡಬ್ಲ್ಯುಎಸ್‌ ಮೀಸಲಾತಿಯನ್ನು ಈ ತೀರ್ಪು ವ್ಯಾಖ್ಯಾನಿಸಿದೆ.

ಮೀಸಲಾತಿಗೆ ಇದ್ದ ಗರಿಷ್ಠ ಶೇ50ರ ಪ್ರಮಾಣದ ಮಿತಿಯನ್ನು ಮೀರಲೂ ಈ ತೀರ್ಪು ಅವಕಾಶ ಮಾಡಿಕೊಟ್ಟಿದೆ. ಜತೆಗೆ, ಜಾತಿ ಆಧಾರಿತ ಮೀಸಲಾತಿಗಷ್ಟೇ ಇಂತಹ ಮಿತಿ ಅನ್ವಯವಾಗುತ್ತದೆ ಎಂದು ಪ್ರತಿಪಾದಿಸಿದೆ. ಒಮ್ಮೆ ಇಂತಹ ಮಿತಿಯನ್ನು ಮುರಿದರೆ, ಮತ್ತೆ–ಮತ್ತೆ ಅದನ್ನು ಮುರಿಯಲಾಗುತ್ತದೆ. ಆದರೆ ರಾಜಕೀಯ ಕಾರಣಕ್ಕೆ ಇಡಬ್ಲ್ಯುಎಸ್‌ನಂತಹ ಮೀಸಲಾತಿ ನೀಡಲು ಈ ಮಿತಿ ಮುರಿಯಲಾಗುತ್ತದೆಯೇ ಹೊರತು, ಸಾಮಾಜಿಕ ನ್ಯಾಯದ ಉದ್ದೇಶದಿಂದ ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಅಂತೂ ಅಲ್ಲ.

ತಾರತಮ್ಯಕ್ಕೆ ಅವಕಾಶ

ಆರ್ಥಿಕ ಸ್ಥಿತಿಗತಿಯ ಕಾರಣದಿಂದಾಗಿ ಈ ಮೀಸಲಾತಿ ‍ಪಡೆಯಲು ಅರ್ಹರಾದ ಬಹುದೊಡ್ಡ ಜನವರ್ಗವನ್ನು ಈ ಮೀಸಲಾತಿ ವ್ಯಾಪ್ತಿಯಿಂದ ಹೊರಗೆ ಇರಿಸಲಾಗಿದೆ. ಅವರು ಜಾತಿ ಆಧಾರಿತ ಮೀಸಲಾತಿಗೆ ಅರ್ಹರು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ಇದುವೇ ಸಂವಿಧಾನಕ್ಕೆ ಮಾಡಲಾದ 103ನೇ ತಿದ್ದುಪಡಿಯ ಬಹುದೊಡ್ಡ ಲೋಪವಾಗಿದೆ. ಇದಕ್ಕೆ ರಾಜಕೀಯವಾದ ತರ್ಕ ಇರಬಹುದು. ಆದರೆ, ಕಾನೂನು ಮತ್ತು ಸಂವಿಧಾನಕ್ಕೆ ಅನುಗುಣವಾಗಿ ಇದು ಇದೆ ಎಂದು ಹೇಳಲಾಗದು. ಬಹುದೊಡ್ಡ ಜನವರ್ಗಕ್ಕೆ ಅವರ ಮೂಲಭೂತ ಹಕ್ಕಾದ ಸಮಾನ ಅವಕಾಶಗಳ ಹಕ್ಕನ್ನು ನಿರಾಕರಿಸಿರುವುದು ಸ್ವೇಚ್ಛಾಚಾರದ ನಿರ್ಧಾರವೇ ಸರಿ. ಒಬ್ಬ ವ್ಯಕ್ತಿಗೆ ಒಂದು ಪ್ರಯೋಜನ ದೊರಕುತ್ತಿದೆ ಎಂಬ ಕಾರಣಕ್ಕೆ ಇನ್ನೊಂದು ಅನುಕೂಲ ಕೊಡಬಾರದು ಎಂಬ ತರ್ಕವು ಸಮರ್ಪಕವೂ ಅಲ್ಲ ಕಾನೂನುಬದ್ಧವೂ ಅಲ್ಲ.

ಈ ತಾರತಮ್ಯವನ್ನು ‘ವಿವೇಚನಾಯುಕ್ತ ವರ್ಗೀಕರಣ’ದ ಹೆಸರಿನಲ್ಲಿ ‌ಎತ್ತಿ ಹಿಡಿದು ಬಹುಮತದ ತೀರ್ಪನ್ನು ನೀಡಲಾಗಿದೆ. ‘ಒಬ್ಬ ವ್ಯಕ್ತಿಯನ್ನು ಇನ್ನೊಬ್ಬ ವ್ಯಕ್ತಿಯಿಂದ ಪ್ರತ್ಯೇಕಿಸಲು ಆರ್ಥಿಕ ಸೂಚಕಗಳ ಆಧಾರದ ಆರ್ಥಿಕ ಮಾನದಂಡವನ್ನು ಬಳಸಿ ವರ್ಗೀಕರಿಸಿ ಸಂವಿಧಾನದ 15ನೇ ವಿಧಿಯ (6)ನೇ ಅಂಶದ ಅಡಿಯಲ್ಲಿ ಮೀಸಲಾತಿ ನೀಡುವುದು ಸ್ವೇಚ್ಛೆಯ ವರ್ಗೀಕರಣ ಅಲ್ಲ. ಈ ತಿದ್ದುಪಡಿಯು ಸಂವಿಧಾನದ ಮೂಲ ಸಂರಚನೆಯನ್ನು ಉಲ್ಲಂಘಿಸುವುದೂ ಇಲ್ಲ’ ಎಂದು ನ್ಯಾಯಮೂರ್ತಿ ಪಾರ್ದೀವಾಲಾ ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಆದರೆ, ಸಮಾಜದ ಕೆಲವು ವರ್ಗಗಳು ಅನುಭವಿಸಿದ ಚಾರಿತ್ರಿಕ ಅನ್ಯಾಯವನ್ನು ಸರಿಪಡಿಸುವುದಕ್ಕಾಗಿ ನೀಡಲಾದ ಮೀಸಲಾತಿಗೆ ಅರ್ಹರಾದವರು ಮತ್ತು ಈಗ, ಆರ್ಥಿಕ ಸ್ಥಿತಿಗತಿಯ ಕಾರಣಕ್ಕೆ ಮೀಸಲಾತಿಗೆ ಅರ್ಹತೆ ಪಡೆದವರು ಸಂವಿಧಾನದ ಮುಂದೆ ಸಮಾನರು. ಅವರನ್ನು ಭಿನ್ನವಾಗಿ ನೋಡಲು ಸಾಧ್ಯವಿಲ್ಲ. ಹಾಗಾಗಿಯೇ ಇಡಬ್ಲ್ಯುಎಸ್‌ ಮೀಸಲಾತಿಯನ್ನು ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ನಿರಾಕರಿಸುವುದು ತಾರತಮ್ಯವೇ ಆಗುತ್ತದೆ. ಸಂವಿಧಾನವು ನೀಡಿರುವ ಅವಕಾಶಗಳ ಉಲ್ಲಂಘನೆಯೂ ಆಗುತ್ತದೆ.

ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಮೀಸಲಾತಿಯು ‘ಉಚಿತ ಪಾಸ್‌’ನ ರೀತಿಯದ್ದು ಅಲ್ಲ. ಅದು ನಷ್ಟ ಭರ್ತಿ ಮತ್ತು ಪರಿಹಾರ ರೂಪದ ವ್ಯವಸ್ಥೆಯಾಗಿದೆ ಎಂದು ಭಿನ್ನಮತದ ತೀರ್ಪು ನೀಡಿದ ನ್ಯಾಯಮೂರ್ತಿ ರವೀಂದ್ರ ಭಟ್‌ ಹೇಳಿದ್ದಾರೆ. ಪ್ರಬಲ ಜಾತಿಗಳನ್ನು ಸೇರಿಸಿ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ, ದಮನಕ್ಕೆ ಒಳಗಾದ ಜಾತಿಗಳನ್ನು ಇಡಬ್ಲ್ಯುಎಸ್‌ ಮೀಸಲಾತಿಯಿಂದ ಹೊರಗೆ ಇರಿಸುವುದು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಸಂವಿಧಾನದ 14ನೇ ವಿಧಿಯು ನೀಡುವ ಖಾತರಿಯನ್ನು ಉಲ್ಲಂಘಿಸುತ್ತದೆ.

ಸ್ವೇಚ್ಛೆಯ ಮೀಸಲು, ಮಾನದಂಡ

ಇತರ ಪ್ರಶ್ನೆಗಳೂ ಇವೆ. ಇಡಬ್ಲ್ಯುಎಸ್‌ ಮೀಸಲಾತಿಯನ್ನು ಶೇ 10ರಷ್ಟು ಎಂದು ನಿಗದಿ ಮಾಡಿದ್ದು ಏಕೆ? ಶೇ 9 ಅಥವಾ ಶೇ 11 ಅಲ್ಲ ಏಕೆ? ಶೇ 9 ಎಂದರೆ ಬಹಳ ಕಡಿಮೆ ಎಂದೂ ಶೇ 11 ಎಂದರೆ ಬಹಳ ಹೆಚ್ಚು ಎಂದಾಗಬಹುದು ಎಂಬುದು ಕಾರಣವೇ? ಶೇ 10ರಷ್ಟು ಎಂದು ನಿಗದಿ ಮಾಡಿರುವುದನ್ನು ಸಮರ್ಥಿಸಲು ಯಾವುದೇ ದತ್ತಾಂಶ ಇಲ್ಲ. ಹಾಗಾಗಿ, ಈ ನಿಗದಿಯು ಸ್ವೇಚ್ಛೆಯದ್ದೇ ಆಗಿದೆ. ಅನುಷ್ಠಾನದ ವಿಚಾರದಲ್ಲಿಯೂ ಹಲವು ಸಮಸ್ಯೆಗಳು ಇವೆ. ವಾರ್ಷಿಕ ₹8 ಲಕ್ಷದ ಒಳಗಿನ ಆದಾಯದವರು ಇಡಬ್ಲ್ಯುಎಸ್‌ ಮೀಸಲಾತಿಗೆ ಅರ್ಹರು ಎಂದು ನಿಗದಿ ಮಾಡಲಾಗಿದೆ. ಅಂದರೆ, ದಿನಕ್ಕೆ ₹2,200 ಆದಾಯ ಇರುವವರು ಈ ಮೀಸಲಾತಿಗೆ ಅರ್ಹರು. ವಾರ್ಷಿಕ ₹3 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರು ಆದಾಯ ತೆರಿಗೆ ವ್ಯಾಪ್ತಿಗೆ ಬರುವ ದೇಶದಲ್ಲಿ, ಈ ಪ್ರಮಾಣದ ಆದಾಯ ಇರುವವರನ್ನು ಆರ್ಥಿಕವಾಗಿ ದುರ್ಬಲ ವರ್ಗದವರು ಎಂದು ಪರಿಗಣಿಸಲು ಸಾಧ್ಯವೇ? ಯಾವುದೇ ರೀತಿಯ ಪ್ರಮಾಣಪತ್ರವನ್ನು ಖರೀದಿಸಬಹುದಾದ ಈ ದೇಶದಲ್ಲಿ ಇಡಬ್ಲ್ಯುಎಸ್‌ ವರ್ಗದಲ್ಲಿ ಅರ್ಹತೆ ಪಡೆದುಕೊಳ್ಳುವುದು ಕಷ್ಟವೇ?

ಈ ಮೀಸಲಾತಿಯು ಇಡಿಯಾಗಿ ಇಡಬ್ಲ್ಯುಎಸ್‌ ಸಮುದಾಯಕ್ಕೆ ನೀಡಿರುವುದಲ್ಲ, ಬದಲಿಗೆ, ಈ ವರ್ಗದಲ್ಲಿ ಇರುವ ವ್ಯಕ್ತಿಗಳಿಗೆ ನೀಡಿರುವುದು. ಆ ವರ್ಗಕ್ಕೆ ಸೇರಿದ್ದಾರೆ ಎಂಬ ಒಂದೇ ಕಾರಣಕ್ಕೆ ಎಲ್ಲರೂ ಈ ಮೀಸಲಾತಿಯನ್ನು ಪಡೆದುಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ, ಈ ಮೀಸಲಾತಿಗೆ ಇರುವ ಅರ್ಹತೆಯ ವ್ಯಾಖ್ಯೆಯೇ ಬದಲಾಗುತ್ತಿರುತ್ತದೆ. ಈ ವರ್ಷದ ಫಲಾನುಭವಿಯು ಮುಂದಿನ ವರ್ಷವೂ ಫಲಾನುಭವಿಯಾಗಿಯೇ ಇರಬಹುದು ಎಂದು ಹೇಳಲಾಗದು. ಏಕೆಂದರೆ, ವ್ಯಕ್ತಿಯ ಆರ್ಥಿಕ ಸ್ಥಿತಿ ಬದಲಾಗಬಹುದು. ಅರ್ಹ ಫಲಾನುಭವಿಯು ಪದೇ ಪದೇ ತಾನು ಈ ಮೀಸಲಾತಿಗೆ ಅರ್ಹ ಎಂಬುದನ್ನು ಸಾಬೀತು ಮಾಡುತ್ತಲೇ ಇರಬೇಕಾಗುತ್ತದೆ. ಸಾರ್ವಜನಿಕ ಸಂಪನ್ಮೂಲವನ್ನು ಬಳಸಿಕೊಳ್ಳುವ ಒಂದು ಮೀಸಲಾತಿ ವ್ಯವಸ್ಥೆಯು ವ್ಯಕ್ತಿಗಳನ್ನು ಗುರಿಯಾಗಿ ಇರಬಹುದೇ? ಮೀಸಲಾತಿಯು ಇರುವುದು ಸಮುದಾಯಗಳಿಗೇ ಹೊರತು ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ಅಲ್ಲ.

ಅದೂ ಅಲ್ಲದೆ, ಸಂಪನ್ಮೂಲದ ಅಸಮಾನ ಹಂಚಿಕೆ, ಬಡತನವನ್ನು ಹೆಚ್ಚಿಸುವ ರೀತಿಯಲ್ಲಿರುವ ಸರ್ಕಾರದ ಆರ್ಥಿಕ ನೀತಿಗಳೇ ಜನರ ಬಡತನಕ್ಕೆ ಕಾರಣ. ಈ ಕಾರಣಗಳೇ ಬಡವರು ಮತ್ತು ಶ್ರೀಮಂತರ ನಡುವಣ ಅಂತರವನ್ನು‍ ಹೆಚ್ಚಿಸಿವೆ. ಇಂಥವರಲ್ಲಿ ಕೆಲವರ ಪರಿಸ್ಥಿತಿಯನ್ನು ಸುಧಾರಿಸುವುದಕ್ಕಾಗಿ ಸರ್ಕಾರದ ಸಂಪನ್ಮೂಲವನ್ನು ಸಾಂಸ್ಥಿಕವಾಗಿ ಖರ್ಚು ಮಾಡಬಹುದೇ? ಮೀಸಲಾತಿ ಎಂಬುದು ಬಡತನ ನಿರ್ಮೂಲನೆ ಅಥವಾ ಕಲ್ಯಾಣ ಯೋಜನೆ ಅಲ್ಲ.

ಈಗ ಇರುವ ಮೀಸಲಾತಿಯ ಫಲಾನುಭವಿಗಳು ಎರಡೆರಡು ರೀತಿಯಲ್ಲಿ ಅನನುಕೂಲಕ್ಕೆ ಒಳಗಾದವರು. ಅವರು ಚಾರಿತ್ರಿಕ ಕಾರಣಗಳಿಂದ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವವರು. ಅವರಿಗೆ ಮೀಸಲಾತಿ ನೀಡುವುದರಲ್ಲಿ ಮರುಹಂಚಿಕೆ ಮತ್ತು ಪ್ರಾತಿನಿಧ್ಯ ನೀಡಿಕೆಯ ಅಂಶಗಳು ಒಳಗೊಂಡಿವೆ. ಮರುಹಂಚಿಕೆ ಮತ್ತು ಬೆಂಬಲ ನೀಡಿಕೆಗಾಗಿ ಸಮರ್ಪಕ ನೀತಿಯ ಮೂಲಕ ಅವರಿಗೆ ನೆರವಾಗಬಹುದು. ಹಂಚಿಕೆಯ ನ್ಯಾಯದ ಅಗತ್ಯವನ್ನು ಮೀಸಲಾತಿ ಮೂಲಕ ಪ್ರಾತಿನಿಧ್ಯ ಎಂಬುದಾಗಿ ತಪ್ಪು ಅರ್ಥ ಮಾಡಿಕೊಳ್ಳಬಾರದು.

ವಿನಾಶದ ಬೀಜ

ಇಡೀ ಮೀಸಲಾತಿ ವ್ಯವಸ್ಥೆಯನ್ನು ಉರುಳಿಸುವ ತರ್ಕವು ಇಡಬ್ಲ್ಯುಎಸ್‌ ಮೀಸಲಾತಿಯ ಯೋಚನೆಯಲ್ಲಿ ಇದೆ. ಬಹುಮತದ ತೀರ್ಪಿನಲ್ಲಿ ಇರುವ ಎರಡು ಅಂಶಗಳು ಗಮನಾರ್ಹ. ‘ಪರಿವರ್ತನಾತ್ಮಕ ಸಂವಿಧಾನವಾದದತ್ತ ಸಾಗುವುದಕ್ಕಾಗಿ ಸಮಾಜದ ಸಮಗ್ರ ಹಿತದೃಷ್ಟಿಯಿಂದ ಮೀಸಲಾತಿ ವ್ಯವಸ್ಥೆಯನ್ನು ಮರುಪರಿಶೀಲನೆಗೆ ಒಳಪಡಿಸಬೇಕಾದ ಅಗತ್ಯ ಇದೆ’ ಎಂದು ನ್ಯಾಯಮೂರ್ತಿ ಬೇಲಾ ತ್ರಿವೇದಿ ಹೇಳಿದ್ದಾರೆ. ಮೀಸಲಾತಿಯು ಸ್ಥಾಪಿತ ಹಿತಾಸಕ್ತಿ ಆಗುವುದಕ್ಕೆ ಅವಕಾಶ ಕೊಡಬಾರದು... ಹಿಂದುಳಿದ ವರ್ಗಗಳ ಹೆಚ್ಚು ಹೆಚ್ಚು ಜನರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಸ್ವೀಕಾರಾರ್ಹ ಮಟ್ಟಕ್ಕೆ ತಲುಪುತ್ತಲೇ ಅವರನ್ನು ಹಿಂದುಳಿದ ವರ್ಗಗಳಿಂದ ತೆಗೆದು ಬಿಡಬೇಕು’ ಎಂದು ‍ಪಾರ್ದೀವಾಲಾ ಹೇಳಿದ್ದಾರೆ.

ಮುಂದುವರಿದಿದ್ದಾರೆ ಎಂಬ ತರ್ಕದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಮರುರೂಪಿಸುವುದರ ಹಿಂದಿನ ಚಿಂತನೆ ಹೀಗಿರಬಹುದು: ಆರ್ಥಿಕ ಸ್ಥಿತಿಗತಿ ಆಧಾರದಲ್ಲಿ ಮೀಸಲಾತಿ ನೀಡಿಕೆಯು ಕಾನೂನುಬದ್ಧ ಮತ್ತು ಸಾಂವಿಧಾನಿಕ ಎಂದಾದರೆ, ಈಗ ಇರುವ ಸಾಂಪ್ರದಾಯಿಕ ಮೀಸಲಾತಿ ವ್ಯವಸ್ಥೆಯನ್ನು ಕೈಬಿಟ್ಟು ಅದನ್ನೇ ಎಲ್ಲರಿಗೂ ಏಕೆ ವಿಸ್ತರಿಸಬಾರದು? ಅದನ್ನು ‘ಒಂದು ದೇಶ, ಒಂದು ಮೀಸಲಾತಿ’ ಎಂದೂ ಬಣ್ಣಿಸಬಹುದು. ಜನರನ್ನು ಅವರ ಜಾತಿಯ ಆಧಾರದಲ್ಲಿ ಗುರುತಿಸಬಾರದು, ಜಾತಿರಹಿತ ಸಮಾಜ ನಿರ್ಮಾಣದ ಪ್ರಯತ್ನ ಇದು ಎಂದು ಭಾವನಾತ್ಮಕವಾಗಿ ಹೇಳಬಹುದು. ಹೀಗಾಗಿ ಜಾತಿ ಆಧಾರಿತ ಮೀಸಲಾತಿಯನ್ನು ರದ್ದುಪಡಿಸಬೇಕು. ಅಗತ್ಯ ಇರುವ ಎಲ್ಲರಿಗೂ ಮೀಸಲಾತಿ ಸಿಗುವ ರೀತಿಯಲ್ಲಿ ಅಥವಾ ಅಗತ್ಯ ಇಲ್ಲದವರಿಗೆ ಸಿಗದ ರೀತಿಯಲ್ಲಿ ಆರ್ಥಿಕ ಸ್ಥಿತಿಗತಿ ಆಧಾರಿತ ಮೀಸಲಾತಿಯನ್ನು ರೂಪಿಸಬಹುದು. ದೇಶದಲ್ಲಿ ಈಗ ರೂಪುಗೊಳ್ಳುತ್ತಿರುವ ವಾತಾವರಣದಲ್ಲಿ ಈ ವಾದಗಳು ಸರಿಯಾಗಿಯೇ ಇವೆ, ವಿವೇಕಯುತವಾದುದು ಎಂದೂ ಕಾಣಿಸಬಹುದು. ಈ ವಾದಗಳನ್ನು ಬಳಸಿಕೊಂಡೇ ಈಗ ಇರುವ ಮೀಸಲಾತಿ ವ್ಯವಸ್ಥೆಯನ್ನು ರದ್ದುಪಡಿಸಬಹುದು.

ಹಿಂದುಳಿದ ವರ್ಗಗಳ ಜನರನ್ನು ಚಾರಿತ್ರಿಕವಾಗಿ ಶೋಷಿಸಲಾಗಿದೆ ಮತ್ತು ದಮನಿಸಲಾಗಿದೆ ಹಾಗೂ ಸವರ್ಣೀಯರಿಗೆ ಹೋಲಿಸಿದರೆ ಶತಮಾನಗಳಿಂದ ಇವರು ಅನನುಕೂಲಕರ ಸ್ಥಿತಿಯಲ್ಲಿಯೇ ಇದ್ದರು ಎಂಬುದನ್ನು ಅವರವರ ಅನುಕೂಲಕ್ಕೆ ತಕ್ಕಂತೆ ನಿರ್ಲಕ್ಷಿಸಬಹುದು.

ತೀರ್ಪನ್ನು ಮರುಪ‍ರಿಶೀಲನೆಗೆ ಒಳಪಡಿಸಬೇಕಾದ ಅಗತ್ಯ ಖಂಡಿತವಾಗಿಯೂ ಇದೆ.

ಲೇಖಕ: ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯ ಸಂಪಾದಕೀಯ ಸಲಹೆಗಾರ, ನಿವೃತ್ತ ಸಹ ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT