ಗುರುವಾರ , ಜನವರಿ 27, 2022
27 °C

ಆಳ–ಅಗಲ: ಚುನಾವಣಾ ಕಣದಲ್ಲಿ ಸ್ತ್ರೀ ಪ್ರಾತಿನಿಧ್ಯದ ಸವಾಲು

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Prajavani

ಭಾರತದ ರಾಜಕಾರಣ ಅದರಲ್ಲೂ ವಿಶೇಷವಾಗಿ ಉತ್ತರ ಪ್ರದೇಶದ ರಾಜಕಾರಣ ಜಾತಿ, ಧರ್ಮ, ಪ್ರಾದೇಶಿಕತೆಯನ್ನು ದಾಟಿ ಎಲ್ಲಿಯೂ ಹೋಗಿದ್ದೇ ಇಲ್ಲ. ಎಲ್ಲ ರಾಜಕೀಯ ಪಕ್ಷಗಳೂ ಅಭಿವೃದ್ಧಿಯ ಕುರಿತು ಮಾತು ಆಡಿದ್ದರೂ, ಚುನಾವಣೆಯಲ್ಲಿ ಅದೊಂದು ಮುಖ್ಯ ವಿಷಯವಾಗಿ ಪರಿಗಣಿತವಾಗಿದ್ದೇ ಇಲ್ಲ. ಆದರೆ, ಈ ಬಾರಿ ವಿಧಾನಸಭೆ ಚುನಾವಣಾ ಕಣ ಭಿನ್ನವಾಗಿದೆ. ಅದಕ್ಕೆ ಕಾರಣ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ. ಮಹಿಳಾ ಮತದಾರರನ್ನೇ ಕೇಂದ್ರೀಕರಿಸಿ ಚುನಾವಣಾ ಪ್ರಚಾರ ನಡೆಸುವುದು ಪ್ರಿಯಾಂಕಾ ಅವರ ಕಾರ್ಯತಂತ್ರ. ಉತ್ತರ ಪ್ರದೇಶದಲ್ಲಿ ನಗಣ್ಯವೆಂದೇ ಭಾವಿಸಲಾಗಿದ್ದ ಕಾಂಗ್ರೆಸ್‌ ಪಕ್ಷದತ್ತ ಎಲ್ಲರೂ ಕಣ್ಣೆತ್ತಿ ನೋಡುವಂತೆ ಮಾಡುವಲ್ಲಿ ಪ್ರಿಯಾಂಕಾ ಯಶಸ್ವಿಯಾಗಿದ್ದಾರೆ. 

ರಾಜೀವ್‌ ಗಾಂಧಿ ಅವರು ಕಾಂಗ್ರೆಸ್‌ ನಾಯಕರಾಗಿದ್ದ ಸಂದರ್ಭದಲ್ಲಿ 1989ರಲ್ಲಿ ಪಕ್ಷವು ಉತ್ತರ ಪ‍್ರದೇಶದಲ್ಲಿ ಸೋತಿತ್ತು. ಮತ್ತೆ ಅಲ್ಲಿ ಅಧಿಕಾರಕ್ಕೆ ಬರಲು ಪಕ್ಷಕ್ಕೆ ಸಾಧ್ಯವಾಗಲೇ ಇಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಂತೂ ಪಕ್ಷವು ಪಾತಾಳಕ್ಕೆ ಕುಸಿಯಿತು. ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ರಾಹುಲ್‌ ಗಾಂಧಿ ಅವರು ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಸೋಲುಂಡರು. ಹಾಗಾಗಿಯೇ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಬಗ್ಗೆ ಯಾರಿಗೂ ಯಾವ ನಿರೀಕ್ಷೆಯೂ ಇರಲಿಲ್ಲ. 

ಈಗ ಚಿತ್ರಣ ಬದಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಶೇ 40ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದು 2021ರ ಅಕ್ಟೋಬರ್‌ನಲ್ಲಿ ಪ್ರಿಯಾಂಕಾ ಪ್ರಕಟಿಸಿದರು. ‘ನಾನು ಹುಡುಗಿ, ನಾನು ಹೋರಾಡಬಲ್ಲೆ’ ಎಂಬ ಘೋಷಣೆ ಹೊರಡಿಸಿದರು. ‘ಬದಲಾವಣೆ ಬಯಸಿರುವ, ನ್ಯಾಯಕ್ಕಾಗಿ ಹೋರಾಡುವ, ಒಗ್ಗಟ್ಟು ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡುವ ಎಲ್ಲ ಮಹಿಳೆ ಯರಿಗಾಗಿ ಈ ನಿರ್ಧಾರ. ಮಮತೆ, ದೃಢತೆ ಮತ್ತು ಶಕ್ತಿ ಮಹಿಳೆಯರಲ್ಲಿ ಮಾತ್ರ ಇದೆ. ಹಾಗಾಗಿ, ಅವರು ಮಾತ್ರ ಬದಲಾವಣೆ ತರಬಲ್ಲರು. ರಾಜ್ಯದ ರಾಜಕಾರಣದಲ್ಲಿ ಮಹಿಳೆಯರಿಗೆ ಪೂರ್ಣ ಪ್ರಾತಿನಿಧ್ಯ ಖಾತರಿಯ ಭರವಸೆ ಕೊಡುತ್ತೇನೆ’ ಎಂದು ಪ್ರಿಯಾಂಕಾ ಆಗ ಹೇಳಿದ್ದರು.

ಜಡತ್ವ ಕಾಂಗ್ರೆಸ್‌ನ ಜಾಯಮಾನ. ಆದರೆ, ಪ್ರಿಯಾಂಕಾ ಅವರು ಈ ಜಡತ್ವವನ್ನು ಕೊಡವಿ ಮೇಲೆದ್ದಿದ್ದಾರೆ. ಮಹಿಳಾ ಕೇಂದ್ರಿತವಾದ ರಾಜಕಾರಣವನ್ನು ಮುನ್ನೆಲೆಗೆ ತರುವುದಕ್ಕಾಗಿ ನೂರು ದಿನಗಳ ಕಾರ್ಯತಂತ್ರವನ್ನು ಹಾಕಿಕೊಂಡಿದ್ದಾರೆ. ಕಳೆದ ವರ್ಷದ ನವೆಂಬರ್‌ 17ರಿಂದ ಇದು ಆರಂಭವಾಗಿದೆ. ಉತ್ತರ ಪ್ರದೇಶದಲ್ಲಿ ಸುಮಾರು ಏಳು ಕೋಟಿ ಮಹಿಳಾ ಮತದಾರರಿದ್ದಾರೆ. ಈ ಮತದಾರರ ಪೈಕಿ ದೊಡ್ಡ ಭಾಗವು ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಮಾಡಬೇಕು ಎಂಬುದು ಪ್ರಿಯಾಂಕಾ ಲೆಕ್ಕಾಚಾರ.

ನೂರು ದಿನಗಳಲ್ಲಿ ನಾಲ್ಕು ಕೋಟಿ ಮಹಿಳೆಯರನ್ನು ತಲುಪಬೇಕು ಎಂಬುದು ಕಾಂಗ್ರೆಸ್‌ ಪಕ್ಷದ ಯೋಜನೆ. ಇದಕ್ಕಾಗಿ ಎಂಟು ಸಾವಿರ ಸ್ವಯಂ ಸೇವಕಿಯರ ತಂಡವನ್ನು ಕಟ್ಟಲಾಗಿದೆ. 150 ವೃತ್ತಿಪರರ ತಂಡವು ನೇಪಥ್ಯದಲ್ಲಿ ಕೆಲಸ ಮಾಡುತ್ತಿದೆ. ಸ್ವಯಂ ಸೇವಕಿಯರ ತಂಡವು ಪ್ರತಿದಿನ 2 ಲಕ್ಷ ಮಹಿಳೆಯರನ್ನು ಭೇಟಿಯಾಗಿ ಪ್ರಿಯಾಂಕಾ ಅವರ ಸಂದೇಶವನ್ನು ತಿಳಿಸುತ್ತಿದೆ.  

ಮಹಿಳೆಯರು ಮನೆಯಲ್ಲಿರುವ ಗಂಡಸರ ಮಾತಿನಂತೆ ಮತ ಚಲಾಯಿಸುತ್ತಾರೆ ಎಂಬ ಸ್ಥಿತಿ ಹಿಂದೆ ಇತ್ತೋ ಇಲ್ಲವೋ ಗೊತ್ತಿಲ್ಲ. ಈಗಂತೂ ಆ ಸ್ಥಿತಿ ಇಲ್ಲ. ಈಗ, ಮಹಿಳೆಯರು ಪುರುಷರಿಗಿಂತ ಭಿನ್ನವಾಗಿ ಚಿಂತಿಸಿ ಮತ ಹಾಕುತ್ತಾರೆ ಎಂಬುದಕ್ಕೆ ಪುರಾವೆಗಳು ಸಿಗುತ್ತವೆ. ಜತೆಗೆ, 2019ರ ಲೋಕಸಭಾ ಚುನಾವಣೆಯನ್ನೇ ತೆಗೆದುಕೊಂಡರೂ ಮತದಾನದಲ್ಲಿ ಮಹಿಳೆಯರ ಪ್ರಮಾಣ ಹೆಚ್ಚು. ಶೇ 63ರಷ್ಟು ಮಹಿಳೆಯರು ಮತ ಚಲಾಯಿಸಿದ್ದರೆ, ಪುರುಷರಲ್ಲಿ ಶೇ 59ರಷ್ಟು ಮಂದಿ ಮಾತ್ರ ಮತ ಹಾಕಿದ್ದಾರೆ. ಹಾಗಾಗಿ, ಪ್ರಿಯಾಂಕಾ ಕಾರ್ಯತಂತ್ರವು ಕಾಂಗ್ರೆಸ್‌ ಪಕ್ಷದ ಪುನಶ್ಚೇತನದ ಭರವಸೆಯನ್ನು ಮೂಡಿಸಿದೆ. 

ಜನಸಂಖ್ಯೆಯ ಸುಮಾರು ಶೇ 50ರಷ್ಟಿರುವ ಮಹಿಳಾ ವರ್ಗಕ್ಕೆ ಅಗತ್ಯ ಪ್ರಾತಿನಿಧ್ಯ ನಿರಾಕರಿಸುವುದು ಸಾಧ್ಯವೇ ಇಲ್ಲ ಎಂದು ಪ್ರಿಯಾಂಕಾ ಮತ್ತೆ ಮತ್ತೆ ಹೇಳಿದ್ದಾರೆ. ರಾಜಕೀಯ ಘೋಷಣೆ ಮಾತ್ರ ಆಗಬಹುದಾಗಿದ್ದ ನಿರ್ಧಾರವನ್ನು ಲಿಂಗ ಸಮಾನತೆ ಮತ್ತು ಸಮಾನ ಪ್ರಾತಿನಿಧ್ಯಕ್ಕಾಗಿ ಹೋರಾಟ ಎಂಬ ಸೈದ್ಧಾಂತಿಕ ಮಟ್ಟಕ್ಕೆ ಒಯ್ಯುವಲ್ಲಿ ಪ್ರಿಯಾಂಕಾ ಯಶಸ್ವಿಯಾಗಿದ್ದಾರೆ. 

ಅಷ್ಟೇ ಅಲ್ಲ; ಉತ್ತರ ಪ್ರದೇಶ ರಾಜಕೀಯ ದಿಗಂತದಲ್ಲಿ ತಾವು ನಿರ್ಲಕ್ಷಿಸಬಹುದಾದ ವ್ಯಕ್ತಿ ಅಲ್ಲ ಎಂಬುದನ್ನು ಸಾರುವಂತೆ ಅವರು ಕೆಲಸ ಮಾಡುತ್ತಿದ್ದಾರೆ. ಹಾಥರಸ್‌ ಅತ್ಯಾಚಾರ ಪ್ರಕರಣದ ನಂತರ, ಉತ್ತರ ಪ್ರದೇಶದಲ್ಲಿ ನಡೆದ ಅಪರಾಧ ಪ್ರಕರಣಗಳ ವಿರುದ್ಧ ಸದಾ ಧ್ವನಿ ಎತ್ತಿದ್ದಾರೆ. ಕೇಂದ್ರ ಸಚಿವ ಅಜಯ್‌ ಮಿಶ್ರಾ ಮಗ ಆಶಿಶ್‌ ಮಿಶ್ರಾ ಅವರಿದ್ದರು ಎಂದು ಹೇಳಲಾದ ಎಸ್‌ಯುವಿ ರೈತರ ಮೇಲೆ ಹರಿದು ನಾಲ್ವರ ಹತ್ಯೆ ಪ್ರಕರಣ ಕಳೆದ ಅಕ್ಟೋಬರ್‌ನಲ್ಲಿ ನಡೆದಿತ್ತು. ಮೃತ ರೈತರ ಮನೆಗೆ ಹೊರಟ ಪ್ರಿಯಾಂಕಾ ಅವರನ್ನು ಪೊಲೀಸರು ತಡೆದಿದ್ದರು. ಪ್ರಿಯಾಂಕಾ ಅವರ ಪಟ್ಟಿನಿಂದಾಗಿ ರೈತರ ಕುಟುಂಬವನ್ನು ಭೇಟಿಯಾಗಲು ಅವಕಾಶ ಕೊಡಲೇಬೇಕಾದ ಅನಿವಾರ್ಯ ಸರ್ಕಾರಕ್ಕೆ ಸೃಷ್ಟಿಯಾಗಿತ್ತು. ಇದು ಪ್ರಿಯಾಂಕಾ ಅವರ ನಾಯಕತ್ವದ ಬಗ್ಗೆ ಜನರಲ್ಲಿ ಭರವಸೆ ಮೂಡಿಸಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. 

ಪ್ರಿಯಾಂಕಾ ಅವರ ಕಾರ್ಯತಂತ್ರವು ಕಾಂಗ್ರೆಸ್‌ ಪಕ್ಷಕ್ಕೆ ಚುನಾವಣೆಯಲ್ಲಿ ಎಷ್ಟು ನೆರವಾಗಲಿದೆ ಎಂಬುದನ್ನು ಫಲಿತಾಂಶವಷ್ಟೇ ಹೇಳಬಲ್ಲುದು. ಆದರೆ, ಹೊಸತೊಂದು ಚರ್ಚೆ ಹುಟ್ಟುಹಾಕುವಲ್ಲಿ ಅದು ಯಶಸ್ವಿಯಾಗಿದೆ.

ಕಾಂಗ್ರೆಸ್‌ ಅನ್ನು ಅನುಸರಿಸಿದ ಬಿಜೆಪಿ

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರನ್ನೇ ಕೇಂದ್ರವಾಗಿಸುವ ಕಾಂಗ್ರೆಸ್‌ನ ತಂತ್ರಗಾರಿಕೆಯನ್ನು ಅನುಸರಿಸಲು ಬಿಜೆಪಿಯೂ ಮುಂದಾಗಿದೆ. ಕಾಂಗ್ರೆಸ್‌ನ ಈ ತಂತ್ರಗಾರಿಕೆಗೆ ವ್ಯಕ್ತವಾಗುತ್ತಿರುವ ಭಾರಿ ಪ್ರತಿಕ್ರಿಯೆ ಕಂಡು ಇದೇ ಹಾದಿಯಲ್ಲಿ ಮುನ್ನಡೆಯಲು ಬಿಜೆಪಿಯೂ ನಿರ್ಧರಿಸಿದೆ. ಹೀಗಾಗಿ ಮಹಿಳೆಯರ ಓಲೈಕೆಗೆ ಮುಂದಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಪ್ರಿಯಾಂಕಾ ಅವರು ಮಹಿಳಾ ಕೇಂದ್ರಿತ ಪ್ರಣಾಳಿಕೆಯನ್ನು ಘೋಷಿಸಿದ ನಂತರ, ಬಿಜೆಪಿ ನಾಯಕರು ತಮ್ಮ ಚುನಾವಣಾ ರ‍್ಯಾಲಿಗಳಲ್ಲಿ ಮಹಿಳೆಯರನ್ನು ಕುರಿತು ಮಾತನಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಲ್ಲಾ ರ‍್ಯಾಲಿಗಳಲ್ಲಿ ಮಹಿಳಾ ಸಬಲೀಕರಣದ ಮಾತುಗಳನ್ನಾಡುತ್ತಿದ್ದಾರೆ.

‘ನಮ್ಮ ಸರ್ಕಾರವು ಉತ್ತರ ಪ್ರದೇಶದಲ್ಲಿ ಬಡವರಿಗಾಗಿ ಲಕ್ಷಾಂತರ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಆ ಮನೆಗಳನ್ನೆಲ್ಲಾ ಮಹಿಳೆಯರ ಹೆಸರಿನಲ್ಲಿ ನೋಂದಣಿ ಮಾಡಲಾಗಿದೆ. ಉಜ್ವಲ ಯೋಜನೆ ಅಡಿ ಪ್ರತಿ ಕುಟುಂಬಕ್ಕೆ ಎಲ್‌ಪಿಜಿ ಸಂಪರ್ಕ ಒದಗಿಸಲಾಗಿದೆ. ಮಹಿಳೆಯರೇ ಇವುಗಳ ನೇರ ಫಲಾನುಭವಿಗಳು. ಇವೆಲ್ಲವೂ ಮಹಿಳಾ ಸಬಲೀಕರಣ’ ಎಂದು ಮೋದಿ ಅವರು ತಮ್ಮ ಎಲ್ಲಾ ರ‍್ಯಾಲಿಗಳಲ್ಲಿ ಹೇಳುತ್ತಿದ್ದಾರೆ.

ಇದರ ಜತೆಯಲ್ಲೇ, ರಾಜ್ಯದಲ್ಲಿರುವ ಸ್ವಸಹಾಯ ಗುಂಪುಗಳ 16 ಲಕ್ಷ ಮಹಿಳಾ ಸದಸ್ಯರ ಖಾತೆಗಳಿಗೆ ರಾಜ್ಯ ಸರ್ಕಾರವು ತಲಾ ₹1,000 ವರ್ಗಾವಣೆ ಮಾಡಿದೆ. ರಾಜ್ಯದ 80,000 ಸ್ವಸಹಾಯ ಗುಂಪುಗಳಿಗೆ ಸಮುದಾಯ ಬಂಡವಾಳ ಹೂಡಿಕೆಗಾಗಿ ತಲಾ ₹1.10 ಲಕ್ಷ ಮತ್ತು 60,000 ಗುಂಪುಗಳಿಗೆ ತಲಾ ₹15,000 ಅನುದಾನವನ್ನು ನೀಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಘೋಷಿಸಿದ್ದಾರೆ. ಮೆಟ್ರಿಕ್‌ ಶಿಕ್ಷಣ ಪೂರೈಸಿರುವ ಬಾಲಕಿಯರಿಗೆ ಲ್ಯಾಪ್‌ಟಾಪ್‌ ನೀಡುವುದಾಗಿಯೂ ಯೋಗಿ ಘೋಷಿಸಿದ್ದಾರೆ.

‘ಯೋಗಿ ಆದಿತ್ಯನಾಥ ಅವರ ಆಡಳಿತದಲ್ಲಿ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಹೆಚ್ಚಾಗಿದೆ’ ಎಂದು ಮೋದಿ ಹಲವು ರ‍್ಯಾಲಿಗಳಲ್ಲಿ ಹೇಳಿದ್ದಾರೆ. 

ಭರವಸೆಯಾಗಿಯೇ ಉಳಿದ ಶೇ 33ರಷ್ಟು ಮೀಸಲಾತಿ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶೇ 40ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ನೀಡುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಘೋಷಿಸಿದ್ದಾರೆ. ಆದರೆ ಲೋಕಸಭೆಯಲ್ಲಿ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಗಳನ್ನು ಮೀಸಲಿರಿಸಲು ಅವಕಾಶ ಮಾಡಿಕೊಡುವ ‘ಮಹಿಳಾ ಪ್ರಾತಿನಿಧ್ಯ (ತಿದ್ದುಪಡಿ) ಮಸೂದೆ’ಗೆ ಸಂಸತ್ತಿನ ಅನುಮೋದನೆ ದೊರೆಯದೆ ದೂಳು ಹಿಡಿದಿದೆ.

1993ರಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಸ್ಥಾನಗಳನ್ನು ಮೀಸಲಿಟ್ಟ ನಂತರ, ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲೂ ಮಹಿಳೆಯರಿಗೆ ಶೇ 33ರಷ್ಟು ಸ್ಥಾನ ಮೀಸಲಿಡುವ ವಿಚಾರ ಮುನ್ನೆಲೆಗೆ ಬಂದಿತ್ತು. ಇದರ ಫಲವಾಗಿ 1996ರಲ್ಲಿ ಸಂಸತ್ತಿನಲ್ಲಿ ಮೊದಲ ಬಾರಿಗೆ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಯಿತು. ಆದರೆ ಮಸೂದೆ ಅಂಗೀಕಾರ ಆಗಲಿಲ್ಲ. 1999ರಲ್ಲೂ ಹೀಗೇ ಆಯಿತು. 2008ರಲ್ಲಿ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಸುದೀರ್ಘ ಚರ್ಚೆ ಮತ್ತು ಸಂಸದೀಯ ಸಮಿತಿಯ ಪರಿಶೀಲನೆಯ ನಂತರ ರಾಜ್ಯಸಭೆಯಲ್ಲಿ ಈ ಮಸೂದೆಗೆ 2010ರಲ್ಲಿ ಅನುಮೋದನೆ ದೊರೆಯಿತು. ಆದರೆ ಮಂಡನೆ ವೇಳೆ ಕಾನೂನು ಸಚಿವರ ಕೈಯಿಂದ ಮಸೂದೆಯ ಪ್ರತಿಯನ್ನು ಕಿತ್ತುಕೊಳ್ಳುವ ಯತ್ನವೂ ನಡೆದಿತ್ತು.

ಭಾರಿ ಸಾಹಸದ ಫಲವಾಗಿ ದೊರೆತಿದ್ದ ಈ ಅನುಮೋದನೆಯನ್ನು ಬಳಸಿಕೊಳ್ಳುವಲ್ಲಿ ಅಂದಿನ ಸರ್ಕಾರ ವಿಫಲವಾಯಿತು. ಲೋಕಸಭೆಯಲ್ಲಿ ಈ ಮಸೂದೆಗೆ ಅನುಮೋದನೆ ಪಡೆದುಕೊಳ್ಳಲು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಯುಪಿಎ ಭಾಗವಾಗಿದ್ದ ಸಮಾಜವಾದಿ ಪಕ್ಷವು ಈ ಮಸೂದೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿತ್ತು. 2014ರಲ್ಲಿ ಲೋಕಸಭೆಯ ಅವಧಿ ಮುಗಿದ ಕಾರಣ, ಮಸೂದೆ ಮಾನ್ಯತೆಯನ್ನು ಕಳೆದುಕೊಂಡಿತು.

ಅಧಿಕಾರಕ್ಕೆ ಬಂದರೆ ಮತ್ತೆ ಈ ಮಸೂದೆಯನ್ನು ಮಂಡಿಸುತ್ತೇವೆ ಎಂದು 2014ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಘೋಷಿಸಿದ್ದವು. ಎರಡೂ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಈ ವಿಚಾರವನ್ನು ಸೇರಿಸಿಕೊಂಡಿದ್ದವು. ಆದರೆ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿಯು ಈ ಮಸೂದೆಯನ್ನು ಸಂಸತ್ತಿನಲ್ಲಿ ಮತ್ತೆ ಮಂಡಿಸುವ ಯತ್ನವನ್ನೇ ಮಾಡಿಲ್ಲ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಬಿಜೆಪಿ ಈ ಭರವಸೆಯನ್ನು ನೀಡಿತ್ತು. ಆದರೆ ಅದು ಭರವಸೆಯಾಗಿಯೇ ಇದೆ.

ಈಗ ಬಿಜೆಪಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ ಚುನಾವಣೆಗಳಲ್ಲಿ ಮಹಿಳಾ ಸಬಲೀಕರಣದ ಮಾತುಗಳನ್ನು ಆಡುತ್ತಿದ್ದಾರೆ. ಆದರೆ, ಈ ಯಾವ ಮಾತುಗಳಲ್ಲೂ ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ 33ರಷ್ಟು ಸ್ಥಾನಗಳನ್ನು ಮೀಸಲಿರಿಸುವ ಒಂದು ಉಲ್ಲೇಖವೂ ಇಲ್ಲ.

– ಹಮೀದ್‌ ಕೆ. / ಜಯಸಿಂಹ ಆರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು