ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಕಚ್ಚಾ ತೈಲ ಬೆಲೆ ಕುಸಿತ: ಭಾರತದ ಮೇಲೇನು ಪರಿಣಾಮ 

Last Updated 21 ಏಪ್ರಿಲ್ 2020, 10:10 IST
ಅಕ್ಷರ ಗಾತ್ರ
ADVERTISEMENT
""

ಇತಿಹಾಸದಲ್ಲಿ ಯಾವತ್ತಿಗೂ ದಾಖಲಾಗಿರದ ಮಹಾ ಕುಸಿತ ಸೋಮವಾರ ಅಮೆರಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಸೃಷ್ಟಿಯಾಯಿತು. ಅಮೆರಿಕದ ತೈಲ ಮಾರುಕಟ್ಟೆಯ ಬೆಲೆ ಮಾನದಂಡ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೇಟ್‌ (ಡಬ್ಲ್ಯುಟಿಐ) ಮೇ ಅವಧಿಯ ಕಚ್ಚಾ ತೈಲ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ ಶೂನ್ಯಕ್ಕಿಂತಲೂ ಕಡಿಮೆ ಮಟ್ಟಕ್ಕೆ ಇಳಿಕೆಯಾಯಿತು. ಕೊರೊನಾ ವೈರಸ್‌ ಸೋಂಕು ಸಾಂಕ್ರಾಮಿಕವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕ್ರಮಗಳಿಂದಾಗಿ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದೆ ಹಾಗೂ ಆರ್ಥಿಕ ಚಟುವಟಿಕೆಗಳು ತಟಸ್ಥಗೊಂಡಿವೆ. ಇದರಿಂದಾಗಿ ತೈಲ ಬೇಡಿಕೆ ಕಡಿಮೆಯಾಗಿದ್ದು, ಪೂರೈಕೆ ಮಾತ್ರ ಮುಂದುವರಿದಿದೆ. ಕಚ್ಚಾ ತೈಲ ಸಂಗ್ರಹಕ್ಕೆ ಅವಕಾಶವಿರದೆ ಹೂಡಿಕೆದಾರರುಫ್ಯೂಚರ್ಸ್‌ ಕಾಂಟ್ರ್ಯಾಕ್ಟ್ ಭೌತಿಕವಾಗಿ ಪಡೆಯಲು ಹಿಂದೆ ಸರಿದಿದ್ದಾರೆ.ಅದರ ಪರಿಣಾಮವೇ ಪ್ರತಿ ಬ್ಯಾರೆಲ್‌ ಕಚ್ಚಾ ತೈಲ ಋಣಾತ್ಮಕವಾಗಿ (–)37.63 ಡಾಲರ್‌ಗಳಿಗೆ ಇಳಿಕೆಯಾಯಿತು. ಆದರೆ, ಈ ಕಚ್ಚಾ ತೈಲ ದರ ಭಾರೀ ಇಳಿಕೆಯು ಭಾರತದ ಮೇಲೆ ದಿಢೀರ್‌ ಪರಿಣಾಮ ಬೀರುವುದಿಲ್ಲ. ಹಾಗಾದರೆ, ಪೆಟ್ರೋಲ್‌–ಡೀಸೆಲ್‌ ಬೆಲೆ ಇಳಿಕೆಯಾಗುವುದಿಲ್ಲವೇ?

ಏಪ್ರಿಲ್‌ 20ರಂದು ಪ್ರತಿ ಬ್ಯಾರೆಲ್‌ ಕಚ್ಚಾ ತೈಲ ಶೇ 305ರಷ್ಟು ಅಥವಾ 55.90 ಡಾಲರ್‌ನಷ್ಟು ಇಳಿಕೆಯಾಗಿ ಮೈನಸ್‌ (–)37.63 ಡಾಲರ್‌ ತಲುಪಿತು. ಇಲ್ಲಿ ಡಬ್ಲ್ಯುಟಿಐ ಎಂಬುದು ಅಮೆರಿಕದ ಖರೀದಿದಾರರಿಗೆ ಅನ್ವಯಿಸುತ್ತದೆಯೇ ಹೊರತು ಭಾರತದ ಮೇಲೆ ನೇರ ಪರಿಣಾಮ ಬೀರುವುದಿಲ್ಲ. ಕಚ್ಚಾ ತೈಲ ರಫ್ತು ಮಾಡುವ ದೇಶಗಳ ಸಂಘಟನೆ ಮತ್ತು ಅದರ ಮಿತ್ರ ಪಕ್ಷಗಳ (ಒಪೆಕ್‌ +) ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದಾಗಿದೆ. ಒಪೆಕ್‌ನಿಂದ ಭಾರತ ತೈಲ ಆಮದು ಮಾಡಿಕೊಳ್ಳುವುದರಿಂದ ಅಲ್ಪ ಪ್ರಮಾಣದಲ್ಲಿ ಬೆಲೆ ಇಳಿಕೆ ಪರಿಣಾಮ ತಟ್ಟುತ್ತದೆಯಾದರೂ; ರೂಪಾಯಿ ಮತ್ತು ಡಾಲರ್‌ ನಡುವಿನ ದೊಡ್ಡ ಕಂದರ ತೈಲ ದರ ಇಳಿಕೆಯ ಲಾಭ ತಲುಪಲು ಬಿಡುವುದಿಲ್ಲ. ಇನ್ನೂ ಭಾರತವು ತೈಲ ಪೂರೈಕೆಗೆ ಬ್ರೆಂಟ್ ಕಚ್ಚಾ ತೈಲ ಭಂಡಾರವನ್ನು ಅವಲಂಬಿಸಿದೆ. ನಾರ್ವೆಯ ನಾರ್ಥ್‌ ಸೀ (ಉತ್ತರ ಸಮುದ್ರ) ಭಾಗದಿಂದ ಹೆಚ್ಚಿನ ಬ್ರೆಂಟ್‌ ಕಚ್ಚಾ ತೈಲ ಪೂರೈಕೆಯಾಗುತ್ತದೆ. ಡಬ್ಲ್ಯುಟಿಐಗೆ ಹೋಲಿಸಿದರೆ ಬ್ರೆಂಟ್‌ ಕಚ್ಚಾ ತೈಲ ದರ ಹೆಚ್ಚು ಸ್ಥಿರವಾಗಿದೆ.

ಕಚ್ಚಾ ತೈಲ ದರ ಕಡಿಮೆಯಾದರೂ ಭಾರತ ಸರ್ಕಾರ ತೈಲ ಬೆಲೆಯನ್ನು ನಿಯಂತ್ರಿಸುತ್ತದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ನೀಡುವ ಸಬ್ಸಿಡಿಗಳಿಂದ ಉಂಟಾಗುವ ಹಣಕಾಸು ಕೊರತೆಯನ್ನು ಸಮತೋಲನಗೊಳಿಸಲು ತೈಲದಿಂದ ಒದಗುವ ಆದಾಯವನ್ನು ಬಳಸಿಕೊಳ್ಳಲಾಗುತ್ತದೆ. ಮೂಲ ತೈಲ ಬೆಲೆಯ ಮೇಲೆ ಸರ್ಕಾರ ಹಲವು ತೆರಿಗೆಗಳನ್ನು ವಿಧಿಸುವುದರಿಂದ ರಿಟೇಲ್‌ ಮಾರಾಟದ ಮೂಲಕ ಗ್ರಾಹಕರನ್ನು ತಲುಪುವಷ್ಟರಲ್ಲಿ ಬೆಲೆ ಏರಿಕೆಯಾಗಿರುತ್ತದೆ.

ಇನ್ನೂ ಸಂಸ್ಕರಿಸಿದ ತೈಲಗಳಾದ ಪೆಟ್ರೋಲ್‌, ಡೀಸೆಲ್‌ ಹಾಗೂ ಸೀಮೆಎಣ್ಣೆಗೆ ಭಾರತದಲ್ಲಿ ಹೆಚ್ಚು ಬೇಡಿಕೆ ಇದೆ. ಅಂದರೆ, ತೈಲ ಸಂಸ್ಕರಣೆ, ಸಾಗಾಣಿಕೆ, ವಿತರಣೆ ಹಾಗೂ ತೆರಿಗೆ ಎಲ್ಲ ಶುಲ್ಕಗಳು ಸೇರಿ ರಿಟೇಲ್‌ ಮಾರಾಟ ದರ ನಿಗದಿಯಾಗುತ್ತದೆ. ಇದರೊಂದಿಗೆ ಕಚ್ಚಾ ತೈಲ ಡಾಲರ್‌ ಲೆಕ್ಕದಲ್ಲಿಯೇ ಆಮದು ಮಾಡಿಕೊಳ್ಳಲಾಗುತ್ತದೆ. ಡಾಲರ್‌ ಎದುರು ರೂಪಾಯಿ ಮೌಲ್ಯ ತೀವ್ರ ಕುಸಿದಿರುವುದರಿಂದ ಬೆಲೆ ಹೆಚ್ಚಳವಾಗುತ್ತದೆ. ಇಷ್ಟೆಲ್ಲ ದರ ವ್ಯತ್ಯಾಸಗಳನ್ನು ದಾಟಿ ಗ್ರಾಹಕನಿಗೆ ತೈಲ ತಲುಪುವಷ್ಟರಲ್ಲಿ ಬೆಲೆ ಇಳಿಕೆಯ ಸಂಭ್ರಮ ಉಳಿದಿರುವುದಿಲ್ಲ.


* ಕಚ್ಚಾ ತೈಲ ಫ್ಯೂಚರ್ಸ್‌ ದರ ಋಣಾತ್ಮಕ ಮಟ್ಟ ತಲುಪಿದೆ, ಹಾಗೆಂದರೆ?

ಬೇಡಿಕೆ, ಪೂರೈಕೆ ಹಾಗೂ ಗುಣಮಟ್ಟದ ಆಧಾರದ ಮೇಲೆ ಪ್ರತಿ ಬ್ಯಾರೆಲ್‌ ಕಚ್ಚಾ ತೈಲದ ದರದಲ್ಲಿ ವ್ಯತ್ಯಾಸವಾಗುತ್ತದೆ. ಕೊರೊನಾ ವೈರಸ್‌ ಸೋಂಕು ಆತಂಕದಿಂದಾಗಿ ಜಗತ್ತನಾದ್ಯಂತ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡಿವೆ, ಜನರು ಮನೆಗಳಲ್ಲಿಯೇ ಉಳಿದಿದ್ದಾರೆ ಹಾಗೂ ಒತ್ತಾಯ ಪೂರ್ವಕವಾಗಿ ಪ್ರಯಾಣವೂ ನಿಂತಿದೆ. ಹೀಗಾಗಿ, ತೈಲ ಬೇಡಿಕೆ ಕಡಿಮೆಯಾಗಿದೆ ಹಾಗೂ ಪೂರೈಕೆ ಪ್ರಮಾಣ ತಗ್ಗಿಲ್ಲ.

ಪೂರೈಕೆ ಅತಿಯಾಗಿದೆ ಹಾಗೂ ಡಬ್ಲ್ಯುಟಿಐ ಸಂಗ್ರಹ ಟ್ಯಾಂಕ್‌ ಬಹುತೇಕ ಭರ್ತಿಯಾಗುತ್ತಿದ್ದು, ಹೆಚ್ಚುವರಿ ತೈಲ ಸಂಗ್ರಹಕ್ಕೆ ಸ್ಥಳಾವಕಾಶ ಇಲ್ಲವಾಗಿದೆ. ಅಮೆರಿಕದ ಇಂಧನ ಇಲಾಖೆಯ ಮಾಹಿತಿ ಪ್ರಕಾರ, ಏಪ್ರಿಲ್‌ 10ರ ವರೆಗೆ ಓಕ್ಲಾಹೊಮಾದ ಕುಷಿಂಗ್‌ ತೈಲ ಸಂಗ್ರಹ ವಲಯದಲ್ಲಿ ಶೇ 72ರಷ್ಟು ಕಚ್ಚಾ ತೈಲ ಭರ್ತಿಯಾಗಿದೆ. ಕುಷಿಂಗ್‌ ಅಮೆರಿಕದ ತೈಲ ಸಂಪರ್ಕ ಜಾಲದ ಕೇಂದ್ರ ಭಾಗವಾಗಿದೆ.

ಅಲ್ಲಿನ ತೈಲ ಸಂಗ್ರಹಗಾರಈಗ ಭರ್ತಿಯಾಗಿರುವುದರಿಂದ ಫ್ಯೂಚರ್ಸ್‌ ಬೆಲೆ ಋಣಾತ್ಮಕ ಮಟ್ಟಕ್ಕೆ ಕುಸಿದಿದೆ. ಫ್ಯೂಚರ್‌ ಕಾಂಟ್ರ್ಯಾಕ್ಟ್‌ 1,000 ಬ್ಯಾರೆಲ್‌ ಕಚ್ಚಾ ತೈಲಕ್ಕೆ ನಿಗದಿಯಾಗಿತ್ತು. ಕುಷಿಂಗ್‌ನಲ್ಲಿ ಇಂಧನ ಕಂಪನಿಗಳು 7.6 ಕೋಟಿ ಬ್ಯಾರೆಲ್‌ ಇಂಧನ ಸಂಗ್ರಹ ಸಾಮರ್ಥ್ಯದ ಟ್ಯಾಂಕ್‌ಗಳನ್ನು ಹೊಂದಿವೆ. ಮೇ ಫ್ಯೂಚರ್ಸ್‌ ಕಾಂಟ್ರ್ಯಾಕ್ಟ್‌ ವಾಯಿದೆ ಮಂಗಳವಾರ ಅಂತ್ಯಗೊಳ್ಳುತ್ತದೆ. ಆದರೆ, ಫ್ಯೂಚರ್ಸ್‌ ಹೊಂದಿರುವ ಹೂಡಿಕೆದಾರರು ಭೌತಿಕವಾಗಿ ತೈಲ ಪಡೆದುಕೊಳ್ಳುವುದರಿಂದ ಹಿಂದೆ ಸರಿದಿದ್ದಾರೆ. ಅದನ್ನು ಹಿಂಪಡೆಯಲು ಜನರಿಗೆ ಹಣ ನೀಡಬೇಕಾದ ಪರಿಸ್ಥಿತಿಯು ಶೂನ್ಯಕ್ಕಿಂತ ಕಡಿಮೆ ದರ ಮುಟ್ಟಿದರಿಂದ ಉಂಟಾಗಿದೆ.

ಜೂನ್‌ ಅವಧಿಯ ಕಾಂಟ್ರ್ಯಾಕ್ಟ್‌ ಬ್ಯಾರೆಲ್‌ಗೆ 20 ಡಾಲರ್‌ಗಳಲ್ಲಿ ವಹಿವಾಟು ನಡೆದಿದೆ.

ಸಂಗ್ರಹಗಾರಗಳು ಭರ್ತಿಯಾಗುತ್ತಿದ್ದು, ಹೆಚ್ಚುವರಿ ತೈಲ ಸಂಗ್ರಹಿಸಿ ಇಡಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಕಚ್ಚಾ ತೈಲ ಬೆಲೆಯು ಇತಿಹಾಸದಲ್ಲಿಯೇ ಅತಿ ಕಡಿಮೆ ಮಟ್ಟಕ್ಕೆ ಜಾರಿದೆ.ಜಗತ್ತಿನಾದ್ಯಂತ ನಿತ್ಯದ ತೈಲ ಬಳಕೆ ಅಂದಾಜು 10 ಕೋಟಿ ಬ್ಯಾರೆಲ್‌ಗಳು, ಅದಕ್ಕೆ ತಕ್ಕಂತೆ ಪೂರೈಕೆಯೂ ಇರುತ್ತದೆ. ಆದರೆ, ಈಗ ಬಳಕೆ ಪ್ರಮಾಣ ಶೇ 30ರಷ್ಟು ಕುಸಿದಿದೆ. ಪೂರೈಕೆ ಎಂದಿನಂತೆಯೇ ಮುಂದುವರಿದಿದೆ.

* ಇದರಿಂದ ಗ್ರಾಹಕರಿಗೆ ಏನು ಲಾಭ?

ಕುಷಿಂಗ್‌ನಲ್ಲಿ ಕಚ್ಚಾ ತೈಲ ಫ್ಯೂಚರ್ಸ್‌ ದರ ಕುಸಿತವು ಅನಿಲ ಪಂಪ್‌ಗಳಲ್ಲಿ ಬೆಲೆ ಇಳಿಕೆ ತರಬೇಕಿಲ್ಲ ಎಂದು ತೈಲ ಬೆಲೆ ವಿಶ್ಲೇಷಕ ಟಾಮ್‌ ಕ್ಲೋಜೊ ಹೇಳಿದ್ದಾರೆ. ಮೇ ಫ್ಯೂಚರ್ಸ್‌ ದರ ಕುಸಿತದಿಂದ ಡೀಸೆಲ್‌ ಹಾಗೂ ಗ್ಯಾಸೊಲಿನ್‌ ಬೆಲೆ ಇಳಿಕೆ ಕಾಣಬಹುದಾದರೂ, ತೀವ್ರ ಇಳಿಕೆ ಕಂಡು ಬರುವುದಿಲ್ಲ. ಇತ್ತೀಚಿನ ತೈಲ ದರ ಇಳಿಕೆಗಳಿಂದ ಅಮೆರಿಕದ ಕುಟುಂಬ ಈ ತಿಂಗಳು ತೈಲ ಖರೀದಿಗಳ ಮೇಲೆ ಸುಮಾರು 150ರಿಂದ 175 ಡಾಲರ್‌ನಷ್ಟು ಉಳಿಸಬಹುದು ಎಂದಿದ್ದಾರೆ.

* ವಿಮಾನಯಾನ ಸಂಸ್ಥೆಗಳಿಗೆ ಅನುಕೂಲ?

ಕಚ್ಚಾ ತೈಲ ದರ ಇಳಿಕೆಯುವಿಮಾನಯಾನ ಸಂಸ್ಥೆಗಳಿಗೆಕಡಿಮೆ ದರದಲ್ಲಿ ಹಾರಾಟ ನಡೆಸಲು ಅನುವಾಗಬಹುದು. ಆದರೆ, ಕೋವಿಡ್‌–19ನಿಂದ ಬಹುತೇಕ ರಾಷ್ಟ್ರಗಳು ಪ್ರಯಾಣಿಕರ ವಿಮಾನ ಹಾರಾಟ ಸ್ಥಗಿತಗೊಳಿಸಿವೆ ಹಾಗೂ ಜನರು ಮನೆಗಳಲ್ಲಿ ಕ್ವಾರಂಟೈನ್‌ ಆಗಿದ್ದಾರೆ. ಹಾಗಾಗಿ, ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆ ನಿಲ್ಲಿಸಿವೆ.

ಈಗಾಗಲೇ ಬಹುತೇಕ ಸಂಗ್ರಹಗಾರಗಳಲ್ಲಿ ತೈಲ ಸಂಗ್ರಹ ಭರ್ತಿಯಾಗಿರುವುದರಿಂದ ಕೋವಿಡ್‌–19 ಅವಧಿಗಿಂತ ಹಿಂದಿನಷ್ಟೇ ಬೇಡಿಕೆ ಉಂಟಾದರೂ, ಸಂಗ್ರಹವಾಗಿರುವ ಕಚ್ಚಾ ತೈಲ ಉ‍ಪಯೋಗಕ್ಕೆ ಬರಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT