ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
EXPLAINER: ಅಂಗಾಂಗ ದಾನದಲ್ಲಿ ಮಹಿಳೆಯರೇ ಹೆಚ್ಚು; ಕಸಿಗೆ ಮಾತ್ರ ಗಂಡಿಗೆ ಒತ್ತು
EXPLAINER: ಅಂಗಾಂಗ ದಾನದಲ್ಲಿ ಮಹಿಳೆಯರೇ ಹೆಚ್ಚು; ಕಸಿಗೆ ಮಾತ್ರ ಗಂಡಿಗೆ ಒತ್ತು
ಫಾಲೋ ಮಾಡಿ
Published 26 ಸೆಪ್ಟೆಂಬರ್ 2024, 11:37 IST
Last Updated 26 ಸೆಪ್ಟೆಂಬರ್ 2024, 11:37 IST
Comments

ಬೆಂಗಳೂರು: ಮಂಗಳೂರಿನ ಕರಂಗಲ್ಪಾಡಿ ನಿವಾಸಿ ಅರ್ಚನಾ ಕಾಮತ್ (33) ಅವರ ಸಾವು ಇತ್ತೀಚೆಗೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕಾರಣವಿಷ್ಟೇ, ಬಂಧುವೊಬ್ಬರಿಗೆ ತಮ್ಮ ಯಕೃತ್‌ನ ಭಾಗವನ್ನು ದಾನ ಮಾಡಿ ನೆರವಾಗಿದ್ದ ಅವರು, ಕೆಲವೇ ದಿನಗಳಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದರು. ಮತ್ತೊಬ್ಬರ ಬದುಕಿಗೆ ಕಾರಣವಾಗಿದ್ದನ್ನು ಸಂಭ್ರಮಿಸಬೇಕೆನ್ನುವ ಹೊತ್ತಿಗೆ ನೋವಿನ ಛಾಯೆ ಆವರಿಸುವಂತೆ ಮಾಡಿತ್ತು ಈ ಘಟನೆ.

ಇದರ ಬೆನ್ನಲ್ಲೇ ಅಂಗಾಂಗ ದಾನ ಕುರಿತು ಇತ್ತೀಚೆಗೆ ಬಿಡುಗಡೆಗೊಂಡ ವರದಿಯೊಂದು ಜೀವದಾನದಲ್ಲಿ ಮಹಿಳೆಯರ ಪಾತ್ರದ ಕುರಿತು ಒತ್ತಿ ಹೇಳಿದೆ. ಭಾರತದಲ್ಲಿ ಅಂಗಾಂಗ ದಾನ ಮಾಡುವವರಲ್ಲಿ ಶೇ 80ರಷ್ಟು ಮಹಿಳೆಯರು. ಹಾಗೆಯೇ ಅಂಗಾಂಗ ಸ್ವೀಕರಿಸುವವರಲ್ಲಿ ಶೇ 80ರಷ್ಟು ಪುರುಷರು ಎಂದು ಮೋಹನ್ ಪ್ರತಿಷ್ಠಾನ ನಡೆಸಿದ ಸಮೀಕ್ಷೆಯ ವರದಿ ಹೇಳಿದೆ.

1995ರಿಂದ 2021ರವರೆಗಿನ ಅವಧಿಯಲ್ಲಿ ಅಂಗಾಂಗ ದಾನಕ್ಕೆ ಒಳಗಾದ ಒಟ್ಟು ಮಹಿಳೆಯರ ಸಂಖ್ಯೆ 36,640. ಆದರೆ ಅಂಗಾಂಗವನ್ನು ದಾನವಾಗಿ ಸ್ವೀಕರಿಸಿದ ಮಹಿಳೆಯರ ಸಂಖ್ಯೆ 6,945 (ಶೇ 18.9) ರಷ್ಟು ಮಾತ್ರ. ಕುಟುಂಬಕ್ಕೆ ಕಣ್ಣಾಗಿ, ನೆರಳಾಗಿರಬೇಕೆಂಬ ನಂಬಿಕೆಯೇ ಮಹಿಳೆಯರನ್ನು ಅಂಗಾಂಗ ದಾನಕ್ಕೆ ಪ್ರೇರೇಪಿಸಿದೆ ಎಂದೆನ್ನುತ್ತಾರೆ ಸಮೀಕ್ಷೆ ನಡೆಸಿದ ತಜ್ಞರು. ಅಂಗಾಂಗ ದಾನದಲ್ಲಿನ ಲಿಂಗಾನುಪಾತದ ವ್ಯತ್ಯಾಸದ ಕುರಿತು ಬಹಳಷ್ಟು ತಜ್ಞರು ಗಮನ ಸೆಳೆದಿದ್ದಾರೆ.

ಪುರುಷರು ಕುಟುಂಬದ ಆದಾಯ ಮೂಲ ಎಂಬ ಕಾರಣದಿಂದಲೇ, ಅಂಗಾಂಗ ದಾನದಲ್ಲಿ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದೆನ್ನಲಾಗಿದೆ. ಬಹಳಷ್ಟು ಕುಟುಂಬಗಳಲ್ಲಿ ಹೊರಗೆ ಹೋಗಿ ದುಡಿಯುವವರು ಪುರುಷರೇ ಆಗಿರುವುದರಿಂದ, ಅವರ ಉಳಿವಿಗಾಗಿ ಅಂಗಾಂಗ ದಾನಕ್ಕೆ ಭಾವನಾತ್ಮಕವಾಗಿ ಮಹಿಳೆಯರು ಬಳಕೆಯಾಗುತ್ತಿರುವುದನ್ನು ಈ ಸಮೀಕ್ಷೆ ಒತ್ತಿ ಹೇಳಿದೆ. ಆದರೆ ಈ ಕ್ರಮವು ಮಹಿಳೆಯರ ಆರೋಗ್ಯ ಹಾಗೂ ಸಬಲೀಕರಣದ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ ಎಂದು ಮೂತ್ರಕೋಶ ತಜ್ಞ ಡಾ. ಸುನೀಲ್  ಅಭಿಪ್ರಾಯಪಟ್ಟಿದ್ದಾರೆ.

‘ಅಂಗಾಂಗ ದಾನದಲ್ಲಿ ಒಂದೇ ಕುಟುಂಬದವರು ಅಲ್ಲದಿದ್ದ ಪರಿಸ್ಥಿತಿಯಲ್ಲಿ ಸ್ವೀಕರಿಸುವವರ ಆರ್ಥಿಕ ಪರಿಸ್ಥಿತಿಗೆ ಹೋಲಿಸಿದರೆ, ದಾನಿಗಳ ಸ್ಥಿತಿ ಕೆಳಮಟ್ಟದಲ್ಲೇ ಇರುತ್ತದೆ. ಮತ್ತೊಂದು ಅಂಶವೆಂದರೆ, ಅಂಗಾಂಗ ಸ್ವೀಕರಿಸುವವರಿಗಿಂತಲೂ ದಾನಿಯು ಕಿರಿಯ ವಯಸ್ಸಿನವರಾಗಿರುತ್ತಾರೆ. ಇದು ಭಾರತದಲ್ಲಿ ಮಾತ್ರವಲ್ಲ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿನ ಸಾಮಾನ್ಯ ಚಿತ್ರಣವಾಗಿದೆ. ಇಲ್ಲೆಲ್ಲಾ ಕಡೆ ಮಹಿಳೆಯರಿಗಿಂತ ಪುರುಷರು ಹೆಚ್ಚಿನ ಅಧಿಕಾರ ಹೊಂದಿರುತ್ತಾರೆ. ಮೂತ್ರಪಿಂಡ ಹಾಗೂ ಯಕೃತ್ ದಾನದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನೂ ಕೆಲವೆಡೆ ಅಂಗಾಂಗ ಕಳ್ಳಸಾಗಣೆಯಲ್ಲಿ ಮಹಿಳೆಯರು ದುರ್ಬಳಕೆಯಾಗುತ್ತಿರುವ ಸಾಧ್ಯತೆಯೂ ಹೆಚ್ಚು’ ಎಂದೆನ್ನುತ್ತಾರೆ ತಮಿಳುನಾಡು ಅಂಗಾಂಗ ದಾನ ಪ್ರಾಧಿಕಾರದ ಮಾಜಿ ಕಾರ್ಯದರ್ಶಿ ಡಾ. ಜೆ. ಅಮಲೋರ್ಪವನಾಥನ್‌.

ಅಂಗಾಂಗ ಸ್ವೀಕಾರದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಏಕೆ?

ಅಂಗಾಂಗ ಸ್ವೀಕರಿಸುವವರಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇರುವುದಕ್ಕೂ ಸಮಾಜವೇ ಕಾರಣ ಎಂದು ತಜ್ಞರು ಹೇಳುತ್ತಾರೆ. ಗಂಡು ಮಕ್ಕಳನ್ನೂ ಒಳಗೊಂಡು ಕುಟುಂಬದಲ್ಲಿ ಪುರುಷರಂತೆ ಮಹಿಳೆಯರು ಹೆಚ್ಚು ಪ್ರಾಮುಖ್ಯತೆ ಹೊಂದಿಲ್ಲ. ಒಂದೊಮ್ಮೆ ಬಡ ಕುಟುಂಬದ ಹಿನ್ನೆಲೆಯವರಾಗಿದ್ದರೆ, ಅಂಗಾಂಗ ಕಸಿಗೆ ಅಗತ್ಯವಿರುವ ಕನಿಷ್ಠ ₹25 ಲಕ್ಷವನ್ನು ಮಹಿಳೆಯರಿಗೆ ಹೊಂದಿಸಲು ಹಿಂದೇಟು ಹಾಕುವುದೇ ಹೆಚ್ಚು. ಆದರೆ ಅದೇ ಪುರುಷರ ಪರಿಸ್ಥಿತಿಯಲ್ಲಿ, ಇದು ಭಿನ್ನ. ಈ ಕಾರಣದಿಂದಾಗಿ, ಮಹಿಳೆಯರಿಗೆ ಅಗತ್ಯವಿದ್ದರೂ ಬಹಳಷ್ಟು ಕುಟುಂಬಗಳು ಅಂಗಾಂಗ ದಾನಕ್ಕೆ ಅಗತ್ಯವಿರುವ ನೋಂದಣಿಗೆ ಹಿಂದೇಟು ಹಾಕುತ್ತವೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಮೂತ್ರಪಿಂಡ ಕಸಿ ಅಗತ್ಯವಿರುವ ಪರಿಸ್ಥಿತಿಯಲ್ಲಿ ಅಂಗಾಂಗ ನೀಡುವವರು ಸೋದರಿ, ತಾಯಿ ಅಥವಾ ಮಗಳೇ ಆಗಿರುತ್ತಾರೆ. ಇನ್ನೂ ಕೆಲ ಸಂದರ್ಭಗಳಲ್ಲಿ ಪತಿಗೆ ಮೂತ್ರಪಿಂಡ ದಾನ ಮಾಡಲು ಪತ್ನಿ ಮುಂದಾದ ಸಂದರ್ಭಗಳೇ ಹೆಚ್ಚು. ದೇಶ ಎಷ್ಟೇ ಮುಂದುವರಿದಿದ್ದರೂ, ಪ್ರಜಾಪ್ರಭುತ್ವ ಶ್ರೀಮಂತವಾಗಿದ್ದರೂ, ಭಾರತದಲ್ಲಿ ಜಮೀನ್ದಾರಿ, ಜಾತಿವಾದಿ, ಸ್ತ್ರೀದ್ವೇಷಿ ಹಾಗೂ ಪಿತೃಪ್ರಧಾನ ಸಮಾಜ ಹಾಗೇ ಇದೆ. ನನ್ನ ವೃತ್ತಿ ಬದುಕಿನಲ್ಲಿ ಪತ್ನಿಗೆ ಮೂತ್ರಪಿಂಡ ದಾನ ಮಾಡಲು ಮುಂದೆ ಬಂದ ಒಬ್ಬ ಪತಿಯನ್ನೂ ನೋಡಿಲ್ಲ’ ಎಂದು ಚೆನ್ನೈ ಮೂಲದ ವೈದ್ಯ ಡಾ. ಜೈಸನ್ ಫಿಲಿಪ್ಸ್‌ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಅಂಗಾಂಗ ವೈಫಲ್ಯಕ್ಕೆ ಕಾರಣವಾಗವ ಪದಾರ್ಥಗಳ ಸೇವನೆ ಪುರುಷರಲ್ಲೇ ಹೆಚ್ಚು

ವರದಿಯ ಪ್ರಕಾರ, ‘ಅಂಗಾಂಗಕ್ಕೆ ಹಾನಿಯಾಗಬಲ್ಲ ಪದಾರ್ಥಗಳ ಸೇವನೆಯಲ್ಲಿ ಪುರುಷರೇ ಮುಂದಿದ್ದಾರೆ. ಮದ್ಯ ಸೇವನೆ, ಸಿಗರೇಟು ಸೇವನೆಯಲ್ಲೂ ಪುರುಷರು ಹೆಚ್ಚು. ಇವುಗಳ ಅತಿಯಾದ ಸೇವನೆಯಿಂದ ಫ್ಯಾಟಿ ಲಿವರ್ ಸಮಸ್ಯೆಯು ಪುರುಷರನ್ನು ಹೆಚ್ಚಾಗಿ ಕಾಡುತ್ತದೆ. ಇದರಿಂದಾಗಿ ಸಿರೋಸಿಸ್‌ ಸಮಸ್ಯೆ ಎದುರಿಸುತ್ತಾರೆ. ಈ ಸಮಸ್ಯೆಗೆ ತುತ್ತಾದ ಕುಟುಂಬದ ಪುರುಷರನ್ನು (ತಂದೆ, ಪತಿ ಹಾಗೂ ಮಗ) ಉಳಿಸಿಕೊಳ್ಳಲು ತಮ್ಮ ಅಂಗಾಂಗ ದಾನ ಮಾಡುವ ಮೂಲಕ ಮಹಿಳೆಯರು ಸ್ವಾಭಾವಿಕವಾಗಿ ಮುಂದಾಗುತ್ತಾರೆ’ ಎಂದಿದೆ.

ಯಕೃತ್ ಸಮಸ್ಯೆಗೆ ತುತ್ತಾದ ಮಹಿಳೆಗೆ ಅಂಗಾಂಗ ದಾನಕ್ಕೆ ಮಕ್ಕಳು ಮುಂದಾಗಿರುವ ಉದಾಹರಣೆಗಳಿವೆ. ಆದರೆ ಪುರುಷರು ದಾನಕ್ಕೆ ಯೋಗ್ಯವಾದ ವಯೋಮಾನ ಮೀರಿದ್ದರ ಕಾರಣದಿಂದಲೂ ಪುರುಷರ ಪಾಲುದಾರಿಕೆ ಕಡಿಮೆಯಾಗಿರಲು ಸಾಧ್ಯ ಎಂದು ಸಮೀಕ್ಷೆಯ ವರದಿ ಉಲ್ಲೇಖಿಸಿದೆ.

ದಾನಿಗಳ ಮೇಲಿನ ತೂಗುಕತ್ತಿ

ಅಂಗಾಂಗ ದಾನ ಎನ್ನುವುದು ಮಹಿಳೆಯರ ಪಾಲಿಗೆ ದೈಹಿಕ ಹಾಗೂ ಭಾವನಾತ್ಮಕವಾದ ಒತ್ತಡವನ್ನು ಸೃಷ್ಟಿಸುತ್ತದೆ. ಏಕೆಂದರೆ, ಬದುಕಿರುವಾಗಲೇ ಅಂಗಾಂಗ ದಾನ ಬಹಳಾ ಕ್ಲಿಷ್ಟಕರ ಶಸ್ತ್ರಚಿಕಿತ್ಸಾ ಪದ್ಧತಿ. ಇದು ದಾನಿಯ ಆರೋಗ್ಯದ ಮೇಲೆ ಭಾರೀ ಪರಿಣಾಮ ಉಂಟು ಮಾಡಬಹುದು. ಅದರಲ್ಲೂ, ಭಾರತದ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿರುವುದೇ ಹೆಚ್ಚು. 2022ರಲ್ಲಿ ನಡೆದ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ಪ್ರಕಾರ ದೇಶದಲ್ಲಿ 18.29 ಕೋಟಿ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿತ್ತು. ಇವರಲ್ಲಿ ಹೆಚ್ಚಿನವರು ಮಹಿಳೆಯರು ಹಾಗೂ ಮಕ್ಕಳು. 

ಅಪೌಷ್ಟಿಕತೆಯೊಂದಿಗೆ ಅನಕ್ಷರತೆ ಮತ್ತು ಆರ್ಥಿಕ ಸ್ವಾತಂತ್ರ್ಯ ಇಲ್ಲದಿರುವುದೂ ಮಹಿಳೆಯರನ್ನು ಅಂಗಾಂಗ ದಾನಕ್ಕೆ ಹೆಚ್ಚು ಒಳಪಡುವಂತೆ ಮಾಡುತ್ತಿದೆ. ಇವುಗಳೊಂದಿಗೆ ಕೌಟುಂಬಿಕ ದೌರ್ಜನ್ಯಗಳು ಮಹಿಳೆಯರ ಮುಂದೆ ಹೆಚ್ಚಿನ ಆಯ್ಕೆಗಳನ್ನು ಇಟ್ಟಿಲ್ಲ. ಇಷ್ಟೆಲ್ಲಾ ಒತ್ತಡದಿಂದಾಗಿ ಅಂಗಾಂಗ ದಾನದಲ್ಲಿ ಮಹಿಳೆಯರ ಸಂಖ್ಯೆ ಶೇ 80ಕ್ಕೆ ತಲುಪಿದೆ ಎನ್ನುತ್ತದೆ ಈ ಸಮೀಕ್ಷೆ.

ಅಂಗಾಂಗ ದಾನದಲ್ಲಿ ಮಹಿಳೆಯರ ಮೇಲೆ ಅನಗತ್ಯವಾಗಿ ಒತ್ತಡ ಸೃಷ್ಟಿಸುವುದನ್ನು ತಡೆಯುವ ದೃಷ್ಟಿಯಿಂದ ಬಹಳಷ್ಟು ಶಸ್ತ್ರಚಿಕಿತ್ಸಕರು, ಮಿದುಳು ಸಾವು ಅನುಭವಿಸುತ್ತಿರುವ ವ್ಯಕ್ತಿಯ ಅಂಗಾಂಗ ಪಡೆಯಲು ಹೆಚ್ಚಾಗಿ ಸೂಚಿಸುತ್ತಾರೆ. ಇಲ್ಲಿ ಇಂಥ ದಾನಿಗಳು ಸಿಗುವವರೆಗೂ ಕಾಯಬೇಕು. ನೋಂದಣಿ ಸಂಖ್ಯೆ ಆಧರಿಸಿ, ಅಂಗಾಂಗ ನೀಡಲಾಗುತ್ತದೆ ಎನ್ನುವುದು ತಜ್ಞರ ಮಾತು.

ಮಿದುಳು ನಿಷ್ಕ್ರಿಯೆಗೊಂಡ ವ್ಯಕ್ತಿಯಿಂದ ಅಂಗಾಂಗ ದಾನ ಪಡೆಯುವ ಪದ್ಧತಿಯು ಪಿತೃಪ್ರಭುತ್ವದ ಕಲ್ಪನೆಗಳನ್ನು ಕಿತ್ತುಹಾಕಲು ಒಂದಷ್ಟು ನೆರವಾಗಲಿದೆ. ಪ್ರತಿ 100 ಪುರುಷ ಹಾಗೂ ಮಹಿಳೆಯರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರೆ, ಎಲ್ಲಾ ಪುರುಷರು ಮೂತ್ರಪಿಂಡ ಕಸಿಗೆ ದಾಖಲಾಗುವ ಸಾಧ್ಯತೆ ಹೆಚ್ಚು. ಆದರೆ ಮಹಿಳೆಯರ ಸಂಖ್ಯೆ 50ರಿಂದ 60 ಮಾತ್ರ.

ದೇಶದಲ್ಲಿ ರಸ್ತೆ ಅಪಘಾತಗಳು ಏರುಮುಖವಾಗಿದ್ದು, ಮಿದುಳು ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದೆ. ಇಂಥವರ ಕುಟುಂಬಗಳ ಒಪ್ಪಿಗೆ ಪಡೆದು ಅಂಗಾಂಗ ದಾನ ಪಡೆಯವುದೇ ಆದರೆ, ದಾನಿಗಳಗಾಗಿ ಕಾಯುತ್ತಿರುವ ಪುರುಷ ಹಾಗೂ ಮಹಿಳೆಯರನ್ನು ಸಮಾನವಾಗಿ ಬದುಕಿಸಲು ಸಾಧ್ಯ ಎಂಬ ಅಭಿಪ್ರಾಯವನ್ನು ಈ ಸಮೀಕ್ಷಾ ವರದಿ ವ್ತಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT