ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಸೋಂಕು ನಿವಾರಕವೋ, ರೋಗಕಾರಕವೋ?

Last Updated 20 ಜುಲೈ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಕೊರೊನಾ ಸೋಂಕು ಹರಡದಂತೆ ತಡೆಯಲು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಪಾಲಿಕೆಗಳು ಮಾರುಕಟ್ಟೆ ಹಾಗೂ ಬೀದಿಗಳಲ್ಲಿ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಣೆ ಮಾಡುತ್ತಿವೆ. ಗಾಳಿಯಿಂದ ಸೋಂಕು ಹರಡುವುದಿಲ್ಲ ಎಂದಾದ ಮೇಲೆ ದ್ರಾವಣದ ಸಿಂಪಡಣೆಯಿಂದ ಆಗುವ ಪ್ರಯೋಜನವೇನು? ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಏನು ಹೇಳುತ್ತದೆ? ಸೋಂಕು ನಿವಾರಕ ದ್ರಾವಣವು ಜನರ ಆರೋಗ್ಯದ ಮೇಲೂ ಪರಿಣಾಮ ಬೀರುವುದೇ? ಇಲ್ಲಿದೆ ಒಂದು ವಿಶ್ಲೇಷಣೆ...

‘ಹೊರಾಂಗಣದಲ್ಲಿ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಣೆ ಮಾಡುವ ಅಗತ್ಯವಿಲ್ಲ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸ್ಪಷ್ಟಪಡಿಸಿದ್ದರೂ ಅದಕ್ಕೆ ವ್ಯತಿರಿಕ್ತವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳ ಬೀದಿಗಳಲ್ಲಿ ದ್ರಾವಣವನ್ನು ಸಿಂಪಡಣೆ ಮಾಡಲಾಗುತ್ತಿದೆ.

ಮಾರುಕಟ್ಟೆ, ಬೀದಿಯಂತಹ ಹೊರಾಂಗಣದಲ್ಲಿ ಸೋಂಕು ನಿವಾರಕ ದ್ರಾವಣದ ಸಿಂಪಡಣೆಯಿಂದ ಏನೇನೂ ಪ್ರಯೋಜನವಿಲ್ಲ. ಬದಲಾಗಿ ಅದರಿಂದ ಜನರ ಆರೋಗ್ಯದ ಮೇಲೆ, ಪರಿಸರದ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು ಎಂದು ಡಬ್ಲ್ಯುಎಚ್‌ಒ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಎಂತಹ ಸಂದರ್ಭದಲ್ಲೂ ಜನರ ಮೇಲೆ ದ್ರಾವಣವನ್ನು ಸಿಂಪಡಣೆ ಮಾಡುವಂತಿಲ್ಲ ಎಂದು ಅದು ತಾಕೀತು ಮಾಡಿದೆ. ಆದರೆ, ಕೃಷಿ ಮಾರುಕಟ್ಟೆಗಳಲ್ಲಿ ರೈತರಿಗೆ ನಿವಾರಕ ಸಿಂಪಡಣೆ ಮಾಡಿಯೇ ಬಿಡಲಾಗುತ್ತಿತ್ತು. ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಿ
ಕೊಡುವಾಗ ಅವರ ಮೇಲೂ ನಿವಾರಕದ ಮಳೆಯನ್ನು ಸುರಿಸಿದ್ದು ದೊಡ್ಡ ಸುದ್ದಿಯಾಗಿತ್ತು.

‘ಹೊರಾಂಗಣದಲ್ಲಿ ಒಂದುವೇಳೆ ದ್ರಾವಣ ಸಿಂಪಡಿಸಿದರೂ ವಾತಾ ವರಣದಲ್ಲಿರುವ ದೂಳು ಹಾಗೂ ತ್ಯಾಜ್ಯದಿಂದ ಅದು ನಿಷ್ಕ್ರಿಯ ಗೊಂಡು, ನಿರುಪಯುಕ್ತ ಆಗುತ್ತದೆ’ ಎಂದೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಪ್ರಕರಣ ಪತ್ತೆಯಾದ ಸ್ಥಳಗಳ ಬೀದಿಗಳಲ್ಲಿ ವೈರಾಣು ನಾಶಪಡಿ ಸಲು ಸೋಡಿಯಂ ಹೈಪೊಕ್ಲೋರೈಟ್‌ ದ್ರಾವಣವನ್ನು ಬಳಸಲಾಗುತ್ತಿದೆ.

‘ಬೇರೆ ಸೋಂಕು ನಿವಾರಕಗಳಿಗೆ ಹೋಲಿಸಿದರೆ ಹೈಪೊಕ್ಲೋರೈಟ್‌ ತುಂಬಾ ಅಗ್ಗ. ಇದರ ಅಣುವು ಸೋಡಿಯಂ, ಕ್ಲೋರಿನ್‌ ಹಾಗೂ ಆಮ್ಲಜನಕದ ಪರಮಾಣುಗಳನ್ನು ಹೊಂದಿರುತ್ತದೆ. ಇದರ ರಾಸಾಯನಿಕ ಸೂತ್ರ NaClO. ಇದರ ತೀರಾ ದುರ್ಬಲ ದ್ರಾವಣ ಸಹ ವೈರಾಣುವನ್ನು ನಾಶಪಡಿಸಬಲ್ಲುದು. ಮಾಮೂಲಿ ಬ್ಲೀಚ್‌ ಪುಡಿಯನ್ನು ಬಳಸಿ ಎಲ್ಲಿ ಬೇಕಾದರೂ ಇದನ್ನು ಸುಲಭವಾಗಿ ತಯಾರಿಸಬಹುದು’ ಎಂದು ಬಿಬಿಎಂಪಿಯ ಆರೋಗ್ಯ ಅಧಿಕಾರಿ ಡಾ.ಬಾಲಸುಂದರ್‌ ಹೇಳುತ್ತಾರೆ.

ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳನ್ನು ನಾಶಪಡಿಸುವ ಈ ದ್ರಾವಣದಿಂದ ಮನುಷ್ಯನ ದೇಹದ ಮೇಲೆ ಅಡ್ಡಪರಿಣಾಮಗಳು ತೀರಾ ಕಡಿಮೆ ಎಂದು ಅವರು ಹೇಳುತ್ತಾರೆ. ಆದರೆ, ಡಬ್ಲ್ಯುಎಚ್‌ಒ ಮಾರ್ಗಸೂಚಿ ಪ್ರಕಾರ, ಕ್ಲೋರಿನ್‌ ಅಂಶವಿರುವ ಯಾವುದೇ ಸೋಂಕು ನಿವಾರಕವಾದರೂ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಕಣ್ಣು ಉರಿ, ಉಸಿರಾಟದ ತೊಂದರೆ ಹಾಗೂ ಚರ್ಮದ ಅಲರ್ಜಿಗೆ ಅಂತಹ ದ್ರಾವಣಗಳು ಕಾರಣವಾಗುವ ಸಾಧ್ಯತೆ ಇದೆ ಎಂದು ವಿವರಿಸುತ್ತದೆ.

‘ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಕಟ್ಟಡಗಳಿಗೆ ಸಿಂಪಡಿಸುವ ಸೋಡಿಯಂ ಹೈಪೊಕ್ಲೋರೈಟ್‌ ದ್ರಾವಣವು ಕೇವಲ ಶೇ 1ರಷ್ಟು ಸಾಂದ್ರತೆಯನ್ನು ಹೊಂದಿರುತ್ತದೆ. ಅಂದರೆ ನೂರು ಗ್ರಾಂ ನೀರಿನಲ್ಲಿ ಒಂದು ಗ್ರಾಂನಷ್ಟು ಮಾತ್ರ NaClO ಇರುತ್ತದೆ. ಸಾಂದ್ರತೆ ಪ್ರಮಾಣ ಇದಕ್ಕಿಂತ ಹೆಚ್ಚಾದರೆ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಶೇ 1ರಷ್ಟು ಸಾಂದ್ರತೆಯ ದ್ರಾವಣವೂ ಕೆಲವರಲ್ಲಿ ಚರ್ಮದ ಉರಿ, ಕಣ್ಣುರಿ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಲ್ಲುದು’ ಎಂದು ಡಾ. ಬಾಲಸುಂದರ್‌ ಒಪ್ಪಿಕೊಳ್ಳುತ್ತಾರೆ.

ರಸ್ತೆಗಳಲ್ಲಿ, ಕಟ್ಟಡಗಳಲ್ಲಿ ಈ ದ್ರಾವಣವನ್ನು ಸಿಂಪಡಿಸಲಾಗುತ್ತಿದೆ. ಕೆಲವೆಡೆ ದ್ರಾವಣದ ಸಿಂಪಡಣೆಗೆ ಡ್ರೋನ್‌ ಬಳಸಲಾಗಿದೆ. ಗಾಳಿಯಲ್ಲಿ ಸೋಂಕು ಹರಡುವುದಿಲ್ಲ ಎಂದಾದರೆ, ಡಬ್ಲ್ಯುಎಚ್‌ಒ ಮಾರ್ಗಸೂಚಿಯನ್ನೂ ಮೀರಿ ಈ ದ್ರಾವಣವನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಸಿಂಪಡಿಸುವ ಅಗತ್ಯವೇನು ಎಂಬುದು ಜನರನ್ನು ಕಾಡುತ್ತಿರುವ ಪ್ರಶ್ನೆ.

‘ಗಾಳಿಯಲ್ಲಿ ಸೋಂಕು ಹರಡುವುದಿಲ್ಲ ನಿಜ. ಆದರೆ, ಕೋವಿಡ್‌ ಸೋಂಕಿತರು ಕೆಮ್ಮಿದಾಗ, ಅಥವಾ ಸೀನಿದಾಗ, ಅದರ ತುಂತುರು ಗೋಡೆ ಮೇಲೆ, ಗೇಟಿನ ಮೇಲೆ, ರಸ್ತೆಯ ಮೇಲೆ ಅಥವಾ ನೆಲದ ಮೇಲೆ ಎಲ್ಲಿ ಬೇಕಾದರೂ ಬಿದ್ದಿರಬಹುದು. ಅದನ್ನು ಬೇರೆಯವರು ಮುಟ್ಟಿದರೆ, ಅವರಿಗೂ ಸೋಂಕು ಹರಡುವ ಅಪಾಯವಿದೆ. ಈ ದ್ರಾವಣವನ್ನು ಸಿಂಪಡಿಸುವುದರಿಂದ ಇಂತಹ ವೈರಾಣುಗಳನ್ನು ನಾಶಪಡಿಸಬಹುದು’ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಉತ್ತರಿಸುತ್ತಾರೆ.

‘ಸೋಂಕು ನಿವಾರಕ ದ್ರಾವಣವು ಇತರ ಜೀವಿಗಳಿಗೆ, ಪ್ರಾಣಿ ಪಕ್ಷಿಗಳಿಗೆ ಅಪಾಯ ತಂದೊಡ್ಡುವ ಸಾಧ್ಯತೆ ತೀರಾ ಕಡಿಮೆ. ದ್ರಾವಣದ ರಾಸಾಯನಿಕ ಅಂಶ ನಾಲ್ಕೈದು ತಾಸುಗಳಲ್ಲಿ ಆವಿಯಾಗಿ ಹೋಗುತ್ತದೆ. ಹಾಗಾಗಿ ಮರ ಗಿಡಗಳಲ್ಲಿ ಇದು ಹೆಚ್ಚು ಹೊತ್ತು ಉಳಿಯದು. ದ್ರಾವಣ ಸಿಂಪಡಿಸುವಾಗ ಅಲ್ಲಿರುವ ಕೀಟಗಳಿಗೆ ಸ್ವಲ್ಪ ಮಟ್ಟಿನ ಹಾನಿ ಉಂಟಾಗಬಹುದು. ಆದರೆ ಪಕ್ಷಿಗಳಿಗೆ ಹಾಗೂ ಇತರ ಪ್ರಾಣಿಗಳಿಗೆ ಇದರಿಂದ ಅಪಾಯವಿಲ್ಲ’ ಎಂದು ಅವರು ಸ್ಪಷ್ಟಪಡಿಸುತ್ತಾರೆ.

ಮಾಮೂಲಿ ಬ್ಲೀಚ್‌ ಬಳಸಿ ಇದನ್ನು ತಯಾರಿಸುವುದರಿಂದ ಇದಕ್ಕೆ ತಗಲುವ ವೆಚ್ಚ ತೀರಾ ಕಡಿಮೆ. ಒಂದು ಲೀಟರ್‌ ನೀರಿಗೆ ಮೂರು ಗ್ರಾಂನಷ್ಟು ಬ್ಲೀಚ್‌ ಸೇರಿಸಿ ದ್ರಾವಣ ತಯಾರಿಸುತ್ತಾರೆ. ಇದನ್ನು ನಾಲ್ಕೈದು ಗಂಟೆಗಳಲ್ಲಿ ಬಳಸಬೇಕು. ಇದಕ್ಕಿಂತ ಜಾಸ್ತಿ ಹೊತ್ತು ಇಟ್ಟರೆ ಅಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಆರೋಗ್ಯಾಧಿಕಾರಿಗಳು ಹೇಳುತ್ತಾರೆ. ಹೆಚ್ಚು ಸಾಂದ್ರತೆಯ ಸೋಡಿಯಂ ಹೈಪೋಕ್ಲೋರೈಟ್‌ ದ್ರಾವಣವೂ ಮಾರುಕಟ್ಟೆಯಲ್ಲಿ ಲಭ್ಯ. ಇದಕ್ಕೆ ನೀರು ಸೇರಿಸಿ ದುರ್ಬಲಗೊಳಿಸಿ ಸೋಂಕು ನಿವಾರಕ ತಯಾರಿಸುವ ಪರಿಪಾಟವೂ ಕೆಲವೆಡೆ ಇದೆ.

ಕೆಲವು ಎತ್ತರದ ಕಟ್ಟಡಗಳಿಗೆ ಡ್ರೋನ್‌ ಬಳಸಿ ಸೋಂಕು ನಿವಾರಕ ಸಿಂಪಡಣೆ ಮಾಡಲಾಗಿತ್ತು. ಇದು ಅಷ್ಟು ಪರಿಣಾಮಕಾರಿ ಅಲ್ಲ ಹಾಗೂ ದ್ರಾವಣ ವ್ಯರ್ಥವಾಗುತ್ತದೆ ಎಂಬ ಕಾರಣಕ್ಕೆ ಈಗ ಡ್ರೋನ್‌‌ ಬಳಕೆಯನ್ನು ಬಿಬಿಎಂಪಿ ಕೈಬಿಟ್ಟಿದೆ.

‘ಸೋಂಕು ನಿವಾರಕವು ಜನರಲ್ಲಿ ದೈಹಿಕ ಮಾತ್ರವಲ್ಲ; ಮಾನಸಿಕವಾಗಿಯೂ ಅಡ್ಡಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ಡಬ್ಲ್ಯುಎಚ್‌ಒ ತಜ್ಞರ ತಂಡ ಎಚ್ಚರಿಸಿದೆ. ಆದರೆ, ದೊಡ್ಡ ಪ್ರಮಾಣದಲ್ಲಿ ದ್ರಾವಣ ಸಿಂಪಡಣೆಗೆ ಅನುವಾಗುವಂತೆ ಬಿಬಿಎಂಪಿ ಹೊಸ ಯಂತ್ರ ಖರೀದಿಗೆ ಹೊರಟಿದೆ.

ರಸ್ತೆಯಲ್ಲಿ ಸಾಗುತ್ತಾ 50 ಮೀದೂರದವರೆಗೆ ಸೋಂಕು ನಿವಾರಕ ಸಿಂಪಡಿಸುವ ಮಿಸ್ಟ್‌ ಕೆನಾನ್‌ ಯಂತ್ರಗಳ ಖರೀದಿಗೆ ಬಿಬಿಎಂಪಿ ಮಾತುಕತೆ ನಡೆಸಿದೆ. ಪ್ರತಿಯಂತ್ರಕ್ಕೆ ₹53 ಲಕ್ಷ ವೆಚ್ಚವಾಗಲಿದೆ. ಅಮೆರಿಕನ್ ರೋಡ್ ಟೆಕ್ನಾಲಜಿ ಆ್ಯಂಡ್ ಸಲ್ಯೂಷನ್ಸ್ (ARTS) ಸಂಸ್ಥೆ ಈ ಯಂತ್ರಗಳ ಮೂಲಕ ಸೋಂಕು ನಿವಾರಕ ಸಿಂಪಡಿಸುವ ಪ್ರಾತ್ಯಕ್ಷಿಕೆಯನ್ನೂ ನೀಡಿದೆ.

ಒಳಾಂಗಣದಲ್ಲೂ ಸಿಂಪಡಣೆ ಬೇಡ

ಸೋಂಕು ನಿವಾರಕವನ್ನು ಒಳಾಂಗಣದಲ್ಲಿ ಬಳಸಬೇಕಾದ ಸಂದರ್ಭದಲ್ಲೂ ಅದನ್ನು ಸಿಂಪಡಣೆ ಮಾಡುವಂತಿಲ್ಲ. ಸೋಂಕು ನಿವಾರಕದಲ್ಲಿ ನೆನೆಸಿದ ಬಟ್ಟೆಯಿಂದ ಒಳಾಂಗಣವನ್ನು ಸ್ವಚ್ಛವಾಗಿ ಒರೆಸಬೇಕು. ಸೋಂಕು ನಿವಾರಕದ ಸಿಂಪಡಣೆಗಿಂತ ಪದೇ ಪದೇ ನೆಲಹಾಸನ್ನು ಒರೆಸುವುದು, ಜನರು ಸಾಮಾನ್ಯವಾಗಿ ಮುಟ್ಟುವಂತಹ ಪ್ರದೇಶಗಳನ್ನು 2-3 ಬಾರಿ ಶುಚಿಗೊಳಿಸುವುದು ಹೆಚ್ಚು ಉತ್ತಮ ಎಂದು ಡಬ್ಲ್ಯುಎಚ್‌ಒ ಸ್ಪಷ್ಟವಾಗಿ ತಿಳಿಸಿದೆ.

ಪರಿಸರದ ಮೇಲೆ ಪರಿಣಾಮ ಬೀರದು

ಸೋಡಿಯಂ ಹೈಪೋಕ್ಲೋರೈಟ್‌ ಸಿಂಪಡಿಸುವುದರಿಂದ ಪರಿಸರ, ಸಸ್ಯ ಮತ್ತು ಮನುಷ್ಯನ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ. ಇದರಿಂದ ಯಾವುದೇ ಕೀಟವಾಗಲಿ, ಸೂಕ್ಷ್ಮಜೀವಿಗಳಾಗಲಿ ಸಾಯುವುದಿಲ್ಲ. ಅಷ್ಟರ ಮಟ್ಟಿಗೆ ಸುರಕ್ಷಿತ. ಸಾಮಾನ್ಯ ನೈರ್ಮಲ್ಯಕ್ಕೆ ಅನುಕೂಲವಾಗುತ್ತದೆ. ವೈರಸ್‌ ಗಾಳಿಯಲ್ಲಿ ಹರಡಬಹುದು ಎಂಬ ಸಂಶಯದ ಮೇಲೆ ನಿಯಂತ್ರಣಕ್ಕಾಗಿ, ಜನ ಹೆಚ್ಚು ಗುಂಪು ಸೇರುವ ಕಡೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಳಸಲಾಗುತ್ತದೆ. ಇದರಲ್ಲಿ ಆಲ್ಕೋಹಾಲ್‌ ಅಂಶ ಇರುವುದರಿಂದ ಗಾಳಿಯ ಸಂಪರ್ಕ ಬಂದ ತಕ್ಷಣವೇ ಆವಿಯಾಗುತ್ತದೆ. ಒಂದು ವೇಳೆ ಯಾವುದೇ ಕೀಟದ ಮೇಲೆ ನೇರವಾಗಿ ಬಿದ್ದರೂ ಅವುಗಳಿಗೆ ಅಮಲು ಬರುತ್ತದೆ. ಉಳಿದಂತೆ ಯಾವುದೇ ಪರಿಣಾಮ ಬೀರುವುದಿಲ್ಲ.

- ಡಾ.ಎನ್‌. ಶ್ರೀನಿವಾಸ,ಕೀಟವಿಜ್ಞಾನಿ, ಕೃಷಿ ವಿಶ್ವವಿದ್ಯಾಲಯ

ಸೋಂಕು ನಿವಾರಕ ಮಾರ್ಗಸೂಚಿ

1. ಶುಚಿ ಕಾರ್ಯ ಮತ್ತು ಸೋಂಕುನಿರೋಧಕ ದ್ರಾವಣ ಸಿಂಪಡಿಸುವ ಮುನ್ನ ಸಿಬ್ಬಂದಿಯು ಬಳಸಿ ಬಿಸಾಡುವ ರಬ್ಬರ್ ಬೂಟು, ಕೈಗವಸು ಮತ್ತು ಮೂರು ಲೇಯರ್‌ನ ಮಾಸ್ಕ ಧರಿಸಿರಬೇಕು. ಶುಚಿ ಕಾರ್ಯದ ನಂತರ ಇವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು

2. ಶುಚಿಯಾಗಿರುವ ಜಾಗದಿಂದ ಶುಚಿಕಾರ್ಯ ಆರಂಭಿಸಬೇಕು. ನಂತರ ಹೆಚ್ಚು ಗಲೀಜಾಗಿರುವ ಜಾಗದತ್ತ ಹೋಗಬೇಕು.ದ್ರಾವಣ ಸಿಂಪಡಣೆಯನ್ನೂ ಇದೇ ಅನುಕ್ರಮದಲ್ಲಿ ಮಾಡಬೇಕು

3. ಪದೇ ಪದೇ ಸ್ಪರ್ಶಿಸುವ ಜಾಗಗಳನ್ನು 70% ಆಲ್ಕೊಹಾಲ್ ಇರುವ ಸ್ಯಾನಿಟೈಸರ್ ಬಳಸಿ ಶುಚಿ ಮಾಡಬೇಕು. ದಿನಕ್ಕೆ ಎರಡು ಬಾರಿ ಶುಚಿ ಮಾಡಬೇಕು

4. ಲೋಹದ ವಸ್ತುಗಳ ಮೇಲೆ ಸೋಂಕು ನಿವಾರಕ ದ್ರಾವಣ (ಸೋಡಿಯಂ ಹೈಪೊಕ್ಲೋರೈಟ್‌ 1%) ಸಿಂಪಡಣೆ ಮಾಡುವುದರಿಂದ ಅವು ತುಕ್ಕು ಹಿಡಿಯುವ ಅಪಾಯವಿರುತ್ತದೆ. ಹೀಗಾಗಿ ಅಂತಹ ವಸ್ತುಗಳನ್ನು ಸ್ಯಾನಿಟೈಸರ್‌ ಬಳಸಿ ಶುಚಿ ಮಾಡಬೇಕು

5. ಶುಚಿ ಕಾರ್ಯದ ನಂತರ ಸುರಕ್ಷತಾ ಕಿಟ್‌ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ತಕ್ಷಣವೇ ಸೋಪು–ನೀರು ಬಳಸಿ ಕೈಕಾಲುಗಳನ್ನು ತೊಳೆದುಕೊಳ್ಳಬೇಕು. ಸಾಧ್ಯವಿದ್ದಲ್ಲಿ ಸ್ನಾನ ಮಾಡಬೇಕು (ಶುಚಿ ಕಾರ್ಯ ಮಾಡುವ ಸಿಬ್ಬಂದಿಗೆ ಅನ್ವಯ)

ಒಳಾಂಗಣ

* ಕಚೇರಿ, ಮನೆ, ಸಾರ್ವಜನಿಕ ಕಚೇರಿ, ಅಂಗಡಿ, ಮಾಲ್‌ಗಳು ಇದರಲ್ಲಿ ಬರುತ್ತವೆ

* ಕಚೇರಿ, ಅಂಗಡಿ, ಮಾಲ್‌ಗಳು ಕಾರ್ಯಾರಂಭ ಮಾಡುವ ಮುನ್ನ ಅವುಗಳನ್ನು ಶುಚಿ ಮಾಡಬೇಕು. ಮೇಲೆ ತಿಳಿಸಲಾದ ವಿಧಾನದಲ್ಲೇ ಸೋಂಕು ನಿವಾರಕ ದ್ರಾವಣ ಮತ್ತು ಸ್ಯಾನಿಟೈಸರ್ ಬಳಸಿ ಶುಚಿ ಮಾಡಬೇಕು

* ಕುರ್ಚಿ–ಮೇಜು, ಕಂಪ್ಯೂಟರ್‌ಗಳನ್ನು ಬಳಸುವವರು, ಬಳಸುವುದಕ್ಕೂ ಮುನ್ನ ‘ಸೋಂಕು ನಿವಾರಕ ದ್ರಾವಣ ವೈಪ್‌’ ಒಮ್ಮೆ ಶುಚಿ ಮಾಡಿ ಬಳಸಬೇಕು. ಬಳಕೆ ನಂತರವೂ ಒಮ್ಮೆ ಶುಚಿ ಮಾಡಬೇಕು. ಪ್ರತಿದಿನವೂ ಇದನ್ನು ಅನುಸರಿಸಬೇಕು

* ನೆಲವನ್ನು ಪ್ರತಿದಿನ ಎರಡು ಬಾರಿ ಸೋಡಿಯಂ ಹೈಪೊಕ್ಲೋರೈಟ್‌ 1% ದ್ರಾವಣ ಬಳಸಿ ಒರೆಸಬೇಕು. ನೆಲ ಒರೆಸುವ ಮಾಪ್ ಅನ್ನು ಬ್ಲೀಚ್‌ನಲ್ಲಿ ತೊಳೆದು, ಬಿಸಿನೀರಿನಲ್ಲಿ ಮತ್ತೊಮ್ಮೆ ತೊಳೆಯಬೇಕು

ಹೊರಾಂಗಣ

* ಹೊರಾಂಗಣದಲ್ಲಿ ಬಿಸಿಲು, ಗಾಳಿ ಹೆಚ್ಚಾಗಿ ಇರುವ ಕಾರಣ ‘ವೈರಸ್‌ ಪ್ರಮಾಣ’ ಕಡಿಮೆ ಇರುತ್ತದೆ. ಹೀಗಿದ್ದರೂ, ಸಾರ್ವಜನಿಕರು ಹೆಚ್ಚು ಬಳಸುವ ಸ್ಥಳಗಳಲ್ಲಿ ಸೋಡಿಯಂ ಹೈಪೊಕ್ಲೋರೈಟ್‌ 1% ದ್ರಾವಣವನ್ನು ಸಿಂಪಡಣೆ ಮಾಡಬೇಕು

* ರೈಲು ನಿಲ್ದಾಣ, ಪ್ಲಾಟ್‌ಫಾರಂ, ಕುರ್ಚಿಗಳು, ಸಿಮೆಂಟ್ ಬೆಂಚುಗಳು, ಬಸ್‌ ನಿಲ್ದಾಣ, ಬಸ್‌ನಿಲ್ದಾಣದ ಕಂಬಿಗಳು, ಬೆಂಚುಗಳು, ರಸ್ತೆ, ಪಾದಚಾರಿ ಮಾರ್ಗ, ಉದ್ಯಾನ ಎಲ್ಲೆಡೆ ಸೋಡಿಯಂ ಹೈಪೊಕ್ಲೋರೈಟ್‌ 1% ದ್ರಾವಣ ಮತ್ತು ಅಗತ್ಯವಿರುವೆಡೆ 70% ಆಲ್ಕೊಹಾಲ್ ಇರುವ ಸ್ಯಾನಿಟೈಸರ್‌ ಬಳಸಿ ಶುಚಿ ಮಾಡಬೇಕು

ಸಾರ್ವಜನಿಕ ಶೌಚಾಲಯ

* ಕಮೋಡ್‌, ನಲ್ಲಿಗಳು, ಬಕೆಟ್–ಮಗ್‌ಗಳು, ಸಿಂಕ್, ಗೋಡೆ, ಬಾಗಿಲು, ಬಾಗಿಲ ಹಿಡಿಕೆ, ಸೋಪ್‌ ಡಿಸ್ಪೆನ್ಸರ್ (ಸೋಪ್‌ ಇರಿಸುವ ಡಬ್ಬ)‌ ಮತ್ತು ನೆಲವನ್ನು ಪದೇ–ಪದೇ ಶುಚಿ ಮಾಡಬೇಕು

* ಮೊದಲು ಸೋಪು–ನೀರು ಬಳಸಿ ಶುಚಿ ಮಾಡಬೇಕು. ನಂತರ ಸೋಡಿಯಂ ಹೈಪೊಕ್ಲೊರೈಟ್‌ 1% ದ್ರಾವಣ ಮತ್ತು ಅಗತ್ಯವಿರುವೆಡೆ 70% ಆಲ್ಕೊಹಾಲ್ ಇರುವ ಸ್ಯಾನಿಟೈಸರ್‌ ಬಳಸಿ ಶುಚಿ ಮಾಡಬೇಕು

ಆಧಾರ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT