ಶುಕ್ರವಾರ, ನವೆಂಬರ್ 27, 2020
20 °C

ಎಷ್ಟೊಂದು ದೇವಾಲಯ; ಏನೆಲ್ಲಾ ವಿವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜ್ಯದ ಹಲವು ದೇವಾಲಯಗಳ ವಾರ್ಷಿಕ ವರಮಾನ ಕೋಟ್ಯಂತರ ರೂಪಾಯಿಗೂ ಮೀರಿದೆ. ಅದೇ ಕಾರಣದಿಂದ ಇಂತಹ ದೇವಾಲಯಗಳು ವಿವಾದದ ಕೇಂದ್ರಬಿಂದುಗಳೂ ಆಗಿವೆ. ಅಂತಹ ಕೆಲವು ದೇವಾಲಯಗಳ ವಿವಾದದ ವಿವರಗಳು ಇಲ್ಲಿವೆ...

ದೇವಾಲಯದ ಹೆಸರು: ಸಿಗಂದೂರು ಚೌಡೇಶ್ವರಿದೇವಿ

ದೇವಾಲಯದ ಆಸ್ತಿ ಮೌಲ್ಯ: ಸುಮಾರು ₹ 50 ಕೋಟಿ

ಸ್ಥಳ: ಸಿಗಂದೂರು, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

ಏನು ವಿವಾದ: ಪ್ರಧಾನ ಅರ್ಚಕ ಶೇಷಗಿರಿ ಭಟ್‌ ಅವರ ಕುಟುಂಬ, ಧರ್ಮದರ್ಶಿ ರಾಮಪ್ಪ ಕುಟುಂಬದ ಮಧ್ಯೆ ದೇವಸ್ಥಾನದ ಹಣಕಾಸು ವ್ಯವಹಾರದ ವಿವಾದವಿದೆ. ಶೇಷಗಿರಿ ಭಟ್ಟರು ಕಾಣಿಕೆ, ಪೂಜಾ ವಿಧಿವಿಧಾನಗಳಿಂದ ಸಂಗ್ರಹಿಸಿದ ಹಣದ ಲೆಕ್ಕ ಕೊಡುವುದಿಲ್ಲ ಎನ್ನುವುದು ಧರ್ಮದರ್ಶಿ ಮಂಡಳಿ ಆರೋಪ. ಪೂಜಾ ಕಾರ್ಯಗಳಿಗೆ ಪದೇ ಪದೇ ಅಡ್ಡಿ ಮಾಡುತ್ತಾರೆ ಎನ್ನುವುದು ಅರ್ಚಕರ ಆರೋಪ. ನಿತ್ಯವೂ ಬರುವ ಲಕ್ಷಾಂತರ ರೂಪಾಯಿ ವರಮಾನದ ಮೇಲೆ ಎರಡೂ ಬಣಗಳ ಕಣ್ಣು. ಶರಾವತಿ ಹಿನ್ನೀರಿನ ಈ ಧಾರ್ಮಿಕ ಸ್ಥಳಕ್ಕೆ ತಿಂಗಳಿಗೆ ಸರಾಸರಿ 2 ಲಕ್ಷ ಜನರು ಭೇಟಿ ನೀಡುತ್ತಾರೆ. ಹುಂಡಿ, ಕೌಂಟರ್ ರಸೀದಿ ಹಣವೇ ವಾರ್ಷಿಕ ₹ 5 ಕೋಟಿಗೂ ಹೆಚ್ಚು ಸಂಗ್ರಹವಾಗುತ್ತದೆ. ಪೂಜೆ, ಅರ್ಚಕರ ಕಾಣಿಕೆ ಸೇರಿದರೆ ದುಪ್ಪಟ್ಟು ಆದಾಯವಿದೆ ಎನ್ನುವುದು ಅಲ್ಲಿನ ಸಿಬ್ಬಂದಿ ನೀಡುವ ಮಾಹಿತಿ.

ವಿವಾದದ ಸದ್ಯದ ಸ್ವರೂಪ ಏನು?: ಸಂಘರ್ಷ ತಾರಕಕ್ಕೇರಿದೆ. ಕಾರ್ಗಲ್‌ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿವೆ. ಪ್ರಕರಣದ ಕುರಿತು ಜಿಲ್ಲಾಧಿಕಾರಿಗಳು ತನಿಖೆ ನಡೆಸಿ, ಆರ್ಥಿಕ ಸ್ಥಿತಿಗತಿ, ಅಲ್ಲಿನ ಸನ್ನಿವೇಶದ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಸರ್ಕಾರ ಮುಜರಾಯಿಗೆ ಸೇರಿಸುವ ಕುರಿತು ಚಿಂತನೆ ನಡೆಸಿದೆ.

***

ದೇವಾಲಯದ ಹೆಸರು: ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ

ದೇವಾಲಯದ ಆಸ್ತಿ ಮೌಲ್ಯ: ವಾರ್ಷಿಕ ₹ 90 ಕೋಟಿಯಷ್ಟು ವರಮಾನವಿದೆ (ಆಸ್ತಿಮೌಲ್ಯ ನಿಖರವಾಗಿ ತಿಳಿದಿಲ್ಲ)

ಸ್ಥಳ: ಕುಕ್ಕೆ ಸುಬ್ರಹ್ಮಣ್ಯ, ಸುಳ್ಯ ತಾಲ್ಲೂಕು , ದಕ್ಷಿಣ ಕನ್ನಡ ಜಿಲ್ಲೆ

ಏನು ವಿವಾದ?: ಸುಬ್ರಹ್ಮಣ್ಯ ಸ್ವಾಮಿ ಮಠ ಹಾಗೂ ದೇವಸ್ಥಾನ ಸಮಿತಿ ನಡುವೆ ಮೊದಲಿನಿಂದಲೂ ಜಟಾಪಟಿ ಇದೆ. ‘ಮಠದವರು ಸುಬ್ರಹ್ಮಣ್ಯ ಸ್ವಾಮಿ ದೇಗುಲದ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು, ದೇವಸ್ಥಾನದಲ್ಲಿ ನಡೆಯುವ ಸರ್ಪ ಸಂಸ್ಕಾರ ಸೇರಿದಂತೆ ಪ್ರಮುಖ ಸೇವೆಗಳನ್ನು ಮಠದಲ್ಲಿ ನಡೆಸುತ್ತಾರೆ’ ಎಂಬ ದೂರುಗಳಿವೆ. ಇನ್ನೊಂದೆಡೆ ದೇವಸ್ಥಾನವನ್ನು ಮಠದ ಸುಪರ್ದಿಗೆ ನೀಡಬೇಕು ಎನ್ನುವ ಒತ್ತಾಯವೂ ಕೇಳಿ ಬಂದಿದೆ.

ದೇವಸ್ಥಾನದಲ್ಲಿ ನಡೆಯುವ ಸೇವೆಗಳನ್ನು ಮಠದಲ್ಲಿ ನೆರವೇರಿಸುವುದಕ್ಕೆ ಅವಕಾಶ ನೀಡಲೇಬಾರದು ಎಂಬುದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭಕ್ತ ಹಿತರಕ್ಷಣಾ ವೇದಿಕೆಯ ಒತ್ತಾಯವಾದರೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ಮಠದ ಸುಪರ್ದಿಗೆ ನೀಡಬೇಕು ಎನ್ನುವುದು ವಿಶ್ವ ಹಿಂದೂ ಪರಿಷತ್‌ ಮತ್ತು ಶ್ರೀರಾಮ ಸೇನೆಯ ಆಗ್ರಹ. ಇದಕ್ಕೆ ಸಂಬಂಧಿಸಿದಂತೆ ಕುಕ್ಕೆ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮೂರು ದಿನ ಉಪವಾಸವನ್ನೂ ನಡೆಸಿದ್ದರು.

ವಿವಾದದ ಸದ್ಯದ ಸ್ವರೂಪ ಏನು: ಬೂದಿಮುಚ್ಚಿದ ಕೆಂಡದಂತಿದ್ದು, ಕೋವಿಡ್‌ ಕಾರಣದಿಂದ ಸ್ವಲ್ಪ ತಣ್ಣಗಾಗಿದೆ.

***

ದೇವಾಲಯದ ಹೆಸರು: ಗೋಕರ್ಣ ಮಹಾಬಲೇಶ್ವರ ದೇವಸ್ಥಾನ

ದೇವಾಲಯದ ಆಸ್ತಿಯ ಮೌಲ್ಯ: ಸುಮಾರು ₹ 5 ಕೋಟಿ ಬ್ಯಾಂಕಿನಲ್ಲಿ ಮುದ್ದತು ಠೇವಣಿ. ₹ 10 ಕೋಟಿ ಮೌಲ್ಯದ ಚಿನ್ನ. ₹ 3.5 ಕೋಟಿ ಮೌಲ್ಯದ ಬೆಳ್ಳಿ ಹಾಗೂ ಕೊರೊನಾಕ್ಕೂ ಮೊದಲು ಭಕ್ತರ ಸೇವಾಕಾರ್ಯಗಳಿಂದ ವರ್ಷಕ್ಕೆ ಅಂದಾಜು ₹ 5 ಕೋಟಿ. (ಇದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಎಸ್.ಕೆ.ಮುಖರ್ಜಿ ಅವರ ಮುಂದೆ ದೇವಸ್ಥಾನ ಆಡಳಿತದ ಪರವಾಗಿ ರಾಮಚಂದ್ರಾಪುರ ಮಠದ ವಕೀಲರು ನೀಡಿದ್ದ ಹೇಳಿಕೆ)

ಸ್ಥಳ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣ

ವಿವಾದವೇನು?: ಈ ದೇವಸ್ಥಾನವು ಹಿಂದೆ ಮುಜರಾಯಿ ಇಲಾಖೆಯ ಆಡಳಿತದಲ್ಲಿತ್ತು. 2004ರಲ್ಲಿ ಆಗಿನ ಟ್ರಸ್ಟಿ ವಿ.ಡಿ.ದೀಕ್ಷಿತ್ ನಿಧನರಾದರು. 2004ರಿಂದ 2008ರ ಆ.14ರವರೆಗೆ ಅವರ ಪುತ್ರ ಬಾಲಚಂದ್ರ ದೀಕ್ಷಿತ್ ಉಸ್ತುವಾರಿ ಆಡಳಿತ ನಡೆಸಿಕೊಂಡು ಬರುತ್ತಿದ್ದರು. ಟ್ರಸ್ಟಿಗಳ ಹುದ್ದೆ ಖಾಲಿ ಇದ್ದ ಕಾರಣ 2008ರ ಮೇ ತಿಂಗಳಿನಲ್ಲಿ ಹೊಸನಗರದ ರಾಮಚಂದ್ರಾಪುರ ಮಠದವರು ಈ ದೇವಸ್ಥಾನ ಪುರಾತನ ಕಾಲದಲ್ಲಿ ತಮ್ಮದಾಗಿತ್ತು. ಈಗ ಪುನಃ ಆಡಳಿತದ ನಿರ್ವಹಣೆಯನ್ನು ತಮಗೆ ವಹಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಅದರಂತೆ 2008ರ ಆ.14ರಂದು ಸೂಚಿತ ಪಟ್ಟಿಯಿಂದ ದೇವಾಲಯವನ್ನು ರದ್ದುಪಡಿಸಿ, ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಲಾಯಿತು. ಇದನ್ನು ವಿರೋಧಿಸಿ ಬಾಲಚಂದ್ರ ದೀಕ್ಷಿತ ಹಾಗೂ ಇತರರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 10 ವರ್ಷಗಳ ಕಾಲ ವಿಚಾರಣೆ ನಡೆದು 2018 ಆ.10ರಂದು ಹೈಕೋರ್ಟ್ ವಿಭಾಗೀಯ ಪೀಠವು ರಾಮಚಂದ್ರಾಪುರ ಮಠದ ವಿರುದ್ಧ ತೀರ್ಪು ನೀಡಿತು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಶ್ರೀಕೃಷ್ಣ ಅವರ ನೇತೃತ್ವದಲ್ಲಿ ದೇವಸ್ಥಾನದ ನಿರ್ವಹಣೆಯನ್ನು ನೋಡಿಕೊಳ್ಳಲು ಸಮಿತಿ ರಚಿಸುವಂತೆ ಸರ್ಕಾರಕ್ಕೆ ಸೂಚಿಸಿತು. ಈ ತೀರ್ಪಿನ ವಿರುದ್ಧ ರಾಮಚಂದ್ರಾಪುರ ಮಠವು ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತು. 2018ರ ಆ.10ರಂದು ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ವಿವಾದದ ಸದ್ಯದ ಸ್ವರೂಪ ಏನು?: ಸುಪ್ರೀಂಕೋರ್ಟ್‌ನಲ್ಲಿ ರಾಮಚಂದ್ರಾಪುರ ಮಠದ ಅರ್ಜಿ ಪ್ರವೇಶದ ಹಂತದಲ್ಲಿದೆ (ಅಡ್ಮಿಶನ್ ಸ್ಟೇಜ್). ಆದ್ದರಿಂದ ದೇವಸ್ಥಾನದ ಆಡಳಿತವು 2018ರ ಆ.10ರಿಂದ ಇಲ್ಲಿಯವರೆಗೆ ರಾಮಚಂದ್ರಾಪುರ ಮಠದ ನಿರ್ವಹಣೆಯಲ್ಲಿದೆ.

***

ದೇವಾಲಯ ಹೆಸರು: ಚೆಲುವನಾರಾಯಣಸ್ವಾಮಿ ದೇವಾಲಯ

ದೇವಾಲಯ ಆಸ್ತಿ ಮೌಲ್ಯ: ₹ 100 ಕೋಟಿ

ಸ್ಥಳ: ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ

ಏನು ವಿವಾದ: 1. ಭಕ್ತರು ನೀಡಿದ ₹ 40 ಲಕ್ಷ ಮೌಲ್ಯದ ‘ವಜ್ರಾಂಗಿ’ ಆಭರಣಗಳನ್ನು ಅರ್ಚಕರು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ವಿಚಾರದಲ್ಲಿ ಅರ್ಚಕರ (ಸ್ಥಾನೀಕರು) ನಡುವೆ ಜಟಾಪಟಿ ಇದೆ. ಈಗಾಗಲೇ ಒಬ್ಬ ಅರ್ಚಕರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

2. ಮಂಡ್ಯದ ಜಿಲ್ಲಾ ಖಜಾನೆಯಲ್ಲಿರುವ ವೈರಮುಡಿ, ರಾಜಮುಡಿ (ವಜ್ರಖಚಿತ ಕಿರೀಟಗಳು)ಗಳನ್ನು ಮೇಲುಕೋಟೆಗೆ ಕೊಂಡೊಯ್ದು ಉತ್ಸವ ನಡೆಸುವ ಸಂಬಂಧ ಚೆಲುವನಾರಾಯಣ ದೇವಾಲಯದ ಅರ್ಚಕರ ನಡುವೆ ಜಟಾಪಟಿ ಇದೆ. 1ನೇ ಸ್ಥಾನೀಕ ಕುಟುಂಬ ಸದಸ್ಯರು (ಅರ್ಚಕರು) ವೈರಮುಡಿ, ರಾಜಮುಡಿ ಉತ್ಸವದ ಪ್ರಕ್ರಿಯೆ ನಡೆಸುತ್ತಿದ್ದಾರೆ. ಆದರೆ 4ನೇ ಸ್ಥಾನೀಕ ಕುಟುಂಬ ಸದಸ್ಯರು ತಮಗೂ ಉತ್ಸವದ ಹೊಣೆ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.

ವಿವಾದದ ಸದ್ಯದ ಸ್ವರೂಪ ಏನು?: 1. ಪ್ರಕರಣದ ಕುರಿತು ಜಿಲ್ಲಾಧಿಕಾರಿಯಾಗಿದ್ದ ಅಜಯ್‌ ನಾಗಭೂಷಣ್‌ ತನಿಖೆ ನಡೆಸಿ ಧಾರ್ಮಿಕ ದತ್ತಿ ಇಲಾಖೆಗೆ ವರದಿ ನೀಡಿದ್ದಾರೆ. ಅಮಾನತಿನಲ್ಲಿರುವ ಕುಟುಂಬದ ಸದಸ್ಯರನ್ನು ದೇವಾಲಯದ ಚಟುವಟಿಕೆಯಿಂದ ವಜಾ ಮಾಡುವಂತೆ ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದಾರೆ. ಆದರೆ ಇದುವರೆಗೂ ಅವರು ವಜಾಗೊಂಡಿಲ್ಲ.

2. ಉತ್ಸವ ಆಯೋಜನೆ ವಿಚಾರದಲ್ಲಿ ಎಲ್ಲಾ ಸ್ಥಾನೀಕ ಕುಟುಂಬಗಳಿಗೂ ಸಮಾನ ಅವಕಾಶವಿದೆ ಎಂದು ಹೈಕೋರ್ಟ್‌ ಆದೇಶ ನೀಡಿತ್ತು. ಆದರೆ, ಕೋರ್ಟ್‌ ಆದೇಶ ಅನುಷ್ಠಾನವಾಗಿಲ್ಲ ಎಂದು 4ನೇ ಸ್ಥಾನೀಕ ಅರ್ಚಕ ಕುಟುಂಬದ ಸದಸ್ಯರು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್‌ ತಿಳಿಸಿದ್ದಾರೆ.

***

ದೇವಾಲಯ ಹೆಸರು: ಆಂಜನೇಯ ದೇವಸ್ಥಾನ

ದೇವಾಲಯ ಆಸ್ತಿ ಮೌಲ್ಯ: ವಾರ್ಷಿಕ ₹ 6 ಕೋಟಿ ಆದಾಯ (ದೇವಸ್ಥಾನ ಪರ್ವತ ಪ್ರದೇಶದಲ್ಲಿದ್ದು, ಅದರ ಆಸ್ತಿ ಮೌಲ್ಯ ಸರ್ವೆ ಆಗಿಲ್ಲ)

ಸ್ಥಳ: ಅಂಜನಾದ್ರಿ ಪರ್ವತ, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ

ಏನು ವಿವಾದ: ಕಿಷ್ಕಿಂಧಾ ಟ್ರಸ್ಟ್‌ನ ಆಡಳಿತ ಮಂಡಳಿ ಮತ್ತು ಅರ್ಚಕ ವಿದ್ಯಾದಾಸ ಬಾಬಾ ಸುಪರ್ದಿಯಲ್ಲಿ ದೇವಸ್ಥಾನ ಇತ್ತು. ಸರ್ಕಾರಕ್ಕೆ ₹ 1 ಆದಾಯವೂ ಬರುತ್ತಿರಲಿಲ್ಲ. ಆಡಳಿತ ಮಂಡಳಿ ಮತ್ತು ಅರ್ಚಕರ ನಡುವೆ ಜಗಳ ತಾರಕಕ್ಕೇರಿತು. ಆಗ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಸರ್ವೆ ಮಾಡಿಸಿ ಸಂಪೂರ್ಣ ದೇವಸ್ಥಾನದ ಪ್ರದೇಶವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು.

ವಿವಾದದ ಸದ್ಯದ ಸ್ವರೂಪ ಏನು: ನ್ಯಾಯಾಲಯವು ಪೂಜೆ ಮಾಡಲಷ್ಟೇ ಅರ್ಚಕರಿಗೆ ಅವಕಾಶ ನೀಡಿದ್ದು, ಎಲ್ಲ ಆಡಳಿತವು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿದೆ. ಈ ವ್ಯಾಜ್ಯವು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ದೇವಸ್ಥಾನದ ಮೇಲೆ ಹಕ್ಕು ಸಾಧಿಸಲು ಸುತ್ತಲಿನ ಗ್ರಾಮದ ಸದಸ್ಯರನ್ನು ಒಳಗೊಂಡ ಟ್ರಸ್ಟ್, ವಿದ್ಯಾದಾಸ ಬಾಬಾ ಮತ್ತು ಜಿಲ್ಲಾಡಳಿತದ ಮಧ್ಯೆ ನಿತ್ಯ ಮುಸುಕಿನ ಗುದ್ದಾಟ ನಡೆದಿದೆ.

***

ದೇವಾಲಯದ ಹೆಸರು: ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ

ದೇವಾಲಯ ಆಸ್ತಿ ಮೌಲ್ಯ: ₹35 ಕೋಟಿ

ಸ್ಥಳ: ನಾಯಕನಹಟ್ಟಿ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ

ಏನು ವಿವಾದ: ದೇವಾಲಯದ ಒಳಮಠದ ಪೂಜೆಗೆ ಸಂಬಂಧಿಸಿದಂತೆ ಸಹೋದರರ ನಡುವೆ ಕಲಹ ಏರ್ಪಟ್ಟಿದೆ. ಜಾತ್ರೆ ಹಾಗೂ ಶ್ರಾವಣ ಮಾಸದಲ್ಲಿ ಬರುವ ಆದಾಯ ವ್ಯಾಮೋಹ ಹೆಚ್ಚಿಸಿದೆ. ಐವರು ಸಹೋದರರಲ್ಲಿ ಇಬ್ಬರಿಗೆ ಮುಜರಾಯಿ ಇಲಾಖೆ ಅವಕಾಶ ಕಲ್ಪಿಸಿದೆ. ಇದನ್ನು ಪ್ರಶ್ನಿಸಿ ಕಿರಿಯ ಸಹೋದರ ದೇವಾಲಯದ ಎದುರು ಧರಣಿ ನಡೆಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿವಾದದ ಸದ್ಯದ ಸ್ವರೂಪ: ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ವಿಚಾರಣೆಯ ಹಂತದಲ್ಲಿದೆ. ಹೊಸ ಅರ್ಚಕರ ನೇಮಕ ಮಾಡಿಕೊಳ್ಳುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಮುಂದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು