ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಕೊನೆಗಾಣದ ಸಂಘರ್ಷ!

ಕಾಡಿನಲ್ಲಿ ಹೆಚ್ಚಿದೆ ಮನುಷ್ಯರ ಚಟುವಟಿಕೆ; ನಾಡಿನತ್ತ ನುಗ್ಗಿ ಬರುತ್ತಿವೆ ಕಾಡುಪ್ರಾಣಿಗಳು
Last Updated 2 ಮಾರ್ಚ್ 2020, 20:21 IST
ಅಕ್ಷರ ಗಾತ್ರ
ADVERTISEMENT
""
""
""

ದೇಶ ಸ್ವಾತಂತ್ರ್ಯಗೊಂಡಾಗ ಕಾಡು ಹಾಗೂ ಪರಿಸರದ ಸಂರಕ್ಷಣೆ ಕುರಿತು ಯಾವ ಕಲ್ಪನೆಯೂ ಇರಲಿಲ್ಲ. ಆಗ ದೇಶದ ಮುಂದಿದ್ದ ದೊಡ್ಡ ಸವಾಲುಗಳೆಂದರೆ ಹಸಿವು ಮತ್ತು ಬಡತನ. ಅದಕ್ಕಿಂತ ಹಿಂದೆ ರಾಜಮಹಾರಾಜರು ಮತ್ತು ಶ್ರೀಮಂತರ ಮೋಜಿನ ಜೀವನದ ಭಾಗವಾಗಿ ಬೇಟೆ ಆಡುವ ಪರಿಪಾಟವಿತ್ತು. ಪ್ರಜಾಪ್ರಭುತ್ವ ಪ್ರತಿಷ್ಠಾಪನೆಯಾದ ಬಳಿಕ ಬಡತನ ಹೋಗಲಾಡಿಸಲು ಕಾಡುಗಳನ್ನು ಸವರಿ ವ್ಯವಸಾಯಕ್ಕೆ ಉತ್ತೇಜನ ನೀಡುವುದೇ ಸರ್ಕಾರದ ಮುಖ್ಯ ಗುರಿಯಾಗಿತ್ತು. ಈಗ ವಿವಿಧ ಯೋಜನೆಗಳ ಹೆಸರಿನಲ್ಲಿ ಅರಣ್ಯ ಪ್ರದೇಶ ಬಲಿಯಾಗುತ್ತಿದೆ. ಅಲ್ಲಿ ನೆಲೆಯನ್ನು ಕಂಡುಕೊಂಡಿದ್ದ ಪ್ರಾಣಿಗಳು ಆವಾಸಸ್ಥಾನ ಕಳೆದುಕೊಂಡು ದಿಕ್ಕು ತಪ್ಪುತ್ತಿವೆ. ಮಾನವ–ಪ್ರಾಣಿ ಸಂಘರ್ಷಗಳು ನಡೆಯುತ್ತಲೇ ಇವೆ. ಈ ಮಧ್ಯೆ ಮತ್ತೊಂದು ವನ್ಯಜೀವಿ ದಿನ ಬಂದಿದೆ....

ಸಾವಿರಾರು ಮೈಲಿ ವಿಸ್ತಾರದ ಪಶ್ಚಿಮ ಘಟ್ಟಗಳ ದಟ್ಟ ಕಾಡನ್ನು ಹೊಂದಿರುವ ಕರ್ನಾಟಕವು ಅನೇಕ ಕಾಡು ಮೃಗಗಳಿಗೆ ಆಶ್ರಯ ತಾಣವೂ ಆಗಿದೆ. ವಿಶೇಷವಾಗಿ ಆನೆ, ಚಿರತೆ, ಹುಲಿ ಮುಂತಾದ ಪ್ರಾಣಿಗಳು ನಮ್ಮ ಕಾಡುಗಳಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿವೆ.

ಕಾಡಿನೊಳಗೆ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿರುವುದು ಹಾಗೂ ಮನುಷ್ಯನ ವಾಸ ಸ್ಥಾನವು ಕಾಡಿನ ಅಂಚಿನವರೆಗೂ ವಿಸ್ತರಿಸಿದ ಪರಿಣಾಮ, ಕೆಲವು ಕಾಡುಪ್ರಾಣಿಗಳ ಅಸ್ತಿತ್ವಕ್ಕೆ ಧಕ್ಕೆಯಾಗಿದೆ. ಅನಿವಾರ್ಯವಾಗಿ ಕಾಡು ಮೃಗಗಳು ನಗರದತ್ತ ಪಾದ ಬೆಳೆಸಲಾರಂಭಿಸಿವೆ. ಪರಿಣಾಮ, ಕಳೆದ ಒಂದೆರಡು ದಶಕಗಳಲ್ಲಿ ಕಾಡು ಪ್ರಾಣಿಗಳ ಜತೆಗೆ ಮಾನವನ ಸಂಘರ್ಷ ಹೆಚ್ಚಾಗಿದೆ.

ಆದರೆ, ತಂತ್ರಜ್ಞಾನದ ಬಳಕೆ, ಸರ್ಕಾರ ಹಾಗೂ ಸ್ವಯಂಸೇವಾ ಸಂಸ್ಥೆಗಳ ಜಾಗೃತಿ ಕಾರ್ಯಕ್ರಮಗಳ ಮೂಲಕ ಈ ಸಂಘರ್ಷದ ಪ್ರಮಾಣವನ್ನು ತಗ್ಗಿಸುವ ಕೆಲಸಗಳು ನಡೆದಿವೆ.

ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ಕರ್ನಾಟಕದಲ್ಲಿ ಕಾಡುಪ್ರಾಣಿಗಳ ಜತೆಗಿನ ಸಂಘರ್ಷಕ್ಕೆ ಪ್ರತಿವರ್ಷವೂ ಸುಮಾರು 40 ಮಂದಿ ಬಲಿಯಾಗುತ್ತಿದ್ದಾರೆ. ಸಂರಕ್ಷಿತ ಅರಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಐದು ವರ್ಷಗಳಲ್ಲಿ 200ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ.

‘ಆನೆಗಳಿಗೆ ರೇಡಿಯೊ ಕಾಲರ್‌ ಅಳವಡಿಸಿ, ಅವುಗಳ ಹಿಂಡುಗಳ ಓಡಾಟದ ಮೇಲೆ ನಿಗಾ ಇಡುವ ವ್ಯವಸ್ಥೆ ಆದ ಬಳಿಕ ಆನೆಗಳ ದಾಳಿಗೆ ಬಲಿಯಾಗುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಆದರೆ ಬೆಳೆಹಾನಿಯ ಪ್ರಮಾಣವನ್ನು ತಗ್ಗಿಸುವುದು ಸಾಧ್ಯವಾಗಿಲ್ಲ’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಕರ್ನಾಟಕದಂತೆಯೇ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಪಶ್ಚಿಮ ಬಂಗಾಳ, ಛತ್ತೀಸಗಡ, ಒಡಿಶಾದಲ್ಲೂ ಮಾನವ–ಕಾಡುಪ್ರಾಣಿಗಳ ಸಂಘರ್ಷ ಇದೆ. ನಮ್ಮ ರಾಜ್ಯಕ್ಕೆ ಹೋಲಿಸಿದರೆ ಆ ರಾಜ್ಯಗಳಲ್ಲಿ ಪ್ರಾಣಹಾನಿಯ ಪ್ರಮಾಣ ಅಧಿಕ. ರಾಜ್ಯದಲ್ಲಿ ಹಿಂದೆ ಹುಲಿ, ಚಿರತೆ, ಆನೆಗಳ ಜತೆ ಮಾತ್ರ ಮಾನವ ಸಂಘರ್ಷ ನಡೆಯುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಕರಡಿ, ಕೋತಿಗಳ ದಾಳಿ ಘಟನೆಗಳೂ ಹೆಚ್ಚಾಗುತ್ತಿವೆ.

ಮೈಸೂರು, ಚಾಮರಾಜನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮಾತ್ರ ನಡೆಯುತ್ತಿದ್ದ ಇಂಥ ಸಂಘರ್ಷಗಳು ಈಗ ರಾಜ್ಯದಾದ್ಯಂತ ವಿಸ್ತರಿಸಿವೆ. ರಾಜ್ಯದ ಮಧ್ಯ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚಿರತೆ ಮತ್ತು ಕರಡಿ ದಾಳಿಗಳು ಹೆಚ್ಚುತ್ತಿವೆ. ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡುಕೋಣಗಳ ದಾಳಿಯೂ ನಡೆಯುತ್ತಿದೆ.

ಮಾನವ–ಪ್ರಾಣಿ ಸಂಘರ್ಷಕ್ಕೆ ಏನು ಕಾರಣ?

ಗುಣಮಟ್ಟ ಕಳೆದುಕೊಳ್ಳುತ್ತಿರುವ ಕಾಡುಗಳು ಮತ್ತು ಛಿದ್ರವಾಗುತ್ತಿರುವ ಅವುಗಳ ನೆಲೆಗಳು, ಜೀವ ಸಂಕುಲದಲ್ಲಿ ಉಂಟಾಗುತ್ತಿರುವ ತಲ್ಲಣಗಳಿಂದ ಮಾನವ–ಪ್ರಾಣಿ ಸಂಘರ್ಷಗಳು ಹೆಚ್ಚುತ್ತಿವೆ ಎನ್ನುತ್ತಾರೆ ವನ್ಯಜೀವಿ ತಜ್ಞರಾದ ಕೃಪಾಕರ–ಸೇನಾನಿ. ಈ ಸಂಘರ್ಷ ಹೆಚ್ಚುತ್ತಾ ಹೊರಟಿರುವುದಕ್ಕೆ ಅವರು ನೀಡುವ ಕಾರಣಗಳು ಹೀಗಿವೆ:

1. ವನ್ಯಜೀವಿಗಳಿಗೆಂದು ಕಾಯ್ದಿರಿಸಿದ ಅರಣ್ಯಗಳು ಇಂದು ಸುಸ್ಥಿತಿಯಲ್ಲಿಲ್ಲ. ಹಲವಾರು ಕಾರಣಗಳಿಂದ ಅವು ಛಿದ್ರಗೊಂಡು ದ್ವೀಪಗಳಂತೆ ಬಿಡಿಬಿಡಿಯಾಗಿವೆ. ಅಂದರೆ, ಕಾಡು- ಕಾಡುಗಳ ನಡುವೆ ಸಂಪರ್ಕವೇ ಇಲ್ಲವಾಗಿದೆ

2. ಕಾಡಿನ ಮಧ್ಯೆ ಮಧ್ಯೆ ಹಳ್ಳಿಗಳೂ, ನಗರಗಳೂ ಹುಟ್ಟಿಕೊಂಡಿವೆ. ಇದರ ಜತೆಗೆ ಕಾಡಿನ ಜೀವವೈವಿಧ್ಯ ಈಗ ಏರುಪೇರಾಗಿದೆ. ಕಾಡಿನ ಸಸ್ಯ ಸಂಯೋಜನೆ ಸಂಪೂರ್ಣ ಬದಲಾಗಿದೆ. ಲಂಟಾನದಂತಹ ವಿದೇಶಿ ಕಳೆಗಳು ಕಾಡನ್ನು ಆವರಿಸಿವೆ

3. ಮನುಷ್ಯನ ಪ್ರವೇಶದಿಂದ ವೈವಿಧ್ಯ ನಾಶವಾಗಿದೆ. ಜತೆಗೆ, ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ಗುಣಮಟ್ಟವಿಲ್ಲದ ಕಾಡಿನಲ್ಲಿ ಅವು ಬದುಕು ನೂಕುವುದು ಸವಾಲಾಗಿ ಪರಿಣಮಿಸಿದೆ

4. ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಪ್ರಾಣಿಗಳ ಪಥದ ವ್ಯಾಪ್ತಿಯಲ್ಲಿಯೇ ವೈಭವೋಪೇತ ರೆಸಾರ್ಟ್‌, ಹೋಂ ಸ್ಟೇಗಳು ತಲೆಎತ್ತಿವೆ

ದೇಶದಲ್ಲಿಬೆಳೆಯುತ್ತಲೇ ಇದೆಕಾಡಿನ ರಾಜನ ಸಂತತಿ

ದೇಶದಲ್ಲಿ ಹುಲಿಗಳಿಗೆ ನೀಡಿರುವಷ್ಟು ಪ್ರಾಮುಖ್ಯತೆಯನ್ನು ಬೇರೆ ಯಾವುದೇ ಪ್ರಾಣಿಗೂ ನೀಡಿಲ್ಲ. ಇತಿಹಾಸದುದ್ದಕ್ಕೂ ಮಾನವನ ಸಂಸ್ಕೃತಿಯಲ್ಲಿ ಅದು ಆಕರ್ಷಣೆ ಉಳಿಸಿಕೊಂಡಿದೆ. ಜೊತೆಗೆ, ನಮ್ಮ ಸಂಸ್ಕೃತಿಯ ಭಾಗವಾಗಿದೆ. ಹಾಗಾಗಿಯೇ ಕಥೆ, ಕಲೆಗಳಲ್ಲಿ ಅದು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ.

ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ವೃದ್ಧಿಸುತ್ತಿದೆ. ಈ ಹುಲಿಗಳು ಹೊಸ ಆವಾಸ ಹುಡುಕಿಕೊಂಡು ಕಾಡಿನಿಂದ ಹೊರಬರುತ್ತಿವೆ. ಅವುಗಳಿಗೆ ಮೊದಲು ತುತ್ತಾಗುವುದು ಕಾಡಂಚಿನ ಗ್ರಾಮಗಳಲ್ಲಿರುವ ಜನ– ಜಾನುವಾರು. ಆಗ ಹುಲಿ ಮತ್ತು ಮಾನವರ ನಡುವೆ ಸಂಘರ್ಷ ಏರ್ಪಡುತ್ತದೆ.

ಹುಲಿಗಳ ಸಂಖ್ಯೆ ಹೆಚ್ಚಳಗೊಂಡರೂ ಅವುಗಳು ಅಪಾಯದಿಂದ ಪಾರಾಗಿಲ್ಲ ಎನ್ನುವುದು ಸರ್ವವೇದ್ಯ. ‘ಸಾಂಕ್ರಾಮಿಕ ರೋಗಗಳ ಭೀತಿಯಿಂದ ಹುಲಿಗಳು ಪಾರಾಗಿ, ಬದುಕುಳಿಯಲು ಸದೃಢ ತಳಿಗಳ ಪಾತ್ರ ಹಿರಿದು. ಆದರೆ, ದೇಶದಲ್ಲಿರುವ ಅರಣ್ಯಗಳ ನಡುವೆ ಒಂದಕ್ಕೊಂದು ಸಂಪರ್ಕವೇ ಇಲ್ಲ. ಹಾಗಾಗಿ, ತಳಿವೈವಿಧ್ಯವನ್ನು ನಿರೀಕ್ಷಿಸುವುದು ಕಷ್ಟಸಾಧ್ಯ’ ಎಂದು ವಿವರಿಸುತ್ತಾರೆ ಕೃಪಾಕರ –ಸೇನಾನಿ.

ಸಂರಕ್ಷಣೆಗಿಂತ ಈಗ ನಿಜಕ್ಕೂ ಎದುರಾಗಿರುವ ದೊಡ್ಡ ಸವಾಲು ಎಂದರೆ ‘ನಿರ್ವಹಣೆ’. ಆದರೆ, ಸರ್ಕಾರ ಕೈಚೆಲ್ಲಿ ಕೂತಿರುವುದು ದುರಂತ. ಕಾಡು ಮತ್ತು ಹುಲಿಗಳ ಬಗ್ಗೆ ಜನರಲ್ಲಿ ವೈರತ್ವ ಮೂಡದಂತಹ ವಾತಾವರಣ ಸೃಷ್ಟಿಸುವ ಕೆಲಸವೇ ನಡೆಯುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT